ಜನವರಿ 23, 2009

ಕಡಲತಡಿಯ ಹಾಡುಗಳು

ನನ್ನ ಆಲಿಸುವಿಕೆಯ ಮೊದಲ ನೆನಪುಗಳು ಬಾಲ್ಟಿಕ್ ಪ್ರಾಂತ್ಯಕ್ಕೆ ಸೇರಿದವುಗಳು. ಹೆಲ್ಸಿಂಕಿಯ ಧಕ್ಕೆಯ ಮೇಲೆ ನಾವು ಸುತ್ತಾಡುತ್ತಿದ್ದಾಗ ನನ್ನ ತಂದೆ ನನ್ನ ಕೈ ಹಿಡಕೊಂಡಿದ್ದು ನನಗೆ ನೆನಪಿದೆ. ಅದು ಮಾರ್ಚ್ ತಿಂಗಳ ಕೊನೆಯ ದಿನಗಳಾದರೂ ಫಿನ್ ಲ್ಯಾಂಡ್ ನಲ್ಲಿ ಇನ್ನೂ ಕೆಟ್ಟ ಚಳಿ ಇತ್ತು ಮತ್ತು ಬಂದರಿನಲ್ಲೆಲ್ಲ ಹಿಮ ಚೆಲ್ಲಿತ್ತು.

ನನ್ನ ಕುರುಡುತನದ ನಮೂನೆ ನನಗೆ ಒಂದಿಷ್ಟು ಬಣ್ಣಗಳನ್ನು ಮತ್ತು ಚದುರಿದ ಆಕೃತಿಗಳನ್ನು ಕಾಣಿಸುತ್ತಿತ್ತು. ನೀರಿನಲ್ಲಿ ದೊಡ್ಡ ಮಂಜುಗಡ್ಡೆಗಳು ಸಾಗಿ ಬರುವಾಗ ನನ್ನ ತಂದೆ ಅವು ಖಂಡಗಳ ಮಾದರಿಯಲ್ಲಿವೆ ಅಂತ ಹೇಳಿದ್ದರು. "ಇದು ಆಸ್ಟ್ರೇಲಿಯ" "ಅದು ಹವಾಯಿ" ಅಂತ ಹೇಳಿದ್ದರು. ಆದರೆ ಅತ್ತ ನೋಡಿದರೆ ನನಗೆ ಹಿಮಕ್ಕೂ ಆಗಸಕ್ಕೂ ಯಾವುದೇ ವ್ಯತ್ಯಾಸ ಕಾಣುತ್ತಿರಲಿಲ್ಲ. ಬೂದು ಬಾಲ್ಟಿಕ್ ಬೆಳಕಿನ ಕೊನೆಯಿಲ್ಲದ ಬಯಲಷ್ಟೇ ನನಗೆ ಕಾಣುತ್ತಿತ್ತು. ನನಗದರಿಂದ ಚಿಂತೆಯೇನೂ ಇರಲಿಲ್ಲ. ಅದೇ ನಾನು ತಿಳಿದಿದ್ದ ಪ್ರಪಂಚ. ಪ್ರೀತಿಯ ನೆರಳುಗಳಿಂದ ತುಂಬಿದ ವಿಶ್ವವದು. ಯಾರಾದರೂ ನನ್ನ ಮುಂದೆ ಬಂದು ನಿಂತಲ್ಲಿ ಅವರು ನನಗೆ ಒಂದು ಮರದ ಕಪ್ಪು ಕಾಂಡದ ಹಾಗೆಯೇ ಕಾಣುತ್ತಿದ್ದರು.

ನಾವು ದಡಕ್ಕೆ ಮರಳುವಾಗ ಮಂಜಿನ ಮುಸುಕಿನೆಡೆಯಿಂದ ಹೆಂಗಸರ ಗುಂಪೊಂದು ಹೊರ ಬಂತು. ಅಸ್ಫಷ್ಟವಾಗಿ ಕಪ್ಪು ಮತ್ತು ಹಸಿರು ಬಣ್ಣವಾಗಿ ಕಾಣುತ್ತಿದ್ದರು. ಆ ಹೆಪ್ಪುಗಟ್ಟಿರುವ ಕಡಲಿನ ತಡಿಯಲ್ಲಿ ತಾವು ಹೆಣೆದ ಕಾರ್ಪೆಟ್ಟುಗಳನ್ನು ಒಣಗಿಸಲು ಬರುವ ಅದೇ ಪರಿಸರದ ಮುದುಕಿಯರು ಅವರು.

