ಜೂನ್ 16, 2009

ಕೊಂಕಣಿಗಳು ಮತ್ತು ಸಂಘನಿಷ್ಟೆ

ಮಂಗಳೂರಿನ ಸ್ಥಿತ್ಯಂತರಗಳ ಬಗ್ಗೆ ವಿವಿಧ ಪತ್ರಿಕೆಗಳಲ್ಲಿ, ವೆಬ್ಸೈಟುಗಳಲ್ಲಿ ಪ್ರಕಟವಾದ ವಿಶ್ಲೇಷಣೆಗಳಲ್ಲಿ ಹಲವು ಬರಹಗಳು ನನ್ನ ಈ ಬರಹವನ್ನು ಪ್ರೇರೇಪಿಸಿದೆ. ಅವುಗಳನ್ನು ಬರಹದ ಮೊದಲಿಗೆ ಉಲ್ಲೇಖಿಸುತ್ತೇನೆ.

೧. ಸಂವಾದ ಪತ್ರಿಕೆಯ ೨೦೦೬ರ ಡಿಸೆಂಬರ್ ಸಂಚಿಕೆಯಲ್ಲಿ ಪ್ರಕಟವಾದ ಡಾ.ವಿ.ಲಕ್ಷ್ಮೀನಾರಾಯಣ ಅವರ ಕರಾವಳಿ ಕೋಮು ಸಂಘರ್ಷದ ಸುತ್ತ ಎನ್ನುವ ಲೇಖನ. ಇದರ ಉಧೃತ ಭಾಗ:
ಕರ್ನಾಟಕದ ಇತೆರೆಡೆಯ ಮುಸ್ಲಿಮರಂತೆ ಕರಾವಳಿಯ ಮುಸ್ಲಿಮರು ತೀರ ಬಡತನ ಹಾಗೂ ಭೂಹೀನತೆಯಿಂದ ಪರದಾಡುತ್ತಿಲ್ಲ. ತಮ್ಮ ಕುಶಲಕರ್ಮಿಕಾಯಕ ಮತ್ತು ವ್ಯಾಪಾರದಿಂದ ಹಿಂದೂ ವ್ಯಾಪಾರಿಗಳ ಮುಖ್ಯವಾಗಿ ಕೊಂಕಣಿಗಳ ಅಧಿಪತ್ಯಕ್ಕೆ ಸವಾಲೆಸೆದಿರುವುದರಿಂದ ಎರಡೂ ವ್ಯಾಪಾರಿ ಸಮುದಾಯಗಳ ನಡುವೆ ಪೈಪೋಟಿಗಳೇ ಕೋಮುವಾದದ ಮೂಲವಾಗಿ ಪರಿಣಮಿಸಿವೆ.

೨. ಮಂಗಳೂರಿನ ಚರ್ಚ್ ದಾಳಿಗಳ ಬಳಿಕ ಚುರುಮುರಿ.ಕಾಮ್ ನಲ್ಲಿ ಪ್ರಕಟವಾದ ಸಿ.ಎನ್.ಬಿ.ಸಿ. ಟೀವಿ ೧೮ರ ಇಕಾನಮಿಕ್ ಪಾಲಿಸಿ ಎಡಿಟರ್ ಆಗಿರುವ ವಿವಿಯನ್ ಫೆರ್ನಾಂಡಿಸ್‌ರವರ ‘The Bajrang Dal doesn’t belong in Mangalore’ ಎನ್ನುವ ಲೇಖನ. ಈ ಲೇಖನದಲ್ಲಿ ನಾನು ಉಲ್ಲೇಖಲಿಚ್ಛಿಸುವ ಭಾಗ :
“While Hindus are the majority in Mangalore, Christians and Muslims have a sizeable strength and peace had held all along, even though the Konkani-speaking Hindus (more than the Tulu-speaking ones) have a particular affinity to the RSS.”

೩. ಪ್ರಜಾವಾಣಿಯ ಪ್ರಖ್ಯಾತ ದೆಹಲಿ ನೋಟ ಅಂಕಣದಲ್ಲಿ ಬರೆಯುವ ಪ್ರಜಾವಾಣಿಯ ದೆಹಲಿ ಪ್ರತಿನಿಧಿ ದಿನೇಶ್ ಅಮೀನ್ ಮಟ್ಟು ಮಂಗಳೂರಿನ ಪಬ್ ದಾಳಿಯ ಬಳಿಕ ಪ್ರಕಟವಾದ ತಮ್ಮ ಕೂಡಿ ಕಟ್ಟಿದ್ದನ್ನು ಒಡೆದು ಮುರಿದರು ಎಂಬ ಲೇಖನದಲ್ಲಿ ಹೀಗೆ ಬರೆಯುತ್ತಾರೆ. (ಪ್ರಜಾವಾಣಿ ಫೆ. ೨೦೦೯)
"ವ್ಯಾಪಾರ ಎನ್ನುವುದು ಶಕ್ತಿ ಹೇಗೋ, ಅದು ದ.ಕ. ಮಂದಿಯ ದೌರ್ಬಲ್ಯ ಕೂಡ ಹೌದು. ಈ ಸತ್ಯವನ್ನು ಮೊದಲು ಅರಿತುಕೊಂಡವರು ಸಂಘ ಪರಿವಾರದ ನಾಯಕರು. ಒಬ್ಬ ಮುಸ್ಲಿಂ ವ್ಯಾಪಾರಿಯ ದಮನವನ್ನು ಒಬ್ಬ ಹಿಂದೂ ವ್ಯಾಪಾರಿ ಕೇವಲ ಧರ್ಮ ರಕ್ಷಣೆಯ ದೃಷ್ಟಿಯಿಂದಲ್ಲ, ವ್ಯಾಪಾರದ ಲಾಭದ ದೃಷ್ಟಿಯಿಂದಲೂ ನೋಡುತ್ತಾನೆ ಎನ್ನುವದು ಅವರಿಗೆ ತಿಳಿದಿತ್ತು. ವ್ಯಾಪಾರದ ಮೂಲಕ ಸಮೃದ್ಧಿಯನ್ನು ಕಂಡ ಕೊಂಕಣಿಗಳು (ಗೌಡ ಸಾರಸ್ವತ ಬ್ರಾಹ್ಮಣರು) ನೀಡುತ್ತಿದ್ದ ದೇಣಿಗೆಯಿಂದಾಗಿ ರಾಜ್ಯ ಸಂಘಟನೆಯ ರಿಮೋಟ್ ಕಂಟ್ರೋಲ್ ಕೂಡ ದ.ಕ.ದಲ್ಲಿಯೇ ಇತ್ತು. ಆದರೆ ಕೊಂಕಣಿ ಬ್ರಾಹ್ಮಣರಿಂದಾಚೆಗೆ ಬೆಳೆಯಲು ಸಂಘಕ್ಕೆ ಸಾಧ್ಯವಾಗಿರಲಿಲ್ಲ."

೪. ಶಶಿಧರ ಭಟ್ ಬರೆಯುವ ಕೋಮು ಸಂಘರ್ಷವಾದ ಆರ್ಥಿಕ ಸಂಘರ್ಷ (ಕಡಲತಡಿಯ ತಲ್ಲಣ: ಸೃಷ್ಟಿ ಪಕೇಶನ್ಸ್, ಬೆಂಗಳೂರು ೨೦೦೯):
"ಕರ್ನಾಟಕದಲ್ಲಿ ಜನಸಂಘ ಎಲ್ಲೂ ಇರದಿದ್ದಾಗ ಅದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತ್ಯಕ್ಷವಾಗಿತ್ತು. ನಾವು ಸಣ್ಣವರಿದ್ದಾಗೆಲ್ಲ ಜನಸಂಘ ಎಂದರೆ ವ್ಯಾಪಾರಿಗಳ ಪಕ್ಷ. ದಕ್ಷಿಣ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಿರಾಣಿ ಅಂಗಡಿಗಳನ್ನಿಟ್ಟುಕೊಂಡವರು ಕೊಂಕಣಿಗಳಾದುದರಿಂದ ಜನಸಂಘ ಕೊಂಕಣಿಗಳ ಪಕ್ಷ ಎಂದೇ ನಾವು ತಿಳಿದುಕೊಂಡಿದ್ದೆವು.
ದಕ್ಷಿಣ ಕನ್ನಡದಲ್ಲಿ ಜನಸಂಘಕ್ಕೆ ಮೊದಲು ಬೆಂಬಲ ನೀಡಿದವರು ವ್ಯಾಪಾರಿಗಳು, ಇವರಿಂದ ರೂಪುಗೊಂಡ ಒಂದು ರಾಜಕೀಯ ಪಕ್ಷ ತುಂಬ ಸಹಜವಾಗಿ ವ್ಯಾಪಾರಿ ಅಜೆಂಡಾವನ್ನು ಹೊಂದಿರಲೇ ಬೇಕು. ಮತ್ತು ಆ ಪಕ್ಷದ ರಾಜಕೀಯ ಸಿದ್ಧಾಂತ ಮತ್ತು ಹೋರಾಟಕ್ಕೆ ವ್ಯಾಪಾರಿ ಟಚ್ ಇರಲೇ ಬೇಕು. ಇಲ್ಲಿ ಆದದ್ದು ಇದೇ"

ಈ ಮೇಲಿನ ಬರಹಗಳ ಉಲ್ಲೇಖಗಳು ದಕ್ಷಿಣ ಕನ್ನಡದ ಕೊಂಕಣಿಗಳ ಅಂದರೆ ಗೌಡ ಸಾರಸ್ವತರ ಸಂಘನಿಷ್ಟೆಯನ್ನು ಉಲ್ಲೇಖಿಸುತ್ತವೆ. ಜೊತೆಗೆ ತಾರ್ಕಿಕವಾಗಿ ಮತ್ತು ಕೆಲವೊಮ್ಮೆ ನೇರವಾಗಿ ದಕ್ಷಿಣ ಕನ್ನಡದ ಇತ್ತೀಚಿನ ಬೆಳವಣಿಗೆಗಳ ನೈತಿಕ ಹೊಣೆಗಾರಿಕೆಯ ತೋರುಬೆರಳನ್ನು ಕೊಂಕಣಿ ಸಮುದಾಯದತ್ತ ಚಾಚುತ್ತವೆ. ನನಗೆ ಇದು ಬರೇ ವ್ಯಕ್ತಿಗಳ ವೈಯಕ್ತಿಕ ಅಭಿಪ್ರಾಯದಂತೆ ಕಾಣದೇ ಕೊಂಕಣಿಗಳ ಬಗ್ಗೆ ದಕ್ಷಿಣಕನ್ನಡದ ಸಮಾಜದ ಒಟ್ಟು ಅಭಿವ್ಯಕ್ತಿಯಾಗಿ ನನಗೆ ಭಾಸವಾಗುತ್ತಿದೆ. ಇದನ್ನು ಒಂದು ಮರುಪೂರಣ (ಫೀಡ್ ಬ್ಯಾಕ್) ಎಂಬ ಧನಾತ್ಮಕ ಭಾವದಿಂದ ಗ್ರಹಿಸಿಕೊಂಡು ಕೊಂಕಣಿ ಸಮುದಾಯ (ಗೌಡಸಾರಸ್ವತ) ತನ್ನ ಸಾಮಾಜಿಕ ಬದ್ಧತೆಗಳನ್ನು ಪುನರಾವಲೋಕನ ಮಾಡಿಕೊಳ್ಳಬೇಕಾದ ಗಳಿಗೆ ಬಂದಿದೆ.

