ಜೂನ್ 28, 2009

ಇದ್ದಿಲ ಚೂರು ಮತ್ತು ಮಂತ್ರದಂಡ

ನಗರಗಳನ್ನು ವಿನ್ಯಾಸಗೊಳಿಸುವುದು ಹೇಗೆ ಎಂಬ ವಿಷಯದಲ್ಲಿ ಉನ್ನತ ವ್ಯಾಸಾಂಗ ಕೈಗೊಂಡು ಅಮೇರಿಕಾದ ಬಾಸ್ಟನ್ ನಗರದಿಂದ ಮರಳಿ ಬಂದಿದ್ದ ಮೋಹನದಾಸನಿಗೆ ವಿನ್ಯಾಸಗೊಳಿಸಲು ನಗರಗಳೇ ಇರಲಿಲ್ಲ. ತಾನು ಈ ಎರಡು ವರ್ಷಗಳ ವ್ಯಾಸಾಂಗದಲ್ಲಿ ಓದಿ ಅರಗಿಸಿಕೊಂಡಿದ್ದ ವಾಸ್ತು ವಿಜ್ಞಾನದ ಇತಿಹಾಸ, ನಾಗರಿಕ ನಿಬಿಡತೆ ಮತ್ತು ವಿಸ್ತಾರ, ಒಳ ಚರಂಡಿ, ಜಲಾನಯನ ವಿತರಣಾ ವಿಜ್ಞಾನ ಇತ್ಯಾದಿ, ಕಲಿತದ್ದನ್ನೆಲ್ಲ ಉಪಯೋಗಿಸಿ ಮಾನಸಿಕವಾಗಿ ರೂಪಿಸಿಕೊಂಡಿದ್ದ ಕನಸಿನ ನಗರವನ್ನು ಕಾಗದಕ್ಕೆ ಇಳಿಸಿದಾಗ, ಅರೇ ಇದು ತನ್ನೂರಿನಂತೇ ಇದೆಯಲ್ಲ ಎಂದೆನಿಸಿ ಆಶ್ಚರ್ಯವಾಗಿತ್ತು. ಊರಿಗೆ ಮರಳಬೇಕು ಎಂಬ ಬಯಕೆಗೆ ಇದು ಇಂಬು ಕೊಟ್ಟು ತುಡಿತ ಇನ್ನಷ್ಟು ತೀವ್ರವಾಗಲು ಕಾರಣವಾಗಿತ್ತು.

"ನೋ.. ನೋ.. ಮಿ. ದಾಸ್. ನೀವ್ಹೇಳಿದಷ್ಟು ಸುಲಭವಲ್ಲ ಇದೆಲ್ಲ. ನೀವೇನೋ ಸರಿ ಕಲಿತು ಬಂದಿದ್ದೀರಿ. ಆದರೆ ನೀವು ಚಿತ್ರ ಬಿಡಿಸಿದಷ್ಟು ಸುಲಭವಾಗಿ ನಾವು ನಗರ ಕಟ್ಟಲು ಸಾಧ್ಯಾನಾ? ಏನೊಂದು ತಾಪತ್ರಯಗಳಿವೆ ಗೊತ್ತಾ?"
ಇವನ ಪ್ಲಾನು ನೋಡಿ ಡಿ.ಸಿ.ಗೆ ಗಾಬರಿಯಾಯಿತು.

"ಸರ್ ನನ್ನ ವಿನ್ಯಾಸದ ಬೇಸಿಸ್‌ಗೆ ವಿಶ್ವ ಬ್ಯಾಂಕ್‌ನ ಮನ್ನಣೆ ಇದೆ. ಈ ಪ್ಲಾನನ್ನು ಎಡಿಬಿಗೆ ಕಳುಹಿಸಿದರೆ ಕೂಡಲೇ ಹಣ ಸ್ಯಾಂಕ್ಷನ್ ಆಗುತ್ತೆ."
"ದುಡ್ಡೊಂದೇ ಅಲ್ಲರೀ.. ನಿಮಗೆ ಅದೆಲ್ಲ ಅರ್ಥವಾಗಲ್ಲ.." ಅಸಹನೆ ಮತ್ತು ಕಾರ್ಯನಿಬಿಡತೆಯ ಗೊಂದಲದಲ್ಲಿ ನರಳುತ್ತಿದ್ದ ಡಿ.ಸಿ.ಯ ಆ ಕ್ಷಣದ ಪ್ರಮುಖ ಉದ್ದೇಶ ಇವನನ್ನು ಸಾಗಹಾಕುವುದಾಗಿತ್ತು.

"ನೋಡಿ.. ಹಣ ನೀವು ಹೇಳಿದಾಗೆ ಸ್ಯಾಂಕ್ಷನ್ ಆಗುತ್ತೆ ಅಂತ ಇಟ್ಕೊಳ್ಳೋಣ.. ಎಕ್ಸಿಕ್ಯೂಶನ್‌ಗೆ ಎಷ್ಟೆಲ್ಲ ಪರಿಪಾಟಲಿವೆ ಗೊತ್ತಾ. ಗ್ಲೋಬಲ್ ಟೆಂಡರ್ ಕರೀಬೇಕು. ವಿಶ್ವಮಾನ್ಯರನ್ನೆಲ್ಲ ಮೀರಿಸಿ ಟೆಂಡರ್ ಕಸಿಯುವ ಜನ ನಮ್ಮಲ್ಲೇ ಇದ್ದಾರೆ. ನಿಮ್ಮ ಪ್ಲಾನನ್ನು ಮೂರಕ್ಕಿಳಿಸಿ ಆರು ವರ್ಷಗಳಲ್ಲಿ ಸುಣ್ಣ ಮಾಡ್ತಾರೆ... ಏನಂತೀರಾ? ಸರಿ ಎಲ್ಲ ಸರಿ ಹೋಯ್ತು ಅನ್ನಿ, ಜನ ಸುಮ್ಮನಿರ್ತಾರಾ! ಇಲ್ಲಿಂದ ಕೆಲಸ ಶುರು ಮಾಡಿ ಅಲ್ಲಿ ಬರೂವಷ್ಟರಲ್ಲಿ ಹಲವು ವಿರೋಧಿ ಪತಾಕೆಗಳು ಏಳುತ್ತೆ. ನಿಮ್ಮ ಪ್ಲಾನು ಎಷ್ಟು ಅನ್‌ಸೈಂಟಿಫಿಕ್ ಅಂತ ನಿಮ್ಮ ಮೇಸ್ಟ್ರಿಗೆ ಅಹುದು ಅನ್ನಿಸುವಷ್ಟರ ಮಟ್ಟಿಗೆ ಪತ್ರಿಕೆಗಳಲ್ಲಿ ಚರ್ಚೆ ಶುರುವಾಗುತ್ತೆ."

ನಿರಾಶನಾಗಿ ಜಿಲ್ಲಾಧಿಕಾರಿ ಕಛೇರಿಯಿಂದ ಹೊರಬಂದ ಮೋಹನದಾಸ. ಅಲ್ಲೇ ಹೊರಗಡೆ ಇಕ್ಕಟ್ಟಾದ ಕೂಡು ರಸ್ತೆಯಲ್ಲಿ ಬಸ್ಸುಗಳು ದಾರಿಗಾಗಿ ಅರಚಿಕೊಳ್ಳುತ್ತಿದ್ದವು. ರಸ್ತೆ ಬದಿಯಲ್ಲಿ ನಡೆಯಲು ಜಾಗವೇ ಇರಲಿಲ್ಲ. ತನ್ನ ಪ್ಲಾನಿನ ಪ್ರಕಾರ ಈ ಪ್ರದೇಶದ ಪೂರ್ಣ ಬದಲಾವಣೆಯ ರೂಪುರೇಷೆಯನ್ನು ಮಾಡಿಕೊಂಡಿದ್ದ. ಬಹುಮಹಡಿ ಬಸ್ಸು ನಿಲ್ದಾಣದ ವಿನ್ಯಾಸ ದೇಶಕ್ಕೆ ಹೊಸದಾಗಿತ್ತು. ಈ ಬದಲಾವಣೆಯಿಂದ ಈಗಿರುವ ಪ್ರದೇಶದ ಅರೆವಾಸಿ ಜಾಗ ಉಳಿತಾಯವಾಗಿ ನಿಬಿಡತೆ ಕಡಿಮೆಯಾಗುತ್ತಿತ್ತು. ನಿಟ್ಟುಸಿರು ಬಿಟ್ಟು ಇಲ್ಲಿ ಜಾಗವಿಲ್ಲದೇ ನೆಹರೂ ಮೈದಾನದ ಬಳಿ ನಿಲ್ಲಿಸಿದ್ದ ತನ್ನ ಕಾರಿನತ್ತ ಹೆಜ್ಜೆ ಹಾಕಿದ ಮೋಹನದಾಸ.

ಮರಳಿ ಹೋಗಬೇಡವೆಂದು ಗೋಗರೆಯುತ್ತಿದ್ದ ಮರಿಯಾನ್ ನೆನಪಾದಳು. ತನ್ನ ಇಡೀ ಟೀಮ್ ನೆನಪಾಯಿತು. ಇನ್ಸ್ಟಿಟ್ಯೂಟ್‌ನಿಂದ ಹೊರಬಂದು ತಾವೆಲ್ಲ ಸೇರಿ ಕಟ್ಟಿಕೊಂಡಿದ್ದ ಇನ್‌ಫ್ಯಾಕ್ಟ್ (ಇನ್‌ಫ್ರಾಸ್ಟ್ರಕ್ಚರ್ ಕನ್ಸಲ್ಟೆನ್ಸಿ ಅಂಡ್ ಟೆಕ್ನಾಲಜೀಸ್ ಇನ್ಕ್)ಗೆ, ಲಾಸ್‌ವೇಗಸ್‌ನ ಉಪನಗರ ಸ್ಕೈಸಿಟಿಯ ವಿನ್ಯಾಸದ ಕಂಟ್ರಾಕ್ಟ್ ಸಿಕ್ಕಿದ ಮರುದಿನವಲ್ಲವೇ ತನ್ನ ಊರು ತನ್ನನ್ನು ಅತಿಯಾಗಿ ಕಾಡಿದ್ದು? ಊರನ್ನು ಕೊಳೆಯಲು ಬಿಟ್ಟು ಅಮೇರಿಕೆಯನ್ನು ಉಧ್ಧರಿಸುವ ವಿಷಯದಲ್ಲಿ ಗಿಲ್ಟಿ ಫೀಲ್ ಮಾಡಿಕೊಂಡು ಇಂಡಿಯಾಕ್ಕೆ ಮರಳಲು ತಾನು ನಿರ್ಧರಿಸಿದ್ದು?

ಮನೆಗೆಬಂದು ಇಂಟರ್‌ನೆಟ್‌ಗೆದುರಾಗಿ ಕೂತಾಗ ಮಲೇಶ್ಯಾದಲ್ಲಿ ನಿರ್ಮಾಣವಾಗುತ್ತಿರುವ ಆರು ಅಂತಸ್ತಿನ ಭೂಗತ ರಸ್ತೆ ವ್ಯೂಹ ಕಮ್ ನೆರೆ ವಿಮೋಚನಾ ಕಾಲುವೆಗಳ ನಿರ್ಮಾಣ ಪ್ರಗತಿಯ ಅಲರ್ಟ್, ಈಮೇಲ್‌ನಲ್ಲಿ ಬಂದಿತ್ತು. ತನ್ನ ಪ್ಲಾನ್‌ನಲ್ಲೂ ಇಂತದೇ ನಿರ್ಮಾಣವನ್ನು ಈಗಾಗಲೇ ಗುರುತಿಸಿಕೊಂಡಿದ್ದ ಅವನು. ವರ್ಷಕ್ಕೊಮ್ಮೆ ಮುಸಲಧಾರೆಯಿಂದಲೂ, ಊರನ್ನು ಸುತ್ತುವರೆದಿರುವ ಬೆಟ್ಟಗಳಿಂದ ಇಳಿದು ಬರುವ ಮಳೆ ನೀರಿನಿಂದಲೂ, ಉಂಟಾಗುವ ಪ್ರವಾಹವನ್ನು ಕೇಂದ್ರೀಕೃತಗೊಳಿಸಿ ಸಾಗರದತ್ತ ಚ್ಯಾನಲೈಸ್ ಮಾಡುವ ಈ ಭೂಗತ ವ್ಯೂಹ, ವರ್ಷದ ಉಳಿದ ಋತುಗಳಲ್ಲಿ ರಸ್ತೆಗಳಾಗಿ ಬಳಸಲ್ಪಡುತ್ತಿತ್ತು.

ಎದ್ದು ತನ್ನ ಡ್ರಾಫ್ಟ್ ಬೋರ್ಡಿನತ್ತ ಹೋಗಿ ಮೇಲಿನ ಕಪಾಟಿನಿಂದ ತಾನು ರಚಿಸಿದ್ದ ನಗರವಿನ್ಯಾಸದ ಫೈಲನ್ನು ತೆರೆದು ಅದರೊಳಗಿನಿಂದ ಮುಖ್ಯ ಲೇಔಟ್‌ನ ಹಾಳೆಯನ್ನು ಡ್ರಾಫ್ಟ್ ಬೋರ್ಡ್‌ನ ಮೇಲೆ ಹರಡಿದ. ಹಲವು ಮಡಿಕೆಗಳ ಚಿತ್ರಾಂಗ ಹರಡಿಕೊಳ್ಳುತ್ತಿದ್ದಂತೆಯೇ ರೇಖೆಗಳೆಲ್ಲ ಜೀವತಳೆದು, ದಡಬಡನೇ ರಸ್ತೆಗಳು, ಫ್ಲೈಒವರ್‌ಗಳು, ಬಿಲ್ಡಿಂಗ್ ಕಾಂಪ್ಲೆಕ್ಸ್‌ಗಳೂ, ಬಹು ಮಹಡಿ ಪಾರ್ಕಿಂಗ್ ಕಟ್ಟಡಗಳೂ, ಸ್ಟೇಡಿಯಂ, ಬಸ್ ನಿಲ್ದಾಣ ಎಲ್ಲವೂ ಆ ಕಾಗದದ ಹಾಳೆಯ ಮೇಲೆ ಎದ್ದು ನಿಂತವು. ರಸ್ತೆಯ ಇಕ್ಕೆಲಗಳಲ್ಲಿ ಪುತುಕ್ಕನೇ ಮೊಳಕೆಯೊಡೆದು ಮರಗಳು ಮೈಕೊಡವಿ ಕೊಂಡವು, ಪಾರ್ಕುಗಳು ಅರಳಿದವು. ಜನ, ಕಾರು ಬಸ್ಸುಗಳು ಇತ್ಯಾದಿ ವಾಹನಗಳು ಸರಸರನೇ ಪ್ರತ್ಯಕ್ಷರಾಗಿ ವಿನ್ಯಾಸದ ಹಾಳೆಯ ಮೇಲೆಲ್ಲ ಗಿಜಿಗಿಜಿ ಸುಳಿದಾಡತೊಡಗಿದರು.