ಅದ್ಭುತ! ಅವರಾಗ ಹಾಡಲು ಶುರು ಹಚ್ಚಿದರು.
ಆ ಬಾಲ್ಟಿಕ್ ಗಾಳಿಗೆ ತಮ್ಮ ಕಾರ್ಪೆಟ್ಟುಗಳನ್ನು ಬೀಸುತ್ತ ಆ ಮರ ಕನ್ನಿಕೆಯರು ಹಾಡತೊಡಗಿದರು.
ನನ್ನ ತಂದೆ ನನಗೆ ಅದನ್ನು ಆಲಿಸಲು ಹೇಳಿದರು.
ಆ ಹೆಂಗಸರು ಗುನುಗಿದರು, ಗುಣುಗುಣಿಸಿದರು, ಉಸುರಿದರು ಮತ್ತು ಅತ್ತರು.
ಅವರು ಕಾಡಿನ ಹೆಂಗಸರು. ಅವರು ಈ ರಷ್ಯನ್ನರ ಕಾರಣದಿಂದಾಗಿ ಹೊಟ್ಟೆ ಹಸಿವಿನಿಂದ, ಸಿವಿಲ್ ವಾರ್ ನಿಂದ ಮತ್ತು ಈ ಚಳಿಯ ವಿರುದ್ಧದ ಹೋರಾಟದ ಬಳಿಕವೂ ಬದುಕುಳಿದವರು.

ಆ ಕಡಲ ತಡಿಯಲ್ಲಿದ್ದ ಮರದ ತೂಗಂದಿಗೆಗಳ ಮೇಲೆ ಅವರ ಕಾರ್ಪೆಟ್ಟುಗಳು ಜೋತಾಡುತ್ತಿದ್ದವು.
ಆ ನೆಲಹಾಸುಗಳ ಮೇಲಿನ ಧೂಳನ್ನು ಕೋಲುಗಳಿಂದ ಕೊಡವುತ್ತಾ ಅವರು ಹಾಡುತ್ತಿದ್ದರು. ಇರುಳಿನಂತಹ ಆ ಹಾಡನ್ನು ಅವರು ಮತ್ತೆ ಮತ್ತೆ ಹಾಡುತ್ತಿದ್ದರು. ಒಂದು ಟೇಪಿನಿಂದ ಹೊರಬಂದಂತೆ ಆ ಹಾಡು ಬರುತ್ತಿತ್ತು. ಆ ಹಾಡಿನ ಭಯಾನಕ ಕಗ್ಗತ್ತಲೆ ನನಗೆ ಇನ್ನೂ ನೆನಪಿದೆ. ಅವರೆಲ್ಲ ಒಟ್ಟಾಗಿ ಹಾಡುತ್ತಿದ್ದ ಹಾಡು ಕನಸಿಗಿಂತ ಆಳದ ತಳದಿಂದ ಹೊರಬರುತ್ತಿತ್ತು. ಒಬ್ಬ ಪುಟ್ಟ ಹುಡುಗ ಕೂಡ ಅದನ್ನು ಅರಿಯಬಲ್ಲ.

೧೯೫೮ ರಿಂದ ೬೦ರವರೆಗೆ ಹೆಲ್ಸಿಂಕಿಯ ಆ ಕೆಳ ಬಂದರಿನ ಬಳಿ ನಾನು ಮತ್ತು ನನ್ನ ತಂದೆ ತಾಯಿ ವಾಸಿಸುತ್ತಿದ್ದೆವು. ಮೀನು ಮತ್ತು ಮಾಂಸದ ಅಂಗಡಿಗಳಿರುವ ಬಯಲು ಮಾರುಕಟ್ಟೆಯಿಂದ ನಾಲ್ಕು ಹೆಜ್ಜೆ ನಡೆದರೆ ನಮ್ಮ ಮನೆ.

