ಜನವರಿ 16, 2009

ಹಿಂದೂಸ್ತಾನಿ ಸಂಗೀತ ನನಗೆ ಯಾಕೆ ಮೆಚ್ಚು ?


ನನ್ನ ಚಿಕ್ಕಂದಿನಿಂದ ನನ್ನ ಕಿವಿಗೆ ಬೀಳುತ್ತಿದ್ದ ಸಂಗೀತ ಹಿಂದೂಸ್ತಾನಿ ಮೂಲದ್ದಾಗಿರುವುದು ಒಂದು ಪ್ರಮುಖ ಕಾರಣ. ಕೊಂಕಣಿಗಳ ದೇವಸ್ಥಾನಗಳಲ್ಲಿ ನಡೆಯುವ ಭಜನಾ ಸಪ್ತಾಹಗಳಲ್ಲಿ ಹಾಡುವ ಭಜನೆಗಳು ಉತ್ತರಾದಿ ಪ್ರಕಾರವೇ. ಮರಾಠಿ ಅಭಂಗಗಳು, ಪುರಂದರದಾಸರ ಕೀರ್ತನೆಗಳು ಇವೆಲ್ಲ ಹೆಚ್ಚು ಪ್ರಚಲಿತ. ಕರ್ನಾಟಕ ಸಂಗೀತ ಕಡಿಮೆ. (ಹಾಗೆಂದು ಕೊಂಕಣಿಗಳಿಗೆ ಕರ್ನಾಟಕ ಸಂಗೀತದ ಬಗ್ಗೆ ಒಲವಿಲ್ಲವೆಂದಲ್ಲ. ಕರ್ನಾಟಕ ಸಂಗೀತದ ದಿಗ್ಗಜರಲ್ಲಿ ಒಬ್ಬರಾದ ಬಿಡಾರಂ ಕೃಷ್ಣಪ್ಪ ಕೊಂಕಣಿ ಮನೆ ಮಾತಿನವರು.)

ಒಂದು ಹಂತದಲ್ಲಿ ಕ್ಯಾಸೆಟ್ ಪ್ಲೇಯರ್ ಜನಪ್ರಿಯವಾಗತೊಡಗಿದಾಗಲೋ ನಮ್ಮ ಮನೆಯಲ್ಲಿ ಹೆಚ್ಚು ಚಾಲ್ತಿಯಲ್ಲಿದ್ದದ್ದು ಭೀಮಸೇನ ಜೋಷಿ, ಲತಾ ಮಂಗೇಶ್ಕರ್.. ಇತ್ಯಾದಿ ಮರಾಠಿ ಅಭಂಗಗಳೇ. ಬಹುಶ ಸಾಹಿತ್ಯ ಪ್ರಧಾನವಾಗಿರುವ ಭಜನ್ ಪ್ರಕಾರದಲ್ಲಿ ನನ್ನ ತಂದೆ ತಾಯಿಗೆ ಕೊಂಕಣಿಗೆ ಹತ್ತಿರವಾಗಿರುವ ಮರಾಠಿ ಹೆಚ್ಚು ಅರ್ಥವಾಗುತ್ತಿದ್ದದ್ದು ಇದಕ್ಕೆ ಕಾರಣ ಇರಬಹುದು. ಜೊತೆಗೆ ಭಾವ ಸಂಗಮ, ಮೈಸೂರು ಮಲ್ಲಿಗೆ, ಕನ್ನಡ ಹಿಂದಿ ಚಿತ್ರ ಗೀತೆಗಳು ಇತ್ಯಾದಿ.

ಒಂದು ಹಂತದ ಬಳಿಕ ನನ್ನ ಕಾಲೇಜು ದಿನಗಳಲ್ಲಿ ನಾನು ಕೇಳತೊಡಗಿದ ಇಂಗ್ಲಿಶ್ ಪಾಪ್ ಗಾನಗಳಲ್ಲೂ ನನಗೆ ಒಂದು ರೀತಿಯ ಮೃದು ಸಂಗೀತವೆ ಹೆಚ್ಚು ಮೆಚ್ಚಾಯಿತು. ಫಿಲ್ ಕಾಲಿನ್ಸ್, ಜಾರ್ಜ್ ಮೈಕಲ್ ಮುಂತಾದವರು. ಬಳಿಕ ಮೆಲ್ಲನೆ ಜಗಜಿತ್ ಸಿಂಗ್, ಗುಲಾಂ ಅಲಿ, ಮೆಹದಿ ಹಸನ್, ಮುಖೇಶ್, ಲತಾ, ರಫಿ, ಪಿ.ಬಿ.ಎಸ್, ಎಸ್. ಜಾನಕಿ ಇತ್ಯಾದಿ. ಜೊತೆಗೆ ಸಿ ಎಸ್. ಅಶ್ವಥ್, ಮೈಸೂರು ಅನಂತಸ್ವಾಮಿ, ಶಿವಮೊಗ್ಗ ಸುಬ್ಬಣ್ಣ...

