ಅಕ್ಟೋಬರ್ 31, 2008

ಕ್ಯಥೊಲಿಕರು ಮತ್ತು ಗೌಡ ಸಾರಸ್ವತರು

ಮಂಗಳೂರಿನ ಹೆಚ್ಚಿನ ಕ್ಯಥೊಲಿಕರು ಗೌಡ ಸಾರಸ್ವತ ಕೊಂಕಣಿಗಳ ಹಾಗೆ ಗೋವಾದಿಂದ ಬಂದು ನೆಲೆ ನಿಂತವರು. ಅವರಲ್ಲಿ ಹೆಚ್ಚಿನವರು ಅದೇ ಕೊಂಕಣಿಗಳ ರಕ್ತದವರೇ. ಕ್ಯಥೊಲಿಕರು ತಮ್ಮನ್ನು ತಾವು "ಕ್ರಿಸ್ತಾಂವ್" ಎಂದು ಕರೆದು ಕೊಂಡರೆ ಗೌಡ ಸಾರಸ್ವತರನ್ನು "ಕೊಂಕ್ನೆ" ಅಥವಾ "ಕೊಂಕಣ" ಎಂದು ಕರೆಯುವರು.  

ಕೊಂಕಣಿಗಳು ಪೋರ್ತುಗೀಸರ ಉಪಟಳದ ಕಾರಣ ಓಡಿ ಬಂದು ಕರಾವಳಿ ಕರ್ನಾಟಕ ಮತ್ತು ಕೇರಳದಲ್ಲಿ ನೆಲೆ ನಿಂತು ನೆಮ್ಮದಿಯನ್ನು ಕಂಡರೆ, ಅದೇ ಪೋರ್ತುಗೀಸರಿಂದ ಮತಾಂತರಗೊಂಡು ಕ್ಯಥೊಲಿಕರಾದ ಅವರ ದಾಯಾದಿಗಳು ನಂತರದ ದಿನಗಳಲ್ಲಿ ಎರಡು ಹಂತಗಳಲ್ಲಿ ವಲಸೆ ಬರಬೇಕಾಯಿತು.  

ಮೊದಲನೆಯದು, ಮತಾಂತರಗೊಂಡವರನ್ನು ಪೋರ್ತುಗೀಸರು ಸಂಶಯದಿಂದ ನೋಡಿ ಅವರ ಆಚಾರ ವಿಚಾರ ಉಡುಗೆ ತೊಡುಗೆಗಳ ಮೇಲೆ ಪ್ರತಿಬಂಧ ಹೇರಿ ಕಿರುಕುಳ ಕೊಟ್ಟಾಗ, ಎರಡನೆಯದು ಮರಾಠರು ತಮ್ಮ ಗೋವ ದಂಡಯಾತ್ರೆಯ ಸಮಯದಲ್ಲಿ ಈ ಕ್ಯಥೊಲಿಕರ ಮೇಲೆ ವಿಕೃತ ಹಿಂಸಾಚಾರವನ್ನು ಕೈಗೊಂಡಾಗ.  

ಅವರು ಮಂಗಳೂರಿನತ್ತ ವಲಸೆ ಬಂದರೂ ಅವರ ಬವಣೆ ನಿಲ್ಲಲಿಲ್ಲ. ಕ್ಯಥೊಲಿಕರು ಪೋರ್ತುಗೀಸರ ಪರವೆಂದು ಟಿಪ್ಪು ನಡೆಸಿದ ಎಥ್ನಿಕ್ ಕ್ಲಿಯೇನ್ಸಿಂಗ್ ನಲ್ಲಿ ಸಾವಿರಾರು ಕ್ಯಥೊಲಿಕರನ್ನು ಶ್ರೀರಂಗ ಪಟ್ಟಣಕ್ಕೆ ಕಾಲು ನಡಿಗೆಯಲ್ಲಿ ಒಯ್ದ ಗಾಥೆ ಮತ್ತು ತದನಂತರದ ಹಿಂಸಾಚಾರ ಕ್ಯಥೊಲಿಕರ ಪೀಳಿಗೆ ಮರೆತಿಲ್ಲ. ಹಾಗೆ ಶ್ರೀರಂಗ ಪಟ್ಟಣಕ್ಕೆ ಒಯ್ದು ಹೆಂಗಸರನ್ನು ಟಿಪ್ಪುವಿನ ಸೈನಿಕರು ಭೋಗಿಸಿ, ಮಕ್ಕಳನ್ನು ಯುವಕರನ್ನು ಇಸ್ಲಾಂ ಧರ್ಮಕ್ಕೆ ಮತಾಂತರಿಸಿದರೂ ಟಿಪ್ಪು ಸತ್ತ ಮೇಲೆ ಮರಳಿ ಬಂದ ಇವರು ದಿಕ್ಕು ತೋಚದೆ ಕೊಡಗಿನಲ್ಲಿ ನೆಲೆ ನಿಂತರು. ಇವತ್ತಿಗೂ ವಿರಾಜ ಪೇಟೆಯ ಬಳಿ ಇರುವ ಹಲವು ಮುಸಲ್ಮಾನರಲ್ಲಿ ಆ ಗೋವಾದ ಸಾರಸ್ವತ ಕೊಂಕಣಿಗಳ ವಂಶ ವಾಹಿಗಳು ಇರಬಹುದು. (ಅಲನ್ ಮಚಾದೋ ಪ್ರಭು ಬರೆದ "ಸರಸ್ವತೀಸ್ ಚಿಲ್ಡ್ರನ್" ನಲ್ಲಿ ಈ ಗಾಥೆಯನ್ನು ಓದಬಹುದು)  ಗೋವಾದಿಂದ ವಿರಾಜ ಪೇಟೆಯವರಿಗಿನ ಬವಣೆ ಒಂದೇ ಪೀಳಿಗೆಯಲ್ಲಿ ಆಗದಿದ್ದರೂ ಇತಿಹಾಸದ ೩೦೦ ವರ್ಷಗಳು ಬಹಳ ದೀರ್ಘವಲ್ಲ. ಆದರೆ ಆ ಮುನ್ನೂರು ವರ್ಷಗಳಲ್ಲಿ ಕ್ಯಥೊಲಿಕರು ಅವರದೇ ವಿಶಿಷ್ಟ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಿದ್ದಾರೆ.  

