ಡಿಸೆಂಬರ್ 26, 2008

ಕಾರ್ವರ್ ಬರೆದ "ಕ್ಯಾಥೆಡ್ರಲ್" - 1


(ಅಮೆರಿಕದಲ್ಲಿ ಇಪ್ಪತ್ತನೇ ಶತಮಾನದ ಪ್ರಮುಖ ಸಾಹಿತಿ ಎಂದು ಗಣಿಸಲಾಗಿರುವ "ರೇಮಂಡ್ ಕಾರ್ವರ್". ಎಂಬತ್ತರ ದಶಕದಲ್ಲಿ ಸಣ್ಣಕತೆಗಳಿಗೆ ಮತ್ತೆ ಉಸಿರು ಕೊಟ್ಟವನು ಎಂದೂ ಖ್ಯಾತ. ಇವನು ಬರೆದ ಒಂದು ಪ್ರಸಿದ್ಧ ಕತೆ "ಕ್ಯಾಥೆಡ್ರಲ್" ಅನ್ನು ನಾನು ಕನ್ನಡೀಕರಿಸಿದ್ದೇನೆ. ಮೊದಲ ಕಂತು ಇಲ್ಲಿದೆ.)


ಈ ಕುರುಡ, ನನ್ನ ಹೆಂಡತಿಯ ಹಳೆಯ ಮಿತ್ರ, ನಮ್ಮಲ್ಲಿಗೆ ಒಂದು ರಾತ್ರಿಗೆ ಉಳಕೊಳ್ಳಲು ಬರುತ್ತಿದ್ದಾನೆ. ಅವನ ಹೆಂಡತಿ ಇತ್ತೀಚೆಗೆ ತೀರಿ ಹೋದಳಂತೆ. ಅವನ ಹೆಂಡತಿಯ ಕಡೆಯವರು ನಮ್ಮ ಊರಿಗೆ ಹತ್ತಿರದ ಊರಲ್ಲಿರುವುದು. ಅಲ್ಲಿಗೆ ಬಂದವನು ನಮ್ಮಲ್ಲಿಗೂ ಬರುತ್ತೇನೆ ಎಂದು ನನ್ನ ಹೆಂಡತಿಗೆ ಫೋನ್ ಮಾಡಿ ಹೇಳಿದುದರಿಂದ ಇವಳಿಗೆ ಬಲು ಖುಷಿ. ಎಲ್ಲ ತಯಾರಿ ಆಯಿತು. ಅವನು ಮೂರು ಗಂಟೆ ಪ್ರಯಾಣ ಮಾಡಿ ರೈಲಿನಲ್ಲಿ ಬಂದಿಳಿಯುವುದು ಮತ್ತು ನನ್ನವಳು ಅವನನ್ನು ಕರೆತರಲು ನಿಲ್ದಾಣಕ್ಕೆ ಹೋಗುವುದು ಎಲ್ಲ ಸಜ್ಜಾಯಿತು.

ನನ್ನವಳು ಅವನನ್ನು ನೋಡದೆ ಸುಮಾರು ಹತ್ತು ವರ್ಷಗಳಾದವು. ಅದರ ಮೊದಲು ಇವಳು ಅವನ ಬಳಿ ಕೆಲಸಕ್ಕಿರುವಾಗ ಆದ ಪರಿಚಯ ಇದು. ಇವಳು ಅವನಲ್ಲಿ ಕೆಲಸ ಬಿಟ್ಟ ಬಳಿಕವೂ ಅವರಿಬ್ಬರೂ ಸಂಪರ್ಕ ಇಟ್ಟು ಕೊಂಡಿದ್ದರು. ಮಾತುಗಳನ್ನು ಟೇಪ್ ರೆಕಾರ್ಡ್ ಮಾಡಿ ಆಕಡೆ ಈಕಡೆ ಕಳುಹಿಸುತ್ತಿದ್ದರಂತೆ. ನನಗೆ ಈ ಕುರುಡ ಬರುವುದು ಅಷ್ಟೇನೂ ಉಮೇದು ತರಲಿಲ್ಲ. ನನಗೆ ಪರಿಚಯವೂ ಇಲ್ಲವಲ್ಲ. ಕುರುಡ ಬೇರೆ. ನನಗೆ ಕುರುಡರ ಬಳಿ ವ್ಯವಹರಿಸಿ ಅನುಭವವೂ ಇಲ್ಲ. ನಾನು ಅವರ ಬಗ್ಗೆ ತಿಳಿದಿರುವುದು ಸಿನೆಮಾಗಳ ಮೂಲಕ ಮಾತ್ರ. ಕುರುಡರು ಕೋಲು ಹಿಡಿದು ನಿಧಾನವಾಗಿ ನಡೆಯುವುದು. ನಗದಿರುವುದು, ಕತ್ತು ಕೊಂಕಿಸಿ ಎತ್ತಲೋ ನೋಡಿ ನುಡಿಯುವುದು ಇವೆಲ್ಲ ಒಂಥರಾ. ನನಗೇಕೋ ಈತ ಬರುವುದು ಇಷ್ಟ ಇರಲಿಲ್ಲ.

ನನ್ನ ಹೆಂಡತಿ ಆಗ ಬಹಳ ಕಷ್ಟದಲ್ಲಿದ್ದಳಂತೆ. ಕೆಲಸವೂ ಇರಲಿಲ್ಲ. ಇವಳು ಆ ಬೇಸಿಗೆ ರಜೆಯ ಕೊನೆಯಲ್ಲಿ ಮದುವೆಯಾಗ ಬಯಸಿದ ಸೈನಿಕ ಇನ್ನೂ ತರಬೇತಿಯಲ್ಲಿದ್ದ. ಅವನ ಬಳಿಯೂ ದುಡ್ಡಿರಲಿಲ್ಲ. ಆದರೆ ಅವರಿಬ್ಬರೂ ಒಬ್ಬರನ್ನೊಬ್ಬರು ಬಹಳ ಪ್ರೀತಿಸುತ್ತಿದ್ದರಂತೆ. ಆಗಲೇ ಅವಳು ಆ ಜಾಹಿರಾತು ಓದಿದ್ದು. "ಹೆಲ್ಪ್ ವಾಂಟೆಡ್ - ರೀಡಿಂಗ್ ಟು ಬ್ಲೈಂಡ್ ಮ್ಯಾನ್" ಅಂತ ಇತ್ತಂತೆ. ಇವಳು ಫೋನ್ ಮಾಡಿ ಭೇಟಿಯಾದಳು. ಕೂಡಲೇ ಕೆಲಸವೂ ಸಿಕ್ಕಿತು.

ಒಂದು ಬೇಸಿಗೆ ರಜೆ ಪೂರ್ತಿ ಈ ಕುರುಡನ ಬಳಿ ಕೆಲಸ ಮಾಡಿದಳಂತೆ ನನ್ನ ಹೆಂಡತಿ. ಇವಳ ಕೆಲಸವೆಂದರೆ ಕಾಗದ ಪತ್ರಗಳನ್ನು ಓದಿ ಹೇಳುವುದು. ದಸ್ತಾವೇಜುಗಳು, ರೆಫರೆನ್ಸ್ ಪುಸ್ತಕಗಳು, ವರದಿಗಳು ಇತ್ಯಾದಿ. ಇವಳು ಅಚ್ಚುಕಟ್ಟಾಗಿ ಸರಕಾರೀ ಸಮಾಜ ಕಲ್ಯಾಣ ವಿಭಾಗದಲ್ಲಿದ್ದ ಅವನ ಕಛೇರಿಯನ್ನು ಕೂಡ ಸಜ್ಜುಗೊಳಿಸಿದ್ದಳಂತೆ. ಅವರಿಬ್ಬರೂ, ನನ್ನ ಹೆಂಡತಿ ಮತ್ತು ಆ ಕುರುಡ, ಒಳ್ಳೆಯ ಗೆಳೆಯರಾದರಂತೆ. ಅವನ ಕಛೇರಿಯಲ್ಲಿ ಅವಳ ಕೊನೆಯ ದಿನ, ಕುರುಡ ಇವಳ ಹತ್ತಿರ ಬಂದು ನಿನ್ನ ಮುಖ ಸವರಬಹುದೇ ಅಂತ ಕೇಳಿದನಂತೆ. ಇವಳು ಸರಿ ಅಂದಳು, ಅವನು ನಿಧಾನವಾಗಿ ಅವಳ ಕಣ್ಣು, ಮೂಗು, ಹಣೆ, ಗಲ್ಲ, ತುಟಿ ಮತ್ತು ಅವಳ ಕೊರಳು ಕೂಡ ಸವರಿದನಂತೆ. ಇದು ನನಗೆ ಇವಳೇ ಹೇಳಿದ್ದು. ಅವಳು ಅದನ್ನೆಲ್ಲಾ ಇನ್ನೂ ಮರೆತಿಲ್ಲ. ಇವಳು ಅದರ ಮೇಲೊಂದು ಕವನ ಕೂಡ ಬರೆಯಲು ಯತ್ನಿಸಿದ್ದಳಂತೆ. ಇವಳು ಹಾಗೆ. ಇದ್ದದ್ದಕ್ಕೆಲ್ಲ ಕವನ ಬರೆಯಲು ತೊಡಗುವುದು. ಏನಾದರೂ ವಿಶೇಷ ಘಟಿಸಿದಾಗೆಲ್ಲ ವರ್ಷಕ್ಕೊಂದೋ ಎರಡೋ ಬಾರಿ ಕವನ ಬರೀತಾಳೆ.

ನಾವಿಬ್ಬರೂ ಭೇಟಿಯಾದ ಶುರುವಿನಲ್ಲಿ ಅದೆಲ್ಲ ನನಗೆ ತೋರಿಸಿದ್ದಳು. ಆ ಕವನದಲ್ಲಿ ಕುರುಡನ ಬೆರಳುಗಳು ಹೇಗೆ ಕಂಪಿಸುತ್ತ ನವಿರಾಗಿ ಅವಳ ಮುಖದ ಮೇಲೆ ಓಡಾಡಿದವು ಎಂದು ಬರೆದಿದ್ದಳು. ಮತ್ತೆ, ಅವನ ಬೆರಳುಗಳು, ಅವಳ ತುಟಿಯನ್ನು ಸವರುವಾಗ ಅವಳಲ್ಲಿ ಸರಿದು ಹೋದ ಯೋಚನೆಗಳು, ಇವನ್ನೆಲ್ಲ ಬರೆದಿದ್ದಳು ಎಂದು ಕಾಣುತ್ತದೆ. ನನಗೆ ಅಷ್ಟೇನೂ ಒಳ್ಳೆಯ ಕವನ ಅಂತ ಅನಿಸಿರಲಿಲ್ಲ. ಅದನ್ನು ಅವಳಿಗೆ ಹೇಳಿಯೂ ಇರಲಿಲ್ಲ. ಹಾಗೆ ನೋಡಿದರೆ ನನಗೆ ಕಾವ್ಯದ ಬಗ್ಗೆ ಏನು ಗೊತ್ತಿದೆ. ಕವನಗಳ ಪುಸ್ತಕ ನಾನು ಓದುವುದುಂತ ಇಲ್ಲ.

ಇರಲಿ, ಇಲ್ಲಿ ಈ ಸೈನಿಕ, ನನ್ನ ಹೆಂಡತಿ ಮೊದಲು ಮದುವೆಯಾಗಿದ್ದಳಲ್ಲ, ಈ ಆಫಿಸರ್ ಆಗುವವನು, ಇವಳ ಚಿಕ್ಕಂದಿನ ಗೆಳೆಯ. ಹಾಗೆ ಇವಳು ಆ ಕುರುಡನಿಂದ ಮುಖ ಸವರಿಸಿಕೊಂಡು ಅವನಿಂದ ಬೀಳ್ಕೊಟ್ಟು ಇವನನ್ನ್ನು ಮದುವೆಯಾದಳಂತೆ. ಸೈನಿಕ ಆಗಲೇ ಆಫಿಸರ್ ಆಗಿ ನಿಯುಕ್ತಿ ಆಗಿದ್ದ. ಹಾಗಾಗಿ ಇವರು ದಂಡು ಇರುವಲ್ಲಿ ಮನೆ ಮಾಡಬೇಕಾಯಿತು. ಆದರೆ ಅವರಿಬ್ಬರೂ, ನನ್ನ ಹೆಂಡತಿ ಮತ್ತು ಕುರುಡ, ಸಂಪರ್ಕದಲ್ಲಿದ್ದರಂತೆ.

ಮುದುವೆಯಾಗಿ ಸುಮಾರು ಒಂದು ವರ್ಷದ ಬಳಿಕ ಇವಳು ಮೊದಲ ಫೋನ್ ಮಾಡಿದ್ದು ಅವನಿಗೆ. ಯಾವುದೋ ಏರ್ಫೋರ್ಸ್ ಬೇಸ್ ನಿಂದ. ಇವಳಿಗೆ ಮಾತನಾಡಬೇಕು ಅಂತ ಅನಿಸಿತ್ತು. ಇಬ್ಬರೂ ತುಂಬ ಮಾತನಾಡಿದರಂತೆ. ಆಮೇಲೆ ನಿನಗೆ ಇನ್ನು ಮಾತನಾಡಬೇಕು ಅಂತ ಕಂಡರೆ ಮಾತು ರೆಕಾರ್ಡ್ ಮಾಡಿ ಟೇಪು ಕಳುಹಿಸು ಅಂತ ಅವನು ಹೇಳಿದ. ಇವಳು ಹಾಗೆ ಮಾಡಿದಳು. ಎದೆಯಾಳದ ಎಲ್ಲ ಮಾತುಗಳು. ತಾನು ತನ್ನ ಗಂಡನನ್ನು ಬಹಳ ಪ್ರೀತಿಸುತ್ತಿರುವುದು, ಆದರೆ ಅವನ ಈ ಸೈನ್ಯದ ಕೆಲಸ ಇವಳಿಗೆ ಸ್ವಲ್ಪವೂ ಇಷ್ಟವಿಲ್ಲದಿರುವುದು, ಮನೆಯಲ್ಲೆಲ್ಲ ತಾನೊಬ್ಬಳೇ ಕಟ್ಟಿ ಹಾಕಿದಂತೆ ಮುಂತಾಗಿ ಎಲ್ಲವನ್ನೂ ಆ ಕುರುಡನಿಗೆ ಕಳುಹಿಸುತ್ತಿದ್ದ ಟೇಪ್ ನಲ್ಲಿ ಹೇಳುತ್ತಿದ್ದಳಂತೆ. ಇವಳು ಅವನ ಮೇಲೆ ಕವನ ಬರೆದ ವಿಷಯವೂ ಹೇಳಿದ್ದಳಂತೆ. ಮತ್ತೊಂದು ಕವನ ಬರೆಯ ತೊಡಗಿದ್ದು, ಅದರಲ್ಲಿ ಒಬ್ಬ ಸೈನಿಕನ ಹೆಂಡತಿಯಾಗಿ ಇರುವುದು ಅಂದರೇನು ಎಂಬ ಭಾವ ಇರುವುದು ಎಲ್ಲ ಹೇಳಿದ್ದಳಂತೆ. ಬಹುಶ ಆ ಕವನವನ್ನು ಅವಳು ಪೂರ್ತಿಯೇ ಮಾಡಿಲ್ಲ. ಪ್ರತಿಯಾಗಿ ಆ ಕುರುಡುಗೆಳೆಯ ಕೂಡ ಟೇಪ್ ಮಾಡಿದ, ಇವಳಿಗೆ ಕಳುಹಿಸಿದ. ಹೀಗೆ ಇವರಿಬ್ಬರ ನಡುವೆ ತೆಪುಗಳ ವಿನಿಮಯ ಸಾಗತೊಡಗಿತು. ನನ್ನ ಹೆಂಡತಿಯ ಮೊದಲ ಗಂಡನಿಗೆ ವರ್ಷಕ್ಕೊಂದು ಟ್ರಾನ್ಸ್ಫರ್ ಆಗುತ್ತಿತ್ತು. ಹೋದ ಕಡೆಯಿಂದೆಲ್ಲ ಇವಳು ಟೇಪು ಕಳುಹಿಸುವುದು.

ಹೀಗೆ ಒಮ್ಮೆ ಬೇಸತ್ತು, ಈ ಸುತ್ತಾಟದಲ್ಲಿ ತನಗೆ ಪರಿಚಯವಾಗಿ ಗಾಢವಾಗುವುದರೊಳಗೆ ಮುಗಿದು ಹೋಗುವ ತನ್ನ ಸಂಬಂಧಗಳನ್ನೆಲ್ಲ ತುಂಡರಿಸಿ, ಏಕಾಂಗಿತನವನ್ನು ಅನುಭವಿಸುತ್ತ ತನ್ನೊಳಗೆ ತಾನು ಮುಳುಗತೊಡಗಿದಳಂತೆ ನನ್ನ ಹೆಂಡತಿ. ಬದುಕು ಅಸಹನೀಯವಾದಾಗ ಒಂದು ಮುಷ್ಟಿ ನಿದ್ದೆ ಮಾತ್ರೆ ನುಂಗಿ ಮಲಗಿದಳಂತೆ. ಹಣೆ ಬರಹ, ಸಾಯಲಿಲ್ಲ. ಎಲ್ಲ ವಾಂತಿ ಮಾಡಿಕೊಂಡುಬಿಟ್ಟಳು. ಸೈನಿಕ ಗಂಡ ಬಂದು ನೋಡಿದರೆ ಇವಳು ಹೀಗೆ ಬಿದ್ದಿದ್ದಾಳೆ. ಇವಳನ್ನು ಆಸ್ಪತ್ರೆಗೆ ಹಾಕಿ ಅವನು ನೋಡಿಕೊಂಡ. ಇವಳು ಕೊಂಚ ಗೆಲುವಾದಳು. ಇದನ್ನೆಲ್ಲವನ್ನೂ ಕುರುಡನಿಗೆ ಟೇಪ್ ಕಳುಹಿಸಿ ತೋಡಿಕೊಂಡಿದ್ದಳು. ಹೀಗೆ ವರ್ಶಾನುಗಟ್ಟಲೆ ಇವರ "ಟೇಪು ವ್ಯವಹಾರ" ಬಿರುಸಾಗಿ ಸಾಗಿತ್ತು. ಬಹುಶ ಇವಳಿಗೆ ಪಾಪ ವರ್ಷಕ್ಕೊಂದು ಕವನ ಬರೆಯುವುದು ಬಿಟ್ಟರೆ ಇದೆ ಒಂದು ಮನರಂಜನೆ ಆಗಿತ್ತೋ ಏನೋ.
ಒಂದು ಟೇಪ್ನಲ್ಲಿ ಇವಳು ತಾನು ತನ್ನ ಸೈನಿಕ ಗಂಡನಿಂದ ದೂರ ಇರುವ ನಿರ್ಧಾರ ಮಾಡಿದ್ದಾಗಿ ಹೇಳಿದ್ದಳು. ಆಮೇಲೆ ಇನ್ನೊಂದರಲ್ಲಿ ತಾನು ಡೈವೋರ್ಸ್ ಪಡೆಯುತ್ತಿರುವ ಬಗ್ಗೆ ಕೂಡ ಹೇಳಿದ್ದಳು. ಆಗಲೇ ನಾನು ಮತ್ತು ಅವಳು ಜೊತೆಗೆ ತಿರುಗಾಡಲು ತೊಡಗಿದ್ದು. ಅದನ್ನೂ ಅವಳು ಕುರುಡನಿಗೆ ಹೇಳಿದ್ದಳು. ಏನಿದ್ದರೂ ಅವನಿಗೊಂದು ಹೇಳಬೇಕು ಅವಳಿಗೆ. ಬಹುಶ ನನಗೆ ಹಾಗೆ ಅನಿಸುತಿದ್ದಿರಬಹುದು.

ಒಂದು ವರ್ಷದ ಕೆಳಗೆ ಒಮ್ಮೆ ಇವಳು ನನಗೆ ತನ್ನ ಗೆಳೆಯನ ಟೇಪು ಕೇಳು ಬಾ ಅಂತ ಕೇಳಿಸಿದ್ದಳು. ನನ್ನ ವಿಷಯ ಎಂತದೋ ಇತ್ತಂತೆ. ಓಹೋ ನಾನು ಆಯ್ತು ಎಂದೆ. ನಾನು ನಮಗೆ ಡ್ರಿಂಕ್ಸ್ ತಯಾರು ಮಾಡುತ್ತಿರುವಾಗ ನನ್ನ ಹೆಂಡತಿ ರೆಕಾರ್ಡ್ ಪ್ಲೇಯರ್ ತಂದು ರೆಡಿ ಮಾಡಿದಳು. ಕ್ಯಾಸೆಟ್ ಹಾಕಿ ಗುಂಡಿ ಒತ್ತಿದ್ದಾಗ ಗರಗರ ಸದ್ದಾಗತೊಡಗಿತು. ನಾನು ಬಂದು ಅವಳಿಗೆ ಡ್ರಿಂಕ್ ಇತ್ತು ಸೋಫಾದ ಮೇಲೆ ಕುಕ್ಕರಿಸಿದಾಗ ಅವನ ಮಾತುಗಳು ಹರಿದು ಬರತೊಡಗಿದವು. ದೊಡ್ಡ ಸ್ವರದಲ್ಲಿ. ಇವಳು ಕೊಂಚ ವಾಲ್ಯೂಮ್ ಕಡಿಮೆ ಮಾಡಿದಳು.

ಒಂದಷ್ಟು ಅನಾವಶ್ಯಕ ಹರಟೆಯ ಬಳಿಕ ಈ ಅಪರಿಚಿತ ಕಂಠದಿಂದ ಮೊದಲ ಬಾರಿ ನನ್ನ ಹೆಸರು ಕೇಳಿಸಿತು. ನನಗೆ ಯಾರೆಂದು ಕೂಡ ಗೊತ್ತಿಲ್ಲದ ಈ ಕುರುಡ ಅದೇನು ಹೇಳುತ್ತಾನೆ ಎಂಬ ಕುತೂಹಲ. ಅವನು ಮಾತನಾಡುತ್ತಿದ್ದ "ನೀನು ಅವನ ಬಗ್ಗೆ ಅಷ್ಟು ಹೇಳಿದ್ದು ನೋಡುವಾಗ ನನಗೆ ಅವನ ಬಗ್ಗೆ ಅನಿಸಿದ್ದೆಂದರೆ..." ಅಷ್ಟರಲ್ಲೇ ಬಾಗಿಲ ಕರೆಗಂಟೆ ಹೊಡೆದು ಅದಕ್ಕೆ ಅಡ್ಡಿಯಾಯಿತು. ಅಷ್ಟೆ ಆಮೇಲೆ ಬಹುಶ ನಾನು ಮರೆತೆ ಬಿಟ್ಟಿದ್ದೆ. ನನಗೆ ಆಸಕ್ತಿ ಕೂಡ ಇರಲಿಲ್ಲ.

ಇಂತಹ ಈ ಕುರುಡ, ಇವಳ ಗೆಳೆಯ, ಇವತ್ತು ನಮ್ಮ ಮನೆಯಲ್ಲಿ ಉಳಕೊಳ್ಳಲು ಬರುತ್ತಿದ್ದಾನೆ.

"ಬಹುಶ ನಾನು ಅವನನ್ನು ಬಿಲ್ಲಿಯರ್ದ್ಸ್ ಆಡಲು ಕರೆಕೊಂಡು ಹೋಗಬಹುದು ಅಲ್ಲವೇ ಪ್ರಿಯೆ" ಎಂದೆ ನಾನು. ನನ್ನ ಹೆಂಡತಿ ಅವರೇ ಕಾಳು ಸುಲಿಯುತ್ತಿದ್ದವಳು ಒಂದು ಕ್ಷಣ ತಲೆಯೆತ್ತಿ ನನ್ನತ್ತ ನೋಡಿ "ನಿನಗೆ ನನ್ನ ಮೇಲೆ ಪ್ರೀತಿ ಇದ್ದರೆ ದಯವಿಟ್ಟು ಅಷ್ಟು ಮಾಡು. ಪ್ರೀತಿ ಇಲ್ಲದಿದ್ದರೆ ಬೇಡ. ನಿನಗೊಬ್ಬ ಗೆಳೆಯನಿದ್ದಿದ್ದರೆ, ಯಾವನೇ ಗೆಳೆಯ, ಅವನು ನಮ್ಮ ಮನೆಗೆ ಬಂದರೆ ನಾನು ಅವನನ್ನು ಸಾಧ್ಯವಾದಷ್ಟು ಖುಶಿಗೊಳಿಸಲು ನೋಡುತ್ತಿದ್ದೆ. ಅಂತ ಹೇಳಿ ಎದ್ದು ಸಿಂಕ್ ಬಳಿ ಕಾಳು ತೊಳೆಯಲು ಹೋದಳು.

"ನನಗೆ ಯಾರು ಕುರುಡ ಗೆಳೆಯರಿಲ್ಲ" ಅಂದೆ ನಾನು. "ನಿಮಗೆ ಗೆಳೆಯರೇ ಇಲ್ಲ" ಅವಳಂದಳು. ಸಿಟ್ಟು ಬಂದಿರಬೇಕು. ಸ್ವರ ಸ್ವಲ್ಪ ಜಾಸ್ತಿಯೇ ಏರಿತ್ತು. "ಎಂತ ಮಾತಾಡ್ತಿ ನೀನು. ಒಂಚೂರು ಯೋಚನೆ ಮಾಡು. ಅವನ ಹೆಂಡತಿ ನಿನ್ನೆ ಮೊನ್ನೆಯಷ್ಟೇ ತೀರಿ ಹೋಗಿದ್ದು. ಅಷ್ಟೂ ಗೊತ್ತಾಗಲ್ವ ನಿನಗೆ."

ನಾನು ಸುಮ್ಮನಿದ್ದೆ. ಅವಳೊಮ್ಮೆ ಅವನ ಹೆಂಡತಿಯ ಬಗ್ಗೆ ಹೇಳಿದ್ದಳು. ಅವಳ ಹೆಸರೆಂತದೋ ಬ್ಯೂಲಾ ಅಂತೇನೋ ಇತ್ತೆಂದು ನೆನಪು. ಬ್ಯೂಲಾ ಅಂದರೆ ನೀಗ್ರೋ ಹೆಸರಲ್ಲವೆ.

"ಅವನ ಹೆಂಡತಿ ನೀಗ್ರೋನಾ?" ಅಂತ ಬಾಯಿ ತಪ್ಪಿ ಕೇಳಿಯೇ ಬಿಟ್ಟೆ.

"ನಿನಗೆ ಹುಚ್ಚು ಹಿಡಿದಿದೆಯಾ?, ತಲೆಗಿಲೆ ಕೆಟ್ಟಿದೆಯೋ ಏನು?" ಅವಳಿಗೆ ಸಿಟ್ಟು ತಡೆಯಲಿಲ್ಲ. ಕೈಯಲ್ಲಿ ಆಲೂಗಡ್ಡೆ ಹಿಡಿದಿದ್ದವಳು ನನ್ನತ್ತ ಬೀಸಿ ಒಗೆದ ಪೆಟ್ಟಿಗೆ ನಾನು ಬಗ್ಗಿದ್ದರಿಂದ ಗೋಡೆಗಪ್ಪಳಿಸಿ ಕೆಳಗೆ ಬಿದ್ದು ಕಪಾಟಿನ ಕೆಳಗೆ ಉರುಳಿ ಹೋಯಿತು. "ಕುಡಿದ್ದಿಯ ಹೇಗೆ?" ಅಂತ ಕೇಳಿದಳು. ಚಾಕು ಬೇರೆ ಕೈಯಲ್ಲಿತ್ತು.

"ಸುಮ್ಮನೆ ಕೇಳಿದೆ ಮಾರಾಯ್ತಿ" ಅಂತ ಸಮಜಾಯಿಸಿದೆ.

ಸ್ವಲ್ಪ ಸಮಾಧಾನ ಆಗಿರಬೇಕು. ಎಲ್ಲ ಹೇಳಲು ಶುರು ಹಚ್ಚಿದಳು. ಮೆಲ್ಲ ಮೆಲ್ಲ ಎಲ್ಲ ವಿಷಯ ತಿಳಿಯತೊಡಗಿತು ನನಗೆ.


ನನ್ನ ಹೆಂಡತಿ ಬಿಟ್ಟ ಮೇಲೆ ಈ ಬ್ಯೂಲಾ ಅನ್ನುವ ಹುಡುಗಿ ಕುರುಡನ ಬಳಿ ಕೆಲಸಕ್ಕೆ ತೊಡಗಿದ್ದವಳಂತೆ. ಕೆಲವೇ ದಿನಗಳಲ್ಲಿ ಒಂದು ಚರ್ಚಿನಲ್ಲಿ ಮಾಡುವೆ ಮಾಡಿಕೊಂಡರಂತೆ. ಈ ಬ್ಯೂಲಾ ಮತ್ತು ಈ ಕುರುಡ. ಅದೊಂದು ಸಣ್ಣ ಮದುವೆಯಂತೆ - ಯಾರು ತಾನೆ ಇಂತಹ ವಿಲಕ್ಷಣ ಮದುವೆಗೆ ಹೋಗುತ್ತಾರೆ- ಇಬ್ಬರೇ ಇದ್ದರಂತೆ ಬ್ಯೂಲಾ, ಕುರುಡ, ಪಾದ್ರಿ ಮತ್ತು ಪಾದ್ರಿಯ ಸೇವಕ. ಆದರೆ ಚರ್ಚು ಮದುವೆ ಅಂದರೆ ಮದುವೆ. ಯಾರಿದ್ದರೇನು ಇಲ್ಲದಿದ್ದರೇನು. ಬ್ಯೂಲಾಳೆ ವತ್ತಾಯಿಸಿದ್ದಳಂತೆ. ಅದಕ್ಕೆ ಅಲ್ಲಿ ಅಂತ ಅಂದನಂತೆ ಕುರುಡ.

ಅಷ್ಟೆಲ್ಲಾ ಆದಾಗ್ಯೂ ಅದಾಗಲೇ ಬ್ಯೂಲಾಳ ಒಡಲಲ್ಲಿ ಒಂದು ಕ್ಯಾನ್ಸರ್ ಗೆಡ್ಡೆ ಬೆಳೆಯುತ್ತಿದ್ದಿರಬೇಕು. ಒಬ್ಬರನ್ನೊಬ್ಬರು ಅಗಲಿರದಂತೆ - ನನ್ನ ಹೆಂಡತಿಯ ಶಬ್ದಗಳಿವು "ಅಗಲಿರದಂತೆ"- ಎಂಟು ವರ್ಷ ಕಳೆಯುತ್ತಿರುವಾಗ ಬ್ಯೂಲಾಳ ಆರೋಗ್ಯ ವೇಗವಾಗಿ ಕುಸಿಯುತ್ತಾ ಬಂತಂತೆ. ಅವಳಲ್ಲೇ ಒಂದು ಆಸ್ಪತ್ರೆಯ ರೂಮ್ ನಲ್ಲಿ ಸಾಯುತ್ತಿರುವಾಗ ಇವನು, ಕುರುಡ, ಅವಳ ಕೈ ಹಿಡಕೊಂಡು ಬಳಿಯಲ್ಲೇ ಇದ್ದನಂತೆ. ಅವರು ಮದುವೆಯಾಗಿ, ಜೊತೆಯಾಗಿ ಬದುಕಿ, ಬಾಳಿ, ಕೆಲಸ ಮಾಡಿ, ಜೊತೆಯಾಗಿ ಮಲಗಿ - ಸೆಕ್ಸು ಕೂಡ - ಈಗ ನೋಡಿ ಈ ಕುರುಡ ಅವಳನ್ನು ಸಮಾಧಿ ಮಾಡಬೇಕಾಯಿತು.ಇಷ್ಟೆಲ್ಲಾ ಅವನು ಮಾಡಿದರೂ ಒಬ್ಬ ಹೆಂಗಸಿನಂಥಾ ಹೆಂಗಸು ಹೇಗಿರುತ್ತಾಳೆ ಅಂತ ಗೊತ್ತೇ ಆಗಲಿಲ್ಲವಲ್ಲ ಅವನಿಗೆ ಅಂದರೆ ಏನು ಹೇಳೋಣ. ನನಗಂತೂ ಇದನ್ನೆಲ್ಲಾ ನಂಬಲಿಕ್ಕೆ ಆಗಲಿಲ್ಲ. ಒಮ್ಮೆ ಆ ಕುರುಡನ ಬಗ್ಗೆ ಪಾಪ ಅನಿಸಿತು.