ನಾವು ಆ ಕಲ್ಲು ಹಾಸಿದ ಕೂಡು ರಸ್ತೆಯತ್ತ ಹೋಗುವಾಗ ನಾನು ಬೂದು ಬೆಳಕಿನಲ್ಲಿ ನನ್ನ ಕತ್ತನ್ನು ಕೊಂಕಿಸಿ ಕಡಲ ಹಕ್ಕಿಗಳ ಕೂಗನ್ನು ಆಲಿಸುತ್ತಿದ್ದೆ. ಕೆಲವು ಹಕ್ಕಿಗಳು ಬೆಕ್ಕಿನ ಹಾಗೆ ಮೀಂವ್ ಗುಡುತ್ತಿದ್ದರೆ ಇನ್ನು ಕೆಲವು ಎಣ್ಣೆ ಬಿಡದ ಬಾಗಿಲ ಸಂದುಗಳಂತೆ ಸದ್ದು ಮಾಡುತ್ತಿದ್ದವು. ಈ ಹಸಿದ ಹಕ್ಕಿಗಳ ಅನುರನಣವನ್ನು ಆಲಿಸುತ್ತ ನಾನು ಹೆಜ್ಜೆ ಹಾಕುತ್ತಿದ್ದೆ.

ರಷ್ಯನ್ ಆರ್ಥೊಡೊಕ್ಸ ಚರ್ಚಿನ ಗಂಟೆಗಳ ಸದ್ದು ಒಂಥರಾ ಅಚ್ಚರಿ ಹುಟ್ಟಿಸುತ್ತಿತ್ತು. ಛಳಿಗಾಲ ಇನ್ನೂ ಅವಚಿಕೊಂಡಿತ್ತು. ನಾವು ಹಳ್ಳಿಗಾಡಿನ ಹಾದಿಗಳಲ್ಲಿ ಪಯಣಿಸುವಾಗ ಹಿಮಜಿಂಕೆಗಳ ಕೊರಳ ಗಂಟೆ ನನಗೆ ಕೇಳಿಸುತ್ತಿತ್ತು. ಒಂದು ಹಳೆ ಫಾರ್ಮಿನಲ್ಲಿ ಒಂದು ಜಾರು ಬಂಡಿ ಮಂಜಿನ ಮೇಲೆ ಜಾರಿಹೋಗುವ ಸದ್ದು ಕೇಳಿತ್ತು. ಇನ್ನೇನು ?

ರೈಲ್ವೆ ಸ್ಟೇಶನ್ ನ ಹೊರಗೆ ಕೂತು ಹೂ ಮಾರುತಿದ್ದ ಆ ಹೆಂಗಸು ನನಗಾಗಿ ಹಾಡುತ್ತಿದ್ದಳು. ಅವಳ ಪುಟ್ಟ ಮಗಳು ಅದಕ್ಕೆ ಸರಿಯಾಗಿ ಕೊಳಲು ನುಡಿಸುತ್ತಿದ್ದಳು....
ಹಾಯಿದೋಣಿಗಳ ಹಾಯಿಗಳ ಎಡೆಯಿಂದ ಗಾಳಿ ಊರಿನೊಳಗೆ ಬೀಸುತಿತ್ತು.
ಒಬ್ಬ ಮುದುಕ ನಾಡ ದೋಣಿಯಲ್ಲಿ ಕುಳಿತು ಆಲೂಗೆಡ್ಡೆ ಮಾರಲು ಬರುತ್ತಿದ್ದ. ಅವನ ಸ್ವರ ಮರಳಿನಂತಿರುತಿತ್ತು . ಅವನು ದಿನವೂ ನನ್ನ ಜೊತೆ ಮಾತನಾಡುತಿದ್ದ.
"ನೆಲದಡಿಯ ಆಲೂಗೆಡ್ಡೆಗಳು, ಉಗ್ರಾಣದ ಆಲೂಗೆಡ್ಡೆಗಳು, ಬೇಸಗೆಯ ರುಚಿ ನೋಡಿ, ಬೇಸಗೆಯ ರುಚಿ ಇನ್ನೂ ಇದರೊಳಗಿದೆ..."
ನಂತರ ಕತೆಗಳಲ್ಲಿ ಬರುವ ಸೇತುವೆಯಡಿಯ ಭಯಾನಕ ಜೀವಿಗಳ ಬಗ್ಗೆ ಓದುವಾಗ ನಾನು ಅವನ ಸ್ವರವನ್ನು ನೆನಪಿಸಿಕೊಳ್ಳುತ್ತಿದ್ದೆ. ಇನ್ನು?
ಕಮ್ಮಾರ ಶಾಲೆಯ ಕತ್ತರಿ ಸಾಣೆಯ ಸದ್ದು....
ಟ್ರಾಮ್ ಬಂಡಿಗಳ ದೊರಲು...
ಮಗ್ಗದ ಲಾಳಿಯ ಲಟಾಕು.. ನನ್ನ ತಾಯಿ ಕಾರ್ಪೆಟ್ಟು ಹೆಣೆಯುವ ಸದ್ದು...
ಸರಿರಾತ್ರಿಯಲ್ಲಿ ನನ್ನ ತಂದೆ ಟೈಪು ಕುಟ್ಟುವ ಸದ್ದು...
ನನ್ನ ಮೊದಲ ಆಟಿಕೆ, ಆ ಮರದ ಬುಗುರಿ ತಿರುಗುವಾಗ ಹೊರಡುತಿದ್ದ ಚಾ ಕೆಟಲಿನ ಸಿಳ್ಳೆಯಂತಹ ಸದ್ದು...
ಚಳಿಗಾಳಿಗೆ ಮರವೊಂದು ಕಿಟಕಿ ಉಜ್ಜುವ ಸದ್ದು...