ಈ ಹಂತದಲ್ಲಿರುವಾಗಲೇ ಒಂದು ಸಲ ಒಂದು ಶುದ್ಧ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ರಾತ್ರಿಯಿಡೀ ಕೇಳುವ ಅವಕಾಶ ಸಿಕ್ಕಿತು. ವಿವಿಧ ಸಮಯಕ್ಕೆ ಸಂಬಂಧಿಸಿ ವಿವಿಧ ರಾಗಗಳು. ಇದೊಂದು ನನ್ನ ಬದುಕಿನ ಒಂದು ಸಣ್ಣ ತಿರುವು.

ಶಬ್ದ ಮತ್ತು ಅರ್ಥಗಳ ತಾಕಲಾಟವನ್ನೂ ಮೀರಿದ ಅನುಭೂತಿ ನನಗೆ ಆ ರಾತ್ರಿ ದೊರೆಯಿತು. ಲಯ ಮತ್ತು ಸ್ವರ ಮಾತ್ರ. ಒಂದು ವಿಚಿತ್ರ ಸಾಂತ್ವನ. ತೀವ್ರ ಬಾಯರಿದವನಿಗೆ ಹದವಾದ ತಣ್ಣೀರು ದೊರೆತಂತೆ.

ಅದರಲ್ಲೂ ಬೆಳಗಿನ ಜಾವ "ರಮೇಶ್ ನಾರಾಯಣ್" ಎಂಬ ಜಸರಾಜರ ಶಿಷ್ಯ "ಬೈರಾಗಿ ಭೈರವ" ರಾಗದ ಮೂಲಕ ನನ್ನ ಸಂಗೀತ ಆಸ್ವಾದನೆಯ ಉತ್ತುಂಗವನ್ನು ದೊರಕಿಸಿಕೊಟ್ಟರು.

ಇವತ್ತಿಗೂ ನಾನು ಸಂಗೀತದಲ್ಲಿ ಸಾಹಿತ್ಯ ಹುಡುಕುತ್ತೇನೆ ಆದರೆ ಸಾಹಿತ್ಯವನ್ನು ಮೀರಿದ ಶುಧ್ಧ ಸಂಗೀತಕ್ಕೆ ನನ್ನ ಒಲವು ಹೆಚ್ಚು. ಸಾಹಿತ್ಯ ಪ್ರಧಾನವಾದ ಟುಮ್ರಿ, ಕಜರಿ, ಹೋರಿ, ಭಜನ್ ಮುಂತಾದ ಹಲವು ಪ್ರಕಾರಗಳು ಹಿಂದುಸ್ತಾನಿಯಲ್ಲಿ ಇವೆ. ನಮ್ಮ ವಚನಗಳ ಸಾಗರವೇ ಇದೆ. ಅದನ್ನು ನಾನು ಆಲಿಸುತ್ತೇನೆ. ಕರ್ನಾಟಕ ಸಂಗೀತ ನಾನು ಆಸ್ವಾದಿಸುತ್ತೇನೆ. ಆದರೆ ನನಗೆ ಸಾಂತ್ವನ ನೀಡುವುದು ಹಿಂದೂಸ್ತಾನಿಯ ಖಯಾಲ್ ಪ್ರಕಾರ.