ತಟ್ಟನೆ ತಲೆ ಕೊಡವಿಕೊಂಡ ಮೋಹನದಾಸ. ತನ್ನ ಕನಸುಗಳು ತನ್ನನ್ನು ಪೂರ್ಣ ಆವರಿಸಿಕೊಳ್ಳುವ ಮೊದಲು ಇದರಿಂದ ಬಿಡುಗಡೆಯಾಗಬೇಕೆಂದು ನಿರ್ಧರಿಸಿದ. ಹಾಳೆಯನ್ನು ಮಡಚಿ ಮರಳಿ ಫೈಲಿನಲ್ಲಿಟ್ಟು ಮೇಲಿನ ಕಪಾಟಿನಲ್ಲಿರಿಸಿದ. ಅಲ್ಲಿಂದ ಬಂದು ಅದಕ್ಕೆದುರಾಗಿರುವ ಸೋಫಾದ ಮೇಲೆ ಕುಳಿತು ತಾನು ಫೈಲನ್ನಿಟ್ಟ ಕಪಾಟನ್ನೇ ಸುಮ್ಮನೆ ದಿಟ್ಟಿಸಿ ಕುಳಿತ. ಕಪಾಟಿನ ಕೆಳಭಾಗದಿಂದ ಸುಯ್ಯೆಂದು ಒಂದು ಎಲಿವೇಟರ್ ಕೆಳಗಿಳಿಯಿತು. ನೆಲ ಮುಟ್ಟುತ್ತಿದ್ದ ಹಾಗೆ ಟ್ರಿಣ್ ಎಂದು ಗಂಟೆ ಹೊಡೆದು ಬಾಗಿಲು ತೆರೆದುಕೊಂಡಿತು.
ತೆರೆದ ಎಲಿವೇಟರ್ ಬಾಗಿಲಿನಿಂದ ಮತ್ತದೇ ಪ್ಲಾನಿನ ರೇಖೆಗಳು ಕೋಣೆಯ ನೆಲದ ತುಂಬೆಲ್ಲ ಹರಡಿಕೊಂಡವು. ರೇಖೆಗಳ ವಿನ್ಯಾಸ ಪೂರ್ಣಗೊಳ್ಳುತ್ತಿದ್ದಂತೆ ಒಂದೊಂದಾಗಿ ಎಲ್ಲ ವಿನ್ಯಾಸಗಳೂ ಮೇಲೆದ್ದು ನಿಲ್ಲತೊಡಗಿದವು.

ಮೋಹನದಾಸ ಎದ್ದು ಪರಿಶೀಲಿಸತೊಡಗಿದ. ಕೆಲವೊಂದು ಸಣ್ಣಪುಟ್ಟ ಮಾರ್ಪಾಡುಗಳನ್ನು ಅವಶ್ಯವೆಂದು ಗುರುತಿಸಿಕೊಂಡ, ಇಲ್ಲಿ ಫ್ಲೈಒವರ್‌ಗಿಂತ ಭೂಗತ ರಸ್ತೆ ಒಳ್ಳೆಯದು, ಅಲ್ಲಿ ಹೆಚ್ಚುವರಿ ಲೇನ್ ಬೇಕು, ಮತ್ತೊಂದು ಕಡೆ ಹೆಚ್ಚು ಕೆಪಾಸಿಟಿಯ ವಿದ್ಯುತ್ ಸಬ್‌ಸ್ಟೇಶನ್ ಬೇಕು...
ಮೊಬೈಲ್ ರಿಂಗಾಗುತ್ತಿದ್ದಂತೆ ಸರಸರನೆ ಎಲ್ಲ ವಿನ್ಯಾಸಗಳೂ ಸಪಾಟಾಗಿ ಮತ್ತೆ ರೇಖೆಗಳಾಗಿ ಕಪಾಟಿನ ಕೆಳಗೆ ನಿಂತುಕೊಂಡಿದ್ದ ಎಲಿವೇಟರ್‌ನ ಒಳಗೆ ಸುಳಿದು ಮಾಯವಾದವು. ಎಲಿವೇಟರು ಸರ್ರನೆ ಮೇಲೆ ಹೋಗಿ ಕಪಾಟಿನ ಬಿರಡೆಯಾಯಿತು. ಜಾಹ್ನವಿಯ ಹೆಸರು ಮೊಬೈಲ್ ಪರದೆಯ ಮೇಲೆ ಬ್ಲಿಂಕಾಗುತ್ತಿತ್ತು. ಬಟನ್ ಒತ್ತಿ ಹಲೋ ಎಂದ.

"ಮೋಹನ್! ನೀನು ಮತ್ತೆ ಮತ್ತೆ ಹೀಗ್ಯಾಕೆ ಕೈಕೊಡುತ್ತಿದ್ದಿ! ನೀನು ಖಂಡಿತ ಬರುತ್ತೇನೆಂದು ಮಾತು ಕೊಟ್ಟದ್ದಕ್ಕೆ ನಾನು ಒಂದು ಗಂಟೆಯಿಂದ ಆಡ್‌ಲ್ಯಾಬ್ಸ್ ಬಳಿ ವೆಯಿಟ್ ಮಾಡುತ್ತಿದ್ದೇನೆ."

"ಅರೇ ಸಾರಿ ಸಾರಿ! ಹತ್ತೇ ನಿಮಿಷದಲ್ಲಿ ಬಂದು ಬಿಡುತ್ತೇನೆ. ಪ್ಲೀಸ್ ಹೋಗಬೇಡಾ" ಎನ್ನುತ್ತಾ ಕಾರಿನತ್ತ ಧಾವಿಸಿದ.

ಕಾರನ್ನು ಹೊರತೆಗೆದು ರಸ್ತೆಗಿಳಿಸುತ್ತಿರುವಂತೆಯೇ ಮೋಡ ಬಿರಿದು ಕಪ್ಪಗಾದ ಆಗಸದಿಂದ ಮಳೆ ಸುರಿಯತೊಡಗಿತು. ವೈಪರನ್ನು ಚಾಲೂಗೊಳಿಸಿ, ಕಾರನ್ನು ಬಸ್ ನಿಲ್ದಾಣದ ಬಳಿಯ ಆಡ್‌ಲ್ಯಾಬ್ಸ್‌ನತ್ತ ಚಲಾಯಿಸಿದ. ಎಲ್ಲ ನಿಬಿಡತೆ, ಸಿಗ್ನಲ್ಲು, ಜ್ಯಾಮ್‌ಗಳಿಂದ ಮುಕ್ತನಾಗಲು ೧೮ ನಿಮಿಷ ವ್ಯಯಿಸಿತು. ಆಡ್‌ಲ್ಯಾಬ್ಸ್‌ನ ನೆಲಮಹಡಿಯ ಪಾರ್ಕಿಂಗ್‌ಗೆ ನುಗ್ಗಿಸಿ ಕಾರನ್ನು ಪಾರ್ಕ್ ಮಾಡಿದ. ಎಲಿವೇಟರ್ ಹಿಡಿದು ಎರಡನೇ ಮಹಡಿಯಲ್ಲಿ ಬಾಗಿಲು ತೆರೆಯುತ್ತಿದ್ದಂತೆ ಮುಖ ಊದಿಸಿಕೊಂಡು ವಾಚು ನೋಡುತ್ತಿರುವ ಜಾಹ್ನವಿ ಕಂಡಳು. ಇವನ ಮುಖ ಕಾಣುತ್ತಿದ್ದಂತೆ ದುಮುಗುಡುತ್ತಾ ಮೆಟ್ಟಲ ಬಳಿ ತೆರಳಿ ಇಳಿಯತೊಡಗಿದಳು. ಇವನು ಸುಮ್ಮನೆ ಹಿಂಬಾಲಿಸಿದ. ಜಾಹ್ನವಿ ಎರಡು ಮಹಡಿ ಇಳಿದು ಬಂದು ಕೆಳ ಅಂತಸ್ತಿನಲ್ಲಿರುವ ಕಾಫಿಡೇ ಹೊಕ್ಕು ಮೂಲೆಯಲ್ಲಿನ ಒಂದು ವಿಶಾಲವಾದ ಸೋಫಾ ಒಂದರಲ್ಲಿ ಕುಕ್ಕರಿಸಿದಳು. ಎದುರಾಡಲು ಧೈರ್ಯವಾಗಲಿಲ್ಲ ಮೋಹನದಾಸನಿಗೆ. ಟೀಪಾಯ್ ಮೇಲಿದ್ದ ಪೇಪರ್ ನ್ಯಾಪ್‌ಕಿನ್ ತೆಗೆದು ಸರಸರನೆ ಏನೋ ಗೀಚತೊಡಗಿದ. ಜಾಹ್ನವಿಯ ಕುತೂಹಲ ಮೆಲ್ಲನೆ ಹೆಡೆ ಬಿಚ್ಚಿತು. ಆದರೂ ತೋರಿಸಿಕೊಳ್ಳದೇ ತನ್ನ ಉಗುರುಗಳತ್ತ ಹುಸಿಕಾಳಜಿಯಿಂದ ನೋಡತೊಡಗಿದಳು.

ಮೋಹನದಾಸ ಗೀಚುವುದನ್ನು ಮುಗಿಸಿ ನ್ಯಾಪ್‌ಕಿನ್ ಮಡಚಿ ಜಾಹ್ನವಿಯತ್ತ ಚಾಚಿದ. ಜಾಹ್ನವಿ ಪ್ರಶ್ನಾರ್ಥಕವಾಗಿ ಹುಬ್ಬು ಕುಣಿಸಿ ಮುಖ ಊದಿರುವ ಹಾಗೆಯೇ ನ್ಯಾಪ್‌ಕಿನ್ ಇಸಿದುಕೊಂಡು ತೆರೆದು ನೋಡಿದಳು. ಎರಡು ಕಡ್ಡಿ ಮನುಷ್ಯರು, ಎರಡುಜಡೆಯ ಹೆಣ್ಣೊಂದು ಮುನಿಸಿಕೊಂಡು ಅತ್ತ ಮುಖಮಾಡಿ ನಿಂತಿದ್ದರೆ ಒಂದು ಗಂಡು ಕೈಯಲ್ಲಿ ಹೂಗುಚ್ಛ ಹಿಡಿದು ಮೊಣಕಾಲೂರಿ ನಿಂತು ಓಲೈಸುತ್ತಿತ್ತು. ಹೆಣ್ಣು ಕಡ್ಡಿ ಪುತುಕ್ಕನೇ ನ್ಯಾಪ್‌ಕಿನ್‌ನಿಂದ ಹಾರಿ ಜಾಹ್ನವಿಯ ಎಡಗೈಯ ನುಣುಪಿನಲ್ಲಿ ಜಾರುತ್ತಾ ಅವಳ ಮಡಿಲ ಮೇಲಿದ್ದ ಹ್ಯಾಂಡ್‌ಬ್ಯಾಗ್‌ನ ಮೇಲೆ ಹಾರಿ ಕುಳಿತುಕೊಂಡಿತು. ಜಾಹ್ನವಿ ಬೆಚ್ಚಿ ನ್ಯಾಪ್‌ಕಿನ್ ಕೈಬಿಟ್ಟಳು. ಮೆಲ್ಲನೆ ತೇಲುತ್ತಾ ಟೀಪಾಯ್ ಮೇಲೆ ಬಿದ್ದ ನ್ಯಾಪ್‌ಕಿನ್‌ನಿಂದ ಕಂಗಾಲಾಗಿ ಹೊರಬಂದ ಗಂಡು ಕಡ್ಡಿ ಹೆಣ್ಣು ಕಡ್ಡಿಯನ್ನು ಹುಡುಕತೊಡಗಿತು. ಇತ್ತ ಹೆಣ್ಣು ಕಡ್ಡಿಗೂ ದಿಗಿಲಾಗಿ ಕೂತಲ್ಲಿಂದ ಎದ್ದು ಚಡಪಡಿಸತೊಡಗಿತು.

ಮೋಹನದಾಸ ಸುಮ್ಮನೆ ನೆಲ ನೋಡಿ ಕುಳಿತಿದ್ದ. ಅವನ ರೇಖೆಗಳ ಪ್ರಭಾವ ಅವನಿಗೆ ತಿಳಿದಿತ್ತು. ಇದೇ ರೇಖೆಗಳಿಂದಲ್ಲವೆ ಮರಿಯಾನ್‌ನಂತಹ ಧಿಮಾಕಿನ ಹುಡುಗಿ ಮೆದುವಾಗಿದ್ದು. ಅವಳು ಹೇಳುತ್ತಿದ್ದುದು ನೆನಪಾಯಿತು. "ನಿನ್ನ ವಿನ್ಯಾಸಗಳೆಲ್ಲ ತ್ರಿ-ಡಿ ಮ್ಯಾಜಿಕ್ ಇದ್ದಂಗೆ. ಒಮ್ಮೆ ನೋಡಿದರೆ ಅದರೊಳಗೆ ಹೋಗಿ ಬಿಡುತ್ತೇವೋ ಎನ್ನುವಷ್ಟು ಜೀವಂತವಾಗಿರುತ್ತವೆ. ಮೋಹನ್! ಎಲ್ಲಿ ಕಲಿತೆ ನೀನು ಈ ತರ ಬಿಡಿಸೋದನ್ನ"
"ಹಾಗೇನಿಲ್ಲ... ನಾನೂ ಸಾಮಾನ್ಯವಾಗಿ..." ಎನ್ನುತ್ತಾ ಜಾರಿಕೊಳ್ಳುತ್ತಿದ್ದ.

ತಲೆ ಎತ್ತಿ ನೋಡಿದರೆ ಜಾಹ್ನವಿಯ ಮುಖದ ತುಂಬ ನಗು ಬೆಳಕಾಡುತ್ತಿತ್ತು. ಮೋಹನ್ ಅವಳ ಮಂಡಿಯನ್ನು ಮೆಲ್ಲನೆ ತಟ್ಟಿ ’ಸಾರಿ’ ಅಂದ.
’ಸ್ಟುಪಿಡ್’ ಎನ್ನುತ್ತಾ ಮುಸಿ ನಕ್ಕಳು ಜಾಹ್ನವಿ.