ನನ್ನ ತಂದೆ ಹೆಲ್ಸಿಂಕಿ ವಿಶ್ವವಿದ್ಯಾಲಯದಲ್ಲಿ ವಿಸಿಟಿಂಗ್ ಪ್ರೊಫೆಸ್ಸರ್ ಆಗಿದ್ದುದರಿಂದ ನನ್ನನ್ನು ಕರೆದುಕೊಂಡು ಊರು ಸುತ್ತಾಡಿಸುತ್ತಾ ಇಂತಹ ಹಲವು ಸಂಗೀತಗಳನ್ನು ನನಗೆ ಪರಿಚಯಿಸುವಷ್ಟು ಬಿಡುವು ಅವರಲ್ಲಿತ್ತು.
ಒಮ್ಮೆ ಗಾಜು ಊದಿ ಬಾಟಲಿ ಇತ್ಯಾದಿ ತಯಾರಿಸುವ ಅಂಗಡಿಗೆ ಅವರು ನನ್ನನ್ನು ಕರೆದೊಯ್ದರು. ಗಾಜು ಊದುವವನು ತನ್ನ ಉದ್ದ ಕೊಳವೆಯನ್ನು ಕಾಯಿಸುತ್ತಾ ನನಗೆ ಬಿಸಿಗಾಜನ್ನು ಊದಿ ಉಬ್ಬಿಸುವ ಕೆಲಸವನ್ನು ವಿವರಿಸಿದ್ದ. ಅವನು ಬೆಂಕಿಯಿಂದ ಕರಗಿದ ಗಾಜನ್ನು ಹೊರತೆಗೆದಾಗ ಬೆಳಕಿನ ಗೋಳವೊಂದು ಅಸ್ಪಷ್ಟವಾಗಿ ನನಗೆ ಗೋಚರಿಸಿತ್ತು. ಅವನು ಉಸಿರು ಒಳಗೆಳೆದದ್ದು ನನಗೆ ಕೇಳಿತ್ತು. ಅವನಿನ್ನೇನು ಊದಬೇಕು ಎನ್ನುವಷ್ಟರಲ್ಲಿ ಅನತಿ ದೂರದ ಗೋಡೆಯ ಮೇಲಿನ ಕುಕ್ಕೂ ಗಡಿಯಾರದ ಅತ್ಯುತ್ಸಾಹಿ ಕೂಗು ಕೇಳಿತ್ತು. ಆವಾಗಿನಿಂದ ನನ್ನೊಳಗೆ ಸೂಕ್ಷ್ಮ ಪ್ರಜ್ಞೆಗೂ ಅಧಿಕ ಪ್ರಸಂಗಿತನಕ್ಕೂ ಒಂದು ನಂಟು.

