ಆಗಸ್ಟ್ 23, 2009

ಮೊಳಕೆಯೊಡೆದ ಕತೆಗಳು

ಅಂದು ಭಾನುವಾರದ ಪುರವಣಿಯಲ್ಲಿ ಪ್ರಕಟವಾಗಿದ್ದ ಕತೆಯನ್ನು ಓದಿ ಮುಗಿಸಿದ ವಿದ್ಯುತ್ ನಾರಾಯಣ ಶರ್ಮ "ಥುತ್ ಇದೆಂಥಾ ಕತೆ. ಇದಕ್ಕಿಂತ ಒಳ್ಳೆಯ ನೂರು ಕತೆಗಳನ್ನು ನಾನು ಬರೆಯಬಲ್ಲೆ" ಎಂದು ಪುರವಣಿಯನ್ನು ರೇಜಿಗೆಯಿಂದ ನೆಲಕ್ಕೊಗೆಯುತ್ತಿದ್ದಂತೆ ಅವನ ತಲೆಯೊಳಗೆ 'ಟಿನ್' ಎಂದು ಕಿರುಗಂಟೆ ಹೊಡೆದು ಕತೆಯೊಂದರ ಐಡಿಯಾವೊಂದು ಹುಟ್ಟಿಕೊಂಡಿತು.

ಇದಕ್ಕಿದ್ದಂತೆ ಉತ್ಸಾಹಿತನಾದ ವಿದ್ಯುತ್ ನಾರಾಯಣ ಶರ್ಮ. ಆ ಐಡಿಯಾವನ್ನು ಕುರಿತು ಯೋಚಿಸತೊಡಗಿದ. ಅಹೋ ಅದೊಂದು ಉತ್ತಮ ಕತೆಯಾಗಬಹುದು ಎಂದನಿಸಿತು ಅವನಿಗೆ. ಹಾಗೆ ತಿರುಗಿಸುತ್ತಾ ಅದನ್ನು ಬೆಳೆಸತೊಡಗುವಷ್ಟರಲ್ಲೇ ಮತ್ತೊಮ್ಮೆ 'ಟಿನ್' ಎಂದು ಕಿರುಗಂಟೆ ಹೊಡೆದು ಮತ್ತೊಂದು ಐಡಿಯಾ ಅವನ ತಲೆಯೊಳಗೆ ಮೊಳಕೆಯೊಡೆಯಿತು. ಈ ಐಡಿಯಾ ಮೊದಲಿನಕ್ಕಿಂತ ರೋಚಕವಾಗಿತ್ತು. ಮತ್ತಷ್ಟು ಉತ್ಸಾಹಿತನಾದ ವಿದ್ಯುತ್ ನಾರಾಯಣ ಶರ್ಮ. ಹಳೆಯ ಐಡಿಯವನ್ನು ಅಲ್ಲೇ ಬಿಟ್ಟು ಹೊಸದರತ್ತ ಗಮನ ಹರಿಸತೊಡಗಿದ. ಅದಿನ್ನೂ ಅವನಿಗೆ ಸರಿಯಾಗಿ ನಿಲುಕುವಷ್ಟರಲ್ಲೇ ಮತ್ತೊಮ್ಮೆ 'ಟಿನ್' ಎಂದು ಕಿರುಗಂಟೆ ಹೊಡೆದು ಮಗದೊಂದು ಐಡಿಯಾ ಅವನ ತಲೆಯೊಳಗೆ ಮೊಳಕೆ ಒಡೆಯಿತು. ಇದು ಆ ಎರಡಕ್ಕಿಂತ ಮಿಗಿಲಾದ ಹೊಳಪಿನಿಂದ ಕೂಡಿತ್ತು. ಶರ್ಮನೊಳಗಿನ ಉತ್ಸಾಹ ತುಂಬಿ ತುಳುಕಾಡತೊಡಗಿತು. ಹೊಸ ಹುರುಪಿನಿಂದ ಅವನು ಈ ಮೂರನೇ ಐಡಿಯಾದ ಹೊಳಪನ್ನು ಬೆಳೆಸತೊಡಗುತ್ತಿದ್ದಂತೆ ಮತ್ತೊಮ್ಮೆ 'ಟಿನ್' ಎಂದು ಕಿರುಗಂಟೆ ಹೊಡೆದು... ಆದರೀಗ ಒಂದರ ಹಿಂದೊಂದು ಅವನಲ್ಲಿ ಹುಟ್ಟಿಕೊಳ್ಳುತ್ತಿರುವ ಐಡಿಯಾಗಳೂ ಅವು ಹುಟ್ಟಿಕೊಳ್ಳುವ ಮೊದಲು ಹೊಡೆಯುತ್ತಿದ್ದ ಕಿರುಗಂಟೆಯೂ ವಿದ್ಯುತ್ ನಾರಾಯಣ ಶರ್ಮನಲ್ಲಿ ಸಣ್ಣಗೆ ಸೋಜಿಗವನ್ನು ಮೂಡಿಸತೊಡಗಿದವು.

