ಏಪ್ರಿಲ್ 18, 2009

ಒಂದು ಬಕ್ಕಿಂಗ್ಹಂ ಹಾಸಿಗೆ

ತನ್ನ ಭಾರವಾದ ಕೆಂಪು ಕಣ್ಣುಗಳಲ್ಲಿ ಮಡುಗಟ್ಟಿದ ಹಣ್ಣು ಹಣ್ಣು ನಿದ್ರೆ ತೊನೆಯುವುದನ್ನು ತಡೆಯುತ್ತಾ ಅಂಗಡಿಯವನ ಮುಂದೆ ಒಂದು ಹೊಳಪಿನ ಕಾಗದವನ್ನು ಹಿಡಿದು "ಇಂಥ ಹಾಸಿಗೆ ನನಗೆ ಬೇಕು, ಹಣ ಎಷ್ಟಾದರೂ ಚಿಂತಿಲ್ಲ. ಗಡದ್ದಾಗಿ ಒಂದು ನಿದ್ದೆ ಮಾಡಬೇಕು" ಎಂದ ರಾಜನಾಥನನ್ನು ನೋಡಿ ಲಜಪತರಾಯ್ ಮಾರ್ಕೆಟಿನ ಆ ವೈಭವೋಪೇತ ಹಾಸಿಗೆ ಅಂಗಡಿಯವನಿಗೆ ಅಸಹ್ಯವಾಯಿತು.

ನೀಟಾಗಿ ಉಡುಪು ತೊಟ್ಟು ಒಳ್ಳೆ ಪಾಲಿಶ್ ಮಾಡಿದ ಕರಿಬೂಟು ಹಾಕಿಕೊಂಡಿದ್ದರೂ ರಾಜನಾಥನ ಮಾತು, ನಡವಳಿಕೆ ಅವನು ಮಧ್ಯಮವರ್ಗದವನೆಂದು ಸಾರಿ ಹೇಳುತ್ತಿತ್ತು.
ತಾತ್ಸಾರವಾಗಿ "ಆ ಹಾಸಿಗೆ ಎಕ್ಸ್ಪೆನ್ಸಿವ್ ಇದೆ" ಎಂದ ಅಂಗಡಿಯವ. ಅಂಥಾ ಹಾಸಿಗೆ ಹಾಕಿಸಿಕೊಳ್ಳಲು ಮಗನೇ ನಿನ್ನ ಮನೆಗೆ ಯೋಗ್ಯತೆಯಿಲ್ಲ ಎಂದು ಹೇಳುವಂತಿತ್ತು ಅವನ ಧಾಟಿ.
"ಹಣ ಎಷ್ಟಾದರೂ ತೊಂದರೆ ಇಲ್ಲ ಅಂದೆನಲ್ಲ?" ಎಂದ ರಾಜನಾಥ ಅಸಹನೆಯಿಂದ.
ಅಂಗಡಿಯವ ಅಷ್ಟೇ ಅಸಹನೆಯಿಂದ "ಯಾವ ಸೈಜು ಬೇಕು, ಪಾಕೆಟೆಡ್ ಬೇಕೋ, ಪಿಲ್ಲೊಟಾಪ್ ಬೇಕೋ, ಎಷ್ಟು ಇಂಚು ದಪ್ಪ ಬೇಕು?" ಎಂದೆಲ್ಲಾ ಪ್ರಶ್ನೆಗಳನ್ನೊಡ್ಡಿ ಇಂಟರ್ ವ್ಯೂ ಮಾಡತೊಡಗಿದಾಗ ರಾಜನಾಥನಿಗೆ ಕಿರಿಕಿರಿಯಾಯಿತು. ಮತ್ತೊಮ್ಮೆ ಲೀಲಾ ಕೆಂಪೆನ್ಸ್ಕಿ ಹೋಟೆಲಿನ ಜಾಹಿರಾತು ಪ್ರಕಟವಾಗಿದ್ದ ಆ ಮ್ಯಾಗ್ಜೀನಿನ ಪುಟವನ್ನು ಅಂಗಡಿಯವನ ಮುಂದೊಡ್ಡಿ ಅದರೊಳಗಿನ ಬೆಡ್ರೂಂ ಚಿತ್ರದಲ್ಲಿದ್ದ ಪೊಗದಸ್ತಾದ ಹಾಸಿಗೆಯತ್ತ ಬೆರಳು ತೋರಿಸಿದ ರಾಜನಾಥ.
"ಅದೆಲ್ಲ ನನಗೆ ಗೊತ್ತಿಲ್ಲ. ನನಗೆ ಈ ಹಾಸಿಗೆ ಬೇಕು." ಎಂದ.
"ಅದಕ್ಕೆ ನಲ್ವತ್ತು ಸಾವಿರ ರೂಪಾಯಿ" ಎಂದ ಅಂಗಡಿಯವ. ರಾಜನಾಥನಿಗೆ ಜುಪ್ಪೆಂದಿತು. ಆದರೂ ತೋರಿಸಿಕೊಳ್ಳದೇ "ಹೂಂ, ತೋರಿಸಿ" ಅಂದ ರಾಜನಾಥನ ಮಿಡಲ್ ಕ್ಲಾಸ್ ಪಾಪಪ್ರಜ್ಞೆ ಧುತ್ತೆಂದು ಎಚ್ಚರವಾಗಿ ಚಡಪಡಿಸತೊಡಗಿತು.
"ರಾಜೇಶ್ ಇನ್ ಕೋ ಕಿಂಗ್ ಸೈಜ್ ಕಾ ಬಕ್ಕಿಂಗ್ಹಂ ವಾಲಾ ಗದ್ದಾ ದಿಖಾನಾ" ಎಂದು ಕೆಲಸದವನನ್ನು ಕರೆದ ಮಾಲಿಕ.
ರಾಜನಾಥನ ಸುಖನಿದ್ರೆಯ ಹಂಬಲ ಕೆಲಸದವನನ್ನು ಹಿಂಬಾಲಿಸಿದರೆ ಅವನ ಮಿಡಲ್ ಕ್ಲಾಸ್ ಪಾಪಪ್ರಜ್ಞೆ ಕಾಲರ್ ಹಿಡಿದು ಹೊರಗೆಳೆಯುತಿತ್ತು. ಎರಡನ್ನೂ ಕೊಡವಿಕೊಂಡು ನಿದ್ರೆ ಮಿರಿಮಿರಿಗುಟ್ಟುವ ಭಾರವಾದ ಕಣ್ಣುಗಳನ್ನು ಮುಚ್ಚದಂತೆ ತಡೆಯುತ್ತಾ ಕೆಲಸದವನನ್ನು ಹಿಂಬಾಲಿಸಿದ ರಾಜನಾಥ.