ಆಮೇಲೆ ಈ ಕುರುಡನನ್ನು ಕಟ್ಟಿಕೊಂಡು ಆ ಹೆಂಗಸಿನ ಬದುಕು ಹೇಗಿದ್ದಿರಬಹುದು ಎಂದು ಯೋಚಿಸತೊಡಗಿದೆ. ತನ್ನನ್ನು ಪ್ರೀತಿಸುವವನ ಕಣ್ಣಲ್ಲಿ ತಾನು ಹೇಗೆ ಕಾಣುತ್ತಿರಬಹುದು ಎಂದು ಅರಿಯಲಾರದ ಒಬ್ಬ ಹೆಂಗಸನ್ನು ಊಹಿಸಿ. ದಿನ ದಿನವೂ ಜೋತೆಯಾಗಿದ್ದರೂ ಒಂದೇ ಒಂದು ದಿನವೂ ತನ್ನ ಗಂಡನಿಂದ "ನೀನು ಎಷ್ಟು ಚೆನ್ನಾಗಿ ಕಾಣುತ್ತಿಯ" ಎಂಬ ಮಾತನ್ನು ಕೇಳದೆಯೇ ಸತ್ತು ಹೋದಳಲ್ಲ ಆ ಬ್ಯೂಲಾ. ತನ್ನ ಹೆಂಡತಿಯ ಮುಖದ ಮೇಲಿನ ಭಾವನೆಗಳನ್ನು ಓದಲಾರದ ಗಂಡನನ್ನು ಹೊಂದಿರುವುದು ಕೊರಗಲ್ಲದೆ ಮತ್ತೇನು. ಸಿಂಗಾರ ಗೊಳ್ಳಲಿ, ಇಲ್ಲದಿರಲಿ, ಅವನಿಗ್ಯಾವ ವ್ಯತ್ಯಾಸವೂ ಇಲ್ಲ. ಅವಳು ಬೇಕಿದ್ದರೆ ಒಂದು ಕಣ್ಣಿನ ಕೆಳಗೆ ಹಸಿರು ಅಯ್ ಶ್ಯಾಡೋ, ಮೂಗುತಿಯ ಬದಲಾಗಿ ಒಂದು ಗುಂಡು ಪಿನ್ನು, ಹಳದಿ ಬಣ್ಣದ ಕಾಲು ಚೀಲ, ಕೆಂಪು ಚಪ್ಪಲಿ ಎಂತ ಮಾಡಿದರೂ ತೊಂದರೆ ಅವನಿಗಿಲ್ಲ. ಅಲ್ಲ ನಾನು ಹೀಗೆ ಅಂದಾಜು ಮಾಡುವುದು. ಅವಳೆಂಥ ನಿರ್ಭಾಗ್ಯೆ ಅಂತ ? ತಾನು ಸಾಯುತ್ತಿದ್ದೇನೆ, ತನ್ನ ಗಂಡ ತನ್ನ ಬಳಿಯಲ್ಲಿ ಕುಳಿತು, ತನ್ನ ಕೈ ಹಿಡಿದು ಕಣ್ಣೀರು ಸುರಿಸುತ್ತಿದ್ದಾನೆ. ಅವಳು ಆ ಸಾವಿನೊಳಕ್ಕೆ ಜಾರುತ್ತಿರುವಾಗ ಬಹುಶ ಅವಳ ಕೊನೆಯ ಯೋಚನೆ ಇದೆ ಇರಬಹುದು, ತನ್ನ ಗಂಡನಿಗೆ ತಾನು ಹೇಗಿದ್ದೆನೆಂದೂ ತಿಳಿದಿಲ್ಲವಲ್ಲ ಅಂತ. ಪಾಪ.

ಹಾಗೂ ಹೀಗೂ, ನನ್ನ ಹೆಂಡತಿ ಅವನನ್ನು ಕರಕೊಂಡು ಬರಲು ಹೋದಳು. ನಾನು ಹೀಗೆ ಒಂದು ಪೆಗ್ ರೆಡಿ ಮಾಡಿ ಟಿ.ವಿ. ನೋಡುತ್ತಾ ಕುಳಿತಿದ್ದೆ. ನನಗಿನ್ನೇನು ಕೆಲಸವಿದೆ. ಕಾರು ಅಂಗಳಕ್ಕೆ ಬಂದು ನಿಂತಾಗ ಕಿಟಕಿಯ ಬಳಿ ಬಂದು ಇಣುಕಿ ನೋಡಿದೆ. ನನ್ನ ಹೆಂಡತಿ ನಗು ನಗುತ್ತ ಇಳಿಯುತ್ತಿದ್ದಳು. ಅವಳು ಇಳಿದು ಬಾಗಿಲು ಮುಚ್ಚಿ ಬಳಸಿ ಬಂದು ಆ ಕಡೆಯ ಬಾಗಿಲನ್ನು ತೆರೆಯುವಾಗ ಅವನು ಕೂಡ ಇಳಿಯತೊಡಗಿದ್ದ. ಅವಳ ಮುಖದ ನಗು ಇನ್ನೂ ತುಂಬು ತುಂಬು ಚೆಲ್ಲುತ್ತಿತ್ತು. ನನ್ನ ಹೆಂಡತಿ ಎಷ್ಟು ಚಂದ. ಈ ಕುರುಡ! ಒಮ್ಮೆ ಊಹಿಸಿ, ಮುಖದ ತುಂಬ ಗಡ್ಡ. ಗಡ್ಡದ ಕುರುಡ, ಯಾಕೋ ಅತೀ ಅನಿಸಿತು. ಕುರುಡ ಹಿಂಬದಿಯ ಸೀಟಿನತ್ತ ಬಾಗಿ ಒಂದು ಸೂಟ್ ಕೇಸು ಎಳೆದುಕೊಂಡ. ನನ್ನ ಹೆಂಡತಿ ಅವನ ಕೈಯನ್ನು ಹಿಡಿದು, ಕಾರಿನ ಬಾಗಿಲನ್ನು ಮುಚ್ಚಿ, ಕಾರನ್ನು ಬಳಸಿ ಕೊಂಡು ಅಂಗಳ ದಾಟಿ ಮಾತನಾಡುತ್ತಾ ಮೆಟ್ಟಲೇರಿ ಮನೆಯೊಳಗೆ ಬರುತ್ತಿರುವಾಗ ನಾನು ನನ್ನ ಗ್ಲಾಸನ್ನು ಎತ್ತಿಟ್ಟು ಟಿ.ವಿ. ಬಂದ್ ಮಾಡಿ ಎದುರ್ಗೊಳ್ಳಲು ಬಾಗಿಲಿನತ್ತ ಹೋದೆ.

"ಇವರು ರಾಬರ್ಟ್" ಅಂದಳು ನನ್ನ ಹೆಂಡತಿ "ರಾಬರ್ಟ್ ಇವರು ನನ್ನ ಗಂಡ. ನಾನು ಈಗಾಗಲೇ ನಿನಗೆ ಎಲ್ಲ ಹೇಳಿದ್ದೆನಲ್ಲ ಇವರ ಬಗ್ಗೆ" ತುಂಬು ಅಭಿಮಾನದಿಂದ ನುಡಿದಳು ನನ್ನ ಹೆಂಡತಿ. ಅವನ ಕೈ ಇನ್ನೂ ಅವಳ ಕೈಯೊಳಗಿತ್ತು.

ರಾಬರ್ಟ್ ಸೂಟ್ ಕೇಸು ಕೆಳಗಿಟ್ಟು ಕೈ ಚಾಚಿದ. ನಾನು ಅವನ ಕೈ ಹಿಡಿದೆ. ಅವನು ನನ್ನ ಕೈಯನ್ನು ಬಿಗಿಯಾಗಿ ಅಮುಕಿ ಎಳೆದು ಬಿಟ್ಟ.

"ನಾವು ಈಗಾಗಲೇ ಭೇಟಿಯಾದ ಹಾಗೆ ನನಗೆ ಅನಿಸುತ್ತಿದೆ" ಅಂದ ರಾಬರ್ಟ್. "ನನಗೂ ಅಷ್ಟೆ" ಅಂತ ಮರುನುಡಿದೆ. ನನಗೆ ಎಂತ ಹೇಳುವುದು ಎಂದು ತೋಚಲಿಲ್ಲ. ಮತ್ತೆ ಸಾವರಿಸಿ "ವೆಲ್ಕಂ, ನಿಮ್ಮ ಬಗ್ಗೆ ಸಾಕಷ್ಟು ಕೇಳಿದ್ದೇನೆ." ಅಂದೆ.

ನಾವೆಲ್ಲ ಮನೆಯೊಳಕ್ಕೆ ನಡೆದೆವು. ನನ್ನ ಹೆಂಡತಿ ರಾಬರ್ಟನ ತೋಳು ಹಿಡಕೊಂಡಿದ್ದಳು. ಇನ್ನೊಂದು ಕೈಯಲ್ಲಿ ಸೂಟ್ ಕೇಸು ಹಿದಕೊಂಡಿದ್ದ ರಾಬರ್ಟ್. ನನ್ನ ಹೆಂಡತಿ ಅವನಿಗೆ ಸೂಚನೆಗಳನ್ನು ಕೊಡುತ್ತಾ ಇದ್ದಳು "ರಾಬರ್ಟ್ ನಿನ್ನ ಎಡಕ್ಕೆ, ಈಗ ಬಲಕ್ಕೆ, ಹುಷಾರು ಅಲ್ಲೊಂದು ಖುರ್ಚಿ ಇದೆ. ಆಯಿತು.. ಇದು ಸೋಫಾ. ಇದನ್ನು ನಾವು ಎರಡು ವಾರಗಳ ಹಿಂದೆಯಷ್ಟೇ ಕೊಂಡಿದ್ದು".

ನಾನು ನಮ್ಮ ಹಳೆಯ ಸೋಫಾದ ಬಗ್ಗೆ ಹೇಳಬೇಕು ಅಂತ ಅನಿಸಿತು. ನನಗೆ ಬಹಳ ಇಷ್ಟದ ಸೋಫಾ ಆಗಿತ್ತದು. ಆದರೆ ಸುಮ್ಮನಿದ್ದೆ. ಏನಾದರೂ ಮಾತನಾಡಬೇಕು ಅನಿಸಿತು. ಹೀಗೆ ಸೌಜನ್ಯಕ್ಕೆ. ರೈಲಿನಲ್ಲಿ ಬರುವಾಗ ಹಾದಿಯುದ್ದದ ನಿಸರ್ಗ ಸೌಂದರ್ಯದ ಬಗ್ಗೆ. ನಮ್ಮೂರಿಗೆ ಬರುತ್ತಿರಬೇಕಾದರೆ ರೈಲಿನಲ್ಲಿ ಎಡ ಬದಿಯಲ್ಲಿ ಕುಳಿತು ಕೊಂಡರೆ ಚೆನ್ನ. ಹಾಗೆ ಹೋಗುವಾಗ ಬಲ ಬದಿಯಲ್ಲಿ.

"ನಿಮ್ಮ ರೈಲು ಪ್ರಯಾಣ ಹೇಗಿತ್ತು" ಅಂತ ಕೇಳಿದೆ. "ನೀವು ಬರುವಾಗ ಯಾವ ಸೈಡಲ್ಲಿ ಕುಳಿತಿದ್ದು" ಅಂದೆ.

"ಅದೆಂತದದು ಯಾವ ಬದಿಯಲ್ಲಿ ಅಂದರೆ?" ನನ್ನ ಹೆಂಡತಿ ಬಾಯಿ ಹಾಕಿದಳು. "ಯಾವ ಬದಿಯಲ್ಲಿ ಕುಳಿತರೆನು" ಸಿಡುಕಿ.

"ಸುಮ್ಮನೆ ಕೇಳಿದೆ" ನಾನಂದೆ.

"ಬಲ ಬದಿಯಲ್ಲಿ" ಅಂದ ರಾಬರ್ಟ್. "ನಾನು ಸುಮಾರು ನಲವತ್ತು ವರ್ಷ ಆಯ್ತು ರೈಲಿನಲ್ಲಿ ಕುಳಿತು ಕೊಳ್ಳದೆ. ನಾನು ಚಿಕ್ಕವನಿರುವಾಗ ನನ್ನ ತಂದೆ ತಾಯಿ ಜೊತೆಗೆ ಹೋಗಿದ್ದು. ಬಹಳ ಹಿಂದೆ. ನನಗೆ ಮರೆತೆ ಹೋಗಿತ್ತು ರೈಲಂದರೆ ಹೇಗಿರಬಹುದು ಅಂತ. ಈಗ ನನ್ನ ಗಡ್ಡ ಬಿಳಿಯಾಗಿ ಬಿಟ್ಟಿದೆ." ಅಂದ "ಹಾಗಂತ ಯಾರೋ ಹೇಳಿದರು. ನಿಜಕ್ಕೂ ನಾನು ಒಂದು ದೊಡ್ಡ ಜನದ ಹಾಗೆ ಕಾಣುತ್ತಿದ್ದೆನಾ? ಡಿಯರ್" ಕುರುಡ ನನ್ನ ಹೆಂಡತಿಯನ್ನು ಕೇಳಿದ.

"ನೀನು ಚೆನ್ನಾಗಿ ಕಾಣುತ್ತಿದ್ದಿ ರಾಬರ್ಟ್ ಗಣ್ಯ ವ್ಯಕ್ತಿಯ ಹಾಗೆ" ಅವಳು ನುಡಿದಳು "ರಾಬರ್ಟ್.... ರಾಬರ್ಟ್, ಇಟ್ಸ್ ಸೊ ಗುಡ್ ಟು ಸೀ ಯು." ಅಂದಳು.

ನನ್ನ ಹೆಂಡತಿ ಕೊನೆಗೂ ಅವಳ ಕಣ್ಣುಗಳನ್ನು ಆ ಗಣ್ಯ ಕುರುಡನ ಮೇಲಿನಿಂದ ಎತ್ತಿ ನನ್ನತ್ತ ಹಾಯಿಸಿದಳು. ಯಾಕೋ ನನ್ನನ್ನು ನೋಡಿ ಅವಳಿಗೆ ಇಷ್ಟವಾದಂತಿರಲಿಲ್ಲ. ನಾನು ಕೂತಲ್ಲೇ ತಿಣುಕಿದೆ.

ನಾನು ಇಷ್ಟರವರೆಗೆ ಯಾವುದೇ ಕುರುಡನನ್ನು ಭೇಟಿಯಾಗಿದ್ದಾಗಲೀ, ಪರಿಚಯವಾಗಲೀ ಆಗಿಲ್ಲ. ಇದೇ ಮೊದಲು. ಈ ಕುರುಡ ಸುಮಾರು ಐವತ್ತರ ಆಸುಪಾಸಿನವನು. ತಲೆ ಬೋಳಾಗುತ್ತಿರುವ ದೊಡ್ಡ ದೇಹದ ಮನುಷ್ಯ. ಅತೀವ ಭಾರವನ್ನು ಹೊತ್ತಂತೆ ಕೊಂಚ ಬಾಗಿರುವ ಭುಜ. ಕಂದು ಸಾಕ್ಸು, ಶೂಸು, ಕಂದು ಪ್ಯಾಂಟು, ತಿಳಿ ಕಂದು ಬಣ್ಣದ ಶರ್ಟು ಮತ್ತು ಟೈ ಧರಿಸಿದ್ದ. ಮೇಲೊಂದು ಸ್ಪೋರ್ಟ್ಸ್ ಕೋಟು. ಗಡ್ಡ ಬೇರೆ ಇದೆಯಲ್ಲವೇ.
ಆದರೆ ಕೈಯಲ್ಲಿ ಕೋಲಾಗಲಿ, ಕಣ್ಣಿಗೆ ಕಪ್ಪು ಕನ್ನಡಕವಾಗಲೀ ಇರಲಿಲ್ಲ. ಆಶ್ಚರ್ಯ. ನಾನು ಕುರುಡರು ಕಪ್ಪು ಕನ್ನಡಕ ಧರಿಸಿರಲೆಬೇಕೋ ಎಂದು ಕೊಂಡಿದ್ದೆ.

ನಿಜವೆಂದರೆ ಅವನ ಬರೀ ಕಣ್ಣು ನೋಡಿ ನನಗೆ ಅವನು ಕಪ್ಪು ಕನ್ನಡಕ ಹಾಕಿದ್ದಿದ್ದರೆ ಒಳಿತೆಂದು ಅನಿಸತೊಡಗಿತ್ತು. ಮೇಲ್ನೋಟಕ್ಕೆ ಎಲ್ಲರಂತೆ ಕಂಡರೂ, ಗಮನವಿಟ್ಟು ನೋಡಿದರೆ ಅವನ ಕಣ್ಣುಗಳ ವ್ಯತ್ಯಾಸ ಕಾಣುತ್ತಿತ್ತು. ಕಣ್ಣ ಬಿಳಿ ಬೊಂಬೆ ಹೆಚ್ಚು ಜಾಗ ಆಕ್ರಮಿಸಿಕೊಂಡಿತ್ತು. ಕಣ್ಣ ಮಣಿಗಳೂ ಅವನ ಅಂಕೆಗೆ ಸಿಗದೇ ಅತಿತ್ತ ಕಣ್ಣ ಗುಂಡಿಯೋಳಗೆಲ್ಲ ಚಲಿಸುತ್ತಿರುವಂತೆ ಕಂಡು ಭಯವೆನಿಸಿತು. ನಾನು ಅವನ ಮುಖವನ್ನು ದಿಟ್ಟಿಸುತ್ತಿದ್ದ ಹಾಗೆ ಅವನ ಎಡ ಕಣ್ಣಮಣಿ ಮೂಗಿನತ್ತ ತಿರುಗಿದರೆ, ಇನ್ನೊಂದು ಕಣ್ಣು ಅಲುಗದೆ ನಿಲ್ಲಲು ಯತ್ನಿಸುತ್ತಿತ್ತು. ಒಂದೇ ಕ್ಷಣ. ಮತ್ತೆ ಮೊದಲಿನ ಹಾಗೆ ಗರ ಗರ ತಿರುಗತೊಡಗಿತು.

ನಾನು ಎದ್ದೆ. "ನಾನು ನಿಮಗೆ ಕುಡಿಯಲೇನಾದರೋ ತರುತ್ತೇನೆ. ಏನು ಕೊಡಲಿ. ನಮ್ಮಲ್ಲಿ ಸ್ವಲ್ಪ ಸ್ವಲ್ಪ ಅಂತ ಎಲ್ಲ ತಂದು ಇಟ್ಟಿದ್ದೇವೆ." ಅಂತ ಕೇಳಿದೆ.

"ಹೋ ನಾನೊಬ್ಬ ಸ್ಕಾಚ್ ಪುರುಷ" ಅಂತ ಅವನ ದೊಡ್ಡ ಸ್ವರದಲ್ಲಿ ಹೇಳುತ್ತಾ ಗಹಗಹಿಸಿ ನಕ್ಕ ರಾಬರ್ಟ್.

"ರೈಟ್.. ನನಗೊತ್ತು." ಅಂದೆ

ಅವನು ಸೋಫಾದ ಬದಿಯಲ್ಲಿತ್ತಿರುವ ಸೂಟ್ ಕೇಸನ್ನು ಕೈಯಿಂದ ಒಮ್ಮೆ ಸವರಿದ.

"ನಾನಿದನ್ನು ನಿನ್ನ ರೂಮಲ್ಲಿ ಇಡಲೇನು?" ಅಂತ ನನ್ನ ಹೆಂಡತಿ ಕೇಳಿದಳು ರಾಬರ್ಟ್ ಗೆ.

"ಬೇಡ! ಇಲ್ಲೇ ಇರಲಿ". ಅಂದ ರಾಬರ್ಟ್." ನಾನು ಹೋದಾಗಲೇ ಕೊಂಡು ಹೋದರಾಯಿತು." ಅಂದ.

"ಸ್ಕಾಚ್ ಗೆ ಕೊಂಚ ನೀರು ಬೆರೆಸಲೇ" ಅಂತ ಕೇಳಿದೆ ನಾನು.

" ಸ್ವಲ್ಪ ಸಾಕು" ಅಂದ "ಸರಿ" ಅಂದೆ.

" ಆ ಐರಿಶ ನಟ ಬ್ಯಾರೀ ಫಿಟ್ಸ್ ಜೆರಾಲ್ಡ್ ಹೇಳುವ ಹಾಗೆ. ನಾನು ಅವನ ಹಾಗೆಯೇ. ನೀರು ಕುಡಿಯುವಾಗ ನೀರು ಮಾತ್ರ ಕುಡಿಯುವುದು. ಮತ್ತು ಸ್ಕಾಚ್ ಕುಡಿಯುವಾಗ ಸ್ಕಾಚ್ ಮಾತ್ರ" ನನ್ನ ಹೆಂಡತಿ ಅವನ ಮಾತಿಗೆ ನಕ್ಕಳು. ಅವನು ತನ್ನ ಗಡ್ಡವನ್ನೊಮ್ಮೆ ಕೈಯಿಂದ ಸವರಿದ.

ಇನ್ನೂ ಇದೆ.....

ಡಿಸೆಂಬರ್ 18, 2008

ಅಕ್ಕ ದೂರಿಟ್ಟಾಗ

ಅಕ್ಕನೆಂಬ ಕಾರಣಕ್ಕೆ
ನೋಡ ನೋಡುತ್ತಲೇ ಲಂಡೋರಿ ಲಾಗ
ಹಾಕುತ್ತಿರುವ ಅವಳ ಗಾಳಿಪಟ
ಮೇಲೆ ನೋಡುತ್ತಾ ಓಡಿ ಓಡಿ
ಗೋಡೆ ಹತ್ತಿ
ಓಣಿ ಹಾರಿ
ಕಲ್ಲೆಡವಿ
ಕೆಸರ ಪಿಚಕಾರಿ
ಕಾಲಕೆಳಗೆ ಜಾರಿ
ಕೊನೆಗೆ
ಪುಂಡ ಪೋಕರಿಗಳು
ಗಾಳ ಸಿಕ್ಕಿಸಿ ಲಪೆಟ್
ಮಾಡಿದಾಗ
ಕತ್ತರಿಸಿ ಕೆಳಗೆ
ಬಿದ್ದುದನ್ನು ಹೆಕ್ಕಲು ಹೊಡೆದಾಟ
ಅದು ಗೊತ್ತಲ್ಲ
ಯಾರು ಹೆಕ್ಕುತ್ತಾರೋ ಅವರದೇ ಹಕ್ಕು
ಅಂಗಿ ಗುಂಡಿಗಳು ಪಟಪಟನೆ
ಸಿಡಿದು ಕಪಾಳದಂಚಿನ ನರನಾಡಿ
ಅಷ್ಟಾದರೂ ಬಿಡದೆ
ಹರಿದ ಕಾಗದ
ಮುರಿದ ಕಡ್ಡಿಗಳಿಗೆ
ಸಿಕ್ಕು ಕೊಂಡಿರುವ
ಉದ್ದ ಬಾಲಂಗೋಚಿಯ ಸುತ್ತಿ
ಅಲ್ಲಲ್ಲೇ ಉಳಿದ ಬಿಳಿ ಕಾಟನ್ ಹಗ್ಗವ
ನೆಲದುದ್ದಕ್ಕೆ ಎಳೆದಾಡುತ್ತಾ
ಮನೆಗೆ ಬಂದಾಗ
ನೋಡಮ್ಮ ನಾನು ಬೇಡ ಬೇಡ
ಅಂದರೂ
ಆ ಪುಂಡರೊಂದಿಗೆ ಹೊಡೆದಾಡಿ
ಅಂಗಿ ಹರಿದುಕೊಂಡು ಬಂದಾನೆ
ಅಂತ ದೂರಿತ್ತಳೇ
ನನಗದು ಸೋಜಿಗ !
ಅಯ್ಯೋ ಅಕ್ಕ!

ವೃಂದಾವನದ ಹಣೆಗೆ ಕುಂಕುಮವನಿಡುವಾಗ.....

ಅಗಾಧವಾದ ತುಳಸಿ ಕಟ್ಟೆಯ ಕಲಾತ್ಮಕತೆ ನೋಡಿ ನಾನು ದಂಗಾದೆ. ಏನು ಸೊಬಗದು. ಹೆಚ್ಚು ಕಡಿಮೆ ಎರಡಾಳೆತ್ತರ. ಸಾವಿರ ಅಡಿ ಆಳದಿಂದ ಉಧ್ಬವ ಆಗಿರಬೇಕು ಎಂದು ಅನಿಸುವ ಮಜಬೂತಾದ ಪೀಠ. ಪೀಠದ ತುಂಬೆಲ್ಲ ಕಚ್ಚು ಕಚ್ಚಿನ ಕೆತ್ತನೆಗಳು. ಮಾಟವಾಗಿ ಗುಂಡಗಾಗಿ ನೆಲಕ್ಕೆ ಅವಚಿಕೊಂಡಿರುವ ಬದಿಗಳು.

ಪೀಠ ಮೇಲ್ಬಗ್ಗುತ್ತಿದ್ದಂತೆ ಸೆನಶುಅಸ್ ಅನ್ನಿಸುವ ನಡುಭಾಗ. ನಡುವೆ ಬಾಗಿಲ ಚೌಕಟ್ಟು ಮತ್ತಲ್ಲಿ ಕುಳಿತಿರುವ ಲಚುಮಿ. ಅಕ್ಕ ಪಕ್ಕದಲ್ಲಿ ದೀಪವಿಡಲು ಕಿಂಡಿ ಮತ್ತೆ ಅಲ್ಲಲ್ಲಿ ಚಿತ್ತಾರ. ಹೂವಿನ ಬುಡದ ಹಾಗೆ ಮತ್ತೆ ಮೇಲಕ್ಕೆ ಬಾಗಿರುವ ಮೇಲ್ಕಟ್ಟು, ಮೂಲೆಗಳಲ್ಲಿ ನಾಲ್ಕು ಆಕಳಕಿವಿ ಮೇಲವಚಿಕೊಂಡ ಹಾಗೆ. ಅಷ್ಟು ನೋಡಲು ಕತ್ತು ಹಿಂದೆ ಬಗ್ಗಿಸಿ ಸೂರ್ಯ ಕಣ್ಣಿಗೆ ಹೊಡೆಯದ ಹಾಗೆ ಕೈ ಅಡ್ಡ ಹಿಡಿಯಬೇಕು.

ನನ್ನ ಬಳಿಯಿದ್ದ ಝಿನ್ (ನನ್ನ ಚೀನಿ ಮಿತ್ರ) "ಹೌ ಬ್ಯೂಥಿಫುಲ್" ಎಂದ. "ವಾತೀಸ್ ದಿಸ್" ಎಂದು ಕೇಳಿದ. "ದಿಸ್ ಇಸ್ ತುಳಸಿ ಕಟ್ಟೆ" ಅಂತ ಹೇಳಿದೆ. "ವಾತೀಸ್ ಥುಲಾಸಿ ಖಾತ್ತೆ" ಅಂದ. ಪಕ್ಕವಿರುವ ಕಟ್ಟೆ ಹತ್ತಿದರೆ ತುಳಸಿ ಕಟ್ಟೆಯ ಮೇಲ್ಭಾಗ ಮತ್ತು ಅಲ್ಲಿ ನೆಟ್ಟ ತುಳಸಿ ಕಾಣಬಹುದು ಅಂತ ಅವನಿಗೆ ಪಕ್ಕದ ಕಟ್ಟೆ ಹತ್ತಲು ಹೇಳಿದೆ.

ನಾನು ಎಂದೋ ಓದಿದ ತುಳಸಿ ಮಹಾತ್ಮೆಯನ್ನು ನೆನಪಿಸಿಕೊಳ್ಳುತ್ತಾ ಅವನಿಗೆ ನೀಡಬೇಕಾದ ಭಾಷಣವನ್ನು ಮನಸ್ಸಿನಲ್ಲಿಯೇ ಹರಡಿಕೊಳ್ಳುತ್ತಿರುವಾಗ, ಅವನಾದರೋ ಕ್ಯಾಮರ ಕೊರಳಿಗೆ ಭಧ್ರ ಪಡಿಸಿ ಸರ್ಕಸ್ ಮಾಡುತ್ತಾ ಮೇಲೆ ಹತ್ತಿ ನನಗೆ ಕೈ ನೀಡಿದ. ನಾನೂ ಹತ್ತಿದೆ.

"ಸೀ" ಎಂದೆ ಯುದ್ಧೋತ್ಸಾಹದಿಂದ. ಅಲ್ಲಿ ತುಳಸಿ ಗಿಡವೇ ಇರಲಿಲ್ಲ !!.

ಡಿಸೆಂಬರ್ 15, 2008

ದೆಹಲಿಯ ರಸ್ತೆಗಳು

ದೆಹಲಿಯ ರಸ್ತೆಗಳಿಗೆಲ್ಲ
ಸತ್ತು ಹೋದ ಮಹನೀಯರ ಹೆಸರು

ಸಫ್ದರ್ಜಂಗ್ ರಸ್ತೆ
ಫಿರೋಜ್ ಶಹ ರಸ್ತೆ

ಅಕ್ಬರ್, ಬಾಬರ್, ಷಹಜಹಾನ್
ಔರಂಗಜ್ಹೇಬ್ ರಸ್ತೆ

ಮೌಲಾನಾ, ನೆಹರೂ, ಅಸಫ್ ಅಲಿ,
ಕಸ್ತೂರ್ಬಾ ಗಾಂಧಿ ರಸ್ತೆ

ನಮ್ಮ ನಾಯಕರದು
ಅದೆಷ್ಟು ಮುಂದಾಲೋಚನೆ

ಬಳಿಕ ಸತ್ತ ಪಂಚಶೀಲ
ಜೊತೆಗೆ ಮಣ್ಣಾದ
ಸತ್ಯ ಶಾಂತಿ ನ್ಯಾಯ ನೀತಿ
ವಿನಯಕ್ಕೂ ರಸ್ತೆ

ಡಿಸೆಂಬರ್ 9, 2008

ಪೈಸಾ ಪಪ್ಪು ದೇಗಾ


ನಿನ್ನೆ ಟ್ರಾಫಿಕ್ ಜಾಮ್ ನಲ್ಲಿ ನನ್ನ ಮುಂದಿದ್ದ ಜೀಪಿನ ಹಿಂದೆ ಹೀಗೆ ಬರೆದಿತ್ತು.

ಶರ್ಮಾಜಿ ಸೆ ಪೂಛೊ, ಪೈಸಾ ಪಪ್ಪು ದೇಗಾ.