ಟೀಪಾಯ್ ಮೇಲೆ ನ್ಯಾಪ್‌ಕಿನ್‌ನಲ್ಲಿ ಕಡ್ಡಿಗಳಿಬ್ಬರೂ ಮುತ್ತಿಡುತ್ತಿದ್ದರು. ಅವುಗಳ ಪ್ರೀತಿಗೆ ಹೊರಹೊಮ್ಮಿದ ಕಡ್ಡಿಹೃದಯಗಳು ನ್ಯಾಪ್‌ಕಿನ್‌ನಿಂದ ತೇಲುತ್ತಾ ಹೊರಬಂದು ಮೇಲಮೇಲಕ್ಕೆ ಸಾಗುತ್ತಿದ್ದವು.

ಬೆಚ್ಚನೆಯ ಕ್ಯಾಪುಚಿನೋ ಕುಡಿದು ಹೊರಬಂದರೆ ಮಳೆ ಇನ್ನೂ ಬಿಟ್ಟಿರಲಿಲ್ಲ. ಲಿಫ್ಟ್‌ನಲ್ಲಿ ಪಾರ್ಕಿಂಗ್ ಲಾಟ್‌ಗಿಳಿದು ಕಾರು ಹೊರತೆಗೆದು ಸುಮ್ಮನೆ ಬೀಚ್‌ನತ್ತ ಸಾಗಿದರು. ಹೆದ್ದಾರಿಯ ಬಳಿ ಹೊಸದಾಗಿ ರಚಿಸಲ್ಪಡುತ್ತಿದ್ದ ಫ್ಲೈಒವರ್‌ನ ಕೆಲಸ ಮಂದಗತಿಯಲ್ಲಿ ಸಾಗುತ್ತಿದೆ ಎನಿಸಿತು ಮೋಹನದಾಸನಿಗೆ. ಅದರ ಪ್ರತಿ ಇಂಚಿನಲ್ಲೂ ಕೊರತೆ ಕಂಡು ಬಂತು. ಒಂಥರಾ ಹೊಟ್ಟೆಗಿಲ್ಲದೇ ಸೊರಗಿದ ಮಗುವಿನ ಹಾಗೆ. ರೇಜಿಗೆ ಹುಟ್ಟಿ ಹಲ್ಲು ಕಡಿದ. ಯೂಸ್‌ಲೆಸ್ ಎಂದು ಬಯ್ದ.

"ಸಾಹೇಬ್ರು ಯಾರಿಗೆ ಬಯ್ಯುತ್ತಿರುವುದು? ಹಾಂ ಅಂದ ಹಾಗೆ ಡಿ.ಸಿ. ಜತೆ ನಿನ್ನ ಮೀಟಿಂಗ್ ಹೇಗಾಯಿತು?" ಎಂದ ಜಾಹ್ನವಿಯ ಪ್ರಶ್ನೆಗೆ ಚುಟುಕಾಗಿ ಬೆಳಗಿನ ಪ್ರಸಂಗದ ನಿಶ್ಫಲತೆಯನ್ನು ತೋಡಿಕೊಂಡ.

ಬೀಚ್ ಬಳಿ ಬಂದಾಗ ಅಲ್ಲಿ ಮಳೆಯೇ ಬಂದಿರಲಿಲ್ಲ. ಎಲ್ಲವೂ ಒಣಗಿಸಿಟ್ಟಂತೆ ಗರಿಗರಿಯಾಗಿತ್ತು. ಮೋಹನದಾಸ ಜಾಹ್ನವಿಯ ಕೈಹಿಡಿದು ಮರಳ ಮೇಲೆ ಸಮುದ್ರದಂಚಿನಲ್ಲಿ ಸಾಗಿದ. ತಟಕ್ಕನೇ ನಿಂತ. ಜೇಬಿನಿಂದ ಹಲವು ಮಡಿಕೆಗಳ ಹಾಳೆಯೊಂದನ್ನು ಹೊರತೆಗೆದು ಬಿಡಿಸಿದ. ಅದು ಅವನ ಕನಸಿನ ನೆಕ್‌ಲೇಸ್ ವಿನ್ಯಾಸ. ಕೊರಳ ಹಾರವಲ್ಲ.. ಬಂದರಿನ ಹೊರಮಡಿಲಿನಿಂದ ಸೇನೆಶ್ವರದವರೆಗೆ ಕೊರಳಹಾರದಂತೆ ವರ್ತುಲವಾಗಿ ಸಾಗುವ ಚತುಷ್ಪಥ ರಸ್ತೆಯ ವಿನ್ಯಾಸ. ನಗರದ ನಿಬಿಡತೆಯಿಲ್ಲದೆ ಸಮುದ್ರದಂಚಿನಲ್ಲೇ ನಿಸರ್ಗದ ಮಡಿಲಿನಲ್ಲಿ ಸಾಗುವ ರಸ್ತೆ ರಿಂಗ್ ರೋಡಿನಂತೆ ಬಳಸಬಹುದಾಗಿತ್ತು. ಹಾಳೆಯ ಮೇಲಿನ ರೇಖೆಗಳೆಲ್ಲ ಮತ್ತೆ ಜೀವ ತಳೆದು ಸರಿದಾಡಲು ಶುರು ಮಾಡಿದಾಗ ಜಾಹ್ನವಿಯ ಇರುವಿಕೆಯ ಅರಿವಾಗಿ ರಪ್ಪನೆ ಹಾಳೆಯನ್ನು ಮಡಚಿ ಜೇಬಿಗಿಳಿಸಿದ.

ಜಾಹ್ನವಿಗೆ ಇವನ ವರ್ತನೆಗಳೆಲ್ಲ ಅಭ್ಯಾಸವಾಗಿತ್ತು. ಅವನ ಈ ಇಮೋಷನಲ್ ವ್ಯಕ್ತಿತ್ವ ಅವಳಿಗೆ ಪ್ರಿಯವಾಗಿದ್ದರೂ ಗಂಟೆಗಟ್ಟಲೆ ಒಂದು ವಿಷಯದೊಳಗೆ ಹೊಕ್ಕಿ ಬಿಡುವ ರೀತಿ ಕೆಲವೊಮ್ಮೆ ಸಿಟ್ಟು ತರಿಸುತ್ತಿತ್ತು.

ಬೀಚಿನ ಆಗಸದಲ್ಲೂ ಕರಿ ಮೋಡ ತುಂಬಿಕೊಳ್ಳತೊಡಗಿತು. ಮೆಲ್ಲನೇ ಇಬ್ಬರೂ ಕಾರಿನತ್ತ ಹೆಜ್ಜೆ ಹಾಕಿದರು. ಜಾಹ್ನವಿಯನ್ನು ಮನೆಗೆ ಬಿಟ್ಟು ಅಲ್ಲೇ ಊಟ ಮಾಡಿ ಮನೆಗೆ ಮರಳಿದ ಮೋಹನದಾಸ ಮರುದಿನದ ಹೇಮರಾಜ್ ಜತೆಗಿನ ಮೀಟಿಂಗ್ ವಿಷಯದಲ್ಲಿ ನೋಟ್ಸ್ ಮಾಡತೊಡಗಿದ.

******

ತನ್ನೆದುರಲ್ಲಿ ಹೇಮರಾಜ್ ಎಸೆದ ಫೈಲನ್ನು ಮೆಲ್ಲನೆ ತೆರೆದ ಮೋಹನದಾಸ. "ಇಪ್ಪತ್ತು ವರುಷಗಳ ಹಿಂದೆ ನಾನೂ ನಿಮ್ಮ ಹಾಗೆ ವಿಚಿತ್ರ ಕನಸುಗಳನ್ನು ಕಾಣುತ್ತಾ ಈ ಊರಿಗೆ ಬಂದೆದ್ದೆ. ಆಗ ನಾನು ರಚಿಸಿದ ವಿನ್ಯಾಸಗಳು ಇವು... ಇಡೀ ಸಿಸ್ಟಮ್ ನನ್ನನ್ನೂ ಕರಪ್ಟ್ ಮಾಡಿತು. ಇವತ್ತು ನಾನು ಹೇಳಿದ್ದನ್ನು ಅಲ್ಲ ಎನ್ನುವ ಛಾತಿ ಇಡೀ ಸಿಸ್ಟಂನಲ್ಲೇ ಯಾರಿಗೂ ಇಲ್ಲ. ಆದರೆ ನನ್ನ ಈ ಫೈಲಿನ ಕನಸುಗಳು ಎಷ್ಟು ನಿರರ್ಥಕ ಎನ್ನುವುದು ನನಗೆ ಅರಿವಾಗಿದೆ."

ಎದ್ದು ಅವನ ವಿಶಾಲ ಛೇಂಬರ್‌ನ ವಿಸ್ತಾರವಾದ ಕಿಟಕಿಯ ಬಳಿ ನಿಂತು ಅತ್ತ ಬರುವಂತೆ ಸನ್ನೆ ಮಾಡಿದ ಹೇಮರಾಜ್.
ಏಳನೆ ಮಹಡಿಯಿಂದ ಕೆಳಗೆ ನೋಡಿದರೆ ಮಹಾತ್ಮಾ ಗಾಂಧಿ ರಸ್ತೆ ನೀಳವಾಗಿ ಆರು ಕಿ.ಮಿ. ಉದ್ದಕ್ಕೆ ಪೂರ್ತಿ ಕಾಣುತ್ತಿತ್ತು. ಬೆಳ್ಳಗೆ ಸ್ವಚ್ಛವಾಗಿ, ನೀಟಾಗಿರುವ ರಸ್ತೆ ಇಡೀ ಊರಲ್ಲೇ ಬೇರೆ ಇರಲಿಲ್ಲ. ಯಾರೋ ಪ್ರೀತಿಯಿಂದ ಮಾಡಿದ್ದಾರೆ ಅನ್ನುವಷ್ಟು ಉತ್ತಮವಾಗಿತ್ತದು.

"ಈ ರಸ್ತೆ ನೋಡಿ. ಪ್ರತಿ ಮಳೆಗಾಲದಲ್ಲಿ ಕರಗಿ ಹೊಂಡ ಬಿದ್ದು ಜನರು ಶಾಪ ಹಾಕುತ್ತಿದ್ದರು. ಕಳೆದ ವರ್ಷ ನಾನು ಸ್ವತಹ ನಿಂತು ಕಾಂಕ್ರಿಟೈಸ್ ಮಾಡಿಸಿದೆ. ಸರಕಾರನೇ ಖರ್ಚು ಮಾಡಿರುವುದು. ಬ್ಯೂರೋಕ್ರಸಿಯ ವ್ಯವಸ್ಥೆಯಲ್ಲಿ ಈ ಕ್ವಾಲಿಟಿ ಕೊಡೋದು ಯಾರಿಗೂ ಸಾಧ್ಯವಿಲ್ಲ. ನಾನು ಲಾಭ ನಷ್ಟ ನೋಡಲಿಲ್ಲ. ಊರು ಹೆಮ್ಮೆ ಪಡುವಂತಹ ರಸ್ತೆ ಬೇಕು ಅಂದುಕೊಂಡೆ. ಈಗ ಜನ ಏನು ಹೇಳ್ತಾರೆ ಗೊತ್ತಾ? ಹೇಮರಾಜ ಹಣ ಮಾಡಿದ ಅಂತಾರೆ.."
"ರಸ್ತೆ ಬಳಕೆಗೆ ಬಿಟ್ಟುಕೊಟ್ಟ ಕೂಡಲೇ ಪೇಪರ್‌ನವರು ಹುಳುಕೆತ್ತಲು ಶುರುಮಾಡಿದರು. ಒಂದು ಅಪಘಾತ ಆದರೆ ರಸ್ತೆವಿನ್ಯಾಸ ಸರಿಯಿಲ್ಲ ಅದರಿಂದ ಅಪಘಾತವಾಯಿತು ಅಂತ ಬರೆದರು. ರಾಜಕೀಯದವರು ತನಿಖೆ ಆಗಬೇಕು ಅಂತ ಧರಣಿ ಕೂತರು.
ನಾನು ನನ್ನ ಇಪ್ಪತ್ತು ವರ್ಷಗಳಲ್ಲಿ ಗಳಿಸಿದ್ದನ್ನ ಈ ಊರಿಗೆ ಮರಳಿ ಕೊಡಬೇಕು ಎನ್ನುವುದು ನನ್ನ ಬಯಕೆಯಾಗಿತ್ತು. ಹಾಳಾಗಿ ಹೋಗಲಿ. ಬಿಟ್ಟು ಬಿಟ್ಟೆ."
"ಹೈವೇಯ ಫ್ಲೈಒವರ್ ನೋಡಿದ್ರಾ? ನ್ಯಾಷನಲ್ ಟೆಂಡರ್. ಮದರಾಸಿನ ರೆಡ್ಡಿ ಮಾಡ್ತಿರೋದು. ಹೇಗಿದೆ. ಜನರಿಗೆ ಹೀಗೆ ಬದುಕಿ ಅಭ್ಯಾಸವಾಗಿದೆ. ಒಳ್ಳೆಯದು ಕಾಣುವುದಿಲ್ಲ. ಒಳ್ಳೆಯದು ಸಿಗುವುದೂ ಇಲ್ಲ."
"ನಿಮಗೊಂದು ಸಲಹೆ ಕೊಡಲೇನು.." ಅವನ ಅಗಾಧವಾದ ಡೆಸ್ಕ್ ಬಳಸಿ ಬಂದು ತನ್ನ ಖುರ್ಚಿಯಲ್ಲಿ ಕುಳಿತು ಒರಗಿ ಇವನತ್ತ ನೋಡಿದ ಹೇಮರಾಜ್.

ದಯವಿಟ್ಟು ಹೇಳಿ ಎನ್ನುವಂತಹ ವಿನಯ ಸಹಜವಾಗಿ ಮೋಹನದಾಸನ ಮುಖದಲ್ಲಿ ಮೂಡಿತು.