ಈ ಪುನರಾವಲೋಕನದ ಪೂರ್ವಭಾವಿಯಾಗಿ ನಾನು ನಡೆಸಿದ ಅಧ್ಯಯನದಲ್ಲಿ ಕಂಡುಬಂದ ಕೆಲವೊಂದು ಅಂಶಗಳನ್ನು ಮುನ್ನಡೆಯಾಗಿ ಇಟ್ಟುಕೊಂಡು ಮುಂದುವರೆಯಲು ಇಚ್ಛಿಸುತ್ತೇನೆ.

ತುಳುನಾಡಿನ ವ್ಯಾಪಾರದ ಮೇಲೆ ಕೊಂಕಣಿಗಳ ನಿಯಂತ್ರಣ:
ತುಳುನಾಡಿನ ವ್ಯಾಪಾರದ ಮೇಲೆ ಕೊಂಕಣಿಗಳ ಪ್ರಾಬಲ್ಯ ೧೭ನೇ ಶತಮಾನದ ಪೂರ್ವಾಧದಿಂದ ಬೆಳೆದು ಬಂದದ್ದು. ಗೋವಾದ ವ್ಯಾಪಾರದಲ್ಲಿ ಗೌಡಸಾರಸ್ವತರ ಪ್ರಾಬಲ್ಯ, ಕೊಂಕಣಿಗಳ ಮೇಲೆ ಕೆಳದಿ ಅರಸೊತ್ತಿಗೆಯ ಅಖಂಡ ವಿಶ್ವಾಸ ಮುಂತಾದ ಕಾರಣಗಳು ಆವರೆಗೆ ತುಳುನಾಡಿನಲ್ಲಿ ವ್ಯಾಪಾರ ಚಟುವಟಿಕೆಗಳಲ್ಲಿ ತೊಡಗಿದ್ದ ಜೈನ, ಲಿಂಗಾಯತ (ಬಣಜಿಗ) ಮತ್ತು ಆರ್ಯವೈಶ್ಯ (ಕೋಮಟಿ ಸೆಟ್ಟಿ) ಸಮುದಾಯಗಳಿಗೆ ಸೇರಿದ ಸೆಟ್ಟಿಕಾರರ ಪ್ರಾಬಲ್ಯವನ್ನು ಕೊನೆಗಾಣಿಸಿ ಕೊಂಕಣಿ ವ್ಯಾಪಾರಿಗಳು ಕರಾವಳಿಯ ವ್ಯಾಪಾರದಲ್ಲಿ ನಿಯಂತ್ರಣ ಸಾಧಿಸಲು ಸಾಧ್ಯವಾದವು. ಆದರೆ ಮುಸ್ಲಿಂ ವ್ಯಾಪಾರಿಗಳು ಕ್ರಿ.ಶ. ೭ನೇ ಶತಮಾನದಲ್ಲೇ ತುಳುನಾಡಿನಲ್ಲಿ ನೆಲೆಸಿದ್ದಕ್ಕೆ ಪುರಾವೆಗಳಿವೆ. ಮುಸ್ಲಿಂ ವ್ಯಾಪಾರಿಗಳ ಒಕ್ಕೂಟವಾದ ಹಂಜಮಾನದ ಉಲ್ಲೇಖವು ತುಳುನಾಡಿನ ಮಧ್ಯಕಾಲೀನ ಶಿಲಾಶಾಸನಗಳಲ್ಲಿ ದೊರಕುತ್ತದೆ. ಈ ಉಲ್ಲೇಖವು ಕೊಂಕಣಿಗಳ ಆಗಮನಕ್ಕಿಂತ ಮೊದಲೇ ಮುಸ್ಲಿಂ ವ್ಯಾಪಾರಿಗಳು ತುಳುನಾಡಿನ ವ್ಯಾಪಾರದ ಪ್ರಮುಖ ಭಾಗವಾಗಿದ್ದರು ಎಂಬುದನ್ನು ಸೂಚಿಸುತ್ತದೆ.

ತುಳುನಾಡಿನಲ್ಲಿ ಮಧ್ಯಕಾಲೀನ ಇತಿಹಾಸದಲ್ಲಿ ಮುಸ್ಲಿಮರ ಬಗ್ಗೆ ಉಲ್ಲೇಖಗಳು:
ಮಂಗಳೂರಿನ ಬಂದರ್ ಪ್ರದೇಶದ ಬೆಲಿಯ ಪಳ್ಳಿ ಎಂದು ಹೆಸರಾಗಿರುವ ಮಸ್ಜಿದ್ ಜೀನತ್ ಬಕ್ಷ್ ಹಿಜರಿ ಶಕ ೨೨(ಕ್ರಿ.ಶ. ೬೪೪)ರಲ್ಲಿ ಸ್ಥಾಪನೆಯಾಯಿತು. ಮುಸ್ಲಿಮರು ಆಗಿನಿಂದಲೂ ತುಳುನಾಡಿನ ವ್ಯಾಪಾರದ ಒಂದು ಪ್ರಮುಖ ಭಾಗವಾಗಿದ್ದರು. ತುಳುನಾಡಿನ ಮಧ್ಯಕಾಲೀನ ಇತಿಹಾಸ ಮಂಗಳೂರಿನ ಮುಸ್ಲಿಮರ ಮತ್ತು ಇತರರ ನಡುವೆ ಆಗಾಗ ನಡೆಯುತ್ತಿದ್ದ ಗಲಭೆಗಳನ್ನು ಉಲ್ಲೇಖಿಸುತ್ತದೆ. ಆ ಹೊತ್ತಿಗೆ ಕೊಂಕಣಿಗಳಿನ್ನೂ ತುಳುನಾಡಿನಲ್ಲಿ ನೆಲೆಯೂರಿರಲಿಲ್ಲ. (ವಹಾಬ್ ದೊಡ್ಡಮನೆ : ತುಳುನಾಡಿನ ಮುಸ್ಲಿಮರು)
ಕ್ರಿ.ಶ. ೧೩೨೫-೧೩೫೪ರ ನಡುವೆ ಮಂಗಳೂರಿಗೆ ಭೇಟಿನೀಡಿದ ಅರಬ್ಬಿ ಪ್ರವಾಸಿ ಇಬ್ನ್ ಬಟೂಟ ಮಂಗಳೂರಿನಲ್ಲಿ ೪,೦೦೦ ಮುಸ್ಲಿಮರ ಒಂದು ಕಾಲನಿ ಇದ್ದು ಸ್ಥಳೀಯರಿಗೂ ಮುಸ್ಲಿಮರಿಗೂ ಆಗಾಗ ಗಲಾಟೆಗಳು ನಡೆಯುತ್ತಿದ್ದವು ಮತ್ತು ದೊರೆ ರಾಮದೇವ ಇದನ್ನು ವ್ಯಾಪಾರದ ಹಿತಾಸಕ್ತಿಯಿಂದ ಮಧ್ಯಪ್ರವೇಶಿಸಿ ಸಂತೈಸುತ್ತಿದ್ದ ಎಂದು ತನ್ನ ಪ್ರವಾಸ ಕಥನದಲ್ಲಿ ಉಲ್ಲೇಖಿಸುತ್ತಾನೆ. (ಸೆಲೆಕ್ಷನ್ ಫ್ರಂ ದಿ ಟ್ರಾವೆಲ್ಸ್ ಇನ್ ಏಸಿಯ ಅಂಡ್ ಆಫ್ರಿಕ ೧೩೨೫-೧೩೫೪: ಈಬ್ನ್ ಬಟೂಟ: ಪುಟ ಸಂಖ್ಯೆ ೨೩೩)
ಮಂಗಳೂರಿನಲ್ಲಿ ದೊರಕಿದ ಕ್ರಿ.ಶ. ಸುಮಾರು ೧೪೧೮ಕ್ಕೆ ಸಂಬಂಧಿಸಿದ ಶಿಲಾಶಾಸನವೊಂದರ ಪ್ರಮುಖ ಭಾಗವೊಂದನ್ನು ಇಲ್ಲಿ ಉಲ್ಲೇಖಿಸುತ್ತಿದ್ದೇನೆ. ತಿಂಮಣ ಒಡೆಯನೆಂಬಾತ ಮಂಗಲೂರು ರಾಜ್ಯವನ್ನಾಳುತ್ತಿದ್ದ ಕಾಲದಲ್ಲಿ ಮುಸ್ಲಿಂ ವ್ಯಾಪಾರಿ ಸಂಘವಾದ ಹಂಜಮಾನದವರು ಸಲ್ಲುವ ಸುಂಕಗಳನ್ನು ಕಟ್ಟುತ್ತಿದ್ದರೂ ವಿನಾ ಕಾರಣ ತನ್ನ ಜನರನ್ನು ಕಳಿಸಿ ನಾಲ್ಕೈದು (ನಾಕಯಿದು) ಮಸೀದಿಗಳನ್ನು ಸುಟ್ಟು ಹಾಕಿದಾಗ ತಿಂಮಣ ಒಡೆಯನ ಮೇಲಧಿಕಾರಿಯಾದ ಬಯಿಚದಂಣಾಯಕನು ಬಂದು ಬಂಗರು, ಚೌಟರು, ಅಜಿಲರು ಸಮಸ್ತ ಕಟ್ಟಳೆಯವರು ಕೂಡಿರಲು ಹಂಜಮಾನದವರಿಗೆ ಪರಿಹಾರವನ್ನು ಕೊಡಿಸಿದ ಬಗ್ಗೆ ಈ ಶಾಸನ ವಿವರಿಸುತ್ತದೆ.(ಶಾಸನ ಸಂ: ೧೮೨ ಸೌತ್ ಇಂಡಿಯನ್ ಇನ್ಸ್ಕ್ರಿಪ್ಶನ್ಸ್ ಸಂಪುಟ: ೭)
ಭಟ್ಕಳದಲ್ಲಿ ದೊರೆತ ಕ್ರಿ.ಶ. ೧೪೨೭ ನೇ ಇಸವಿಯ ವೀರಗಲ್ಲೊಂದರಲ್ಲಿ ಹಂಜಮಾನದ ಮುಖ್ಯಸ್ಥ ಕಾಸರಕೋಡಿನ ಉಮರ ಮರಕಾಲ, ಅವನ ಹೆಂಗಸರು ಮತ್ತು ಪರಿವಾರದ ಮೇಲೆ ಶ್ರೀ ಮನ್ಮಹಾಪ್ರಧಾನ ತಿಂಮಣ ಒಡೆಯನೆಂಬಾತ ಮೋಸದಿಂದ ಮುತ್ತಿಗೆ ಹಾಕಿ ಹಲ್ಲೆ ನಡೆಸಲು ಈ ಉಮರ ಮರಕಲನು ನಗಿರೆಯ ಸಂಗಿರಾಯ ಒಡೆಯರ ಬೆಂಬಲ ಕೋರಿದಾಗ ಅವರ ರಕ್ಷಣೆಗಾಗಿ ಸಂಗಿರಾಯ ಕಳುಹಿಸಿದ ಸಾವಿರ ಆಳು ಸೈನ್ಯದ ನಾಯಕನಾದ ಕೋಟೀಶ್ವರ ನಾಯಕನು ಈ ಸಂಬಂಧವಾಗಿ ಕಾಸರಕೋಡಿನಲ್ಲಿ ನಡೆದ ಗಲಭೆಯಲ್ಲಿ ಮೃತಪಟ್ಟದ್ದು ಉಲ್ಲೇಖವಾಗಿದೆ. (೪೮, ಕರ್ನಾಟಕ ಇನ್ಸ್ಕ್ರಿಪ್ಶನ್ಸ್ ಸಂಪುಟ ೧)
ಈ ಮೇಲಿನ ಉಲ್ಲೇಖಗಳನ್ನು ಗಮನಿಸಿದಾಗ ಮುಸ್ಲಿಮರ ಬಗ್ಗೆ ಗಣನೀಯ ಪ್ರಮಾಣದ ಸಾಮಾಜಿಕ ಅಸಹನೆಯು ತುಳುನಾಡಿನಲ್ಲಿ ಕೊಂಕಣಿಗಳ ಆಗಮನಕ್ಕಿಂತ ಹಿಂದೆಯೇ ಇತ್ತು ಎನ್ನುವುದನ್ನು ಗ್ರಹಿಸಬಹುದು.
ಆದರೆ ತುಳುನಾಡಿನ ವ್ಯಾಪಾರದಲ್ಲಿ ಕೊಂಕಣಿಗಳ ಪ್ರಾಬಲ್ಯದ ಬಳಿಕ ಕೊಂಕಣಿಗಳ ಮತ್ತು ಮುಸ್ಲಿಮರ ನಡುವೆ ಸೌಹಾರ್ದತೆಗೆ ಕೊರತೆಯಿರಲಿಲ್ಲ ಎನ್ನುವುದಕ್ಕೆ ಹಲವು ಪುರಾವೆಗಳನ್ನು ಈ ಲೇಖನದುದ್ದಕ್ಕೂ ವಿವರಿಸಲಾಗಿದೆ. ಈ ಎರಡು ಸಮುದಾಯಗಳ ನಡುವೆ ಕೋಮು ಗಲಭೆಗಳು ಹುಟ್ಟಿಕೊಂಡ ಬಗ್ಗೆ ತುಳುನಾಡಿನ ಇತಿಹಾಸದಲ್ಲಿ ಪುರಾವೆಗಳು ನನಗೆ ಇದುವರೆಗೆ ದೊರಕಿಲ್ಲ.