ಕಳೆದ ಎಂಟು ವರ್ಷಗಳಿಂದ ರಾಜನಾಥ ಒಂದಿನಿತೂ ನಿದ್ರೆಮಾಡಿರಲಿಲ್ಲ. ಕಣ್ಣು ಮುಚ್ಚಿ ಮಲಗಿದರೂ ಅವನ ಪ್ರಜ್ಞೆಯು ಎಚ್ಚರವಾಗಿದ್ದುಕೊಂಡು ನಿದ್ರೆಯೆಂಬ ಕೃಷ್ಣರಂಧ್ರದ ಬಾಗಿಲಿನಲ್ಲಿ ಎಡತಾಕುತ್ತಾ ಬೆಳಗು ಹರಿಸುತಿತ್ತು. ಅಲೋಪತಿ, ಹೋಮಿಯೋ, ಆಯುರ್ವೇದ, ನ್ಯಚುರೋಪತಿ, ರೇಕಿ, ಪ್ರಾಣಿಕ್ಕು, ಕೋಟಕ್ಕಲ್ಲು, ಯುನಾನಿ ಮೊದಲಾಗಿರುವ ಛಪ್ಪನ್ನೈವತ್ತಾರು ದೇಶಗಳ ಮಧು ಮೂಲಿಕೆ ನಾಡಿ ನರಕಗಳನ್ನೂ, ಸಾಧು ಸಂತ ಫಕೀರ ಜಿನ್ನಾತ್ಮರನ್ನೂ, ದೇವ ದೈತ್ಯ ಪಿಶಾಚಿಗಳನ್ನೂ, ನಂಬಿದ್ದರೂ ಅವೆಲ್ಲವೂ ರಾಜನಾಥನಿಗೆ ಐದು ಪೈಸೆಯ ನಿದ್ದೆಯನ್ನೊದಗಿಸಲೂ ವಿಫಲವಾಗಿದ್ದವು.

ಆದರೆ ಈ ಅಖಂಡ ನಿದ್ರಾ ಹೀನತೆಯಿಂದ ರಾಜನಾಥ ಕೊಂಚವೂ ಬಾಧಿತನಾಗಿರಲಿಲ್ಲ. ಬದಲಾಗಿ ಅವನ ಕಾರ್ಯದಕ್ಷತೆ ಹೆಚ್ಚತೊಡಗಿತ್ತು. ಪ್ರತಿದಿನ ಬೆಳಿಗ್ಗೆ ಸ್ವಸ್ಥ ನಿದ್ರೆ ಮಾಡಿದವನಂತೆ ಉಲ್ಲಾಸದಿಂದಲೇ ಇರುತ್ತಿದ್ದ. ಕಣ್ಣುಗಳು ಒಂದಿನಿತೂ ಬಾಡಿಕೊಂಡಿರುತ್ತಿರಲಿಲ್ಲ. ಮೊದಮೊದಲು ಕೆಲವರ ಸಲಹೆಯಂತೆ ಅವನು ನಿದ್ರೆ ಬರುವವರೆಗೆ ತಡಮೆ ದಾಟುವ ಕುರಿಗಳನ್ನು ಎಣಿಸುತ್ತಿದ್ದ. ಆದರೆ ಸಾವಿರಗಟ್ಟಲೆ ಕುರಿಗಳು ತಡಮೆ ದಾಟಿದರೂ ಇವನ ಬಳಿ ನಿದ್ರೆ ಸುಳಿಯುತ್ತಿರಲಿಲ್ಲ. ಆ ಪ್ರಕ್ರಿಯೆಯಿಂದ ಯಾವೊಂದೂ ಲಾಭವಾಗದಿರುವುದರಿಂದ ಅದರಲ್ಲಿ ಆಸಕ್ತಿ ಕಳೆದುಕೊಂಡು ತನ್ನ ಬದುಕಿನ ಬಗ್ಗೆ, ಕೆಲಸಗಳ ಬಗ್ಗೆ, ದಿನಚರಿಯ ಬಗ್ಗೆ, ಅಲೋಚನೆಗಳು ತನ್ನೊಳಗೆ ನಿರ್ಮಾಣಗೊಳ್ಳುವುದನ್ನು ಪ್ರೋತ್ಸಾಹಿಸಿಕೊಂಡ. ಇದರಿಂದ ಅವನ ಆಫೀಸಿನ ಹಲವು ಸಣ್ಣ ಸಣ್ಣ ಸಮಸ್ಯೆಗಳ ಬಗ್ಗೆ ಪರಿಹಾರಗಳು ಅವನ ಈ ನಿದ್ರಾ ವಿಹೀನ ರಾತ್ರಿಗಳಲ್ಲಿ ನಡೆಯುವ ಮಂಥನದಲ್ಲಿ ಉತ್ಪನ್ನವಾಗಲಾರಂಭಿಸಿದವು. ತಾನು ದಿನವೂ ಮಾಡುವ ಹಲವು ಕೆಲಸಗಳನ್ನು ಇನ್ನಷ್ಟು ಕ್ಷಮತೆಯಿಂದ ಮಾಡುವ ದಾರಿಗಳು ಗೋಚರವಾಗಲಾರಂಭಿಸಿದವು. ರಾಜನಾಥನ ಉತ್ತಮಗೊಂಡ ಈ ಕಾರ್ಯದಕ್ಷತೆಯು ಅವನ ಹಿರಿಯಧಿಕಾರಿಗಳ ಗಮನಕ್ಕೆ ಬರದಿರಲಿಲ್ಲ. ಪರಿಣಾಮವಾಗಿ ಟೂರಿಸಂ ಸೆಕ್ರೆಟರಿಯು ಪರ್ಸನಲ್ ಬ್ರಾಂಚ್ ಗೆ ರಾಜನಾಥನ ವರ್ಗವಾಯಿತು. ಆದಾಯವೂ ಹೆಚ್ಚಿತು. ಆದರೆ ಇದೇ ಬಡ್ತಿಯು ಮುಂದೊಂದು ದಿನ ತನ್ನ ನಿದ್ರಾಹೀನತೆಯ ಉತ್ತುಂಗವನ್ನು ಕಾಣಲು ಕಾರಣವಾಗಲಿದೆ ಎಂದು ರಾಜನಾಥನಿಗೆ ತಿಳಿದಿರಲಿಲ್ಲ.

"ಯೇ ದೇಖೋ, ಪಾಕೆಟೆಡ್ ಸ್ಪ್ರಿಂಗ್ ಗದ್ದಾ ಹೈ, ಔರ್ ಯೇ ಪಿಲ್ಲೋಟಾಪ್ ಹೈ" ಎಂದು ಕೆಲಸದವನೂ ಅದೇ ತಾತ್ಸಾರದಿಂದ ಮಾತನಾಡಿದಾಗ ಎಲಾ ಮಗನೇ ಎಂದು ಸೊಂಟದ ಮೇಲೇ ಕೈಯಿಟ್ಟ ರಾಜನಾಥ. ಗೋಡೆಗೆ ಒರಗಿಸಿಡಲಾಗಿದ್ದ ಹತ್ತಿಪ್ಪತ್ತು ಹಾಸಿಗೆಗಳನ್ನು ಇತ್ತ ಕಡೆಗೆ ಒರಗಿಸಿ ಹಿಂಭಾಗದ ಎರಡು ದಪ್ಪಗಿನ ಹಾಸಿಗೆಗಳನ್ನು ತೋರಿಸಿದ ಕೆಲಸದವನು. ರಾಜನಾಥ ಅವೆರಡನ್ನೂ ಹೊರಗೆಳೆಯಿಸಿ ನೆಲದ ಮೇಲೆ ಹಾಸುವಂತೆ ಹೇಳಿದ. ಮುಸುಗುಡುತ್ತಲೇ ಕೆಲಸದವನು ಹಾಗೇ ಮಾಡಿದ.