ಇಂದಿಗೂ ಸಾರಸ್ವತ ಕೊಂಕಣಿಗಳಿಗೆ ಕ್ಯಥೊಲಿಕರ ಮೇಲೆ ಸಾಫ್ಟ್ ಕಾರ್ನರ್ ಇದೆ. ಉಳಿದ ಜಾತಿಗಳಿಗಿಂತ ಹೆಚ್ಚು ಅವರ ಬಗ್ಗೆ ಒಂದು ಸಣ್ಣಗೆ ತುಡಿಯುವ ಪ್ರೀತಿ ಇದೆ. ಬಹುಶ ಒಬ್ಬ ಕೊಂಕಣಿಯಾಗಿ ನಾನು ಕ್ಯತೋಲಿಕನಿಂದ ಇದೇ ಪ್ರೀತಿಯನ್ನು ಅಪೇಕ್ಷೆ ಪಡುವುದು ಎಷ್ಟು ಸಾಧು ಎನ್ನುವುದು ನನಗೆ ತಿಳಿಯುತ್ತಿಲ್ಲ.  

ಪೋರ್ತುಗೀಸರು ಧರ್ಮ ನಿಷ್ಠರಾದ ಸಾರಸ್ವತರನ್ನು ಮತಾಂತರಿಸಲು ಬಹಳ ಕಷ್ಟ ಪಟ್ಟಿದ್ದರು. ಕೊನೆಗೆ ಅವರು ಜಯಗಳಿಸಿದ್ದು ಭೇಧೋಪಾಯದಲ್ಲಿ. ಸಾರಸ್ವತರ ಇದೇ ಧರ್ಮ ನಿಷ್ಟತೆ ಅವರಿಗೆ ಮುಳುವಾಯಿತು. ಮತಾಂತರಿಗಳು ಒಬ್ಬ ಸಾರಸ್ವತನ ಬಾಯಿಗೆ ಬಲವಂತದಿಂದ ಗೋಮಾಂಸವನ್ನು ತುರುಕಿದಾಗ ಅವನ ಇಡೀ ಕುಟುಂಬವನ್ನೇ ಬಹಿಷ್ಕರಿಸಿದ ಸಾರಸ್ವತ ಸಮಾಜ ಅಂದು ಮಾಡಿದ್ದು "ಸ್ವಜನ ವಿಶ್ವಾಸಘಾತ" ಆ ಕುಟುಂಬ ಅನುಭವಿಸಿರಬಹುದಾದ ಒಂಟಿತನ, ನೋವು, ಅವಮಾನ, ಅಸಹಾಯಕತೆ ನನ್ನಲ್ಲಿ ತಲ್ಲಣ ಉಂಟು ಮಾಡುತ್ತದೆ. ನನ್ನ ಇಡಿ ಬರಹ ಮತ್ತೆ ಜಾಗೃತವಾಗಿರುವ ಸ್ವಜನ ಪ್ರೇಮದಂತೆ ಭಾಸವಾಗುತ್ತಿದೆ. 

ಆದರೆ ಇದೇ ಸ್ವಜನ ಪ್ರೇಮ ಧರ್ಮದ ಅಂತರವನ್ನು ಮರೆಸಿದರೂ ಸಾಕು.

ಲಲಿತಮ್ಮನ ಉಪ್ಪಿನಕಾಯಿ ಮತ್ತು ಬ್ರಾಂಡ್ ಮ್ಯಾನೆಜ್ಮೆಂಟ್

ರಂಗಪ್ಪಂದು ಗೂಡಂಗಡಿ. ಮಿಟಾಯಿ, ಕಡಲೇಕಾಯಿ, ನಶ್ಯ ಇತ್ಯಾದಿಗಳನ್ನೂ ಮಾರಿ ಉಳಿಯುವ ಕೊಂಚ ಲಾಭದಲ್ಲಿ ಖರ್ಚು ತೂಗಿಸಿಕೊಂಡು ನಾಜೂಕಾಗಿ ಬದುಕು ಸಾಗಿಸುವ ಸಜ್ಜನ. ಪುಟ್ಟದೊಂದು ಮನೆ, ಮಡದಿ ಇಷ್ಟೇ ಅವನ ಸಂಸಾರ.

