"ಇಬ್ಬರು ಕೊಂಕಣಿಗಳು ಒಟ್ಟು ಸೇರಿದರೆ ಮುಗಿಯಿತು. ತಮ್ಮೊಂದಿಗೆ ಬೇರೆಯವರಿದ್ದಾರೆಂದು ಗಣಿಸದೇ ಅವರು ಕೊಂಕಣಿಯಲ್ಲಿಯೇ ಮಾತನಾಡುವುದು." ಎನ್ನುವುದು ತುಳುನಾಡಿನ ಇತರ ಭಾಶಿಕರ ಕಂಪ್ಲೇಂಟು. ಕೊಂಕಣಿಗಳ ಕೊಂಕಣಿ ಪ್ರೇಮ ಅಷ್ಟು ಕುಪ್ರಸಿದ್ಧ. ಮೇಲಿನ ಕಂಪ್ಲೇಂಟು ಬಹುಶ ಹೊರನಾಡಿನಲ್ಲಿ ಒಂದು ಸೇರುವ ಒಂದೇ ಭಾಶೆಯ ಎಲ್ಲರಿಗೂ ಅನ್ವಯವಾಗುವುದು ಸತ್ಯವಾದರೂ ಮಂಗಳೂರಿನಲ್ಲಿ ಅದು ಕೊಂಕಣಿಗಳಿಗೇ ಸೀಮಿತ. ತುಳುನಾಡಿನ ಎರಡು ಪ್ರಮುಖ ಭಾಶೆಗಳಾದ ಕನ್ನಡ ಮತ್ತು ತುಳುವನ್ನು ಎಲ್ಲರೂ ಮಾತನಾಡುವುದು ಅದಕ್ಕೆ ಕಾರಣ.
ಕೊಂಕಣಿಗಳಿಗಿರುವ ಇನ್ನೊಂದು ಹೆಚ್ಚು ಗಮನಕ್ಕೆ ಬಾರದ ಗುಣವೆಂದರೆ ತಾನು ಮಾತನಾಡಬೇಕಾದ ವ್ಯಕ್ತಿಯ ಬಳಿ ಆ ವ್ಯಕ್ತಿಗೆ (ಸಹಜವಾಗಿಯೇ) ಪರಮಪ್ರಿಯವಾಗಿರುವ ಆತನ/ಆಕೆಯ ತಾಯ್ನುಡಿಯಲ್ಲೇ ಮಾತನಾಡುವುದು. ಆದಕಾರಣ ತುಳುನಾಡಿನಲ್ಲಿ ಬಹುಶ ಎಲ್ಲರಿಗಿಂತ ಹೆಚ್ಚು ಭಾಶೆ ಮಾತನಾಡಲು ತಿಳಿದಿರುವುದು ಕೊಂಕಣಿಗಳಿಗೆ. (ಮೇಲಾಗಿ ಅವರಿಗೆ ಕೊಂಕಣಿಯೂ ಗೊತ್ತಲ್ಲ!) ಅದು ತಮ್ಮ ಕುಲವೃತ್ತಿಯಾಗಿರುವ ವ್ಯಾಪಾರದ ಮೂಲಭೂತ ಅಗತ್ಯವೂ ಹೌದು.
ಮನೆಯಾಚೆ ಕಾಲಿಡಲು ಬಿಡದೇ ಅಚ್ಚಾಗಿ ಬೆಳೆಸಿದ ಕೊಂಕಣಿ ಮಗು, ಕೊಂಕಣಿ ಬಿಟ್ಟು ಬೇರಾವ ಭಾಶೆಯನ್ನೂ ಕೇಳಿರದ ಮಗು, ಬಾಲವಾಡಿಗೆ ಹೋದ ಎರಡನೇ ದಿನಕ್ಕೇ ಸಲೀಸಾಗಿ ಕನ್ನಡ ಮಾತನಾಡುವುದು ಹೇಗೆ ಸಾಧ್ಯ ಎಂದು ನಾನು ಯೋಚಿಸಿದ್ದಿದೆ. ಶಾಲೆಗೆ ಹೋಗಲು ಶುರುಹಚ್ಚಿದ ಕೆಲವು ದಿನ ಕನ್ನಡವನ್ನು ನಿದ್ರೆಯಲ್ಲೂ ಕನವರಿಸಿದ್ದು, ಬಡಬಡಿಸಿದ್ದು ಪ್ರತೀ ಕೊಂಕಣಿಯ ಬದುಕಿನಲ್ಲೂ ನಡೆದಿರಬಹುದಾದ ಘಟನೆ.