"ನಿಮ್ಮಲ್ಲಿ ಕ್ರಿಯಾಶೀಲತೆ ಇದೆ. ಹೊಸದನ್ನು ಮಾಡುವ ಹುಮ್ಮಸ್ಸಿದೆ. ನಿಮ್ಮಂತವರು ನನಗೆ ಬೇಕು. ನೀವು ಕೇಳಿದಷ್ಟು ಸಂಬಳ, ಕೇಳಿದ ಸ್ಟೇಟಸ್ ಎಲ್ಲವನ್ನೂ ಕೊಡುತ್ತೇನೆ. ಆದರೆ ಈ ನಗರ ಕಟ್ಟುವ ಹುಚ್ಚುತನ ಬಿಟ್ಟುಬಿಡಿ. ನಾನು ನನ್ನ ಸ್ವಂತ ಅನುಭವದಿಂದ ಹೇಳುತ್ತಿದ್ದೇನೆ." ಎಂದ ಹೇಮರಾಜ್.

"ಸರಿ ಸರ್! ನಾನು ಯೋಚನೆ ಮಾಡಿ ಹೇಳುತ್ತೇನೆ" ಎಂದುತ್ತರಿಸಿದ ಮೋಹನದಾಸ.

ಅತೀವ ನಿರಾಶೆ ಕಾಡುತ್ತಿತ್ತು. ನಿರಾಶೆ ನರನರಗಳಲ್ಲಿ ಹರಡತೊಡಗಿತು. ಹೃದಯ ತಣ್ಣಗಾಗತೊಡಗಿತು. ರಕ್ತದೊತ್ತಡ ಇಳಿಯತೊಡಗಿತು. ನಿಧಾನವಾಗಿ ಮಂಕು ಕವಿಯತೊಡಗಿತು.

ಮನೆಗೆ ಬಂದು ಮಲಗಿಕೊಂಡ. ಎಚ್ಚರವಾದಾಗ ಕತ್ತಲೆಯಾಗಿತ್ತು. ಹಾಸಿಗೆಯಲ್ಲಿ ಕಣ್ಣುಬಿಟ್ಟುಕೊಂಡು ನಿಶ್ಚಲವಾಗಿ ಬಿದ್ದುಕೊಂಡಿರುವವನಿಗೆ ಹೊರಬಾಗಿಲ ಕರೆಗಂಟೆ ಸದ್ದಿಗೆ ತಾನು ಎಚ್ಚರವಾಗಿದ್ದೇನೆ ಎನ್ನುವ ಅರಿವುಂಟಾಯಿತು. ತಾನೀಗ ಏಳಬೇಕು, ಎದ್ದು ಹೊರಬಾಗಿಲನ್ನು ತೆರೆಯಬೇಕು. ಆದರೆ ಅಲುಗಾಡಲೂ ಸಾಧ್ಯವಾಗುತ್ತಿಲ್ಲ! ಮತ್ತೊಮ್ಮೆ ಕರೆಗಂಟೆ ಹೊಡೆಯಿತು. ಈ ಬಾರಿ ಕೊಂಚ ಹೆಚ್ಚು ಅಸಹನೆಯೂ ಕೂಡಿತ್ತು ಕರೆಗಂಟೆಯ ಸದ್ದಿನಲ್ಲಿ.

ಬಲವಂತದಿಂದ ಶಕ್ತಿಯನ್ನು ಮೈಗೂಡಿಸಿ ಹಾಸಿಗೆಯಿಂದೆದ್ದು ತೂರಾಡುತ್ತಾ ಹೋಗಿ ಬಾಗಿಲು ತೆರೆದ. ಜಾಹ್ನವಿ ನಿಂತಿದ್ದಳು.

"ಏನಾಯಿತು? ಬೆಳಗ್ಗಿನಿಂದ ಫೋನ್ ಎತ್ತುತ್ತಿಲ್ಲ! ಇಲ್ಲಿ ನೋಡಿದರೆ ಬಾಗಿಲೇ ತೆರೆಯುತ್ತಿಲ್ಲ! ನಾನು ಹದಿನೈದು ಸಾರಿ ಬೆಲ್ ಮಾಡಿದೆ. ಗಾಬರಿಯಾಗಿತ್ತು ನನಗೆ. ಆರಾಮವಾಗಿದ್ದಿ ತಾನೆ?!" ಕಳವಳದಿಂದ ಆವರಿಸಿಕೊಂಡಳು ಜಾಹ್ನವಿ.

"ಏನಿಲ್ಲ ಸ್ವಲ್ಪ ಜಾಡ್ಯ ಮೈಗೂಡಿತ್ತು..." ಎಂದವನು ಮತ್ತೆ ಹೋಗಿ ಹಾಸಿಗೆಯಲ್ಲಿ ಬಿದ್ದುಕೊಂಡ. ಚಹ ಮಾಡಲು ಅಡಿಗೆ ಕೋಣೆಗೆ ಹೋದ ಜಾಹ್ನವಿಗೆ ಆದಿನ ಒಲೆ ಹಚ್ಚಿಲ್ಲ ಎನ್ನುವುದು ಅರಿವಾಯಿತು.

ಜಾಹ್ನವಿ ಮಾಡಿತಂದ ಚಹ ಕುಡಿದಾಗ ಮಂಕು ಕೊಂಚ ಕಡಿಮೆಯಾಯಿತು. ನೆಟ್ಟ ನೋಟದಿಂದ ಗೋಡೆ ನೋಡುತ್ತಾ ಮೈಮರೆತಿದ್ದ ಮೋಹನದಾಸನಿಗೆ ಜಾಹ್ನವಿಯ ಕೈ ಹಣೆಯನ್ನು ಸ್ಪರ್ಶಿಸಿದಾಗ ಚಿಕ್ಕ ಸಾಂತ್ವನದ ಅನುಭೂತಿಯಾಯಿತು.

ಅವಳ ಕೈಯನ್ನು ತನ್ನ ಕೈಗಳಲ್ಲಿ ತೆಗೆದುಕೊಂಡು ದಿಟ್ಟಿಸತೊಡಗಿದ. ತುಂಬು ಕೈಗಳವು. ಕೊಂಚವೂ ನರಗಳ ಚೇಷ್ಟೆಯಾಗಲೀ, ಎಲುವುಗಳ ಒತ್ತಾಗಲೀ ಮೇಲೆ ಕಾಣದಿರುವ ನುಣುಪಾದ ಹಿಂಗೈ, ಮಿದುವಾದ ನಸುಗೆಂಪು ಬಣ್ಣದ ಅಂಗೈ, ನಿಚ್ಚಳ ರೇಖೆಗಳು. ಮೆಲ್ಲನೇ ರೇಖೆಗಳನ್ನು ತನ್ನ ಬೆರಳುಗಳಿಂದ ಸವರಿದ. ರೇಖೆಗಳು ಪುಟಿದೆದ್ದು ಅಲುಗತೊಡಗಿದವು. ಕಚಗುಳಿಯೆನಿಸಿ ಕೈಸೆಳೆದುಕೊಂಡ ಜಾಹ್ನವಿ ಹುಬ್ಬು ಕುಣಿಸಿದಳು. ಸುಮ್ಮನೆ ನಕ್ಕ.

"ನಿನಗೆ ಸುಸ್ತಾಗಿರಬೇಕು. ನೀನು ಊಟ ಮಾಡಿದ್ದೆಯೇನು? ರಾತ್ರಿ ಊಟಕ್ಕೇನು ಮಾಡ್ತೀಯಾ?" ಎಂದು ಹೇಳುತ್ತಾ ಅಡಿಗೆ ಕೋಣೆಗೆ ಬಂದು ಚಕಚಕನೇ ಪಲ್ಯ, ತೊವ್ವೆ ಮತ್ತು ಅನ್ನ ಮಾಡಿಟ್ಟು ಹೊರಬಂದರೆ ಇನ್ನೂ ಮೋಹನದಾಸನ ಗುಂಗು ಇಳಿದಿರಲಿಲ್ಲ. ಅವನು ಅದೇ ಭಂಗಿಯಲ್ಲಿ ಕಪಾಟಿನತ್ತ ದೃಷ್ಟಿ ನೆಟ್ಟು ಕೂತಿದ್ದ.

"ನನಗಿನ್ನು ಹೊತ್ತಾಯ್ತು.. ಊಟ ಮಾಡು, ಎಲ್ಲ ರೆಡಿ ಮಾಡಿಟ್ಟಿದ್ದೇನೆ. ನಿನಗೆ ಸುಸ್ತಾಗಿರಬೇಕು, ಊಟ ಮಾಡಿ ನಿದ್ರೆ ಮಾಡು, ನಾಳೆ ಬೆಳಗ್ಗೆ ಬರುತ್ತೇನೆ" ಎನ್ನುತ್ತಾ ಅವನ ಉತ್ತರಕ್ಕೂ ಕಾಯದೇ ಚಪ್ಪಲಿ ಮೆಟ್ಟಿ ಬಾಗಿಲೆಳೆದು ಜಾಹ್ನವಿ ಹೋದ ದಿಕ್ಕಿನತ್ತ ನೋಡಿದ ಮೋಹನದಾಸ.

ಕೊಂಚ ಹೊತ್ತಿನ ಬಳಿಕ ಮೂಗು ಕಚಗುಳಿಯೆನಿಸಿ ಬಲವಾಗಿ ಸೀನಿದ. ಅಂಗಾಂಗ ಅದುರಿ ಗುಂಗು ಕೊಂಚ ಕರಗಿತು. ಮೆಲ್ಲನೆ ಎದ್ದು ತನ್ನ ಆಫೀಸು ಕೋಣೆಯ ಬಾಗಿಲನ್ನು ತೆರೆದ.

ಅಣೆಕಟ್ಟೆಯ ತೂಬು ತೆರೆದಂತೆ ರಭಸದಿಂದ ರೇಖೆಗಳೆಲ್ಲ ಹೊರಚೆಲ್ಲಿಕೊಂಡು ಸರಿದಾಡತೊಡಗಿದವು. ಕೋನಗಳು ಪೂರ್ಣವಾಗಿ ಸ್ಥಾವರಗಳು ಎದ್ದು ನಿಂತುಕೊಂಡವು. ಇವನ ವಿನ್ಯಾಸಗಳು ಇದೀಗ ಮನೆಯನ್ನು ಆವರಿಸಿಕೊಂಡು ಬೆಳೆಯತೊಡಗಿದವು. ಒಂದೊಂದಾಗಿ ವಿನ್ಯಾಸಗಳು ಎದ್ದುನಿಲ್ಲುತ್ತಿದ್ದಂತೆ ಪರಿಣಾಮವೆನ್ನುವಂತಹ ರೀತಿಯಲ್ಲಿ ಅದರ ಒತ್ತಿನ ವಿನ್ಯಾಸಗಳು ಸುಧಾರಿತ ರೂಪಕ್ಕೆ ಮಾರ್ಪಾಡಾಗುತ್ತಿದ್ದವು. ಒಂದು ರಸ್ತೆಯಲ್ಲಿ ಫ್ಲೈಒವರ್ ಮೂಡುತ್ತಿದ್ದಂತೆಲ್ಲ ಅಕ್ಕಪಕ್ಕದ ಕಟ್ಟಡಗಳು ಗಾಜುತಳೆದು ಸುಂದರವಾಗುತ್ತಿದ್ದವು.

ಮೆಲ್ಲನೆ ಸುತ್ತಾಡುತ್ತಾ ಭೂಗತ ಸಬ್‌ವೇಯತ್ತ ಕಾಲು ಹಾಕಿದ ಮೋಹನದಾಸ. ಎಸ್ಕಲೇಟರ್ ನಿರುಮ್ಮಳವಾಗಿ ಇವನನ್ನು ಕೆಳಕ್ಕೊಯ್ಯಿತು. ಭೂಗತ ಮೆಟ್ರೋ ನಿಲ್ದಾಣವದು. ಪ್ಲಾಟ್‌ಫಾರಂನಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ನಿಂತು ಕಾಯುತ್ತಿದ್ದರು.

ಮೇಲ್ಛಾವಣಿಗೆ ತೂಗುಹಾಕಿದ್ದ ಇಲೆಕ್ಟ್ರಾನಿಕ್ ಫಲಕ ಮುಂದಿನ ರೈಲು ಬರಲು ೩೦ ಸೆಕೆಂಡುಗಳಿವೆ ಎಂದು ಸೂಚಿಸುತ್ತಿತ್ತು. ಅಂಕಿಗಳು ಶೂನ್ಯವಾಗಲು ಮತ್ತು ರೈಲು ಬಂದು ನಿಲ್ಲಲ್ಲೂ ತಾಳೆಯಾಯಿತು.

ಇವನು ನಿಂತಿದ್ದಲ್ಲಿಯೇ ರೈಲಿನ ಬಾಗಿಲು ತೆರೆದುಕೊಂಡಿತು. ಮೋಹನದಾಸ ಒಳಹೊಕ್ಕ ಕೂಡಲೇ ಬಾಗಿಲು ಮುಚ್ಚಿಕೊಂಡು ಚಲಿಸತೊಡಗಿತು ಮೆಟ್ರೋ. ೧೮ ಡಿಗ್ರೀ ಏಸಿಯಲ್ಲಿ ಚಳಿಯೆನಿಸಿ ತಾನು ಜಾಕೆಟ್ಟು ತರಬೇಕಿತ್ತು ಎಂದುಕೊಂಡ.

ವಿರಳವಾಗಿ ಜನ ಕೂತಿದ್ದರು. ಅಲ್ಲೇ ಒಂದು ಸೀಟು ನೋಡಿ ಕೂತುಕೊಂಡ. ಎದುರುಗಡೆ ಕುಳಿತ ಹಿರಿಯನೊಬ್ಬ ಇವನತ್ತ ನೋಡುತ್ತಾ ಸ್ನಿಗ್ಧ ಸುಂದರ ನಗುವನ್ನು ಬೀರುತ್ತಿದ್ದ. ತುಂಬ ಆಪ್ಯಾಯಮಾನವಾಗಿ ತಟ್ಟುತ್ತಿದ್ದ ಅವನ ನಗುವಿಗೆ ಪ್ರತಿಕ್ರಿಯೆಯಾಗಿ ಮೋಹನದಾಸನೂ ನಗು ಸೂಸಿದ.
ಬೆಳ್ಳನೆಯ ಗಡ್ಡ, ಬೆಳ್ಳನೆಯ ಮೀಸೆ, ಭುಜದವರೆಗೂ ಇಳಿಬಿದ್ದಿದ್ದ ಬೆಳ್ಳನೆಯ ತಲೆಗೂದಲನ್ನು ಒತ್ತಾಗಿಟ್ಟಿದ್ದ ಪಶ್ತೂನ್ ಟೋಪಿ. ಹುಬ್ಬುಗಳ ನಡುವೆ ಬೋಳಾಗಿದ್ದರೂ ಕುಂಕುಮ ಹಚ್ಚಿರುವ ಹಾಗಿನ ದೇದೀಪ್ಯಮಾನತೆ. ಕಣ್ಣುಗಳಲ್ಲಿ ತುಳುಕಾಡುವ ಕಾಂತಿ. ನಸು ಖಾಕಿ ಬಣ್ಣದ ಕ್ರಿಶ್ಚಿಯನ್ ಪಾದರಿಯ ನಿಲುವಂಗಿ.

