ನವೆಂಬರ್ 14, 2008

"ಜಮ್ನಾ ಪಾರ್" ನ ಬೆತ್ತಲೆ ಅಂಗಡಿ

ಯಮುನೆಯ ಮೇಲೆ ಇಂಗ್ಲಿಷರು ಕಟ್ಟಿದ ಎರಡು ಮಜಲಿನ ಲೋಹದ ಸೇತುವೆಯನ್ನು ದಾಟಿ ದೆಹಲಿಯ "ಜಮುನಾ ಪಾರ್" ಹೋದಾಗ ಗಾಂಧಿ ನಗರದ ಸಂದುಗೊಂದಿನ ಮಾರುಕಟ್ಟೆ. ದೆಹಲಿ ಸರಕಾರ ತಂದಿರುವ "ಲಾಡಲೀ" ಯೋಜನೆಯನ್ನು ಪ್ರದರ್ಶಿನಿಯಲ್ಲಿ ರೂಪಿಸಲು ನನಗೆ ಬೇಕಾಗಿದ್ದ ಮ್ಯನೆಕಿನ್ ಗಳ ಹುಡುಕಾಟ ನನ್ನನ್ನು ಇಲ್ಲಿಗೆ ತಂದಿತ್ತು. ಗಾಂಧಿ ನಗರದ ಉದ್ದುದ್ದುಕ್ಕಿದ್ದ ಆ ರಸ್ತೆಯ, ಅರ್ಧ ದಾರಿಗಿಂತಲೂ ಮಿಗಿಲಾದ ಮೇಲೆ ರಾಶಿ ರಾಶಿ ಮ್ಯನೆಕಿನ್ ಗಳ ಅಂಗಾಂಗಗಳನ್ನು ನೇತಾಡಿಸಿದ್ದ ಆ ಸಾಲು ಅಂಗಡಿಗಳು ನನಗೆ ಚಾಂದನಿ ಚೌಕದ ಸಾಲು ಕಸಾಯಿ ಅಂಗಡಿಗಳನ್ನು ನೆನಪಿಸಿದ್ದು ತಮಾಷೆಯಲ್ಲ. 

ದೊಡ್ದದೆನಿಸುವ ಒಂದು ಅಂಗಡಿಗೆ ಹೊಕ್ಕೆ. 

ಬೆತ್ತಲೆ ಸಾಗರವದು. ಬಟ್ಟೆ ಹಾಕಿಕೊಂಡಿದ್ದ ಸೇಲ್ಸ್ ಮ್ಯಾನ್ ಗಳನ್ನು ಬಿಟ್ಟರೆ ಬೇರೆಲ್ಲವೂ ಬೆತ್ತಲೆ. ಚೂಪು ಮೊಲೆಗಳ ಬೆತ್ತಲೆ ಹೆಣ್ಣು ಮ್ಯನೆಕಿನ್ ಗಳನ್ನೂ, ಎಂಟು ಕಟ್ಟಿನ (eight pax) ಸೌಷ್ಟವದ, ಮುಷ್ಟಿ ವೃಷಣದ ಗಂಡು ಮ್ಯನೆಕಿನ್ಗಳನ್ನು ದಿಟ್ಟಿಸಿ ನೋಡಲು ಮುಜುಗರವೆನಿಸಿದರೂ ಅವು ನಿಜಕ್ಕೂ ಸುಂದರವಾಗಿದ್ದವು. ಸಣ್ಣ ಮಗುವಿನ ಆಕೃತಿಯಿಂದ ಹಿಡಿದು ಪೂರ್ಣ ಯುವಕ ಯುವತಿಯರವರೆಗೆ ಮ್ಯನೆಕಿನ್ ಗಳು ಅಲ್ಲಿದ್ದವು. ಮುದುಕರದ್ದು ಇರಲಿಲ್ಲ ಎನ್ನುವುದು ಈ ವಾಕ್ಯವನ್ನು ಬರೆಯುವಾಗಷ್ಟೇ ನನ್ನ ಯೋಚನೆಗೆ ಹೊಳೆದಿದ್ದು. ಬಳಸುಕಟ್ಟಿಗೆ ತಕ್ಕಂತೆ ಹಲವು ನಮೂನೆಯ ಮ್ಯನೆಕಿನ್ ಗಳು. ರುಂಡವಿಲ್ಲದ, ಕೈಗಳಿಲ್ಲದ, ಸೊಂಟದವರೆಗಿನ, ರುಂಡ ಮಾತ್ರದ, ಕುಳಿತ, ನಿಂತ, ಕೊಚ್ಚೆ ನಗುವಿನ, ನಗದ, .... 