ಕನ್ನಡದ ಬದಲು ಯಾವ ಭಾಶೆ ಇದ್ದಿದ್ದರೂ ಹಾಗೇ ಆಗಬಹುದು. ಭಾಶೆಯ ಕಲಿಕೆಗೆ ಸಮುದಾಯ ಪ್ರಮುಖ ಪಾತ್ರ ವಹಿಸುತ್ತದೆ. ಪ್ಯಾರೀಸಿನ ಬೀದಿಗಳಲ್ಲಿ ಜೋಳ ಮಾರುವ ಬಿಹಾರಿ ಹುಡುಗರು ನಿರರ್ಗಳ ಫ್ರೆಂಚ್ ಮಾತನಾಡುವುದು, ಗಲ್ಫ್ ರಾಷ್ಟ್ರಗಳಲ್ಲಿ ಮನೆಗೆಲಸದ ಮಲಯಾಳಿ ಹುಡುಗಿಯರು ಅರೇಬಿಕ್ ಮಾತನಾಡುವುದು ಇವೆಲ್ಲ ಅನಿವಾರ್ಯ ಸನ್ನಿವೇಶಗಳಲ್ಲಿ ಭಾಶೆ ಬಲವಂತವಾಗಿ ಅನ್ಯಭಾಷಿಕರನ್ನು ಆವರಿಸಿಕೊಳ್ಳುವ ನಿದರ್ಶನಗಳು.
ಆದರೆ ಸಾಹಿತ್ಯಕವಾಗಿ ಒಂದು ಭಾಶೆ ಬೆಳೆಯಬೇಕಾದರೆ ಅದಕ್ಕೆ ವ್ಯವಸ್ಥಿತವಾದ ನೆಲೆಗಟ್ಟು ಇರಬೇಕಾದುದು ಅತ್ಯವಶ್ಯ.
ನನ್ನ ತಾಯ್ನುಡಿ ಕೊಂಕಣಿ. ನನ್ನ ಒಳಗಿನ ಸಂವಹನದಲ್ಲಿ ನಾನು ಬಳಸುವುದು ಕೊಂಕಣಿಯನ್ನೇ. ಆದರೆ ಕೊಂಕಣಿಯಲ್ಲಿ ಇದುವರೆಗೆ ನನಗೆ ಬರೆಯಲು ಸಾಧ್ಯವಾದದ್ದು ಒಂದು ಒಂಟಿ ಕವಿತೆ ಮಾತ್ರ. ಅದೂ ಇಂಗ್ಲಿಷ್ ಕವಿತೆಯೊಂದರ ಅನುವಾದ. ಕನ್ನಡದಲ್ಲಾದರೋ ನಾನು ಒಂದಿಷ್ಟು ಕತೆಗಳನ್ನೂ, ಒಂದಷ್ಟು ಕವಿತೆಗಳನ್ನೂ, ಮತ್ತಷ್ಟು ಲೇಖನಗಳನ್ನೂ ಬರೆದಿದ್ದೇನೆ.