ಹೀಗೆ ಬದುಕು ಸಾಗುತ್ತಿರುವಾಗ ಒಂದು ಸಂಜೆ ರಂಗಪ್ಪ ಮನೆಗೆ ಮರಳುತ್ತಿರಬೇಕಾದರೆ ದಾರಿಯಲ್ಲಿ ಒಬ್ಬಳು ಮುದುಕಿ ಎಚ್ಚರ ತಪ್ಪಿ ಬಿದ್ದಿರುವುದನ್ನು ನೋಡಿ, ಬಳಿ ಹೋಗಿ ಆರೈಕೆ ಮಾಡುತ್ತಾನೆ. ಅವಳು ಒಬ್ಬಳು ಮಕ್ಕಳಿಲ್ಲದ ವಿಧವೆ ಅಂತ ತಿಳಿದು ಬರುತ್ತದೆ. ಹಾಗೆ ದಾರಿಯಲ್ಲಿ ಬಿಟ್ಟು ಹೋಗಲು ಮನಸ್ಸು ಬಾರದೆ ಮನೆಗೆ ಕರಕೊಂಡು ಬಂದು ಊಟ ನೀಡುತ್ತಾನೆ. ಅವನ ಹೆಂಡತಿಗೂ ಮುದುಕಿ ಬಗ್ಗೆ ಕನಿಕರ ಮೂಡುತ್ತದೆ. ಹಾಗೆ ಗಂಡ ಹೆಂಡತಿ ಇಬ್ಬರೂ ಮುದುಕಿಯನ್ನು ಮನೆಯಲ್ಲೇ ಉಳಿಸಿಕೊಳ್ಳಲು ನಿರ್ಧರಿಸುತ್ತಾರೆ.
ಮುದುಕಿ ಲಲಿತಮ್ಮ ಅಚ್ಚುಕಟ್ಟಿನ ಹೆಂಗಸು. ಸುಮ್ಮನೆ ಕುಳಿತುಕೊಳ್ಳದೆ ಅದು ಇದು ಮನೆಕೆಲಸದಲ್ಲಿ ರಂಗಪ್ಪನ ಹೆಂಡತಿಗೆ ಸಹಾಯ ಮಾಡುತ್ತಾ, ಹೊಸ ಅಡುಗೆ ಕಲಿಸುತ್ತಾ ಅವರ ಮನ ಗೆಲ್ಲುತ್ತಾಳೆ.

ಒಂದು ದಿನ ರಂಗಪ್ಪನ ಪುಟ್ಟ ಆದಾಯಕ್ಕೆ ಕತ್ತರಿ ಬೀಳುತ್ತದೆ. ಅವನ ಗೂಡಂಗಡಿ ಮುನಿಸಿಪಾಲಿಟಿಯ ಕಾನೂನಿನಿಂದ ಎತ್ತಂಗಡಿಯಾಗಿ ರಂಗಪ್ಪ ಬೇಸರದಿಂದ ಮನೆಗೆ ಬರುತ್ತಾನೆ.
ಲಲಿತಮ್ಮನಿಗೂ ಇದನ್ನು ಕೇಳಿ ಬೇಸರವಾಗುತ್ತದೆ. ಆದರೂ ಅವಳು ರಂಗಪ್ಪನನ್ನು ಸಂತೈಸಿ "ತನಗೆ ಹಲವು ತರದ ಉಪ್ಪಿನಕಾಯಿ ಮಾಡಲು ತಿಳಿಯುತ್ತದೆ. ಸಾಮಾನು ತಂದರೆ ತಾನು ಉಪ್ಪಿನಕಾಯಿ ಮಾಡಿ ಕೊಡುತ್ತೇನೆ. ಅದನ್ನು ಮನೆಗಳಿಗೆ, ಆಫಿಸುಗಳಿಗೆ ಕೊಂಡು ಹೋದರೆ ಗಿರಾಕಿ ಸಿಗಬಹುದು" ಎಂದು ಉಪಾಯ ಹೇಳುತ್ತಾಳೆ.

ಲಲಿತಮ್ಮ ಮಾಡಿಕೊಟ್ಟ ಉಪ್ಪಿನಕಾಯಿ ನಾಲ್ಕು ಕಡೆ ಹೋಗುವುದರಲ್ಲಿ ಮಾರಾಟವಾಗಿ ರಂಗಪ್ಪನಲ್ಲಿ ಹುರುಪು ಮೂಡಿಸುತ್ತದೆ. ಮತ್ತಷ್ಟು ಸಾಮಾನು ಕೊಂಡುಕೊಂಡು ಮನೆಗೆ ಮರಳಿದ ರಂಗಪ್ಪನ ಹುರುಪಿನಿಂದ ಲಲಿತಮ್ಮನಿಗೂ ಖುಷಿಯಾಗುತ್ತದೆ. ತನಗೆ ಹಲವು ಬಗೆಯ ಉಪ್ಪಿನಕಾಯಿ, ಕೂಟು, ತೊಕ್ಕು, ಚಟ್ನಿ ಪುಡಿ ಇತ್ಯಾದಿಗಳು ಕರಗತವಾಗಿದ್ದು ಇದಕ್ಕೆಲ್ಲ ಒಳ್ಳೆಯ ಬೇಡಿಕೆ ಇರಬಹುದು ಎನ್ನುತ್ತಾಳೆ. ಹಾಗೆ ಆಗಲೆಂದು ರಂಗಪ್ಪ ಬೇಕಾದ ಸಾಮಾನುಗಳನ್ನು ತಂದು ಕೊಡುತ್ತಾನೆ. ರಂಗಪ್ಪನ ಹೆಂಡತಿಯೂ ಉತ್ಸಾಹದಿಂದ ಕೆಲಸದಲ್ಲಿ ಪಾಲ್ಗೊಳ್ಳುತ್ತಾಳೆ.