ಆದರೆ ಅವನ ಸೋಜಿಗದಿಂದ ಅವನ ತಲೆಯೊಳಗೆ 'ಟಿನ್' ಎಂದು ಕಿರುಗಂಟೆ ಹೊಡೆದು ಹುಟ್ಟಿಕೊಳ್ಳುತ್ತಿದ್ದ ಐಡಿಯಾಗಳಿಗೆ ನಿಲುಗಡೆಯಾಗಿರಲಿಲ್ಲ. ಹೊಸ ಹೊಸ ಐಡಿಯಾಗಳು ಮೊಳಕೆಯೊಡೆದು ಮಿನುಗುವಷ್ಟರಲ್ಲಿ ಮತ್ತೆ 'ಟಿನ್' ಎಂಬ ಸದ್ದಾಗುತ್ತಿತ್ತು. ಆ ಐಡಿಯಾಗಳ ಒಡನೆಯೇ ಹೊರ ಸೂಸುವ ಒಂದು ಅವ್ಯಕ್ತ ಉತ್ಸಾಹ ಶರ್ಮನ ಸೋಜಿಗವನ್ನು ಮರೆಸಿತ್ತು. ಆ ಉತ್ಸಾಹವನ್ನು ತಡೆಯಲಾಗದೇ ಹಪಹಪಿಸತೊಡಗಿದ ಶರ್ಮ. ಬರೆಯಬೇಕು, ಬರೆಯಲು ಶುರುಹಚ್ಚಬೇಕು ಎನ್ನುವ ಅದಮ್ಯ ತವಕ ಅವನಲ್ಲಿ ಉಕ್ಕತೊಡಗಿತು. ಲಗುಬಗೆಯಿಂದೆದ್ದು ಮೇಜಿನೆಡೆಗೆ ತೆರಳಿ ಪ್ಯಾಡುಪೆನ್ನು ಹೊಂದಿಸಿಕೊಂಡು ಶುರುಹಚ್ಚುವಷ್ಟರಲ್ಲಾಗಲೇ ಹೊಸದಾದ ಹದಿನೆಂಟು ಐಡಿಯಾಗಳು ಅವನ ತಲೆಯೊಳಗೆ ಕಿರುಗಂಟೆ ಬಾರಿಸಿಯಾಗಿತ್ತು.

ಆ ಅನೇಕ ಐಡಿಯಾಗಳಲ್ಲಿ ಅದಾಗ ತಾನೆ ಹುಟ್ಟಿಕೊಂಡ ತಾಜಾ ಐಡಿಯಾವನ್ನೆತ್ತಿಕೊಂಡು ಮೊದಲ ವಾಕ್ಯವನ್ನು ಬರೆಯಲು ಬೇಕಾದ ಅಕ್ಷರಗಳನ್ನು ಪದಪುಂಜಗಳನ್ನು ಜೋಡಿಸುವಷ್ಟರಲ್ಲಿ, ಹುಟ್ಟಿಕೊಳ್ಳುತ್ತಿದ್ದ ಮತ್ತೊಂದು ಹೊಸ ಐಡಿಯಾವು ಆ ರಚಿಸಲ್ಪಡುತ್ತಿದ್ದ ವಾಕ್ಯದ ಮೇಲೆ ಬಿದ್ದು ಪದಪುಂಜಗಳು ಒಡೆದು ಅಕ್ಷರಗಳು ಚದುರಿ ಹೋಗುತ್ತಿದ್ದವು. ಅವನೆಷ್ಟು ಬಲವಂತದಿಂದ ಹೊಸ ಐಡಿಯಾವನ್ನು ತಡೆಗಟ್ಟಿ ಹಳೆಯದನ್ನೇ ಬೆಳೆಸಲು ಯತ್ನಿಸಿದರೂ ಹೊಸದರ ಹೊಳಪಿಗೂ, ಹೊಡೆಯುತ್ತಿದ್ದ ಕಿರುಗಂಟೆಯ ಸದ್ದಿಗೂ ಅವನ ಪ್ರಜ್ಞಾವಲಯದ ವರ್ತಮಾನವು ತಲ್ಲಣಗೊಂಡು ಧ್ಯಾನವೆಲ್ಲ ಹೊಸದರೆಡೆಗೆ ಪಲ್ಲಟವಾಗುತ್ತಿತ್ತು.