ನಾವು ಅಂದು ಟ್ರಾಮ್ ನಲ್ಲಿ ಮನೆಗೆ ಮರಳಿದ್ದೆವು. ಸಹಪ್ರಯಾಣಿಕರ ಹವಾಮಾನಕ್ಕೆ ಸಂಬಂಧಿಸಿದ ಮಾತುಕತೆಯನ್ನು ನಾನು ಆಲಿಸಿದೆ. ಫಿನ್ನಿಶ್ ನುಡಿಯ ಸದ್ದು ನನಗಿಷ್ಟ. ಅದರಲ್ಲೂ ಟ್ರಾಮ್ನಲ್ಲಿ ಅಪರಿಚಿತರು ಅಕ್ಕಪಕ್ಕ ಕುಳಿತುಕೊಂಡು ಪಿಸುಮಾತಿನಲ್ಲಿ ಫಿನ್ನಿಶ್ ಮಾತನಾಡುವಾಗ ಆಲಿಸುವುದು ಬಲು ಇಷ್ಟ. ಈ ಫಿನ್ನರು ಮಾತಿನ ನಡುವೆ ಉಸಿರೆಳೆಯುತ್ತಾರೆ, ಎರಡು ಮನಸ್ಸುಗಳು ಪರಮಾಪ್ತ ಸಂಮತಿಯಲ್ಲಿರುವಂತಹ ಒಂದು ಸೊಗಸಾದ ಮೆಲುನುಡಿ ಅದು. ಊರನ್ನು ಇರುಳು ಆವರಿಸಿಕೊಳ್ಳುತ್ತಿರುವಂತೆ ಇಂತಹ ಅನೇಕ, ಪಿಸುಮಾತುಗಳು, ನುಡಿಯುಸಿರುಗಳು ಕೇಳಿಸುತ್ತವೆ. ನಾನು ಮ್ಯಾಟಿ ಎಂದು ಹೆಸರಿಟ್ಟ ಕಾಲ್ಪನಿಕ ಗೆಳತಿಯೊಬ್ಬಳ ಬಳಿ ಅವಳು ಪಕ್ಕದಲ್ಲಿ ಕುಳಿತಿರುವ ಹಾಗೆ ಕಲ್ಪಿಸಿ ಫಿನ್ನಿಶ್ ಮಾತನಾಡುತ್ತಿದ್ದೆ. ಒಮ್ಮೆ ಉಸಿರು ಬಿಗಿಹಿಡಿದು ಆ ಟ್ರಾಮ್ ಚಲಿಸುವ ಸದ್ದನ್ನು ಆಲಿಸಿದ್ದೆ. ಒಮ್ಮೆಗೇ ಉಸಿರು ಬಿಟ್ಟು ರಭಸದಿಂದ ಪಿಸುಗುಡುತ್ತಾ ನನ್ನ ಆ ಪುಟ್ಟ ಗೆಳತಿಯೊಂದಿಗೆ ಮಾತನಾಡಿದ್ದೆ. ನನ್ನ ತಂದೆ ಅವರ ದಿನಪತ್ರಿಕೆಯೊಳಗೆ ಕಳೆದುಹೋಗಿದ್ದರೆ ನಾನು ಆ ಪಿಸುಮಾತಿನ ಆತ್ಮವಿಶ್ವಾಸದ ಎದೆಯಾಳಕ್ಕೆ ಕಳೆದುಹೋಗುತ್ತಿದ್ದೆ.

ಇಡೀ ಪ್ರಪಂಚ ಹಸಿರು ಇಲ್ಲವೇ ಬಿಳಿಯಾಗಿ ಕಾಣುತ್ತಿತ್ತು. ನನಗೆ ಕುರುಡುತನವೆಂದರೆ ಪರದೆಯ ಬೆನ್ನಿಗೆ ಪರದೆಯ ಹಾಗೆ ಕಾಡು ಬಣ್ಣಗಳ ಪರದೆಯ ಸಾಲು. ಆದರೆ ಆ ಹಲವು ಸದ್ದಿನ ನಗರದೊಳಗೆ ಒಬ್ಬ ಕಣ್ಣು ಕಾಣದ ಪುಟ್ಟ ಬಾಲಕನಿಗೆ ಎಂತಹ ರೋಮಾಂಚನವದು.