ಕಾಲೇಜು ದಿನಗಳಲ್ಲಿ ಸಾಕಷ್ಟು ಅಪ್ರಬುದ್ಧ ಕವಿತೆಗಳನ್ನು ಕೊರೆದಿದ್ದರೂ ನನ್ನಲ್ಲಿ ಕನ್ನಡ ಸಾಹಿತ್ಯದಲ್ಲಿ ಸೀರಿಯಸ್ಸಾಗಿ ತೊಡಗಿಕೊಳ್ಳುವ ಹುರುಪು ಬಂದಿದ್ದು ನಾನು ದೆಹಲಿಗೆ ಬಂದ ಬಳಿಕ. ದೆಹಲಿಯ ಏಕಾಂಗಿತನದಲ್ಲಿ ಕನ್ನಡದಷ್ಟೇ ಕೊಂಕಣಿಯೂ ಕೊರಗಿದರೂ ನನ್ನೊಳಗಿನ ಸಾಹಿತ್ಯ ಸೃಷ್ಟಿಗೆ ಒದಗಿ ಬಂದ ಭಾಶೆ ಕನ್ನಡ. ಇದು ಬರೇ ನನ್ನ ಒಬ್ಬನ ಅನುಭವವಲ್ಲ. ಕೊಂಕಣಿ ತಾಯ್ನುಡಿಯ ಎಲ್ಲ ಕನ್ನಡ ಬರಹಗಾರರೂ ಕೊಂಕಣಿಯಲ್ಲಿ ಬರೆದಿರುವುದು ಬಹಳ ಕಡಿಮೆ. ಇದು ಕೊಂಕಣಿ ಭಾಶೆಯ ನಷ್ಟವೂ ಹೌದು. ಕನ್ನಡದ ಹೆಸರಾಂತ ಬರಹಗಾರರಾದ ಗೋವಿಂದ ಪೈ, ಪಂಜೆ ಮಂಗೇಶರಾಯರು, ಗುಲ್ವಾಡಿ ವೆಂಕಟರಾಯರು, ಗೌರೀಶ ಕಾಯ್ಕಿಣಿ, ಗಿರೀಶ್ ಕಾರ್ನಾಡ್, ಯಶವಂತ ಚಿತ್ತಾಲ, ದಿನಕರ ದೇಸಾಯಿ, ಜಯಂತ ಕಾಯ್ಕಿಣಿ, ವಿವೇಕ ಶಾನಭಾಗ ಇನ್ನೂ ಅನೇಕ ಬರಹಗಾರರು ಕೊಂಕಣಿ ಮನೆಮಾತಿನವರು. ಅವರು ಕೊಂಕಣಿಯಲ್ಲಿ ಬರೆದಿರುವುದು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ.
ಕೊಂಕಣಿ ತಾಯಿಯ ಮೊಲೆಯಲ್ಲಿ ಹಾಲಿಲ್ಲ. ಆದುದರಿಂದ ತಾನು ಕನ್ನಡ ತಾಯ ಮೊಲೆ ಹೀರಿ ಬೆಳೆದೆ ಎಂದ ಮಂ. ಗೋವಿಂದ ಪೈಯವರು ಒಂದಿಷ್ಟು ಕೊಂಕಣಿಯಲ್ಲೂ ಬರೆದಿಡುತ್ತಿದ್ದಿದ್ದರೆ ಬಳಿಕದ ಮಕ್ಕಳಿಗೆ ಕೊಂಚ ಹಾಲಾದರೂ ಊಡುತ್ತಿತ್ತು.
ಬಹುಶ ಇದು ಕನ್ನಡ ನಾಡಿನ ಹೊರಗೆಯೂ ನಡೆದಿರುವ ಸಂಗತಿ. ಕೊಂಕಣಿ- ಮರಾಠಿ, ಕೊಂಕಣಿ- ಮಲಯಾಳಂ, ಮುಂತಾದ ಸಂದರ್ಭಗಳಲ್ಲಿಯೂ ಕೊಂಕಣಿಗೆ ನಷ್ಟವಾಗಿರುವುದನ್ನು ಗಮನಿಸಬೇಕು. ಮುಂಬಯಿ ಮತ್ತು ಮಹಾರಾಷ್ಟ್ರದಲ್ಲಿರುವ ಸಾರಸ್ವತರು ಇದೀಗ ಹೆಚ್ಚು ಹೆಚ್ಚು ಮರಾಠಿಯನ್ನೇ ಮನೆಮಾತಾಗಿಸಿಕೊಂಡು ಕೊಂಕಣಿಯು ಮರಾಠಿಯ ಉಪಭಾಶೆ ಎನ್ನುವ ಸವಕಲು ಅಪನಂಬಿಕೆಯನ್ನೇ ಅನೌಪಚಾರಿಕ ವೇದಿಕೆಗಳಲ್ಲಿ ಉರುಹೊಡೆಯುವುದು ಕಾಣಸಿಗುತ್ತದೆ.
