ಮೇ 4, 2011

ದೆಗಡಿ


(ವಿ.ಸೂ.: ಗಟ್ಟಿಯಾಗಿ ಓದಿಕೊಳ್ಳುವುದು)

ದೆಟ್ಟರೆದುರು ದಾಕು ಬಾತು
ಆಡದಿರುವುದು ಸಭ್ಯವೇ?
ಆದರೆದ್ದಯ ಬೂಗು ಕಟ್ಟಿದೆ
ಬಾತದಾಡಲು ಸಾಧ್ಯವೇ?

ಎಟ್ಟುದಿದಗಳು ಕಳೆದರಿದ್ದೂ
ಬೂಗು ಭರ್ತಿ ಕಟ್ಟಿದೆ
ಅವದು ಇವದು ಹೇಳಿದೆಲ್ಲ
ಬದ್ದು ಬಾಡಿ ಆಗಿದೆ

ಅಬ್ರತಾಜಡ ತಿಕ್ಕಿ ದೋಡಿ
ಎದ್ದರೊಬ್ಬರು ಗೆಳೆಯರು
ಸುಟ್ಟ ಅರಶಿಡ ಹೊಗೆಯ ಬೂಸಲು
ಅಳಲೆ ಪಡ್ಡಿತ ಕರೆದರು

ಅಬ್ರತಾಜಡ ತಿಕ್ಕಿ ತಿಕ್ಕಿ
ಬೂಗು ಸುಲಿದೇ ಹೋಯಿತು
ಅರಶಿಡ ಹೊಗೆಯ ಕಪ್ಪು ಕಾಡಿಗೆ
ಬೂಗಿದೊಳಗೆ ಅಟ್ಟಿತು

ಕಷಾಯ ತದ್ದರು ಅತ್ತೆ ಅದಕೆ
ಬೂಗಿದಿದ್ದ ಸೆಳೆಯಲು
ಕೊಚ್ಚ ಹೊತ್ತು ಬೂಗಲಿರಿಸಿ
ಬಳಿಕ ಬೂಗು ತೊಳೆಯಲು

ದೋಡೇ ಬಿಡುವ ಎದ್ದು ದಾದು
ಬೂಗಿದೊಳಗೆ ಸೆಳೆದೆದು
ದೆತ್ತಿಗೇರಿತು ಎದ್ದ ಪ್ರಾಡವು
ದೆಗಡಿ ಹಾಗೇ ಉಳಿಯಿತು

ಅಕ್ಕ ಒದ್ದು ದಶ್ಯ ಕೊಟ್ಟರು
ಸೆಳೆದು ದೋಡು ಎದ್ದರು
ದೆಗಡಿಯೊಬ್ಬೆ ಬುಗಿಯಲೆದ್ದು
ದೊಡ್ಡ ಚಿಟಕು ಹಿರಿದೆದು

ಕಡ್ಡು ಬೂಗಿಗೆ ಬೆಕ್ಕಿ ಹಿಡಿಯಿತು 
ಹತ್ತಿ ಉರಿಯಿತು ಲೋಕವು
ಅಕ್ಕ ದೀಡಿದ ದಶ್ಯವೆದ್ದರೆ
ಬೆಡಸು ಕಾಳಿದ ಹುಡಿಯದು 

ದಿಬಗೆ ತಿಳಿದ ಬದ್ದು ಇದ್ದರೆ
ದದಗೆ ಕೊಚ್ಚ ತಿಳಿಸಿರಿ
ಬೆಡಸು, ಕಾಳು, ದಶ್ಯ, ಅರಶಿಡ
ಬಿಟ್ಟು ಬೇರೆ ಹೇಳಿರಿ

- ಕೊಂಕಣಿ ಮೂಲ: ಫಾ. ಪಾವ್ಲ್ ಲುವಿಸ್ ಬೊತೆಲ್
-ಕನ್ನಡಕ್ಕೆ: ಗುರು ಬಾಳಿಗಾ

ಫೆಬ್ರವರಿ 3, 2011

ಒಂದು ಹೆಸರಿಲ್ಲದ ಕೊಂಕಣಿ ಕವಿತೆ


ಮನೆಯೊಳಗೆ ಬರೀ ಮನುಷ್ಯರಷ್ಟೇ ಅಲ್ಲ
ನಾಯಿ ಬೆಕ್ಕುಗಳೂ ಬೇಕು
ಅವಿಲ್ಲದೇ ಮನೆ ಮನೆಯಾಗುವುದಿಲ್ಲ


ಮನೆಯೊಳಗೆ ಇಲಿ ಇರಬೇಕು
ಮನೆಯೊಳಗೆ ಜಿರಲೆಗಳೂ ಬೇಕು
ಮನೆಯೊಳಗೆ ಬೇಕು ಹಲ್ಲಿ
ಮನೆಯೊಳಗಿರಬೇಕು ಸೊಳ್ಳೆಗಳು