"ಎಲ್ಲಿವರೆಗೆ ಬಂತು ನಿನ್ನ ಪ್ಲಾನು" ಎಂದು ಕೇಳಿದ ಹಿರಿಯ.

ಅರೇ ಈತ ಆಸ್ಥಾ ಚ್ಯಾನಲ್‌ನಲ್ಲಿ ಪ್ರವಚನ ನೀಡುವ ಅಳಗಿರಿಯಂತಿದ್ದಾನಲ್ಲ ಎಂದುಕೊಂಡ ಮೋಹನದಾಸ. ಆತ ಬೀರುತ್ತಿದ್ದ ಸ್ನಿಗ್ಧ ನಗುವಿನಲ್ಲಿ ಆವರಿಸಿಕೊಳ್ಳುವ ಮಮತೆಯಿತ್ತು.

"ಎಲ್ಲಿವರೆಗೆ ಬಂತು ನಿನ್ನ ಪ್ಲಾನು" ಮತ್ತೆ ಕೇಳಿದ ಬೆಳ್ಳಿಗಡ್ಡದ ಅಳಗಿರಿ.

ಎದೆಯೊಳಗೆ ನಿರಾಶೆ ಮತ್ತೆ ಜಗ್ಗೆಂದು ತಿವಿಯಿತು.

ನಿಟ್ಟುಸಿರು ಬಿಟ್ಟು ಅಳಗಿರಿಯನ್ನೇ ದಿಟ್ಟಿಸಿದ ಮೋಹನದಾಸ. ಎದ್ದು ಹಿಂಬಾಲಿಸುವಂತೆ ಸನ್ನೆ ಮಾಡಿದ ಅಳಗಿರಿ. ಮೋಹನದಾಸ ಎದ್ದು ನಿಲ್ಲುತ್ತಿದ್ದಂತೆ ಮೆಟ್ರೋ ಕ್ಷಣ ನಿಲುವಾಗಿ ಬಾಗಿಲು ತೆರೆಯಿತು. ಹೊರಗೆ ಕಾಲಿಟ್ಟ ಅಳಗಿರಿಯನ್ನು ಯಾಂತ್ರಿಕವಾಗಿ ಹಿಂಬಾಲಿಸಿದ.
"ನೀನು ಬಾಸ್ಟನ್‌ನಿಂದ ಮರಳಿ ಬಂದದ್ದು ಈ ರೀತಿ ಜೋಲುಮೋರೆ ಹಾಕಿ ಕೂಡಲೇನು?" ಚಾಟಿಯೇಟು ಚುರುಕಾಗಿತ್ತು. ಬೆಚ್ಚಿಬಿದ್ದ ಮೋಹನದಾಸ ಅಳಗಿರಿಯತ್ತ ನೋಡಿದ. ಅರೇ ಈತನಿಗೆ ಎಲ್ಲವೂ ತಿಳಿದಿದೆಯಲ್ಲ ಎಂದು ಅಚ್ಚರಿಗೊಂಡ.

ಎಸ್ಕಲೇಟರ್ ಹಿಡಿದು ಮೇಲಕ್ಕೆ ಹೋದಾಗ ವಿಶಾಲ ಮರುಭೂಮಿ. ಸೂರ್ಯನ ಪ್ರಖರ ಬೆಳಕು ಕಣ್ಣು ಕುಕ್ಕುತ್ತಿತ್ತು. ದೂರದೂರಕ್ಕೆ ಕಣ್ಣು ಹಾಯಿಸಿದಷ್ಟು ದೂರಕ್ಕೆ ಮರಳುಗಾಡಿನ ಮೃಗಜಲದ ಹಬೆ ಹರಿದಾಡುತ್ತಿತ್ತು.

"ಎಷ್ಟು ಛಲವಿದೆ ನಿನ್ನಲ್ಲಿ? ಹೋರಾಡುತ್ತೀಯ ಇಲ್ಲ ಮರಳಿ ಬಾಸ್ಟನ್‌ಗೆ ಹೋಗುತ್ತೀಯ? ಏನು ನಿನ್ನ ನಿರ್ಧಾರ!." ಮತ್ತೆ ಬೀಸಿತು ಚಾಟಿ. ಛಲ ಮೈಗೂಡಿತ್ತು. ಒತ್ತರಿಸಿಕೊಂಡು ಹೊರಬಂದು ಮಾತಾಯ್ತು. "ಇಲ್ಲ!.. ಇಲ್ಲೇ ಇದ್ದು ಹೋರಾಡುತ್ತೇನೆ."

"ವೆರಿಗುಡ್! ತಗೋ ಇದನ್ನು ಹಿಡಿ..."

ಚಾಚಿದ ಅಳಗಿರಿಯ ಕೈಯಲ್ಲಿ ಇದ್ದಲ ಚೂರೊಂದು ಕರ್ರಗೆ ಹೊಳೆಯುತ್ತಿತ್ತು. ಮೋಹನದಾಸ ತೆರೆದ ಅಂಗೈಯಲ್ಲಿ ಇದ್ದಲ ಚೂರನ್ನು ಗಮನಿಸತೊಡಗಿದ. ಅಳಗಿರಿ ಮತ್ತೆ ಆಗಸದತ್ತ ಕೈಚಾಚಿ ಏನೋ ಜಪಿಸತೊಡಗಿದ. ಜಗ್ಗೆಂದು ಒಂದಡಿಯ ಕೋಲು ಅವನ ಕೈಯಲ್ಲಿ ಪ್ರತ್ಯಕ್ಷವಾಯಿತು. ಅದನ್ನೂ ಮೋಹನದಾಸನಿಗೆ ನೀಡಿದ ಅಳಗಿರಿ.

"ಇದೀಗ ನಾನು ಹೇಳುವುದನ್ನು ಗಮನವಿಟ್ಟು ಕೇಳು"

"ಮೊದಲು ನಿನ್ನ ಪ್ಲಾನನ್ನು ಗಟ್ಟಿ ಮಾಡು. ಎಲ್ಲಾ ಸರಿಯಾಗಿದೆ ಅಂದು ಅನಿಸಿದ ಮೇಲೆ ಇದ್ದಲ ಚೂರಿನಿಂದ ಸಂಪೂರ್ಣ ನಗರದ ನಕಾಶೆಯನ್ನು ಬಿಡಿಸು. ಇಂಚಿಂಚೂ ಡಿಟೈಲ್ ಆಗಿರಲಿ. ನಿನ್ನ ಪ್ಲಾನನ್ನು ರಿಯಲೈಸ್ ಮಾಡಲು ಈ ಮಂತ್ರದಂಡ ನಿನಗೆ ಸಹಾಯ ಮಾಡುತ್ತೆ." ಎನ್ನುತ್ತಾ ಅದೇ ಮಮತೆಯ ನಗೆ ಬೀರಿದ ಅಳಗಿರಿ.

ಪ್ರಶ್ನೆಗಳ ಪುಂಖ ಒತ್ತಿಕೊಂಡು ನುಗ್ಗತೊಡಗಿತು. ಅಳಗಿರಿಯ ಕಣ್ಣುಗಳ ಕಾಂತಿಯ ಆಳಕ್ಕೆ ಕರಗಿ ಹೋಗತೊಡಗಿದ ಮೋಹನದಾಸ. ಮೊಬೈಲ್ ಮತ್ತೆ ರಿಂಗಾಯ್ತು. ಅಳಗಿರಿ ಚಕ್ಕೆಂದು ಕಣ್ಮರೆಯಾದ. ಮರಳುಗಾಡು ಕರಗಿಹೋಯಿತು. ಕತ್ತಲ ಕೋಣೆಯಲ್ಲಿ ಮೊಬೈಲ್ ಪರದೆಯ ಮೇಲೆ ಜಾಹ್ನವಿಯ ಹೆಸರು ಬ್ಲಿಂಕಾಗುತ್ತಿತ್ತು.

"ಹೆಲೋ! ಊಟ ಮಾಡಿದ್ಯಾ?" ಆಸ್ತೆಯಿಂದ ಕೇಳಿದಳು ಜಾಹ್ನವಿ. "ಇನ್ನೂ ಇಲ್ಲ" ಎಂದ. "ಓಕೆ, ಊಟ ಮಾಡಿ ಮಲಗು, ಸುಮ್ಮನೆ ಏನೇನೋ ತಲೆಗೆ ಹಚ್ಕೋಬೇಡ" ಎಂದು ಕಾಳಜಿಯಿಂದ ಗದರಿದಳು. ಮೋಹನದಾಸನಿಗೆ ಗಲಿಬಿಲಿಯಾಗಿತ್ತು. ತಾನು ಈಗ ತಾನೆ ಕಂಡಿರುವುದು ಕನಸೋ, ನಿಜವೋ ಎನ್ನುವ ಭ್ರಮೆಯಿಂದ ಹೊರಬರಲಾರದೆ ಜಾಹ್ನವಿಯ ಮಾತಿಗೆ ಹೂಂಗುಟ್ಟಿ ಫೋನಿಟ್ಟ.

ಮೊದಲು ತಾನು ಎಲ್ಲಿದ್ದೇನೆಂದು ಸುತ್ತ ನೋಡಿದ. ಕಣ್ಣು ಕತ್ತಲೆಗೆ ಹೊಂದಿಕೊಂಡು ಅಂಧಕಾರ ತಿಳಿಯಾಗಿತ್ತು. ತಾನು ಕೆಳಗೆ ಗರಾಜಿನಲ್ಲಿದ್ದೇನೆ ಎನ್ನುವುದು ಅರಿವಾಗುತ್ತಲೇ ತಡಕಾಡಿ ಲೈಟು ಹಾಕಿದ. ಕ್ಷಣದಲ್ಲಿ ಗರಬಡಿದು ತನ್ನ ಕೈಯಲ್ಲಿರುವ ವಸ್ತುಗಳನ್ನೇ ದಿಟ್ಟಿಸತೊಡಗಿದ.
ಒಂದು ಇದ್ದಿಲ ಚೂರು ಹಾಗೂ ಒಂದಡಿಯ ಒಂದು ಮರದ ಕೋಲು.

ತನ್ನ ಕೋಣೆಗೆ ಮರಳಿ ತುಂಬು ಬೆಳಕಿನಲ್ಲಿ ಆ ಕೋಲನ್ನು ಸೂಕ್ಷ್ಮವಾಗಿ ದಿಟ್ಟಿಸತೊಡಗಿದಾಗ ಅದು ಮಾಮೂಲಿ ಮರದ ತುಂಡಲ್ಲ ಎಂದು ಖಾತರಿಯಾಯಿತು. ನುಣುಪಾದ ಮೈಯಿರುವ ಈ ಒಂದಡಿ ಉದ್ದದ ತೇಗದ ಕೋಲು ಮಂತ್ರದಂಡವೇ? ಎಂದು ಅಚ್ಚರಿಯಾಯಿತು. ಬಹಳ ಸೂಕ್ಷ್ಮವಾಗಿ ಅದರ ಮೇಲೆ ದೇವನಾಗರಿ ಅಕ್ಷರಗಳಲ್ಲಿ ಒಂದು ವಾಕ್ಯವನ್ನು ಕೆತ್ತಲಾಗಿತ್ತು. ಅವನು ಟೇಬಲ್ ಮೇಲೆ ಇಟ್ಟಿದ್ದ ಇದ್ದಿಲ ಚೂರು ಕರ್ರಗಿದ್ದರೂ ಹೊಳಪಿನಿಂದ ಕೂಡಿತ್ತು. ಅದನ್ನೂ ಕೈಗೆ ತೆಗೆದುಕೊಂಡು ಸೂಕ್ಷ್ಮವಾಗಿ ಪರೀಕ್ಷಿಸಿದ. ಶಾರ್ಪನರ್‌ನಿಂದ ಅದಕ್ಕೊಂದು ಚೂಪು ಕೊಡಲು ಯತ್ನಿಸಿದ. ಅವನು ಅಂದುಕೊಂಡದ್ದಕ್ಕಿಂತ ಹೆಚ್ಚು ಗಟ್ಟಿಯಾಗಿತ್ತದು. ಇದಕ್ಕೆ ಸಾಣೆಯೇ ಬೇಕು ಎಂದುಕೊಳ್ಳುತ್ತಾ ತಾನು ಈ ಮಾಯಕದ ವಸ್ತುಗಳಿಂದ ಮಾಡಬೇಕಾದ ಕಾರ್ಯದತ್ತ ಗಮನ ಹರಿಸಲು ನಿರ್ಧರಿಸಿದ ಮೋಹನದಾಸ.

ಭಯಂಕರ ಹಸಿವು ಭಗ್ಗೆಂದು ಎಚ್ಚರಾಗಿ ಕಾಡತೊಡಗಿತು. ಮಂತ್ರದಂಡವನ್ನೂ ಇದ್ದಿಲ ಚೂರನ್ನೂ ಡ್ರಾವರ್‌ನೊಳಗಿಟ್ಟು ಅಡಿಗೆ ಮನೆಯತ್ತ ನಡೆದ. ಜಾಹ್ನವಿಯ ಮೇಲೆ ಪ್ರೀತಿ ಉಕ್ಕೇರಿ ಬಂತು. ಬಟ್ಟಲಲ್ಲಿ ಅನ್ನ ಹಾಕಿ ತೊವ್ವೆ ಸುರಿದುಕೊಂಡ. ನಿದ್ರೆ ಒತ್ತರಿಸಿಕೊಂಡು ಬರುತ್ತಿತ್ತು. ದೀಪಗಳನ್ನೆಲ್ಲ ಆರಿಸಿ ಹಾಸಿಗೆಯಲ್ಲಿ ಬಿದ್ದುಕೊಂಡವನಿಗೆ ಗಾಢ ನಿದ್ರೆ.