ಎರಡರಲ್ಲಿ ಹೆಚ್ಚು ದಪ್ಪಗಿದ್ದ ಹಾಸಿಗೆಯನ್ನು ಬಗ್ಗಿ ಒತ್ತಿ ನೋಡಿದ ರಾಜನಾಥ. ಮುದ್ದಾಗಿ ನಾಚುತ್ತಾ ಒಳಗೊಂದಿಕೊಂಡಿತು ಹಾಸಿಗೆ. ಆ ಹಾಸಿಗೆಯ ಸಣ್ಣ ಮಾದರಿ ತುಂಡೊಂದನ್ನು ಇವನತ್ತ ಚಾಚಿ ವಿವರಿಸತೊಡಗಿದ ಕೆಲಸದವ. ಒಳಗೆಲ್ಲ ಒತ್ತಾಗಿ ಜೋಡಿಸಲ್ಪಟ್ಟಿದ್ದ ಲೋಹದ ಸ್ಪ್ರಿಂಗಗಳು ಸಣ್ಣ ಸಣ್ಣ ಚೀಲದೊಳಗೆ ಪಾಕೆಟಿಂಗ್ ಮಾಡಲಾಗಿತ್ತು. ಹತ್ತಿಂಚು ದಪ್ಪದ ಆ ಹಾಸಿಗೆಗೆ ನಾಲ್ಕು ಮೇಲ್ಪದರಗಳಿದ್ದು ಬೇರೆ ಬೇರೆ ದಪ್ಪದ ಫೋಮ್ ಹಾಳೆಗಳು ತೊಡಿಸಲ್ಪಟ್ಟಿದ್ದವು. ಆ ಬಳಿಕ ಒಂದು ವಿಶೇಷ ಪದರವು ಸುಮಾರು ಮೂರಿಂಚಿನಷ್ಟು ದಪ್ಪಗೆ ನುಣುಪಾದ ಬಟ್ಟೆಯೊಳಗೆ ಫೋಮ್ ಹಾಳೆ ಹೊಂದಿಸಿ ಚೌಕುಳಿ ಹೊಲಿಗೆ ಹಾಕಲ್ಪಟ್ಟಿತ್ತು. ಇದು ಹಾಸಿಗೆಗೆ ಹೆಚ್ಚಿನ ಮೃದುತ್ವವನ್ನು ಒದಗಿಸಿತ್ತು.

ಕೆಳಗೆ ಹಾಸಿರುವ ಹಾಸಿಗೆಯ ಮೇಲೊಮ್ಮೆ ಕುಳಿತುಕೊಂಡ ರಾಜನಾಥ. ಹಾಸಿಗೆಗೆ ಸುತ್ತಿರುವ ಪ್ಲಾಸ್ಟಿಕ್ ಹಾಳೆ ಪೂರ್ಣ ಸುಖವನ್ನು ಅನುಭವಿಸಲು ತೊಡಕಾಗಿತ್ತು. ಆದರೂ ತಾನು ಇದುವರೆಗೆ ಮಲಗಿರುವ ಹಾಸಿಗೆಗಳಿಗಿಂತ ನೂರು ಪಟ್ಟು ಮೃದುವಾಗಿತ್ತು ಅದು. ತುಪ್ಪಳದ ನುಣುಪಿನ ಮೋಡದ ರಾಶಿಯಲ್ಲಿ ತಾನು ಹುದುಗಿರುವ ಅನುಭವವಾಯಿತು ರಾಜನಾಥನಿಗೆ. ಹಾಗೇಯೇ ಒರಗಿ ಒಮ್ಮೆ ಕಣ್ಣು ಮುಚ್ಚಿದಾಗ ತಾನು ಸ್ವಸ್ಥ ನಿದ್ರೆಯಲ್ಲಿ ಮೈಮರೆತು ಪವಡಿಸಿರುವ ಕನಸೊಂದು ರಾಜನಾಥನ ಜಾಗೃತ ಪಟಲದಲ್ಲೊಮ್ಮೆ ಮೂಡಿ ಮಿಂಚು ಹೊಡೆಯಿತು.

ಹಾಸಿಗೆಯಲ್ಲೇನಿದೆ. ಸ್ಪಂಜು ಹಾಕಿ ಮಾಡಿರುತ್ತಾರೆ ಒತ್ತಿದರೆ ಒಳಗೆ ಹೊಗುವ ಹಾಗಿರುತ್ತದೆ ಎನ್ನುವ ಅಭಿಪ್ರಾಯ ರಾಜನಾಥನಿಗೂ ಇತ್ತು. ಹೆಚ್ಚೆಂದರೆ ತನ್ನ ಸಾಹೇಬರ ವೈಟಿಂಗ್ ರೂಮಲ್ಲಿ ಹಾಕಲಾಗಿರುವ ಸೋಫಾ ಸೆಟ್ಟಿನಷ್ಟೆ ಮೃದುವಾಗಿರಬಹುದೆಂಬ ಕಲ್ಪನೆಯು ಅವನಲ್ಲಿತ್ತು. ತನ್ನ ಮದುವೆಯಲ್ಲಿ ಉಡುಗೊರೆಯಾಗಿ ಬಂದಿದ್ದ ತೆಂಗಿನ ನಾರಿನಿಂದ ಮಾಡಲ್ಪಟ್ಟ ಹಾಸಿಗೆಯೇ ದೇಹಕ್ಕೂ, ಬೆನ್ನುಮೂಳೆಗೂ ಒಳ್ಳೆಯದು ಎನ್ನುವ ಅಖಂಡ ನಂಬಿಕೆಯು ರಾಜನಾಥನದಾಗಿತ್ತು. ಆದರೊಂದು ಬಾರಿ ಗುಡ್ಗಾಂವದ ಲೀಲಾ ಕೆಂಪೆನ್ಸ್ಕೀ ಪಂಚತಾರಾ ಹೋಟೆಲಿನಲ್ಲಿ ವಿಶ್ವ ಟೂರಿಸಂ ಚರ್ಚಾಗೊಷ್ಟಿಯೊಂದು ನಡೆದಾಗ ಇವನ ಸಾಹೇಬರಿಗೆ ಸಹಾಯಕನಾಗಿ ರಾಜನಾಥ ಹೋಗಿದ್ದರಿಂದ ಅವನ ಬದುಕಿನ ಉದ್ದೇಶವೇ ಪೂರ್ಣ ಬದಲಾಗುವ ಸನ್ನಿವೇಶವೊಂದು ಜರುಗಿತು.