ಹೀಗೆ ಲಲಿತಮ್ಮನ ಉಪ್ಪಿನಕಾಯಿ ಕೆಲದಿನಗಳಲ್ಲೇ ಹೆಸರುವಾಸಿಯಾಗಿ ರಂಗಪ್ಪನ ವ್ಯಾಪಾರ ಬಿರುಸಾಗುತ್ತದೆ. ವಿವಿಧ ತರದ ಉಪ್ಪಿನಕಾಯಿಗಳನ್ನು ಬಾಟಲಿಗಳಲ್ಲಿ ಹಾಕಿ "ಲಲಿತಮ್ಮನ ಉಪ್ಪಿನಕಾಯಿ - ಎಳೆ ಲಿಂಬೆ." "ಲಲಿತಮ್ಮನ ಉಪ್ಪಿನಕಾಯಿ- ಮಾವಿನ ಮಿಡಿ" ಇತ್ಯಾದಿ ಚೀಟಿಗಳನ್ನು ಅಂಟಿಸಿ ಗುರುತಿಸಲು ಸುಲಭವಾಗುವಂತೆ ವಿಂಗಡಿಸಿದ ಉಪ್ಪಿನಕಾಯಿಗಳು ಮನೆಮಾತಾಗುತ್ತವೆ. ಗೂಡಂಗಡಿ ವ್ಯಾಪಾರಕ್ಕಿಂತ ಹೆಚ್ಚು ಹಣ ಹುಟ್ಟಿ ರಂಗಪ್ಪನ ಬದುಕು ಸುಧಾರಿಸುತ್ತದೆ.

ಹೀಗೆ ಸಾಗುತ್ತಿರುವಾಗ ಒಂದು ದಿನ ಲಲಿತಮ್ಮ ಕಾಯಿಲೆ ಬಿದ್ದು ಸತ್ತು ಹೋಗುತ್ತಾಳೆ. ರಂಗಪ್ಪ ಇನ್ನೇನು ಮಾಡಲಿ ಎಂದು ಚಿಂತೆ ಮಾಡುತ್ತಿರುವಾಗ ಹೆಂಡತಿ, ತಾನು ಲಲಿತಮ್ಮನಿಂದ ಎಲ್ಲವನ್ನು ಕಲಿತುಕೊಂಡಿದ್ದೆನೆಂದು ಹೇಳಿ ಸಂತೈಸುತ್ತಾಳೆ. ಹೀಗೆ ಲಲಿತಮ್ಮ ಸತ್ತರೂ ಯಾವುದೇ ಅಡಚಣೆಯಿಲ್ಲದೆ ರಂಗಪ್ಪನ ವ್ಯಾಪಾರ ಸಾಗುತ್ತದೆ. ಲಲಿತಮ್ಮನ ಉಪ್ಪಿನಕಾಯಿ ದಿನದಿನಕ್ಕೆ ಹೆಚ್ಚು ಹೆಚ್ಚು ಹೆಸರುವಾಸಿಯಾಗುತ್ತದೆ.

ಒಂದು ಕೆಟ್ಟ ಗಳಿಗೆಯಲ್ಲಿ ರಂಗಪ್ಪನ ಹೆಂಡತಿಯ ಮನದಲ್ಲಿ ಒಂದು ಯೋಚನೆ ಮೂಡುತ್ತದೆ. ಕೆಲಸ ಮಾಡುವುದು ತಾನು, ಕಷ್ಟ ಪಡುವುದು ತಾನು ತನ್ನ ಗಂಡ, ಹಣ ಹೂಡಿದ್ದು ತಾವು, ಇನ್ನು ಲಲಿತಮ್ಮನೂ ಈಗಿಲ್ಲ ಅಂದ ಮೇಲೆ ಲಲಿತಮ್ಮನ ಹೆಸರೇಕೆ. ಗಂಡನ ಬಳಿಯಲ್ಲೂ ಈ ಯೋಚನೆ ಹಂಚಿಕೊಳ್ಳುತ್ತಾಳೆ. ಅವನಿಗೂ ಅಹುದೆಂದು ತೋರುತ್ತದೆ. ಎಲ್ಲ ಬಾಟಲಿಗಳಿಂದ ಹಳೆ ಚೀಟಿಗಳನ್ನು ಕಿತ್ತು "ರಂಗಪ್ಪನ ಉಪ್ಪಿನಕಾಯಿ" ಎಂಬ ಹೊಸ ಚೀಟಿಗಳನ್ನು ಅಂಟಿಸುತ್ತಾರೆ.

ಆದರೆ ಜನರು ಮತ್ತೆ ಮತ್ತೆ ಲಲಿತಮ್ಮನ ಉಪ್ಪಿನಕಾಯಿಯನ್ನೇ ಕೇಳುತ್ತಾರೆಯೇ ವಿನಃ ರಂಗಪ್ಪನ ಉಪ್ಪಿನಕಾಯಿ ಬಾಟಲುಗಳು ಖರ್ಚಾಗದೆ ಉಳಿದು ಹೋಗುತ್ತದೆ. ಅದೇ ಇದು ಎಂದು ರಂಗಪ್ಪ ಎಷ್ಟು ವಿವರಿಸಿದರೂ ಜನರು ನಂಬುವುದಿಲ್ಲ. ಹಾಗೆ ನಂಬಿ ಖರೀದಿಸಿದವರೂ ಮರುದಿನ ಇದು ಬೇರೇನೆ, ಅದೇ ಬೇಕು ಅಂತಾರೆ.

ಹೀಗೆ ದಿನದಿನಕ್ಕೆ ರಂಗಪ್ಪನ ವ್ಯಾಪಾರ ಸೊರಗುತ್ತದೆ.