ಬೆಳಿಗ್ಗೆ ಎಚ್ಚರವಾದಾಗ ನಿದ್ರೆಯ ನಶೆಯಿನ್ನೂ ಕಣ್ಣೆಳೆಯುತ್ತಿತ್ತು. ಮತ್ತೆ ಹೊರಳಿ ಮಲಗಬೇಕೆನ್ನುವಷ್ಟರಲ್ಲಿ ಡ್ರಾವರಿನಲ್ಲಿಟ್ಟ ವಸ್ತುಗಳು ನೆನಪಾದವು. ಜಗ್ಗೆಂದು ಎದ್ದು ಡ್ರಾವರನ್ನು ತೆರೆದು ಅವುಗಳನ್ನು ಕೈಯಲ್ಲಿ ಹಿಡಿದುಕೊಂಡಾಗಲಷ್ಟೆ ಹಿಂದಿನ ರಾತ್ರಿ ನಡೆದದ್ದು ನಿಜವೆಂದು ಖಾತರಿಯಾಯಿತು.

*****

ಮುಂದಿನ ಕೆಲವು ದಿನ ಮೋಹನದಾಸ ತಪಸ್ಸಿನಂತೆ ತನ್ನ ಪ್ಲಾನನ್ನು ಸ್ಫುಟಗೊಳಿಸುವುದರಲ್ಲಿ ನಿರತನಾದ. ಯಾವೊಂದು ಕೊರತೆಯಿಲ್ಲದಂತೆ ಕಂಪ್ಯೂಟರ್‌ನಲ್ಲಿ ಸಿದ್ಧಪಡಿಸಿದ. ಪೂರ್ತಿ ಪ್ಲಾನನ್ನು ಸಂಕುಚಿತ ಗಾತ್ರದಲ್ಲಿ ಮುದ್ರಿಸಿಕೊಂಡ. ಇದ್ದಿಲ ಚೂರನ್ನು ಸಾಣೆ ಹಿಡಿದು ಚೂಪು ಮಾಡಿಕೊಂಡಿದ್ದ. ಒಂದು ಲೇಖನಿಯ ಬಾಲವನ್ನು ಹಿಡಿಯ ಹಾಗೆ ಬಳಸಲು ಆ ಸಾಣೆ ಮಾಡಿದ ಇದ್ದಿಲ ಚೂರಿಗೆ ಸಿಕ್ಕಿಸಿದ್ದ. ವಿಶಾಲ ಬಿಳಿ ಹಾಳೆಯನ್ನು ಡ್ರಾಫ್ಟ್ ಬೋರ್ಡಿಗೆ ಸಿಕ್ಕಿಸಿ ತಯಾರಾದ. ಸೂಕ್ಷ್ಮವಾಗಿ ಅಳತೆಯ ಗೆರೆಗಳೂ ಆ ಹಾಳೆಯಲ್ಲಿ ಬರೆಯಲ್ಪಟ್ಟಿದ್ದವು.
ಇದೀಗ ಕಾರ್ಯಾಚರಣೆಯ ಮೊದಲ ಹಂತ ಪ್ರಾರಂಭವಾಗಿತ್ತು. ಮೋಹನದಾಸ ಕಂಪಿಸುತ್ತಿರುವ ಕೈಯನ್ನು ತಹಬಂದಿಗೆ ತಂದುಕೊಂಡು ಇದ್ದಿಲ ಚೂರಿನಿಂದ ಮೊದಲ ಗೆರೆಯನ್ನೆಳೆದ. ಬೆಣ್ಣೆಯಲ್ಲಿ ಕೂದಲೆಳೆದಂತೆ ಸರಾಗವಾಗಿ ಬರೆಯಿಸಿಕೊಂಡು ಹೋಗತೊಡಗಿತು ಇದ್ದಿಲು. ಚಕಚಕನೇ ಒಂದೊಂದಾಗಿ ಎಲ್ಲ ವಿನ್ಯಾಸಗಳೂ ಆ ವಿಶಾಲ ಹಾಳೆಯಲ್ಲಿ ಮೂಡತೊಡಗಿದವು.

ಸುದೀರ್ಘ ೧೪ ಗಂಟೆಗಳ ಅವಧಿಯಲ್ಲಿ ಅಂತಿಮ ನಕಾಶೆ ಸಿದ್ಧವಾಗಿತ್ತು. ಅಳಗಿರಿ ಆ ಮರಳುಗಾಡಿನ ಸ್ಟೇಶನ್‌ನಲ್ಲಿ ಸೃಷ್ಟಿಸಿಕೊಟ್ಟ ಇದ್ದಿಲ ಚೂರು ಕೊಂಚವು ಸವೆದಿರಲಿಲ್ಲ.

ಒಮ್ಮೆ ಮೆಚ್ಚುಗೆಯಿಂದ ನಕಾಶೆಯ ಮೇಲೆ ಕಣ್ಣಾಡಿಸಿದ ಮೋಹನದಾಸ. ತನ್ನ ಕನಸಿನ ನಗರ ಅಲ್ಲಿ ರೂಪುಗೊಂಡಿತ್ತು. ತಾನು ಇಷ್ಟು ಕಾಲ ಆಸ್ಥೆಯಿಂದ ಯೋಚಿಸಿ, ಧ್ಯಾನಿಸಿ, ಪರಿತಪಿಸಿ, ಹಂಬಲಿಸಿ, ಕನವರಿಸಿದ ಆ ನಗರದ ನಕಾಶೆಯ ಮುಂದೆ ಯೋಗಿಯಂತೆ ಕುಳಿತಿದ್ದ ಅವನು. ಆ ೧೪ ಗಂಟೆಗಳಲ್ಲಿ ತನ್ನ ಪ್ರಜ್ಞೆಯ ಹನಿಹನಿ ಸಾಮರ್ಥ್ಯವನ್ನು ಬಸಿದು ಆ ನಕಾಶೆಯಲ್ಲಿ ಧಾರೆಯೆರೆದಿದ್ದ. ತನ್ನ ಕ್ರಿಯಾಶೀಲತೆಯ ಪಾರಮ್ಯವನ್ನೂ ಅದರಲ್ಲಿ ಮುಟ್ಟಿದ್ದ. ಅತೀವ ಸುಸ್ತಿನಿಂದ ಬಸವಳಿದು ಕೂತಲ್ಲೇ ಒರಗಿಕೊಂಡ ಮೋಹನದಾಸ. ಅವನೊಳಗೆ ಒಂದು ಅವ್ಯಕ್ತ ಖಾಲಿತನ ಉಂಟಾಗಿತ್ತು. ಪ್ರತಿ ಕ್ಷಣವೂ ಹೊಸಹೊಸ ಐಡಿಯಾಗಳಿಂದ ಗಿಜಿಗುಡುತ್ತಿದ್ದ ಅವನ ಯೋಚನಾ ವ್ಯೂಹ ಇದೀಗ ಸ್ಥಬ್ದವಾಗಿತ್ತು.
ಎಚ್ಚರವಾದಾಗ ಕೋಣೆಯಲ್ಲಿ ಅಂಧಕಾರ ಕವಿದಿತ್ತು. ಆಗೊಮ್ಮೆ ಈಗೊಮ್ಮೆ ಮಿಣಕ್ಕೆನ್ನುತ್ತಿದ್ದ ಮಾನಿಟರ್‌ನ ಇಂಡಿಕೇಟರ್ ಬಿಟ್ಟರೆ ಬೇರೆ ಯಾವ ಬೆಳಕಿನ ಸ್ರೋತವೂ ಅಲ್ಲಿರಲಿಲ್ಲ. ಆದರೆ ಡ್ರಾಫ್ಟ್ ಬೋರ್ಡಿನ ಮೇಲೆ ಅವನು ಇದ್ದಲ ಚೂರಿನಿಂದ ರಚಿಸಿದ್ದ ನಗರದ ನಕಾಶೆ ಸ್ವಯಂ ಪ್ರಭೆಯಿಂದ ಹೊಳೆಯುತ್ತಿತ್ತು.

ಮೋಹನದಾಸನಿಗೆ ತಾನೊಂದು ಹೊಸ ಪ್ರಪಂಚವನ್ನು ಇಣಕಿಂಡಿಯಿಂದ ನೋಡುತ್ತಿರುವ ಭ್ರಮೆಯುಂಟಾಯಿತು. ತಾನು ಆ ಕಪ್ಪು ಇದ್ದಿಲ ಚೂರಿನಿಂದ ರಚಿಸಿದ ವಿನ್ಯಾಸಗಳೆಲ್ಲ ಬಣ್ಣಗಳಿಂದ ತುಂಬಿ ನೈಜವಾಗಿ ಕಾಣುತ್ತಿದ್ದವು. ಮರಗಿಡಗಳು ಹಸಿರಿನಿಂದ ಕಂಗೊಳಿಸುತ್ತಿದ್ದವು. ಅದೊಂದು ನಕಾಶೆಯೊ, ಚಿತ್ರವೊ, ಚಲನಚಿತ್ರವೋ ಅಥವಾ ತಾನು ನಿಜಕ್ಕೂ ಒಂದು ಹೊಸ ಪ್ರಪಂಚವನ್ನು ಕಿಟಕಿಯಿಂದ ಇಣುಕಿ ನೋಡುತ್ತಿದ್ದೇನೋ ಎನ್ನುವ ಗೊಂದಲ ಉಂಟಾಗಿ ಆ ನಕಾಶೆಯಿಂದ ಕಣ್ಣು ಕೀಳಲಾಗದೇ ಗರಬಡಿದು ನಿಂತ ಮೋಹನದಾಸ.

ಮುಂದೇನು ಎಂಬ ಬಗ್ಗೆ ನಿಶ್ಚಿತ ಅರಿವಿರಲಿಲ್ಲ. ಅಳಗಿರಿಯ ಬಳಿ ಕೇಳಲಾಗದ ಹಲವು ಪ್ರಶ್ನೆಗಳಿಗೆ ಇದೀಗ ಉತ್ತರ ಹುಡುಕಬೇಕಾಗಿತ್ತು. ಮಂತ್ರದಂಡವನ್ನು ಬಳಸುವುದು ಹೇಗೆ? ಅದರಲ್ಲಿ ನಿಜಕ್ಕೂ ತನಗೆ ನಂಬಿಕೆ ಇದೆಯೇ? ಇದೆಲ್ಲವೂ ಒಂದು ರಸವತ್ತಾದ ಅಡುಗೂಲಜ್ಜಿಯ ಕತೆಯಂತೆ ನಡೆದು ಹೋಗಿತ್ತು. ಅಡಗೂಲಜ್ಜಿಯ ಕತೆಯೇ ನಿಜವಾದರೆ ಮಂತ್ರದಂಡಕ್ಕೊಂದು ಮಂತ್ರವೂ ಬೇಕಲ್ಲ. ವರ್ಷಕ್ಕೊಮ್ಮೆ ತಿರುಗಾಟಕ್ಕೆ ಬರುವ ಜಾದೂಗಾರ ಕುದ್ರೋಳಿ ಗಣೇಶನಂತೆ ಅಬ್ರಕಡಬ್ರ ಎನ್ನಲೇ? ಎಂದಾಕ್ಷಣ ಏನಾಗಲಿದೆ? ತಾನು ಬಿಡಿಸಿದ ಈ ನಕಾಶೆ ಈ ಜೀವಕಳೆಯ ಚಿತ್ರದಿಂದ ಹೊರಬಂದು ನಗರವನ್ನು ಆವರಿಸಲಿರುವುದೇ?

ಗೊಂದಲ ಹೆಚ್ಚಾಗಿ ವೈಚಾರಿಕತೆಯ ಪ್ರಶ್ನೆಗಳೂ ಮೂಡತೊಡಗಿದಾಗ ನಕಾಶೆಯ ಪ್ರಭೆ ಮಂಕಾಗತೊಡಗಿತು. ಮೋಹನದಾಸ ಟ್ರಾನ್ಸ್‌ನಿಂದ ಇಹಕ್ಕಿಳಿದ. ಮಂತ್ರದಂಡವೆನ್ನಲಾದ ಆ ತೇಗದ ಕಡ್ಡಿಯನ್ನು ಹೊರತೆಗೆದು ಅದರ ಮೇಲೆ ಸೂಕ್ಷ್ಮವಾಗಿ ಕೆತ್ತಿರುವ ವಾಕ್ಯವನ್ನು ಮತ್ತೊಮ್ಮೆ ಓದಿಕೊಂಡ.

"ನಾಸದಾಸೀತ್ ನೋಸದಾಸೀತ್ ತದಾನೀಂ..."

ಇದೇ ಮಂತ್ರವಾಕ್ಯವೇ? ಅದರರ್ಥವನ್ನು ತನಗೆ ಬಿಡಿಸಿ ಹೇಳುವಂತಹ ಯಾವ ಪಂಡಿತನ ಪರಿಚಯವೂ ಯಾವ ಗ್ರಂಥವೂ ಮೋಹನದಾಸನ ಬಳಿಯಿರಲಿಲ್ಲ. ಆ ವಾಕ್ಯವನ್ನು ಗೂಗಲ್ ಮಾಡಿದಾಗ ಅಂದುಕೊಂಡದ್ದಕ್ಕಿಂತ ಹೆಚ್ಚು ಸರ್ಚ್ ರಿಸಲ್ಟ್ ಒದಗಿ ಅಚ್ಚರಿಯಾಯಿತು.ಜಗತ್ತಿನ ಸೃಷ್ಟಿಯ ಜಿಜ್ಞಾಸೆಯಿರುವ ಋಗ್ವೇದದ ನಾಸದೀಯ ಸೂಕ್ತದ ಪ್ರಾರಂಭದ ವಾಕ್ಯವಾಗಿತ್ತದು. ನಾಸದೀಯ ಸೂಕ್ತದ ಪೂರ್ಣ ಪಾಠವೂ ಅನುವಾದವೂ ಇರುವ ವೆಬ್‌ಪೇಜನ್ನು ಮುದ್ರಿಸಿಕೊಂಡ. ಅನುವಾದವಿತ್ತಷ್ಟೇ ಹೊರತು ಸರಳ ಅರ್ಥ ತಿಳಿಸುವ ಯಾವ ಸೈಟ್ ಕೂಡ ಮೋಹನದಾಸನಿಗೆ ಸಿಗಲಿಲ್ಲ. ಸಂಪದದಲ್ಲಿ ಹಂಸಾನಂದಿ ಬರೆದ ಕನ್ನಡ ತರ್ಜುಮೆಯೂ ದೊರೆಯಿತು.