ತುಳುನಾಡಿನ ವ್ಯಾಪಾರದಲ್ಲಿ ಮುಸ್ಲಿಂ ಮತ್ತು ಕೊಂಕಣಿ ವರ್ತಕರು:
೧೮೦೦ ನೇ ಇಸವಿಯ ಹೊತ್ತಿಗೆ ದಕ್ಷಿಣ ಕನ್ನಡದ ವ್ಯಾಪಾರ ವಹಿವಾಟುಗಳಲ್ಲಿ ಕೊಂಕಣಿಗಳು ಮತ್ತು ಮುಸ್ಲಿಮರು, ಈ ಎರಡೇ ಸಮುದಾಯಗಳು ವ್ಯಾಪಕ ನಿಯಂತ್ರಣ ಸಾಧಿಸಿದ್ದರು ಎನ್ನುವುದನ್ನು ಫ್ರಾನ್ಸಿಸ್ ಬುಕಾನನ್ ಬರೆದ ಅ ಜರ್ನಿ ಫ್ರಂ ಮದ್ರಾಸ್.. ತಿಳಿಸುತ್ತದೆ. ಉಳಿದ ಪಾರಂಪರಿಕ ವ್ಯಾಪಾರಿ ಸಮುದಾಯಗಳಾದ ಹರಿಶೆಟ್ಟಿ ಸಮುದಾಯ, ತೆಲುಗು ಬಣಜಿಗರು ಮತ್ತು ಲಿಂಗಾಯತ ಬಣಜಿಗರು ಕೆಲವು ಕುಟುಂಬಗಳಷ್ಟೆ ಉಳಿದುಕೊಂಡಿದ್ದರೂ ವ್ಯಾಪಾರದಿಂದ ನಿರ್ಗಮನವಾಗಿದ್ದರು. ಆ ಹೊತ್ತಿಗೆ ಇಡೀ ದಕ್ಷಿಣ ಕನ್ನಡದಲ್ಲಿದ್ದ ಗುಜರಾತಿಗಳು ೪ ಮನೆಗಳು ಮಾತ್ರ. ಕೊಂಕಣಿಗಳದ್ದು ೨೪೩೪ ಮನೆಗಳಿದ್ದರೆ ಮುಸ್ಲಿಮರದ್ದು ೫೨೩೩ ಮನೆಗಳಿದ್ದವು - ಇದರಲ್ಲಿ ಮುಸ್ಲಿಂ ವ್ಯಾಪಾರಿಗಳಾದ ಮೊಪ್ಲಾಗಳದ್ದು ೩೮೨೫ ಮನೆಗಳಾದರೆ ಇತರ ಮುಸಲ್ಮಾನರದ್ದು ೧೩೮೮ ಮನೆಗಳು.
ಆ ಹೊತ್ತಿಗೆ ಕೊಂಕಣಿಗಳ ಹದಿನೆಂಟಕ್ಕೂ ಹೆಚ್ಚು ಪೇಟೆಗಳು ತುಳುನಾಡಿನಲ್ಲಿದ್ದವು ಎನ್ನುವುದನ್ನು ಮಂಜೇಶ್ವರ ಮದನಂತೇಶ್ವರ ದೇವಸ್ಥಾನದ ೧೮ನೇ ಶತಮಾನದ ಶಾಸನಗಳು, ಕರಾರುಗಳು ಉಲ್ಲೇಖಿಸುತ್ತವೆ.
ಹೈದರಾಲಿಯ ಆಡಳಿತದಲ್ಲಿ ತುಳುನಾಡಿನ ಪ್ರಮುಖ ವ್ಯಾಪಾರಿ ಸಮುದಾಯಗಳು ಮೋಪ್ಲಾ ಮತ್ತು ಕೊಂಕಣೀಸ್ ಆಗಿದ್ದರೂ ಬ್ರಿಟಿಷರು ತುಳುನಾಡನ್ನು ವಶಪಡಿಸಿಕೊಂಡ ಬಳಿಕ ಸೂರತ್, ಕಛ್, ಬಾಂಬೇ ಮತ್ತು ಇತರ ಉತ್ತರ ಭಾರತದ ಪಟ್ಟಣಗಳಿಂದ ವ್ಯಾಪಾರಿಗಳು ತುಳುನಾಡಿಗೆ ಬಂದು ನೆಲೆಯೂರಿದ್ದರು ಎನ್ನುವುದನ್ನು ಬುಕಾನನ್ ತಿಳಿಸುತ್ತಾನೆ. ಬಂಟ ಸಮುದಾಯದವರೂ ವ್ಯಾಪಾರಕ್ಕಿಳಿಯಲು ಪ್ರಾರಂಭಿಸಿದ್ದಾರೆ ಆದಾಗ್ಯೂ ಹೆಚ್ಚಿನ ವ್ಯಾಪಾರಿಗಳಿನ್ನೂ ಕೊಂಕಣಿಗಳು ಮತ್ತು ಮೋಪ್ಲಾಗಳೇ ಆಗಿದ್ದಾರೆ ಎನ್ನುವುದನ್ನೂ ಸೂಚಿಸುತ್ತಾನೆ.