ಹಂ ಕಿಸ್ ಕೀ ತರಫ್ ದೇಖೆ. ಸಬಕಿ ನಝಾರೊಂಮೆ ರೆಹತೆ ಹೈ
ಕಿಸಮತ್ ಹೀ ಅಇಸೀ ಪಾಯೀ ಹೈ ಹರ ವಕ್ತ್ ಸಫರ್ ಮೇ ರಹತೇ ಹೈ

ಡಿಸೆಂಬರ್ 6, 2008

ಭೈರವಿ


ಯಮುನೆಯ ತಟದ ಆ ನಡುಗುಡ್ಡೆಯ ತುದಿಯಲ್ಲಿರುವ ಆ ಶಿಲಾ ಮಂಟಪದ ಕಂಬಕ್ಕೊರಗಿ ಕುಳಿತಿದ್ದ ಬಿಲಾಸ್ ಖಾನ್. ಜೊತೆಗೆ ಭೈರವಿ. ಅವಳ ರೇಷಿಮೆಯ ನುಣುಪಿನ ಕೇಶರಾಶಿ ಇವನ ಎದೆಯ ತುಂಬೆಲ್ಲ ಹರಡಿತ್ತು.
"ಭೈರವೀ..."
"ಹ್ಮೂ....."
"ನನ್ನ ಉಸಿರ ತುಂಬ ನಿನ್ನದೇ ನೆನಪು. ನೀನು ನನ್ನೊಡನೆಯೇ ಇರಬಾರದೆ."
"ನೀನು ಕರೆದಾಗೆಲ್ಲ ಬರುವುದಿಲ್ಲವೇ ನಾನು. ಎಲ್ಲೆಂದರಲ್ಲಿ. ನೀನೇ ಅಂಜುಬುರುಕ. ಇನ್ನು, ಹೀಗೆಲ್ಲ ಈ ಕಾರ್ಗಲ್ಲ ನಡುಗುಡ್ಡೆಯ ಮೇಲೆ ಒಂಟಿ ಹೆಣ್ಣನ್ನು ಕರೆಯುವುದು ಸರಿಯೇ, ಅದೂ ಅಪರಾತ್ರಿಯಲ್ಲಿ."
"ಕೊಂಚದಿನ ತಾಳು ಭೈರವಿ. ನನ್ನ ಅಪ್ಪನ ದಾಸ್ಯದಿಂದ ಬಿಡುಗಡೆಯಾದ ಮೇಲೆ ನನಗೆ ಯಾವ ಹೆದರಿಕೆಯೂ ಇಲ್ಲ."
ಸುಮ್ಮನೆ ನಕ್ಕಳು ಭೈರವಿ. ಸ್ನಿಗ್ಧ ಸುಂದರ ನಗು ಅವಳದು. ಅವಳ ಮಾದಕ ಚೆಲುವಿಗೆ ಮೆರುಗಿಟ್ಟಂತೆ.
ಇಳಿಬಿಟ್ಟ ಕಾಲುಗಳನ್ನು ಲಯಬದ್ಧವಾಗಿ ಜೋಲಾಡಿಸುತ್ತಾ ಝಲ್ಲ್ ಝಲ್ಲೆಂದು ಅಂದುಗೆಯ ಸದ್ದು ಹೊರಡಿಸುತ್ತಿರುವ ಭೈರವಿಯ ಮಡಿಲಲ್ಲಿ ಬಿಲಾಸ್ ಖಾನ್ ತಲೆಯಿಟ್ಟ. ಅವಳು ಮುದ್ದಿನಿಂದ ಅವನ ಹಣೆಯ ಮೇಲಿನ ಪುಚ್ಚು ಕೂದಲನ್ನು ಹಿಂದಕ್ಕೆ ಸವರಿದಳು. ಹಾಗೆಯೇ ಕಣ್ಣು ಮುಚ್ಚಿದ ಬಿಲಾಸ್ ಖಾನ್. ಯಮುನೆಯ
ನೀರವ ರಾತ್ರಿಯಲ್ಲಿ ಮಾದಕತೆಯಿತ್ತು.

ಜಗ್ಗೆಂದು ಎಚ್ಚರಾಯಿತು ಬಿಲಾಸ್ ಖಾನ್ ಗೆ. ಅರೆ ನಾನು ಮಲಗಿಬಿಟ್ಟೆನೆ. ಭೈರವಿ ಯಾವಾಗ ಹೋದಳು. ತಾನು ನಿದ್ರೆಗೆ ಜಾರಿದುದನ್ನು ನೋಡಿ ಮೆಲ್ಲನೆದ್ದು ಹೋಗಿರಬೇಕು ಎಂದುಕೊಂಡ. ಅವಳ ನುಣುಪಾದ ದುಪ್ಪಟ್ಟಾ ಅವನ ತಲೆಯಿಟ್ಟಲ್ಲಿ ಸಿಂಬೆ ಸುತ್ತಿ ಮಲಗಿತ್ತು. "ಜಾಣೆ" ಎಂದು ಸಂಭ್ರಮಿಸಿದ. ಸಿಂಬೆಯನ್ನು ಕೈಗೆತ್ತಿ ಅದರೊಳಗೆ ಮುಖ ಹುದುಗಿಸಿ ಅದರಲ್ಲಿರಬಹುದಾದ ಅವಳ ಮೈಸೊಗಡನ್ನು ಹೀರಿದ.

ಮೇಲ್ಮಹಡಿಯ ಅಪ್ಪನ ಕೋಣೆಯಲ್ಲಿ ದೀಪ ಆರಿದೆ. ಮಲಗಿರಬೇಕು. ಅಂಗಳದ ಬಾಗಿಲನ್ನು ಸದ್ದು ಮಾಡದೇ ಮೆಲ್ಲಗೆ ನೂಕಿ ಒಳ ಹೊಕ್ಕರೆ, ಅಲ್ಲೆ ನಡು ಅಂಗಳದಲ್ಲಿ ಶಾಲು ಹೊದ್ದು ನಿಂತಿರುವ ಆಜಾನುಬಾಹು. ಧಸಕ್ಕೆಂದಿತು ಎದೆ. ಅಪ್ಪ ಎಂದೂ ಹೀಗೆ ನಿದ್ರೆ ತಪ್ಪಿಸಿ ಬಂದವರಲ್ಲ.
"ಎಲ್ಲಿಗೆ ಈ ನಡುರಾತ್ರಿಯಲ್ಲಿ?"
"ಯಮುನೆಯ ತಟಕ್ಕೆ ಹೋಗಿದ್ದೆ, ತಂಗಾಳಿಗೆ ನಿದ್ದೆ ಬಂದದ್ದೆ ತಿಳಿಯಲಿಲ್ಲ. ಈಗಷ್ಟೆ ಎಚ್ಚರಾಯಿತು." ಎಂದ.
"ಸರಿ. ಈಗ ಮಲಕ್ಕೊ. ಬೆಳಿಗ್ಗೆ ಮೊದಲ ಜಾವದಲ್ಲಿ ರಿಯಾಝ್ ಇರುವಾಗ ಹೀಗೆ ನಿರ್ಲಕ್ಷ್ಯ ಸಲ್ಲ. ನೆನಪಿದೆಯಲ್ಲ ಇನ್ನು ಎರಡೇ ವಾರವಿದೆ. ಅಲ್ಲಿ ನನ್ನ ಮಾನಹರಣ ಮಾಡಬೇಡ"
"ಸರಿ" ಎಂದು ತಲೆಬಗ್ಗಿಸಿ ಒಳನಡೆದ ಬಿಲಾಸ್ ಖಾನ್.
ಹೌದು ಇನ್ನೆರಡೇ ವಾರದಲ್ಲಿ ತಮ್ಮ ಪ್ರಯಣ ಶುರು ವೃಂದಾವನಕ್ಕೆ. ಅಪ್ಪನ ಗುರುಗಳಾದ ಸ್ವಾಮಿ ಹರಿದಾಸರ ಜಯಂತಿ ಆಚರಿಸಲು.
ಇನ್ನು ಬರೇ ಇಪ್ಪತ್ತ ಮೂರು ದಿನಗಳು. ಸ್ವಾಮಿ ಹರಿದಾಸ ಸನ್ನಿಧಿಯಲ್ಲಿ ತನ್ನ ಮೊದಲ ಗಾಯನ. ತನ್ನ ಹದಿನೆಂಟು ವರುಶಗಳ ರಿಯಾಝಿನ ಸತ್ವ ಪರೀಕ್ಷೆ. ಮತ್ತು ತನ್ನ ತಂದೆ ತಾನಸೇನರ ಮಾನಹರಣ. ನಗು ಬಂತು ಬಿಲಾಸ್ ಖಾನ್ ಗೆ.
ಅದಾದ ಮೇಲೆ ಈ ವಾಡೆ, ಈ ಮಹಲುಗಳು, ಈ ರಾಜ ಮಂದಿರ, ಕೋಟೆ ಕೊತ್ತಲಗಳ ನಡುವಿನಿಂದ ದೂರಕ್ಕೆ ಓಡಿ ಈ ಬೇಡಿಗಳನ್ನೆಲ್ಲ ಕಳಚಿಕೊಳ್ಳಬೇಕು. ಅಲ್ಲಿ ತಾನು ಮತ್ತು ತನ್ನ ಪ್ರಿಯ ಭೈರವಿ ಮಾತ್ರ.

"ಛೋಟೆ ಸಾಹಬ್, ಛೋಟೆ ಸಾಹಬ್," ಕೆಲಸದಾಳು ರಶೀದ ನಿದ್ರೆಯಿಂದ ಎಚ್ಚರಿಸುತ್ತಿದ್ದಾನೆ. ಎದ್ದು ಕುಳಿತು ಮೈಮುರಿದು ಕಿಟಕಿಯತ್ತ ನೋಡಿದರೆ ಇನ್ನೂ ದಟ್ಟ ಕತ್ತಲು.
ರಿಯಾಝ್ ಸಮಯವಾಯಿತು ಬೇಗ ತಯಾರಾಗಿ ಎಂದ ರಶೀದ. ಲಗುಬಗೆಯಿಂದ ತಯಾರಾಗಿ ರಿಯಾಝ್ ಕೋಣೆ ತಲುಪಿದಾಗ, ಅದಾಗಲೇ ಅಪ್ಪ ತಾನ್ಪುರಾ ಹಿಡಿದು ತನ್ಮಯರಾಗಿದ್ದರು. ಸಾರಂಗಿಯ ವಲೀ ಖಾನ್ ಮತ್ತು ಪಖಾವಾಝ್ ನ ರಮಾಕಾಂತ ಶರ್ಮಾ ಕೂಡ. ಸದ್ದು ಮಾಡದೇ ಎದುರು ಕುಳಿತು ತನ್ನ ತಾನ್ಪುರಾ ಎತ್ತಿ ಶ್ರುತಿ ಮಾಡತೊಡಗಿದ. ಅಪ್ಪನ ಶಿಸ್ತೇ ಅದು. ಅವರ ತಾನ್ಪುರಾ ಮೀಟೀಗೇ ತನ್ನದೂ ಶ್ರುತಿ ಕೂಡಬೇಕು. ಅದರಲ್ಲಿ ಬಿಲಾಸ್ ಖಾನ್ ಏನೂ ಹಿಂದಿಲ್ಲ. ಒಂದೇ ಮೀಟಿಗೆ ಶ್ರುತಿಗೊಳಿಸಿ ತಂದೆಯ ಜೊತೆಗೆ ಇವನದೂ ಝೇಂಕಾರ ಹರಡತೊಡಗಿತು ಆ ಕೋಣೆಯಲ್ಲಿ.
ಆ ಝೇಂಕಾರದಲ್ಲಿ ಮುಳುಗುತ್ತ ಅಪ್ಪ ಮಗ ಇಬ್ಬರೂ ಲಹರಿ ತುಂಬಿಕೊಂಡರು.
ಒಂದು ಸ್ವರ ಹುಟ್ಟಿ ಮಂದ್ರವಾಗಿ ತಾನ್ಪುರಾದ ಝೇಂಕಾರದಲೆಗಳ ಒತ್ತಿಗೇ ಹರಡಿಕೊಳ್ಳುತ್ತಾ ಬಿಗಿಯಾಗತೊಡಗಿತು.
ಮೆಲ್ಲನೆ ಕಣ್ಣುತೆರೆದ ಬಿಲಾಸ್ ಖಾನ್. ತಂದೆ ಶುರು ಹಚ್ಚಿದ್ದರು. ಮತ್ತೆ ಕಣ್ಣು ಮುಚ್ಚಿ ತನ್ಮಯತೆಯನ್ನು ತಂದು ಕೊಂಡ.
ಸ್ವರ ಪ್ರಸ್ತಾರ ಝೇಂಕಾರದಲೆಗಳ ನಡುವಿನಿಂದ ಮೇಲೆದ್ದು ನಿಲ್ಲ ತೊಡಗಿತ್ತು. ಮಿಂಯಾ ತಾನಸೇನರ ಕಂಠದಿಂದ ಹೊರಬಿದ್ದ ಸ್ವರಗಳು ಸ್ವತಂತ್ರ ಸಂಚಾರಿಗಳು.
ಬಿಲಾಸ್ ಖಾನ್ ಗೂ ಲಹರಿ ತುಂಬಿತ್ತು. ಅದರಲ್ಲೇ ಮೈಮರೆತ.
ಅಹಿರ ಭೈರವ ತಂದೆಯ ದಿವ್ಯ ಕಂಠದಿಂದ ದಬದಬೆಯ ಗಂಭೀರತೆಯಲ್ಲಿ ಹರಿದು ಬರುತಿತ್ತು. ಬೆಳಗಿನ ಮೊದಲ ಜಾವದ ನೀರವತೆಗೆ ಭಂಗ ತರದೇ ಆ ನೀರವತೆಯನ್ನು ಇನ್ನಷ್ಟು ಗಾಢಗೊಳಿಸುವ ಗಂಡು ಮೆಟ್ಟಿನ ರಾಗವದು.
ಪ್ರಸ್ತಾರ ಮುಂದುವರಿಸಿ ವಿಲಂಬಿತದ ಮೊದಲ ಸಂನಲ್ಲಿ ಶರ್ಮಾಜಿಯ ಪಖಾವಾಝದ ಪೆಟ್ಟು.

ತುಮ ರಾಖೊ ನಿತ ನಿರಮಲ ಗಂಗಾಧರ

ಕಣ್ಣು ಮುಚ್ಚಿ ಮಗ್ನನಾಗಿ ಸಂಗೀತದಲೆಗಳಲ್ಲಿ ಮುಳುಗಿದ್ದ ಬಿಲಾಸಖಾನನಿಗೆ ಜಗ್ಗೆಂದು ಭೈರವಿಯ ನೆನಪು. ಅವಳ ಝಲ್ಲೆನ್ನುವ ಕಾಲಂದಿಗೆಯ ತಾನ, ಅವಳ ಮಾಟವಾದ ಅಂಗರೇಖೆ, ಅವಳ ಸೊಬಗಿನ ಕೇಶರಾಶಿ, ಅವಳ ಸ್ನಿಗ್ಧ ಸುಂದರ ನಗು, ಅವಳ....
"ಬಂದ್ ಕರೋ...." ಅಬ್ಬರಿಸಿದ ತಾನಸೇನನ ಬೊಬ್ಬೆಗೆ ಬೆಚ್ಚಿ ಕಣ್ಣು ತೆರೆದ ಬಿಲಾಸ್ ಖಾನ್. ತಂದೆ ಸಿಟ್ಟಿನಿಂದ ಎದ್ದು ನಿಂತಿದ್ದರು. ಅಪ್ಪನೆದುರು ಕೂರಲಾರದೇ ಇವನೂ ತಾನ್ಪುರಾ ಕೆಳಗಿಟ್ಟು ಎದ್ದು ನಿಂತ. ಛಟೀರ್ ಎಂದು ಕೆನ್ನೆ ಕೆಂಪಾಯಿತು.
"ನೀನಿನ್ನೂ ಭೈರವಿಯ ಹುಚ್ಚು ಬಿಟ್ಟಿಲ್ಲ.! ನಾನು ಹಾಡಬೇಡ ಎಂದರೂ ಭೈರವಿ ಹಾಡಲು ನಿನಗೆಷ್ಟು ಧೈರ್ಯ.
ಕೇಳು.. ನಿನಗೆ ಇಂದಿನಿಂದ ಭೈರವಿ ನಿಷೇಧ. ಮತ್ತೆ ಭೈರವಿ ಹಾಡಿದರೆ ನಿನ್ನ ಕಂಕಣ ಕಿತ್ತೊಗೆಯುತ್ತೆನೆ." ದುರ್ದಾನ ತೆಗೆದುಕೊಂಡವನಂತೆ ಹೊರನಡೆದ ತಾನಸೇನ. ಉಳಿದಿಬ್ಬರೂ ಹೊರಹೋದ ಮೇಲೆ ಇವನೊಬ್ಬನೆ ಉಳಿದ.

ಕೆನ್ನೆ ಚುರುಗುಡುತ್ತಿತ್ತು. ಅಲ್ಲೆ ನಿಂತು ಮೈಮರೆತಿದ್ದ ಬಿಲಾಸ್ ಖಾನ್ ಕೆನ್ನೆಗೆ ತಂಗಾಳಿ ಸೋಕಿದಂತಾಗಿ ಕಣ್ಣುತೆರೆದರೆ ಭೈರವಿ. ಅವಳ ಉಸಿರನ್ನು ತನ್ನ ಕೆನ್ನೆಗೆ ಊದಿ ಸಂತೈಸುತ್ತಿದ್ದಾಳೆ. ಹಾಗೆ ತಬ್ಬಿಕೊಂಡವನ ಎದೆಗೆ ಒರಗಿದಳು ಭೈರವಿ.
ಭೈರವಿ ತನ್ನ ಭ್ರಮೆಯಂತೆ. ಹಾಗೆಂದವರಿಗೆ ಹುಚ್ಚು. ಇಗೋ ಇಲ್ಲಿ ನನ್ನೆದುರಿಗೆ ಅಂಗಾಂಗ ತುಂಬಿ ನಿಂತಿರುವ ಈ ಸೌಂದರ್ಯದ ಖಣಿ ನನ್ನ ಕಲ್ಪನೆಯೇ?.
ಅವಳ ಮುಖವನ್ನು ತನ್ನ ಬೊಗಸೆಯಲ್ಲಿ ತುಂಬಿಕೊಂಡು ಅವಳ ಕಣ್ಣ ಮೇಲೆ ಹೂಮುತ್ತನ್ನಿತ್ತ.
"ಭೈರವಿ..."
"ಹ್ಮೂ.."
"ನೀನು ಭ್ರಮೆಯೇ? ನನ್ನ ಕಲ್ಪನೆ ಮಾತ್ರವೇ?"
ಗಿಲ್ಲನೆ ನಕ್ಕು ಕತ್ತು ಕೊಂಕಿಸಿದಳು ಭೈರವಿ.
"ಯಾರು ಹಾಗೆಂದರು?"
"ಎಲ್ಲರೂ.. ನೀನು ರಾಗಿಣಿಯಂತೆ... ಕವಿಗಳ ಕಲ್ಪನೆಯಂತೆ... ನನ್ನ ಭ್ರಮೆಯಂತೆ... ಹೌದೆ?"
ಮತ್ತೆ ನಕ್ಕು ಎದೆಗೊರಗಿದಳು. ಅವಳ ನಗುವಿನಲೆಗಳು ತಂದೆ ಕೊಂಚ ಹೊತ್ತಿನ ಮೊದಲು ಹಾಡಿ ಬಿಟ್ಟಿದ್ದ ಅಹಿರ್ ಭೈರವದ ಲಹರಿಯ ಮೇಲೆ ಹರಡಿಕೊಳ್ಳತೊಡಗಿದವು.
"ನಿನಗೇನು ಅನ್ನಿಸುತ್ತೆ..."
"ನನಗೆ ಅದೆಲ್ಲ ಸುಳ್ಳು ಅನಿಸುತ್ತದೆ. ನೀನೆ ಸತ್ಯ. ನೀನು ನನ್ನ ಉಸಿರು, ನನ್ನ ಪ್ರಿಯೆ, ನನ್ನ ಬದುಕು. ಇಲ್ಲಿ ನನ್ನ ಕಣ್ಣೆದುರಿಗೆ ನಗುತ್ತಿರುವುದು ನನಗೆ ಕಿವಿಯಾರೆ ಕೇಳುತ್ತಿದೆ. ಇದು ಭ್ರಮೆಯೇ?. ನನ್ನನ್ನು ತಬ್ಬಿಕೊಂಡಿರುವ ನಿನ್ನ ಅಂಗ ಸ್ಪರ್ಶವೂ ನನ್ನ ಅರಿವಿಗೆ ಬರುತ್ತಿದೆ. ಇದು ಕಲ್ಪನೆಯೇ? ನಿನ್ನ ಬಿಸಿಯುಸಿರಿನ ಪರಿಮಳವೂ ನನ್ನ ಮತ್ತೇರಿಸುತ್ತಿದೆ. ಇದು ಭ್ರಮೆಯೇ? ಇಲ್ಲ ನೀನು ನನ್ನ ಜೀವ. ಭೈರವಿ..
ಇನ್ನು ಕೆಲವೇ ದಿನಗಳು.. ಮತ್ತೆ ನಾವಿಬ್ಬರೇ ಜೊತೆಯಾಗಿ ಎಲ್ಲಾದರೂ ಹೋಗಿ ಬಿಡೋಣ. ನನ್ನ ಜೊತೆ ಬರ್ತಿಯಲ್ಲ ನೀನು?"
"ಹ್ಮೂ... ಆದರೆ ಮತ್ತೆ ಆ ಕಲ್ಲು ಮಂಟಪಕ್ಕೆ ಕರೆಯಬೇಡ. ನನಗೆ ಹೆದರಿಕೆ" ಎಂದು ಹುಸಿಕೋಪದಿಂದ ಅವನೆದೆ ಗಿಲ್ಲಿದಳು ಭೈರವಿ.

ಯಾರೋ ಕೆಮ್ಮಿದಂತಾಯಿತು. ಬಾಗಿಲಲ್ಲಿ ಶರ್ಮಾಜಿ ಮತ್ತು ವಲೀ ಖಾನ್ ನಿಂತಿದ್ದರು. ಭೈರವಿ ಇವನ ಕೆನ್ನೆಗೊಂದು ಮುತ್ತನ್ನಿಟ್ಟು ಅಂದುಗೆಯ ಸದ್ದು ಮಾಡುತ್ತಾ ಮೆಲ್ಲನೆ ಹೊರನಡೆದಳು.
"ಶುರುಮಾಡೋಣವೇ ಸಾಹಬ್..."
ಮತ್ತೆ ಶುರುವಾಯಿತು ತಾಲೀಮು. ತನ್ನ ತಂದೆಯಡಿ ಪಳಗಿದ ಇಬ್ಬರು ದಿಗ್ಗಜರ ನಿಗರಾವಣೆಯಲ್ಲಿ ಭೈರವಿಗೆ ಪ್ರವೇಶವೆಲ್ಲಿ. ಬಿಲಾಸ್ ಖಾನ್ ಭಾರವಾದ ಬೇಡಿಗಳನ್ನು ಕಾಲಿಗೆ ತೊಡಿಸಿದಂತೆ ಚಡಪಡಿಸತೊಡಗಿದ. ಹಂಬಲ... ಅಲವತ್ತಾಯಿತು. ತನ್ನ ಅಸ್ತಿತ್ವವೇ ಭಾರವಾಗಿ ಸೋರತೊಡಗಿತು. ಭೈರವಿಯ ಸ್ಪರ್ಶದ ಮದ್ದಿಲ್ಲದೆ ಬಿಲಾಸ್ ಖಾನ್ ನರಳ ತೊಡಗಿದ. ಇನ್ನೇನು ಗ್ವಾಲಿಯರ್ ಗೆ ತೆರಳಲು ಎರಡು ದಿನ ಇರುವಾಗ ತೀವ್ರ ಜ್ವರದ ತಾಪದಿಂದ ಬಸವಳಿಯತೊಡಗಿದ ಬಿಲಾಸ್ ಖಾನ್.

ವೈದ್ಯರ ಮೇಲ್ವಿಚಾರಣೆಯಲ್ಲಿ ಇವನನ್ನು ಪಲ್ಲಕ್ಕಿಯಲ್ಲಿಟ್ಟು ಕಾರಂವಾ ಹೊರಟಿತು ವೃಂದಾವನದತ್ತ. ಹಾದಿಯುದ್ದಕ್ಕೂ ಕನವರಿಸುತ್ತಿದ್ದ ಬಿಲಾಸ್ ಖಾನ್. ಭೈರವಿ ಕಣ್ಣು ಮುಚ್ಚಾಲೆಯಾಡುತ್ತಿದ್ದಳು. ಅವಳ ನೆನಪು ಸುಳಿದಾಗೆಲ್ಲ ತನ್ನ ಕೆನ್ನೆ ಮತ್ತೆ ಚುರುಗುಟ್ಟಿದ ಅನುಭವ. ಅದೇ ಗುಂಗಿನಲ್ಲಿ ಪಲ್ಲಕ್ಕಿಯ ಒಳಗೆಲ್ಲ ತೀವ್ರವಾಗಿ ಜ್ವಲಿಸುವ ಸ್ವರ ಸಂಚಾರಗಳು.

ವೃಂದಾವನ ತಲುಪಿದ ಮೇಲೆ ನಿರಂತರ ಮದ್ದು, ಲೇಪಗಳಿಂದ ಜ್ವರವೇನೋ ಇಳಿತಕ್ಕೆ ಬಂತು. ಆದರೆ ಬಿಲಾಸ್ ಖಾನ್ ಮಂಕಾಗಿ ಹೋಗಿದ್ದ.
ಸಮಾರೋಹದ ಹಿಂದಿನ ರಾತ್ರಿ ಬಿಲಾಸ್ ಖಾನ್ ಇರುವ ಖೋಲಿಗೆ ತಾನಸೇನ ಬಂದಾಗ ಕಂಡದ್ದು ಆ ಮಂದವಾದ ಲಾಟೀನು ಬೆಳಕಿನಲ್ಲಿ ಒಬ್ಬನೆ ತಾನ್ಪುರಾ ಮೀಟುತ್ತಾ ರಿಯಾಝ್ ಮಾಡುತ್ತಿರುವ ಬಿಲಾಸ್ ಖಾನ್. ಸಮಾಧಾನವಾಯಿತು ತಾನಸೇನನಿಗೆ. ಕೊಂಚ ಹೊತ್ತು ನಿಂತಿದ್ದು ಹಿಂತಿರುಗಿದ.

ಅಂದು ರಾಧಾ ಅಷ್ಟಮಿ, ಮತ್ತು ಅಂದೇ ಸ್ವಾಮಿ ಹರಿದಾಸರ ಜಯಂತಿ. ಬಾಂಕೆ ಬಿಹಾರಿಯ ದೇವಳ, ಸ್ವಾಮಿ ಹರಿದಾಸರ ಸಮಾಧಿಯ ನಿಧಿವನ ಮತ್ತು ವ್ರುಂದಾವನದಲ್ಲೆಲ್ಲ ಸಡಗರದ ಹಬ್ಬ. ತಳಿರು ತೋರಣಗಳು, ಹೂ ಮಾಲೆಗಳಿಂದ ರಸ್ತೆಯ ಇಕ್ಕೆಲಗಳಲ್ಲಿ ಸಂಭ್ರಮ. ಬಾಂಕೆ ಬಿಹಾರಿಗೆ ವಿಶೇಷ ಪೂಜೆ, ಉತ್ಸವ. ಮುಂಜಾವ ಎರಡನೇ ಪ್ರಹರಕ್ಕೆ ನಿಧಿವನದ ಸಮಾಧಿ ಸ್ಥಲದಲ್ಲಿ ಸ್ವಾಮಿ ಹರಿದಾಸ ಸಂಗೀತ ಸಮಾರೋಹ. ಮೊದಲು ಶಿಷ್ಯ ಪರಂಪರೆಯ ಕಂಕಣಧಾರಕರಿಗೆ ಅವಕಾಶ.
ಸ್ವಾಮಿ ಹರಿದಾಸರ ಶಿಷ್ಯನಾದ ತಾನಸೇನನ ಮಗ ಮತ್ತು ಶಿಷ್ಯ ಬಿಲಾಸ್ ಖಾನ್ ನ ಹದಿನೆಂಟು ವರುಶಗಳ ನಿರಂತರ ತಾಲೀಮಿನ ಸತ್ವ ಪರೀಕ್ಷೆ.

ಹೆಸರಾಂತ ಸಂಗೀತಗಾರರು, ದಿಗ್ಗಜರು, ಶ್ರೀಮಂತ ಕಲಾಪ್ರೇಮಿಗಳು, ರಾಜರುಗಳು, ಪ್ರತಿನಿಧಿಗಳ ತೂಕದ ಸಭೆ. ಹಾಡುಗಾರಿಕೆಯಲ್ಲಿ ಕೊಂಚ ಹಿಂದು ಮುಂದಾದರೂ ಆ ಹದಿನೆಂಟು ವರುಶಗಳ ಅವಿರತ ಸಾಧನೆಗೆ ನೀರು ಸುರಿದಂತೆ. ತಾನಸೇನನ ಬಳಗದಲ್ಲೆಲ್ಲ ಬಿಗಿ ಉಸಿರಿನ ವಾತಾವರಣ.
ಬಿಲಾಸ್ ಖಾನ್ ಮಾತ್ರ ಅದೇ ಮಂಕು ಕಂಗಳ ನೀರಸ ಮುದ್ರೆ. ಜ್ವರ ಬಿಟ್ಟಿದ್ದರೂ ನಿಶ್ಶಕ್ತಿ ಮುಖದಲ್ಲಿ ಎದ್ದು ಕಾಣುತ್ತಿತ್ತು.
ಸಾಥಿ ದಿಗ್ಗಜರದ್ದು. ಸಾರಂಗಿಗೆ ಉಸ್ತಾದ್ ಜೈನುಲ್ ಅಬೇದಿನ್ ಮತ್ತು ಪಖಾವಾಝದಲ್ಲಿ ಪಂಡಿತ್ ಓಂಕಾರ್ ನಾಥ ಮಿಶ್ರಾ. ದಿಗ್ಗಜ ಸಭೆಯನ್ನು ನೋಡಿ ಅತ್ತಿತ್ತ ಬೆರ್ಚಿ ಹರಿಹಾಯದಂತೆ ಸುಭದ್ರ ಬೇಲಿಗಳು ಇಬ್ಬರೂ.
ಸಮಾಧಿಗೆ ನಮಿಸಿ ಬಂದ ಬಿಲಾಸ್ ಖಾನ್ ಗುರುಗಳೂ ತಂದೆಯವರೂ ಆದ ತಾನಸೇನರಿಗೆ ಸಾಷ್ಟಾಂಗವೆರಗಿದ. ವೇದಿಕೆಯೇರಿ ಸಭಿಕರಿಗೆ ನಮಿಸಿ, ತಾನ್ಪುರಾಗೆ ನಮಿಸಿ ಶ್ರುತಿಗೊಳಿಸಿದ. ಝೇಂಕಾರ ಹರಡತೊಡಗಿತು. ಮುಂಜಾನೆಯ ನಸು ಬೆಳಕಿನಲ್ಲಿ ನಿಸರ್ಗದ ಸಹಜ ಶಬ್ದ ಬಿಟ್ಟರೆ ಬೆರೆಲ್ಲವೂ ನಿಶ್ಶಬ್ದ ಏಕಾಗ್ರ.

ತಾನ್ಪುರಾದ ಝೇಂಕಾರ ಸ್ಥಾಯಿಯಾಗಿ ನೆಲೆಸುತ್ತಿದ್ದಂತೆ ಅದಕ್ಕೆ ಒತ್ತಿಕೊಂಡ ಹಾಗೆ ಉಧ್ಬವಿಸಲಾರಂಭಿಸಿತು ಮೊದಲ ಸ್ವರ. ಸ್ವರ ಪ್ರಸ್ತಾರವಾಗುತ್ತಿದ್ದಂತೆ ರಾಗ ತೋಡಿಯ ಅಂಗ ನಿಚ್ಚಳತೆ. ತಾನಸೇನನಿಗೆ ಸಮಾಧಾನ.