ಹೀಗೆ ತನ್ನ ಯೋಚನೆಗಳನ್ನು ಬಲವಂತದಿಂದ ನಿಯಂತ್ರಿಸಲು ತನ್ನ ಪ್ರಜ್ಞೆಯನ್ನು ಕೇಂದ್ರೀಕರಿಸತೊಡಗಿದಂತೆ ಸಣ್ಣದೊಂದು ತಲೆನೋವು ಹುಟ್ಟಿಕೊಂಡಿತು. ಜೊತೆಗೆ ಲಯಬದ್ಧವಾಗಿ ಬಾರಿಸುತ್ತಿದ್ದ 'ಟಿನ್' ಎಂಬ ಕಿರುಗಂಟೆಯ ಸದ್ದು ಅವನ ತಲೆಯೊಳಗೆ ಕಂಪನವನ್ನುಂಟುಮಾಡುತ್ತಾ ತಲೆನೋವಿನ ತೀವ್ರತೆಯನ್ನು ಹೆಚ್ಚಿಸತೊಡಗಿತು. ತಲೆಭಾರವೆನಿಸತೊಡಗಿತು. ಹುಟ್ಟಿಕೊಂಡು ವಿಫಲವಾಗುವ ಐಡಿಯಾಗಳೆಲ್ಲ ತಲೆಯೊಳಗೆ ತುಂಬಿಕೊಳ್ಳುವ ಒತ್ತಡದಿಂದ ಉಸಿರುಕಟ್ಟತೊಡಗಿತು ಶರ್ಮನಿಗೆ. ಮಂಚದ ಮೇಲೆ ಬಿದ್ದುಕೊಂಡು ಆ ತಲೆನೋವನ್ನೂ, ಲಯಬದ್ಧ ಕಿರುಗಂಟೆಯ ಕಂಪನವನ್ನೂ, ಹೊಸ ಐಡಿಯಾದ ಉತ್ಸಾಹವನ್ನೂ, ಹಳೆಯ ಐಡಿಯಾಗಳ ಒತ್ತಡವನ್ನೂ ಒಟ್ಟಾಗಿ ಅನುಭವಿಸುತ್ತಾ ಒಂದು ತೆರನಾದ ಟ್ರಾನ್ಸ್ ನೊಳಗೆ ಮುಳುಗಿ ಚಡಪಡಿಸತೊಡಗಿದ ವಿದ್ಯುತ್ ನಾರಾಯಣ ಶರ್ಮ.

****
ಎಚ್ಚರವಾಯಿತು. ಕಿಟಕಿಯಿಂದ ಒಳಸೂಸುತ್ತಿದ್ದ ಸಂಜೆ ಬೆಳಕು ಅವನ ಮಬ್ಬಿಗೆ ಒದಗುತ್ತಿತ್ತು. ಹವೆ ತಣ್ಣಗಿದ್ದು ಇನ್ನೇನು ಮಳೆಸುರಿಯಬಹುದು ಎನ್ನುವಂತೆ ಸ್ಥಾಯಿಯಾಗಿತ್ತು. ತಲೆನೋವು ಮಾಯವಾಗಿದ್ದರೂ ಅದರ ಗುಂಗು ಕರಗಿರಲಿಲ್ಲ. ನಿರಂತರವೆಂಬಂತೆ ಹುಟ್ಟಿಕೊಳ್ಳುತ್ತಿದ ಐಡಿಯಾಗಳು ನಿಂತು ಹೋಗಿದ್ದವು. ಕಿರುಗಂಟೆ ಸದ್ದು ಸ್ತಬ್ಧವಾಗಿತ್ತು. ಆ ಎಲ್ಲಾ ಐಡಿಯಾಗಳು ಅವನೊಳಗೆ ಹುಟ್ಟುಹಾಕುತ್ತಿದ್ದ ಒತ್ತಡವು ಮರೆಯಾಗಿ ಅದೀಗ ನಿರಾಳವಾಗಿತ್ತು.

ಮೆಲ್ಲನೆ ಕೈಯನ್ನೆತ್ತಿ ತಲೆಯನ್ನೊಮ್ಮೆ ನೀವಿದ. ಪರಪರ್ರೆನ್ನುವ ಸದ್ದಿನಿಂದ ಅದೇನೋ ಕೂದಲಿಗಿಂತ ದೊರಗಾದ ಚಿಕ್ಕಚಿಕ್ಕ ಮುಳ್ಳಿನಂತವುಗಳು ಕೈಗೆ ತಗುಲಿ ಉದುರತೊಡಗಿದವು. ಜಗ್ಗನೆದ್ದು ಹಾಸಿಗೆಯ ಮೇಲೆ ಬಿದ್ದ ಅಂತಹದೊಂದು ಮುಳ್ಳನ್ನು ಕೈಗೆತ್ತಿಕೊಂಡ. ನಸುಕೆನೆ ಬಣ್ಣದ ಮೊಳಕೆಯಂತೆ ತಿರುವಿಕೊಂಡ ಆ ಸಣ್ಣ ವಸ್ತುವು ಹತ್ತಿಯಷ್ಟು ಹಗುರವಾಗಿದ್ದರೂ ಅದರ ಮೊನೆಗೊಂದು ಆಪ್ಯಾಯಮಾನ ತೀಕ್ಷ್ಣತೆಯಿತ್ತು. ತಾನು ಎರಡು ಬೆರಳುಗಳ ನಡುವೆ ಹಿಡಿದುಕೊಂಡಿದ್ದ ಆ ಮೊಳಕೆಯನ್ನೊಮ್ಮೆ ಮೆತ್ತಗೆ ಹಿಸುಕಿದ ಶರ್ಮ. ಹಾಗೆ ಹಿಸುಕಿದಾಕ್ಷಣ ಅವನ ಮನಃಪಟಲದ ಪರದೆಯ ಮೇಲೆ ಸರ್ರ್ ಎಂದು ಬೆಳಕು ಮೂಡಿ ಐಡಿಯಾವೊಂದರ ವಿವರಗಳು ಮೂಡತೊಡಗಿದವು. ಆ ಮೊಳಕೆಯ ಮೇಲಿನ ಒತ್ತಡವನ್ನು ಸಡಿಲಗೊಳಿಸಿದೊಡನೆ ಆ ಬೆಳಕಿನ ಪರದೆಯು ಮುಸುಕಾಗುತ್ತಿತ್ತು.