ಕೊಂಕಣಿಗಳ ಸಾಮಾಜಿಕ ನಾಯಕತ್ವ :
ಇತರ ಮೇಲ್ವರ್ಗದ ಭೂಮಾಲಕರಂತೆ ಪ್ರಭುತ್ವ ನಿಷ್ಟರಾಗಿದ್ದ ಕೊಂಕಣಿಗಳು ೧೯ನೇ ಶತಮಾನದ ಅಂತ್ಯದೊಂದಿಗೆ ಸ್ವಾತಂತ್ರ್ಯ ಚಳುವಳಿಯಲ್ಲಿ ಗಣನೀಯ ಪ್ರಮಾಣದಲ್ಲಿ ಪಾಲ್ಗೊಂಡರು. ಮತ್ತು ಅಪ್ಪಟ ಕಾಂಗ್ರೆಸಿಗರಾಗಿ ನಿರ್ಮಾಣಗೊಂಡರು. ಅನೇಕ ಕೊಂಕಣಿಗಳು ಮಹಾತ್ಮಾ ಗಾಂಧಿಯವರ ಸಂದೇಶಕ್ಕೆ ಮಿಡಿದು ಅಸಹಕಾರ ಚಳುವಳಿ ಮತ್ತು ಸ್ವದೇಶಿ ಚಳುವಳಿಯಲ್ಲಿ ತೊಡಗಿಕೊಂಡರು. ಅನೇಕ ಬಟ್ಟೆವ್ಯಾಪಾರಿ ಕೊಂಕಣಿಗಳು ಖಾದಿ ಚಳುವಳಿಯಲ್ಲಿ ತೊಡಗಿಕೊಂಡು ಮಗ್ಗದ ಶಾಲೆಗಳನ್ನು ಸ್ಥಾಪಿಸಿದ ಪುರಾವೆಗಳಿವೆ. ಅನೇಕ ಕೊಂಕಣಿ ವ್ಯಾಪಾರಿಗಳ ಹೊಸ ಪೀಳಿಗೆ ಆಂದೋಲನದಲ್ಲಿ ತೊಡಗಿ ವ್ಯಾಪಾರದಿಂದ ಆ ಕುಟುಂಬಗಳು ಹೊರಬರಬೇಕಾಗಿ ಬಂದ ಹಲವು ಉಲ್ಲೇಖಗಳನ್ನು ನೀಡಬಹುದು. ದಕ್ಷಿಣಕನ್ನಡದಲ್ಲಿ ಕಾಂಗ್ರೆಸ್ ಕಟ್ಟಲು ಮುಂಚೂಣಿಯಲ್ಲಿ ನಿಂತವರು ಇದೇ ಕೊಂಕಣಿ ವ್ಯಾಪಾರಿ ಸಮುದಾಯ.
ಕಾಂಗ್ರೆಸ್ ಸಿಧ್ಧಾಂತಗಳಿಂದ ಮತ್ತು ಗಾಂಧಿವಾದದಿಂದ ಪ್ರೇರಿತರಾದ ಹಲವು ಕೊಂಕಣಿಗಳು ಸ್ವಾತಂತ್ರ್ಯೋತ್ತರ ಸಹಕಾರ ಚಳುವಳಿಯಲ್ಲಿ ತೊಡಗಿಕೊಂಡರೆ ನೆಹರೂ ಆಧುನಿಕತೆಯಿಂದ ಪ್ರೇರಿತರಾದ ಕೊಂಕಣಿ ಯುವಕರು ಉದ್ಯಮಗಳಲ್ಲಿ ತೊಡಗಿಕೊಂಡರು. ಜೊತೆಯಲ್ಲಿ ತಮ್ಮ ಕುಲಕಸುಬಾದ ವ್ಯಾಪಾರವನ್ನು ಮೊದಲಿನ ಚಾತುರ್ಯಗಳಿಂದಲೇ ಮುಂದುವರೆಸಿದ ಅನೇಕ ಕುಟುಂಬಗಳೂ ಇದ್ದೇ ಇದ್ದವು.
ಸ್ವಾತಂತ್ರ್ಯೋತ್ತರ ಕಾಲದಲ್ಲಿ ನೆಹರೂ ತೀರಿಕೊಂಡಾಗ ಕಾಂಗ್ರೆಸ್ಸಿನಲ್ಲಿ ಉದ್ಭವವಾದ ನಾಯಕತ್ವದ ಗೊಂದಲಗಳನ್ನು ನಿವಾರಿಸುವಲ್ಲಿ ಸಂಜೀವ ರೆಡ್ಡಿ, ನಿಜಲಿಂಗಪ್ಪ, ಕಾಮರಾಜ್ ನಾಡರ್, ಅತುಲ್ಯ ಘೋಶ್ ಮತ್ತು ಶ್ರೀನಿವಾಸ ಮಲ್ಯ ಈ ಐವರ ಸಿಂಡಿಕೇಟ್ ಪ್ರಧಾನ ಪಾತ್ರವಹಿಸಿತು ಎನ್ನುವುದು ಇಂದು ಇತಿಹಾಸ. ಶ್ರೀನಿವಾಸ ಮಲ್ಯರು ದಕ್ಷಿಣ ಕನ್ನಡದ ಕೊಂಕಣಿ ಸಮುದಾಯ ಕಾಂಗ್ರೆಸ್ ಪಕ್ಷದ ಒಳಗಿನ ಶಕ್ತಿರಾಜಕಾರಣದಲ್ಲಿ ಎಂತಹ ಪಾತ್ರವಹಿಸಿತ್ತು ಎಂಬುದಕ್ಕೆ ಒಂದು ಪುರಾವೆ. ಇದೇ ಸಾಲಿನಲ್ಲಿ ಹೆಚ್.ವಿ.ಕಾಮತ್, ಟಿ.ಏ.ಪೈ, ವೈಕುಂಠ ಬಾಳಿಗ, ಮಣೇಲ್ ಶ್ರೀನಿವಾಸ ನಾಯಕ್, ವೆಂಕಟ್ರಾಯ ಬಾಳಿಗ, ಯು.ಪಿ.ಮಲ್ಯ, ರಂಗನಾಥ ಶೆಣೈ, ಬಂಟ್ವಾಳ ನಾರಾಯಣ ನಾಯಕ್ ಮುಂತಾದ ಕಾಂಗ್ರೆಸ್ ಮುತ್ಸದ್ದಿಗಳನ್ನು ನಾನು ಉಲ್ಲೇಖಿಸಬಯಸುತ್ತೇನೆ. ಇವರೆಲ್ಲರೂ ಮತ್ತು ಇನ್ನೂ ಅನೇಕ ಕೊಂಕಣಿಗಳು ದಕ್ಷಿಣ ಕನ್ನಡದಾದ್ಯಂತ ಆ ಹೊತ್ತಿಗೆ ಕಾಂಗ್ರೆಸ್ ಸಂಘಟಿಸಿದವರು.
ಉಳಿದಂತೆ ಕೊಂಕಣಿಗಳು ಜನಸಂಘವನ್ನೂ ಕಟ್ಟಿದರು, ಪ್ರಜಾ ಸೋಷಲಿಸ್ಟ್ ಪಕ್ಷದಲ್ಲೂ (ಉಪೇಂದ್ರ ನಾಯಕ್) ಇದ್ದರು. ಕಮ್ಯುನಿಷ್ಟ್ ಪಕ್ಷದಲ್ಲೂ ಇದ್ದರು (ಎ. ಶಾಂತಾರಾಮ ಪೈ) ಕೊಂಕಣಿಗಳು ಆ ಹೊತ್ತಿಗೆ ಸುಶಿಕ್ಷಿತರೂ, ವೈಚಾರಿಕರೂ ಆಗಿದ್ದುದರಿಂದ ಎಲ್ಲದರಲ್ಲಿಯೂ ಕೈಯಾಡಿಸಿದವರು. ಇದು ಕೊಂಕಣಿಗಳು ಎಲ್ಲಾ ವಿಚಾರಧಾರೆಗಳಿಗೂ ತಮ್ಮನ್ನೊಡ್ಡಿಕೊಂಡಿದ್ದರು ಎನ್ನುವುದನ್ನು ತೋರಿಸುತ್ತದೆ. ಸಮಕಾಲೀನ ಸಾಹಿತ್ಯ ಮತ್ತು ಪತ್ರಿಕೋದ್ಯಮ ಚಟುವಟಿಕೆಗಳಲ್ಲೂ ದಕ್ಷಿಣ ಕನ್ನಡದಲ್ಲಿ ಕೊಂಕಣಿಗಳು ಮುಂಚೂಣಿಯಲ್ಲಿದ್ದುದೂ ಇದನ್ನು ಪುಷ್ಟೀಕರಿಸುತ್ತದೆ. ಆದರೆ ಕೊಂಕಣಿಗಳ ಪ್ರಥಮ ನಿಷ್ಟೆ ಆ ಸಮಯಕ್ಕೆ ಕಾಂಗ್ರೆಸಿನಲ್ಲಿತ್ತು.
ಲೋಕಸಭಾ ಚುನಾವಣೆಗಳಲ್ಲಿ ೧೯೫೧, ೫೭, ೬೨, ೭೧, ೭೭ ರಲ್ಲಿ ಉಡುಪಿ ಲೋಕಸಭಾ ಕ್ಷೇತ್ರದಿಂದ ಕೊಂಕಣಿ ಕಾಂಗ್ರೆಸಿಗ ಚುನಾಯಿತನಾಗಿದ್ದ. ಅಂದರೆ ದಕ್ಷಿಣ ಕನ್ನಡದಲ್ಲಿದ್ದ ಎರಡು ಲೋಕಸಭಾ ಸ್ಥಾನಗಳಲ್ಲಿ ಒಂದು ಸ್ಥಾನ ಕೊಂಕಣಿಗಳಿಗೆ ಮೀಸಲೋ ಎಂಬಷ್ಟು ಪ್ರಾಬಲ್ಯವನ್ನು ಕಾಂಗ್ರೆಸ್ಸಿನಲ್ಲಿ ಕೊಂಕಣಿಗರು ಗಳಿಸಿದ್ದರು ಎನ್ನುವುದನ್ನು ಗ್ರಹಿಸಬಹುದು. ೧೯೫೧, ೬೨, ೬೭ ರಲ್ಲಿ ತಲಾ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಕೊಂಕಣಿ ಕಾಂಗ್ರೆಸಿಗರು ಶಾಸಕರಾಗಿ ಆರಿಸಿಬಂದಿದ್ದರು. ೧೯೫೭ರಲ್ಲಿ ಒಬ್ಬ ಕೊಂಕಣಿ ಶಾಸಕ ಆಯ್ಕೆ ಆಗಿದ್ದರು.
ಅಂಕಿಅಂಶಗಳ ಹೆಚ್ಚಿನ ವಿಶ್ಲೇಷಣೆಗಾಗಿ ೧೯೫೭ರ ಮಂಗಳೂರು ೧ ವಿಧಾನಸಭಾ ಚುನಾವಣೆಯ ಫಲಿತಾಂಶಗಳನ್ನು ಗಮನಿಸಬಹುದು.
೧ ವೈಕುಂಠ ಬಾಳಿಗಾ /ಭಾ.ರಾ.ಕಾಂಗ್ರೆಸ್ ೧೬,೩೬೫ (೪೮.೯೪% )
೨. ಶಾಂತಾರಾಮ್ ಪೈ/ ಸಿ.ಪಿ.ಐ. ೧೦,೩೬೪ (೩೦.೯೯%)
೩. ಲೌರಾ ಪಾಯಸ್ / ನಿರ್ದಲೀಯ ೪,೭೬೬ (೧೪.೨೫% )
೪. ಪ್ರಭಾಕರ / ಭಾ.ಜನಸಂಘ ೧,೯೪೫ (೫.೮೨% )

ವೈಕುಂಠ ಬಾಳಿಗರು ರಾಜ್ಯ ಸಂಪುಟದಲ್ಲಿ ಸಚಿವರೂ ಆಗಿದ್ದರು ಬಳಿಕ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿದ್ದರು. ಟಿ.ಎ.ಪೈಗಳು ಕೇಂದ್ರ ಸಂಪುಟದಲ್ಲಿದ್ದು ಬ್ಯಾಂಕು ರಾಷ್ಟ್ರೀಕರಣ, ಕೃಷಿಸಾಲಗಳ ಮುಕ್ತ ನೀತಿ, ವಿಮಾರಂಗ ಮುಂತಾದ ರಾಷ್ಟ್ರ ಮಟ್ಟದ ಸೇವೆಯನ್ನು ಕಾಂಗ್ರೆಸ್ ನಲ್ಲಿದ್ದುಕೊಂಡು ನೀಡಿದವರು. ಇದರಿಂದ ದಕ್ಷಿಣಕನ್ನಡದ ಕಾಂಗ್ರೆಸ್ ನಲ್ಲಿ ಕೊಂಕಣಿಗಳ ಸ್ಥಾನ ಪ್ರಧಾನವಾಗಿತ್ತು ಎನ್ನುವುದನ್ನು ಊಹಿಸಬಹುದು.
ಇಂದಿರಾಗಾಂಧಿಯ ಇಪ್ಪತ್ತು ಅಂಶಗಳ ಕಾರ್ಯಕ್ರಮದಡಿಯಲ್ಲಿ ದೇವರಾಜು ಅರಸು ಜಾರಿಗೆ ತಂದ ಭೂಸುದಾರಣಾ ಕಾಯಿದೆಯಿಂದ ಅನೇಕ ಕೊಂಕಣಿ ಭೂಮಾಲಿಕರು ನೆಲಕಳಕೊಂಡರೂ ಅದಾಗಲೇ ನೆಲೆಯೂರಿ ದೇಶಾದ್ಯಂತ ವಿಸ್ತರಿಸತೊಡಗಿದ್ದ ಕೊಂಕಣಿಗಳೇ ಹುಟ್ಟುಹಾಕಿದ್ದ ಬ್ಯಾಂಕಿಂಗ್ ರಂಗ ಕೊಂಕಣಿ ಯುವಕರಿಗೆ ಆಧಾರವಾಯಿತು.
೧೯೬೭ ಒಂದು ನಿರ್ಣಾಯಕ ಕಾಲಘಟ್ಟ, ಕಾಂಗ್ರೆಸ್ ಎರಡು ಭಾಗವಾಗಿತ್ತು. ಶ್ರೀನಿವಾಸ ಮಲ್ಯರ ನಿಧನವಾಗಿತ್ತು. ಇಂದಿರಾ ಆಡಳಿತ ಹಳೆಯ ಕಾಂಗ್ರೆಸ್ ನಿಷ್ಟಾವಂತರಿಗೆ ಭ್ರಮನಿರಸನವಾಗಿತ್ತು. ಹಿರಿಯ ಕಾಂಗ್ರೆಸಿಗರು ಮೆಲ್ಲನೆ ಹಿಂದೆ ಸರಿಯತೊಡಗಿದ ಕಾಲವದು. ಇಂದಿರಾಗಾಂಧಿ ಬಲಿಷ್ಟರಾಗಿದ್ದರು.
೧೯೬೮ರಲ್ಲಿ ದಕ್ಷಿಣ ಕನ್ನಡ ಕೋಮುಗಲಭೆಯೊಂದಕ್ಕೆ ಸಾಕ್ಷಿಯಾಯಿತು. ಎಪ್ರಿಲ್ ೧೮ರಂದು ಕುದ್ರೋಳಿಯಲ್ಲಿ ಜೂಜಾಟದ ವಿವಾದವೊಂದು ೨ ದಿನಗಳ ವ್ಯಾಪಕ ಗಲಭೆಗೆ ಕಾರಣವಾಗಿ ಓರ್ವನ ಹತ್ಯೆಗೆ ಕಾರಣವಾಯಿತು. ಇದಕ್ಕೆ ಕಾರಣವಾದದ್ದು ಕೊಂಕಣಿಗಳಲ್ಲ ಎಂಬುದನ್ನು ಉಲ್ಲೇಖಿಸುತ್ತಾ ಈ ಗಲಭೆಯಲ್ಲಿ ಅತೀ ಹೆಚ್ಚು ನಷ್ಟ ಅನುಭವಿಸಿದವರು ವ್ಯಾಪಾರಿಗಳು ಎಂಬುದನ್ನು ನೆನಪಿಸಬಯಸುತ್ತೇನೆ. ಅನೇಕ ಕೊಂಕಣಿ ಮತ್ತು ಮುಸ್ಲಿಂ ಭಂಡಸಾಲೆಗಳು ಸುಟ್ಟು ಹೋಗಿದ್ದವು. ಜೊತೆಗೆ ಇಲ್ಲೊಂದು ಆಸಕ್ತಿಕರ ಅಂಕಿಅಂಶಗಳತ್ತ ಓದುಗರ ಗಮನವನ್ನು ಸೆಳೆಯಬಯಸುತ್ತೇನೆ.
ಭಾರತದಲ್ಲಿ ೧೯೫೪ರಿಂದ ೧೯೬೬ರ ವರೆಗೆ ನಡೆದ ಸರಾಸರಿ ಕೋಮು ಗಲಭೆಗಳ ಸಂಖ್ಯೆ ೭೦.೨ ಆದರೆ ೧೯೬೭ರಲ್ಲಿ ದೇಶದಾದ್ಯಂತ ನಡೆದ ಕೋಮುಗಲಭೆಗಳು ೨೦೯, ೧೯೬೮ರಲ್ಲಿ ೩೪೬, ೧೯೬೯ರಲ್ಲಿ ೫೧೯ ಕೋಮು ಗಲಭೆಗಳು ದೇಶದಾದ್ಯಂತ ನಡೆದವು. ಆದುದರಿಂದ ಸ್ಥಳೀಯ ಕೋಮುಗಲಭೆಗಳಿಗೊಂದು ರಾಷ್ಟ್ರೀಯ ಆಯಾಮವಿರುತ್ತದೆ ಎನ್ನುವುದನ್ನು ನಾವು ಅರ್ಥೈಸಿಕೊಳ್ಳಬೇಕು.
೧೯೬೮ರಲ್ಲಿ ನಡೆದ ಕೋಮುಗಲಭೆಗೆ ಮೊಗವೀರ ಮತ್ತು ಮುಸ್ಲಿಮರ ನಡುವೆ ಸಂಭವಿಸಿದ ಸಣ್ಣಗಲಾಟೆಯು ಮೂಲವಾದರೂ ಆ ಬಳಿಕ ಅದು ಸಮಗ್ರ ಸಮಾಜವನ್ನು ಆವರಿಸಿಕೊಳ್ಳುವಾಗ ಮೂಲ ಕಾರಣದಿಂದ ಬೇರೆಯೇ ಆಯಾಮವನ್ನು ಪಡೆದುಕೊಳ್ಳುತ್ತದೆ. ಹೀಗಾಗಿ ಯಾವುದಾದರೂ ಒಂದು ಸಮುದಾಯವನ್ನು ಕಾರಣವೆಂದು ಸೂಚಿಸುವುದು ಅಸಮಂಜಸವಾಗುತ್ತದೆ.