ಮನೆಗೆ ಆಗಾಗ ಬರುತ್ತಿರಬೇಕು ನೆಂಟರು
ಆಯುಷ್ಯದಲ್ಲಿ ಒಮ್ಮೆಯಾದರೂ
ಮನೆಯೊಳಗೆ ಬರಬೇಕು ಹಾವು
ಹಾಗಾಗದೇ ಮನೆ ಮನೆಯೆನಿಸುವುದಿಲ್ಲ


ಮನೆ ಕೇವಲ ಮನುಷ್ಯನದೇ ಮತ್ತು
ಮನುಷ್ಯನಿಗಾಗಿಯಷ್ಟೇ ಅಲ್ಲ
ಮನೆ ಸರ್ವ ಪ್ರಾಣಿಸಂಕುಲಕ್ಕೆ ಸೇರಿದ್ದು


ನಾನು ವಾಸಿಸುವ ಮನೆಯೊಳಗೆ
ಅವೆಲ್ಲ ಇವೆ.
ನಾನೇ ಇಲ್ಲ!


- ಕಾಶಿನಾಥ್ ಶಾಂಬಾ ಲೋಲಿಯೆಂಕಾರ್


ಎಸ್. ಡಿ. ತೆಂಡುಲ್ಕರ್ ಎನ್ನುವ ಮಹಾನುಭಾವ ಕೊಂಕಣಿ ಕವಿತೆಗಳನ್ನು ಬರೆಯುವುದು ಕಾಶಿನಾಥ್ ಶಾಂಬಾ ಲೋಲಿಯೆಂಕಾರ್ ಎನ್ನುವ ಹೆಸರಿನಲ್ಲಿ.
ವಿಚಿತ್ರ ಸ್ವಭಾವದ ಈ ಕವಿ, ತನ್ನ ಫೋಟೋ ಯಾರಿಗೂ ಕೊಡುವುದಿಲ್ಲ. ಫೋಟೋ ತೆಗೆಯಲೂ ಬಿಡುವುದಿಲ್ಲ. ಪ್ರಶಸ್ತಿಗಳಿಗೆ ಪುಸ್ತಕ ಕಳುಹಿಸುವುದಿಲ್ಲ. ಯಾರಾದರೂ ತಾವಾಗಿಯೇ ಪ್ರಶಸ್ತಿ ನೀಡಿದರೂ ಸ್ವೀಕರಿಸುವುದಿಲ್ಲ. 
ಅವರ ಕವಿತೆಗಳೂ ಅವರಂತೆಯೇ, ಬೇರೇಯೇ ತರದವು. ಇಡೀ ಭಾರತೀಯ ಸಾಹಿತ್ಯದಲ್ಲೇ ಬೇರೆಯೇ ಎನಿಸುವಂತವು.


ಕೃಪೆ: http://www.kavitaa.com/

ಜನವರಿ 20, 2011

ಒಂದು ಗುಟ್ಟು

ಇಬ್ಬರು ಹುಡುಗಿಯರು
ಜೀವನದ ಗುಟ್ಟನ್ನು ಕಾವ್ಯದ
ಒಂದು ಅಚಾನಕ್ ಸಾಲಿನಲ್ಲಿ
ಕಂಡುಕೊಂಡರಂತೆ.

ಆ ಗುಟ್ಟನ್ನು
ತಿಳಿಯದಿರುವ ನಾನೇ 
ಆ ಸಾಲನ್ನು ಬರೆದಿದ್ದೆ. ಅವರು ನನಗೆ 
ಹೇಳಿ ಕಳುಹಿಸಿದರು,

(ಯಾರದೋ ಮೂಲಕ)
ಅವರು ಅದನ್ನು 
ಕಂಡುಕೊಂಡಿರುವರೆಂದು,
ಅದು ಏನೆಂದು ಅಥವಾ

ಯಾವ ಸಾಲಿನಲ್ಲೆಂದು 
ಕೂಡ ಅಲ್ಲ. ಒಂದು ವಾರಕ್ಕೆ 
ಮಿಗಿಲಾಯ್ತು, ಇದೀಗ ಅವರು
ಆ ಗುಟ್ಟನ್ನು ಮರೆತಿರುವುದರಲ್ಲಿ

ಸಂಶಯವಿಲ್ಲ,
ಆ ಸಾಲು ಮತ್ತು ಕವಿತೆಯ
ಹೆಸರನ್ನೂ ಕೂಡ. ನಾನೂ ಕಾಣದ್ದನ್ನು
ಅವರು ಕಂಡದ್ದಕ್ಕೆ, ನನಗೆ

ಅವರ ಮೇಲೆ ಪ್ರೀತಿ,
ಆ ಸಾಲನ್ನು ಬರೆದುದಕ್ಕಾಗಿ
ನನ್ನ ಪ್ರೀತಿಸಿದರಲ್ಲ ಅದಕ್ಕೂ, ಜೊತೆಗೆ
ಮರೆತುಬಿಟ್ಟದ್ದಕ್ಕೂ. ಅವರಿನ್ನು 