ಇದು ನಾನು ಚಿಕ್ಕಂದಿನಲ್ಲಿ ಚಂದಮಾಮದಲ್ಲಿ ಓದಿದ ಕತೆ. ಇದು ಇಂದು "ಬ್ರಾಂಡ್ ಮ್ಯಾನೇಜ್ಮೆಂಟ್" ವಿಷಯವಾಗಿ ಉಲ್ಲೇಖಿಸಬಹುದಾದ ಒಂದು ಪಾಠ.

ಭಾರತದಲ್ಲಿ ಕೆಲ್ವಿನೆಟರ್ ಅಂತ ತಂಪು ಪೆಟ್ಟಿಗೆ ಮಾಡುತ್ತಿದ್ದ ಕಂಪನಿಯನ್ನು ವರ್ಲ್ ಪೂಲ್ ನವರು ಖರೀದಿಸಿದರು. ಆದರೆ ಕೆಲ್ವಿನೆಟರ್ ಬ್ರಾಂಡ್ ಅನ್ನು ನೀವು ಬಳಸುವಂತಿಲ್ಲ ಅಂತ ಕೆಲ್ವಿನೆಟರ್ ಬ್ರಾಂಡಿನ ಒಡೆಯರಾದ ಸ್ವೀಡನ್ನಿನ ಎಲೆಕ್ಟ್ರೋಲಕ್ಸ್ ತಡೆದು, ಭಾರತದ ಇನ್ನೊಂದು ಕಂಪೆನಿಯನ್ನು ಕೊಂಡು, ಕೆಲ್ವಿನೆಟರ್ ಹೆಸರಿನಿಂದಲೇ ತಂಪು ಪೆಟ್ಟಿಗೆ ಮಾರಾಟಕ್ಕೆ ತಂದಿತು.

ದೇಶದಾದ್ಯಂತ ತಂಪು ಪೆಟ್ಟಿಗೆ ಮಾರಾಟದನ್ಗಡಿಗಲ್ಲಿ ಹೀಗೊಂದು ದ್ರಶ್ಯ ನಿರ್ಮಾಣವಾಯಿತು.

ಗ್ರಾಹಕಿ: " ಕೆಲ್ವಿನೆಟರ್ ಫ್ರಿಜ್ ತೋರಿಸಿ"
ವರ್ತಕ: "ನೋಡಿ ಇದು ಕೆಲ್ವಿನೆಟರ್ ಆದರೆ ಇದರ ಹೆಸರು ಈಗ ಬದಲಾಗಿ ವರ್ಲ್ ಪೂಲ್ ಆಗಿದೆ"
ಗ್ರಾಹಕಿ: "ಆದರೆ ಅಲ್ಲಿ ಕೆಲ್ವಿನೆಟರ್ ಇದೆಯಲ್ಲ"
ವರ್ತಕ: "ಮೇಡಂ ಅದು ಕೆಲ್ವಿನೆಟರ್ ಬ್ರಾಂಡ್ ಮಾತ್ರ, ಅಸಲಿ ಕೆಲ್ವಿನೆಟರ್ ಇದು"
ಗ್ರಾಹಕಿ: "ಅಂದರೆ ಅದು ನಕಲಿಯೇ?"
ವರ್ತಕ: "ಅಲ್ಲಲ್ಲ ನಕಲಿಯಲ್ಲ ಅದೂ ಅಸಲಿಯೇ. ಆದರೆ ಅದು ಬೇರೆ, ಹೆಸರು ಮಾತ್ರ ಕೆಲ್ವಿನೆಟರ್"
ಗ್ರಾಹಕಿ: "ನಾನೂ ಕೆಲ್ವಿನೆಟರ್ ನ್ನೇ ಕೇಳಿದ್ದು ನೀವು ಯಾವುದೊ ಬೇರೆ ತೋರಿಸ್ತಾ ಇದ್ದೀರಿ"
ವರ್ತಕ: "ಸರಿಯಮ್ಮ ನಿಮಗೇನು ಬೇಕೋ ಅದನ್ನು ತೆಕ್ಕೊಳ್ಳಿ."

ಚಂದಮಾಮ ಕತೆಗಳು ಹಲವು ಪೀಳಿಗೆಗಳ ಬೆಳವಣಿಗೆಯಲ್ಲಿ ಪೂರಕವಾಗಿವೆ. ಲಲಿತಮ್ಮನ ಉಪ್ಪಿನಕಾಯಿ ಕತೆಯಂತೆ ಇನ್ನೂ ಹಲವಾರು ಕತೆಗಳು ನಮ್ಮ ಮ್ಯಾನೇಜ್ಮೆಂಟ್ ಕಮ್ಮಟಗಳಲ್ಲಿ ಬಳಸಬಹುದಾದ ಸರಳ ಸೂತ್ರಗಳನ್ನು ಹೊಂದಿವೆ.