ಈ ಹಂತದಲ್ಲಿ ಮತ್ತೊಮ್ಮೆ ದಿನೇಶ್ ಅಮೀನ್ ಮಟ್ಟೂ ಅವರ ಬರಹದ ಒಂದು ಭಾಗವನ್ನು ಉಲ್ಲೇಖಿಸಲಿಚ್ಛಿಸುತ್ತೇನೆ.
ದೇವರಾಜ್ ಅರಸರ ರಾಜಕೀಯ ಕ್ಷೇತ್ರದ ಸೋಷಿಯಲ್ ಇಂಜಿನೀರಿಂಗ್‌ನಿಂದಾಗಿ ಜಿಲ್ಲೆಯಲ್ಲಿ ಬಂಟರು ಮತ್ತು ಬ್ರಾಹ್ಮಣರ ಕೈಯಲ್ಲಿದ್ದ ರಾಜಕೀಯ ಅಧಿಕಾರ ಕೂಡ ಹಿಂದುಳಿದ ಜಾತಿಯ ಬಿಲ್ಲವರು ಮತ್ತು ಅಲ್ಪಸಂಖ್ಯಾತ ಕೋಮುಗಳ ಕಡೆಗೆ ಸರಿದು ಹೋಗಿತ್ತು. (ಅದೇ ಬರಹ: ಪ್ರಜಾವಾಣಿ ಫೆ. ೨೦೦೯)
ಇಲ್ಲಿ ಬ್ರಾಹ್ಮಣರು ಎನ್ನುವದನ್ನು ಕೊಂಕಣಿಗಳು ಎಂದು ಕೂಡ ಓದಿಕೊಳ್ಳಬೇಕು. ಜಿಲ್ಲೆಯ ಮಟ್ಟಿಗೆ ಕಾಂಗ್ರೆಸ್ಸಿನ ಮನಿಬ್ಯಾಗ್ ಎಂದೇ ಪರಿಗಣಿತವಾಗಿದ್ದ ಕೊಂಕಣಿ ಸಮುದಾಯ ಈ ಸಾಮಾಜಿಕ ಪಲ್ಲಟದಿಂದ ಕಾಂಗ್ರೆಸ್ಸಿನಲ್ಲಿ ಮೆಲ್ಲನೆ ನೇಪಥ್ಯಕ್ಕೆ ಸರಿಯಿತು. ಅದುವರೆಗೆ ಪ್ರತಿ ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಕೊಂಕಣಿಗಳಿಗೆ ದೊರಕುತ್ತಿದ್ದ ಪ್ರಾತಿನಿಧ್ಯ ೭೨ರ ವಿಧಾನಸಭಾ ಚುನಾವಣೆಯಲ್ಲಿ ದೊರಕಲಿಲ್ಲ.

ತುರ್ತು ಪರಿಸ್ಥಿತಿಯ ಭುಗಿಲು:
ಹಳೆಯ ಕೊಂಕಣಿ ಕಾಂಗ್ರೆಸಿಗರು ತಮ್ಮ ಉತ್ಸಾಹವನ್ನು ಕಳೆದುಕೊಂಡಿದ್ದರು. ಯುವಕರ ಅಭಿಪ್ರಾಯಗಳು ದಲಾಗತೊಡಗಿದ್ದವು. ಸಾಮಾಜಿಕ ಪಲ್ಲಟದ ಪರಿಣಾಮವಾಗಿ ಮಧ್ಯಮವರ್ಗಕ್ಕೆ ಕಡೆಗಣಿಸಲ್ಪಟ್ಟಂತಹ ಆಸಹನೆ ಕಾಡಲಾರಂಭಿಸಿತ್ತು. ಈ ಅಸಹನೆ, ಭ್ರಮನಿರಸನ ಒಟ್ಟಾಗಿ ಕೂಡಿ ಪ್ರತಿಭಟನೆಯಾಗಿ ಹೊರಹೊಮ್ಮಲು ಇಂದಿರಾಗಾಂಧಿ ಘೋಷಿಸಿದ ತುರ್ತು ಪರಿಸ್ಥಿತಿ ಒಂದು ಭೂಗತ ಚಟುವಟಿಕೆಯ ರಂಗವನ್ನು ನಿರ್ಮಿಸಿತು. ಈ ಭೂಗತ ಚಟುವಟಿಕೆಗಳ ಉತ್ಸಾಹ ರಾಷ್ಟ್ರಪ್ರೇಮದ ಹೊಸ ಉನ್ಮಾದದಂತೆ ಭಾಸವಾಗಿ ರಾ.ಸ್ವ.ಸಂಘ ರಾಷ್ಟ್ರಪ್ರೇಮದ ಹೊಸ ಹರಿಕಾರನಂತೆ ಮುಂದೊತ್ತಿ ಬಂದು ಅಸಂತೃಪ್ತ ಮಧ್ಯಮವರ್ಗವನ್ನು ತೆಕ್ಕೆಗೆ ಸೆಳೆದುಕೊಂಡಿತು. ಈ ಸಂದರ್ಭದಲ್ಲಿ ಬರೇ ಕೊಂಕಣಿಗಳಲ್ಲದೇ ಅನೇಕ ಹಿಂದುಳಿದ ವರ್ಗದವರೂ ಸೇರಿದಂತೆ ಗಣನೀಯ ಪ್ರಮಾಣದ ಮೇಲ್ವರ್ಗದವರು ಸಂಘದ ಭೂಗತ ಚಟುವಟಿಕೆಗಳಲ್ಲಿ ತೊಡಗಿಕೊಂಡರು. ೧೯೭೫ರಲ್ಲಿ ಜಯಪ್ರಕಾಶ್ ನಾರಾಯಣ್ ಅವರ ಸತ್ಯಾಗ್ರಹದ ಕರೆಗೆ ಓಗೊಟ್ಟು ತುರ್ತುಪರಿಸ್ಥಿತಿಯ ವಿರುದ್ಧ ಪ್ರತಿಭಟಿಸಿ ದೇಶದ ಎಲ್ಲೆಡೆಯಲ್ಲಿ ಬಂಧಿತರಾದ ೮೦,೦೦೦ ಸತ್ಯಾಗ್ರಹಿಗಳಲ್ಲಿ ೧೫,೦೦೦ ಸತ್ಯಾಗ್ರಹಿಗಳು ಕರ್ನಾಟಕದಲ್ಲಿ ಬಂಧಿತರಾದವರು. ಈ ಸಂಖ್ಯೆ ಸಾಧ್ಯವಾದದ್ದು ಮಂಗಳೂರಿನಲ್ಲಿ ನಡೆದ ವ್ಯಾಪಕ ಸಂಘಟನೆಯಿಂದ ಎಂದು ಈ ಘಟನೆಯನ್ನು ದಾಖಲಿಸಿದ ಮೂಲಗಳು ತಿಳಿಸುತ್ತವೆ.
ಮೊದಲು ಊರಿಗೆ ಊರೇ ಕಾಂಗ್ರೆಸ್ಸಿನ ನಿಷ್ಟಾವಂತ ಮತದಾರರಾಗಿದ್ದ ಕೊಂಕಣಿ ಸಮುದಾಯ ಊರಿಗೆ ಊರೇ ಜನತಾ ಪಾರ್ಟಿಗೆ ಓಟು ಹಾಕುವ ಮೂಲಕ ಒಂದು ವ್ಯಾಪಕ ಸ್ಥಿತ್ಯಂತರಕ್ಕೆ ಕಾರಣವಾಯಿತು. ಬಳಿಕದ ದಿನಗಳಲ್ಲಿ ಕಾಂಗ್ರೆಸ್ ನಿಷ್ಟೆಯಿರುವ ಕೊಂಕಣಿಗರು ಬೆರಳೆಣಿಕೆಯ ಮನೆಗಳಾಗಿ ಉಳಿದುಹೋದವು.
ತುರ್ತು ಪರಿಸ್ಥಿತಿಯ ಎರಡು ಮುಖ್ಯ ಪರಿಣಾಮಗಳೆಂದರೆ ತೀವ್ರ ಬಲಪಂಥ (ಸಂಘ) ಮತ್ತು ತೀವ್ರ ಎಡಪಂಥ (ನಕ್ಸಲ್ಬಾರಿ) ಗಳು ಶಕ್ತಿಗಳಿಸಿಕೊಂಡಿದ್ದು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಇದು ದಕ್ಷಿಣ ಕನ್ನಡಕ್ಕೆ ಸೀಮಿತವಾದ ವಿಷಯವಲ್ಲ. ರಾಷ್ಟ್ರ ಮಟ್ಟದ ಒಂದು ಪರಿಣಾಮ.
ಹೀಗೆ ಕಾಂಗ್ರೆಸ್ ನಿಷ್ಟವಾಗಿದ್ದ ಒಂದು ಸಮುದಾಯ ಸಾಮಾಜಿಕ, ರಾಜಕೀಯ ಮತ್ತು ಭಾವನಾತ್ಮಕ ಕಾರಣಗಳಿಂದಾಗಿ ಭಾರತೀಯ ಜನಸಂಘ ಮತ್ತು ಅದರ ಹೊಸ ಅವತರಣಿಕೆ ಭಾರತೀಯ ಜನತಾ ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿ ಹೊಸ ಪಕ್ಷವನ್ನು ದಕ್ಷಿಣ ಕನ್ನಡದಾದ್ಯಂತ ಕಟ್ಟುವಲ್ಲಿ ನಿರ್ಣಾಯಕವಾಯಿತು.
ತುರ್ತುಪರಿಸ್ಥಿತಿಯ ಬಳಿಕವೂ ೭೭ರ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ನಲ್ಲಿ ವಿಜಯಿಯಾಗಿದ್ದರೂ ಟಿ.ಏ.ಪೈ ಸಂಜಯಗಾಂಧಿಯೊಂದಿಗಿನ ಭಿನ್ನಾಭಿಪ್ರಾಯದ ಕಾರಣದಿಂದಾಗಿ ತಮ್ಮ ಪದವಿಗೆ ರಾಜೀನಾಮೆ ನೀಡಿದರು ಮತ್ತು ೮೦ರ ಚುನಾವಣೆಯಲ್ಲಿ ಕಾಂಗ್ರೆಸ್ (ಅರಸು) ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತರು. ಆಗ ಅವರ ಸೋಲಿಗೆ ಕಾರಣ, ಇದೇ ಕೊಂಕಣಿಗಳು ಜನತಾ ಪಕ್ಷದ ವಿ.ಎಸ್. ಆಚಾರ್ಯರಿಗೆ ಮತನೀಡಿದ್ದರಿಂದ ಎಂಬುದನ್ನು ನೆನಪಿಸಿಕೊಳ್ಳಬಹುದು. ಅದು ಟಿ.ಎ.ಪೈ ಸೋಲಿಗೆ ಕಾರಣವಾಯಿತಲ್ಲದೇ ಕಾಂಗ್ರೆಸ್ ಗೆಲುವಿಗೆ ತೊಡಕಾಗಲಿಲ್ಲ ಎಂಬುದು ರುಜುವಾತಾಯಿತು. ಅಲ್ಲಿಗೆ ಕೊಂಕಣಿಗಳ ಕಾಂಗ್ರೆಸ್ ಸಂಬಂಧದ ಎಲ್ಲ ಅಧ್ಯಾಯಗಳೂ ಮುಗಿದವು.
ಈ ಒಟ್ಟೂ ಸ್ಥಿತ್ಯಂತರದ ಪರಿಣಾಮವಾಗಿ ೮೩ರ ವಿಧಾನಸಭಾ ಚುನಾವಣೆಯಲ್ಲಿ ಬಿ.ಜೆ.ಪಿ. ಜಿಲ್ಲೆಯ ೧೫ರಲ್ಲಿ ಎಂಟು ಸ್ಥಾನಗಳನ್ನು ಗೆದ್ದುಕೊಂಡಿತಲ್ಲದೆ ಬಿ.ಜೆ.ಪಿ ಬೆಂಬಲಿತ ಮೂವರು ಜನತಾ ಪಕ್ಷದ ಅಭ್ಯರ್ಥಿಗಳೂ ಚುನಾಯಿತರಾದರು.