ಝಲ್ಲೆನ್ನುವ ಅಂದುಗೆಯ ಸದ್ದು. ಗಾಯನದ ಲಯದಲ್ಲಿದ್ದಂತೆಯೇ ಬಿಲಾಸ್ ಖಾನ್ ತನ್ನ ಅರೆ ತೆರೆದ ಕಣ್ಣುಗಳಿಂದ ಅತ್ತ ನೋಟ ಹಾಯಿಸಿದ. ಅಗೋ ಅಲ್ಲಿ ಸಮಾಧಿ ಸ್ಥಲದ ಹತ್ತಿರದ ಕಲ್ಲು ಕಟ್ಟೆಯ ಮೇಲೆ ಕುಳಿತು ಕಾಲು ಜೋಲಾಡಿಸುತ್ತಿದ್ದಾಳೆ ಭೈರವಿ ಲಯಬದ್ಧವಾಗಿ. ಬೆಳ್ಳನೆಯ ಕಸೂತಿಯ ಲೆಹೆಂಗಾ ಮತ್ತು ಅಂಗವಸ್ತ್ರ. ಅವಳ ಮಾದಕ ಸೌಂದರ್ಯವನ್ನು ಇಮ್ಮಡಿಗೊಳಿಸುವ ಕಂಚುಕ. ಹುಲ್ಲುಗರಿಕೆಯ ಮೇಲೆ ನಿಂತ ಮಂಜು ಹನಿಗಳ ಕೋಮಲತೆ ಅವಳ ಇರುವಿಕೆಯಲ್ಲಿ.

ಸಭೆಯಲ್ಲಿ ಗುಸುಗುಸು... ಯಾವ ರಾಗವಿದು.....ತೋಡಿಯ ಅಂಗನಿಚ್ಚಳತೆಯಿದೆ.... ಆದರೆ ತೋಡಿಯಲ್ಲ..... ಭೈರವಿಯ ಎಲ್ಲ ಸ್ವರಗಳಿವೆ...ಭೈರವಿಯೂ ಅಲ್ಲ.. . ರೋಮಾಂಚಕರ ಸ್ವರ ಸಂಚಾರಗಳು.
ತಾನಸೇನನಿಗೂ ಸಿಟ್ಟು. ಆದರೆ ಸಭಾ ಮರ್ಯಾದೆಯನ್ನು ಉಲ್ಲಂಘಿಸುವಂತಿಲ್ಲ. ಗಾಯಕ ಸಂಗೀತದ ನಿಯಮಗಳಿಂದ ಒಂದಿನಿತೂ ಅತ್ತಿತ್ತ ಜರುಗಿಲ್ಲ. ತನ್ನ ನಿಷೇದವನ್ನೂ ಮೀರಲಿಲ್ಲ.

ಪ್ರಸ್ತಾರ ಮುಂದುವರೆಸಿ ಖಯಾಲ ತೊಡಗಿರುವಂತೆಯೆ ಪಖಾವಜದ ಧಾ.. ಸಮ್ಮಿಳಿತ.

ನಯನ ಮೊರೆ ಜಲ ಭರ ಆಯೆ.. ದಿಖತ ತೊಹೆ...
ಕಾಹೆ ಪಿಯಾ ನಹಿ ದೇತಾ ದರಸ ಮೊಹೆ...

ವಿರಹದಿಂದ ಪರಿತಪಿತಳಾದ ಹೆಣ್ಣಿನ ಆರ್ದ್ರ ಮೊರೆ. ಸುಂದರ ನಗು ಚೆಲ್ಲುತ್ತಾ ತನ್ನತ್ತ ನೋಡಿ ಸಮ್ಮತಿಸುತ್ತಿದ್ದಾಳೆ ಭೈರವಿ.

ಮೊದಲ ಚೀಜಿನಿಂದ ಸರಸ್ವತಿಯನ್ನು ವಂದಿಸುವುದು ಪರಂಪರೆ. ತಾನಸೇನ ಸಿಟ್ಟೆದ್ದು ಅಲ್ಲಿಂದ ಹೊರಹೋಗಿದ್ದು ಗಮನಿಸದಷ್ಟು ಮಂತ್ರ ಮುಗ್ಧ ಸಭಾಸದರು. ನಡುವೆ ಪ್ರತಿ ಸಮ್ಮಿಗೂ ವಾಹ್ ವಾಹ್ ಎಂದು ಅಭಿನಂದಿಸಿ ತಲೆದೂಗುವ ನಿಪುಣ ಕಲಾಪ್ರೇಮಿಗಳು. ಮೊದಲ ಸಾಲಿನ ಉದ್ಗಾರಗಳು ಯಾವತ್ತೂ ಕಲಾವಿದರಿಗೆ ಸಮ್ಮಾನದ ಪಾರಿತೋಷಕ. ಅವನ ಲಯಕಾರಿ ಅಷ್ಟು ನಿಚ್ಚಳ. ಸಾರಂಗಿಯಂತಹ ವಾದ್ಯಗಳಲ್ಲಿ ಮಾತ್ರ ಹೊರಡಿಸಬಹುದಾದಂತಹ ಕೆಲವು ಸ್ವರಗಳ ಸಂಚಾರವನ್ನು ನಿರಾಳವಾಗಿ ಹಾಡುವ ಚಾಕಚಕ್ಯತೆ. ವಿಶಿಷ್ಟ ರಾಗ. ಸಮ್ಮೋಹಿತ ಶ್ರೋತೃಗಣ. ಆದರೆ ಇದು ಯಾವುದನ್ನೂ ಗಮನಿಸದ ಗಾಯಕ ತನ್ನದೇ ಆದ ಲೋಕವೊಂದರಲ್ಲಿ ವಿಹರಿಸುತ್ತಿದ್ದಾನೆ. ಭೈರವಿಯಾ ಮೋಹಕ ನರ್ತನಕ್ಕೆ ಸ್ಪಂದಿಸುತ್ತಾ.

ವಿಲಂಬಿತ ಖಯಾಲದ ಅಂತರಾ ಪ್ರವೇಶ.. ಮಧ್ಯಲಯದಲ್ಲಿ.

ಶೋಕ ಮನ ಛಾಯೇ, ಯಾದ ದರಸಾಯೇ..
ಕೈಸೆ ಧರೂಂ ಧಿರ್ ದೇವೋ ದರಸ ಮೊಹೆ...

ಬಿಲಾಸ್ ಖಾನ್ ಹಾಡುತ್ತಿರುವ ರಾಗದ ಪ್ರತೀ ರೋಮಾಂಚಕರ ಸಂಚಾರಕ್ಕೂ ಸಭೆಯಲ್ಲಿ ಹರ್ಷೋದ್ಗಾರಗಳು. ಇತಿಹಾಸ ನಿರ್ಮಿಸಿದ್ದ ಬಿಲಾಸ್ ಖಾನ್. ಮೊದಲ ಗಾಯನದಲ್ಲಿಯೇ ದಿಗ್ಗಜರ ಮನ್ನಣೆ. ಹೊಸ ರಾಗವೊಂದರ ಆವಿರ್ಭಾವ. ತಾನಸೇನನ ಮಾನಹರಣವಲ್ಲ ನಾಮೋದ್ಧರಣ.
ಅದಾಗಲೇ ವಿಲಂಬಿತದಿಂದ ಧ್ರುತಕ್ಕೆ ಪ್ರವೇಶಿಸಿದ್ದ ಬಿಲಾಸ್ ಖಾನ್.. ಅವನು ಮತ್ತು ಅವನ ಕಣ್ಣ ಮುಂದೆ ಈಗ ಭೈರವಿ ಮಾತ್ರ.
ಭೈರವಿಯೂ ಅವಳ ಶ್ವೇತ ಲೆಹೆಂಗಾದ ಜಲಪಾತದಂತಹ ನೆರಿಗೆಗಳನ್ನು ಚಿಮ್ಮಿಸಿ ನರ್ತಿಸುತ್ತಿದ್ದಾಳೆ. ಸಮಾಧಿಯ ಮುಂದಣ ರಂಗವಲ್ಲಿಯ ವರ್ತುಲದಲ್ಲಿ. ಅವಳ ನರ್ತನಕ್ಕೆ ಇಂಬುಕೊಡುವ ಮಿಶ್ರಾಜಿಯ ಪಖಾವಾಝದ ಧಿನನ.

ಜಾ ಜಾರೆ ಜಾ ಓ ಖಗವಾ,
ಇತನೋ ಸಂದೇಸ್ ಮೊರೆ ಕಹಿಯೋ ಜಾರೆ..
ಜೊ ಆಯೆ ಪ್ರೀತಮ ದ್ವಾರ
ನೈನಾ ಭಿಚಾವೂಂ ಮಗವಾ.

ಧ್ರುತಲಯದಲ್ಲಿ ಬಂದಿಶ್. ಬಿಲಾಸಖಾನನ ಚಂಚಲ ತಾನಕಾರಿಗಳಿಂದ ಭೈರವಿಯ ನರ್ತನಕ್ಕೆ ರಂಗು ತುಂಬುವ ರಾಗಸುಧೆ. ತುದಿಗಾಲಲ್ಲಿ ಗಿರಗಿರನೆ ಚಕ್ರಧಾರ ತಿರುಗುತ್ತಿರುವ ಭೈರವಿ. ನೆಲ ಬಿಟ್ಟು ಮೇಲೆ ಗಾಳಿಯಲ್ಲಿ ನರ್ತಿಸುವ ಹಾಗೆ. ಇಡೀ ನಿಸರ್ಗವೇ ಈ ಸಮಾಗಮವನ್ನು ಪ್ರತಿನಿಧಿಸುತ್ತಿದೆಯೋ ಎಂಬಂತೆ ಸ್ಥಬ್ದ ವಾಗಿರುವ ವಾತಾವರಣ. ಸೂರ್ಯನ ಹೊಂಬೆಳಕಿನ ಕಿರಣಗಳು ಭೈರವಿಯ ಮುಖವನ್ನು ಬೆಳಗಿಸಿದ್ದವು. ಬಿಲಾಸ್ ಖಾನ್ ಆ ರಾಗಿಣಿಯ ದಿವ್ಯತೆಯತ್ತ ಸಮ್ಮೋಹಿತನಾಗಿದ್ದ. ಎಲ್ಲವೂ ಮಾಯವಾಗಿದ್ದವು. ಸ್ವಾಮಿ ಹರಿದಾಸರ ಸಮಾಧಿ, ವೇದಿಕೆ, ಸಭಾಸದರು, ನಿಧಿವನ, ವ್ರಂದಾವನ, ಬಾಂಕೆ ಬಿಹಾರಿ.. ಉಳಿದಿದ್ದು ಆ ಸುಂದರ ರಾಗವೊಂದರ ಲಹರಿ ಮಾತ್ರ. ರಾಗ ಬಿಲಾಸ್ ಖಾನಿ ತೋಡಿ.

("ಭೈರವಿ" ಕತೆಯನ್ನು ನಾನು ಮೊದಲ ಬಾರಿ ಬರೆದದ್ದು ಸುಮಾರು ಹದಿನೈದು ವರ್ಷಗಳ ಹಿಂದೆ. ಮೈಸೂರು ವಿವಿಯ ಅಂತರ್ ಕಾಲೇಜು ನಾಟಕೋತ್ಸವದಲ್ಲಿ ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿಯರ ತಂಡವೊಂದು ಈ ಕತೆಯನ್ನು ನಾಟಕವನ್ನಾಗಿಸಿ ಅಭಿನಯಿಸಿ ಬಹುಮಾನ ಗಳಿಸಿತ್ತು. ಆದರೆ ಆ ಕತೆಯ ಹಸ್ತ ಪ್ರತಿ ನನ್ನಲ್ಲಿ ಕಳೆದು ಹೋಗಿತ್ತು.

ಅದಕ್ಕೆ ಮತ್ತೆ ಹೊಸದಾಗಿ ಅದೇ ವಸ್ತುವಿನ ಮೇಲೆ ಈ ಕತೆಯನ್ನು ಬರೆದಿದ್ದೇನೆ. ಆ ಕತೆಯ ಚೌಕಟ್ಟಿಗೂ ಈ ಕತೆಗೂ ತುಂಬ ಅಂತರವಿದೆ.

"ಬಿಲಾಸ್ ಖಾನಿ ತೋಡಿ" ರಾಗ ಹಿಂದುಸ್ತಾನಿ ಸಂಗೀತದ ಒಂದು ವಿಶಿಷ್ಟ ರಾಗ. ಈ ರಾಗಕ್ಕೆ ತೋಡಿಯ ರಾಗಾಂಗವಿದ್ದರೂ ಥಾಟ್ ಭೈರವಿಯಾಗಿದ್ದು ಭೈರವಿ ರಾಗದ ಮಾಟವಾದ ಸಂಚಾರಗಳನ್ನು ಇದು ಒಳಗೊಂಡಿದೆ. ಇದು ಹೇಗೆ ಹುಟ್ಟಿಕೊಂಡಿತು ಎಂಬುದರ ಬಗ್ಗೆ "ಹಲವು" ದಂತ ಕತೆಗಳು ಇರುವುದಾದರೂ ಈ ಕತೆಯಲ್ಲಿ ನಡೆವ ಸನ್ನಿವೇಶ ಪೂರ್ತಿ ನನ್ನ ಕಲ್ಪನೆ.)

ಡಿಸೆಂಬರ್ 1, 2008

ಪ್ರಸೂನ್ ಜೋಶಿ ಮಿಡಿತ " ಈ ಬಾರಿ ಇಲ್ಲ"

ನಾಡಿನ ಹೊಸ ಹೊಳಪಿನ ಕವಿ ಪ್ರಸೂನ್ ಜೋಶಿ ರೀಡಿಫ್.ಕಾಂ ಗೆ "ಮುಂಬಯಿ ಯುದ್ಧದ" ಬಳಿಕ ಬರೆದು ಕಳುಹಿಸಿದ ಈ ಕವನವನ್ನು ನಾನು ಕನ್ನಡೀಕರಿಸಿದ್ದೇನೆ. ಅದರ ಭಾವವನ್ನು ಗ್ರಹಿಸಿ ವಿವರಿಸಲು ಯತ್ನಿಸಿದ್ದೇನೆ.
ಅದರ ಜೊತೆಗೆ ಅವರ ಸಂದೇಶ ಹೀಗಿದೆ "ನನ್ನ ಪ್ರಕಾರ ಇದು (ಕವನ) ಆದಷ್ಟು ಹೆಚ್ಚು ಮಂದಿ ಓದುವಂತಾಗಬೇಕು. ಯಾಕೆಂದರೆ ಇದು ನಮ್ಮೆಲ್ಲರ ಸಾಮೂಹಿಕ ನೋವು ಮತ್ತು ಕೂಗು" ("I believe it should reach as many people as possible because it is our collective pain and voice".)

ಈ ಬಾರಿ ಇಲ್ಲ

ಈ ಬಾರಿ ಆ ಪುಟ್ಟ ಹುಡುಗಿ ನನ್ನ ಬಳಿ ತನ್ನ ತರಚು ಗಾಯ ತೋರಿಸಲು ಬಂದಾಗ
ನಾನು ಅವಳನ್ನು ಫೂ ಫೂ ಎಂದು ಸಂತೈಸುವುದಿಲ್ಲ
ಕೆರಳಲು ಬಿಡುತ್ತೇನೆ ಅವಳ ಆ ಗಾಯವನ್ನು.
ಈ ಬಾರಿ ಇಲ್ಲ

ಈ ಬಾರಿ ಮುಖಗಳ ಮೇಲೆ ನೋವು ಕವಿದಿರುವುದು ಕಂಡರೆ
ಆ ನೋವ ಮರೆಸುವ ಹಾಡು ಹಾಡುವುದಿಲ್ಲ
ನೋವು ಬಸಿಯಲು ಬಿಡುತ್ತೇನೆ, ಇಳಿದು ಬಿಡಲಿ ಪೂರ್ತಿ ಒಳಗೆ ಎದೆಯಾಳಕ್ಕೆ.
ಈ ಬಾರಿ ಇಲ್ಲ,

ಈ ಬಾರಿ ನಾನು ಮುಲಾಮು ಹಚ್ಚುವುದಿಲ್ಲ
ಹತ್ತಿಯ ಚುಂಗನ್ನು ಹಿಡಿಯುವುದಿಲ್ಲ
ಎಲ್ಲಿ, ಕಣ್ಣು ಮುಚ್ಚು, ಕತ್ತು ಅತ್ತ ತಿರುಗಿಸು ನಾನು ಮದ್ದು ಹಚ್ಚುತ್ತೇನೆ ಎಂದೂ ಹೇಳುವುದಿಲ್ಲ
ತೆರೆದು ಹಾಗೆ ನೋಡಬಿಡುತ್ತೇನೆ ಜನ, ಆ ಕೆರಳಿದ ಬೆತ್ತಲೆ ಗಾಯವನ್ನು.
ಈ ಬಾರಿ ಇಲ್ಲ

ಈ ಬಾರಿ ಗೋಜಲಿರುವತ್ತ, ಚಡಪಡಿಕೆಯಿರುವತ್ತ, ನೋಡುವುದಿಲ್ಲ
ಅತ್ತ ಓಡುವುದಿಲ್ಲ ಸುತ್ತಿಕೊಂಡ ಹಗ್ಗ ಬಿಚ್ಚಲು
ಬಿಟ್ಟು ಬಿಡುತ್ತೇನೆ ಇನ್ನಷ್ಟು ಗೋಜಲಾಗಲಿ ಅಂತ.
ಈ ಬಾರಿ ಇಲ್ಲ

ಈ ಬಾರಿ ಕರ್ಮದ ನೆಪವೆತ್ತಿ ಎತ್ತುವುದಿಲ್ಲ ಶಸ್ತ್ರ
ಮಾಡುವುದಿಲ್ಲ ಮತ್ತೆ ಹೊಸ ಶುಭಾರಂಭ
ಕರ್ಮಯೋಗಿಯ ಮಾದರಿಯಾಗುವುದಿಲ್ಲ

ಬದುಕು ಮತ್ತೆ ದಾರಿಗಿಳಿಯಲು ಬಿಡುವುದಿಲ್ಲ
ಸಾಗಬಿಡುತ್ತೇನೆ ಕೆಸರಿನಲ್ಲಿ, ಅಂಕು ಡೊಂಕು ಹಾದಿಗಳಲ್ಲಿ

ಗೋಡೆಗಳಿಗಂಟಿದ ನೆತ್ತರ ಕಲೆಗಳನ್ನು ಒಣಗಲು ಬಿಡುವುದಿಲ್ಲ
ಕೆಡಲು ಬಿಡುವುದಿಲ್ಲ ಆದರ ಬಣ್ಣ
ಈ ಬಾರಿ ಆಗ ಬಿಡುವುದಿಲ್ಲ ಅಷ್ಟು ಅಸಹಾಯ
ಎಲೆಯಗಿದು ಉಗುಳಿದ ಕಲೆಗೂ ನೆತ್ತರಿಗೂ ಭಿನ್ನತೆಯೇ ತೋರದಷ್ಟು.
ಈ ಬಾರಿ ಇಲ್ಲ

ಈ ಬಾರಿ ಆ ಗಾಯಗಳತ್ತ ನೋಡಬೇಕು
ಗಾಢವಾಗಿ
ಕೊಂಚ ಹೆಚ್ಚು ಸಮಯದವರೆಗೆ

ಕೆಲವು ನಿರ್ಧಾರಗಳು
ಆ ಬಳಿಕ ಎದೆಗಾರಿಕೆಯ ಹಾರೈಕೆಗಳು
ಎಲ್ಲಿಂದಾದರೂ ಶುರುಹಚ್ಚಲೇಬೇಕು.

ಈ ಬಾರಿ ಹೀಗೆಯೇ ಮಾಡಬೇಕೆಂದುಕೊಂಡಿದ್ದೇನೆ .

- ಪ್ರಸೂನ್ ಜೋಷಿ


ಹಿಂದಿ ಮೂಲ ಇಲ್ಲಿದೆ.


इस बार नहीं

इस बार जब वोह चोटी सी बच्ची मेरे पास अपनी खरोंच ले कर आएगी
मैं उसे फू फू कर नहीं बहलाऊँगा
पनपने दूँगा उसकी तीस को
इस बार नहीं

इस बार जब मैं चेहरों पर दर्द लिखा देखूँगा
नहीं गाऊँगा गीत पीड़ा भुला देने वाले
दर्द को रिसने दूँगा, उतरने दूँगा अन्दर गहरे
इस बार नहीं

इस बार मैं न मरहम लगाऊँगा
न ही उठाऊँगा रुई के फाहे
और न ही कहूँगा की तुम आंकें बंद करलो, गर्दन उधर कर लो मैं दवा लगाता हूँ
देखने दूँगा सबको हम सबको खुले नंगे घाव
इस बार नहीं

इस बार जब उलझने देखूँगा, चटफटाहट देखूँगा
नहीं दौडूंगा उलझी डोर लपेटने
उलझने दूँगा जब तक उलझ सके
इस बार नहीं

इस बार कर्म का हवाला दे कर नहीं उठाऊँगा औजार
नहीं करूंगा फिर से एक नयी शुरुआत
नहीं बनूँगा मिसाल एक कर्मयोगी की
नहीं आने दूँगा ज़िन्दगी को आसानी से पटरी पर
उतरने दूँगा उसे कीचड मैं, टेढे मेढे रास्तों पे
नहीं सूखने दूँगा दीवारों पर लगा खून
हल्का नहीं पड़ने दूँगा उसका रंग
इस बार नहीं बनने दूँगा उसे इतना लाचार
की पान की पीक और खून का फर्क ही ख़त्म हो जाए
इस बार नहीं

इस बार घावों को देखना है
गौर से
थोड़ा लंबे वक़्त तक
कुछ फैसले
और उसके बाद हौसले
कहीं तोह शुरुआत करनी ही होगी
इस बार यही तय किया है

... प्रसून जोशी

ನವೆಂಬರ್ 26, 2008

ಒಂದು ತುಣುಕು ಗುಲ್ಜಾರ್ ಕವಿತೆ

ಲಾಕಡ್ ಜಲಕೆ ಕೊಯ್ಲಾ ಹೊಯ್ ಜಾಯೆ ರೇ
ಲಾಕಡ್ ಜಲಕೆ ಕೊಯ್ಲಾ ಹೊಯ್ ಜಾಯೆ

ಜಿಯಾ ಜಲೆತೋ ಕುಚ್ ನಾ ಹೊಯ್ ವೇ 
ನಾ ಧುಂವಾ ನಾ ರಾಕ್ 
ಜಿಯಾ ನಾ ಜಲಯ್ಯೋ ರೇ. 

ಇದು ಗುಲ್ಜಾರ್ "ವಿಶಾಲ್ ಭಾರದ್ವಾಜ್" ಗೋಸ್ಕರ "ಓಂಕಾರ" ಚಿತ್ರಕ್ಕೆ ಬರೆದುಕೊಟ್ಟದ್ದು.
ನನಗೇಕೋ ಇದನ್ನು ಕನ್ನಡದಲ್ಲಿ ಬರೆಯೋಣ ಅಂತ ಅನಿಸಿತು.

ಕಟ್ಟಿಗೆ ಉರಿಸಿದೊಡೆ ಕೆಂಡ ಕಾಣೋ
ಕಟ್ಟಿಗೆ ಉರಿಸಿದೊಡೆ ಕೆಂಡ

ಕರುಳು ಉರಿಸಿದೊಡೆ ಏನಾದೀತು.. 
ಹೊಗೆಯೂ ಇಲ್ಲ ಮಸಿಯೂ ಇಲ್ಲ
ಕರುಳ ಉರಿಸದಿರು ಕಾಣೋ

ನವೆಂಬರ್ 24, 2008

ವ್ಯವಸ್ಥೆ, ಏರ್ಪಾಡು, ವಿಲೇವಾರಿ ಮತ್ತು ಜುಗಾಡು.

ಡಾ. ಪ್ರಭಾಕರ ಜೋಷಿ ಯಕ್ಷಗಾನ ಕೋವಿದರೂ, ಸಾಹಿತಿಯೂ, ಚಿಂತಕರೂ ಮತ್ತು ಬಹುನುಡಿ ಬಲ್ಲಿದರೂ ಆಗಿ ಕನ್ನಡಕ್ಕೊಂದು ಹೆಮ್ಮೆ. ಅವರ ನಗೆ ಚಟಾಕಿಗಳು ಸಭೆಗಳಲ್ಲಿ ಭಾರೀ ನಗೆಯಲೆಗಳನ್ನು ಎಬ್ಬಿಸುತ್ತವೆ. ಅವರ ಅಂತಹ ಒಂದು ನುಡಿ ಚತುರತೆ ಇಲ್ಲಿದೆ.

ವ್ಯವಸ್ಥೆ = ನಾನು ಅದನ್ನು ವ್ಯವಸ್ಥೆ ಮಾಡುವೆನು = ಅದನ್ನು ನಾನೆ ಕೈಯಾರ ಮಾಡಿಕೊಡುತ್ತೇನೆ.
ಏರ್ಪಾಡು = ನಾನು ಅದನ್ನು ಏರ್ಪಾಡು ಮಾಡುವೆನು = ಅದನ್ನು ನಾನು ಆ ಸೋಮಶೇಖರನಿಗೆ ಹೇಳಿ ಮಾಡಿಸುತ್ತೇನೆ. 
ವಿಲೇವಾರಿ= ನಾನು ಅದನ್ನು ವಿಲೇವಾರಿ ಮಾಡುವೆನು = ಅದನ್ನು ನಾನು ಆ ಸೋಮಶೇಖರನಿಗೆ ಹೇಳಿ ಅವನ ಪೈಕಿ ಯಾರಾದರೂ ಇದ್ದರೆ ಮಾಡಿಸುವೆನು.

ಇದು ಒಂಥರಾ "ವಾಟ್ ದೈ ಸೇ" ಮತ್ತು "ವಾಟ್ ದೈ ಮೀನ್" ಇದ್ದಂಗೆ. 

ಇಂಥದೇ ಒಂದು ನುಡಿಕಟ್ಟು ದೆಹಲಿಯಲ್ಲಿದೆ.  
"ಕುಚ್ ಜುಗಾಡ್ ಕರ್ಲೆಂಗೆ" 
"ಪೈಸೋಂಕ ಜುಗಾಡ್ ಹೋಜಾಯೆ ತೋ ಅಚ್ಚಾ ಹೈ"
"ಇಸಕಾ ಕುಚ್ ಜುಗಾಡ್ ಬನಾವೋ ಯಾರ್"

ಈ ಜುಗಾಡು ಎಂಬ ಒರೆಯಲ್ಲಿ ನಮ್ಮ ವ್ಯವಸ್ಥೆ, ಏರ್ಪಾಡು ಮತ್ತು ವಿಲೇವಾರಿ ಮೂರರ ಬಂಡವಾಳವೂ ಇದ್ದು ಇನ್ನೂ ಅನೇಕ ಜುಗಾಡಿನಲ್ಲಿ ಜುಗಾಡಾಗುತ್ತದೆ. ಅದ್ಜಸ್ತ್ಮೆಂಟು, ರಿಪೇರಿ, ಪೂರೈಕೆ, ಬಳಕೆ, ವಿಲೇವಾರಿ ;-), ಸಜ್ಜು, ಬಂದೋಬಸ್ತು, ಎರವಲು.... ಇನ್ನೂ ಬಹಳಷ್ಟು.

ಬಾಲಂಗೋಚಿ :- ಅಂದ ಹಾಗೆ "ಏರ್ಪಾಡು" ಅಚ್ಚ ಕನ್ನಡದ ಒರೆಯಲ್ಲವೆ?

ನವೆಂಬರ್ 23, 2008

ಎರಡು ದಿನ ನಿಂತು ಹೋದ ಕನಸು ಕಣ್ಣಿನ ಚೀನಿ ಹುಡುಗ

ಎರಡು ದಿನಗಳ ಮಟ್ಟಿಗೆ ಒಬ್ಬ ಗೆಸ್ಟ್ ಬರುತ್ತಾರೆ. ದೆಹಲಿಯ ಗೆಸ್ಟ್ ಹೌಸ್ನಲ್ಲಿ ನಿಲ್ಲಿಸಿಕೊಳ್ಳಿ ಅಂತ ಗೌತಮರ ಮೇಲು ಬಂದಾಗ ಯಾರಪ್ಪ ಗೆಸ್ಟ್ಉ ಅಂತ ಅಂದುಕೊಳ್ಳುತ್ತಿದ್ದೆ. ಆಮೇಲೆ ಅವರು ಬರೋದು ಅಸ್ಟ್ರೆಲಿಯದಿನ್ದ ಅಂತ ತಿಳಿಯಿತು. ಬಂದರೆ ಬರಲಿ. ಅಂತ ಮತ್ತೆ ಪ್ರದರ್ಶಿನಿಯ ಕೆಲಸದಲ್ಲಿ ವ್ಯಸ್ತನಾಗಿಬಿಟ್ಟೆ.  

ಮತ್ತೆ ನೆನಪಾದದ್ದು ಯಾರೋ ಆಫೀಸಿನ ಹೊರ ಬಾಗಿಲಲ್ಲಿ ವಿಲಾಯತಿ ಉಚ್ಚಾರದಲ್ಲಿ ಏನೋ ಉಲಿದಾಗ. ಬಹುಶ ಮಹೇಶ ರಿಸೆಪ್ಶನ್ ನಲ್ಲಿ ಹೇಳಿಟ್ಟಿದ್ದಿರಬೇಕು. ಮೆರವಣಿಗೆ ಸೀದಾ ನಾನು ಕೂತಲ್ಲಿಗೆ ಬಂತು. ಆರಡಿ ಎತ್ತರದ ದೇಹ. "ಹ್ಯು ಏನ್ ತ್ಸಾಂಗ್" ನಂತೆ ಬೆನ್ನಿಗೊಂದು ತಲೆಯ ಮೇಲಕ್ಕೂ ಬರುವಂತಿದ್ದ ಬ್ಯಾಕ್ ಪ್ಯಾಕ್. ಅದೇ ಚೀನಿ ಪ್ರವಾಸಿಯ ಚಹರೆ. ಆ ಕನಸು ಕಣ್ಣುಗಳಿಗೆ ಕಪ್ಪು ಚೌಕಟ್ಟಿನ ಕನ್ನಡಕ. ತಲೆಯ ಮೇಲೆ ಕೆದರಿದರೂ ಬೆಕ್ಕಿನ ಕ್ಯೂಟ್ ನೆಸ್ಸ್ ಇರುವ ಪುಚ್ಚು ಕೂದಲು.  

"ಹಿ ಐ ಯಾಮ್ ಝಿನ್" ಎಂದ. ಜಿನ್ನು ಎಂದರೆ ಉರ್ದುವಿನಲ್ಲಿ ಪ್ರೇತಾತ್ಮಗಳು ಎಂದು ನಾನು ಅವನಿಗೆ ಹೇಳಿ ಮನಸ್ಸು ಮುರಿಯಲಿಲ್ಲ. 
ಅವನ ಹೆಸರು "ಝಿನ್ ಕ್ಯೂ ಕ್ಷಿಯಾ" ಅಂತೆ ಆಮೇಲೊಮ್ಮೆ ಪೂರ್ತಿ ಹೆಸರು ವಿವರಿಸಿ ಹೇಳಿದಾಗ ನನಗೆ ಜಿನ್ನು ಅಂತ ಮನಸ್ಸಲ್ಲೇ ಅಂದು ಕೊಂಡಿದ್ದು ಮರೆತು ಹೋಗುವಷ್ಟು ಆಪ್ತನಾಗಿದ್ದ.  
ಕ್ಯೂ ಅಂದರೆ "ಆಟಂ" ಅಂದ  
ಕ್ಷಿಯ ಅಂದರೆ "ಸೂರ್ಯನ ಹೊಂಬೆಳಕು" ಅಂತೆ  
ಝಿನ್ ಅಂದರೆ "ಟ್ರೆಶರ್" ಅಂದ ನಾನು ಜೋಡಿಸಿ ಓದಿದೆ ಬಹುಶ : ಶರದ್ಸೂರ್ಯನ ಹೊಂಬೆಳಕ ಸಂಪತ್ತು ಎನ್ನಲೇ?  