ಬ್ಯಾರಿಗಳು, ಅಂಗಡಿ ಕೊಂಕಣಿಗಳು ಮತ್ತು ನಾಪತ್ತೆಟ್ ಚಿಕುಪುಕು

ಬ್ಯಾರಿ ಎನ್ನುವ ಶಬ್ದ ಬ್ಯಾರ ಅಥವಾ ವ್ಯಾಪಾರದಿಂದ ಬಂದಿದ್ದು. ಇವತ್ತಿಗೂ ನಮ್ಮ ಜಿಲ್ಲೆಯ ಎಷ್ಟೋ ವ್ಯಾಪಾರಗಳನ್ನು ಅವರೇ ಮಾಡಬೇಕೇನೋ ಅನ್ನುವಷ್ಟರ ಮಟ್ಟಿಗೆ ನಿಯತ್ತಿನಿಂದ ಮಾಡಿಕೊಂಡು ಬಂದಿರುವ ಅವರ ಮೇಲೆ ಎಲ್ಲರಿಗೂ ಅಷ್ಟೆ ನಿಯತ್ತಿನ ನಂಬಿಕೆ. ಅದು ಅವರ ಕಸುಬುಗಾರಿಕೆಯ ಮೇಲೆ ನಮಗಿರುವ ವಿಶ್ವಾಸ. ಅವರು ಮಾರುವ ಮೀನೇ ಹೆಚ್ಚು ಫ್ರೆಶ್ ಆಗಿರುತ್ತದೆ ಎಂದು ನಾವು ನಂಬುತ್ತೇವೆ. ಅಂದ ಮಾತ್ರಕ್ಕೆ ಅವರು ಅಷ್ಟಕ್ಕೆ ಸೀಮಿತವಾಗಿಲ್ಲ.

ಅವರು ಮಾತನಾಡುವ ಬ್ಯಾರಿ ಭಾಷೆ ಕಡಲಿನ ಸುವಾಸನೆಯ ಸೊಗಡು ಉಳ್ಳದ್ದು. ಕಿವಿಗೆ ಬೀಳುವಾಗ ಮಲಯಾಳದ ಚಿಕ್ಕ ತಂಗಿಯಂತೆ ಕಂಡರೂ ಅದಕ್ಕೆ ಅದರದೇ ಆದ ವೈಯಕ್ತಿಕ ನೆಲೆಯಿದೆ. ಹೆಚ್ಚಿನ ಶಬ್ದಗಳು ಮಲಯಾಳದ ದಟ್ಟ ಛಾಯೆ ಹೊಂದಿದ್ದರೂ, ತುಳು, ಕನ್ನಡ, ಉರ್ದು ಭಾಷೆಗಳ ಅನೇಕ ಶಬ್ದಗಳನ್ನು ಅದು ಒಳಗೊಂಡಿದೆ.

ಕನ್ನಡ ಲಿಪಿಯಿಂದ ಬ್ಯಾರಿ ಬಾಸೆಯಲ್ಲಿ ಬರೆಯುವ ಹೊಸ ಪೀಳಿಗೆಯ ಕವಿ, ಕತೆಗಾರರೂ ನಮ್ಮಲ್ಲಿದ್ದಾರೆ. ಬ್ಯಾರಿ ಪಾಟ್ ಎನ್ನುವ ಹೊಸ ಕಾವ್ಯ ಪ್ರಕಾರವೊಂದನ್ನು ಹುಟ್ಟು ಹಾಕಿರುವ ಈ ಕವಿಗಳು ಉತ್ಸಾಹಿಗಳೊಂದಿಗೆ ಕೂಡಿ ಅದಕ್ಕೆ ಸಂಗೀತ ಹೊಂದಿಸಿ ಅಸಂಖ್ಯಾತ ಧ್ವನಿ ಸುರುಳಿಗಳನ್ನೂ ಹೊರ ತಂದಿದ್ದಾರೆ.

ಕೆಲವೊಂದು ಜೋಕುಗಳನ್ನು ಬ್ಯಾರಿ ಬಾಸೆಯಲ್ಲಿ ಹೇಳಿದರೆನೆ ಚೆನ್ನ. ಹಾಗೆ ನೆನಪಾದ ಒಂದು ಜೋಕು ಇಲ್ಲಿದೆ.
ಬಡ ಬ್ಯಾರಿಯೊಬ್ಬ ಮಗಳ ಮಾಡುವೆ ಮಾಡಬೇಕು. ಗಡದ್ದಾಗಬೇಕು ಎನ್ನುವುದು ಗಂಡಿನ ಕಡೆಯವರ ಮಾತ್ರವಲ್ಲ ಇವನದೂ ಹಂಬಲ. ನಾಕು ಜನ ಕಾಣೋ ಹಾಗೆ ಫೋಟೋ ಗಿಟೋ ಎಲ್ಲ ಆಗಬೇಕು. ಫೋಟೋಗ್ರಾಫರ್ ನನ್ನು ಕರೆದು ಹೇಳುತ್ತಾನೆ:
"ಇದಾ! ಫೋಟ ಆವೋನು." (ಇಗಾ!ಫೋಟೋ ಆಗಬೇಕು) "ಎತ್ತರೆ ಫೋಟ ಎಡ್ತೊಣು?" (ಎಷ್ಟು ಫೋಟೋ ತೆಗೀಬೇಕು?)
"ಜಂಡ್ ಫೋಟ, ನಾಪತ್ತೆಟ್ ಚಿಕುಪುಕು" (ಎರಡು ಫೋಟೋ ನಾಲ್ವತ್ತೆಂಟು ಚಿಕುಪುಕು-ಅಂದರೆ ಫ್ಲಾಶು)