ದೇಶದ ಎಲ್ಲ ರಾಜ್ಯಗಳ ಟೂರಿಸಂ ಸೆಕ್ರೆಟರಿಗಳಿಗೂ ಆಹ್ವಾನವಿದ್ದು ಉಳಕೊಳ್ಳಲು ಅದೇ ಹೋಟೆಲಿನಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಇವನ ಸಾಹೇಬರು ಲೋಲುಪತೆಗೆ ಆಹ್ವಾನಿಸುವ ಯಾವೊಂದು ಅವಕಾಶವನ್ನು ಕಳಕೊಳ್ಳಲು ಇಚ್ಛಿಸದಿರುವುದರಿಂದ ಮನೆಯಿಂದ ಬರೆ ಒಂದು ಗಂಟೆಯ ಪ್ರಯಾಣದಷ್ಟು ದೂರವಿರುವ ಆ ಹೋಟೆಲಿನಲ್ಲಿ ಹಿಂದಿನ ರಾತ್ರಿಯೇ ತಮ್ಮ ವಾಸ್ತವ್ಯ ಹೂಡಿದ್ದರು. ರಾಜನಾಥ ಸಂಬಂಧ ಪಟ್ಟ ದಸ್ತಾವೇಜುಗಳು ಹಾಗೂ ಕಡತಗಳನ್ನು ಹೊಂದಿಸಿಕೊಂಡು ಮರುದಿನ ಬೆಳಿಗ್ಗೆ ಗುಡಗಾಂವ್ ತಲುಪಿದ.

ಗೋಷ್ಟಿ ಆರಂಭವಾಗಲು ಇನ್ನೂ ಸಮಯವಿದ್ದುದರಿಂದ ಲೀಲಾ ಕೆಂಪೆನ್ಸ್ಕೀ ಎಂಬ ಆ ವೈಭವೋಪೇತ ಅರಮನೆಯ ಲಾಂಜ್ ನಲ್ಲಿ ಕುಳಿತು ಯೋಜನದಷ್ಟು ಎತ್ತರಕ್ಕಿರುವ ಅದರ ಚಾವಣಿಯ ಸೊಬಗನ್ನೂ ಒಂದು ತಣ್ಣನೆಯ ಕ್ರೌರ್ಯ ಸೂಸುವ ಅಲ್ಲಿನ ವಾತಾವರಣವನ್ನೂ ಅಸಹ್ಯವಾದ ಮುಜುಗರದಿಂದ ಅನುಭವಿಸುತ್ತಿರುವಾಗ ಮೊಬೈಲು ಗುಣುಗುಟ್ಟಿತು. ಐದನೇ ಮಹಡಿಯ ರೂಂ ನಂಬ್ರ ೫೧೨ ಕ್ಕೆ ಬರಲು ಸಾಹೇಬರ ಆಣತಿಯಾಯಿತು. ರಾಜನಾಥ ಅಳುಕಿನಿಂದಲೇ ಲಿಫ್ಟ್ ಹಿಡಿದು ಐದನೇ ಮಹಡಿಗೆ ತಲುಪಿ ರೂಂ ನಂಬ್ರ ೫೧೨ರ ಕರೆಗುಂಡಿ ಒತ್ತುವಾಗ ಮುಂದಾಗುವ ಘಟನೆಯೊಂದು ತನ್ನ ಬದುಕಿನ ಗತಿಯನ್ನು ಬದಲಿಸಲಿದೆ ಎನ್ನುವ ಅರಿವು ರಾಜನಾಥನಿಗಿರಲಿಲ್ಲ.

ಬಾಗಿಲು ತೆರೆದ ಸಾಹೇಬರು ಸ್ನಾನಕ್ಕೆ ರೆಡಿಯಾಗಿದ್ದರು. ಇವನಿಗೆ ಕುಳಿತುಕೊಂಡಿರು ಎಂದು ಹೇಳಿ ತಾವು ಸ್ನಾನಕ್ಕೆ ತೆರಳಿದರು. ಆ ೫೧೨ನೇ ಕೋಣೆಗೆ ಕಾಲಿಟ್ಟ ರಾಜನಾಥನಿಗೆ ತನ್ನ ಪಾದವು ಅಲ್ಲಿ ಹಾಸಲಾಗಿದ್ದ ನೆಲಹಾಸಿನೊಳಗೆ ಎರಡಿಂಚು ಮುಳುಗಿದಂತಹ ಅನುಭವವಾಯಿತು. ಎರಡು ಭಾಗಗಳ ಆ ವಿಶಾಲವಾದ ಕೋಣೆಯನ್ನು ಒಂದು ಮೋಟುಗೋಡೆಯು ವಿಭಾಗಿಸಿತ್ತು. ಒಂದು ಕಡೆಯಲ್ಲಿ ಸೋಫಾಸೆಟ್ ಮತ್ತು ಗಾಜಿನ ಟೀಪಾಯ್ ಜೊಡಿಸಲಾಗಿದ್ದರೆ ಇನ್ನೊಂದು ಭಾಗದಲ್ಲಿ ಅಗಾಧವಾದ ಮಂಚವು ರಾಜಗಾಂಭೀರ್ಯದಿಂದ ಇಡೀ ಕೋಣೆಗೆ ಶೋಭಾಯಮಾನವಾಗಿ ಕಾಣುತಿತ್ತು. ಯಾವ ಸಿನೆಮಾದಲ್ಲಾಗಲೀ, ನಿಜ ಜೀವನದಲ್ಲಾಗಲೀ ಅಂತಹ ಮಂಚವನ್ನು ರಾಜನಾಥ ನೋಡಿರಲಿಲ್ಲ.