ನಮ್ಮ ಅಪಾರ್ಟ್ಮೆಂಟು ಕೆಳ ಬಂದರಿನಲ್ಲಿತ್ತು. ನನ್ನ ತಾಯಿ ಒಂದು ದಿನ ರೇಡಿಯೋ ಆಲಿಸುತ್ತ ಕಾರ್ಪೆಟ್ಟು ನೇಯುತ್ತಿದ್ದಳು. ರಷ್ಯನ್ ನೌಕಾಪಡೆ ಇತ್ತ ಬರುತ್ತಿರುವ ಬಗ್ಗೆ ಆಗ ತಾನೆ ರೇಡಿಯೋದಲ್ಲಿ ಘೋಷಿಸಿದ್ದನ್ನು ನನಗೆ ತಿಳಿಸಿದಳು. ಬಳಿಕ ನಾವು ಬಾಲ್ಟಿಕ್ ದ್ವೀಪ ಸಮೂಹದಾಚೆಯಿಂದ ತೋಪುಗಳ ಸಿಡಿತವನ್ನೂ ಕೇಳಿದೆವು. ನಾವು ಬಾಲ್ಕನಿಯಲ್ಲಿ ನಿಂತು ರಷ್ಯನ್ ನೌಕಾಪಡೆ ಆಡುವ ಯುದ್ಧದಾಟದ ಸದ್ದನ್ನು ಆಲಿಸಿದ್ದೆವು. ಆಗ ನಮ್ಮ ನೆರೆಮನೆಯವಳು ಈ ಗುಂಡಿನ ಸದ್ದಿನಲ್ಲೇ ತನ್ನ ತಲೆಗೂದಲು ಬೆಳ್ಳಗಾಗಿದೆ ಎಂದಾಗ ನಮ್ಮ ತಲೆಯೂ ಬೆಳ್ಳಗಾಗಲಿದೆ ಎಂದು ನಾನು ಚಿಂತೆಗೊಳಗಾಗಿದ್ದೆ. ಮುದುಕನಾಗುವ ಬಗ್ಗೆ ಹಲವು ಪ್ರಶ್ನೆಗಳನ್ನು ನಾನು ತಂದೆ ತಾಯಿ ಬಳಿ ಕೇಳಿ ಸತಾಯಿಸಿದ್ದೆ. ಯಾಕೆ ಈ ರಷ್ಯನ್ನರು ಜನರನ್ನು ಮುದುಕರನ್ನಾಗಿ ಮಾಡುತ್ತಿದ್ದಾರೆ? ಸದ್ದಿನಲ್ಲಿ ನನಗೆ ಅಷ್ಟೊಂದು ವಿಶ್ವಾಸವಿತ್ತು. ಸದ್ದು ಎಂದರೆ ಆ ಮರ, ಈ ಹುಲ್ಲು, ಈ ವ್ಯಕ್ತಿ, ಈ ನೆರಳು ಬೆಳಕಿನ ಆಕೃತಿಗಳು. ಆಮೇಲೆ ಸಂಜೆ ಮಾರುತ ಸುಳಿಯತೊಡಗಿದಾಗ ರಷ್ಯನ್ನರು ತೆರಳಿದ್ದರು.

ಎಪ್ರಿಲ್ ತಿಂಗಳು ಮೇಗೆ ಬದಲಾಗುವಾಗ ಉದ್ಯಾನ ಹಸಿರು ಹೊಗೆಯಾಡುತಿತ್ತು. ಎಲೆಗಳು ಮತ್ತೆ ಮರ ತುಂಬತೊಡಗಿದ್ದವು, ಒಬ್ಬ ಮುದುಕ ಮರಗಳ ನಡುವೆ ಕುಳಿತು ಅಕಾರ್ಡಿಯನ್ ನುಡಿಸುತ್ತಿದ್ದ. ನನಗೆ ಹೆಸರು ಮರೆತು ಹೋಗಿರುವ ಪುಟ್ಟ ಹುಡುಗಿಯೊಬ್ಬಳು ಬಾಲ್ ಡ್ಯಾನ್ಸ್ ಕಲಿಸಿದ್ದಳು. ಬಹುಶ ನಾನು ಕುರುಡನೆಂದು ಅವಳ ತಂದೆ ತಾಯಿಗಳು ಅವಳಿಗೆ ಹೇಳಿರಬಹುದು. ಅವಳಿಗಾಗ ಸುಮಾರು ಎಂಟು ವರ್ಷ ಇರಬಹುದೇನೋ. ಮರಗಳ ಎದೆಯ ಬೆಳಕಿನ ತೂಗಾಟದ ನಡುವೆ ನನ್ನನ್ನವಳು ಹಿಂದಕ್ಕೆ ಮುಂದಕ್ಕೆ ಓಲಾಡಿಸಿದ್ದಳು. ಆ ಮುದುಕ ನಿಧಾನವಾಗಿ ನುಡಿಸುತ್ತಿದ್ದಾಗ ನನಗೆ ಝೆನ್ ದೇಹದ ಅನುಭೂತಿ ಯಾಗಿತ್ತು. ನಾನೆಲ್ಲಿದ್ದೇನೋ ಅಲ್ಲಿಯೇ ಇದ್ದೆ. ನನಗೆ ನಾಲಕ್ಕು ವರ್ಷ ಆಗುವುದರೊಳಗೆ ಆಲಿಸುವ ಸೂಕ್ಷ್ಮ ಕಲೆ ಅನಾಯಾಸವಾಗಿತ್ತು.

