ಜನವರಿ 26, 2009

ಗಣರಾಜ್ಯೋತ್ಸವ ಪರೇಡು ಎಂಬ ರಾಷ್ಟ್ರೀಯ ದೇಖಾವೆ

ದೆಹಲಿಯ ರಾಜಪಥ ಎಂಬ ರಸ್ತೆಯಲ್ಲಿ ಒಂದು ಸೋಡಾಗಾಡಿ ಹೋದರೂ ವೈಭವೋಪೇತವಾಗಿಯೇ ಕಾಣುತ್ತದೆ. ರಾಜಪಥದ ಒಟ್ಟು ಗಾಂಭೀರ್ಯವೆ ಅಷ್ಟು ಮೆಜೆಸ್ಟಿಕ್. ಅಂಥದ್ರಲ್ಲಿ ಶಿಸ್ತಾಗಿ ಯೂನಿಫಾರಂ ಮತ್ತು ಪ್ರತ್ಯೇಕ ಬಣ್ಣದ ಮುಂಡಾಸು ಧರಿಸಿ ಕವಾಯತು ನಡೆಸುವ ಸೈನ್ಯದ ತುಕಡಿಗಳು, ಒಂಟೆ ಪಡೆ, ಕುದುರೆ ಪಡೆ, ಇನ್ನಿತರ ಹಲವು ವಿಶಿಷ್ಟ ವೇಷದ ಪದಾತಿ ದಳಗಳು ಕಾಣಲು ಮುದವೆನಿಸುವುದು ಮತ್ತು ಫೋಟೋ ಒಪ್ಪ ಆಗಿರುವುದರಿಂದ ಪತ್ರಿಕೆಗಳಲ್ಲೂ ಟಿವಿಯಲ್ಲೂ ರಾರಾಜಿಸುವುದು ಅತ್ಯಂತ ಸಹಜವೂ ಅನಾಯಾಸವೂ ಆಗಬೇಕು.

ಇದೆ ಮೊದಲ ಬಾರಿ ನಾನು ಪರೇಡ್ ನೋಡಲು ಹೋಗಿದ್ದು. ಗಂಟೆ ಒಂಬತ್ತುವರೆಗೆಲ್ಲ ಹಾಜರಿರಬೇಕಾದುದರಿಂದ ದೆಹಲಿಯ ಖಾಲಿ ರಸ್ತೆಗಳಲ್ಲಿ ಹಾಕಲಾಗಿದ್ದ ಪೊಲೀಸರ ರಕ್ಷಣಾ ಚಕ್ರವ್ಯೂಹವನ್ನು ಸುತ್ತಿ ಸುತ್ತಿ ಕೊನೆಗೆ ತಲುಪಿದರೂ ಅಲ್ಲಿಂದ ನೂರೈವತ್ತು ಮೀಟರ್ ಇರುವ ನಮ್ಮ ಖುರ್ಚಿಗಳ ಬಳಿ ಸಾಗಲು ನಡೆದ ನೂಕು ನುಗ್ಗಲು ಒಂದು ಅಚ್ಚರಿಯೇ. ಪೂರ್ವಭಾವಿ ಟಿಕೆಟ್ಟು ಮಾರಾಟದಿಂದ ಎಷ್ಟು ಜನ ವೀಕ್ಷಕರು ಬರುವರೆಂದು ಸಮಗ್ರ ಕಲ್ಪನೆಯಿದ್ದರೂ ವ್ಯವಸ್ಥೆ ಇಷ್ಟು ಕೆಳ ಮಟ್ಟದಲ್ಲಿದ್ದು ನನಗೆ ವಿಷಾದವೆನಿಸಿತು. ಪ್ರತೀ ಗ್ಯಾಲರಿಗೆ ಹೋಗಲು ಕೇವಲ ಒಂದು "ಲೋಹ ಶೋಧಕ ಬಾಗಿಲ ಚೌಕಟ್ಟು" ಅನಾವಶ್ಯಕ ನೂಕುನುಗ್ಗಲನ್ನು ಸೃಷ್ಟಿಸುತ್ತಿತ್ತು. ಈ ನೂಕುನುಗ್ಗಲಲ್ಲಿ ತಪಾಸಕರೂ ತಡವುದನ್ನು ಎಷ್ಟು ಪರಿಣಾಮಕಾರಿಯಾಗಿ ಮಾಡಲು ಸಾಧ್ಯ ಎನ್ನುವುದು ಸೋಜಿಗ.