ಆ ಅಗಾಧವಾದ ಮಂಚದಲ್ಲಿ ಬೆಳ್ಳನೆಯ ಗರಿಗರಿಯಾದ ರಜಾಯಿ ರಾಶಿ ಬಿದ್ದಿತ್ತು. ದಪ್ಪಗಿನ ನಾಲ್ಕೈದು ತಲೆದಿಂಬುಗಳು ಅಸ್ತವ್ಯಸ್ತವಾಗಿದ್ದವು. ಹಾಸಿಗೆಯನ್ನು ಬಿಳಿ ಹೊದಿಕೆಯಿಂದ ಅಚ್ಚುಕಟ್ಟಾಗಿ ಟಕ್ ಮಾಡಲಾಗಿತ್ತು. ಆ ಮಜಬೂತಾದ ಹಾಸಿಗೆಯನ್ನು ಅಷ್ಟು ದೂರನಿಂತು ನೋಡಿದಾಗಲೇ ಅದರ ಮೃದುತ್ವವು ಮೈಗೆ ಸೋಕುವ ಅನುಭವವಾಗುತ್ತಿತ್ತು. ತನ್ನ ಎಳವೆಯಲ್ಲಿ ಚಂದಮಾಮಾದ ಕತೆಗಳಲ್ಲಿ ಓದಿದ್ದ ಹಂಸತೂಲಿಕಾತಲ್ಪವೆಂಬ ಕಲ್ಪನೆಯ ನೆನಪಾಯಿತು ರಾಜನಾಥನಿಗೆ. ಅದೆಂದರೆ ಇದೇ ಇರಬೇಕು ಎಂದು ಕೊಂಡ. ಆ ಪೊಗದಸ್ತಾದ ಹಾಸಿಗೆಯನ್ನು ನೋಡ ನೋಡುತ್ತಿದ್ದಂತೆ ರಾಜನಾಥನೊಳಗೊಂದು ಬದಲಾವಣೆಯಾಗತೊಡಗಿತು. ಕಳೆದ ಎಂಟು ವರ್ಷಗಳಿಂದ ನಿದ್ರೆಗೆಟ್ಟ ಅವನ ಕಣ್ಣುಗಳು ಮೊದಲ ಬಾರಿಗೆ ಮಿರಿಗುಟ್ಟಿ ಉರಿಯತೊಡಗಿದವು. ಕಣ್ಣೆವೆಗಳು ಭಾರವಾಗಲಾರಂಭಿಸಿದವು. ಗಲ್ಲಗಳು ಜೋಯಲಾರಂಭಿಸಿದವು. ಗಂಟಲು ಒಣಗಿತು. ನಾಲಗೆಯ ಕೆಳಗೆ ಜೊಲ್ಲು ಸೂಸಲಾರಂಭಿಸಿತು. ತಲೆ ಸಣ್ಣಗೆ ಧಿಮಿಗುಟ್ಟತೊಡಗಿತು. ಒಟ್ಟಿನಲ್ಲಿ ರಾಜನಾಥನ ಎಂಟುವರ್ಷಗಳ ನಿದ್ರೆಯು ಒಮ್ಮೆಲೆ ಕವಿಯಲಾರಂಭಿಸಿತು. ಆ ಮೃದುವಾದ ಹಾಸಿಗೆಯಲ್ಲಿ ಒಮ್ಮೆ, ಒಂದು ಕ್ಷಣಕ್ಕಾದರೂ ಸರಿ ಮೈಚೆಲ್ಲಿ ಗುಟುಕು ನಿದ್ರೆ ಮಾಡಬೇಕೆನ್ನುವ ಅದಮ್ಯ ಕಾಂಕ್ಷೆ ರಾಜನಾಥನಲ್ಲಿ ಉಕ್ಕಲಾರಂಭಿಸಿತು. ಆದರೆ ಅಷ್ಟರಲ್ಲಾಗಲೇ ಸಾಹೇಬರು ಸ್ನಾನ ಮುಗಿಸಿ ಹೊರಬಂದುದರಿಂದ ರಾಜನಾಥನ ಕಾಂಕ್ಷೆ ಈಡೇರದೇ ಅವನ ಸರ್ವಾಂಗದ ಚರ್ಮರೇಶಿಗಳಲ್ಲಿ ಹರಡಿಕೊಂಡು ಒಂದು ಅವ್ಯಕ್ತ ತವಕವನ್ನು ರಾಜನಾಥನಲ್ಲಿ ಹುಟ್ಟುಹಾಕಿತು. ನಿದ್ರೆ ಕ್ಷಣಕ್ಷಣಕ್ಕೂ ಹಣ್ಣಾಗುತ್ತಾ ತೊನೆಯತೊಡಗಿತು.

ಅಂದಿನಿಂದ ರಾಜನಾಥನ ಹಗಲು ರಾತ್ರಿಗಳೆರಡೂ ಅಸಹನೀಯವಾದವು. ಅಂತಹ ತೊನೆಯುವ ಹಣ್ಣುನಿದ್ರೆಯು ಕೂಡ ರಾಜನಾಥನ ಹಿಡಿತಕ್ಕೆ ದೊರಕಲಿಲ್ಲ. ಎದ್ದು ಕೂತಾಗೆಲ್ಲ ಮುಚ್ಚಿಕೊಳ್ಳುವ ಕಣ್ಣೆವೆಗಳು ಮಲಗಿದಾಗ ಅಂಗಾತ ತೆರೆದುಕೊಳ್ಳುತ್ತಿದ್ದವು. ಪ್ರಯತ್ನ ಪೂರ್ವಕವಾಗಿ ಕಣ್ಣುಮುಚ್ಚಿದರೂ ಪ್ರಜ್ಞೆಯು ಎಚ್ಚರವಾಗಿದ್ದು ಆಳಕ್ಕೆ ಸಾಗುವ ದಾರಿಯೇ ತಿಳಿಯದಂತಾಗಿತ್ತು ರಾಜನಾಥನಿಗೆ. ತನ್ನ ಮಂಚದ ಮೇಲಿರುವ ಆ ತೆಂಗಿನ ನಾರಿನ ಹಾಸಿಗೆಯು ಯಾವಕಾರಣಕ್ಕೂ ತನಗೆ ನಿದ್ರೆಯನ್ನೊದಗಿಸಲು ಅಸಮರ್ಥವಾಗಿರುವುದನ್ನು ರಾಜನಾಥ ಕಂಡುಕೊಂಡ. ಅಂದಿನಿಂದ ಲೀಲಾ ಕೆಂಪೆನ್ಸ್ಕೀಯ ೫೧೨ನೇ ಕೋಣೆಯಲ್ಲಿ ತನಗೆ ಅವ್ಯಕ್ತ ಸುಷುಪ್ತಿಯನ್ನು ಒದಗಿಸಿದಂತಹ ಆ ಹಾಸಿಗೆಯಂತಹ ಹಾಸಿಗೆಗಾಗಿ ರಾಜನಾಥನ ಶೋಧ ಆರಂಭವಾಯಿತು.

"ಅರೇ ಉಠೋ! ಗದ್ದಾ ಲೇನೇ ಕೇಲಿಯೇ ಆಯೇವೋ ಯಾ ಸೋನೇ ಕೇಲಿಯೇ?" ಅಂತ ಹಾಸಿಗೆ ಅಂಗಡಿಯ ಕೆಲಸದವನು ಹೀಯಾಳಿಸಿದಾಗ ರಾಜನಾಥ ಇಹಕ್ಕಿಳಿದ.
ಎದ್ದು "ಚಲೋ ಯೆ ಸಹೀ ಹೈ" ಅಂತ ಕೌಂಟರಿಗೆ ಬಂದು, ಪಾವತಿ ಮಾಡುತ್ತಿರುವಾಗ "ಡೆಲಿವರಿ ಎಲ್ಲಿಗೆ" ಎಂದು ಕೇಳಿದ ಅಂಗಡಿಯವನು.
"ಸಾಇಬಾ ಬಾದ್" ಎಂದ ರಾಜನಾಥ. ಜಮ್ನಾ ಪಾರ್ ಗೆ (ಯಮುನೆಯಾಚೆಗೆ) ತಾವು ಉಚಿತ ಡೆಲಿವರಿ ಕೊಡುವುದಿಲ್ಲವೆಂದೂ ಡೆಲಿವರಿ ಚಾರ್ಜು ೧,೨೦೦ ರೂಪಾಯಿ ಹೆಚ್ಚುವರಿ ಕೊಡಬೇಕೆಂದು ಅಂಗಡಿಯವನು ಹೇಳಿದಾಗ ರಾಜನಾಥನಿಗೆ ಸಿಟ್ಟು ಬಂತು. ಜೊತೆಗೆ ಚೌಕಾಸಿಗೇ ಅವಕಾಶವೇ ಇಲ್ಲದಿರುವುದರಿಂದ ಪೂರ್ತಾ ನಾಲ್ವತ್ತು ಸಾವಿರ ಪಾವತಿ ಮಾಡಿ ತನ್ನ ಕಿಸೆಯೂ ಬರಿದಾಗಿದ್ದು ನೆನಪಾಯಿತು. ಮನೆಯಲ್ಲಿ ಅವಳ ಬಳಿ ಹೆಚ್ಚೆಂದರೆ ಮುನ್ನೂರು ನಾನೂರು ಇರಬಹುದೇನೋ ಎಂದು ಕೊಂಡ ರಾಜನಾಥ.
ಚಲೋ ಕೋಯೀ ನಹೀಂ. ನಾನೇ ತೆಗೆದುಕೊಂಡು ಹೋಗುತ್ತೇನೆ. ಎಂದು ಟೆಂಪೋ ಮಾಡಲು ಹೊರಟ ರಾಜನಾಥ. ಚೌಕಾಸಿ ಮಾಡಿ ಟೆಂಪೋ ಬಾಡಿಗೆಯನ್ನು ೭೫೦ರಿಂದ ನಾನೂರಕ್ಕಿಳಿಸಿ ಅಂಗಡಿಯ ಬಳಿ ಕರಕೊಂಡು ಬಂದ. ಕೂಲಿಗಳನ್ನು ಕರಕೊಂಡರೆ ಇನ್ನಷ್ಟು ಖರ್ಚಾಗುವುದರಿಂದ, ಲೋಡಿಂಗ್ ಹೇಗಿದ್ದರೂ ಅಂಗಡಿಯವರಿಂದ ಮಾಡಿಸಿ, ಮನೆಯ ಬಳಿ ಯಾರಾದರೂ ಹುಡುಗರು ಸಿಕ್ಕಿದರೆ ಕರೆಯೋಣ ಎಂದುಕೊಂಡ. ಅದಾಗಲೇ ಹಾಸಿಗೆ ಪ್ಲಾಸ್ಟಿಕ್ ಹಾಳೆ ಸುತ್ತಿ ತಯಾರಿದ್ದುದರಿಂದ ಅಂಗಡಿ ಹುಡುಗರು ಟೆಂಪೋಗೆ ಲೋಡ್ ಮಾಡಿದರು. ಹಾಸಿಗೆಯ ಚೊತೆಗೆ ಒಂದು ಜೊತೆ ತಲೆ ದಿಂಬೂ ಸ್ಕೀಮಿನಲ್ಲಿ ಬರುವಂತದ್ದನ್ನೂ ಕೊಟ್ಟು ಅಂಗಡಿಯವ ಏನೋ ಕೃಪೆ ಮಾಡುತ್ತಿರುವವನಂತೆ ನಗೆಯಾಡಿದ್ದ. ತನ್ನ ಬಾಡಿದ ಮುಖದಲ್ಲಿ ಒಂಚೂರು ನಗೆ ಮೂಡಿಸದೇ ರಾಜನಾಥ ಸೇಡು ತೀರಿಸಿಕೊಂಡ.