ಕೊಂಕಣಿಗಳೆಂದೇ ಕರೆಯಲ್ಪಡುವ ಸಾರಸ್ವತರಿಗಿಂತ ಮಂಗಳೂರು ಕ್ಯಾಥೋಲಿಕರಿಗೆ ಕೊಂಕಣಿಯ ಮೇಲೆ ಹೆಚ್ಚು ಅಭಿಮಾನ. ಚರ್ಚಿನ ಕ್ಯಾಥೆಚಿಸಂ ಎನ್ನುವ ಅಧ್ಯಯನದ ಮಾಧ್ಯಮವಾಗಿ ಕನ್ನಡ ಲಿಪಿಯ ಕೊಂಕಣಿಯನ್ನು ದಕ್ಶಿಣಕನ್ನಡದಲ್ಲಿ ಜಾರಿಗೊಳಿಸಿದ್ದು ಕ್ಯಥೋಲಿಕರಲ್ಲಿ ಕೊಂಕಣಿಗೊಂದು ಭದ್ರ ನೆಲೆಗಟ್ಟನ್ನು ನೀಡಿತ್ತು. ಸಾರಸ್ವತರು ತಮ್ಮ ವೈಯಕ್ತಿಕ ಪತ್ರ ವ್ಯವಹಾರಗಳನ್ನು ಕನ್ನಡದಲ್ಲಿ ನಡೆಸಿದರೆ ಕ್ಯಾಥೊಲಿಕರು ಕೊಂಕಣಿಯಲ್ಲಿಯೇ ನಡೆಸುವುದು ರೂಢಿಯಾಯಿತು. ಇದರಿಂದಾಗಿಯೇ ಇಂದು ಕ್ಯಾಥೋಲಿಕರ ಸಮುದಾಯದಲ್ಲಿ ಹೆಚ್ಚು ಕೊಂಕಣಿ ಸಾಹಿತಿಗಳಿರುವುದು. ಕೊಂಕಣಿಯ ಲಿಖಿತ ಶಬ್ದ ಭಂಡಾರ ನಿಸ್ಸಂಶಯವಾಗಿ ಸಾರಸ್ವತರಿಗಿಂತ ಕ್ಯಥೊಲಿಕರಲ್ಲಿ ಹೆಚ್ಚು ಬಳಕೆಯಲ್ಲಿದೆ.