ತನ್ನ ತಲೆಯನ್ನು ಎರಡೂ ಕೈಗಳಿಂದ ಮೆಲ್ಲನೆ ಸವರತೊಡಗಿದ ಶರ್ಮ. ಅವನ ಕೂದಲೆಡೆಗಳಲ್ಲಿ ಹಾಗೆ ಮೂಡಿಕೊಂಡ ಮೊಳಕೆಗಳು ಹಾಸಿಗೆಯ ಮೇಲೆ ಉದುರತೊಡಗಿದವು. ಒಂದೊಂದೆ ಮೊಳಕೆಯನ್ನು ಕೈಬೆರಳುಗಳಿಂದ ಹಿಸುಕಿ ನೋಡತೊಡಗಿದ ಶರ್ಮ. ಅವನಲ್ಲಿ ಅಂದು ಬೆಳಗ್ಗೆ 'ಟಿನ್' ಎಂದು ಕಿರುಗಂಟೆ ಹೊಡೆಯುತ್ತಾ ಉತ್ಪನ್ನವಾಗಿದ್ದ ಎಲ್ಲ ಐಡಿಯಾಗಳೂ ಅದೀಗ ಅವನ ತಲೆಕೂದಲ ಎಡೆಗಳಲ್ಲಿ ಮೊಳಕೆಯೊಡೆದು ಅವನ ಹಾಸಿಗೆಯಲ್ಲಿ ಉದುರಿಬಿದ್ದಿದ್ದವು. ಒಂದೊಂದಾಗಿ ಆ ಮೊಳಕೆಗಳನ್ನು ಹಿಸುಕಿ ಅವುಗಳ ವಿವರಗಳನ್ನು ಗ್ರಹಿಸತೊಡಗಿದ ಶರ್ಮ.

ಕಿಟಕಿಯಿಂದ ತಣ್ಣಗೆ ಬೀಸಲಾರಂಭಿಸಿದ ಗಾಳಿ ಮೆಲ್ಲನೇ ಜೋರಾಗುತ್ತಾ ಮಳೆಯ ಮುನ್ಸೂಚನೆಯ ಬಿರುಗಾಳಿ ಬೀಸತೊಡಗಿತು. ವಿದ್ಯುತ್ ನಾರಾಯಣ ಶರ್ಮ ಕಿಟಕಿಯನ್ನು ಮುಚ್ಚಲೆಳಸುವಷ್ಟರಲ್ಲಿ ಅವನ ಹಾಸಿಗೆಯ ಮೇಲಿದ್ದ ಆ ಎಲ್ಲಾ ಮೊಳಕೆಗಳೂ ಗಾಳಿಗೆದ್ದು ಹಾರತೊಡಗಿದವು. ಹಾಗೆ ಹಾರುತ್ತಾ ಬಾಲ್ಕನಿಯತ್ತ ಹಾರಿ ಹೊರನುಸುಳಿ ಹೋಗುವುದನ್ನು ಶರ್ಮ ಆತಂಕದಿಂದ ನೋಡತೊಡಗಿದ. ಲಗುಬಗೆಯಿಂದ ಬಾಲ್ಕನಿಯತ್ತ ಧಾವಿಸಿದರೂ ಅವೆಲ್ಲ ಅದಾಗಲೇ ಆಗಸಕ್ಕೆ ಹಾರಿಯಾಗಿತ್ತು.

ಒಂದು ತೆರನಾದ ನಿರಾಸೆ ಶರ್ಮನಿಗೆ ಕಾಡತೊಡಗಿತು.

ಮರುಕ್ಷಣ "ಹೋದರೆ ಹೋಗಲಿ, ಇವೇನ್ಮಹಾ ಇಂಥ ಸಾವಿರ ಐಡಿಯಾಗಳನ್ನು ನಾನು ಸೃಷ್ಟಿಸಬಲ್ಲೆ" ಎಂದು ಗಟ್ಟಿಯಾಗಿ ಹೇಳುತ್ತಿದ್ದಂತೆ ಮೊದಲಿಗಿಂತ ಇಮ್ಮಡಿ ವೇಗದಲ್ಲಿ ಅವನೊಳಗೆ "ಟಿನ್ ಟಿನ್" ಎಂಬ ಕಿರುಗಂಟೆಗಳ ಜೊತೆಗೆ ಐಡಿಯಾಗಳು ಪುಂಖಾನು ಪುಂಖವಾಗಿ ಮೂಡತೊಡಗಿದವು. ಇನ್ನು ಇದರಿಂದ ತನ್ನಲ್ಲಿ ಹುಟ್ಟಬಹುದಾದ ತಲೆನೋವನ್ನೂ, ಆ ಐಡಿಯಾಗಳ ಒತ್ತಡದಿಂದ ತನ್ನೊಳಗೆ ಮೂಡಬಹುದಾದ ತಲ್ಲಣವನ್ನೂ ಮುನ್ನೋಡುತ್ತಾ ಬಸವಳಿದು ಕುಸಿದು ಕುಳಿತ ವಿದ್ಯುತ್ ನಾರಾಯಣ ಶರ್ಮ.