ಬ್ಯಾರಿಗಳಿಗೂ, ಅಂಗಡಿ ಕೊಂಕಣಿಗಳಿಗೂ ಅದೇನೋ ಅವಿನಾಭಾವ ಸಂಬಂಧ. ಒಂದು ವಿಚಿತ್ರ ಸಾಮ್ಯ ಈ ಎರಡು ಪಂಗಡಗಳಿಗೂ ನಮ್ಮ ಜಿಲ್ಲೆಯಲ್ಲಿ ಎದ್ದು ಕಾಣುತ್ತದೆ. ದಕ್ಷಿಣ ಕನ್ನಡದ ಹೆಚ್ಚಿನ ಊರುಗಳಲ್ಲಿ ಕೊಂಕಣಿಗಳದ್ದು ಒಂದು ಪೇಟೆ, ಬ್ಯಾರಿಗಳದ್ದು ಒಂದು ಪೇಟೆ. ಎಕ್ಸ್ ಕ್ಲೂಸಿವ್ ಆಗಿ ಇವೆರಡು ಪೇಟೆಗಳಲ್ಲಿ ಅವರವರೆ ಇರುವುದು. ಬ್ಯಾರಿಗಳು ಬ್ಯಾರಿಗಳೆಂದು ಬೇರೆಯೇ ಇದ್ದರೆ, ಕೊಂಕಣಿಗಳು ಹೊರಗಿನಿಂದ ಬಂದು ನೆಲೆ ನಿಂತವರು. ಹಾಗೇ ನೆಲೆ ನಿಂತಲ್ಲಿಯೇ ಪೇಟೆ ಬೆಳೆಸಿದವರು.

ಈ ಅಂಗಡಿ ಕೊಂಕಣಿಗಳಿಗೆ ಕೆಲಸಕ್ಕೆ ಬ್ಯಾರಿಗಳೇ ಆಗಬೇಕು. ಇವರೂ ಅಷ್ಟೆ! ದಣಿ, ದಣಿ ಎನ್ನುತ್ತಾ ಅಬ್ರೋನಿ (ಒಂದು ಜಾತಿಯ ನದಿನೀರಿನ ಮೀನು) ಮೀನು ಹಿಡಿದು ಸೀದಾ ಅಂಗಡಿ ಕೊಂಕಣಿಗೆ ಮಾರಬೇಕು. ಅಂಗಡಿ ಕೊಂಕಣಿಗಳು ನಿರರ್ಗಳ ಬ್ಯಾರಿ ಬಾಸೆ ಮಾತನಾಡುತ್ತಾರೆ. ಇವರೂ ಅಷ್ಟೆ! ಹಕ್ಕಿನಿಂದ ಎಂಬಂತೆ ಅವರ ಬಳಿ
ಬ್ಯಾರಿ ಬಾಸೆಯೇ ಮಾತನಾಡುವುದು. ಹಾಗೆಂದು ಈ ಅಂಗಡಿ ಕೊಂಕಣಿಗಳ ಪುಟ್ಟ ಮಕ್ಕಳು ಸಿಕ್ಕಿದರೆ, ಅವರ ಬಳಿ ಅಷ್ಟೆ ನಿರರ್ಗಳ ಕೊಂಕಣಿಯಲ್ಲಿ ಬ್ಯಾರಿಗಳು ಮಾತನಾಡುತ್ತಾರೆ.

ಯಾವುದೇ ಅಪಾಯಕ್ಕೆದುರಾಗಿ ವ್ಯವಹಾರ ಮಾಡುವ ಗಟ್ಟಿ ಗುಂಡಿಗೆ ಬ್ಯಾರಿಗಳಲ್ಲಿ ಹೆಚ್ಚು. ಹಾಗಾಗಿ ಅವರಲ್ಲಿ ಒಮ್ಮೆಗೇ ಹಣವಂತರಾಗುವವರೂ ಒಮ್ಮೆಗೇ ದಿವಾಲಿಯಾಗುವವರೂ ಹೆಚ್ಚು. ಹಾಗೆಂದು ಸೋತು ಸುಣ್ಣವಾಗುವವರು ಅವರಲ್ಲ. ಕಡಲ ಚಿಪ್ಪು ಬೇಯಿಸಿ ಸುಣ್ಣ ಮಾಡುವುದೂ ಗೊತ್ತು. ರಸ್ತೆ ಬದಿ ಕೂತು ಮೀನು ಮಾರುವುದೂ ಗೊತ್ತು. ಕಡಲಿಗೆ ನುಗ್ಗಿ ಬಲೆ ಬೀಸಲೂ ಗೊತ್ತು. ಕಾಡಿಗೆ ನುಗ್ಗಿ ಮರ ಕಡಿಯಲೂ ಗೊತ್ತು. ಯಾವುದಕ್ಕೂ ಅಂಜಿಕೆ ಅಳುಕು ಇವರಲ್ಲಿಲ್ಲ. ಇವರ ಡಿಗ್ನಿಟಿ ಅಪ್ ಲೇಬರ್ ಪ್ರಜ್ಞೆ ಮೆಚ್ಚುವಂತದ್ದು.

ಬ್ಲಾಗ್ ಪ್ರಪಂಚದಲ್ಲಿ ಕೆಲವು ಬರಹಗಳನ್ನು ಬ್ಯಾರಿಗಳ ಬಗ್ಗೆ ಕಂಡೆ. ಅದರ ಕೊಂಡಿಗಳು ಇಲ್ಲಿವೆ. ಓದಿ ಆನಂದಿಸಿ.