ಈ ನಾಡ ಹಬ್ಬದ ಮೆರವಣಿಗೆಗೆ ಸುಮಾರು ೪ ತಿಂಗಳಿಂದ ತಯಾರಿ ಶುರುವಾಗುತ್ತದೆ. ನಮ್ಮ ರಕ್ಷಣಾ ಮಂತ್ರಾಲಯ ಬಡಿಗೆ ಹಿಡಕೊಂಡು ಅಂಗಳದಲ್ಲಿ ಸಿಪಾಯಿಗಿರಿ ಮಾಡುತ್ತಾ ಭಾಗವಹಿಸುವ ತಂಡಗಳು ಟ್ಯಾಬ್ಲೋಗಳನ್ನೂ, ಇನ್ನುಳಿದ ಸಾಂಸ್ಕೃತಿಕ ತುಕಡಿಗಳನ್ನೂ ಸಜ್ಜುಗೊಳಿಸುವಾಗ ಮೂಗು ತೂರಿಸುತ್ತಾ ಇರುತ್ತದೆ. ಪ್ರತೀ ರಾಜ್ಯವೂ ಹಣ ತೊಡಗಿಸಿ ಟ್ಯಾಬ್ಲೋಗಳನ್ನು ಹಮ್ಮಿಕೊಳ್ಳಲು ಹಲವು ಸ್ತರದಲ್ಲಿ ಸ್ಪರ್ಧಿಸುತ್ತದೆ.

ಬ್ರಹ್ಮೋಸ್ ಕ್ಷಿಪಣಿಗಳು, ಅರ್ಜುನ ಮತ್ತು ಭೀಷ್ಮ ಟ್ಯಾಂಕುಗಳು ಹೆಮ್ಮೆ ಪಡುವಷ್ಟು ಹೈಟೆಕ್ ಆಗಿ ಕಾಣಲಿಲ್ಲ. ನಮ್ಮ ವಾಯುಪಡೆಯ ಹೆಲಿಕಾಪ್ಟರುಗಳು, ಜೆಟ್ಟುಗಳು ಇನ್ನಿತರ ಪ್ರದರ್ಶನಗಳು ಸುಮಾರಾಗಿದ್ದವು. ಟ್ಯಾಬ್ಲೋಗಳ ಗುಣಮಟ್ಟ ಒಂದು ರಾಷ್ಟ್ರೀಯ ದೇಖಾವೆಗೆ ಸಲ್ಲುವಂತಿರಲಿಲ್ಲ. ಕರ್ನಾಟಕದ ಟ್ಯಾಬ್ಲೋ ಇರಲಿಲ್ಲ, ಇದ್ದಿದ್ದರೆ ಅದು ಬಹಳ ಚಂದವಿರುತ್ತಿತ್ತು ಎನ್ನುವ ಧೈರ್ಯ ನನಗಿಲ್ಲ. (ಪ್ರಗತಿ ಮೈದಾನದ ಅಂತರಾಷ್ಟ್ರೀಯ ವ್ಯಾಪಾರ ಮೇಳದಲ್ಲಿ ಕರ್ನಾಟಕ ಪೆವಿಲಿಯನ್ ಎಷ್ಟು ಆಲಸ್ಯದಿಂದ ಸಜ್ಜಾಗುತ್ತದೆ ಎನ್ನುವುದನ್ನು ನಾನು ಕಳೆದ ಮೂರು ವರ್ಷಗಳಿಂದ ಗಮನಿಸಿದ್ದೇನೆ.)

ಧರ್ಮಸ್ಥಳದ ನಡಾವಳಿ ಅಥವಾ ಆಳ್ವರ ವಿರಾಸತ್ ಸಂಘಟನೆಯಲ್ಲಿ ಇದಕ್ಕಿಂತ ಹೆಚ್ಚು ಗುಣ ಮಟ್ಟ ಇರುತ್ತದೆ ಎನ್ನಲು ನನಗೆ ಸಂತೋಷವೂ ವಿಷಾದವೂ ಜೊತೆಜೊತೆಗೆ ಆಗುತ್ತಿದೆ.

ಜನಗಣಮನದ ವಾದ್ಯ ಸಂಗೀತ ತೇಲಿ ಬರುವಾಗ ರಾಜಪಥದ ಇಕ್ಕೆಲಗಳಲ್ಲಿ ನೆರೆದಿದ್ದ ಜನರು ಅದರೊಳಗೆ ಶಬ್ದಗಳನ್ನು ದನಿಗೂಡಿಸಿದ್ದು. ಕರ್ಕರೆ, ಶರ್ಮಾ ಮುಂತಾದವರಿಗೆ ಮರಣೋತ್ತರ ಶೌರ್ಯ ಪದಕಗಳನ್ನು ವಿತರಿಸುವಾಗ ಎದ್ದು ನಿಂತು ಚಪ್ಪಾಳೆ ತಟ್ಟಿದ ಇಡೀ ಜನಸಮೂಹ. ಇವೆಲ್ಲ ಗಂಟಲುಬ್ಬಿಸಿ ಕಣ್ಣು ಮಂಜಾಗಿಸಿದ್ದು, ಭಾರತ ಮಾತಾಕಿ ಜೈ - ವಂದೇ ಮಾತರಂ ಘೋಷಣೆ ಹಾಕುತ್ತಿದ್ದ ಯಾವುದೋ ಕಾಲೇಜಿನ ತುಂಟ ಹುಡುಗರು "ಅಂಗ್ರೇಝೋ ಭಾರತ್ ಛೋಡೋ" ಎಂದು ಕೂಗಿ ನಗೆಯಲೆ ಎಬ್ಬಿಸಿದ್ದು ಇವೆಲ್ಲ ಮೆಲುಗಳಿಗೆಗಳು.

http://republicday.nic.in/