ಸಾವಿರ ಸಲ, ಸಾವು 
ಅವರನ್ನು ಅರಸುವ ತನಕ, 
ಮತ್ತೆ ಮತ್ತೆ ಕಂಡುಕೊಳ್ಳಬಹುದು, ಇತರ
ಸಾಲುಗಳಲ್ಲಿ,

ಇತರ ಘಟನೆಗಳಲ್ಲಿ. ಮತ್ತು
ಅದನ್ನು ತಿಳಿಯ 
ಬಯಸಿದ್ದಕ್ಕಾಗಿ, 
ಹಾಗೊಂದು ಗುಟ್ಟು 

ಇದೆಯೆಂದು
ಊಹಿಸಿದ್ದಕ್ಕಾಗಿ, ಹೌದು,
ಅದನ್ನು ಎಲ್ಲಕ್ಕಿಂತ ಹೆಚ್ಚು
ಪ್ರೀತಿಸುತ್ತೇನೆ.
_____________________
ಡೆನಿಸ್ ಲೆವೆರೆಟಾವ್

ಜನವರಿ 19, 2011

ಸೆಗಣಿ

ಊರೊಳಗೆ ಕಾಲಿಡಲು ಜಾಗವಿಲ್ಲ
ಎಲ್ಲಿ ನೋಡಿದರಲ್ಲಿ ಸೆಗಣಿ..

ಗಲ್ಲಿಗಲ್ಲಿಯಲ್ಲಿ,
ಹೆಜ್ಜೆ ಹೆಜ್ಜೆಗೂ,
ಬೀದಿಯಲ್ಲಿ, ಬಾಗಿಲಲ್ಲಿ,

ಚಪ್ಪಲಿ ಕೊಳೆಯಾದೀತೆಂದು
ಬರಿಗಾಲಲ್ಲಿ ನಡೆಯುತ್ತಿದ್ದರು ಜನರು
ನಾನೂ ಮೊದಲ ಬಾರಿಗೆ
ಬರಿಗಾಲಲ್ಲಿ, ಭಿಕಾರಿಯೆಂದಲ್ಲ.

ಕೊನೆಗೊಮ್ಮೆ ತುಳಿದೇ ಬಿಟ್ಟೆ!

ಎಷ್ಟೆಂದು ಹಾರಿ ಎಗರಲಿ ನಾನು,
ಎಷ್ಟೆಂದು ಟೊಂಕ ಹಾಕಲಿ,
ಎಷ್ಟೆಂದು ಆಡಲಿ ಕುಂಟಾಬಿಲ್ಲೆ,

ನೀರರಸಿ ನಡೆದಾಗ
ಬಳಿಯಲ್ಲೇ ಇತ್ತು ಇಗರ್ಜಿ

ಅಲ್ಲಿ, ಅಂತಿಮ
ಗುರುವಾರದ ಪೂಜೆ, 
ಪಾದರಿ ಆಪೋಸ್ತಲರ
ಕಾಲು ತೊಳೆಯುತ್ತಿದ್ದರು

ಕಿಟಕಿಯಿಂದ ಇಣುಕುತ್ತಾ ನಿಂತೆ

ಈ ಕೊಳೆ ತೊಳೆಯಲು
ಆ ’ಟೀಸ್ಪೂನ್’ ನೀರು ಎಲ್ಲಿ ಸಾಕು?
ಈ ಕಾಲು ಒರಸಲು
ಅವರ, ತುಣುಕು ಅಂಗೈಬಟ್ಟೆ ಎಲ್ಲಿ ಸಾಕು?

ಆ ಕ್ಷಣಕ್ಕೆ,
ಗುಡುಗು ಮಿಂಚು,
ಮಳೆ ಸುರಿದೇ ಸುರಿಯಿತು

ಸೂರಿನ ಅಂಚಿನಿಂದ ಸುರಿಯುತ್ತಿರುವ
ನೀರಧಾರೆಗೆ ಕಾಲೊಡ್ಡಿದೆ.
ಕೊಳೆಯೆಲ್ಲಾ ತೊಳೆದು ಹೋಯಿತು.

ಅಂಟಿರುವ ಕೊಳೆತೊಳೆದು ಪುನೀತನಾಗಲು
ಒಳಗೆ ಹೋಗಬೇಕೆಂದೇನೂ ಇಲ್ಲ.
ಹೊರಗೆ ನಿಂತರೂ ಸಾಕು
ಮೈಲಿಗೆಯ ಅಂಜಿಕೆಯೂ ಇಲ್ಲ.
____________________________
ಕೊಂಕಣಿ ಮೂಲ: ಮೆಲ್ವಿನ್ ರೊಡ್ರಿಗಸ್