ಸುರಗಿ ಬರೆಯುವ ಮೌನ ಕಣಿವೆಯಲ್ಲಿ "ಬಳೆಗಾರ ಚೆನ್ನಯ್ಯನಂತಹ ಬ್ಯಾರಿಗಳು"
http://mounakanive.blogspot.com/2008/09/blog-post_24.html

ರಶೀದ್ ಬರೆಯುವ ಮೈಸೂರು ಪೋಸ್ಟ್ ನಲ್ಲಿ "ರಾಮಚಂದ್ರ ಭಟ್ಟರೂ ಕುಂಞಪ್ಪ ಬ್ಯಾರಿಗಳೂ"
http://mysorepost.wordpress.com/2007/04/30/bhattaroo-bearygaloo/

ರಶೀದ್ ಬರೆಯುವ ಮೈಸೂರು ಪೋಸ್ಟ್ ನಲ್ಲಿ "ತೀರಿ ಹೋಗಿರುವ ಸೂಫಿ ಬ್ಯಾರಿಯವರ ಕುರಿತು"
http://mysorepost.wordpress.com/2007/05/26/sufi-beary/

ಫಕೀರ್ ಬರೆಯುವ "ರಮಜಾನಿನ ನೆನಪುಗಳು"
http://www.kendasampige.com/article.php?id=1450

ಜಾಯಿರೆ ಜಾಯಿ: ಕೊಂಕಣಿ ಜೋಗುಳ

ಜಾಯೀರೆ ಜಾಯಿ ಕರೀನ ಬಬ್ಬಾ ತುಕ್ಕಾ
ಜೋಯೀರೆ ಜೋಯೀ ಕರೀನ
(ಜಾಯಿ ಎಂದರೆ ಬೇಕು ಎಂದರ್ಥ: ಜೋಯಿ ಎಂದರೆ ಜೋಗುಳ)
(ಮಗುವೆ ನೀನು ನನಗೆ ಬೇಕು, ನಿನಗೆ ಬೇಕಾದದ್ದನ್ನು ನಾನು ಕೊಡುವೆ ಎಂಬ ಭಾವಾರ್ಥದಲ್ಲಿ)

ಬಬ್ಬಾಲೋ ಆನು ಯೆತ್ತಲೋ, ಬಬ್ಬಾಕ
ಖೆಳ್ಚಾಕ "ಬೊಂಬೆ" ಹಾಡ್ತಲೋ
(ಮಗುವೆ ನಿನ್ನ ತಂದೆ ಬರುವರು, ಮತ್ತು ನಿನಗೆ ಆಡಲು ಆಟಿಕೆ ತರುವರು)
(ಇಲ್ಲಿ ಬೊಂಬೆಯ ಬದಲಾಗಿ ಮಗುವಿಗೆ ಇಷ್ಟವಾಗಿ ತಂದೆ ತರುವ ಯಾವುದೇ ಆಟಿಕೆ ಅಥವಾ ಸಾಮಾನು)

ಜಾಯಿರೆ ಜಾಯಿ ಕರೀನ ಬಬ್ಬಾ ತುಕ್ಕಾ
ಜೋಯೀರೆ ಜೋಯೀ ಕರೀನ

ಬಬ್ಬಾಲಿ ಅಮ್ಮ ಯೆತ್ತಲೀ ಬಬ್ಬಾಕ
ಖಾವ್ಚಾಕ "ಮೀಥಾಯಿ" ಹಾಡ್ತಲೀ
(ಮಗುವೆ ನಿನ್ನ ತಾಯಿ ಬರುವಳು ಮತ್ತು ನಿನಗೆ ತಿನ್ನಲು ಮಿಥಾಯಿ ತರುವಳು)

ಜಾಯಿರೆ ಜಾಯಿ ಕರೀನ ಬಬ್ಬಾ ತುಕ್ಕಾ
ಜೋಯೀರೆ ಜೋಯೀ ಕರೀನ

ಹೀಗೆ ತಂದೆ ತಾಯಿ, ಮಾಮ, ಅಜ್ಜ, ಅಜ್ಜಿ ಬರುತ್ತಾರೆ ಮತ್ತು ಮಗುವೆ ನಿನಗಿಷ್ಟದ ಎಲ್ಲವನ್ನೂ ತರುತ್ತಾರೆ ಎನ್ನುತ್ತಾ ಮಗುವಿಗೆ ನಿದ್ರೆ ಬರುವ ವರೆಗೆ ಜೋಗುಳ ಮುಂದುವರೆಯುತ್ತದೆ.

ಈ ಜೋಗುಳ ನನ್ನ ಚಿಕ್ಕಂದಿನಲ್ಲಿ ನನ್ನ ತಾಯಿ ಹಾಡುತ್ತಿದ್ದ ನನಗೆ ಪ್ರಿಯವಾದ ಜೋಗುಳವಾಗಿತ್ತು. ಇದನ್ನು ನಾನು ನನ್ನ ಮಗುವನ್ನು ಮಲಗಿಸುವಾಗ ಹಾಡುತ್ತಿದ್ದೇನೆ. ಇದು ಅವನಿಗೂ ಬಹಳ ಇಷ್ಟ. ಮತ್ತೆ ಮತ್ತೆ "ಜಾಯಿರೆ ಜಾಯಿ ಮಣ" (ಜಾಯಿರೆ ಜಾಯಿ ಹೇಳು) ಎಂದು ಹೇಳುತ್ತಾನೆ.

ಬಹಶ ತನ್ನನ್ನು ಮುದ್ದುಗರೆಯುವ ತನಗೆ ಪ್ರಿಯರಾದ ವ್ಯಕ್ತಿಗಳು ಬರುವುದು ಮತ್ತು ಬರುವಾಗ ತನಗೆ ಏನನ್ನಾದರೂ ತರುವುದು ಎನ್ನುವ ಕಲ್ಪನೆ ಮಗುವಿಗಷ್ಟೇ ಅಲ್ಲ ಎಲ್ಲರಿಗೂ ಮೆಚ್ಚಿನ ಸಂಗತಿ. ಈ ಅಂಶವೇ ಈ ಜೋಗುಳದ ಆಕರ್ಷಣೆಗೆ ಕಾರಣ ಇರಬಹುದು.