***
ಕೋಣೆಯ ಕಿಟಕಿ ಬಾಗಿಲುಗಳನ್ನು ಭದ್ರವಾಗಿ ಮುಚ್ಚಿ ಮೇಜಿನ ಮೇಲೆ ಹಾಸಿದ್ದ ಹಾಳೆಯ ಮೇಲೆ ಹರಡಿದ್ದ ಆ ಕಿರುಮೊಳಕೆಗಳ ರಾಶಿಯಿಂದ ಒಂದೊಂದನ್ನೆ ಹಿಚುಕಿ ಅವನ ಮನಃಪಟಲದ ಮೇಲೆ ಅವುಗಳ ವಿವರಗಳನ್ನು ಮೂಡಿಸಿನೋಡುತ್ತಿದ್ದ ವಿದ್ಯುತ್ ನಾರಾಯಣ ಶರ್ಮ. ಅವನೊಳಗೊಂದು ವಿಶೇಷ ಪ್ರಾಪ್ತಿಯ ಹುರುಪು ತುಂಬಿಕೊಂಡಿದ್ದರೂ ಆ ಐಡಿಯಾಗಳು ಅಷ್ಟೇನೂ ಸ್ಫೂರ್ತಿದಾಯಕವೆನಿಸಲಿಲ್ಲ. ಅವನೀಗಾಗಲೇ ಓದಿಕೊಂಡಿದ್ದ ಕನ್ನಡ, ಇಂಗ್ಲೀಷ್ ಮತ್ತು ಇನ್ನೂ ಹಲವು ಭಾಷೆಗಳ ಅಸಂಖ್ಯ ಕತೆಗಳ ಛಾಯೆಯು ಅವನಿಗೆ ಅವುಗಳಲ್ಲಿ ಕಾಣುತ್ತಿತ್ತು.

"ಈ ಸಾವಿರ ಐಡಿಯಾಗಳ ಬದಲಿಗೆ ತನಗೊಂದು ಉತ್ಕೃಷ್ಟ ಬಿಗ್ ಐಡಿಯಾ ಹೊಳೆದರೆ ಚೆನ್ನಾಗಿರುತ್ತಿತ್ತು" ಎಂದುಕೊಂಡ ಶರ್ಮ. ಅರೇ ಹೌದಲ್ಲ, ಯಾಕೆ ಹುಟ್ಟಬಾರದು ಎಂದುಕೊಂಡ. ಅವನು ನಿರೀಕ್ಷಿಸಲು ತೊಡಗಿದ ಅಂತಹ ಯಾವ ಕಿರುಗಂಟೆಯ ಸದ್ದೂ ಮತ್ತು ಐಡಿಯಾದ ಹುಟ್ಟೂ ಅವನಲ್ಲಾಗಲಿಲ್ಲ.

ಅಥವಾ ಹೀಗನ್ನಬಹುದು "ಈ ಸಾವಿರ ಐಡಿಯಾಗಳಿಗಿಂತ ಒಂದೇ ಒಂದು ಉತ್ಕೃಷ್ಟ ಐಡಿಯಾ ತನ್ನೊಳಗೆ ಹುಟ್ಟಬೇಕು" ಉಹೂಂ ಯಾವೊಂದು ಪರಿಣಾಮವೂ ಇಲ್ಲ. ಇನ್ನೊಂದು ಬಾರಿ..

"ಥುತ್ ಈ ಸಾವಿರ ಐಡಿಯಾಗಳೇನ್ಮಹಾ? ಇದಕ್ಕಿಂತ ನೂರುಪಟ್ಟು ಉತ್ತಮವಾಗಿರುವ ಒಂದು ಬಿಗ್ ಐಡಿಯಾವನ್ನು ನಾನು ಸೃಷ್ಟಿಸಬಲ್ಲೆ"

"ಢಣ್" ಎಂಬ ಚರ್ಚಿನ ಗಂಟೆ ಬಾರಿಸಿ, ಅಸಾಧ್ಯ ಕಂಪನ, ವಿಚಿತ್ರ ರಭಸ ಮತ್ತು ಕಣ್ಣುಕೋರೈಸುವ ಬೆಳಕಿನಿಂದ ಅವನ ತಲೆಯೊಳಗೆ ಹುಟ್ಟಿದ ಹೊಸ ಐಡಿಯವೊಂದನ್ನು ಗ್ರಹಿಸುವಷ್ಟರಲ್ಲಿ ಶರ್ಮ ಬೆವರಿ ನಿಸ್ತೇಜನಾಗಿ ಬವಳಿಬಿದ್ದ.