ಕೊಂಕಣಿಗಳ ಔದ್ಯಮಿಕ ಮುನ್ನೋಟ:
೨೦ನೇ ಶತಮಾನದ ಪೂರ್ವಾರ್ಧ ಕೊಂಕಣಿಗಳು ದಕ್ಷಿಣ ಕನ್ನಡದ ಸಾಮಾಜಿಕ ನಾಯಕತ್ವವನ್ನು ಸಾಧಿಸಿದ ಒಂದು ಕಾಲಘಟ್ಟ. ದಕ್ಷಿಣ ಕನ್ನಡದ ಪ್ರತೀ ಉದ್ಯಮ ಕ್ಷೇತ್ರದಲ್ಲೂ ಕೊಂಕಣಿಗಳು ಮುಂಚೂಣಿಯಲ್ಲಿದ್ದರು. ಔದ್ಯಮಿಕವಾಗಿ ಮುಂಚೂಣಿಯಲ್ಲಿದ್ದ ಸಮುದಾಯ ಸಹಜವಾಗಿ ಎಲ್ಲ ಜಾತಿ ವರ್ಗಗಳವರ ಉದ್ಯೋಗಕ್ಕೂ ಕಾರಣವಾಗಿದ್ದರು. ಇದು ಸಮಾಜದಲ್ಲಿ ಒಂದು ರೀತಿಯ ನಿಯಂತ್ರಣವನ್ನೂ ಅವರಿಗೆ ಕಲ್ಪಿಸಿತು.
ಆದರೆ ಈ ಹೊತ್ತಿಗೆ ಕೊಂಕಣಿ ಸಮಾಜದ ಒಳಗೊಂದು ಸ್ಥಿತ್ಯಂತರ ಆಗಲಾರಂಭಿಸಿತ್ತು. ಆರ್ಥಿಕವಾಗಿ ಬಲಾಡ್ಯರಾಗಿದ್ದ ಕೊಂಕಣಿಗಳ ಮಕ್ಕಳು ಉನ್ನತ ವಿದ್ಯಾಭ್ಯಾಸವನ್ನು ಪಡೆಯಲು ಮತ್ತು ಪಡೆದು ಬಂದ ಬಳಿಕ ನೆಲೆಸಲು ಹೊರನಾಡುಗಳಿಗೆ, ಮಹಾನಗರಗಳಿಗೆ ತೆರಳಲು ಪ್ರಾರಂಭವಾಗಿತ್ತು. ಆರ್ಥಿಕವಾಗಿ ಅಷ್ಟೊಂದು ಸಬಲರಾಗಿರದ ಸಾಮಾನ್ಯ ಕೊಂಕಣಿಗಳು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗವನ್ನು ಗಳಿಸಿಕೊಂಡು ನೌಕರವರ್ಗವಾಗಿ ಬದಲಾಗತೊಡಗಿದ್ದರು. ಚಿಲ್ಲರೆ ವ್ಯಾಪಾರದಲ್ಲಿ ಅಂತದ್ದೊಂದು ಲಾಭದಾಯಕ ಆಕರ್ಷಣೆಯೂ ಇರಲಿಲ್ಲ. ಕೊಂಕಣಿಗಳ ಉದ್ಯಮಶೀಲತೆಯ ಪ್ರತಿಭಾವಂತ ಯುವಕರು ಭಾರತದಲ್ಲಿ ಅದಾಗ ತಲೆಯೆತ್ತುತ್ತಿದ್ದ ಕಾರ್ಪೋರೆಟ್ ರಂಗದ ಹೊಸ್ತಿಲಲ್ಲಿ ನಿಂತಿದ್ದರು. ಇಂದು ಕಾರ್ಪೋರೇಟ್ ಜಗತ್ತಿನಲ್ಲಿ ಕೇಳಿಬರುತ್ತಿರುವ ಅನೇಕ ಕೊಂಕಣಿ ಪ್ರಮುಖರ ಹೆಸರುಗಳನ್ನು ಮಂಗಳೂರಿನ ಶಾಲೆಗಳಲ್ಲಿನ ನಾಲ್ಕೈದು ದಶಕಗಳ ಹಿಂದಿನ ದಾಖಲೆಗಳಲ್ಲಿ ಹುಡುಕಿ ತೆಗೆಯಬಹುದು.
ಹಲವು ವ್ಯಾಪಾರಿ ಕುಟುಂಬಗಳು ಹೊಸ ತಲೆಮಾರಿನ ಸದಸ್ಯರ ಹೊರಹೋಗುವಿಕೆಯಿಂದಾಗಿ ತಮ್ಮ ಭಂಡಸಾಲೆಗಳನ್ನು ಮಾರಿದರು. ಅದರಲ್ಲಿ ಹೆಚ್ಚಿನವರು ಮುಸ್ಲಿಮರಿಗೇ ತಮ್ಮ ಭಂಡಸಾಲೆಗಳನ್ನು ಮಾರಿದ್ದರು ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ. ಅದುವರೆಗೆ ಮುಸ್ಲಿಮರ ಮತ್ತು ಕೊಂಕಣಿಗಳ ವ್ಯಾಪಾರಿ ಸ್ಪರ್ಧೆಯು ಆರೋಗ್ಯಕರವಾಗಿದ್ದಿರಬೇಕು ಎಂಬುದನ್ನು ಇದರಿಂದ ಊಹಿಸಬಹುದು.
ಮುಸ್ಲಿಂ ಸಮುದಾಯದಲ್ಲಿಯೂ ಒಂದು ಸ್ಥಿತ್ಯಂತರವಾಗಲಾರಂಭಿಸಿತ್ತು. ವ್ಯಕ್ತಿಗತವಾಗಿ ಸಂಪತ್ತನ್ನು ಗಳಿಸುವತ್ತ ನಿಷ್ಟೆಯಿಂದ ದುಡಿಯುವ ಮುಸ್ಲಿಂ ಸಮುದಾಯ, ಗಲ್ಫ್ ರಾಷ್ಟ್ರಗಳಲ್ಲಿ ತೆರೆಯಲಾರಂಭಿಸಿದ ಉದ್ಯೋಗ ಅವಕಾಶಗಳನ್ನು ಗಳಿಸಿಕೊಂಡು ಒಂದು ಹೊಸ ಮನಿಯಾರ್ಡರ್ ಇಕಾನಮಿಗೆ ಕಾರಣರಾದರು. ಈ ಕಾಲಘಟ್ಟವು ೭೦ರ ದಶಕದ ಮಧ್ಯಭಾಗ ಎಂದು ಕೆಲವು ಅಧ್ಯಯನಗಳು ಸೂಚಿಸುತ್ತವೆ. ಮುಸ್ಲಿಮರ ಜೀವನ ಮಟ್ಟ ಸುಧಾರಿಸಲಾರಂಭಿಸಿತು. ಹೊಸ ಬಂಡವಾಳ ಸಮುದಾಯದಲ್ಲಿ ಚಲಾವಣೆಯಾಗತೊಡಗಿತು. ವಿದ್ಯಾಭ್ಯಾಸ ಅವರಲ್ಲಿ ಹೊಸ ಹುರುಪನ್ನೂ ನೀಡಿತ್ತು.
ಆದರೆ ಮುಸ್ಲಿಮರಲ್ಲಾದ ಈ ಆರ್ಥಿಕ ಉನ್ನತಿಯಿಂದ ಕೊಂಕಣಿ ಮತ್ತು ಇತರ ಸಮುದಾಯದ ಚಿನ್ನದ ವ್ಯಾಪಾರಕ್ಕೆ ಉತ್ತೇಜನ ನೀಡಿತಲ್ಲದೇ ಮುಸ್ಲಿಮರ ವ್ಯಾಪಾರ ಚಟುವಟಿಕೆಗಳಲ್ಲಿ ಗಣನೀಯ ಬದಲಾವಣೆಯನ್ನು ತರಲಿಲ್ಲ. ಗಲ್ಫ್ ನಿಂದ ಮರಳಿದ ಎಷ್ಟು ಮಂದಿ ಮುಸ್ಲಿಮರು ವ್ಯಾಪಾರದಲ್ಲಿ ತೊಡಗಿದರು ಎನ್ನುವುದು ಅಧ್ಯಯನಕ್ಕೆ ಅವಕಾಶವಿರುವ ಅಂಶ.
ಇತ್ತ ಕಡೆಯಿಂದ ಒಂದೊಂದಾಗಿ ಭಂಡಸಾಲೆಗಳನ್ನು ಮಾರಿ ತಮ್ಮ ಉದ್ಯಮಶೀಲತೆಯನ್ನು ಕಾರ್ಪೋರೆಟ್ ಮತ್ತು ಇನ್ನಿತರ ವೃತ್ತಿಪರ (ವೈದ್ಯಕೀಯ ಮತ್ತು ಇಂಜಿನಿಯರಿಂಗ್) ರಂಗಗಳತ್ತ ದುಡಿಸತೊಡಗಿದ್ದ ಕೊಂಕಣಿ ಸಮುದಾಯದ ಈ ವ್ಯಾಪಾರದಲ್ಲಿ ಇಳಿಮುಖವಾದ ಉತ್ಸಾಹ ಸಹಜವಾಗಿ ಅನೇಕ ವ್ಯಾಪಾರ ಕ್ಷೇತ್ರಗಳಲ್ಲಿ ಗುಜರಾತಿ, ಮಾರ್ವಾಡಿ ಮುಂತಾದ ಉತ್ತರಭಾರತೀಯ ಸಮುದಾಯಗಳಿಗೂ, ಮುಸ್ಲಿಂ ಸಮುದಾಯಕ್ಕೂ ಉತ್ತುಂಗಕ್ಕೇರಲು ಎಡೆಮಾಡಿಕೊಟ್ಟಿತು.