ಒಂದು ರಾಗದೊಳಗೆ ಹಂತ ಹಂತವಾಗಿ ಇಳಿಯುತ್ತ ಹಾಡುಗಾರ ಮಾಂತ್ರಿಕ ಸಂಚಾರಗಳನ್ನು ಹೊರತರುತ್ತಾನೆ. ಇದು ಒಂದು ರೀತಿಯಲ್ಲಿ ಅಪೌರುಷೇಯ. ಹಾಡುಗಾರ ಇಲ್ಲಿ ಒಂದು ಸಾಧನ ಮಾತ್ರ. ಅವನ ಒಳಗೆ ನಡೆಯುವ ಸಂಗೀತದ ಮಂಥನದಲ್ಲಿ ಹೊರಬರುವ ಸಂಚಾರಗಳು ಅನಿರ್ವಚನೀಯ. ಒಂದು ರಾಗದೊಳಗಿನ ಎಲ್ಲ ಸ್ಥಾಪಿತ ಸ್ವರಗಳ ಗೋಡೆ ತಡಕಾಡಿ ಎಲ್ಲೋ ಒಂದು ಪುಟ್ಟ ತೆರವು ಸಿಕ್ಕೊಡನೆ ಅದರಾಚೆ ನುಸುಳಿ ಅವ್ಯಕ್ತವಾದ ಸಾಧ್ಯತೆಯೊಂದನ್ನು ಮೀಟಿ ಹೊರಟ ಸಂಚಾರದಲ್ಲಿ ತಲ್ಲಣ ನಿರ್ಮಾಣ. ಜೊತೆಗೆ ಶ್ರೋತೃಗಳಲ್ಲಿ ರೋಮಾಂಚನ. ಕೈಯೆತ್ತಿ ವಾಹ ವಾಹಗಳು, ಉದ್ಗಾರಗಳು. ಇವೆಲ್ಲ ಹೊರನಿಂತು ನೋಡಿದಾಗ ನಾಟಕೀಯವೆನಿಸಿದರೂ ಆ ಟ್ರಾನ್ಸ್ ಹೊಕ್ಕಾಗ ಮಾತ್ರ ನಿಜ ಅನುಭೂತಿ.

ನನಗೆ ರಾಗಗಳ ಸ್ಪಷ್ಟ ಪರಿಚಯ ಆಗುವುದಿಲ್ಲ. ಹಾಡುಗಾರ ತೊಡಗಿದೊಡನೆ ಹೆಚ್ಚಿನವರ ಮೊದಲ ಪ್ರಯತ್ನ ಅವನು ಶುರು ಹಚ್ಚಲಿರುವ ರಾಗದ ಹೆಸರು ಯಾವುದೆನ್ನುವ ಶೋಧ. ಹೆಚ್ಚಿನವರು ಅದನ್ನು ಗುರುತಿಸಲು ಶಕ್ಯರು. ನಾನು ಕಲಿಕೆಯಲ್ಲಿ ಹಿಂದೆ. ನೆನಪು ಕೂಡ ಕಮ್ಮಿ. ಆದರೆ ಆ ಸಂಗೀತದೊಳಗೆ ಮುಳುಗಲು ಬೇಕಾದ ಭಾವ ಲಹರಿ ನನ್ನಲ್ಲಿದೆ ಎನ್ನುವುದೊಂದೇ ನನ್ನ ಸಂತೋಷ.

ಲಂಕೇಶರ ಒಂದು ಮಾತು ನೆನಪಾಗುತ್ತದೆ. ಒಂದು ಪುಸ್ತಕವನ್ನು ಓದುವಾಗ ನಿಮಗೆ "ಅದನ್ನು ಓದಲು ನೀವು ವ್ಯಯಿಸಿದ ಸಮಯದಲ್ಲಿ ಬೇರೇನನ್ನಾದರೂ ಮಾಡುತ್ತಿದ್ದಿದ್ದರೆ ಅದು ಆ ಪುಸ್ತಕ ಓದಿದಷ್ಟು ಸಾರ್ಥಕ ವಾಗುತ್ತಿರಲಿಲ್ಲ" ಎಂದು ಆ ಪುಸ್ತಕ ಓದಿದ ಬಳಿಕ ಅನಿಸಿದರೆ ಅದು ಒಂದು ಒಳ್ಳೆಯ ಪುಸ್ತಕ. ಅಂತ ಅವರು ಬರೆದಿದ್ದರು. ಇದು ಯಾವ ವಿಷಯಕ್ಕೂ ಅನ್ವಯವಾಗಲು ಸಾಧ್ಯ.

ನನಗೂ ಮಲ್ಲಿಕಾರ್ಜುನ ಮನ್ಸೂರ್ ರ ಜೇನು ಒಸರು, ಜಸರಾಜರ ಜಲಪಾತದ ಭೋರ್ಗರೆತ, ಭೀಮಸೇನರ ಕದಲಿಸುವ ಆಗ್ರಹ, ಬಸವರಾಜರ ಲಾಲಿತ್ಯ, ಇವೆಲ್ಲ ನಾನು ಆಲಿಸದಿರುತ್ತಿದ್ದಿದ್ದರೆ ನನ್ನ ಆ ಸಮಯವೂ ಅಷ್ಟು ಸಾರ್ಥಕವಾಗುತ್ತಿರಲಿಲ್ಲ ಎಂದು ಅನಿಸಿದ್ದಿದೆ. ಈಗಲೂ ಅನಿಸುತ್ತದೆ.

0 comments:

ಕಾಮೆಂಟ್‌‌ ಪೋಸ್ಟ್‌ ಮಾಡಿ