***
ಎಚ್ಚರವಾದಾಗ ಚುಮುಚುಮು ನಸುಕು. ಅಸಾಧ್ಯ ಹಸಿವು ಕಾಡುತ್ತಿತ್ತು. ಕ್ಯಾಂಟೀನಿಗೆ ಹೋಗಿ ತಿಂಡಿ ತಿಂದು ಬರಲೆಂದು ಎದ್ದು ಹಲ್ಲುಜ್ಜಿ ಮುಖತೊಳೆಯುತ್ತಿರುವಾಗ ಸಡನ್ನಾಗಿ ನಿನ್ನೆಯ ದಿನದ ವಿದ್ಯಮಾನಗಳೆಲ್ಲ ನೆನಪಾದವು. ತಲೆಯಮೇಲಕ್ಕೆಲ್ಲ ಕೈಯಾಡಿಸಿದ. ನಿನ್ನೆಯಂತೇ ಮೊಳಕೆಗಳು ಉದುರಲಿಲ್ಲ. ನಡುನೆತ್ತಿಯ ಮೇಲೊಂದು ಕಿರುಬೆರಳ ಗಾತ್ರದ ಮೊಳಕೆಯೊಂದು ಕೈಗೆ ತಗಲಿತು. ಎದುರಿಗಿರುವ ಕನ್ನಡಿಯಲ್ಲಿ ಆ ಮೊಳಕೆಯನ್ನು ಸರಿಯಾಗಿ ನೋಡಲೆತ್ನಿಸಿದ. ಕೂದಲುಗಳನ್ನು ಪಕ್ಕಕ್ಕೆ ಸರಿಸಿದಾಗ ಆ ಅಣಬೆಯಂತಹ ರೇಶೆಯೂ ನುಣುಪೂ ಇರುವ ನಸುಬೂದು ಬಣ್ಣದ ಮೊಳಕೆಯು ಕಾಣುತ್ತಿತ್ತು. ಮೆಲ್ಲನೆ ಬೆರಳುಗಳಿಂದ ಸವರಿದ. ಒಂದು ಬದಿಗೆ ತಳ್ಳಿ ಉದುರಿಸಲೆತ್ನಿಸಿದರೂ ಅದು ಬಲವಾಗಿ ನೆತ್ತಿಗೆ ಅವಚಿ ಕುಳಿತಿತ್ತು. ಅದನ್ನು ಎರಡು ಬೆರಳುಗಳಿಂದ ಗಟ್ಟಿಯಾಗಿ ಹಿಡಿದು ಮೇಲಕ್ಕೆ ಎತ್ತಲು ಕೊಂಚ ಬಲತೊಡಗಿಸಿದಾಗ ಫಟ್ಟನೇ ನಡುನೆತ್ತಿಯ ಮೇಲೊಂದು ಮೂರಂಗುಲದಷ್ಟು ಗಾತ್ರದ ಮುಚ್ಚಳವು ಮೂಡಿ ತೆರೆದುಕೊಂಡಿತು. ಮತ್ತು ಅವನ ತಲೆಯೊಳಗಿಂದ ವಿಶಿಷ್ಟ ಪ್ರಭೆಯೊಂದು ಸೂಸತೊಡಗಿತು.

ದಿಗಿಲಾಯಿತು ವಿದ್ಯುತ್ ನಾರಾಯಣ ಶರ್ಮನಿಗೆ. ಒಮ್ಮೆಲೆ ಕೈಬಿಟ್ಟುಬಿಟ್ಟ. ಮತ್ತೆ ಟಪ್ಪೆಂದು ಮುಚ್ಚಿಕೊಂಡಿತು ಆ ಮುಚ್ಚಳ. ಆ ಅಣಬೆಯಂತಹ ಮೊಳಕೆಯು ಮಗುಮ್ಮಾಗಿ ಅವನ ನೆತ್ತಿಯನ್ನವಚಿಕೊಂಡು ಕುಳಿತಿತ್ತು.

ಈ ಎಲ್ಲಾ ಪ್ರಕ್ರಿಯೆಯಲ್ಲಿ ವಿದ್ಯುತ್ ನಾರಾಯಣ ಶರ್ಮನಿಗೆ ಯಾವೊಂದು ರೀತಿಯ ನೋವು ಅನುಭವಕ್ಕೆ ಬಾರದಿದ್ದುದರಿಂದ ಅವನ ದಿಗಿಲು ಕೊಂಚ ಕಡಿಮೆಯಾಗಿ ಕುತೂಹಲ ಮೂಡಲಾರಂಭಿಸಿತು. ಮತ್ತೆ ಆ ಮೊಳಕೆಯನ್ನು ಹಿಡಿದು ತನ್ನ ನೆತ್ತಿಯ ಮೇಲೆ ಒದಗಿಕೊಂಡಿದ್ದ ಆ ಮುಚ್ಚಳವನ್ನು ತೆರೆದ. ಮೊದಲಿನಂತೆ ವಿಶಿಷ್ಟ ಪ್ರಭೆಯು ಹೊರಸೂಸುವುದು ಅವನಿಗೆ ತನ್ನೆದುರಿಗಿದ್ದ ಕನ್ನಡಿಯಲ್ಲಿ ಕಾಣುತ್ತಿತ್ತು. ಆದರೆ ತಲೆಯನ್ನು ಯಾವ ಕೋನದಲ್ಲಿ ಬಗ್ಗಿಸಿದರೂ ಹಾಗೆ ತೆರೆದುಕೊಂಡಿರುವ ತನ್ನ ತಲೆಯೊಳಗಿನ ದೃಶ್ಯವು ಕಾಣಲು ದೊರಕುತ್ತಿರಲಿಲ್ಲ. ಇದಕ್ಕೊಂದು ಪೆರಿಸ್ಕೋಪ್ ತಯಾರಿಸಬೇಕು ಎಂದುಕೊಂಡು ತಲೆಯ ಮುಚ್ಚಳವನ್ನು ಮುಚ್ಚಿದ ಶರ್ಮ. ಆ ಮೊಳಕೆ ಪ್ರತಿನಿಧಿಸುವ "ಬಿಗ್ ಐಡಿಯಾ" ಯಾವುದಿರಬಹುದು ಎನ್ನುವ ವಿಷಯಕ್ಕಿಂತ ತೆರೆದುಕೊಂಡಿರುವ ತನ್ನ ತಲೆಯೊಳಗೆ ಅಂತಹ ಬೆಳಕುಚೆಲ್ಲುವ ವಸ್ತು ಏನಿರಬಹುದು ಎನ್ನುವ ಕುತೂಹಲವೇ ಹೆಚ್ಚಾಗಿತ್ತು ಅವನಲ್ಲಿ.