"ಐ ಯಾಮ್ ಗುರು" ಅಂದೆ.
"ಹೋ ಯಾ" ಎಂದು ಸೊಂಟ ಬಗ್ಗಿಸಿದ. ಉದ್ಧಾರವಾಗು ಶಿಷ್ಯ ಎಂದು ಆಶೀರ್ವದಿಸಿ, ಆಸನ ನೀಡಿ ಕುಶಲೋಪರಿಯನ್ನು ಮುಂದುವರಿಸಿದೆ. 
"ಗುರು ಮೀನ್ಸ್ ಮಾಸ್ತರ್?" ಎಂದು ಅವನು ಕೇಳಿದ್ದು ಮತ್ತೆ ಅದೇ ಶರದ್ಸೂರ್ಯನ ವಿವರಣೆಗಳ ಬಳಿಕ. 
"ನೋಡು ಮಾರಾಯ ನನ್ನ ಹೆಸರು ಗುರುದತ್ತ ಅಂತ ಅಂದರೆ ಗುರುಗಳ ಆಶೀರ್ವಾದದಿಂದ ಬಂದವನು ಅಂತ ಅಂದೆ"  
"ಹೋ ಯಾ!" ಅಂದು ನಕ್ಕ.  
"ಬತ ಐ ಕಾಲ್ ಯು ಮಾಸ್ತರ್" ಅಂದ 
"ನೋ ನೋ ಕಾಲ್ ಮಿ ಗುರು" ಅಂದೆ. 
ಮತ್ತೆ "ಹೋ ಯಾ!" ಅಂದ.  

ಅವನು ಹಿಮಾಲಯದ ಚಾರಣ ವನ್ನು ಕೈಗೊಳ್ಳುವ ಸಲುವಾಗಿ ಬಂದಿಹನು ಎಂದು ತಿಳಿಯಿತು. ಎರಡು ದಿನ ನಮ್ಮಲ್ಲಿ ತಂಗಿ, ದೆಹಲಿಯ ತಾಣಗಳನ್ನೆಲ್ಲ ನೋಡಿ ಅಮೃತಸರ ಅಲ್ಲಿಂದ ಮರಳಿ ಆಗ್ರಾದ ತಾಜ್ ಮಹಲು ಮುಂದಕ್ಕೆ ವಾರಣಾಸಿಯ ಗಂಗಮ್ಮ ಹಾಗೆಯೇ ಸಿಕ್ಕಿಂ ಮೂಲಕ ಕಾಂಚನ್ ಜುಂಗ ಆರೋಹಣ. ಇದು ಅವನ ಪ್ರವಾಸದ ಪರಿವಿಡಿ. 

ನಾನು ಅವನು ಮಾತನಾಡಲು ಕೂತಿದ್ದು ಬರೇ ಒಂದೆರಡು ಗಂಟೆ. ಅಷ್ಟು ಮಾತಿನಲ್ಲಿಯೇ ನನ್ನಿಂದ ಗಾಂಧಿ, ಕರ್ಮ, ಭಾಷೆ, ತಿಂಡಿ, ರಾಜಕೀಯ, ಇನ್ನೂ ಹಲವು ವಿಷಯಗಳನ್ನು ತಲೆಹರಟೆ ಅನಿಸದಂತೆ ಕೇಳಿ ತಿಳಕೊಂಡ. ಹಿಂಜರಿಯುತ್ತಾ ನನ್ನ ವಯಸ್ಸು ಕೇಳಿದ. ಹೇಳಿದೆ. ತನ್ನದು ಇಪ್ಪತ್ತೆರಡು ಎಂದ. ಅವನು ಬೆಳೆದದ್ದು ನೋಡಿದರೆ ಇಪ್ಪತ್ತೇಳು ಎಂದರೂ ಹಿಡಿಯುತ್ತಿತ್ತು.  

ಅವನ ತಂದೆ ತಾಯಿ ಇಬ್ಬರೂ ಆಸ್ಟ್ರೇಲಿಯ ನಿವಾಸಿಗಳು. ಇವನು ಅಡಿಲೇಡ್ ನಲ್ಲಿ ಇಂಜಿನೀರಿಂಗ್ ಓದುವುದು.

ಇದ್ದ ಎರಡು ದಿನಗಳಲ್ಲಿ ನಮ್ಮೆಲ್ಲರಿಗೂ ಆಪ್ತನಾದ. ದೋಸೆ ಹೊಯ್ದು ಕೊಟ್ಟಾಗ ಫೋಟೋ ತೆಗೆತೆಗೆದು ತಿಂದ. "ಇಟ್ಸ್ ದೆಲಿಶಿಯಸ್" ಎಂದ. ಕೈಯಲ್ಲಿ ಕ್ಯಾಮರ ತಪ್ಪದಂತೆ ಹೆಜ್ಜೆ ಹೆಜ್ಜೆಗೂ ಮಾತು ಮಾತಿಗೂ ಫೋಟೋ ಹೊಡೆದ. ಸ್ವತಂತ್ರವಾಗಿ ಯಾವೊಂದು ಸಹಾಯ ಕೇಳದೆ ನಕ್ಷೆ ಹಿಡಿದು ದೆಹಲಿಯೆಲ್ಲ ನೋಡಿ ಬಂದ. 

ಇರಲಿ ಎಂದು ಅವನು ಬೇಡವೆಂದರೂ ಕೇಳದೆ ಹೋಗುವ ಕಾಲಕ್ಕೆ ರೈಲು ಹತ್ತಿಸಿ ಬಂದೆ.

ನವೆಂಬರ್ 22, 2008

ಮೈಕಲ್ ಮುಸ್ಲಿಮನಾದಾಗ

ಮಹೇಶ ಎಂಬಾತ ಯೂಪಿಯ ಹಳ್ಳಿಯೊಂದರಿಂದ ಬಂದು ದೆಹಲಿಯಲ್ಲಿ ಕಷ್ಟ ಎತ್ತಿ ಇದೀಗ ನಮ್ಮಲ್ಲಿ ಕೆಲಸ ಮಾಡುತ್ತಿದ್ದಾನೆ. ಅವನ ಸ್ವಂತ ಪ್ರಯತ್ನದಿಂದ ಕಂಪ್ಯೂಟರ್, ಇಂಗ್ಲೀಷು, ವ್ಯವಹಾರ ಎಲ್ಲ ಕಲಿತಿದ್ದರೂ ಅದೇ ಗಮಾರನಂತೆ ಭಾಸವಾಗುತ್ತಾನೆ. ಅವನ ಪ್ರಪಂಚ ಜ್ಞಾನ ಮೆಚ್ಚಬೇಕಾದದ್ದು.

ನಮ್ಮ ಮಹೇಶನಿಗೆ 
"ಮೈಕಲ್ ಜ್ಯಾಕ್ಸನ್ 
ಮುಸಲ್ಮಾನ್ 
ಬನ್ ಗಯಾ" 
ಅಂತ ಹೇಳಿದೆ.

"ಥತ್! ಓ ದುನಿಯಾ ಬನೇಗಾ, 
ಕೀಡಾ ಬನೇಗಾ, 
ದೇವತಾ ಬನೇಗಾ, 
ಔರತ್ ಬನೇಗಾ, 
ಗಧೀ ಬನೇಗಾ... 
ಔರ್ ಕ್ಯಾ ಕ್ಯಾ ನಹೀ ಬನೇಗಾ?" ಎಂದ.

ನಾನು ಇದನ್ನು ಬೆಳಗ್ಗಿನಿಂದ ಯಾಕೆ ಯೋಚಿಸುತ್ತಿದ್ದೇನೆ?

ನವೆಂಬರ್ 18, 2008

ಬೇರುಗಳಂತಹ ಬಳ್ಳಿಗಳು


ದೇಶದ ಅತ್ಯುನ್ನತ ವೈದ್ಯಕೀಯ ಸಂಸ್ಥೆಯ ಆಡಳಿತ ನಿರ್ದೇಶಕನಾಗಿ ಅಧಿಕಾರ ವಹಿಸಿಕೊಂಡ ಮೊದಲದಿನ ಅವನು ಕೈಗೊಂಡ ಮೊದಲ ನಿರ್ಧಾರವೆಂದರೆ ತಾನು ಕುಳಿತುಕೊಳ್ಳಲಿರುವ ಖುರ್ಚಿಯ ಬದಲಾವಣೆ. ಅದಕ್ಕೆ ಅವನು ಹಲವು ವರ್ಷಗಳಿಂದ ಸಹಿಸಿಕೊಂಡು ಬರುತ್ತಿರುವ ಬೆನ್ನು ನೋವು ಮಾತ್ರವಲ್ಲದೇ ಅವನಿಗೆ ಖುರ್ಚಿಗಳ ಬಗ್ಗೆ ಇರುವ ಖಯಾಲಿಯೂ ಕಾರಣವಾಗಿತ್ತು.

ತನ್ನ ಅಧಿಕಾರದ ಪರಿಮಿತಿಯಲ್ಲಿ ವ್ಯಯಿಸಬಹುದಾದ ಮೊತ್ತದಲ್ಲಿ ಅತೀ ಹೆಚ್ಚು ಬೆಲೆಯ ಖುರ್ಚಿಯನ್ನು ಆಯ್ದುಕೊಂಡು ಅರ್ಡರ್ ಮಾಡಿದ. ಅಷ್ಟೇ ಅಲ್ಲ, ಅದು ಸರಬರಾಜು ಆಗುವವರೆಗೆ ಹಳೆಯ ಖುರ್ಚಿಯಲ್ಲಿ ಕುಳಿತುಕೊಂಡು ಅದರ ಅರ್ಗಾನಾಮಿಕ್ಸ್ ಅನ್ನು ಸಾಣೆ ಹಿಡಿದು ಹುಳುಕುಗಳನ್ನು ತನ್ನ ಕೆಳಗಿನವರಿಗೆ ಬಣ್ಣಿಸಿ ತಾನು ಕೈಗೊಂಡ ನಿರ್ಧಾರವನ್ನು ಸಮರ್ಥಿಸಲು ಯತ್ನಿಸಿದ. ಅವನು ಹೇಳಿದುದನ್ನೆಲ್ಲ ಜ್ಞಾನವೆಂದು ಸ್ವೀಕರಿಸಿ ಕೃತಾರ್ಥರಾಗುವ ಅವನ ಕೆಳಗಿನವರು ಅವನ ಸಮರ್ಥನೆಗಳನ್ನೂ ಬಹಳ ವಿನಯ ಪೂರ್ವಕವಾಗಿ ಹೊಗಳಿದಾಗ ಅವನಿಗೆ ತಾನು ವಿನಾ ಕಾರಣ ಹೆಚ್ಚು ಮಾತನಾಡಿದೆ ಎಂಬ ಅನಿಸಿಕೆಯುಂಟಾಯಿತು.

ಚಿನ್ನದ ಹೊಳಪಿನ ಅಕ್ಷರಗಳಲ್ಲಿ "ರಾಮದಾಸ್ ಸರ್ಕಾರ್ ಎಂ.ಡಿ." ಎಂದು ಬರೆದಿದ್ದ ತನ್ನ ನೇಮ್ ಪ್ಲೇಟನ್ನು ಬಳಿ ಸೆಳೆದು ಒಂದು ಅಕ್ಷರಕ್ಕೆ ತಗಲಿಕೊಂಡಿದ್ದ ಕೊಂಚ ಕಿಲುಬನ್ನು ಬೆರಳಿನಿಂದ ಉಜ್ಜಿ ಹೊಳಪಿಸುತ್ತಾ ಆ ಸಂಕೋಚವನ್ನು ನಿಭಾಯಿಸಿಕೊಂಡ.

ಒಂದು ಮಂಗಳವಾರ ಫರ್ನಿಚರ್ ಅಂಗಡಿಯವನು ಹೊಸ ಖುರ್ಚಿಯನ್ನು ತಂದಿರಿಸಿದಾಗ ಸಡಗರದಿಂದ ತನ್ನ ಸೇವಕರನ್ನು ಕರೆದು ಹಳೆಯ ಖುರ್ಚಿಯನ್ನು ಇತ್ತ ಎಳೆಯುವಂತೆ ಅಜ್ಞೆ ಮಾಡಿದ. ಸೇವಕರು ಅನಾಮತ್ತಾಗಿ ಹಳೆಯ ಖುರ್ಚಿಯನ್ನು ಎತ್ತಿದಾಗ ಅದರ ಗಾಲಿಗಳಿಗೆ ಸುತ್ತಿಕೊಂಡಿದ್ದ ಕಾರ್ಪೆಟ್ಟಿನ ಎಳೆಗಳು ಉದ್ದುದ್ದ ಹೊರಬಂದು ಇವನಿಗೆ ಕಿರಿಕಿರಿಯಾಯಿತು. "ಅರೆರೆ! ಆರಾಮ್ ಸೇ ಆರಾಮ್ ಸೇ..." ಎನ್ನುತ್ತ ಇವನು ಮುಂದೊತ್ತಿ ಬರುವಷ್ಟರಲ್ಲಿ ಟಂಗ್ ಟಂಗೆಂದು ಒಂದರ ಬಳಿಕ ಒಂದು ಎಳೆ ತುಂಡಾಗಿ ನೆಲಕ್ಕೆ ನೆಗೆದು ಸುಯ್ಯೆಂದು ಕಾರ್ಪೆಟ್ ನೊಳಗೆ ನುಸುಳಿ ಮಾಯವಾದಾಗ ಇವನಿಗೆ ಕೊಂಚ ಸಮಾಧಾನವಾಯಿತು. ಸದ್ಯ ಕಾರ್ಪೆಟ್ ಹಾಳಾಗಲಿಲ್ಲ ಎಂದುಕೊಂಡ.

ಸೇವಕರು ಹೊಸ ಖುರ್ಚಿಯನ್ನು ತಂದಿಟ್ಟು ಅದಕ್ಕೆ ಹೊದಿಸಲಾಗಿದ್ದ ಪ್ಲಾಸ್ಟಿಕ್ ಸಿಪ್ಪೆಯನ್ನು ಹರಿಯತೊಡಗಿದ್ದರು. ಇವನು ಅವರನ್ನು ತಡೆದು ಟೇಬಲ್ ಮೇಲಿದ್ದ ಪುಟ್ಟ ಕತ್ತರಿಯನ್ನು ತೆಗೆದುಕೊಂಡು ನೀಟಾಗಿ ಒಂದು ಚೂರು ಪ್ಲಾಸ್ಟಿಕ್ ಉಳಿಯದಂತೆ ಕತ್ತರಿಸಿ ತೆಗೆದು ತನ್ನ ಸೇವಕರ ಕೈಗಿತ್ತು ಮಂದಹಾಸ ಬೀರಿದ.

ಉಗ್ರಾಣದ ಅಧಿಕಾರಿ ಮಿಶ್ರಾಜಿ ಸಡಗರದಿಂದ ಹೊಚ್ಚ ಹೊಸ ಟರ್ಕಿ ಟವೆಲನ್ನು ತಂದು ಹೊಸ ಖುರ್ಚಿಯ ಬೆನ್ನಿಗೆ ಹೊದಿಸಿ ತನ್ನ ಸಂಪೂರ್ಣ ವಿಧೇಯತೆಯಿಂದ ಚಡಪಡಿಸಿದಾಗ ಇವನಿಗೆ ನಗು ಬಂತು. ನಗುತ್ತಾ ಬಂದು ಹೊಸ ಖುರ್ಚಿಯಲ್ಲಿ ಇವನು ವಿರಾಜಮಾನನಾದಾಗ ಎಲ್ಲರೂ ಚಪ್ಪಾಳೆ ತಟ್ಟಿದರು. ಇವನಿಗೆ ಸಂಕೋಚವಾಯಿತು. 

"ಅರೇ ಯೇ ಕ್ಯಾ ಕರ್ರಹೆ ಹೈ ಆಪ್ ಲೋಗ್! ಜಾಯಿಯೆ ಕಾಮ್ ದೇಖಿಯೇ" ಎಂದು ಗದರಿಸಿ ತನ್ನ ಮೇಜಿನ ಮೇಲಿದ್ದ ಫೈಲನ್ನು ಮುಂದೆಳೆದು ಗಂಭೀರನಾದ.

ಎಲ್ಲರೂ ಒಬ್ಬೊಬ್ಬರಾಗಿ ಹೊರ ಹೋಗಿ ಕೋಣೆ ಖಾಲಿಯಾದಾಗ ಮೆಲ್ಲನೆದ್ದು ಖುರ್ಚಿಯನ್ನೊಮ್ಮೆ ಮಮತೆಯಿಂದ ಪರಿಶೀಲಿಸಿದ. ಅದರ ಒರಗು ಬೆನ್ನನ್ನು ಒತ್ತಿ ಆಕ್ಷನ್ ನೋಡಿದ, ತಳಭಾಗದ ಲಿವರ್ ಒತ್ತಿ ಹದವಾದ ಎತ್ತರಕ್ಕೆ ಹೊಂದಿಸಿಕೊಂಡ. ಒಮ್ಮೆ ಹಿಂದೆ ಮುಂದೆಳೆದು ಗಾಲಿಗಳ ನವಿರನ್ನು ಪರಿಶೀಲಿಸುತ್ತಿದ್ದಂತೆ ತೊಡಕಿದಂತಾದಾಗ ಬಗ್ಗಿ ನೋಡಿದರೆ ಕಾರ್ಪೆಟ್ಟಿನ ಎಳೆಗಳು ಅಷ್ಟರಲ್ಲಿಯೇ ಹೊಸ ಖುರ್ಚಿಯ ಗಾಲಿಗಳಿಗೂ ಸುತ್ತಿಕೊಂಡಿದ್ದವು. ಮತ್ತೆ ಸರ್ಕಾರ್ ಗೆ ಕಿರಿಕಿರಿಯೆನಿಸತೊಡಗಿತು. 

ಪುನಹ ಬಗ್ಗಿ ಮಂಡಿಗಾಲೂರಿ ಕತ್ತರಿಯಿಂದ ಒಂದು ಗಾಲಿಗೆ ಸುತ್ತಿಕೊಂಡಿದ್ದ ಎಳೆಗಳನ್ನು ಮೆಲ್ಲನೆ ಕಾರ್ಪೆಟ್ಟು ಹಾಳಾಗದಂತೆ ಬಿಡಿಸತೊಡಗಿದಾಗ ಆ ಎಳೆಗಳ ರಚನೆ ಕಾರ್ಪೆಟ್ಟಿನ ಕೂದಲುಗಳಂತಿರದಿರುವುದನ್ನು ಕಂಡು ಸರ್ಕಾರ್ ಗೆ ಅಚ್ಚರಿಯೆನಿಸಿತು. ಧೂಳು ಸವರಿದ ಬಂದಳಿಕೆಯ ಬೇರುಗಳಂತಿತ್ತು ಅವುಗಳ ಸ್ವರೂಪ. ಮೆಲ್ಲನೆ ಒಂದೆರಡು ಗಾಲಿಗಳಿಂದ ಬಿಡಿಸುತ್ತ ಮೊದಲ ಗಾಲಿಯತ್ತ ಕಣ್ಣು ಹಾಯಿಸಿದಾಗ ಅವು ಪುನಹ ಮೊದಲಿಗಿಂತ ಬಿಗಿಯಾಗಿ ಗಾಲಿಗೆ ಸಿಂಬೆ ಸುತ್ತಿದ್ದನ್ನು ನೋಡಿ ಗಾಬರಿಯಾಯಿತು.

ಒಂದು ಎಳೆಯನ್ನು ಬೆರಳುಗಳಿಂದ ಹಿಡಿದು ಎಳೆಯಲು ಪ್ರಯತ್ನಿಸಿದಾಗ ರಬ್ಬರಿನಂತೆ ಸುಯ್ಯೆಂದು ಕಾರ್ಪೆಟ್ಟಿನೊಳಗೆ ನುಸುಳಿ ಮಾಯವಾಯಿತದು. ಅದು ನುಸುಳಿದ ಕಡೆ ಕತ್ತರಿಯ ಮೊನೆಯಿಂದ ಕಾರ್ಪೆಟ್ಟಿನ ಕೂದಲುಗಳನ್ನು ವಿಭಾಗಿಸಿ ಇಣುಕಿದ ಸರ್ಕಾರ್. ಅದರ ಸುಳಿವಿರಲಿಲ್ಲ. ತಲೆಯೆತ್ತಿ ಅಕ್ಕಪಕ್ಕ ಕಣ್ಣಾಡಿಸಿದಾಗ ಆ ಬೇರುಗಳು ಬರೆ ಇವನ ಖುರ್ಚಿ ಮಾತ್ರವಲ್ಲ ಮೇಜಿನ ಕಾಲುಗಳನ್ನೂ ಅಕ್ಕಪಕ್ಕದ ಪೀಠೋಪಕರಣಗಳನ್ನೂ ನೆಲದ ಮೇಲೆ ಇರಿಸಲಾಗಿದ್ದ ಪ್ರತೀ ವಸ್ತುಗಳನ್ನೂ ಸೂಕ್ಷ್ಮವಾಗಿ ಅಪ್ಪಿಕೊಂಡಿದ್ದು ಕಂಡು ಬಂತು.

ಕೋಣೆಯ ಮೂಲೆಯ ಕೋನದಲ್ಲಿ ಕಾರ್ಪೆಟ್ಟಿನ ಹಾಸು ತಲುಪದಿದ್ದುದರಿಂದ ಸಣ್ಣ ತುಂಡನ್ನು ಜೋಡಿಸಲಾಗಿತ್ತು. ಕತ್ತರಿಯ ಮೊನೆಯನ್ನು ಅದರ ಅಂಚಿಗೆ ನುಗ್ಗಿಸಿ ಆ ತುಂಡನ್ನು ಎತ್ತಿದವನೇ ಗಾಬರಿಯಿಂದ ಹೌಹಾರಿ ಎದ್ದು ನಿಂತ ಸರ್ಕಾರ್. ನೆಲವಿಡಿ ಬಂದಳಿಕೆ ಒತ್ತಾಗಿ ಹರಡಿತ್ತು. ಅದೇ ರಬ್ಬರಿನ ಎಳೆಗಳಂತಹ ರಚನೆಗಳು ತೇವ ಜಿನುಗುತ್ತ ಸೂಕ್ಷ್ಮವಾಗಿ ಮಿಸುಗುತ್ತಿದ್ದವು. 

ಲಗುಬಗೆಯಿಂದೆದ್ದು ತನ್ನ ಸೇವಕರನ್ನು ಕರೆದ ಸರ್ಕಾರ್. ಇವನ ಗಾಬರಿ ನೋಡಿ ಸೇವಕರೂ ಕಾಳಜಿ ತೋರ್ಪಡಿಸಿದರೂ ಅದರ ಹಿಂದಿನ ಕಾರಣ ತಿಳಿದ ಮೇಲೆ ಅವರು ಅಷ್ಟೇನೂ ವಿಚಲಿತರಾದಂತೆ ತೋರಲಿಲ್ಲ.

"ಏ? ಏತೋ ಸಬ್ ಜಗ ಹೈ, ಸಾಬ್! ಪೂರೇ ಬಿಲ್ಡಿಂಗ್ ಮೆ ಹೈ!"
"ಏನಿದು? ಎಲ್ಲಿಂದ ಬರ್ತಾ ಇದೆ?" ಕೊಂಚ ಅಸಹನೆಯಿಂದಲೇ ಪ್ರಶ್ನಿಸಿದ ಸರ್ಕಾರ್. "ಒತೋ ಪತಾ ನಹೀ ಸಾಬ್" ಎಂದ ಸೇವಕನ ಮಾತಿಗೆ ಇವನ ಪಿ.ಎಸ್. ದನಿಗೂಡಿಸಿದ.
"ಸರ್ ಗಭ್ರಾಯಿಯೇ ನಹೀ! ಏ ಚೀಸ್ ತೋ ಬಹುತ್ ಪಹಲೇ ಸೇಹಿ ಹೆ, ಔರ್ ಕುಚ್ ಪ್ರಾಬ್ಲಮ್ ಭೀ ನಹಿ ಹೈ ಸರ್" ಇವನಿಗೆ ರೇಗಿತು. "ಏನ್ರೀ ಹಾಗಂದ್ರೆ? ಏನೋ ವಿಚಿತ್ರವಾದದ್ದು ಇಲ್ಲಿ ಬೆಳೀತಾ ಇದೆ ಅಂದ್ರೆ! ನಿಮಗೆಲ್ಲ ಅಸಹ್ಯಾನೂ ಹುಟ್ಟಲ್ವಾ? ಯಾರ್ರೀ ಮೆಯಿಂಟೆನೆನ್ಸ್ ನವ್ರು? ಈಗ್ಲೇ ಬರಕ್ಕೇಳ್ರೀ ಅವರನ್ನ!" ಎಂದು ಅಜ್ಞಾಪಿಸಿದ ಸರ್ಕಾರ್.

ಪುನಹ ಖುರ್ಚಿಯ ಮೇಲೆ ಕುಳಿತುಕೊಳ್ಳಲು ಹೋದವನಿಗೆ ಅಸಹ್ಯವೂ ಅಂಜಿಕೆಯೂ ಹುಟ್ಟಿ ಹಿಂದಕ್ಕೆ ಬಂದ.
"ಸರ್, ಮೆಯಿಂಟೆನೆನ್ಸ್ ಶರ್ಮಾಜಿ ರಜೆಯಲ್ಲಿದ್ದಾರೆ" ಎಂದ ಪಿ.ಎಸ್. ಆರೋಗ್ಯ ಸಚಿವಾಲಯದ ಮೀಟಿಂಗ್ ಗೆ ತಡವಾಗುತ್ತಿರುವುದನ್ನು ನೆನಪಿಸಿದಾಗ ಅ ವಿಷಯವನ್ನು ಅವತ್ತಿನ ಮಟ್ಟಿಗೆ ಕೊನೆಗೊಳಿಸಬೇಕಾಯಿತು.

ಮರುದಿನ ಬೆಳಿಗ್ಗೆ ಬಂದಾಕ್ಷಣ ಎಲ್ಲ ಸೆಕ್ಷನ್ ಹೆಡ್ ಗಳನ್ನೂ ಮೆಯಿಂಟೆನೆನ್ಸ್ ನ ಶರ್ಮಾನನ್ನೂ ಕರೆಯಿಸಿ ಮೀಟಿಂಗ್ ಮಾಡಿದಾಗ ಹೊರಬಂದ ಅಂಶಗಳು ಇವು:
ಈ ಸಮಸ್ಯೆ ಈಗಾಗಲೇ ಬೆಳಕಿಗೆ ಬಂದಿದ್ದರೂ ಯಾರೂ ಇದನ್ನು ಒಂದು ಸಮಸ್ಯೆಯೆಂದೇ ಯಾರೂ ಪರಿಗಣಿಸಿರಲಿಲ್ಲ. ಕೆಲವು ಸೆಕ್ಷನ್ ಹೆಡ್ ಗಳಿಗೆ ಈ ವಿಷಯದ ಬಗ್ಗೆ ಅರಿವೇ ಇಲ್ಲದಿದ್ದರೂ ಈಗಲೂ ಅವರು ವಿಶೇಷವಾಗಿ ಚಿಂತಿತರಾದಂತೆ ತೋರಲಿಲ್ಲ. ಮೆಯಿಂಟೆನೆನ್ಸ್ ಶರ್ಮಾಜಿಯ ಪ್ರಕಾರ ಇದು ನಿರುಪದ್ರವಿ ಆಗಿದ್ದು ಇದಕ್ಕೆ ಇದರ ನಿರ್ಮೂಲನಕ್ಕೆ ಪರಿಣಾಮಕಾರಿ ಮದ್ದು ಇನ್ನೂ ಯರಿಗೂ ತಿಳಿದಿರಲಿಲ್ಲ.

ಈ ರೀತಿಯ ವರ್ತನೆ ಬಹಳ್ ಬೇಜವಾಬ್ದಾರಿಯದ್ದೆಂದು ತೋರಿತು ಸರ್ಕಾರ್ ಗೆ. ಎಲ್ಲರನ್ನೂ ಕರೆದು ಕೊಂಡು ಪೂರ್ತಿ ಕ್ಯಾಂಪಸ್ ನ ಸರ್ವೆ ಮಾಡಿದ. ಕ್ಯಾಂಪಸ್ ನ ಎಲ್ಲ ಬಿಲ್ಡಿಂಗ್ ಗಳಲ್ಲೂ ಈ ಬಂದಳಿಕೆಯ ಕಾಟ ಹರಡಿತ್ತು. ಸೂಕ್ಷ್ಮವಾಗಿ ಮೇಲ್ನೋಟಕ್ಕೆ ಕಂಡು ಬರದಿದ್ದರೂ ಬೆಳಕು ಕಡಿಮೆಯಿರುವ ಸ್ಥಳಗಳಲ್ಲಿ, ಕಾರ್ಪೆಟ್ಟುಗಳ ಕೆಳಗೆ, ಕೊಂಚ ಹೆಚ್ಚು ಪ್ರಬಲವಾಗಿ ಹರಡಿದ್ದವು. ಶವಾಗರದ ಹಿಂಬದಿಯಲ್ಲಿ ನೀರಿನ ಟಾಂಕಿಯ ಕೆಳಗಿನ ಕೋಣೆಯಲ್ಲಿ ಕತ್ತಲು ಮಾತ್ರವಲ್ಲ ತೇವವೂ ಇದ್ದ ಜಾಗದಲ್ಲಿ ನಡುಗೋಡೆಯ ಎತ್ತರಕ್ಕೆ ಬರೆ ಬಂದಳಿಕೆಯಂತಲ್ಲದೆ ಕಂದು ಬಣ್ಣದ ಬಳ್ಳಿಗಳ ತರ ಬೆಳೆದಿತ್ತು. 

ತನ್ನ ಕಛೇರಿಗೆ ಮರಳಿದವನೇ ಈ ಬಗ್ಗೆ ರಿಪೋರ್ಟನ್ನು ಡಿಕ್ಟೇಟ್ ಮಾಡಿ ಒಂದು ಫೈಲ್ ಹುಟ್ಟಿಸಲು ಹೇಳಿದ ಮತ್ತು ಈ ಫೈಲಿಗೆ ಎಲ್ಲ ಸೆಕ್ಷನ್ ಹೆಡ್ ಗಳಿಂದ ನೋಟಿಂಗ್ ಮಾಡಿಸಿ ಒಂದು ಬಯಾಲಾಜಿಕಲ್ ತನಿಖೆಯನ್ನು ಆದೇಶಿಸಿದ. 

ಲ್ಯಬೊರೆಟರಿಯ ಮುಖ್ಯಸ್ಥ ಫೈಲು ಸಿಕ್ಕಿದ ಕೂಡಲೇ ಧಾವಿಸಿಬಂದು, ತನ್ನ ವಿಭಾಗ ರುಟೀನ್ ನಲ್ಲಿ ಅದೆಷ್ಟು ವ್ಯಸ್ಥ ವಾಗಿದೆ ಮತ್ತು ಈ ತನಿಖೆಯನ್ನು ನಡೆಸಲು ಅಸಮರ್ಥರಾಗಿರುವುದಕ್ಕೆ ಉಪಕರಣಗಳ ಕೊರತೆಯೇ ಕಾರಣವೆಂದು ಅಲವತ್ತು ಕೊಂಡಾಗ ಇವನು ಸಿಟ್ಟಾದ. ಸೆಕ್ಷನ್ ಮುಖ್ಯಸ್ಥ ಇವನನ್ನು ಸಮಾಧಾನ ಮಾಡಿ ಇಂತಹ ತನಿಖೆ ಅದೆಷ್ಟು ಸೂಕ್ಷ್ಮದ್ದೆಂದೂ ಇದನ್ನು ನ್ಯಾಶನಲ್ ಸೈಂಟಿಫಿಕ್ ರೀಸರ್ಚ್ ಸಂಸ್ಥೆಯವರೇ ಕೈಗೊಳ್ಳಲು ಸಮರ್ಥರೆಂದೂ, ಮತ್ತು ಅದು ಉನ್ನತ ಮಟ್ಟದ ಸಂಸ್ಥೆಯಾಗಿರುವುದರಿಂದ ಅದರ ಸಲಹೆಯ ಅನುಷ್ಟಾನವೂ ಯಾವುದೆ ಕಾರ್ಯವಾಹಿ ತೊಡಕುಗಳಿಲ್ಲದೇ ನಡೆಯುವುದೆಂದೂ ಲ್ಯಾಬ್ ನ ಮುಖ್ಯಸ್ಥ, ರಾಮದಾಸ್ ಸರ್ಕಾರ್ ನನ್ನು ಒಪ್ಪಿಸಿದ.