ಏಳು ಅಡಿ ಉದ್ದ ಏಳು ಅಡಿ ಅಗಲವಿರುವ ಆ ಕಿಂಗ್ ಸೈಜ್ ಬಕ್ಕಿಂಗ್ಹಂ ಹಾಸಿಗೆ ನಿಜಕ್ಕೂ ಸಣ್ಣ ಟೆಂಪೋದಲ್ಲಿ ಹೊಗುತ್ತಿರಲಿಲ್ಲ. ದೊಡ್ಡ ಟೆಂಪೋ ಮಾಡಿದರೆ ಖರ್ಚು ಹೆಚ್ಚಾಗುವುದೆಂದು ರಿಕ್ಷಾಟೆಂಪೋದಲ್ಲಿಯೇ ಛಾವಣಿಯಲ್ಲಿ ಹೊರಿಸಿ ಭದ್ರವಾಗಿ ಕಟ್ಟಿಸಿದ್ದ ರಾಜನಾಥ. ಚಾಲಕ ಪೃಷ್ಟ ಸರಿಸಿ ಜಾಗ ಮಾಡಿಕೊಟ್ಟ ಅರ್ಧ ಸೀಟಿನಲ್ಲಿ ತನ್ನ ಅರ್ಧ ಪೃಷ್ಟವನ್ನು ಹೊಂದಿಸಿಕೊಂಡು ಕಂಕುಳಲ್ಲಿ ಕೈಚೀಲವನ್ನು ಅವಚಿ ಒಂದು ಕೈಯಿಂದ ಬಾರಿ ಬಾರಿಗೂ ಮೇಲಿದ್ದ ಹಾಸಿಗೆಯನ್ನು ಮುಟ್ಟಿ ಅದು ತನ್ನ ಸ್ಥಾನದಲ್ಲಿ ಭದ್ರವಾಗಿರುವುದನ್ನು ಖಾತ್ರಿಪಡಿಸಿಕೊಳ್ಳುತ್ತಿರುವಾಗ ಟೆಂಪೋ ಮೆಲ್ಲನೆ ದೆಹಲಿಯ ನಿಬಿಡತೆಯಲ್ಲಿ ದಾರಿಮಾಡಿಕೊಂಡು ಸಾಗತೊಡಗಿತು.

ಅನೇಕ ಹಾಸಿಗೆಯಂಗಡಿಗಳಲ್ಲಿ ಹಲವು ತರದ ಹಾಸಿಗೆಗಳನ್ನು ನೋಡಿದರೂ ತನಗೇನು ಬೇಕೆಂದು ಹೇಳಲು ರಾಜನಾಥನಿಗೆ ತಿಳಿದಿರಲಿಲ್ಲ. ಕಡೆಗೊಂದು ದಿನ ತನ್ನ ಸಾಹೇಬರು ಯಾವುದೋ ವಿಮಾನ ಪ್ರಯಾಣದ ಬಳಿಕ ತಂದ ವಿಮಾನದ ಮ್ಯಾಗಜೀನಿನನ್ನು ಸುಮ್ಮನೆ ಪುಟತಿರುವುವಾಗ ಗುಡಗಾಂವದ ಲೀಲಾ ಕೆಂಪೆನ್ಸ್ಕೀ ಪಂಚತಾರಾ ಹೋಟೇಲಿನ ಜಾಹಿರಾತು ರಾಜನಾಥನ ಕಣ್ಣಿಗೆ ಬಿತ್ತು. ಆ ಜಾಹೀರಾತಿನಲ್ಲಿ ಮತ್ತದೇ ರಾಜಗಾಂಭೀರ್ಯದ ಶೋಭಾಯಮಾನ ಬೆಳ್ಳನೆಂಯ ಹಂಸತೂಲಿಕಾತಲ್ಪವು ಪ್ರಕಟವಾಗಿತ್ತು. ಮೆಲ್ಲನೆ ಬ್ಲೇಡು ಜಾರಿಸಿ ಕತ್ತರಿಸಿ ಆ ಪುಟವನ್ನು ಜೇಬಿಗಿಳಿಸಿದ್ದ ರಾಜನಾಥ.