೧೯೬೦ಕ್ಕೆ ನಾವು ಅಮೇರಿಕೆಗೆ ಹಾರಿದೆವು. ವಿಮಾನದ ಪ್ರೊಫೆಲ್ಲರುಗಳ ದೊರಲು ಮತ್ತು ಗೊಣಗು ನನಗೆ ಆಪ್ಯಾಯಮಾನವೆನಿಸಿತ್ತು. ಅವು ಎಂತಹ ಅದ್ಭುತ ಸದ್ದು ಹುಟ್ಟಿಸುತ್ತಿದ್ದವು ! ನಾನು ವಿಮಾನದ ಒಳಗೋಡೆಗೆ ತಲೆ ಒರಗಿ ಕಿವಿಯಾನಿಸಿ ಆ ಸದ್ದು ಮತ್ತು ನಡುಕವನ್ನು ನನ್ನ ಎಲುವುಗಳಿಗೆ ಹಬ್ಬಿಸಿಕೊಂಡಿದ್ದೆ. ನಾನೂ ಹಮ್ಮಿಸುತ್ತ ನನ್ನದೇ ಆದ ಪುಟ್ಟ ಹಾಡನ್ನು ಆ ಇಂಜಿನ್ ಲಯದಲ್ಲಿ ದೂಡಿ ಬಿಟ್ಟಿದ್ದೆ. ಫಿನ್ನಿಶ್ ಮಹಾಕಾವ್ಯ "ಕಾಲೆವಾಲ"ದ ಉಧ್ಘೋಶ ಮತ್ತು ಫಿನ್ನಿಶ್ ಕಾರ್ಪೆಟ್ ಮುದುಕಿಯರ ವಿಷಾದ ಭರಿತ ಹಾಡನ್ನು ಅನುಕರಿಸುತ್ತಾ ಆ ವಿಮಾನದ ಸವೆಯುತ್ತಿರುವ ಲೋಹದ ಸದ್ದಿಗೆ ಸಂಗಾತವಾಗುತ್ತ ಗುಂಯ್ಗುಟ್ಟಿದ್ದೆ.

"ಪ್ರೊಫೆಸರ್ ಸ್ಟೀಫನ್ ಕೂಸಿಸ್ತೋ" ಹುಟ್ಟಿನಿಂದಲೇ ಕುರುಡರು. ಇವರು ಬರೆದ "ಈವ್ಸ್ ಡ್ರಾಪಿಂಗ್ : ಅ ಮೆಮೈರ್ ಆಫ್ ಬ್ಲೈಂಡ್ ನೆಸ್ಸ್ ಅಂಡ್ ಲಿಸನಿಂಗ್" ಪುಸ್ತಕದ ಮೇಲಿನ ಅಧ್ಯಾಯವನ್ನು ಅನುವಾದಿಸಿದ್ದೇನೆ. ಹೆಚ್ಚಿನ ಮಾಹಿತಿಗಾಗಿ http://www.stephenkuusisto.com/homemeetsteve.html

0 comments:

ಕಾಮೆಂಟ್‌‌ ಪೋಸ್ಟ್‌ ಮಾಡಿ