ಆದರೆ ತನ್ನ ಬುದ್ಧಿಮತ್ತೆ ಇಷ್ಟು ಗಹನವಾದ ಫಿಲಾಸಫಿಕಲ್ ವಿಷಯಗಳನ್ನು ಚರ್ಚಿಸುವಷ್ಟು ಪ್ರೌಢವಾಗಿಲ್ಲ, ಸರಳವಾಗಿ ತಾನೀಗ ಮಾಡ ಬೇಕಾಗಿರುವ ಅಥವಾ ಮಾಡಲು ಯತ್ನಿಸಬೇಕಾಗಿರುವ ಬಗ್ಗೆ ಯೋಚಿಸಬೇಕು ಎಂದು ನಿರ್ಧರಿಸಿದ.ನಾಸದೀಯ ಸೂಕ್ತವನ್ನು ದೇವನಾಗರಿಯಲ್ಲಿ ಓದಲು ಯತ್ನಿಸಿದ. ತುಂಬ ಕ್ಲಿಷ್ಟವಲ್ಲದಿದ್ದರೂ ನಾಲಗೆ ಮಗಚುವುದು ಆಚೀಚೆಯಾಯಿತು. ಸರಾಗವಾಗಿ ಓದುವಷ್ಟು ರೂಢಿಯಾದಾಗ ಕಾಗದವನ್ನು ಮಡಚಿ ಜೇಬಿಗಿಳಿಸಿದ.
ಇದೀಗ ಆ ಸೃಷ್ಟಿ ಕಾರ್ಯದ ಎರಡನೇ ಹಂತಕ್ಕೆ ತಯಾರಿ ನಡೆಸತೊಡಗಿದ ಮೋಹನದಾಸ. ತನ್ನ ವಿನ್ಯಾಸ ಈ ನಗರಕ್ಕೆ ಆವರಿಸುವುದನ್ನು ತಾನು ಕಣ್ಣಾರೆ ನೋಡಬೇಕು ಎಂದು ನಿರ್ಧರಿಸಿದ. ನಕಾಶೆಯ ಹಾಳೆಯನ್ನು ರೋಲ್ ಮಾಡಿ ರಟ್ಟಿನ ಉದ್ದ ಓಟೆಯೊಳಗೆ ತೂರಿಸಿದ. ಅಗತ್ಯದ ಕೆಲ ಸಾಮಾನುಗಳನ್ನು ಹೊಂದಿಸಿಕೊಂಡು ವಿನ್ಯಾಸವಿರುವ ರಟ್ಟಿನ ಓಟೆ, ಮಂತ್ರದಂಡ ಇತ್ಯಾದಿಗಳೊಂದಿಗೆ ಅವನು ಮನೆಯಿಂದ ಹೊರಬಿದ್ದಾಗ ನಡುರಾತ್ರಿ ಕಳೆದು ಗಂಟೆ ಒಂದು ಇಪ್ಪತ್ತಾಗಿತ್ತು.

ಆಗಸದಲ್ಲಿ ಮೋಡ ತುಂಬಿ ನಕ್ಷತ್ರಗಳನ್ನೂ ಆವರಿಸಿಕೊಂಡು ಕಡುಕತ್ತಲು ಹರಡಿತ್ತು. ಸುಮಾರು ಇನ್ನೂರೈವತ್ತು ವರ್ಷಗಳ ಹಿಂದೆ ಬಂದರಿನತ್ತ ಬರುತ್ತಿದ್ದ ವ್ಯಾಪಾರಿ ನಾವೆಗಳಿಗೆ ಕತ್ತಲ ದಾರಿ ತೋರಿಸಲು ನಿರ್ಮಾಣವಾಗಿದ್ದ ದೀಪಸ್ಥಂಭವೊಂದು ನಗರದ ಮಧ್ಯದ ನಡುಗುಡ್ಡೆಯ ತುದಿಯಲ್ಲಿತ್ತು. ತನ್ನ ಕಾರನ್ನು ಚಾಲು ಮಾಡಿ ಅದರತ್ತ ಚಲಾಯಿಸಿದ ಮೋಹನದಾಸ.

ಸ್ಥಂಭದ ತುತ್ತ ತುದಿಯಲ್ಲಿ ಒಂದು ಚಚ್ಚೌಕದ ಕೋಣೆ. ಕಂಬದ ಹೊಟ್ಟೆಯೊಳಗೆ ಸುರುಳಿಸುತ್ತುವ ಮೆಟ್ಟಲ ಸಾಲು ಹತ್ತಿ ಕೋಣೆ ಪ್ರವೇಶಿಸಿದ. ಮಸೂರ ಲಾಂದ್ರವಿರಿಸುವ ಒಂದು ಕಟ್ಟೆಯಂತಹ ನಿರ್ಮಾಣ ಕೋಣೆಯ ನಡುವೆ ಬಿಟ್ಟರೆ ಬೇರಾವ ವಸ್ತೂ ಆ ಕೋಣೆಯೊಳಗಿರಲಿಲ್ಲ. ನಾಲ್ಕು ಸುತ್ತಲೂ ಗಾಜಿನ ಚೌಕಟ್ಟುಗಳ ಕಿಡಕಿ ಸಾಲು. ಮೇಲೆ ಮಂಗಳೂರು ಹೆಂಚು ಹೊದೆಸಿದ ಮಾಡು.

ಹೊರಗೆ ಮೋಡಬಿರಿದು ಮಳೆ ಹನಿಯಲು ಪ್ರಾರಂಭವಾಗಿದ್ದು ಮಾಡಿನ ಮೇಲೆ ಅವು ಮಾಡುತ್ತಿದ್ದ ಶಬ್ದದಿಂದ ತಿಳಿಯುತ್ತಿತ್ತು. ಆಗೊಮ್ಮೆ ಈಗೊಮ್ಮೆ ಜಗ್ಗೆನ್ನುವ ಮಿಂಚಿನಿಂದ ಇಡೀ ನಗರ ಗೋಚರವಾಗುತ್ತಿತ್ತು. ಈ ಮಳೆಗಾಲದ ನಡುರಾತ್ರಿಯಲ್ಲಿ ನಗರವಿಡೀ ಮಲಗಿ ಸುದೀರ್ಘ ಉಸಿರೆಳೆಯುತ್ತಿತ್ತು. ಇವನೊಬ್ಬ ತನ್ನ ಕನಸನ್ನು ಹುಚ್ಚುಕಟ್ಟಿ ನಗರದ ತುತ್ತ ತುದಿಯಲ್ಲಿದ್ದ.

ವಿನ್ಯಾಸದ ಹಾಳೆಯನ್ನು ರಟ್ಟಿನ ಓಟೆಯೊಳಗಿಂದ ಹೊರತೆಗೆದು ಕಟ್ಟೆಯ ಮೇಲೆ ಹರಡಿದ. ಜೇಬಿನಲ್ಲಿರಿಸಿದ್ದ ನಾಸದೀಯ ಸೂಕ್ತದ ಕಾಗದವನ್ನು ಬಿಡಿಸಿ ಬೆಳಕಿಗೆಂದು ತಾನು ತಂದ ಬ್ಯಾಟರಿಯ ಲಾಟೀನನ್ನು ಹೊಂದಿಸಿಕೊಂಡ. ಬಲಗೈಯಲ್ಲಿ ಮಂತ್ರದಂಡವೆಂಬ ಆ ತೇಗದ ಮರದ ಕಡ್ಡಿಯನ್ನು ಹಿಡಿದುಕೊಂಡು ಸಿದ್ಧನಾದ. ಅವನು ಮಾಡುತ್ತಿರುವುದೆಲ್ಲ ಅವನಿಗೆ ತುಂಬ ಅಪ್ರಬುದ್ಧವೆನಿಸಿ ನಗುಬಂತು. ಇದರಿಂದ ಏನೊಂದು ನಿಶ್ಚಿತ ಪರಿಣಾಮವಾದೀತು ಎಂಬ ಬಗ್ಗೆ ಅವನಿಗೆ ಅನುಮಾನವಿತ್ತು.

ನಾಸದೀಯ ಸೂಕ್ತ ಓದಲಾರಂಭಿಸಿದ ಮೋಹನದಾಸ. ಅಪಭ್ರಂಶ ಉಚ್ಛಾರಗಳಿಂದ ತನಗೆ ಮಂತ್ರ ಸಿದ್ಧಿಸುವುದು ಅಷ್ಟರಲ್ಲೇ ಇದೆ ಎಂದು ಸಣ್ಣಗೆ ನಕ್ಕ. ಪೂರ್ತಿ ಓದಿದ ಮೇಲೆ ಒಮ್ಮೆ ಮಂತ್ರದಂಡವನ್ನು ಬೀಸಿ ಸಣ್ಣ ಜರ್ಕ್ ಕೊಟ್ಟು ನಕಾಶೆಗೆ ಮುಟ್ಟಿಸಿದ. ಯಾವ ಪವಾಡ ಕೂಡ ಜರಗಲಿಲ್ಲ. ಮತ್ತೆ ನಗು ಬಂತು ಮೋಹನದಾಸನಿಗೆ. ಕೆಳಗೆ ನಗರ ಮಳೆಗೆ ಒದ್ದೆಯಾಗುತ್ತ ತಣ್ಣಗೆ ಮಲಗಿತ್ತು.

ಮಳೆ ಜೋರಾಗತೊಡಗಿತ್ತು. ಮಾಡಿನ ಹೆಂಚು ಬಿಟ್ಟಿದ್ದ ಬಿರುಕುಗಳಿಂದ ಮಳೆನೀರು ಒಳಗೆ ಸುರಿಯತೊಡಗಿತು. ತಂದಿದ್ದ ಕೊಡೆಯನ್ನು ಬಿಡಿಸಿ ನಕಾಶೆಯ ಮೇಲೆ ಬೀಳದಂತೆ ಪ್ರಯತ್ನಿಸಿದ. ಆದರೆ ನೀರು ಕೋಣೆಯೊಳಗೆ ಸುರಿಯುವ ರಭಸ ಹೆಚ್ಚಾಗಿ ಇಡೀ ನಕಾಶೆ ಒದ್ದೆಯಾಗಿತ್ತು. ಮೋಹನದಾಸ ನೋಡನೋಡುತ್ತಿದ್ದಂತೆ ಅವನು ಆ ಹಾಳೆಯ ಮೇಲೆ ಇದ್ದಲ ಚೂರಿನಿಂದ ರಚಿಸಿದ್ದ ಆ ರೇಖೆಗಳೆಲ್ಲ ನೀರು ಬಿದ್ದು ಕರಗತೊಡಗಿದವು. ಹಾಗೆ ಕರಗಿದ ಮಸಿ ಮೆಲ್ಲನೆ ಚಲಿಸುತ್ತಾ ಒಟ್ಟಾಗಿ ಹಾಳೆಯಿಂದ ಹೊರ ಹರಿಯತೊಡಗಿತು.

ಮೋಹನದಾಸ ನೋಡನೋಡುತ್ತಿದ್ದಂತೆ ಅವನು ತಪಸ್ಸಿನಂತೆ ಧ್ಯಾನಿಸಿ ೧೪ ಗಂಟೆಗಳಕಾಲ ಕುಳಿತು ರಚಿಸಿದ ಆ ಹಾಳೆಯಲ್ಲಿರುವ ರೇಖೆಗಳೆಲ್ಲ ಮಸಿಯಾಗಿ ಹೊರಹರಿದು ಹಾಳೆ ಮತ್ತೆ ಸ್ವಚ್ಛವಾಗತೊಡಗಿತು. ಹಾಗೆ ಹೊರಹರಿದ ಮಸಿಯು ಕಟ್ಟೆಯ ಮೇಲಿಂದ ಕೆಳಗಿಳಿದು ಕೋಣೆಯಲ್ಲಿ ಹರಿಯತೊಡಗಿದ್ದ ನೀರಿನಲ್ಲಿ ದಾರಿ ಮಾಡಿಕೊಂಡು ತೇಲುತ್ತಾ ದೀಪಸ್ಥಂಭದ ತುತ್ತ ತುದಿಯಲ್ಲಿ ನಿರ್ಮಾಣವಾಗಿದ್ದ ಆ ಕೋಣೆಯ ಮೂಲೆಯಲ್ಲಿದ್ದ ತೂಬಿನಿಂದ ಹೊರ ಚೆಲ್ಲತೊಡಗಿತು.

ಪೆಚ್ಚುಪೆಚ್ಚಾಗಿ ದೀಪಸ್ಥಂಭದಿಂದ ಕೆಳಗಿಳಿದು ಕಾರು ಹತ್ತಿದ ಮೋಹನದಾಸ ಮನೆ ಸೇರುವಾಗ ಗಡಿಯಾರ ಮೂರು ಮುಕ್ಕಾಲು ತೋರಿಸುತ್ತಿತ್ತು.

*****

ಮೊಬೈಲ್ ಕರೆಯ ಸದ್ದಿಗೆ ಎಚ್ಚರವಾದಾಗ ಗಂಟೆ ಹನ್ನೊಂದಾಗಿತ್ತು. ಮೊಬೈಲ್ ರಿಂಗ್ ಹೊಡೆದು ಸುಮ್ಮನಾಗಿತ್ತು. ೨೭ ಮಿಸ್ಡ್ ಕಾಲ್‌ಗಳನ್ನು ನೋಡಿ ದಂಗಾದ. ಜಾಹ್ನವಿ ೧೫ ಸಲ, ಹೇಮರಾಜ್ ೮ ಸಲ ಮತ್ತು ಅಚ್ಚರಿಯ ವಿಷಯ ಡಿ.ಸಿ. ಆಫೀಸು ನಂಬರಿಂದ ೪ ಸಲ ಕಾಲ್ ಬಂದಿತ್ತು.