ಸರ್ಕಾರ್ ಗೆ ಅಸಹನೀಯ ಚಡಪಡಿಕೆ ಶುರುವಾಗಿತ್ತು. ತನ್ನ ಅಧಿಕಾರದ ಪರಿಧಿಯಲ್ಲಿ ತನ್ನ ನಿಯಂತ್ರಣಕ್ಕೆ ಮೀರಿದ ವಿಷಯವೊಂದು ನಿರಂಕುಶವಾಗಿ ಬೆಳೆಯುತ್ತಿರುವಾಗ ಇವನು ತಾನೆ ಹೇಗೆ ನಿಶ್ಚಿಂತೆಯಿಂದಿರಲು ಸಾಧ್ಯ. ನ್ಯಾಶನಲ್ ಸೈಂಟಿಫಿಕ್ ರೀಸರ್ಚ್ ಸಂಸ್ಥೆಯವರು ತಮ್ಮ ತಂಡವನ್ನು ಕಳುಹಿಸಿ ಸ್ಯಾಂಪಲ್ ಸಂಗ್ರಹಿಸಿ ಒಂದು ವಾರ ಕಳೆದರೂ ಸುದ್ದಿಯಿರಲಿಲ್ಲ. ಇವನಿಗೆ ದಿನವೂ ತನ್ನ ಅಫೀಸಿಗೆ ಹೋಗುವುದೆಂದರೆ ಅಸಹ್ಯ ಹುಟ್ಟತೊಡಗಿತು. ನಿರ್ವಾಹವಿಲ್ಲದೆ ಮುಳ್ಳಿನ ಮೇಲೆ ಕುಳಿತುಕೊಂಡಂತೆ ದಿನ ದೂಡಿದ ರಾಮದಾಸ್.

ಸಂಶೋಧನಾ ಸಂಸ್ಥೆಗೆ ಫೋನ್ ಹಚ್ಚಿ ವಿಚಾರಿಸುವಂತೆ ಪಿ.ಎಸ್.ಗೆ ಅದೇಶಿಸಿ ಕುಳಿತವನಿಗೆ ಇಂಟರ್ ಕಾಮ್ ಕಿರ್ರೆಂದಾಗ ಆತಂಕವೂ ಸಮಾಧಾನವೂ ಒಂದೇಬಾರಿಗೆ ಉಂಟಾಯಿತು. ಉನ್ನತ ಅಧಿಕಾರಿಯೇ ಇವನ ಬಳಿ ಮಾತನಾಡಲು ಬಯಸಿದ್ದ. 

"ಮಿ. ಸರ್ಕಾರ್ ದಿಸ್ ಇಸ್ ಎಬೌಟ್ ದಿ ವೈನ್ಸ್ ಸ್ಪ್ರೆಡಿಂಗ್ ಅನ್ಡರ್ನೀತ್ ಯುವರ್ ಫ್ಲೋರ್ಸ್. ಐ ಯಾಮ್ ಒ. ಪಿ. ಮೆಹತಾ ಎಕ್ಸಿಕ್ಯುಟಿವ್ ಡೈರೆಕ್ಟರ್. ನಿಮ್ಮ ಬಳಿ ನಾನೆ ಮಾತನಾಡೋಣಾ ಅಂತ ಫೋನ್ ತಗೊಂಡೆ. ಯು ನೋ ಸಮ್ ಬಡಿ ಹ್ಯಾಸ್ ಟು ಟೇಕ್ ದಿ ಕಾಲ್. ಈ ಹೊತ್ತಿಗೆ ನಾನು ಅನ್ ಆಫೀಶಿಯಲಿ ನಿಮಗೆ ಹೇಳುವುದೇನೆಂದರೆ ಈ ಸ್ಪೀಶಿಸ್ ಬಗ್ಗೆ ನಮಗೆ ಹೆಚ್ಚೇನೂ ಈಗ ಡಾಟಾ ದೊರಕುತ್ತಿಲ್ಲ. ಆದರೆ ಗಹನೀಯ ವಿಚಾರವೆಂದರೆ ಈ ಸ್ಪೀಶಿಸ್ ಇದೀಗ ದೆಹಲಿಯ ಹಲವು ಕಡೆಗಳಲ್ಲಿ ಹರಡುತ್ತಿದೆ. ಇಟ್ ಸೀಮ್ಸ್ ಟು ಬಿ ಎವೆರಿ ವೇರ್. ನಿಮ್ಮ ಹಾಗೆ ಜವಾಬ್ದಾರಿ ತಗೊಂಡು ತನಿಖೆಗೆ ಅದೇಶಿಸಿದವರು ಹೆಚ್ಚು ಮಂದಿಯಿಲ್ಲ ಆದರೆ ಅಲ್ಲೆಲ್ಲ ಇದೇ ಸಮಸ್ಯೆ ಕಾಣಿಸಿಕೊಂಡಿದೆ. ಅದು ಇನ್ನೂ ಹಲವು ಪ್ರದೇಶಗಳಲ್ಲಿಯೂ ಹರಡಿರಬಹುದು. ಅನ್ ಫಾರ್ಚುನೇಟ್ಲಿ ನಾನು ಈ ಬಗ್ಗೆ ಆಫೀಶಿಯಲ್ ಆಗಿ ಯಾವುದೇ ರಿಪೋರ್ಟನ್ನು ನಿಮಗೆ ನೀಡಲಾರೆ. ನೀವು ಕೂಡ ನಮಗೆ ಒತ್ತಡ ತರದೆ ಸಹಕರಿಸಬೇಕಾಗಿ ನನ್ನ ವಿನಂತಿ. ಇದರ ಬಗ್ಗೆ ಹೆಚ್ಚೇನಾದರು ತಿಳಿದು ಬಂದಲ್ಲಿ ನಿಮ್ಮನ್ನು ನಮ್ಮ ಪ್ರಯಾರಿಟಿ ಲಿಸ್ಟನ ಪ್ರಕಾರ ಸಂಪರ್ಕಿಸುತ್ತೇವೆ. ಟಿಲ್ ದೆನ್ ಯೂ ನೀಡ್ ಟು ಕಾಪರೇಟ್. ದಿಸ್ ಇಸ್ ಮೈ ಪರ್ಸನಲ್ ರಿಕ್ವೆಸ್ಟ್." ಅಂತ ಆ ಅಧಿಕಾರಿ ಫೋನ್ ಇಟ್ಟಾಗ ಇವನ ಅತಂಕ ಇನ್ನಷ್ಟು ಹೆಚ್ಚಾಯಿತು.

ಮನೆಗೆ ಬಂದವನೇ ಸೀದಾ ಕಿಚನ್ ಗೆ ಹೋಗಿ ನೋಡಿದ. ಬಹಳ ಸೂಕ್ಷ್ಮವಾಗಿ ನೋಡಿದರೆ ಮಾತ್ರ ಕಾಣುವಷ್ಟು ಇದ್ದವು ಅಲ್ಲೂ. ಹೆಂಡತಿಯ ಅದನ್ನು ಗಹನವಾಗಿ ತೆಗೆದುಕೊಳ್ಳದಂತೆ ಮಾಮೂಲಾಗಿ ಸಾರಿಸಿ ಬಿಟ್ಟ. ಸಂಶೋಧನಾ ಸಂಸ್ಥೆಯ ಅಧಿಕಾರಿ ಅದನ್ನು ವೈನ್ಸ್ ಎಂದು ಉಲ್ಲೇಖಿಸಿದ್ದು ನೆನಪಾಯಿತು. ವೆಯಿನ್ಸೋ ವೈನ್ಸೋ ಎಂದು ಗೊಂದಲವುಂಟಾಯಿತು. ಮರುದಿನ ಮುಖತಹ ಅವರನ್ನು ಕಾಣಬೇಕು ಎಂದು ಮನಸ್ಸಿನಲ್ಲೇ ನೋಟ್ ಮಾಡಿಕೊಂಡ ಸರ್ಕಾರ್. ವೆಯಿನ್ಸ್ (ನರಗಳು) ಇರಲಾರದು ವೈನ್ಸ್ (ಬಳ್ಳಿ) ಇರಬಹುದು ಎಂದು ತನ್ನನು ತಾನೇ ಸಮಾಧಾನಿಸಿಕೊಂಡಾಗ ನಗುಬಂತು. ಜೀವ ವಿಜ್ಞಾನದ ಅತ್ಯುನ್ನತ ಸಂಸ್ಥೆಯ ಮುಖ್ಯಸ್ಥನಾಗಿದ್ದುಕೊಂಡು ತಾನು ಇಂತಹ ಬಾಲಿಶ ರೀತಿಯಲ್ಲಿ ಆಲೋಚಿಸುತ್ತಿರುವುದನ್ನು ಶಪಿಸಿಕೊಂಡ.

ಬೆಡ್ ರೂಂಗೆ ತೆರಳಿ ಬಟ್ಟೆ ಬದಲಾಯಿಸುತ್ತಿರುವಾಗೊಮ್ಮೆ ಮಂಚದಕಾಲಿನತ್ತ ಬಗ್ಗಿ ನೋಡಿದ. ಮನೆಯಲ್ಲಿ ಕಾರ್ಪೆಟ್ ಇಲ್ಲದಿರುವುದರಿಂದ ಟೈಲ್ಸ್ ನ ಸಂಧುಗಳಿಂದ ಪೀಠೋಪಕರಣಗಳನ್ನಿಟ್ಟ ಕಡೆಯಷ್ಟೇ ಸೂಕ್ಷ್ಮವಾಗಿ ಹೊರ ಬಂದಿದ್ದವು ಆ ನರಗಳಂತಹ, ಬೇರುಗಳಂತಹ, ಬಳ್ಳಿಗಳು.

ಇದೇ ಕಿರಿಕಿರಿಯಿಂದ ನಿದ್ದೆ ಬರದೆ ಹೊರಳಾಡಿದ ರಾಮದಾಸ. ಹೆಂಡತಿ ಸೌಮ್ಯವಾಗಿ ಮಲಗಿ ನಿದ್ರೆ ಮಾಡುತ್ತಿದ್ದಳು. ಸಂಶೋಧನಾ ಕೇಂದ್ರದ ಅಧಿಕಾರಿ ಅನುಮಾನಿಸಿದ ಹಾಗೆ ಇದು ನಗರವನ್ನಿಡೀ ಹರಡಿಕೊಂಡಿರಬಹುದೆ? ಅದು ಮೇಲ್ಮೈಯಲ್ಲೇ ಇಷ್ಟು ತೀವ್ರವಾಗಿ ಆವರಿಸಿರಬೇಕಾದರೆ ಇನ್ನು ಭೂಮಿಯ ಕೆಳಗೆಷ್ಟು ಒತ್ತಾಗಿರಬಹುದು. ಅದರ ಅಗಾಧ ವ್ಯಾಪ್ತಿಯನ್ನು ಊಹಿಸಿ ದಿಗಿಲಾಯಿತು. ಈ ವಿಷಯವಾಗಿ ಹೆಚ್ಚೇನು ಹೇಳಲು ಸಿದ್ಧವಿರಲಿಲ್ಲ ಆ ಅಧಿಕಾರಿ.
ಮೆಲ್ಲನೆ ಮಂಪರು ಕವಿದಾಗ ಕಾಲಿಗೆ ಕಚಗುಳಿಯೆನಿಸಿತು. ಇನ್ನೊಂದು ಕಾಲಿನಿಂದ ಸವರಿದಾಗ ಆ ಬೇರುಗಳ ಸ್ಪರ್ಶವಾದಂತೆನಿಸಿ ಧಿಗ್ಗನೆದ್ದು ಕೂತ. ಹಾಸಿಗೆಯಲ್ಲೆಲ್ಲ ಆ ಬೇರುಗಳಂತಹ ಬೇರುಗಳು ಹರಡಿದ್ದವು. ಬೆಡ್ ಲ್ಯಾಂಪಿನ ನಸುಬೆಳಕಿನಲ್ಲೂ ಅದರ ಜಿನುಗಿನ ಹೊಳಪು ಅಸಹ್ಯವಾಗಿ ಕಾಣುತ್ತಿತ್ತು. ಮೆಲ್ಲನೆ ಮಿಸುಗುತ್ತಾ ಹರಡಿಕೊಳ್ಳುತ್ತಿದ್ದವು ಆ ಬೇರುಗಳು. ಕಾಲುಗಳಿಂದ ಅವನ್ನೆಲ್ಲ ಆಚೆ ತಳ್ಳಲು ಪ್ರಯತ್ನಿಸಿದ ಸರ್ಕಾರ್. ಒಮ್ಮೆ ಕೆಳಗೆ ಬಿದ್ದ ಆ ಬೇರುಗಳು ಇನ್ನಷ್ಟು ತೀವ್ರವಾಗಿ ಮೇಲೇರಿ ಹಾಸಿಗೆಯಲ್ಲೆಲ್ಲ ಹರಡಿಕೊಳ್ಳಲು ತೊಡಗಿದವು. ಇದೀಗ ಅವನ್ನು ಬೇರುಗಳೆನ್ನುವುದಕ್ಕಿಂತ ಬಳ್ಳಿಗಳೆನ್ನುವುದೇ ಸೂಕ್ತವೆನ್ನಿಸುವಷ್ಟು ದಪ್ಪವೂ ಬಲಿಷ್ಟವೂ ಆಗಿದ್ದವು. ಮೆಲ್ಲನೆ ರಾಮದಾಸನ ಕಾಲಿಗೆ ಸುತ್ತಿಕೊಳ್ಳತೊಡಗಿತು ಒಂದು ಬಳ್ಳಿ. ರಾಮದಾಸ ಗಾಬರಿಯಿಂದ ಕೊಡವತೊಡಗಿದ. ಅದರ ಬಿಗಿತ ಇನ್ನಷ್ಟು ಹೆಚ್ಚಾಗತೊಡಗಿತು. ಇವನು ಹೆದರಿಕೆಯಿಂದ ಒದ್ದಡುತ್ತಿದ್ದಂತೆ ಒಂದೊಂದಾಗಿ ಬಳ್ಳಿಗಳು ಇವನ ಮೈಯನ್ನು ಆವರಿಸಿ ಸುತ್ತಿಕೊಳ್ಳತೊಡಗಿದವು. ಅದರ ಅಸಹ್ಯ ಜಿನುಗು ಮೈಯನ್ನು ತಣ್ಣಗೆ ತಾಗಿದಾಗ ಇವನ ಹೆದರಿಕೆ ತೀವ್ರವಾಗಿ ಬೆವರತೊಡಗಿದ ಸರ್ಕಾರ್. ಇನ್ನಷ್ಟು ಬಳ್ಳಿಗಳು ಮಂಚದ ಮೇಲಕ್ಕೆ ಬರುತ್ತಿದ್ದವು. ಒತ್ತೊತ್ತಾಗಿ ಮೈಯನ್ನು ಸುತ್ತಿಕೊಳ್ಳುತ್ತ ಬಳ್ಳಿಯ ಮೊನೆಗಳು ಇವನ ಕಿವಿ ಮೂಗು ಹಾಗೂ ಇತರ ರಂಧ್ರಗಳಲ್ಲೂ ನುಗ್ಗತೊಡಗಿದಾಗ.... ಜಗ್ಗನೆದ್ದು ಕುಳಿತ ರಾಮದಾಸ. 

ಅವನು ಕಂಡದ್ದೊಂದು ಕನಸೆಂದು ಅರಿವಾಗಲು ಕೊಂಚ ಸಮಯ ಹಿಡಿಯಿತು. ಎದ್ದು ಲೈಟು ಹಾಕಿ ಮಂಚದ ಕೆಳಗೊಮ್ಮೆ ಬಗ್ಗಿ ನೋಡಿದ. ಅಲ್ಲೇನೂ ಇರಲಿಲ್ಲ. ಆ ನಿರುಪದ್ರವಿ ಸಣ್ಣ ಬೇರಿನಂತಹ ರಚನೆಗಳು ಮಂಚದ ಕಾಲಿನ ಬುಡವನ್ನು ಪುಟ್ಟದಾಗಿ ಅಪ್ಪಿ ಹಿಡಿದಿದ್ದವು. ಹೆಂಡತಿಯತ್ತ ನೋಡಿದ ರಾಮದಾಸ.

ಸೌಮ್ಯವಾಗಿ ಮಲಗಿ ದೀರ್ಘ ನಿದ್ದೆಯೊಳಗಿದ್ದ ಅವಳು ಮಲಗಿದ್ದ ಭಂಗಿ ಆಕರ್ಷಕವೆನಿಸಿ ಪುಳಕ ಹುಟ್ಟಿತು ರಾಮದಾಸನಲ್ಲಿ. ಲೈಟು ಆರಿಸಿ ಹೆಂಡತಿಯ ಬಳಿಸಾರಿ ಹಿಂದಿನಿಂದ ಅಪ್ಪಿ ಹಿಡಿದು ಮಲಗಿದ. ಹೆಂಡತಿ ಇವನ ಅಪ್ಪುಗೆಗೆ ಮುಲುಗಿ ಇನ್ನಷ್ಟು ಒತ್ತಿಕೊಂಡಳು. ಪ್ರಚೋದಿತನಾದ ರಾಮದಾಸನಲ್ಲಿ ಆಕಾಂಕ್ಷೆ ಭೋರ್ಗರೆಯಿತು. ಉತ್ಕಟ ಪ್ರೀತಿಯ ತುತ್ತತುದಿಯಲ್ಲಿದ್ದಾಗ ಧುತ್ತೆಂದು ಈಗಷ್ಟೇ ಬಿದ್ದ ಕನಸು ನೆನಪಾಯಿತು. ತನ್ನ ರಂಧ್ರದೊಳಗೆ ಹೊಕ್ಕಲಿದ್ದ ಬಳ್ಳಿಗಳ ನೆನಪಾಗಿ ನಿರ್ವಿಣ್ಣನಾದ. ಕುಸಿದು ಅತ್ತ ಹೊರಳಿ ಮಲಗಿದವನಿಗೆ ಮತ್ತೆ ನಿದ್ದೆ ಬರಲಿಲ್ಲ.

ಮರುದಿನ ಆಫೀಸಿಗೆ ಹೋಗುವಾಗ ರಸ್ತೆಯ ಇಕ್ಕೆಡೆಗಳಲ್ಲಿ ಮರಗಿಡಗಳ ಮೇಲೆ ಮತ್ತವೇ ಬೇರುಗಳಂತಹ ಬಳ್ಳಿಗಳು ಕಂಡಂತಾಗಿ ಕಸಿವಿಸಿಯಾಗತೊಡಗಿತು. ನಿದ್ರೆಯಿಲ್ಲದೆ ಸಣ್ಣಗೆ ತಲೆಯೂ ನೋಯುತ್ತಿತ್ತು. ಒಂದು ಡಿಸ್ಪಿರಿನ್ ನುಂಗಿ ನೀರು ಕುಡಿದ. 

ಆಫೀಸಿಗೆ ಬಂದ ಕೂಡಲೇ ಮೆಯಿಂಟೆನೆನ್ಸನ ಶರ್ಮನನ್ನು ಕರೆದ. ತನ್ನ ರೂಮಿನ ಕಾರ್ಪೆಟನ್ನು ಕಿತ್ತು ಅದರ ಕೆಳಗೆ ಹರಡಿರುವ ಬೇರುಗಳನ್ನು ಕೆರೆದು ತೆಗೆಯಲು ಆದೇಶಿಸಿ ಇವನು ಮೂರುದಿನ ರಜೆ ಹಾಕಿ ಮನೆಯಲ್ಲಿ ಕೂತ. ಎರಡನೇ ದಿನ ಆಫೀಸಿನಿಂದ ಫೋನ್ ಬಂತು. ಹಿಂದಿನದಿನ ಒಮ್ಮೆ ಕೆರೆದು ತೆಗೆದ ಬೇರುಗಳೆಲ್ಲ ಇಂದು ಮತ್ತೆ ಹಿಂದಿಗಿಂತ ಹೆಚ್ಚೇ ಹರಡಿಕೊಂಡಿವೆ. ಇವನು ಕೂಡಲೆ ಆಫೀಸಿಗೆ ತೆರಳಿದ. ಇವನ ಆಫೀಸು ಆರನೇ ಮಹಡಿಯಲ್ಲಿದ್ದರೂ ಅದು ಹರಡಿಕೊಳ್ಳುವ ತೀವ್ರತೆಗೆ ಅಚ್ಚರಿಯೆನಿಸುತ್ತಿತ್ತು.

ಒಮ್ಮೆ ತನ್ನ ಕೋಣೆಯಲ್ಲಿ ಕಣ್ಣಾಡಿಸಿದ. ಪೀಠೋಪಕರಣಗಳನ್ನೆಲ್ಲ ಇನ್ನೊಂದು ಕೊಠಡಿಗೆ ವರ್ಗಾಯಿಸಲಾಗಿತ್ತು. ಕಾರ್ಪೆಟ್ ಇಲ್ಲದೇ ಇರುವುದು ಅರಿವಿಗೆ ಬರದಂತೆ ಒತ್ತಾಗಿ ಬೇರುಗಳು ಹರಡಿಕೊಂಡಿದ್ದವು ಮಾತ್ರವಲ್ಲದೇ ಗೋಡೆಯ ಮೇಲಕ್ಕೆರಲೂ ಪ್ರಾರಂಭಿಸಿದ್ದವು. ಕಿಟಕಿಗೆ ತೊಡಿಸಲಾಗಿದ್ದ ಪರದೆಗಳನ್ನು ತೆಗೆದಿಡಲು ಆದೇಶಿಸಿ ಕೆಳಗೆ ಬರುವಷ್ಟರಲ್ಲಿ ಸೀ ಟೀವಿ ನ್ಯೂಸ್ ನಿಂದ ಫೋನ್ ಬಂದ ಬಗ್ಗೆ ಪಿ.ಎಸ್. ಹೇಳಿದ. ಉನ್ನತ ಶಿಕ್ಷಣದ ಬಗ್ಗೆ ಅಂದು ಪ್ರಸಾರವಾಗಲಿರುವ ಚರ್ಚೆಯಲ್ಲಿ ಭಾಗವಹಿಸಲು ಅಹ್ವಾನಿಸಿದ್ದರು. ಮೊದಲಿನಿಂದಲೂ ಇಂತಹ ಚರ್ಚೆಗಳ ಬಗ್ಗೆ ಆಸಕ್ತಿ ವಹಿಸುತ್ತ ಕೊಂಚ ಹೆಸರು ಮಾಡಿದ್ದ ಸರ್ಕಾರ್ ಗೆ ಈ ಅವಕಾಶವನ್ನು ತಪ್ಪಿಸಿಕೊಳ್ಳಲು ಮನಸ್ಸಗಲಿಲ್ಲ. ಮೂರು ಗಂಟೆಗೆ ನಡೆಯಲಿರುವ ರೆಕಾರ್ಡಿಂಗ್ ಗೆ ತಾನು ಬರುವೆನೆಂದು ಹೇಳಲು ಸೂಚನೆ ನೀಡಿ ಕೆಳ ಬಂದ ಸರ್ಕಾರ್. ಮನೆಗೆ ಹೋಗಿ ಊಟ ಮುಗಿಸಿ ಸ್ಟುಡಿಯೋದತ್ತ ಸಾಗಿದ ಸರ್ಕಾರ್ ತಾನು ಮಾತನಾಡಬಹುದಾದ ಪಾಯಿಂಟ್ ಗಳನ್ನು ಮನಸ್ಸಿನಲ್ಲಿ ನೋಟ್ ಮಾಡಿಕೊಂಡ.

ಇವನಲ್ಲದೆ ವಿವಿಧ ರಾಜಕೀಯ ಪಕ್ಷಗಳ ವಕ್ತಾರರೂ ಇದ್ದರು. ಚರ್ಚೆ ಉತ್ತಮವಾಗಿ ಮೂಡಿ ಬಂತು. ಮುಗಿದ ಮೇಲೆ ಇವನ ಬಳಿಗೆ ಬಂದ ಟೀವಿಯ ಪ್ರಮುಖ ಪತ್ರಕರ್ತ ಇವನು ಉಲ್ಲೇಖಿಸಿದ ಪಾಯಿಂಟ್ ಗಳು ಎಷ್ಟೊಂದು ಮೌಲ್ಯಯುತವಾದುದೆಂದು ಹೊಗಳಿದಾಗ ಇವನಿಗೆ ಸಂಕೋಚದ ಜೊತೆಗೆ ಖುಶಿಯೂ ಆಯಿತು. ಖುರ್ಚಿಯಿಂದ ಎದ್ದು ಹೊರಡಬೇಕೆನ್ನುವಷ್ಟರಲ್ಲಿ ಬೇರುಗಳ ಸಮಸ್ಯೆ ನೆನಪಾಯಿತು. ಇಲ್ಲೇನಾದರೂ ಆ ಸಮಸ್ಯೆ ಇರಬಹುದೇ ಎಂದು ಖುರ್ಚಿಯ ಕಾಲಿನ ಕಡೆ ಬಗ್ಗಿ ನೋಡಿದ ಸರ್ಕಾರ್. ಈ ಖುರ್ಚಿಗಳಿಗೆ ಗಾಲಿಗಳಿರಲಿಲ್ಲ. ಅದರ ಕಾಲುಗಳನ್ನು ಸೂಕ್ಷ್ಮವಾಗಿ ಆವರಿಸಿದ್ದವು ಬೇರುಗಳು. "ಮೆ ಐ ಹೆಲ್ಪ್ ಯೂ ಮಿ. ಸರ್ಕಾರ್. ಏನಾದರೂ ಕಳೆದು ಹೋಯಿತೆ" ಎಂದು ಕಾಳಜಿ ತೋರಿಸಿ ಬಳಿ ಬಂದ ಪತ್ರಕರ್ತನಿಗೆ ಇವನು ಆ ಬೇರುಗಳನ್ನು ತೋರಿಸಿ ತನ್ನ ಆಫೀಸಿನಲ್ಲಿ ಇದರ ಕಾಟ ಎಷ್ಟು ಜೋರಾಗಿದೆ ಎಂದು ವಿವರಿಸುವಷ್ಟರಲ್ಲಿ ಪತ್ರಕರ್ತನಿಗೆ ಆಸಕ್ತಿ ಮೂಡಿತು. ಉತ್ತೇಜಿತನಾದ ಸರ್ಕಾರ್ ಸಹಜವಾಗಿ "ಯು ಶುಡ್ ಸೀ ಹೌ ದಿಸ್ ಈಸ್ ಸ್ಪ್ರೆಡಿಂಗ್ ಇನ್ ಮೈ ಛೇಂಬರ್" ಎಂದ. ಅದನ್ನೇ ಆಹ್ವಾನವೆಂದು ಸ್ವೀಕರಿಸಿದ ಪತ್ರಕರ್ತ ಕೂಡಲೆ ತನ್ನ ಸಿಬಂದಿಗೆ ಹೊರಡುವಂತೆ ತಿಳಿಸಿ ಇವನ ಜೊತೆ ಕಾರಿನಲ್ಲಿ ಹೊರಟ. ಹಿಂದಿನಿಂದ ಒಬಿ ವ್ಯಾನ್ ಕೂಡ ಹಿಂಬಾಲಿಸುತ್ತಿರುವುದು ಸರ್ಕಾರ್ ನ ಗಮನಕ್ಕೆ ಬರಲಿಲ್ಲ. 

ತನ್ನ ಆಫೀಸು ಕೋಣೆಗೆ ಕರೆದುಕೊಂಡು ಹೋದ ಸರ್ಕಾರ್ ಪತ್ರಕರ್ತನ ಬಳಿ ಮಾತನಾಡಲು ಹಿಂದೆ ತಿರುಗಿದಾಗ ಟೀವಿ ಕ್ಯಾಮರಾ ನೋಡಿ ಆತಂಕವಾಯಿತು. ಆದರೂ ತೋರ್ಪಡಿಸಿಕೊಳ್ಳದೆ ವಿವರಿಸತೊಡಗಿದ. ಪತ್ರಕರ್ತ ಇವನು ಮಾತನಾಡುವುದು ಮುಗಿದ ಕೂಡಲೇ. ಇವನ ಮುಂದೆ ಮೈಕು ಚಾಚಿ "ಈ ಸಮಸ್ಯೆಯ ಬಗ್ಗೆ ನೀವು ಯಾವ ಕ್ರಮ ಕೈಗೊಂಡಿದ್ದೀರಿ" ಎಂದು ಪ್ರಶ್ನಿಸಿದ. ಸರ್ಕಾರ್ ತಾನು ನ್ಯಾಶನಲ್ ಸೈಂಟಿಫಿಕ್ ರೀಸರ್ಚ್ ಸಂಸ್ಥೆಯವರನ್ನು ಸಂಪರ್ಕಿಸಿದ್ದಾಗಿಯೂ ಅವರು ಸ್ಯಾಂಪಲ್ ಸಂಗ್ರಹಿಸಿರುವರೆಂದೂ ತಾನು ಅವರ ರಿಪೋರ್ಟನ ನಿರೀಕ್ಷೆಯಲ್ಲಿರುವೆನೆಂದೂ ಹೇಳಿದ. ಇನ್ನೊಂದೆರಡು ಸಹಜವಾದ ಪ್ರಶ್ನೆಗಳಿಗೆ ಇವನಿಂದ ಉತ್ತರವನ್ನು ಪಡೆದ ಮೇಲೆ ಕ್ಯಾಮರಾದತ್ತ ತಿರುಗಿದ ಪತ್ರಕರ್ತ "ದೇಶದ ಅತ್ಯುನ್ನತ ಜೀವ ವಿಜ್ಞಾನ ಸಂಸ್ಥೆಯ ಆಡಳಿತ ನಿರ್ದೇಶಕನ ಕೊಠಡಿಯಲ್ಲಿ ಮಾತ್ರವಲ್ಲ ಇಡೀ ಕ್ಯಾಂಪಸ್ ನಲ್ಲಿ ಇಂತಹ ವಿಚಿತ್ರ ವಸ್ತುವೊಂದು ಬಹಳ ತೀವ್ರವಾಗಿ ಬೆಳೆಯಬೇಕಾದರೆ ಈ ಸಂಸ್ಥೆಯ ಸಾಮರ್ಥ್ಯದ ಬಗ್ಗೆ ಹಲವು ಪ್ರಶ್ನೆಗಳು ಮೂಡುತ್ತಿದೆ. ಕೇವಲ ಸೀ ಟೀವಿ ನಿಮಗಾಗಿ ಈ ವಿಚಿತ್ರ ಘಟನೆಯ ಪೂರ್ಣ ವಿವರವನ್ನು ಇಂದು ರಾತ್ರಿ ಒಂಬತ್ತು ಗಂಟೆಗೆ ಪ್ರಸಾರ ಮಾಡಲಿದೆ, ಕ್ಯಾಮರಾ ಮನ್ ಸಂಜೀವ್ ಶರ್ಮಾಕೆ ಸಾತ್, ಮೈ ರಾಜೀವ್ ತ್ರಿವೇದಿ, ಸೀ ಟೀವಿ ನ್ಯೂಸ್, ನಯಿ ದಿಲ್ಲಿ.... ಎನ್ನುತ್ತಿರಬೇಕಾದರೆ ಸರ್ಕಾರ್ ಶಾಕ್ ತಗುಲಿದಂತಾಯಿತು. 