ಒಮ್ಮೆ ಕಣ್ಣು ಹಾಯಿಸಿದೆ. ಮಾನವ ಸಮುದಾಯದ ಅತಿ ಸುಂದರ ಕಾಯಗಳ ಸಮಾವೇಶವದು. ಆ ಸುಂದರ ಹೆಣ್ಣು ಕಾಯಗಳನ್ನು ದಿಟ್ಟಿಸುವಾಗ ಬಳಿ ನಿಂತ ಗಂಡು ದೇಹ ನನ್ನ ದೇಹದ ಬಗ್ಗೆ ಕೊರಗೆನಿಸುವಷ್ಟು ಸುಂದರವಾಗಿದ್ದುದು ಅಸೂಯೆ ಹುಟ್ಟಿಸುತ್ತಿತ್ತು. ಆದರೂ ಅವೆಲ್ಲವೂ ಮಾರಿಕೊಳ್ಳಲು ನಿಂತ ದೇಹಗಳು, ಆ ಸುಂದರ ಹೆಣ್ಣು ಕಾಯವನ್ನು ನಾನು ಕೊಂಡುಕೊಂಡರೂ ಆ ಗಂಡು ದೇಹ ಹಾಗೇ ಮುಂದಿನ ಗೋಡೆಯನ್ನು ದಿಟ್ಟಿಸುವುದನ್ನು ಬಿಟ್ಟು ಬೇರೇನೂ ಮಾಡುವುದಿಲ್ಲ ಎಂದುಕೊಳ್ಳುತ್ತ ನನ್ನ ಕೀಳರಿಮೆಯ ಬಗ್ಗೆ ನನಗೆ ಮುಜುಗರವಾಯಿತು ಮತ್ತು ಈ ಮುಜುಗರ ಸಹಿತ ನನ್ನ ಇಡೀ ಯೋಚನಾ ಲಹರಿಯ ಬಗ್ಗೆ ನಗು ಬಂತು. 

ಬಗೆ ಬಗೆಯ ಮುಖ ಚಿಹ್ನೆಗಳು. ಹಾಗೇ ಒಂದೊಂದನ್ನೇ ನೋಡುತ್ತಾ ನನ್ನ ಹುಡುಕಾಟವನ್ನು ಮುಂದುವರಿಸಿದೆ. ಅರೆ ಈ ಎಲ್ಲ ಮುಖಗಳನ್ನು ನಾನು ನೋಡಿದ್ದೆನಲ್ಲ!. ಅಲ್ಲಿರುವ ಎಲ್ಲ ಮುಖಗಳನ್ನೂ ನಾನು ಪೆನ್ತಲೂನ್ ನಲ್ಲಿಯೋ, ದೆಹಲಿ ಮತ್ತು ಗುಡ್ ಗಾಂವ್ ದ, ಅತ್ಯಾಧುನಿಕ ಮಾಲ್ ಗಳಲ್ಲೋ ಹೆಚ್ಚೇಕೆ ಬಂಟ್ವಾಳದ ಸೋಮಯಾಜಿಯವರ ಬಟ್ಟೆಯನ್ಗಡಿಯಲ್ಲೋ ನೋಡಿದ್ದೇನೆ ಅನ್ನುವುದು ಖಚಿತ. ಅದೂ ಮತ್ತೆ ಮತ್ತೆ ನೋಡಿದ ಮುಖಗಳವು. ಅರೆ ನೀವೇನು ಇಲ್ಲಿ ಎನ್ನುವಷ್ಟು ಪರಿಚಿತ. 

ಹೆಣ್ಣು ಮಗುವಿನ ಸಣ್ಣ ಕಾಯದಿಂದ ಹಿಡಿದು ವಿವಿಧ ವಯೋಮಾನದ ಆರು ಕಾಯಗಳನ್ನು ನಾನು ಆಯ್ದು ಕೊಂಡೆ. ಪೂರ್ಣ ಗಾತ್ರದ ಹೆಣ್ಣು ಕಾಯಕ್ಕೆ ಕೊಂಚ ತಗ್ಗಿದ ಮೊಲೆಗಳ ನಾಡ ಬೊಂಬೆಯನ್ನೇ ಆಯ್ಕೆ ಮಾಡಿಕೊಂಡೆ. ಪ್ರದರ್ಶಿನಿಯಲ್ಲಿ ಫ್ಯಾಶನ್ ಪೆರೇಡ್ ಅಲ್ಲವಲ್ಲ. 

ಅವೆಲ್ಲ ಮ್ಯನೆಕಿನ್ ಗಳ ಮೈ ಬಣ್ಣವನ್ನೂ, ಕೂದಲ ಹಾಗು ಕಣ್ಣುಮಣಿಗಳ ಬಣ್ಣವನ್ನೂ ನಾಡ ಬಣ್ಣಕ್ಕೆ ಹೊಂದುವಂತೆ ಮಾಡಲು ಹೇಳಿ ಕೊಂಚ ಮುಂಗಡ ಕೊಟ್ಟು ಹೊರಬಂದಾಗ ಆ ಇಕ್ಕಟ್ಟಾದ ರಸ್ತೆಯಲ್ಲಿ ಕಾರನ್ನು ತಿರುಗಿಸಲು ನನ್ನ ಚಾಲಕ ಹೆಣಗುತ್ತಿದ್ದ. ಎಲ್ಲಿ ಕಾರಿಗೆ ಗಾಯವಾಗುತ್ತೋ ಎನ್ನುವ ಆತಂಕದಿಂದಲೇ ಗಾಂಧೀ ನಗರವನ್ನು ಸವೆಸಿ ಮತ್ತೆ ಹಳೆಕಾಲದ ಲೋಹದ ಸೇತುವೆಗೆ ಬಂದಾಗ ಮೇಲಿನ ಮಜಲಿನಲ್ಲಿ ರೈಲು ಹೋಗುತ್ತಿತ್ತು.