ಕೊಂಕಣಿಗಳು ಮತ್ತು ಮುಸ್ಲಿಮರ ನಡುವೆ ವ್ಯಾವಹಾರಿಕ ಸಾಮರಸ್ಯ:
ಕೊಂಕಣಿ ವರ್ತಕರ ಹಡಗುಗಳಿಗೆ ಮುಸ್ಲಿಂ ನಾವಿಕರು ಇದ್ದ ಉಲ್ಲೇಖಗಳು ಎರಡು ಸಮುದಾಯಗಳ ನಡುವೆ ವ್ಯವಹಾರಿಕ ಸೌಹಾರ್ದವಿತ್ತು ಎನ್ನುವುದಕ್ಕೆ ಸಾಕ್ಷಿಯಾಗುತ್ತವೆ. ಈ ಉಲ್ಲೇಖಗಳನ್ನು ಪೋರ್ಚುಗೀಸರು ಸಮುದ್ರ ಪ್ರಯಾಣಕ್ಕೆ ಹಡಗುಗಳಿಗೆ ನೀಡುತ್ತಿದ್ದ ಕಾರ್ಟೇಝಸ್ ಎಂಬ ರಹದಾರಿಯ ದಾಖಲೆಗಳು ಸೂಚಿಸುತ್ತವೆ. ಇದಕ್ಕೆ ಪೂರಕವಾಗಿ ಇಂದಿಗೂ ಕೊಂಕಣಿಗಳ ಲಾರಿಗಳಿಗೆ ಮುಸ್ಲಿಮರು ಚಾಲಕರಾಗಿರುವುದು ಸರ್ವೇ ಸಾಮಾನ್ಯ.
೧೭೬೪ರಲ್ಲಿ ಹೈದರಾಲಿಯು ತುಳುನಾಡನ್ನು ಆಕ್ರಮಿಸಿ ವಶಪಡಿಸಿಕೊಂಡ ಬಳಿಕ ಮತ್ತು ಟಿಪ್ಪುವಿನ ಆಡಳಿತ ಕಾಲದಲ್ಲಿಯೂ ಕೆನರಾ ಸೊರಗಿತು ಎಂದು ಬ್ರಿಟಿಶ್ ದಾಖಲೆಗಳು ತಿಳಿಸುತ್ತದೆ. ಹೊಸ ತೆರಿಗೆಗಳು ಹುಟ್ಟಿಕೊಂಡವು, ಅಕ್ರಮಣಕಾರಿ ಸೈನಿಕ ಪಡೆಗಳ ದಬ್ಬಾಳಿಕೆಯಿಂದ ವ್ಯಾಪಾರವು ಕುಂಠಿತವಾಯಿತು ಎಂಬ ಉಲ್ಲೇಖಗಳಿವೆ. ಆದರೂ ೧೭೭೦ರ ಆಸುಪಾಸಿನಲ್ಲಿ ತಲ್ಲಿಶೇರಿಗೆ ಮಂಗಳೂರಿನಿಂದ ಕುಂಬಳೆದಾರಿಯಾಗಿ ಸಾಗಿದ ಹೈದರನ ಬೃಹತ್ ದಂಡಿನ ಸೈನಿಕರಿಗೆ ಊಟ ಮತ್ತು ವಸತಿಯ ಹೊಣೆಂiiನ್ನು ಕೊಂಕಣಿ ವ್ಯಾಪಾರಿಗಳಾದ ಕುಂಬಳೆ ನಾಯಕ್ ಕುಟುಂಬದವರು ವಹಿಸಿಕೊಂಡಿದ್ದನ್ನು ಕುಂಬಳೆನಾಯಕರ ಕುಟುಂಬದ ದಾಖಲೆಗಳು ತಿಳಿಸುತ್ತವೆ. ಈ ವಿವರವು ತುಳುನಾಡಿನಲ್ಲಿ ಮುಸ್ಲಿಂ ಆಡಳಿತದ ಕಾಲದಲ್ಲಿಯೂ ಕೊಂಕಣಿಗಳು ಮುಸ್ಲಿಂ ಸಮುದಾಯದೊಂದಿಗೆ ಸೌಹಾರ್ದ ರೀತಿಯಲ್ಲಿದ್ದರು ಎಂಬ ಒಂದು ಊಹೆಯನ್ನು ಒದಗಿಸುತ್ತದೆ.
ಟಿಪ್ಪು ಸುಲ್ತಾನನ ಹಣಕಾಸಿನ ವಹಿವಾಟುಗಳನ್ನು ನೋಡಿಕೊಳ್ಳುವ ವ್ಯಕ್ತಿ ರಾಗವೇಂದ್ರ ನಾಯಕ್ ಎಂಬ ಕೊಂಕಣಿಯಾಗಿದ್ದ ಎಂದು ಇತಿಹಾಸಕಾರರು ಉಲ್ಲೇಖಿಸಿದ್ದಾರೆ.
ಕ್ರಿ.ಶ. ೧೭೭೪ರ ಸುಮಾರಿಗೆ ಕೊಂಕಣಿಗಳ ಹದಿನೆಂಟು ಪೇಟೆಗೆ ಸಲ್ಲುವ ದೇವಸ್ಥಾನವಾದ ಮಂಜೇಶ್ವರ ಶ್ರೀ ಅನಂತೇಶ್ವರ ದೇವರ ಭಂಡಾರಕ್ಕೆ ಕೊಡಿಯಾಲ ಪೇಟೆಯ ಹತ್ತು ಸಮಸ್ತರು ಹರವರು ಸ್ಥಳ ಪರಸ್ಥಳದವರು, ಮಹಾನಾಡು, ಗುಜ್ಜಾರು ಮಹಾಜನಂಗಳು ಸಕಲರು ಮುಂತಾಗಿ ಬರಶಿಕೊಟ್ಟ ಧರ್ಮಶಾಸನ ಪಟ್ಟೆಯಂತೆ ಕೊಡೆಯಾಲ ಪೇಟೆಯಲ್ಲಿ ವ್ಯವಹರಿಸಲಾಗುವ ವಿವಿಧ ದವಸಧಾನ್ಯ ಸಾಮಾಗ್ರಿಗಳ ನಿರ್ದಿಷ್ಟ ಪ್ರಮಾಣದ ಅನುಪಾತದಲ್ಲಿ ಸುಂಕವನ್ನು ಸಂಗ್ರಹಿಸಿ ದೇವರ ಅಮೃತಪಡಿ, ನಂದಾದೀಪ್ತಿ ಮೊದಲಾದ ಸೇವೆಯನ್ನು ಕೈಗೊಳ್ಳುವರೇ ಅನೇಕ ವ್ಯಾಪಾರಿಗಳ ಬಿಂನಹವನ್ನು ಈ ಪಟ್ಟೆಯಲ್ಲಿ ನಮೂದಿಸಲಾಗಿದ್ದು ಮಾಪಳೆ ಬರಹದಲ್ಲಿ ಮಾಪಳೆರ ಗುರ್ತ ಈ ಪಟ್ಟೆಯಲ್ಲಿ ಇರುವುದೆಂದು ಗಣಪತಿ ರಾವ್ ಐಗಳ್ ರವರು ಉಲ್ಲೇಖಿಸಿದ್ದಾರೆ. ಈ ಉಲ್ಲೇಖವು ಮಂಗಳೂರಿನ ಕೊಂಕಣಿ ವ್ಯಾಪಾರಿಗಳ ದೇವಕಾರ್ಯಕ್ಕೆ ಮುಸ್ಲಿಂ ವ್ಯಾಪಾರಿಗಳೂ ಬೆಂಬಲ ಸೂಚಿಸಿದ್ದರು ಎಂದು ತಿಳಿದುಬರುತ್ತದೆ. ತಾವು ವ್ಯವಹರಿಸುವ ವ್ಯಾಪಾರದಲ್ಲಿ ಒಂದು ಸಣ್ಣ ಪಾಲು ಪರರ ದೇವಕಾರ್ಯಕ್ಕೆ ವಿನಿಯೋಗವಾಗುವುದಕ್ಕೆ ಮುಸ್ಲಿಂ ವ್ಯಾಪಾರಿಗಳು ಯಾವುದೇ ಅಭ್ಯಂತರವನ್ನು ಸೂಚಿಸದಿರುವುದು ಕೊಂಕಣಿಗಳೊಂದಿಗೆ ಅವರಿಗಿದ್ದ ಸಾಮರಸ್ಯವನ್ನೂ ಸೂಚಿಸುತ್ತದೆ. ಆ ಹೊತ್ತಿನಲ್ಲಿ ಮಂಗಳೂರು ಟಿಪ್ಪು ಸುಲ್ತಾನನ ಆಡಳಿತಕ್ಕೆ ಒಳಪಟ್ಟಿತ್ತು ಎಂದು ಗಮನಿಸಬೇಕು.
೨೦ನೇ ಶತಮಾನದ ಕಾಲಕ್ಕೆ ವ್ಯಾಪಾರ ಚಟುವಟಿಕೆಗಳ ಆಯಾಮ ಬದಲಾಗಿತ್ತು. ಕೊಂಕಣಿಗಳು ದಕ್ಷಿಣಕನ್ನಡದಾದ್ಯಂತ ಹರಡಿಕೊಂಡು ಅವರದೇ ಹಲವು ಪೇಟೆಗಳು ಉಗಮವಾಗಿ ಇನ್ನಷ್ಟು ಪ್ರಬಲರಾಗಿದ್ದರು. ಕೊಂಕಣಿ ಪೇಟೆಗಳಿಗೆ ಹೊಂದಿಕೊಂಡು ಮುಸ್ಲಿಂ ಪೇಟೆಗಳು ಬೆಳೆದವು. ಈ ಯುಗಳ-ವಸಾಹತು (ಟ್ವಿನ್ ಕಾಲನೀಸ್)ಗಳ ಪ್ಯಾಟರ್ನ್ ದಕ್ಷಿಣ ಕನ್ನಡದ ಹಲವು ಪೇಟೆಗಳಲ್ಲಿ ಗಮನಿಸಬಹುದು. ಕೊಂಕಣಿಗಳು ನೆಲೆನಿಂತು ಪೇಟೆ ಬೆಳೆಸಿದರೆ ಮುಸ್ಲಿಮರು ಅವರ ವ್ಯಾಪಾರಕ್ಕೆ ಒಂದು ಸಪೋರ್‍ಟ್ ಸಿಸ್ಟಮ್ ನಿರ್ಮಿಸಿದವರು. ಕೂಲಿಗಳು, ಸರಕು ಸಾಗಣೆ, ಕಾರ್ಮಿಕವರ್ಗ ಇತ್ಯಾದಿ. ಆದಕಾರಣ ಅನತಿದೂರದಲ್ಲಿ ಅವರದೇ ಕಾಲನಿ ಹುಟ್ಟಿಕೊಂಡಿತು. ತುಳುನಾಡಿನ ಇತರ ವರ್ಗಗಳ ಜನರು ಹೆಚ್ಚಾಗಿ ಕೃಷಿಕೆಲಸಗಳನ್ನೇ ನೆಚ್ಚಿಕೊಂಡಿದ್ದರಿಂದ ವ್ಯಾಪಾರಕ್ಕೆ ಸಂಬಂಧಿಸಿದ ಕಾರ್ಮಿಕ ಸಮುದಾಯದಲ್ಲಿ ಅವರ ಸಂಖ್ಯೆ ಕಡಿಮೆಯಿತ್ತು. ಈ ಟ್ವಿನ್ ಕಾಲನಿಗಳು ಕೊಂಕಣಿಗಳ ಮತ್ತು ಮುಸ್ಲಿಮರ ನಡುವಿನ ಪರಸ್ಪರ ವ್ಯಾವಹಾರಿಕ ಆವಲಂಬನೆಯನ್ನೂ ಸಾಮರಸ್ಯವನ್ನೂ ತೋರಿಸುತ್ತದೆ. ಈ ಅವಲಂಬನೆಯು ಅನೇಕ ಸನ್ನಿವೇಶಗಳಲ್ಲಿ ಭಿನಾಭಿಪ್ರಾಯಗಳನ್ನು ಬಗೆಹರಿಸುವ ಅಗತ್ಯವನ್ನು ಈ ಎರಡು ಸಮುದಾಯದವರಿಗೆ ಕಲ್ಪಿಸಿದೆ.
ಉದಾಹರಣೆಗೆ ವ್ಯಾಪಾರದ ಕಾರಣಗಳಿಂದ ಮುಸ್ಲಿಮರನ್ನು ದಮನಿಸಲು ಬಯಸುವುದಿದ್ದರೆ ದೇಶದ ವಿಭಜನೆಯ ಹೊತ್ತಿಗೆ ಕೊಂಕಣಿ ಸಮುದಾಯಕ್ಕೆ ಸುವರ್ಣ ಅವಕಾಶವಿತ್ತು. ಕೊಂಕಣಿಗಳು ಆ ಹೊತ್ತಿಗೆ ಆಧುನಿಕ ವಿದ್ಯೆಯಿಂದಲೂ, ವ್ಯಾಪಾರದ ಪ್ರಾಬಲ್ಯದಿಂದಲೂ ಮುಸ್ಲಿಮರಿಗಿಂತ ಉನ್ನತ ಸ್ತರದಲ್ಲಿದ್ದರು. ಮುಸ್ಲಿಂ ವ್ಯಾಪಾರಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದು ಕೊಂಕಣಿಗಳಿಗೆ ಪ್ರತಿಸ್ಪರ್ಧೆ ನೀಡುತ್ತಿದ್ದರು. ಆದರೆ ಆ ಸಂದರ್ಭದಲ್ಲಿ ತುಳುನಾಡಿನಲ್ಲಿ ಅಂತಹ ಯಾವುದೇ ಗಹನ ಕೋಮು ದಂಗೆ ನಡೆದ ಉಲ್ಲೇಖವಿಲ್ಲ. ಆ ಸಂದರ್ಭದಲ್ಲಿ ಕೊಂಕಣಿ ಕಾಂಗ್ರೆಸಿಗರಿಗೆ ಮತ್ತು ಕೊಂಕಣಿ ವ್ಯಾಪಾರಿಗಳಿಗೆ ಸಮಾಜದ ಮೇಲಿದ್ದ ನಿಯಂತ್ರಣವೂ ಇದಕ್ಕೆ ಕಾರಣ. ಹೆಚ್ಚಿನ ಮುಸ್ಲಿಂ ಪೇಟೆಗಳು ಕೊಂಕಣಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದುದು ಎರಡೂ ಸಮುದಾಯದ ಹಿರಿಯರ ಐಕ್ಯಮತ್ಯಕ್ಕೆ ಕಾರಣವಾಗಿ ಶಾಂತಿ ಕದಡಲಿಲ್ಲ.
ತುಳುನಾಡಿನ ಮುಸ್ಲಿಮರ ಬಗ್ಗೆ ವಿಶೇಷ ಅಧ್ಯಯನ ನಡೆಸಿ ತುಳುನಾಡಿನ ಮುಸ್ಲಿಮರು ಎಂಬ ಗ್ರಂಥವನ್ನು ರಚಿಸಿದ ಡಾ. ವಹಾಬ್ ದೊಡ್ಡಮನೆ ಅವರು ಕೊಂಕಣಿಗಳ ಮತ್ತು ಮುಸ್ಲಿಮರ ನಡುವಿನ ಸಾಮರಸ್ಯವನ್ನು ಈ ರೀತಿ ಉಲ್ಲೇಖಿಸುತ್ತಾರೆ:
ಆ ಕಾಲದಲ್ಲಿ (೧೯೦೦-೧೯೧೦) ಮಂಗಳೂರಿನ ಸಾಂಪ್ರದಾಯಿಕ ಗೌಡ ಸಾರಸ್ವತರು ಆಡಳಿತದಲ್ಲಿದ್ದ ಕೆನರಾ ಹೈಸ್ಕೂಲಿನಲ್ಲಿ ಶೇಕ್ ಅಹಮ್ಮದ್ ಮತ್ತು ನೂರುದ್ದೀನ್ ಅಹಮದ್ ಎನ್ನುವ ಇಬ್ಬರು ಕ್ರೀಡಾ ಉಪಾಧ್ಯಾಯರುಗಳಿದ್ದರು. ಗೌಡ ಸಾರಸ್ವತರು ಮತ್ತು ಮುಸ್ಲಿಮರ ನಡುವೆ ಭಾವೈಕ್ಯತೆ ಇತ್ತು ಮತ್ತು ಯಾವುದೇ ಧಾರ್ಮಿಕ ಕ್ಲೇಶ ಇರಲಿಲ್ಲ ಎನ್ನುವುದಕ್ಕೆ ಇದೊಂದು ನಿದರ್ಶನ. ಕೆನರಾ ಹೈಸ್ಕೂಲಿನಲ್ಲಿ ಉರ್ದು ಕೂಡ ಒಂದು ಐಚ್ಛಿಕ ವಿಷಯವಾಗಿದ್ದು, ಒಬ್ಬ ಮುಸ್ಲಿಂ ಮುನ್ಶಿಯೊಬ್ಬರು ಶಾಲಾ ಸಿಬ್ಬಂದಿಗಳಲ್ಲಿ ಒಬ್ಬರಾಗಿದ್ದರು. ಹೆಚ್ಚಿನ ಮುಸ್ಲಿಂ ಸಾಹುಕಾರರು ಅವಿದ್ಯಾವಂತರಾಗಿದ್ದು ಅವರ ಲೆಕ್ಕಪತ್ರಗಳ ವಹಿವಾಟನ್ನೂ ಗೌಡ ಸಾರಸ್ವತ ಗುಮಾಸ್ತರೇ ನಿರ್ವಹಿಸುತ್ತಿದ್ದರು ಎನ್ನುವುದು ಈಗ ಇತಿಹಾಸ"