ಆ ಪತ್ರಕರ್ತನನ್ನು ಬಳಿಗೆಳೆದು ಸಿಟ್ಟಿನಲ್ಲಿ ಗದರಿದ. " ವಾಟ್ ಆರ್ ಯೂ ಟಾಕಿಂಗ್ ನಾನ್ಸೆನ್ಸ್. ನಿಮ್ಮ ಸ್ಟುಡಿಯೋದಲ್ಲೂ ನೋಡಿಲ್ವಾ ನೀವು ಇದನ್ನು. ಇದು ಇಲ್ಲಿ ಮಾತ್ರವಲ್ಲ ಇಡೀ ಊರಿಗೆ ಹರಡಿದೆ. ಬೀ ರೆಸ್ಪಾನ್ಸಿಬಲ್" ಸರ್ಕಾರ್ ಸಿಟ್ಟಿನಿಂದ ನಡುಗುತ್ತಿದ್ದ. ಇವನು ಮಾತನಾಡಿದ್ದಷ್ಟೂ ಕ್ಯಾಮರಾದಲ್ಲಿ ರೆಕಾರ್ಡ್ ಆಗಿತ್ತು. ಆ ಸಿಟ್ಟಿನಲ್ಲಿಯೇ ಯಾರನ್ನೂ ಕಾಯದೆ ಕೆಳಗೆ ಇಳಿದು ಮನೆಗೆ ಬಂದ. 

ಸೀ ಟಿವಿಯಲ್ಲಿ ತನ್ನ ಸಂಸ್ಥೆಯ ಇಡೀ ಕ್ಯಾಂಪಸ್ಸಿನಲ್ಲಿ ಬೆಳೆದಿರುವ ಈ ವಿಚಿತ್ರ ಬೇರುಗಳನ್ನು ತೋರಿಸುತ್ತಿದ್ದರು. ಪ್ರತಿ ಬಾರಿಯೂ ಇದನ್ನೊಂದು ತನ್ನ ಸಂಸ್ಥೆಯ ಮತ್ತು ಅಡಳಿತದ ವೈಫಲ್ಯವೆಂದು ಸಾರಿ ಸಾರಿ ಹೇಳಲಾಗುತ್ತಿತ್ತು. "ಸನ್ ಸನೀ ತೇಝ್ ಖುಲಾಸಾ" ಎಂದು ಪದೆ ಪದೆ ಹೇಳುತ್ತಾ ಇವನು ಮಾತನಾಡುವುದು, ಇವನ ಕೋಣೆಯ ಬೇರುಗಳು, ಇವನು ಪತ್ರಕರ್ತನನ್ನು ಸಿಟ್ಟಿನಿಂದ ಎಳೆಯುವುದು ಮತ್ತು ಸಿಟ್ಟಿನಿಂದಲೇ ತಿರುಗಿ ಹೊರಡುವುದನ್ನು ತೋರಿಸಿ ಹಲವು ಅಪದ್ಧ ಪ್ರಶ್ನೆಗಳನ್ನು ಎತ್ತುತ್ತಿದ್ದರು. ಇದೊಂದು ಜೈವಿಕ ಅಚ್ಚರಿಯೆಂದು ತೋರಿಸುವ ಬದಲು ಮಾಮೂಲಿ ಭ್ರಷ್ಟಾಚಾರದ ಮತ್ತೊಂದು ಖುಲಾಸೆಯೆನ್ನುವಂತೆ ಬಿಂಬಿಸುತ್ತಿದ್ದರು. ಆಶ್ಚರ್ಯವೆಂದರೆ ತನ್ನ ಮಾತಿನ ತುಣುಕನ್ನೂ ಎಡಿಟ್ ಮಾಡಿ ತಾನು ಎನ್.ಎಸ್.ಆರ್.ಐ.ಗೆ ರೆಫರ್ ಮಾಡಿದ್ದನ್ನು ಬಿಟ್ಟು ಹಾಕಲಾಗಿತ್ತು. ರೇಜಿಗೆ ಹುಟ್ಟಿ ಟೀವಿ ಆಫ್ ಮಾಡಿದ. 

ಬಾಸ್ಟರ್ಡ್ಸ್ ಎಂದು ಹಲ್ಲು ಕಡಿದ ಸರ್ಕಾರ್. ಇವನ ಮೊಬೈಲ್ ರಿಂಗ್ ಆಯಿತು. ಹೆಲ್ತ್ ಸೆಕ್ರೆಟರಿ ಮಾತನಾಡುತ್ತಿದ್ದ. "ವಾಟ್ ಇಸ್ ದಿಸ್ ಮಿ. ಸರ್ಕಾರ್. ಮಂತ್ರಿಗಳು ಸಿಟ್ಟಾಗಿದ್ದಾರೆ. ಇಂತಹ ಗಹನೀಯ ವಿಷಯವೊಂದು ನಿಮ್ಮಲ್ಲಿ ನಡೆಯುತ್ತಿದ್ದರೆ ನೀವು ಇಷ್ಟು ದಿನ ಯಾಕೆ ಕೈ ಕಟ್ಟಿ ಕೂತಿದ್ದೀರಿ." ಇವನು ವಿವರಿಸಲು ಯತ್ನಿಸಿದ. ಆದರೆ ಮಂತ್ರಿಯ ಸಿಟ್ಟಿನ ಕಾವು ಸೆಕ್ರೆಟರಿಯ ಮಾತಿನ ಮೂಲಕ ಇವನಿಗೆ ಇಳಿದು ಬರುತ್ತಿತ್ತು. "ನೀವು ಈ ಕೂಡಲೇ ಮಂತ್ರಿಗಳನ್ನು ಕಾಣಬೇಕೆಂದು ಆದೇಶವಾಗಿದೆ. ನೀವು ಕೂಡಲೆ ಬನ್ನಿ" ಎಂದು ಫೋನ್ ಇಟ್ಟ ಸೆಕ್ರೆಟರಿ.

ಮೊಬೈಲ್ ಮತ್ತೆ ಮತ್ತೆ ರಿಂಗ್ ಆಗುತ್ತಿತ್ತು. ಸೀ ಟೀವಿಗೆ ಸಿಕ್ಕಿದ ಬೈಟ್ ಎಲ್ಲ ಚ್ಯಾನಲ್ ನವರಿಗೂ ಬೇಕಾಗಿತ್ತು. ಕೆಲವರು ನೇರವಾಗಿ ಇವನ ಫೋನ್ ಉತ್ತರವನ್ನೇ ರೆಕಾರ್ಡ್ ಮಾಡತೊಡಗಿದ್ದರು. ಫೋನ್ ಸೈಲೆಂಟ್ ನಲ್ಲಿಟ್ಟು. ಕಾರು ಹತ್ತಿ ಡ್ರೈವರ್ ಗೆ ಸಚಿವಾಲಯಕ್ಕೆ ಕರೆದುಕೊಂಡು ಹೋಗಲು ಆದೇಶಿಸಿದ.

ಸಚಿವರ ಕೊಠಡಿಯ ಹೊರಗೆ ಸೆಕ್ರೆಟರಿ ಮತ್ತು ಇನ್ನೊಬ್ಬ ವ್ಯಕ್ತಿ ಕಾಯುತ್ತಿದ್ದರು. ಇನ್ನೊಬ್ಬ ವ್ಯಕ್ತಿ ತಾನು ಎನ್. ಎಸ್. ಆರ್. ಐ. ನ ಒ.ಪಿ. ಮೆಹತಾ ಎಂದು ಪರಿಚಯಿಸಿಕೊಂಡ. ಅಷ್ಟರಲ್ಲಿ ಒಳಗಿಂದ ಕರೆ ಬಂತು. ಎಲ್ಲರೂ ಒಳಗೆ ಹೋದರು. ಮಂತ್ರಿ ಫೋನಿನಲ್ಲಿದ್ದ. ಬಹುಶಃ ಯಾವುದೋ ಟೀವಿ ಚ್ಯಾನಲ್ ಗೆ ಫೋನ್ ಮೂಲಕ ಸಂದರ್ಶನ ನೀಡುತ್ತಿದ್ದಂತಿತ್ತು.

"ನೋ ನೋ. ಈ ವಿಷಯವನ್ನು ನಾವು ಬಹಳ ಸೀರಿಯಸ್ ಆಗಿ ತೆಗೆದುಕೊಂಡಿದ್ದೇವೆ. ಕೂಡಲೇ ಕಠಿಣ ಕ್ರಮವನ್ನು ಸಂಸ್ಥೆಯ ವಿರುದ್ಧ ತೆಗೆದುಕೊಳ್ಳಲಿದ್ದೇವೆ. ಈ ಬಗ್ಗೆ ಈಗಾಗಲೇ ಉನ್ನತ ತನಿಖೆಗೆ ಅದೇಶಿಸಿದ್ದೇವೆ. ವರದಿ ಹೊರಬರುವವರೆಗೆ ಉನ್ನತ ಅಧಿಕಾರಿಗಳನ್ನು ಸಸ್ಪೆನ್ಶನ್ ನಲ್ಲಿಡಲಾಗುವುದು" 

ಮಾತು ಮುಗಿಸಿ ಇವನತ್ತ ರೇಜಿಗೆಯಿಂದ ನೋಡಿದ ಮಂತ್ರಿ. "ಎಂತಾ ಮನುಷ್ಯನಯ್ಯ ನೀನು..." ಇವನು "ಸರ್ ದಯವಿಟ್ಟು ನನಗೆ ಮಾತನಾಡಲು ಅವಕಾಶ ನೀಡಿ. ಇದು ಬರೆ ನಮ್ಮಲ್ಲಿ ಮಾತ್ರವಲ್ಲ ನಗರದ ಎಲ್ಲ ಕಡೆ ಹರಡುತ್ತಾ ಇದೆ. ಬೇಕಾದ್ರೆ ಮೆಹತಾ ಅವರನ್ನೇ ಕೇಳಿ" ಎಂದ. ಮಂತ್ರಿ " ಅದಕ್ಕೆ? ನೀನು ಸೀದಾ ಹೋಗಿ ಟೀವಿಯವರನ್ನು ಕರಕೊಂಬಂದು ಎಲ್ಲ ತೋರಿಸಿ ಬಿಡೋದೇ? ಸ್ವಲ್ಪಾನು ಜವಾಬ್ದಾರಿ ಇಲ್ವ ನಿನಗೆ. ಇದೀಗ ನ್ಯಾಶನಲ್ ಇಶ್ಯೂ ಆಗ್ಬಿಡುತ್ತೆ. ಎಲ್ಲ ಕಡೆ ಹರಡ್ತಾ ಇದೆ ಅಂದ್ರೆ ಪಬ್ಲಿಕ್ ಪ್ಯಾನಿಕ್ ಅಗ್ಬಿಡಲ್ವೇನ್ರಿ. ಅಷ್ಟೂ ಕಾಮನ್ ಸೆನ್ಸ್ ಇಲ್ವಾ ನಿಮಗೆ. ಇಲೆಕ್ಷನ್ ಬೇರೆ ಬರ್ತಾ ಇದೆ. ಎಲ್ಲ ಕಡೆಯಿಂದ ನಾನೀಗ ಮ್ಯುಸಿಕ್ ಫೇಸ್ ಮಾಡ್ಬೇಕು." ಎಂದ. ಎಂದ ಅಷ್ಟರಲ್ಲಿ ಮಂತ್ರಿಗಳ ಪಿ.ಎಸ್. ಕ್ಯಾಬಿನೆಟ್ ಮೀಟಿಂಗ್ ಗೆ ತಡವಾಗುತ್ತಿರುವುದನ್ನು ನೆನಪಿಸಿದ. "ನೋಡಿ ನಾವೀಗ ಇದನ್ನು ಪ್ಲೇ ಡೌನ್ ಮಾಡಬೇಕು. ನಿಮ್ಮನ್ನು ಕೂಡಲೇ ಸಸ್ಪೆಂಡ್ ಮಾಡ್ತಾ ಇದೀನಿ. ಇದೆಲ್ಲ ಸ್ವಲ್ಪ್ ಥಂಡಾ ಆದ ಮೇಲೆ ರಿಇನ್ಸ್ಟೇಟ್ ಮಾಡೋಣ" ಎನ್ನುತ್ತ ಹೊರನಡೆದ ಮಂತ್ರಿ. ಸೆಕ್ರೆಟರಿಯೂ ಹಿಂಬಾಲಿಸಿದ.

ಮೆಹತಾ ಇವನತ್ತ ಕನಿಕರದಿಂದ ನೋಡುತ್ತಾ "ನಾನು ಅವತ್ತೆ ನಿಮ್ಗೆ ಚಿಕ್ಕದಾಗಿ ಸೂಚನೆ ಕೊಟ್ಟಿದ್ದೆ. ಇದನ್ನು ಅಫೀಶಿಯಲ್ ಆಗಿ ಹೇಳಕ್ಕಾಗಲ್ಲ ಅಂತ. ನೀವು ಅರ್ಥ ಮಾಡ್ಕೋಬಹುದು ಅಂದ್ಕೊಂಡಿದ್ದೆ. ಸಾರಿ.." ಎಂದು ಹೊರಹೋದ ಬಳಿಕ ಇಡೀ ಛೇಂಬರ್ ನಲ್ಲಿ ಇವನೊಬ್ಬನೆ ಉಳಿದ.

ತನ್ನದಲ್ಲದ ಅಪರಾಧಕ್ಕೆ ಎಲ್ಲರೂ ತನ್ನನ್ನು ಬಲಿಪಶು ಮಾಡುತ್ತಿರುವುದು ಇವನಲ್ಲಿ ಅತೀವ ರೇಜಿಗೆಯನ್ನೂ, ಕ್ರೋಧವನ್ನೂ ಉಂಟುಮಾಡುತ್ತಿತ್ತು. ಸುಮ್ಮನೆ ನೆಲ ನೋಡಿ ಕುಳಿತವನಿಗೆ ಮಂತ್ರಿಯ ಮೇಜಿನ ಕಾಲ ಬುಡದಲ್ಲಿ ಮಗುಮ್ಮಾಗಿ ಅವಚಿಕೊಂಡಿರುವ ಬೇರುಗಳು ಕಣ್ಣಿಗೆ ಬಿದ್ದವು. ಕೆಟ್ಟ ಕುತೂಹಲದಿಂದ ಎದ್ದು ಮಂತ್ರಿ ಕುಳಿತುಕೊಳ್ಳುವ ಖುರ್ಚಿಯ ಬುಡವನ್ನೊಮ್ಮೆ ಇಣುಕಿದ. ಬಲಿಷ್ಟವಾದ ಬಳ್ಳಿಗಳಂತಹ ನಸುಗಂದು ಬಣ್ಣದ ಬೇರುಗಳು ಗಾಲಿಗಳಿರುವ ಖುರ್ಚಿಯ ಬುಡವನ್ನು ಆತುಕೊಂಡಿದ್ದವು.

ನವೆಂಬರ್ 14, 2008

"ಜಮ್ನಾ ಪಾರ್" ನ ಬೆತ್ತಲೆ ಅಂಗಡಿ

ಯಮುನೆಯ ಮೇಲೆ ಇಂಗ್ಲಿಷರು ಕಟ್ಟಿದ ಎರಡು ಮಜಲಿನ ಲೋಹದ ಸೇತುವೆಯನ್ನು ದಾಟಿ ದೆಹಲಿಯ "ಜಮುನಾ ಪಾರ್" ಹೋದಾಗ ಗಾಂಧಿ ನಗರದ ಸಂದುಗೊಂದಿನ ಮಾರುಕಟ್ಟೆ. ದೆಹಲಿ ಸರಕಾರ ತಂದಿರುವ "ಲಾಡಲೀ" ಯೋಜನೆಯನ್ನು ಪ್ರದರ್ಶಿನಿಯಲ್ಲಿ ರೂಪಿಸಲು ನನಗೆ ಬೇಕಾಗಿದ್ದ ಮ್ಯನೆಕಿನ್ ಗಳ ಹುಡುಕಾಟ ನನ್ನನ್ನು ಇಲ್ಲಿಗೆ ತಂದಿತ್ತು. ಗಾಂಧಿ ನಗರದ ಉದ್ದುದ್ದುಕ್ಕಿದ್ದ ಆ ರಸ್ತೆಯ, ಅರ್ಧ ದಾರಿಗಿಂತಲೂ ಮಿಗಿಲಾದ ಮೇಲೆ ರಾಶಿ ರಾಶಿ ಮ್ಯನೆಕಿನ್ ಗಳ ಅಂಗಾಂಗಗಳನ್ನು ನೇತಾಡಿಸಿದ್ದ ಆ ಸಾಲು ಅಂಗಡಿಗಳು ನನಗೆ ಚಾಂದನಿ ಚೌಕದ ಸಾಲು ಕಸಾಯಿ ಅಂಗಡಿಗಳನ್ನು ನೆನಪಿಸಿದ್ದು ತಮಾಷೆಯಲ್ಲ. 

ದೊಡ್ದದೆನಿಸುವ ಒಂದು ಅಂಗಡಿಗೆ ಹೊಕ್ಕೆ. 

ಬೆತ್ತಲೆ ಸಾಗರವದು. ಬಟ್ಟೆ ಹಾಕಿಕೊಂಡಿದ್ದ ಸೇಲ್ಸ್ ಮ್ಯಾನ್ ಗಳನ್ನು ಬಿಟ್ಟರೆ ಬೇರೆಲ್ಲವೂ ಬೆತ್ತಲೆ. ಚೂಪು ಮೊಲೆಗಳ ಬೆತ್ತಲೆ ಹೆಣ್ಣು ಮ್ಯನೆಕಿನ್ ಗಳನ್ನೂ, ಎಂಟು ಕಟ್ಟಿನ (eight pax) ಸೌಷ್ಟವದ, ಮುಷ್ಟಿ ವೃಷಣದ ಗಂಡು ಮ್ಯನೆಕಿನ್ಗಳನ್ನು ದಿಟ್ಟಿಸಿ ನೋಡಲು ಮುಜುಗರವೆನಿಸಿದರೂ ಅವು ನಿಜಕ್ಕೂ ಸುಂದರವಾಗಿದ್ದವು. ಸಣ್ಣ ಮಗುವಿನ ಆಕೃತಿಯಿಂದ ಹಿಡಿದು ಪೂರ್ಣ ಯುವಕ ಯುವತಿಯರವರೆಗೆ ಮ್ಯನೆಕಿನ್ ಗಳು ಅಲ್ಲಿದ್ದವು. ಮುದುಕರದ್ದು ಇರಲಿಲ್ಲ ಎನ್ನುವುದು ಈ ವಾಕ್ಯವನ್ನು ಬರೆಯುವಾಗಷ್ಟೇ ನನ್ನ ಯೋಚನೆಗೆ ಹೊಳೆದಿದ್ದು. ಬಳಸುಕಟ್ಟಿಗೆ ತಕ್ಕಂತೆ ಹಲವು ನಮೂನೆಯ ಮ್ಯನೆಕಿನ್ ಗಳು. ರುಂಡವಿಲ್ಲದ, ಕೈಗಳಿಲ್ಲದ, ಸೊಂಟದವರೆಗಿನ, ರುಂಡ ಮಾತ್ರದ, ಕುಳಿತ, ನಿಂತ, ಕೊಚ್ಚೆ ನಗುವಿನ, ನಗದ, .... 

ಒಮ್ಮೆ ಕಣ್ಣು ಹಾಯಿಸಿದೆ. ಮಾನವ ಸಮುದಾಯದ ಅತಿ ಸುಂದರ ಕಾಯಗಳ ಸಮಾವೇಶವದು. ಆ ಸುಂದರ ಹೆಣ್ಣು ಕಾಯಗಳನ್ನು ದಿಟ್ಟಿಸುವಾಗ ಬಳಿ ನಿಂತ ಗಂಡು ದೇಹ ನನ್ನ ದೇಹದ ಬಗ್ಗೆ ಕೊರಗೆನಿಸುವಷ್ಟು ಸುಂದರವಾಗಿದ್ದುದು ಅಸೂಯೆ ಹುಟ್ಟಿಸುತ್ತಿತ್ತು. ಆದರೂ ಅವೆಲ್ಲವೂ ಮಾರಿಕೊಳ್ಳಲು ನಿಂತ ದೇಹಗಳು, ಆ ಸುಂದರ ಹೆಣ್ಣು ಕಾಯವನ್ನು ನಾನು ಕೊಂಡುಕೊಂಡರೂ ಆ ಗಂಡು ದೇಹ ಹಾಗೇ ಮುಂದಿನ ಗೋಡೆಯನ್ನು ದಿಟ್ಟಿಸುವುದನ್ನು ಬಿಟ್ಟು ಬೇರೇನೂ ಮಾಡುವುದಿಲ್ಲ ಎಂದುಕೊಳ್ಳುತ್ತ ನನ್ನ ಕೀಳರಿಮೆಯ ಬಗ್ಗೆ ನನಗೆ ಮುಜುಗರವಾಯಿತು ಮತ್ತು ಈ ಮುಜುಗರ ಸಹಿತ ನನ್ನ ಇಡೀ ಯೋಚನಾ ಲಹರಿಯ ಬಗ್ಗೆ ನಗು ಬಂತು. 

ಬಗೆ ಬಗೆಯ ಮುಖ ಚಿಹ್ನೆಗಳು. ಹಾಗೇ ಒಂದೊಂದನ್ನೇ ನೋಡುತ್ತಾ ನನ್ನ ಹುಡುಕಾಟವನ್ನು ಮುಂದುವರಿಸಿದೆ. ಅರೆ ಈ ಎಲ್ಲ ಮುಖಗಳನ್ನು ನಾನು ನೋಡಿದ್ದೆನಲ್ಲ!. ಅಲ್ಲಿರುವ ಎಲ್ಲ ಮುಖಗಳನ್ನೂ ನಾನು ಪೆನ್ತಲೂನ್ ನಲ್ಲಿಯೋ, ದೆಹಲಿ ಮತ್ತು ಗುಡ್ ಗಾಂವ್ ದ, ಅತ್ಯಾಧುನಿಕ ಮಾಲ್ ಗಳಲ್ಲೋ ಹೆಚ್ಚೇಕೆ ಬಂಟ್ವಾಳದ ಸೋಮಯಾಜಿಯವರ ಬಟ್ಟೆಯನ್ಗಡಿಯಲ್ಲೋ ನೋಡಿದ್ದೇನೆ ಅನ್ನುವುದು ಖಚಿತ. ಅದೂ ಮತ್ತೆ ಮತ್ತೆ ನೋಡಿದ ಮುಖಗಳವು. ಅರೆ ನೀವೇನು ಇಲ್ಲಿ ಎನ್ನುವಷ್ಟು ಪರಿಚಿತ. 

ಹೆಣ್ಣು ಮಗುವಿನ ಸಣ್ಣ ಕಾಯದಿಂದ ಹಿಡಿದು ವಿವಿಧ ವಯೋಮಾನದ ಆರು ಕಾಯಗಳನ್ನು ನಾನು ಆಯ್ದು ಕೊಂಡೆ. ಪೂರ್ಣ ಗಾತ್ರದ ಹೆಣ್ಣು ಕಾಯಕ್ಕೆ ಕೊಂಚ ತಗ್ಗಿದ ಮೊಲೆಗಳ ನಾಡ ಬೊಂಬೆಯನ್ನೇ ಆಯ್ಕೆ ಮಾಡಿಕೊಂಡೆ. ಪ್ರದರ್ಶಿನಿಯಲ್ಲಿ ಫ್ಯಾಶನ್ ಪೆರೇಡ್ ಅಲ್ಲವಲ್ಲ. 

ಅವೆಲ್ಲ ಮ್ಯನೆಕಿನ್ ಗಳ ಮೈ ಬಣ್ಣವನ್ನೂ, ಕೂದಲ ಹಾಗು ಕಣ್ಣುಮಣಿಗಳ ಬಣ್ಣವನ್ನೂ ನಾಡ ಬಣ್ಣಕ್ಕೆ ಹೊಂದುವಂತೆ ಮಾಡಲು ಹೇಳಿ ಕೊಂಚ ಮುಂಗಡ ಕೊಟ್ಟು ಹೊರಬಂದಾಗ ಆ ಇಕ್ಕಟ್ಟಾದ ರಸ್ತೆಯಲ್ಲಿ ಕಾರನ್ನು ತಿರುಗಿಸಲು ನನ್ನ ಚಾಲಕ ಹೆಣಗುತ್ತಿದ್ದ. ಎಲ್ಲಿ ಕಾರಿಗೆ ಗಾಯವಾಗುತ್ತೋ ಎನ್ನುವ ಆತಂಕದಿಂದಲೇ ಗಾಂಧೀ ನಗರವನ್ನು ಸವೆಸಿ ಮತ್ತೆ ಹಳೆಕಾಲದ ಲೋಹದ ಸೇತುವೆಗೆ ಬಂದಾಗ ಮೇಲಿನ ಮಜಲಿನಲ್ಲಿ ರೈಲು ಹೋಗುತ್ತಿತ್ತು.

ಅಕ್ಟೋಬರ್ 31, 2008

ಕ್ಯಥೊಲಿಕರು ಮತ್ತು ಗೌಡ ಸಾರಸ್ವತರು

ಮಂಗಳೂರಿನ ಹೆಚ್ಚಿನ ಕ್ಯಥೊಲಿಕರು ಗೌಡ ಸಾರಸ್ವತ ಕೊಂಕಣಿಗಳ ಹಾಗೆ ಗೋವಾದಿಂದ ಬಂದು ನೆಲೆ ನಿಂತವರು. ಅವರಲ್ಲಿ ಹೆಚ್ಚಿನವರು ಅದೇ ಕೊಂಕಣಿಗಳ ರಕ್ತದವರೇ. ಕ್ಯಥೊಲಿಕರು ತಮ್ಮನ್ನು ತಾವು "ಕ್ರಿಸ್ತಾಂವ್" ಎಂದು ಕರೆದು ಕೊಂಡರೆ ಗೌಡ ಸಾರಸ್ವತರನ್ನು "ಕೊಂಕ್ನೆ" ಅಥವಾ "ಕೊಂಕಣ" ಎಂದು ಕರೆಯುವರು.  

ಕೊಂಕಣಿಗಳು ಪೋರ್ತುಗೀಸರ ಉಪಟಳದ ಕಾರಣ ಓಡಿ ಬಂದು ಕರಾವಳಿ ಕರ್ನಾಟಕ ಮತ್ತು ಕೇರಳದಲ್ಲಿ ನೆಲೆ ನಿಂತು ನೆಮ್ಮದಿಯನ್ನು ಕಂಡರೆ, ಅದೇ ಪೋರ್ತುಗೀಸರಿಂದ ಮತಾಂತರಗೊಂಡು ಕ್ಯಥೊಲಿಕರಾದ ಅವರ ದಾಯಾದಿಗಳು ನಂತರದ ದಿನಗಳಲ್ಲಿ ಎರಡು ಹಂತಗಳಲ್ಲಿ ವಲಸೆ ಬರಬೇಕಾಯಿತು.  

ಮೊದಲನೆಯದು, ಮತಾಂತರಗೊಂಡವರನ್ನು ಪೋರ್ತುಗೀಸರು ಸಂಶಯದಿಂದ ನೋಡಿ ಅವರ ಆಚಾರ ವಿಚಾರ ಉಡುಗೆ ತೊಡುಗೆಗಳ ಮೇಲೆ ಪ್ರತಿಬಂಧ ಹೇರಿ ಕಿರುಕುಳ ಕೊಟ್ಟಾಗ, ಎರಡನೆಯದು ಮರಾಠರು ತಮ್ಮ ಗೋವ ದಂಡಯಾತ್ರೆಯ ಸಮಯದಲ್ಲಿ ಈ ಕ್ಯಥೊಲಿಕರ ಮೇಲೆ ವಿಕೃತ ಹಿಂಸಾಚಾರವನ್ನು ಕೈಗೊಂಡಾಗ.  

ಅವರು ಮಂಗಳೂರಿನತ್ತ ವಲಸೆ ಬಂದರೂ ಅವರ ಬವಣೆ ನಿಲ್ಲಲಿಲ್ಲ. ಕ್ಯಥೊಲಿಕರು ಪೋರ್ತುಗೀಸರ ಪರವೆಂದು ಟಿಪ್ಪು ನಡೆಸಿದ ಎಥ್ನಿಕ್ ಕ್ಲಿಯೇನ್ಸಿಂಗ್ ನಲ್ಲಿ ಸಾವಿರಾರು ಕ್ಯಥೊಲಿಕರನ್ನು ಶ್ರೀರಂಗ ಪಟ್ಟಣಕ್ಕೆ ಕಾಲು ನಡಿಗೆಯಲ್ಲಿ ಒಯ್ದ ಗಾಥೆ ಮತ್ತು ತದನಂತರದ ಹಿಂಸಾಚಾರ ಕ್ಯಥೊಲಿಕರ ಪೀಳಿಗೆ ಮರೆತಿಲ್ಲ. ಹಾಗೆ ಶ್ರೀರಂಗ ಪಟ್ಟಣಕ್ಕೆ ಒಯ್ದು ಹೆಂಗಸರನ್ನು ಟಿಪ್ಪುವಿನ ಸೈನಿಕರು ಭೋಗಿಸಿ, ಮಕ್ಕಳನ್ನು ಯುವಕರನ್ನು ಇಸ್ಲಾಂ ಧರ್ಮಕ್ಕೆ ಮತಾಂತರಿಸಿದರೂ ಟಿಪ್ಪು ಸತ್ತ ಮೇಲೆ ಮರಳಿ ಬಂದ ಇವರು ದಿಕ್ಕು ತೋಚದೆ ಕೊಡಗಿನಲ್ಲಿ ನೆಲೆ ನಿಂತರು. ಇವತ್ತಿಗೂ ವಿರಾಜ ಪೇಟೆಯ ಬಳಿ ಇರುವ ಹಲವು ಮುಸಲ್ಮಾನರಲ್ಲಿ ಆ ಗೋವಾದ ಸಾರಸ್ವತ ಕೊಂಕಣಿಗಳ ವಂಶ ವಾಹಿಗಳು ಇರಬಹುದು. (ಅಲನ್ ಮಚಾದೋ ಪ್ರಭು ಬರೆದ "ಸರಸ್ವತೀಸ್ ಚಿಲ್ಡ್ರನ್" ನಲ್ಲಿ ಈ ಗಾಥೆಯನ್ನು ಓದಬಹುದು)  ಗೋವಾದಿಂದ ವಿರಾಜ ಪೇಟೆಯವರಿಗಿನ ಬವಣೆ ಒಂದೇ ಪೀಳಿಗೆಯಲ್ಲಿ ಆಗದಿದ್ದರೂ ಇತಿಹಾಸದ ೩೦೦ ವರ್ಷಗಳು ಬಹಳ ದೀರ್ಘವಲ್ಲ. ಆದರೆ ಆ ಮುನ್ನೂರು ವರ್ಷಗಳಲ್ಲಿ ಕ್ಯಥೊಲಿಕರು ಅವರದೇ ವಿಶಿಷ್ಟ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಿದ್ದಾರೆ.  