***
ಉಡುಪು ಧರಿಸಿ ಕೋಣೆಗೆ ಬೀಗ ಹಾಕಿ ಮಹಡಿಯಿಂದಿಳಿದು ರಸ್ತೆಗೆ ಬಂದಾಗ ಅಂಗಡಿಗಳು ಇನ್ನೂ ತೆರೆದಿರಲಿಲ್ಲ. ಕ್ಯಾಂಟೀನಿನಲ್ಲಿ ತಿಂಡಿ ತಿಂದು ಸೆಂಟ್ರಲ್ ಮಾರ್ಕೆಟ್ ಕಡೆಗೆ ಹೋಗುವ ಬಸ್ ಹತ್ತಿದ. ಪೆರಿಸ್ಕೋಪ್ ತಯಾರಿಸಲು ಬೇಕಾದ ರಟ್ಟಿನ ಓಟೆಗಳು, ಪ್ರಿಸಂಗಳು ಮತ್ತು ಅಗಲದ ಗಂಟೇಪ್ ಮುಂತಾದವುಗಳನ್ನು ಖರೀದಿಸಿ ಮನೆಗೆ ಬಂದ.

ಮೊದಲಿಗೆ ಡಯಾಗ್ರಾಂ ಹಾಕಿಕೊಂಡು ಅದರಂತೆ ಪೆರಿಸ್ಕೋಪ್ ತಯಾರಿಸಿದ. ಒಟ್ಟು ಮೂರು ಕೋನಗಳಲ್ಲಿ ಹುದುಗಿಸಲು ಮೂರು ಪ್ರಿಸಂಗಳು ಬೇಕಾದವು. ಓಟೆಯ ಒಂದು ತುದಿಯನ್ನು ಕಣ್ಣ ಮುಂದಿಟ್ಟರೆ ಪೆರಿಸ್ಕೋಪು ಕೊಂಬಿನಂತೆ ಮೇಲಕ್ಕೆ ಹಿಂದಕ್ಕೆ ಬಗ್ಗಿಕೊಂಡು ಓಟೆಯ ಇನ್ನೊಂದು ತುದಿಯು ನಡುನೆತ್ತಿಗೆ ಕೂಡುತ್ತಿತ್ತು.

ಕೂತರೆ ತನ್ನ ತಲೆಗೆಟಕುವಷ್ಟೆತ್ತರಕ್ಕೆ ಹೊಂದಿಸಿ ಮಂಚದ ಸೊಳ್ಳೆಪರದೆಯ ಚೌಕಟ್ಟಿಗೆ ಪೇರಿಸ್ಕೊಪನ್ನು ಇಳಿಬಿಟ್ಟು ಅಲುಗಾಡದಂತೆ ಎರಡುಮೂರು ಕಡೆಗಳಿಂದ ಸರಿಗೆಯಿಂದ ಎಳೆದು ಕಟ್ಟಿದ. ಮಂಚದ ಮೇಲೆ ಕುಳಿತು ತನ್ನ ನಡುನೆತ್ತಿಯ ಮೇಲೆ ಮೂಡಿರುವ ಆ ಮೊಳಕೆಯನ್ನು ಗಟ್ಟಿಹಿಡಿದು ಎತ್ತಿದಾಗ ಫಟ್ಟನೆ ಅವನ ನೆತ್ತಿಯ ಮೇಲಿನ ಮುಚ್ಚಳವು ತೆರೆದುಕೊಂಡಿತು. ಅದನ್ನು ಪೆರಿಸ್ಕೋಪಿಗೆ ಹೊಂದಿಸಿ ತನ್ನ ಮುಂದಿನ ಓಟೆಯೊಳಗೆ ಕಣ್ಣು ಹಾಯಿಸಿದ ಶರ್ಮ. ಆ ತಣ್ಣಗೆ ಸೂಸುವ ಹೊನ್ನ ಬಣ್ಣದ ಬೆಳಕೇ ಪ್ರಿಸಂಗಳಲ್ಲಿ ಪ್ರತಿಫಲನಗೊಳ್ಳುತ್ತಾ ಕಣ್ಣು ಕುಕ್ಕುತ್ತಿತ್ತು. ಹಾಗೆ ದಿಟ್ಟಿಸತೊಡಗಿದ. ಆ ಬೆಳಕಿನ ಸೆಳೆತವು ತೀವ್ರವಾಗಲಾರಂಬಿಸಿತು. ಬೆಳಕು ಹೊರಸೂಸಿ ತನ್ನನ್ನು ಆವರಿಸುತ್ತಿರುವುದನ್ನು ಶರ್ಮ ಧಿಗ್ಭ್ರಮೆಯಿಂದ ನೋಡತೊಡಗಿದ. ಏನಾಗುತ್ತಿದೆ ಎಂದು ಶರ್ಮನ ಗ್ರಹಿಕೆಗೊದಗುವಷ್ಟರಲ್ಲಿ ಆ ಪ್ರಿಸಂನೊಳಗಿನ ಬೆಳಕಿನ ಸೆಳೆತಕ್ಕೆ ಒಳಗಾಗಿ ಸುಂಯ್ಯೆಂದು ನುಸುಳಿ ಪ್ರಿಸಂಗಳಲ್ಲಿ ಪ್ರತಿಫಲನಗೊಳ್ಳುತ್ತಾ ತನ್ನ ತಲೆಯೊಳಗೆ ತಾನೆ ಬಂದು ಬಿದ್ದು ಬಿಟ್ಟ.