ಕ್ಯಥೋಲಿಕರು ಕೊಂಕಣಿಯನ್ನು ಲಿಖಿತ ರೂಪದಲ್ಲಿ ತೊಡಗಿಸಿಕೊಂಡು ಸಾಹಿತ್ಯ ರಚಿದರೆ ಸಾರಸ್ವತರು ಮೌಖಿಕ ಸಾಹಿತ್ಯವನ್ನಷ್ಟೇ ಕೊಂಕಣಿಯಲ್ಲಿ ರೂಢಿಸಿದರು. ಇವುಗಳಲ್ಲಿ ಕೊಂಕಣಿ ನಾಟಕಗಳು ಪ್ರಮುಖ ಮಾಧ್ಯಮವಾಯಿತು. ಟೀವಿ ಯುಗದ ಮೊದಲು ಕೊಂಕಣಿಗಳ ದೇವಸ್ಥಾನಗಳಲ್ಲಿ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಕೊಂಕಣಿ ನಾಟಕಗಳ ಒಂದು ಜನಪ್ರಿಯ ಚಳುವಳಿಯಿತ್ತು ಎನ್ನುವುದನ್ನು ಇಲ್ಲಿ ಸ್ಮರಿಸುತ್ತಿದ್ದೇನೆ. ಆದರೆ ಟೀವಿಯುಗದಲ್ಲಿ ಕೊಂಕಣಿ ನಾಟಕಗಳ ಬೇಡಿಕೆ ಕುಸಿದಿದೆ. ಈ ನಾಟಕಗಳು ಟೀವಿ ಮಾಧ್ಯಮವನ್ನು ಬಳಸಿಕೊಳ್ಳಬಹುದಾಗಿತ್ತಾದರೂ ವೆಚ್ಚದಾಯಕವಾದ ನಿರ್ಮಾಣ ಕಾರ್ಯ ಆಸಕ್ತರನ್ನು ಹಿಂಜರಿಯುವಂತೆ ಮಾಡಿದೆ.
ಉತ್ಸಾಹಿ ಸಾರಸ್ವತರು ಕೊಂಕಣಿ ದೇವರಪದಗಳನ್ನು ರಚಿಸಿ ಹಾಡಿದರು. ಬಾಲಗೀತೆಗಳು, ಹಸೆ ಹಾಡುಗಳು, ಕೊಂಕಣಿ ಜನಪದ ಕತೆಗಳು ವಿಪುಲವಾಗಿದ್ದರೂ ಅವು ಮೌಖಿಕ ಪರಂಪರೆಯಲ್ಲಷ್ಟೆ ಬೆಳೆದಂತವುಗಳು. ಬರೆದವರ ಹೆಸರು ದಾಖಲಾಗದೇ ಜನಪದದಲ್ಲಿ ಹರಡಿದವುಗಳು.
ಭಾಶೆ ಪ್ರಾಥಮಿಕ ಶಾಲಾಸ್ತರದಲ್ಲಿ ಅಧ್ಯಯನದ ಅಂಗವಾದರೆ ಅದು ಸಾಹಿತ್ಯಕವಾಗಿ ಬೆಳೆಯುತ್ತದೆ ಎಂಬುದಕ್ಕೆ ಸಾರಸ್ವತರು ಮತ್ತು ಕ್ಯಥೋಲಿಕರ ಭಾಷೆಯ ಬಳಕೆಯ ತುಲನಾತ್ಮಕ ಅಧ್ಯಯನ ನಿಚ್ಚಳ ತೋರಿಸಿಕೊಡುತ್ತದೆ. ಇದನ್ನು ದಾಖಲಿಸಲು ಒಂದು ಅಕಾಡೆಮಿಕ್ ಅಧ್ಯಯನದ ಅವಕಾಶವಿದೆ.
ದಿನಕರ ದೇಸಾಯಿಯವರ ಒಂದು ಚುಟುಕು ಅಪೇಕ್ಷಿಸುವ ಒಂದು ಉದಾತ್ತ ಸನ್ನಿವೇಶ ಹೀಗಿದೆ.
ಕೊಂಕಣಿಯ ಜೊತೆಗೆ ಕನ್ನಡ ಮಾತನಾಡಿ
ಒಂದುಗೂಡಿದ ಎರಡು ಜೀವನಾಡಿ
ಎರಡು ಪಕಳೆಯ ಹೂವು ಮಿಡಿಯಾಗಿ ಕಾಯಿ
ಕಾಯಿ ಹಣ್ಣಾದೊಡನೆ ಜೀವನ ಮಿಠಾಯಿ
ಎರಡು ಪಕಳೆಯ ಹೂವುಗಳು ಸಾಹಿತ್ಯದಲ್ಲಿಯೂ ಚಿಗುರಿಕೊಳ್ಳಲಿ.
ಜೂನ್ 13, 2009
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)