ಯಮುನೆಯನ್ನು ದಾಟಿ ತನ್ನ ಮನೆಯ ಬಳಿ ಬರಲು ಒಂದೂವರೆ ತಾಸು ಹಿಡಿದಿತ್ತು. ಟೆಂಪೋದಿಂದ ಇಳಿದಾಗ ಬೆನ್ನು ವಿಕಾರವಾಗಿ ನೋಯುತ್ತಿತ್ತು. ಯಾರಾದರೂ ಹುಡುಗರು ಕಾಣಿಸುತ್ತಾರೇನೂ ಎಂದು ಸುತ್ತಲೂ ನೋಡಿದ ರಾಜನಾಥ. ದಿನವೂ ಹುಡುಗರು ಕ್ರಿಕೆಟ್ ಆಡುತ್ತಾ ಗುಲ್ಲೆಬ್ಬಿಸುತ್ತಿದ್ದ ಸಾಇಬಾ ಬಾದಿನ ದೌಲತ್ನಗರದ ಗಲೀ ನಂಬ್ರ ೭ ಇಂದು ಖಾಲಿ ಹೊಡೆಯುತ್ತಿತ್ತು. ಮೇಲಾಗಿ ಗಲ್ಲಿಯ ಒಳಗೆ ತನ್ನ ಗಾಡಿ ಹೋಗದು ಎಂದು ಮೊದಲೇ ಟೆಂಪೋ ಡ್ರೈವರ್ ವರಾತ ಹಚ್ಚಿದ್ದ. ಕಟ್ಟಿದ್ದ ಹಗ್ಗಗಳನ್ನು ಬಿಚ್ಚಿ ಹಾಸಿಗೆಯನ್ನು ಇಳಿಸಿ ಟೆಂಪೋದ ಬದಿಗೆ ಒರಗಿಸಿ ನಿಲ್ಲಿಸಿದ್ದ.

ರಾಜನಾಥನ ಬೆನ್ನು ಸೆಟೆದಿತ್ತು, ಕಣ್ಣು ಉರಿಯುತ್ತಿತ್ತು, ತಲೆ ಧಿಮಿಗುಡುತ್ತಿತ್ತು, ಇದೆಲ್ಲ ಒಟ್ಟಾಗಿ ಅಸಹಾಯಕತೆ ಕಾಡುತ್ತಿತ್ತು. ಅಸಹಾಯಕತೆ ಸಿಟ್ಟಾಯಿತು. ಸಿಟ್ಟು ಹಠವಾಗಿ, "ಚಲೋ, ನೀನು ಒಂದು ಕಡೆ ಹಿಡಿ ನಾನು ಒಂದು ಕಡೆ ಹಿಡೀತಿನಿ, ಹೋಗುವ" ಎಂದು ಒಂದು ಕಡೆಯಲ್ಲಿ ಬಗ್ಗೆ ಎತ್ತಲು ಮುಂದಾದ. ಹಲವು ಲೋಹದ ಸ್ಪ್ರಿಂಗಗಳು, ಮರದ ಚೌಕಟ್ಟು ಇತ್ಯಾದಿ ಒಟ್ಟಾಗಿ ಹಾಸಿಗೆ ಅವನೆಣಿಸಿದ್ದಕ್ಕಿಂತ ಭಾರವಿತ್ತು. ಕಂಕುಳಲ್ಲಿ ಅವಚಿಕೊಂಡಿದ್ದ ಚೀಲವೂ ತೊಡಕಾಗಿ ಬಗ್ಗಿದ್ದ ಭಂಗಿಯೂ ವಕ್ರವಾಗಿತ್ತು. ಒಮ್ಮೆಲೆ ಎತ್ತಿದ್ದರಿಂದ ಸೊಂಟ ಕಳಕ್ಕೆಂದು ಹಿಡಿದುಕೊಂಡಿತು. ಒಮ್ಮೆಲೇ ಕೈ ಬಿಟ್ಟು ನಿಂತು ಕೊಂಡ ರಾಜನಾಥ. ಸೊಂಟ ಕಿತ್ತು ಹಾಕಿದಂತೆ ನೋಯುತ್ತಿತ್ತು. ಸಾವರಿಸಿಕೊಂಡು ಕೈಚೀಲವನ್ನು ಟೆಂಪೋದೊಳಗಿಟ್ಟು ಹಾಸಿಗೆಯನ್ನು ಒಂದು ಬದಿಯಲ್ಲಿ ಹಿಡಿದು ಎತ್ತಿ ಹಿಡಿದುಕೊಂಡ. ಇಬ್ಬರೂ ಆ ಬಕ್ಕಿಂಗ್ಹಂ ಕಿಂಗ್ ಸೈಜ್ ಹಾಸಿಗೆಯನ್ನು ದೌಲತ್ ನಗರದ ಗಲೀ ನಂಬ್ರ ಏಳರೊಳಕ್ಕೆ ಸಾಗಿಸಲಾರಂಭಿಸಿದರು. ರಾಜನಾಥನಿಗೆ ಹೆಜ್ಜೆ ಹೆಜ್ಜೆಗೂ ಸೊಂಟವೂ ಬೆನ್ನೂ ನೋವಿನಿಂದ ಜುಮ್ಮೆನ್ನುತ್ತಿತ್ತು. ಅಂತೂ ಇಂತೂ ಅವನ ಮನೆಯಿರುವ ಕಟ್ಟಡದ ಕೆಳಗೆ ಬಂದು ನಿಂತಾಗ ಎರಡನೇ ಮಹಡಿಗೆ ಒಯ್ಯುವುದು ತನ್ನಿಂದ ಸಾಧ್ಯವಾದೀತೇ ಎನ್ನುವ ಅಳುಕು ಕಾಡಲಾರಂಭಿಸಿತು ರಾಜನಾಥನಿಗೆ.

ಕೆಳಗಿರಿಸಿದರೆ ಮತ್ತೆ ಮೇಲಕ್ಕೆತ್ತಲೂ ಕಷ್ಟವಾದೀತು ಎಂದೆಣಿಸಿ ಹಲ್ಲುಮುಡಿ ಕಚ್ಚಿ ಸೀದಾ ಒಳಗೆ ಸಾಗಿಸಿದ. ಚಾಲಕನೂ ಹಿಂಬಾಲಿಸಿದ. ಕಟ್ಟುಮಸ್ತಾಗಿದ್ದ ಅವನು ಸಲೀಸಾಗಿ ಹೊತ್ತು ಬರುತ್ತಿದ್ದುದರಿಂದ ಅಲ್ಲಿಯೂ ಕೊಂಚ ಒತ್ತಡ ಉಂಟಾಗಿ ರಾಜನಾಥನನ್ನು ಮುಂದಕ್ಕೆ ದೂಡಿದಂತಾಗುತ್ತಿತ್ತು. ಮೆಟ್ಟಲ ಸಾಲುಗಳನ್ನು ಸಾವರಿಸಿಕೊಂಡು ಸಾಗಿಸಿದ ರಾಜನಾಥನಿಗೆ ಒಂದೊಂದು ಮೆಟ್ಟಲನ್ನೇರುವಾಗ ಸೊಂಟದಲ್ಲೊಂದು ಸಿಡಿಲು ಬಡಿದು ಕಣ್ಣುಕತ್ತಲೆಗೂಡುತ್ತಿತ್ತು. ಅಂತೂ ಇಂತೂ ಮನೆ ತಲುಪಿ ಹಾಸಿಗೆಯನ್ನು ಗೋಡೆಗೊರಗಿಸಿ ಅಲ್ಲೇ ಕುಕ್ಕರಿಸಿದ ರಾಜನಾಥ. ಸೊಂಟ ಬಲವಿಲ್ಲದಂತಾಗಿ ಕುಸಿದು ನೆಲದ ಮೇಲೇ ಅಂಗಾತ ಮಲಗಿದ. ಹೆಂಡತಿ ಆತಂಕದಿಂದ ಇವನತ್ತ ಧಾವಿಸಿ ಬರಲು, ಚಾಲಕನಿಗೆ ಬಾಡಿಗೆ ಪಾವತಿಸುವಂತೇ ಅವಳಿಗೆ ಹೇಳಿ, ಚಾಲಕನಿಗೆ ಟೆಂಪೋದೊಳಗೆ ತಾನು ಚೀಲವಿರಿಸಿದ್ದನ್ನು ಅದೇ ಕಣ್ಣುಕತ್ತಲೆಯ ಅರೆಪ್ರಜ್ಞೆಯಲ್ಲಿ ಗೊಣಗಿದ.