ಹ್ಹೆ ಹ್ಹೆ.. ಎಂತಹ ಕತೆ ಮಾರಯ್‌ರೇ ಇದು..

***
ಆ ವಿದ್ಯುತ್ ನಾರಾಯಣ ಶರ್ಮನು ತನ್ನ ತಲೆಯೊಳಗೆ ತಾನೇ ಬಿದ್ದುಬಿಟ್ಟ ಕತೆಯು ಭಾನುವಾರದ ಪುರವಣಿಯಲ್ಲಿ ಪ್ರಕಟವಾಗಲು ಲಾಯಕ್ಕಿಲ್ಲ ಎಂದು ಸಂಪಾದಕರು ನಿರ್ಧರಿಸಿದ್ದರು. ಆದರೆ ಕತೆ ಬರೆದ ಸ್ವತಹ ಶರ್ಮನೇ ಅವನ ತಲೆಯೊಳಗಿರುವಾಗ ತನಗೆ ಈ ಕತೆ ಬರೆದು ಕಳುಹಿಸಿದ್ದು ಯಾರು ಎಂದು ಸಂಪಾದಕರಿಗೆ ಗೊಂದಲವಾಯಿತು.
ಹ್ಹೆ ಹ್ಹೆ. ತಾನು ಈ ಕತೆಯನ್ನು ನಂಬಿಬಿಟ್ಟೆನೆ.
ನಂಬಿದರೆ ಅದು ಕತೆಯಾಗುವುದೇ. ಅಥವಾ ನಂಬುವಂತಿಲ್ಲದಿದ್ದರೆ ಕತೆಯೆನಿಸುವುದೇ.
ಮತ್ತಷ್ಟು ಗೊಂದಲವಾಯಿತು.

"ಥುತ್ ಯಾಕಾದರೂ ಇಂತಹ ಕತೆಗಳನ್ನು ಕಳುಹಿಸುತ್ತಾರೋ.. ಇದಕ್ಕಿಂತ ಒಳ್ಳೆಯ ನೂರು ಕತೆಗಳನ್ನು ತಾನು ಬರೆಯಬಲ್ಲೆ " ಎಂದು ಸಂಪಾದಕರೆಂದುಕೊಳ್ಳುತ್ತಿದ್ದಂತೆ 'ಟಿನ್' ಎಂದು ಕಿರುಗಂಟೆ ಹೊಡೆದು ಅವರ ತಲೆಯೊಳಗೊಂದು ಕತೆಯ ಐಡಿಯಾ ಮೊಳಕೆಯೊಡೆಯಿತು...

***
ಸಂಪಾದಕರಿಗೂ ವಿದ್ಯುತ್ ನಾರಾಯಣ ಶರ್ಮನಿಗೂ ಭೇಟಿಯಾಯಿತು. ಅವರಿಬ್ಬರೂ ನಿಜಕ್ಕೂ ಕೈ ಕೈ ಹಿಡಿದು ಮಿಲಾಯಿಸಿದ್ದರೂ ಸಂಪಾದಕರು ಮತ್ತು ಶರ್ಮನು ಅವರವರ ಸ್ವಂತ ತಲೆಯೊಳಗಿದ್ದರು.
"ಶರ್ಮರೇ ನಿಮ್ಮ ಕತೆ ಒಳ್ಳೆಯದಿತ್ತು. ನಾನು ಅದನ್ನು ಭಾನುವಾರದ ಪುರವಣಿಯಲ್ಲಿ ಪ್ರಕಟಿಸಬಹುದಿತ್ತು. ಆದರೆ ಅದೀಗ ನಿಮ್ಮ ಒಬ್ಬರದೇ ಕತೆಯಲ್ಲವಲ್ಲ. ನನ್ನದೂ ಅದೇ ಕತೆ." ಎಂದು ನಕ್ಕರು ಸಂಪಾದಕರು.

ಸುಮ್ಮನೆ ನಕ್ಕ ವಿದ್ಯುತ್ ನಾರಾಯಣ ಶರ್ಮ.
ಅವನಿಗೆ ಆ ಕತೆಯು ಪ್ರಕಟವಾಗುವುದು ಅಷ್ಟು ಮುಖ್ಯವೆನಿಸಲಿಲ್ಲ. ಏಕೆಂದರೆ ತನ್ನ ತಲೆಯೊಳಗೆ ಅವನಿರುವ ಜಾಗಕ್ಕೆ ಪತ್ರಿಕೆ ಸಿಗುತ್ತಿರಲಿಲ್ಲ.