ಇಂದಿಗೂ ಸಾರಸ್ವತ ಕೊಂಕಣಿಗಳಿಗೆ ಕ್ಯಥೊಲಿಕರ ಮೇಲೆ ಸಾಫ್ಟ್ ಕಾರ್ನರ್ ಇದೆ. ಉಳಿದ ಜಾತಿಗಳಿಗಿಂತ ಹೆಚ್ಚು ಅವರ ಬಗ್ಗೆ ಒಂದು ಸಣ್ಣಗೆ ತುಡಿಯುವ ಪ್ರೀತಿ ಇದೆ. ಬಹುಶ ಒಬ್ಬ ಕೊಂಕಣಿಯಾಗಿ ನಾನು ಕ್ಯತೋಲಿಕನಿಂದ ಇದೇ ಪ್ರೀತಿಯನ್ನು ಅಪೇಕ್ಷೆ ಪಡುವುದು ಎಷ್ಟು ಸಾಧು ಎನ್ನುವುದು ನನಗೆ ತಿಳಿಯುತ್ತಿಲ್ಲ.  

ಪೋರ್ತುಗೀಸರು ಧರ್ಮ ನಿಷ್ಠರಾದ ಸಾರಸ್ವತರನ್ನು ಮತಾಂತರಿಸಲು ಬಹಳ ಕಷ್ಟ ಪಟ್ಟಿದ್ದರು. ಕೊನೆಗೆ ಅವರು ಜಯಗಳಿಸಿದ್ದು ಭೇಧೋಪಾಯದಲ್ಲಿ. ಸಾರಸ್ವತರ ಇದೇ ಧರ್ಮ ನಿಷ್ಟತೆ ಅವರಿಗೆ ಮುಳುವಾಯಿತು. ಮತಾಂತರಿಗಳು ಒಬ್ಬ ಸಾರಸ್ವತನ ಬಾಯಿಗೆ ಬಲವಂತದಿಂದ ಗೋಮಾಂಸವನ್ನು ತುರುಕಿದಾಗ ಅವನ ಇಡೀ ಕುಟುಂಬವನ್ನೇ ಬಹಿಷ್ಕರಿಸಿದ ಸಾರಸ್ವತ ಸಮಾಜ ಅಂದು ಮಾಡಿದ್ದು "ಸ್ವಜನ ವಿಶ್ವಾಸಘಾತ" ಆ ಕುಟುಂಬ ಅನುಭವಿಸಿರಬಹುದಾದ ಒಂಟಿತನ, ನೋವು, ಅವಮಾನ, ಅಸಹಾಯಕತೆ ನನ್ನಲ್ಲಿ ತಲ್ಲಣ ಉಂಟು ಮಾಡುತ್ತದೆ. ನನ್ನ ಇಡಿ ಬರಹ ಮತ್ತೆ ಜಾಗೃತವಾಗಿರುವ ಸ್ವಜನ ಪ್ರೇಮದಂತೆ ಭಾಸವಾಗುತ್ತಿದೆ. 

ಆದರೆ ಇದೇ ಸ್ವಜನ ಪ್ರೇಮ ಧರ್ಮದ ಅಂತರವನ್ನು ಮರೆಸಿದರೂ ಸಾಕು.

ಲಲಿತಮ್ಮನ ಉಪ್ಪಿನಕಾಯಿ ಮತ್ತು ಬ್ರಾಂಡ್ ಮ್ಯಾನೆಜ್ಮೆಂಟ್

ರಂಗಪ್ಪಂದು ಗೂಡಂಗಡಿ. ಮಿಟಾಯಿ, ಕಡಲೇಕಾಯಿ, ನಶ್ಯ ಇತ್ಯಾದಿಗಳನ್ನೂ ಮಾರಿ ಉಳಿಯುವ ಕೊಂಚ ಲಾಭದಲ್ಲಿ ಖರ್ಚು ತೂಗಿಸಿಕೊಂಡು ನಾಜೂಕಾಗಿ ಬದುಕು ಸಾಗಿಸುವ ಸಜ್ಜನ. ಪುಟ್ಟದೊಂದು ಮನೆ, ಮಡದಿ ಇಷ್ಟೇ ಅವನ ಸಂಸಾರ.

ಹೀಗೆ ಬದುಕು ಸಾಗುತ್ತಿರುವಾಗ ಒಂದು ಸಂಜೆ ರಂಗಪ್ಪ ಮನೆಗೆ ಮರಳುತ್ತಿರಬೇಕಾದರೆ ದಾರಿಯಲ್ಲಿ ಒಬ್ಬಳು ಮುದುಕಿ ಎಚ್ಚರ ತಪ್ಪಿ ಬಿದ್ದಿರುವುದನ್ನು ನೋಡಿ, ಬಳಿ ಹೋಗಿ ಆರೈಕೆ ಮಾಡುತ್ತಾನೆ. ಅವಳು ಒಬ್ಬಳು ಮಕ್ಕಳಿಲ್ಲದ ವಿಧವೆ ಅಂತ ತಿಳಿದು ಬರುತ್ತದೆ. ಹಾಗೆ ದಾರಿಯಲ್ಲಿ ಬಿಟ್ಟು ಹೋಗಲು ಮನಸ್ಸು ಬಾರದೆ ಮನೆಗೆ ಕರಕೊಂಡು ಬಂದು ಊಟ ನೀಡುತ್ತಾನೆ. ಅವನ ಹೆಂಡತಿಗೂ ಮುದುಕಿ ಬಗ್ಗೆ ಕನಿಕರ ಮೂಡುತ್ತದೆ. ಹಾಗೆ ಗಂಡ ಹೆಂಡತಿ ಇಬ್ಬರೂ ಮುದುಕಿಯನ್ನು ಮನೆಯಲ್ಲೇ ಉಳಿಸಿಕೊಳ್ಳಲು ನಿರ್ಧರಿಸುತ್ತಾರೆ.
ಮುದುಕಿ ಲಲಿತಮ್ಮ ಅಚ್ಚುಕಟ್ಟಿನ ಹೆಂಗಸು. ಸುಮ್ಮನೆ ಕುಳಿತುಕೊಳ್ಳದೆ ಅದು ಇದು ಮನೆಕೆಲಸದಲ್ಲಿ ರಂಗಪ್ಪನ ಹೆಂಡತಿಗೆ ಸಹಾಯ ಮಾಡುತ್ತಾ, ಹೊಸ ಅಡುಗೆ ಕಲಿಸುತ್ತಾ ಅವರ ಮನ ಗೆಲ್ಲುತ್ತಾಳೆ.

ಒಂದು ದಿನ ರಂಗಪ್ಪನ ಪುಟ್ಟ ಆದಾಯಕ್ಕೆ ಕತ್ತರಿ ಬೀಳುತ್ತದೆ. ಅವನ ಗೂಡಂಗಡಿ ಮುನಿಸಿಪಾಲಿಟಿಯ ಕಾನೂನಿನಿಂದ ಎತ್ತಂಗಡಿಯಾಗಿ ರಂಗಪ್ಪ ಬೇಸರದಿಂದ ಮನೆಗೆ ಬರುತ್ತಾನೆ.
ಲಲಿತಮ್ಮನಿಗೂ ಇದನ್ನು ಕೇಳಿ ಬೇಸರವಾಗುತ್ತದೆ. ಆದರೂ ಅವಳು ರಂಗಪ್ಪನನ್ನು ಸಂತೈಸಿ "ತನಗೆ ಹಲವು ತರದ ಉಪ್ಪಿನಕಾಯಿ ಮಾಡಲು ತಿಳಿಯುತ್ತದೆ. ಸಾಮಾನು ತಂದರೆ ತಾನು ಉಪ್ಪಿನಕಾಯಿ ಮಾಡಿ ಕೊಡುತ್ತೇನೆ. ಅದನ್ನು ಮನೆಗಳಿಗೆ, ಆಫಿಸುಗಳಿಗೆ ಕೊಂಡು ಹೋದರೆ ಗಿರಾಕಿ ಸಿಗಬಹುದು" ಎಂದು ಉಪಾಯ ಹೇಳುತ್ತಾಳೆ.

ಲಲಿತಮ್ಮ ಮಾಡಿಕೊಟ್ಟ ಉಪ್ಪಿನಕಾಯಿ ನಾಲ್ಕು ಕಡೆ ಹೋಗುವುದರಲ್ಲಿ ಮಾರಾಟವಾಗಿ ರಂಗಪ್ಪನಲ್ಲಿ ಹುರುಪು ಮೂಡಿಸುತ್ತದೆ. ಮತ್ತಷ್ಟು ಸಾಮಾನು ಕೊಂಡುಕೊಂಡು ಮನೆಗೆ ಮರಳಿದ ರಂಗಪ್ಪನ ಹುರುಪಿನಿಂದ ಲಲಿತಮ್ಮನಿಗೂ ಖುಷಿಯಾಗುತ್ತದೆ. ತನಗೆ ಹಲವು ಬಗೆಯ ಉಪ್ಪಿನಕಾಯಿ, ಕೂಟು, ತೊಕ್ಕು, ಚಟ್ನಿ ಪುಡಿ ಇತ್ಯಾದಿಗಳು ಕರಗತವಾಗಿದ್ದು ಇದಕ್ಕೆಲ್ಲ ಒಳ್ಳೆಯ ಬೇಡಿಕೆ ಇರಬಹುದು ಎನ್ನುತ್ತಾಳೆ. ಹಾಗೆ ಆಗಲೆಂದು ರಂಗಪ್ಪ ಬೇಕಾದ ಸಾಮಾನುಗಳನ್ನು ತಂದು ಕೊಡುತ್ತಾನೆ. ರಂಗಪ್ಪನ ಹೆಂಡತಿಯೂ ಉತ್ಸಾಹದಿಂದ ಕೆಲಸದಲ್ಲಿ ಪಾಲ್ಗೊಳ್ಳುತ್ತಾಳೆ.

ಹೀಗೆ ಲಲಿತಮ್ಮನ ಉಪ್ಪಿನಕಾಯಿ ಕೆಲದಿನಗಳಲ್ಲೇ ಹೆಸರುವಾಸಿಯಾಗಿ ರಂಗಪ್ಪನ ವ್ಯಾಪಾರ ಬಿರುಸಾಗುತ್ತದೆ. ವಿವಿಧ ತರದ ಉಪ್ಪಿನಕಾಯಿಗಳನ್ನು ಬಾಟಲಿಗಳಲ್ಲಿ ಹಾಕಿ "ಲಲಿತಮ್ಮನ ಉಪ್ಪಿನಕಾಯಿ - ಎಳೆ ಲಿಂಬೆ." "ಲಲಿತಮ್ಮನ ಉಪ್ಪಿನಕಾಯಿ- ಮಾವಿನ ಮಿಡಿ" ಇತ್ಯಾದಿ ಚೀಟಿಗಳನ್ನು ಅಂಟಿಸಿ ಗುರುತಿಸಲು ಸುಲಭವಾಗುವಂತೆ ವಿಂಗಡಿಸಿದ ಉಪ್ಪಿನಕಾಯಿಗಳು ಮನೆಮಾತಾಗುತ್ತವೆ. ಗೂಡಂಗಡಿ ವ್ಯಾಪಾರಕ್ಕಿಂತ ಹೆಚ್ಚು ಹಣ ಹುಟ್ಟಿ ರಂಗಪ್ಪನ ಬದುಕು ಸುಧಾರಿಸುತ್ತದೆ.

ಹೀಗೆ ಸಾಗುತ್ತಿರುವಾಗ ಒಂದು ದಿನ ಲಲಿತಮ್ಮ ಕಾಯಿಲೆ ಬಿದ್ದು ಸತ್ತು ಹೋಗುತ್ತಾಳೆ. ರಂಗಪ್ಪ ಇನ್ನೇನು ಮಾಡಲಿ ಎಂದು ಚಿಂತೆ ಮಾಡುತ್ತಿರುವಾಗ ಹೆಂಡತಿ, ತಾನು ಲಲಿತಮ್ಮನಿಂದ ಎಲ್ಲವನ್ನು ಕಲಿತುಕೊಂಡಿದ್ದೆನೆಂದು ಹೇಳಿ ಸಂತೈಸುತ್ತಾಳೆ. ಹೀಗೆ ಲಲಿತಮ್ಮ ಸತ್ತರೂ ಯಾವುದೇ ಅಡಚಣೆಯಿಲ್ಲದೆ ರಂಗಪ್ಪನ ವ್ಯಾಪಾರ ಸಾಗುತ್ತದೆ. ಲಲಿತಮ್ಮನ ಉಪ್ಪಿನಕಾಯಿ ದಿನದಿನಕ್ಕೆ ಹೆಚ್ಚು ಹೆಚ್ಚು ಹೆಸರುವಾಸಿಯಾಗುತ್ತದೆ.

ಒಂದು ಕೆಟ್ಟ ಗಳಿಗೆಯಲ್ಲಿ ರಂಗಪ್ಪನ ಹೆಂಡತಿಯ ಮನದಲ್ಲಿ ಒಂದು ಯೋಚನೆ ಮೂಡುತ್ತದೆ. ಕೆಲಸ ಮಾಡುವುದು ತಾನು, ಕಷ್ಟ ಪಡುವುದು ತಾನು ತನ್ನ ಗಂಡ, ಹಣ ಹೂಡಿದ್ದು ತಾವು, ಇನ್ನು ಲಲಿತಮ್ಮನೂ ಈಗಿಲ್ಲ ಅಂದ ಮೇಲೆ ಲಲಿತಮ್ಮನ ಹೆಸರೇಕೆ. ಗಂಡನ ಬಳಿಯಲ್ಲೂ ಈ ಯೋಚನೆ ಹಂಚಿಕೊಳ್ಳುತ್ತಾಳೆ. ಅವನಿಗೂ ಅಹುದೆಂದು ತೋರುತ್ತದೆ. ಎಲ್ಲ ಬಾಟಲಿಗಳಿಂದ ಹಳೆ ಚೀಟಿಗಳನ್ನು ಕಿತ್ತು "ರಂಗಪ್ಪನ ಉಪ್ಪಿನಕಾಯಿ" ಎಂಬ ಹೊಸ ಚೀಟಿಗಳನ್ನು ಅಂಟಿಸುತ್ತಾರೆ.

ಆದರೆ ಜನರು ಮತ್ತೆ ಮತ್ತೆ ಲಲಿತಮ್ಮನ ಉಪ್ಪಿನಕಾಯಿಯನ್ನೇ ಕೇಳುತ್ತಾರೆಯೇ ವಿನಃ ರಂಗಪ್ಪನ ಉಪ್ಪಿನಕಾಯಿ ಬಾಟಲುಗಳು ಖರ್ಚಾಗದೆ ಉಳಿದು ಹೋಗುತ್ತದೆ. ಅದೇ ಇದು ಎಂದು ರಂಗಪ್ಪ ಎಷ್ಟು ವಿವರಿಸಿದರೂ ಜನರು ನಂಬುವುದಿಲ್ಲ. ಹಾಗೆ ನಂಬಿ ಖರೀದಿಸಿದವರೂ ಮರುದಿನ ಇದು ಬೇರೇನೆ, ಅದೇ ಬೇಕು ಅಂತಾರೆ.

ಹೀಗೆ ದಿನದಿನಕ್ಕೆ ರಂಗಪ್ಪನ ವ್ಯಾಪಾರ ಸೊರಗುತ್ತದೆ.

ಇದು ನಾನು ಚಿಕ್ಕಂದಿನಲ್ಲಿ ಚಂದಮಾಮದಲ್ಲಿ ಓದಿದ ಕತೆ. ಇದು ಇಂದು "ಬ್ರಾಂಡ್ ಮ್ಯಾನೇಜ್ಮೆಂಟ್" ವಿಷಯವಾಗಿ ಉಲ್ಲೇಖಿಸಬಹುದಾದ ಒಂದು ಪಾಠ.

ಭಾರತದಲ್ಲಿ ಕೆಲ್ವಿನೆಟರ್ ಅಂತ ತಂಪು ಪೆಟ್ಟಿಗೆ ಮಾಡುತ್ತಿದ್ದ ಕಂಪನಿಯನ್ನು ವರ್ಲ್ ಪೂಲ್ ನವರು ಖರೀದಿಸಿದರು. ಆದರೆ ಕೆಲ್ವಿನೆಟರ್ ಬ್ರಾಂಡ್ ಅನ್ನು ನೀವು ಬಳಸುವಂತಿಲ್ಲ ಅಂತ ಕೆಲ್ವಿನೆಟರ್ ಬ್ರಾಂಡಿನ ಒಡೆಯರಾದ ಸ್ವೀಡನ್ನಿನ ಎಲೆಕ್ಟ್ರೋಲಕ್ಸ್ ತಡೆದು, ಭಾರತದ ಇನ್ನೊಂದು ಕಂಪೆನಿಯನ್ನು ಕೊಂಡು, ಕೆಲ್ವಿನೆಟರ್ ಹೆಸರಿನಿಂದಲೇ ತಂಪು ಪೆಟ್ಟಿಗೆ ಮಾರಾಟಕ್ಕೆ ತಂದಿತು.

ದೇಶದಾದ್ಯಂತ ತಂಪು ಪೆಟ್ಟಿಗೆ ಮಾರಾಟದನ್ಗಡಿಗಲ್ಲಿ ಹೀಗೊಂದು ದ್ರಶ್ಯ ನಿರ್ಮಾಣವಾಯಿತು.

ಗ್ರಾಹಕಿ: " ಕೆಲ್ವಿನೆಟರ್ ಫ್ರಿಜ್ ತೋರಿಸಿ"
ವರ್ತಕ: "ನೋಡಿ ಇದು ಕೆಲ್ವಿನೆಟರ್ ಆದರೆ ಇದರ ಹೆಸರು ಈಗ ಬದಲಾಗಿ ವರ್ಲ್ ಪೂಲ್ ಆಗಿದೆ"
ಗ್ರಾಹಕಿ: "ಆದರೆ ಅಲ್ಲಿ ಕೆಲ್ವಿನೆಟರ್ ಇದೆಯಲ್ಲ"
ವರ್ತಕ: "ಮೇಡಂ ಅದು ಕೆಲ್ವಿನೆಟರ್ ಬ್ರಾಂಡ್ ಮಾತ್ರ, ಅಸಲಿ ಕೆಲ್ವಿನೆಟರ್ ಇದು"
ಗ್ರಾಹಕಿ: "ಅಂದರೆ ಅದು ನಕಲಿಯೇ?"
ವರ್ತಕ: "ಅಲ್ಲಲ್ಲ ನಕಲಿಯಲ್ಲ ಅದೂ ಅಸಲಿಯೇ. ಆದರೆ ಅದು ಬೇರೆ, ಹೆಸರು ಮಾತ್ರ ಕೆಲ್ವಿನೆಟರ್"
ಗ್ರಾಹಕಿ: "ನಾನೂ ಕೆಲ್ವಿನೆಟರ್ ನ್ನೇ ಕೇಳಿದ್ದು ನೀವು ಯಾವುದೊ ಬೇರೆ ತೋರಿಸ್ತಾ ಇದ್ದೀರಿ"
ವರ್ತಕ: "ಸರಿಯಮ್ಮ ನಿಮಗೇನು ಬೇಕೋ ಅದನ್ನು ತೆಕ್ಕೊಳ್ಳಿ."

ಚಂದಮಾಮ ಕತೆಗಳು ಹಲವು ಪೀಳಿಗೆಗಳ ಬೆಳವಣಿಗೆಯಲ್ಲಿ ಪೂರಕವಾಗಿವೆ. ಲಲಿತಮ್ಮನ ಉಪ್ಪಿನಕಾಯಿ ಕತೆಯಂತೆ ಇನ್ನೂ ಹಲವಾರು ಕತೆಗಳು ನಮ್ಮ ಮ್ಯಾನೇಜ್ಮೆಂಟ್ ಕಮ್ಮಟಗಳಲ್ಲಿ ಬಳಸಬಹುದಾದ ಸರಳ ಸೂತ್ರಗಳನ್ನು ಹೊಂದಿವೆ.

ಬ್ಯಾರಿಗಳು, ಅಂಗಡಿ ಕೊಂಕಣಿಗಳು ಮತ್ತು ನಾಪತ್ತೆಟ್ ಚಿಕುಪುಕು

ಬ್ಯಾರಿ ಎನ್ನುವ ಶಬ್ದ ಬ್ಯಾರ ಅಥವಾ ವ್ಯಾಪಾರದಿಂದ ಬಂದಿದ್ದು. ಇವತ್ತಿಗೂ ನಮ್ಮ ಜಿಲ್ಲೆಯ ಎಷ್ಟೋ ವ್ಯಾಪಾರಗಳನ್ನು ಅವರೇ ಮಾಡಬೇಕೇನೋ ಅನ್ನುವಷ್ಟರ ಮಟ್ಟಿಗೆ ನಿಯತ್ತಿನಿಂದ ಮಾಡಿಕೊಂಡು ಬಂದಿರುವ ಅವರ ಮೇಲೆ ಎಲ್ಲರಿಗೂ ಅಷ್ಟೆ ನಿಯತ್ತಿನ ನಂಬಿಕೆ. ಅದು ಅವರ ಕಸುಬುಗಾರಿಕೆಯ ಮೇಲೆ ನಮಗಿರುವ ವಿಶ್ವಾಸ. ಅವರು ಮಾರುವ ಮೀನೇ ಹೆಚ್ಚು ಫ್ರೆಶ್ ಆಗಿರುತ್ತದೆ ಎಂದು ನಾವು ನಂಬುತ್ತೇವೆ. ಅಂದ ಮಾತ್ರಕ್ಕೆ ಅವರು ಅಷ್ಟಕ್ಕೆ ಸೀಮಿತವಾಗಿಲ್ಲ.

ಅವರು ಮಾತನಾಡುವ ಬ್ಯಾರಿ ಭಾಷೆ ಕಡಲಿನ ಸುವಾಸನೆಯ ಸೊಗಡು ಉಳ್ಳದ್ದು. ಕಿವಿಗೆ ಬೀಳುವಾಗ ಮಲಯಾಳದ ಚಿಕ್ಕ ತಂಗಿಯಂತೆ ಕಂಡರೂ ಅದಕ್ಕೆ ಅದರದೇ ಆದ ವೈಯಕ್ತಿಕ ನೆಲೆಯಿದೆ. ಹೆಚ್ಚಿನ ಶಬ್ದಗಳು ಮಲಯಾಳದ ದಟ್ಟ ಛಾಯೆ ಹೊಂದಿದ್ದರೂ, ತುಳು, ಕನ್ನಡ, ಉರ್ದು ಭಾಷೆಗಳ ಅನೇಕ ಶಬ್ದಗಳನ್ನು ಅದು ಒಳಗೊಂಡಿದೆ.

ಕನ್ನಡ ಲಿಪಿಯಿಂದ ಬ್ಯಾರಿ ಬಾಸೆಯಲ್ಲಿ ಬರೆಯುವ ಹೊಸ ಪೀಳಿಗೆಯ ಕವಿ, ಕತೆಗಾರರೂ ನಮ್ಮಲ್ಲಿದ್ದಾರೆ. ಬ್ಯಾರಿ ಪಾಟ್ ಎನ್ನುವ ಹೊಸ ಕಾವ್ಯ ಪ್ರಕಾರವೊಂದನ್ನು ಹುಟ್ಟು ಹಾಕಿರುವ ಈ ಕವಿಗಳು ಉತ್ಸಾಹಿಗಳೊಂದಿಗೆ ಕೂಡಿ ಅದಕ್ಕೆ ಸಂಗೀತ ಹೊಂದಿಸಿ ಅಸಂಖ್ಯಾತ ಧ್ವನಿ ಸುರುಳಿಗಳನ್ನೂ ಹೊರ ತಂದಿದ್ದಾರೆ.

ಕೆಲವೊಂದು ಜೋಕುಗಳನ್ನು ಬ್ಯಾರಿ ಬಾಸೆಯಲ್ಲಿ ಹೇಳಿದರೆನೆ ಚೆನ್ನ. ಹಾಗೆ ನೆನಪಾದ ಒಂದು ಜೋಕು ಇಲ್ಲಿದೆ.
ಬಡ ಬ್ಯಾರಿಯೊಬ್ಬ ಮಗಳ ಮಾಡುವೆ ಮಾಡಬೇಕು. ಗಡದ್ದಾಗಬೇಕು ಎನ್ನುವುದು ಗಂಡಿನ ಕಡೆಯವರ ಮಾತ್ರವಲ್ಲ ಇವನದೂ ಹಂಬಲ. ನಾಕು ಜನ ಕಾಣೋ ಹಾಗೆ ಫೋಟೋ ಗಿಟೋ ಎಲ್ಲ ಆಗಬೇಕು. ಫೋಟೋಗ್ರಾಫರ್ ನನ್ನು ಕರೆದು ಹೇಳುತ್ತಾನೆ:
"ಇದಾ! ಫೋಟ ಆವೋನು." (ಇಗಾ!ಫೋಟೋ ಆಗಬೇಕು) "ಎತ್ತರೆ ಫೋಟ ಎಡ್ತೊಣು?" (ಎಷ್ಟು ಫೋಟೋ ತೆಗೀಬೇಕು?)
"ಜಂಡ್ ಫೋಟ, ನಾಪತ್ತೆಟ್ ಚಿಕುಪುಕು" (ಎರಡು ಫೋಟೋ ನಾಲ್ವತ್ತೆಂಟು ಚಿಕುಪುಕು-ಅಂದರೆ ಫ್ಲಾಶು)

ಬ್ಯಾರಿಗಳಿಗೂ, ಅಂಗಡಿ ಕೊಂಕಣಿಗಳಿಗೂ ಅದೇನೋ ಅವಿನಾಭಾವ ಸಂಬಂಧ. ಒಂದು ವಿಚಿತ್ರ ಸಾಮ್ಯ ಈ ಎರಡು ಪಂಗಡಗಳಿಗೂ ನಮ್ಮ ಜಿಲ್ಲೆಯಲ್ಲಿ ಎದ್ದು ಕಾಣುತ್ತದೆ. ದಕ್ಷಿಣ ಕನ್ನಡದ ಹೆಚ್ಚಿನ ಊರುಗಳಲ್ಲಿ ಕೊಂಕಣಿಗಳದ್ದು ಒಂದು ಪೇಟೆ, ಬ್ಯಾರಿಗಳದ್ದು ಒಂದು ಪೇಟೆ. ಎಕ್ಸ್ ಕ್ಲೂಸಿವ್ ಆಗಿ ಇವೆರಡು ಪೇಟೆಗಳಲ್ಲಿ ಅವರವರೆ ಇರುವುದು. ಬ್ಯಾರಿಗಳು ಬ್ಯಾರಿಗಳೆಂದು ಬೇರೆಯೇ ಇದ್ದರೆ, ಕೊಂಕಣಿಗಳು ಹೊರಗಿನಿಂದ ಬಂದು ನೆಲೆ ನಿಂತವರು. ಹಾಗೇ ನೆಲೆ ನಿಂತಲ್ಲಿಯೇ ಪೇಟೆ ಬೆಳೆಸಿದವರು.

ಈ ಅಂಗಡಿ ಕೊಂಕಣಿಗಳಿಗೆ ಕೆಲಸಕ್ಕೆ ಬ್ಯಾರಿಗಳೇ ಆಗಬೇಕು. ಇವರೂ ಅಷ್ಟೆ! ದಣಿ, ದಣಿ ಎನ್ನುತ್ತಾ ಅಬ್ರೋನಿ (ಒಂದು ಜಾತಿಯ ನದಿನೀರಿನ ಮೀನು) ಮೀನು ಹಿಡಿದು ಸೀದಾ ಅಂಗಡಿ ಕೊಂಕಣಿಗೆ ಮಾರಬೇಕು. ಅಂಗಡಿ ಕೊಂಕಣಿಗಳು ನಿರರ್ಗಳ ಬ್ಯಾರಿ ಬಾಸೆ ಮಾತನಾಡುತ್ತಾರೆ. ಇವರೂ ಅಷ್ಟೆ! ಹಕ್ಕಿನಿಂದ ಎಂಬಂತೆ ಅವರ ಬಳಿ
ಬ್ಯಾರಿ ಬಾಸೆಯೇ ಮಾತನಾಡುವುದು. ಹಾಗೆಂದು ಈ ಅಂಗಡಿ ಕೊಂಕಣಿಗಳ ಪುಟ್ಟ ಮಕ್ಕಳು ಸಿಕ್ಕಿದರೆ, ಅವರ ಬಳಿ ಅಷ್ಟೆ ನಿರರ್ಗಳ ಕೊಂಕಣಿಯಲ್ಲಿ ಬ್ಯಾರಿಗಳು ಮಾತನಾಡುತ್ತಾರೆ.

ಯಾವುದೇ ಅಪಾಯಕ್ಕೆದುರಾಗಿ ವ್ಯವಹಾರ ಮಾಡುವ ಗಟ್ಟಿ ಗುಂಡಿಗೆ ಬ್ಯಾರಿಗಳಲ್ಲಿ ಹೆಚ್ಚು. ಹಾಗಾಗಿ ಅವರಲ್ಲಿ ಒಮ್ಮೆಗೇ ಹಣವಂತರಾಗುವವರೂ ಒಮ್ಮೆಗೇ ದಿವಾಲಿಯಾಗುವವರೂ ಹೆಚ್ಚು. ಹಾಗೆಂದು ಸೋತು ಸುಣ್ಣವಾಗುವವರು ಅವರಲ್ಲ. ಕಡಲ ಚಿಪ್ಪು ಬೇಯಿಸಿ ಸುಣ್ಣ ಮಾಡುವುದೂ ಗೊತ್ತು. ರಸ್ತೆ ಬದಿ ಕೂತು ಮೀನು ಮಾರುವುದೂ ಗೊತ್ತು. ಕಡಲಿಗೆ ನುಗ್ಗಿ ಬಲೆ ಬೀಸಲೂ ಗೊತ್ತು. ಕಾಡಿಗೆ ನುಗ್ಗಿ ಮರ ಕಡಿಯಲೂ ಗೊತ್ತು. ಯಾವುದಕ್ಕೂ ಅಂಜಿಕೆ ಅಳುಕು ಇವರಲ್ಲಿಲ್ಲ. ಇವರ ಡಿಗ್ನಿಟಿ ಅಪ್ ಲೇಬರ್ ಪ್ರಜ್ಞೆ ಮೆಚ್ಚುವಂತದ್ದು.

ಬ್ಲಾಗ್ ಪ್ರಪಂಚದಲ್ಲಿ ಕೆಲವು ಬರಹಗಳನ್ನು ಬ್ಯಾರಿಗಳ ಬಗ್ಗೆ ಕಂಡೆ. ಅದರ ಕೊಂಡಿಗಳು ಇಲ್ಲಿವೆ. ಓದಿ ಆನಂದಿಸಿ.

ಸುರಗಿ ಬರೆಯುವ ಮೌನ ಕಣಿವೆಯಲ್ಲಿ "ಬಳೆಗಾರ ಚೆನ್ನಯ್ಯನಂತಹ ಬ್ಯಾರಿಗಳು"
http://mounakanive.blogspot.com/2008/09/blog-post_24.html

ರಶೀದ್ ಬರೆಯುವ ಮೈಸೂರು ಪೋಸ್ಟ್ ನಲ್ಲಿ "ರಾಮಚಂದ್ರ ಭಟ್ಟರೂ ಕುಂಞಪ್ಪ ಬ್ಯಾರಿಗಳೂ"
http://mysorepost.wordpress.com/2007/04/30/bhattaroo-bearygaloo/

ರಶೀದ್ ಬರೆಯುವ ಮೈಸೂರು ಪೋಸ್ಟ್ ನಲ್ಲಿ "ತೀರಿ ಹೋಗಿರುವ ಸೂಫಿ ಬ್ಯಾರಿಯವರ ಕುರಿತು"
http://mysorepost.wordpress.com/2007/05/26/sufi-beary/

ಫಕೀರ್ ಬರೆಯುವ "ರಮಜಾನಿನ ನೆನಪುಗಳು"
http://www.kendasampige.com/article.php?id=1450