ಜಾಹ್ನವಿಗೆ ಕರೆ ಮಾಡಿದ."ಹಾಂ! ಮೋಹನ್! ಇನ್ನೂ ಮಲಗಿದ್ದಿಯಾ? ಒಮ್ಮೆ ಹೊರಗೆ ಬಾ. ಇಡೀ ನಗರವೇ ಬದಲಾಗಿದೆ. ನೀನು ಹೇಳುತ್ತಿದ್ದ ಎಲ್ಲ ಕನಸುಗಳೂ ರಾತೋರಾತ್ರಿ ನಿಜವಾಗಿದೆ. ಯಾವ ಪವಾಡ ಮಾಡಿದೆ ಮೋಹನ್!" ಜಾಹ್ನವಿ ತಮಾಷೆ ಮಾಡಿ ನಕ್ಕಳು. ಎದೆ ಚಳಕ್ಕೆಂದಿತು. ಸಿಡಿಲು ಬಡಿದಂತೆ ವಿಭ್ರಾಂತನಾಗಿ ಕುಳಿತ ಮೋಹನದಾಸ. ತಾನು ಅಪ್ರಬುದ್ಧನಂತೆ ಅಪಭ್ರಂಶವಾಗಿ ಓದಿ ಆ ತೇಗದ ಕಡ್ಡಿಯನ್ನು ಬೀಸಿದ್ದರಿಂದಲೇನು ಇದೆಲ್ಲ ಪವಾಡ ನಡೆದದ್ದು?

ಮತ್ತೆ ಮೊಬೈಲ್ ರಿಂಗಾಯಿತು. ಹೇಮರಾಜ್ ಕರೆ. "ಹೆಲೋ! ಹಾಂ! ನಾನು ಹೇಮರಾಜ್ ಮಾತಾಡೂದು. ಇದೆಲ್ಲ ನೀನೇ ಮಾಡಿದ್ದೋ ಅಲ್ಲವೋ ಎಂಬುದು ನನಗೆ ಗೊತ್ತಿಲ್ಲ!. ಆದರೆ ಯೂ ಆರ್ ಇನ್ ಡೇಂಜರ್ ಮೈ ಬಾಯ್! ದಿ ವ್ಹೋಲ್ ಸಿಟಿ ಈಸ್ ಇನ್ ಅಟರ್ ಕೆಯಾಸ್! ಇವತ್ತು ಹೊರಗೆ ಬರಬೇಡ. ಹೆಲ್ಪ್ ಬೇಕಾದರೆ ಫೋನ್ ಮಾಡು. ಪ್ಲೀಸ್ ಟೇಕ್ ಕೇರ್" ಎಂದು ಫೋನಿಟ್ಟ ಹೇಮರಾಜ್.

ಗಂಟಲಿಂದ ಸ್ವರವೇ ಹೊರಡುತ್ತಿರಲಿಲ್ಲ. ಟಿ.ವಿ. ಆನ್ ಮಾಡಿದ. ಎಲ್ಲ ಚ್ಯಾನಲ್‌ಗಳಲ್ಲೂ ಇದೇ ಸುದ್ದಿ. ಬಾತ್ಮಿದಾರರು ನಗರದ ಹಿನ್ನೆಲೆಯನ್ನಿಟ್ಟು ವರದಿ ಮಾಡುತ್ತಿದ್ದರು. ನಗರ ಸುಂದರವಾಗಿ ಕಾಣುತ್ತಿತ್ತು. ಖುಶಿಯಾಯಿತು ಮೋಹನದಾಸನಿಗೆ. ಮೆಲ್ಲನೇ ಅವರಾಡುತ್ತಿರುವ ಶಬ್ದಗಳೆಲ್ಲ ಕಿವಿಗೆ ಬಿದ್ದು ಒಳಗೆ ಇಳಿಯತೊಡಗಿದಾಗ ಅದರರ್ಥ ಅರಿವಾಯಿತು. ತಾನೆಣಿಸಿದ ಹಾಗೆ ಜನರು ಖುಶಿ ಪಟ್ಟಿಲ್ಲ ಬದಲಾಗಿ ವಾಚಾಮಗೋಚರ ಶಾಪ ಹಾಕುತ್ತಿದ್ದರು.

ಟಿ.ವಿ. ಚ್ಯಾನಲ್‌ಗಳು ಬದಲಾದ ಈ ನಗರವಿನ್ಯಾಸದಿಂದ ಹುಸಿಹುಳುಕುಗಳನ್ನೆತ್ತಿ ಬುದ್ಧಿವಂತರಂತೆ ಚರ್ಚಿಸುತ್ತಿದ್ದವು.

ಫ್ಲೈಒವರ್‌ಗಳ ಮುಂದೆ ಗೊಂದಲ ನಿರ್ಮಾಣವಾಗಿತ್ತು. ಅಗಾಧ ಗಾತ್ರದ ದಾರಿಫಲಕಗಳು ಮೇಲೆ ತೂಗಾಡುತ್ತಿದ್ದರೂ ಕುರುಡರಂತೆ ರಸ್ತೆ ಮಧ್ಯದಲ್ಲೆ ನಿಲ್ಲಿಸಿ ಅಕ್ಕಪಕ್ಕದವರ ಬಳಿ ದಾರಿ ಕೇಳುತ್ತಿದ್ದರು. ಇಡೀ ನಗರದ ರಸ್ತೆಗಳ ಚಲನೆಯ ಸ್ವರೂಪದಲ್ಲಿ ಬಹಳಷ್ಟು ಬದಲಾವಣೆಯಾದ ಪರಿಣಾಮವಾಗಿ ಗೊಂದಲದಿಂದ ಎಲ್ಲ ಕಡೆ ಕೃತಕ ಜಾಮ್ ಉಂಟಾಗಿತ್ತು. ಯಾವ ರಸ್ತೆವ್ಯೂಹವನ್ನು ಇವನು ಸರಾಗ ವಾಹನ ಸಂಚಾರಕ್ಕೆಂದು ರೂಪಿಸಿದ್ದನೋ ಅದೇ ಈಗ ಚಲನೆಯನ್ನು ನಿರ್ಬಂಧಿಸಿತ್ತು.

ಇವನು ಹೆಚ್ಚು ಪ್ರಮುಖ ರಸ್ತೆಗಳಲ್ಲಿ ನಿರ್ಮಿಸಿದ್ದ ಬಸ್ ರಾಪಿಡ್ ಟರ್ಮಿನಲ್ ಎಂಬ ಬಹುಲೇನ್ ವ್ಯವಸ್ಥೆಯ ರಸ್ತೆಯಲ್ಲೆಲ್ಲ ದೊಂಬಿ ನಡೆಯುತ್ತಿತ್ತು. ಬಸ್ಸುಗಳಿಗೂ ಕಾರುಗಳಿಗೂ ದ್ವಿಚಕ್ರಗಳಿಗೂ ಪ್ರತ್ಯೇಕ ಸ್ಪಷ್ಟವಾಗಿ ನಿರ್ದಿಷ್ಟ ಬಣ್ಣಬಳಿದ ಲೇನ್‌ಗಳು, ಬಸ್ಸುಗಳಿಗೆ ಕ್ಷಿಪ್ರ ನಿಲುಗಡೆಯ ವಿನ್ಯಾಸ, ಇತ್ಯಾದಿ ಬಹಳ ಪುರೋಗಾಮಿ ವ್ಯವಸ್ಥೆ ಜನರಿಗೆ ಅರ್ಥವೇ ಆಗಿರಲಿಲ್ಲ. ಬಸ್ ಲೇನ್‌ನಲ್ಲಿ ಕಾರುಗಳು, ದ್ವಿಚಕ್ರಿಗಳು ನುಗ್ಗಿ ಗೊಂದಲ ಏರ್ಪಟ್ಟಿತ್ತು. ದ್ವಿಚಕ್ರಿಯೊಬ್ಬ ಬಸ್ಸಿನಡಿಗೆ ಬಿದ್ದು ಸತ್ತಿದ್ದ. ಜನ ಉದ್ರಿಕ್ತರಾಗಿ ಬಸ್ಸನ್ನು ಸುಟ್ಟು ಹಾಕಿದ್ದರು. ಬಸ್ಸಿನವರು ಮಿಂಚಿನ ಸ್ಟ್ರೈಕ್ ಹೂಡಿ ತಾವು ಈ ಅವೈಜ್ಞಾನಿಕ ಬಿ.ಆರ್.ಟಿಯನ್ನೂ ಬಹುಮಹಡಿ ಬಸ್ಸು ನಿಲ್ದಾಣವನ್ನೂ ಬಳಸುವುದಿಲ್ಲ ಎನ್ನುವ ಶಪಥ ಹಾಕಿದ್ದರು. ಸರಕಾರಕ್ಕೆ ಆರು ದಿನಗಳ ಗಡುವು ನೀಡಿ ಅಷ್ಟರೊಳಗೆ ಬಿ.ಆರ್.ಟಿ.ಯನ್ನು ನಿರ್ನಾಮಗೊಳಿಸಿ ರಸ್ತೆಯನ್ನು ಸುಗಮಗೊಳಿಸದಿದ್ದರೆ ಅನಿರ್ದಿಷ್ಟ ರಸ್ತೆ ತಡೆ ಹೂಡುವುದಾಗಿ ಬೆದರಿಕೆ ಹಾಕಿದ್ದರು.

ಸಮುದ್ರದಂಡೆಯ ಗುಂಟ ಇವನು ನಿರ್ಮಿಸಿದ್ದ ನೆಕ್‌ಲೇಸ್ ಕಾರಿಡಾರ್ ಮೀನುಗಾರರ ತೀವ್ರ ಪ್ರತಿಭಟನೆಗೆ ಈಡಾಗಿತ್ತು. ಸಮುದ್ರ ಕೊರೆತ ಇದರಿಂದ ಹೆಚ್ಚಾಗಲಿದೆ ಎನ್ನುವ ವಾದವನ್ನು ಅವರು ತಮ್ಮ ಹೇಳಿಕೆಯಲ್ಲಿ ಮಂಡಿಸಿದ್ದರು.

ನಗರದ ಶಾಲೆಗಳಿಗೆ ಹೋಗುವ ಪ್ರತಿ ಮಗುವೂ ರಸ್ತೆ ದಾಟುವ ಗೊಂದಲವಿಲ್ಲದೆ, ಅವಘಡದ ಹೆದರಿಕೆಯಿಲ್ಲದೇ ಪ್ರಯಾಣಿಸಬೇಕೆನ್ನುವ ಉದ್ದೇಶದಿಂದ ಮೋಹನದಾಸ ಬಹಳ ಯೋಚಿಸಿ ರೂಪಿಸಿದ್ದ ಭೂಗತ ಟ್ರಾಮ್ ವ್ಯವಸ್ಥೆಯಾಗಲೀ, ಸುವ್ಯವಸ್ಥಿತ ನಗರ ಸಾರಿಗೆ ಮೆಟ್ರೋ ರೈಲ್ ಆಗಲೀ ಯಾರ ಗಮನಕ್ಕೂ ಬರದೇ ಅದರ ಬಗ್ಗೆ ಪ್ರತಿಕ್ರಿಯೆ ಇನ್ನೂ ವ್ಯಕ್ತವಾಗಿರಲಿಲ್ಲ.

ಟಿ.ವಿ.ಗಳಲ್ಲಿ ಚರ್ಚೆ ನಡೆಯುತ್ತಿತ್ತು. ರಾಜಕಾರಣಿಗಳು, ಆರ್ಕಿಟೆಕ್ಟ್‌ಗಳು, ಎನ್ಜಿಓಗಳು, ಮಹಿಳಾ ಸಂಘಗಳು, ಕಾರ್ಮಿಕ ಸಂಘಗಳು, ಬಸ್ಸು, ರಿಕ್ಷಾ, ಟ್ಯಾಕ್ಸಿ ಮಾಲಕ-ಚಾಲಕರ ಸಂಘಟನೆಗಳು ಇನ್ನೂ ಹಲವು ಗುಂಪುಗಳನ್ನು ಪ್ರತಿನಿಧಿಸುವವರು ತಲೆಗೊಂದು ಕಾರಣ ನೀಡಿ ಬದಲಾವಣೆಯನ್ನು ವಿರೋಧಿಸುತ್ತಿದ್ದರು.

ಇಷ್ಟೆಲ್ಲ ಗೊಂದಲ, ದೊಂಬಿಗಳ ನಡುವೆ ಈ ಬದಲಾವಣೆಯ ಪರವಾಗಿ ಯಾರೂ ಮಾತನಾಡಿರಲಿಲ್ಲ.

ರಾಜಕಾರಣಿಗಳಿಗೆ ಈ ಬದಲಾವಣೆಯು ತಮಗೆ ತಿಳಿದೇ ಇರಲಿಲ್ಲವೆಂದು ಹೇಳಲು ಸಂಕೋಚವಾಗಿ, ಆಡಳಿತ ಪಕ್ಷ ಹಿಂದಿನ ಸರಕಾರದ ಮೇಲೂ, ಹಿಂದಿನ ಸರಕಾರ ನಡೆಸಿ ಇಂದು ವಿರೋಧಿ ಸ್ಥಾನದಲ್ಲಿ ಕುಳಿತಿದ್ದ ಇನ್ನೊಂದು ಪಕ್ಷ ಸರಕಾರದ ಮೇಲೂ ಪರಸ್ಪರ ದೋಷಾರೋಪಣೆ ನಡೆಸಿ ಕೃತಾರ್ಥರಾಗುತ್ತಿದ್ದರು.

ಮೋಹನದಾಸ ಧಿಗ್ಮೂಢನಾಗಿ ಕುಳಿತಿದ್ದ. ಹೊರ ಬಾಗಿಲ ಕರೆಗಂಟೆಯಾಯಿತು.

ಬಾಗಿಲು ತೆರೆದರೆ ಸ್ವತಹ ಜಿಲ್ಲಾಧಿಕಾರಿ ನಿಂತಿದ್ದರು. ಹಿಂದೆ ಪೋಲಿಸ್ ಅಧಿಕಾರಿಗಳೂ ಇದ್ದರು. ಗೇಟಿನ ಹೊರಗೆ ಹಸಿರು ಬಣ್ಣದ ಬಸ್ಸು ನಿಂತಿತ್ತು. ಅದಾಗಲೇ ಸ್ಟೆನ್ ಗನ್ ಹಿಡಿದ ಒಂದು ಹಿಂಡು ಸಿ.ಆರ್.ಪಿ. ಪಡೆ ಇವನ ಮನೆಯನ್ನು ಸುತ್ತುವರೆದಿತ್ತು. ನೀಟಾಗಿ ಸೂಟ್ ಧರಿಸಿದ ಹದಿನಾರು ಮಂದಿ ಎಫ್.ಬಿ.ಐ. ಮಾದರಿಯಲ್ಲಿ ಮನೆ ಒಳಗೆ ನುಗ್ಗಿ ಶೋಧಿಸಲಾರಂಭಿಸಿದರು.

ಮೋಹನದಾಸ ಗರಬಡಿದು ಬಾಗಿಲಲ್ಲಿ ನಿಂತಿದ್ದ.