ಕಣ್ಣು ಮತ್ತೆ ಬೆಳಕುಗೂಡುವಾಗ ಹೆಂಡತಿ ತಣ್ಣನೆಯ ನೀರನ್ನು ತನ್ನ ಮುಖಕ್ಕೆ ಸವರುತ್ತಿದ್ದಳು. ಸೊಂಟ ಒಂದಂಗುಲ ಅಲುಗಾಡಿಸಲು ಯತ್ನಿಸಿದರೆ ಅಸಾಧ್ಯ ನೋವು ಸಿಡಿಯುತ್ತಿತ್ತು. ಚಾಲಕ ಕೈಚೀಲವನ್ನೂ, ದಿಂಬುಗಳನ್ನೂ ತಂದಿಟ್ಟು ಹೋಗಿದ್ದ. ಅಲ್ಲಿಂದೆದ್ದು ಒಳಕೋಣೆಗೆ ಹೋಗಿ ಮಲಗಿಕೊಳ್ಳುವ ತನ್ನ ಸಲಹೆಗೆ ಗಂಡ ನೋವಿನಿಂದ ನರಳುತ್ತಾ ಅಲುಗಲೂ ಹಿಂಜರಿದಾಗ ಹೆಂಡತಿ ಡಾಕ್ಟರಿಗೆ ಫೋನಾಯಿಸಿದಳು. ಆಸ್ಪತ್ರೆಗೆ ಕರೆದುಕೊಂಡು ಬರಲು ಆಣತಿಯಾಯಿತು. ಅಕ್ಕಪಕ್ಕದ ಹುಡುಗರಿಗೆ ಫೋನಾಯಿಸಿ ಕರೆಸಿಕೊಂಡು ನೋವಿನಿಂದ ನರಳುತ್ತಿರುವ ರಾಜನಾಥನನ್ನು ಹುಡುಗರು ಅವರದೇ ಅಜಾಗರೂಕತೆಯಿಂದ ಪೀಡಿಸುತ್ತಾ ಟ್ಯಾಕ್ಸಿ ಮಾಡಿ ಆಸ್ಪತ್ರೆಗೆ ಸಾಗಿಸಿದರು.

ಹತ್ತು ಹಲವು ಪರೀಕ್ಷೆಗಳು, ಎಕ್ಸರೇ ಇನ್ನಿತ್ಯಾದಿ ಕ್ರಿಯಾಕರ್ಮಗಳ ಬಳಿಕ ಫಲಿತಾಂಶ ಹಿಡಿದು ವೈದ್ಯರು ರಾಜನಾಥನ ಬಳಿ ಬಂದರು. "ಪ್ರೊಲ್ಯಾಪ್ಸಡ್ ಲುಂಬರ್ ಇಂಟರ್ವರ್ಟೆಬ್ರಲ್ ಡಿಸ್ಕ್" ಆಗಿದೆ, ಬೆನ್ನು ಮೂಳೆಯ ಮೇಲೇ ಅತೀವ ಒತ್ತಡ ಬಿದ್ದುದರಿಂದ ಅಲ್ಲಿನ ಡಿಸ್ಕ್ ಹೊರಬಂದು ಮೆದುಳುಬಳ್ಳಿಯನ್ನು ಕುಟ್ಟುತ್ತಿದೆ. ಎಂದೇನೋ ಹೇಳಿದ್ದು ರಾಜನಾಥನಿಗೆ ಸರಿಯಾಗಿ ಅರ್ಥವಾಗಲಿಲ್ಲ. "ಕಾಲುಗಳಿಗೆ ಮರಳು ಚೀಲ ಕಟ್ಟಿ ತೂಗಾಡಿಸಿದರೆ ಕೊಂಚ ವಾಸಿಯಾಗಬಹುದು. ಇಲ್ಲವೇ ಆಪರೇಶನ್ ಮಾಡಬೇಕು. ಆದರೆ ಎರಡರಲ್ಲೂ ಈ ಸಮಸ್ಯೆಗೆ ಸಂಪೂರ್ಣ ಪರಿಹಾರ ದೊರಕುವುದಿಲ್ಲ. ನೋವು ಒಮ್ಮೆ ವಾಸಿಯಾದಂತೆ ಕಂಡರೂ ಮತ್ತೆ ಮತ್ತೆ ಮರಳಿ ಜೀವಮಾನವಿಡೀ ತೊಂದರೆ ಕೊಡಬಹುದು." ಎಂದರು ಡಾಕ್ಟರು.

"ಇನ್ನು ನೀವು ಸ್ವಲ್ಪ ಜಾಗ್ರತೆ ವಹಿಸಬೇಕು, ಭಾರ ಎತ್ತಲು ಹೋಗಬೇಡಿ. ಇನ್ನು ಮುಂದೆ ಹಾಸಿಗೆಯ ಮೇಲೆ ಮಲಗಲೇಬೇಡಿ, ನೆಲದ ಮೇಲೆ ಜಮಖಾನೆ ಹಾಸಿ ಮಲಗಿದರೆ ನೋವು ಪುನಹ ಬರದಂತೆ ನಿಯಂತ್ರಿಸಬಹುದು......" ಎಂದೆಲ್ಲಾ ಡಾಕ್ಟರು ಪರಿಹಾರಗಳನ್ನು ಸೂಚಿಸುತ್ತಿದ್ದಾಗ ಸಫ್ದರ್ ಜಂಗ್ ಆಸ್ಪತ್ರೆಯ ರೂಂ ನಂಬ್ರ ೩೨೧ರ ಕಬ್ಬಿಣದ ಮಂಚಕ್ಕೆ ಅಳವಡಿಸಲಾಗಿದ್ದ ಆರ್ಥೋ ಪ್ಲಾಂಕ್ ಎಂಬ ಮರದ ಹಲಗೆಯ ಮೇಲೆ ಪವಡಿಸಿದ್ದ ರಾಜನಾಥನಿಗೆ, ಕಳೆದ ಎಂಟುವರ್ಷಗಳಿಂದ ನಿದ್ರಾಹೀನತೆಗೆ ಕಾರಣವಾಗಿದ್ದ ಪ್ರಜ್ಞೆಯು ಅನಾಥವಾದಂತೆ ಭವಿಸಿ ನಿದ್ರೆಯೆಂಬ ಕೃಷ್ಣರಂಧ್ರದೊಳಕ್ಕೆ ಆಯ ತಪ್ಪಿ ಬಿದ್ದು ಆಳಕ್ಕೆ ಜಾರಲಾರಂಭಿಸಿತು.

0 comments:

ಕಾಮೆಂಟ್‌‌ ಪೋಸ್ಟ್‌ ಮಾಡಿ