ದಕ್ಷಿಣ ಕನ್ನಡದ ಯಾವುದೇ ಕೊಂಕಣಿ ರಖಂ ವ್ಯಾಪಾರಿಗೂ ಮುಸ್ಲಿಂ ಕಿರುವ್ಯಾಪಾರಿಗಳೇ ಹೆಚ್ಚು ಗಿರಾಕಿಗಳು. ಇದರ ಬಗ್ಗೆ ಸ್ಪಶ್ಟವಾದ ಅಂಕಿ ಅಂಶಗಳು ನನ್ನಲ್ಲಿಲ್ಲ ಆದರೂ ಮೇಲ್ನೋಟಕ್ಕೆ ನಲುವತ್ತು ಪ್ರತಿಶತಕ್ಕೂ ಹೆಚ್ಚು ಪಾಲು ಮುಸ್ಲಿಂ ಗಿರಾಕಿಗಳದ್ದಿರಬಹುದು. ಆದುದರಿಂದ ಕೊಂಕಣಿಗಳು ಸಂಘವನ್ನು ಮುಸ್ಲಿಂ ದಮನಕ್ಕೋಸ್ಕರ ಬಳಸಿದರೆ ನಷ್ಟವಾಗುವುದು ಕೊಂಕಣಿಗಳಿಗೇ. ಇದನ್ನು ಅರಿಯಲಾರದಷ್ಟು ಮುಗ್ಧರು ಕೊಂಕಣಿಗಳಲ್ಲ.
ಉಳಿದಂತೆ ಈ ವ್ಯಾವಹಾರಿಕ ಅವಲಂಬನೆಯು ಇವತ್ತಿನವರೆಗೂ ಮುಂದುವರೆದುಕೊಂಡು ಬಂದಿದೆ. ಕೊಂಕಣಿಗಳ ಬೀಡಿ ಉದ್ಯಮದ ಬ್ರಾಂಚ್ ಗಳನ್ನು ಮುಸ್ಲಿಮರೆ ನಡೆಸುತ್ತಿದ್ದರು, ಅದು ಇಂದಿಗೂ ಮುಂದುವರೆದಿದೆ. ಇದರ ಪರಿಣಾಮವಾಗಿ ಅನೇಕ ಮುಸ್ಲಿಮರು ತಮ್ಮದೆ ಬೀಡಿ ಬ್ರಾಂಡ್ ಗಳನ್ನು ಹೊರತಂದು ಯಶಸ್ಸು ಸಾಧಿಸಿದ್ದಾರೆ.

ಕ್ರಿಶ್ಚಿಯನ್ ಕ್ಯಥೋಲಿಕರು ಮತ್ತು ಕೊಂಕಣಿಗಳ ಸಂಬಂಧ:
ಮಂಗಳೂರಿನ ಕ್ಯಥೋಲಿಕರ ಬಗ್ಗೆ ಕೊಂಕಣಿಗಳಿಗೊಂದು ಸಾಫ್ಟ್ ಕಾರ್ನರ್ ಇದ್ದೇ ಇದೆ. ಈ ಎರಡೂ ಸಮುದಾಯಗಳು ಸಮಾನ ವಂಶವಾಹಿಗಳಿಂದ ಬಂದಿರುವ ಬಗ್ಗೆ ಯಾವುದೇ ಸಂದೇಹಗಳಿಲ್ಲ. ಎರಡೂ ಸಮುದಾಯಗಳ ಕೊಂಕಣಿ ಭಾಷೆಯ ಬೋಲಿಯಲ್ಲಿ ವ್ಯತ್ಯಾಸವಿದ್ದರೂ ಎರಡು ದಶಕಗಳ ಹಿಂದೆ ಹುಟ್ಟಿಕೊಂಡ ಕೊಂಕಣಿ ಭಾಷಾ ಚಳುವಳಿ ಈ ಎರಡೂ ಸಮುದಾಯದವರನ್ನು ಇನ್ನಷ್ಟು ಹತ್ತಿರಕ್ಕೆ ತಂದಿದೆ. ಕೆ.ಕೆ.ಪೈ, ದಾಮೋದರ ಪ್ರಭು, ರೊನಾಲ್ಡ್ ಕೊಲಾಸೋ, ಬಸ್ತಿವಾಮನ್ ಶೆಣೈ, ಎರಿಕ್ ಒಝಾರಿಯೋ, ಪೌಲ್ ಮೊರಾಸ್ ಮೊದಲಾದವರು ಕಟ್ಟಿದ ಈ ಇಡೀ ಚಳುವಳಿಯ ಒಂದು ಸಮಗ್ರ ಪ್ರತಿಫಲವಾಗಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಕಲಾಂಗಣ್ ಮತ್ತು ವಿಶ್ವಕೊಂಕಣಿಕೇಂದ್ರದಂತಹ ಅಂತರಾಷ್ಟ್ರೀಯಸ್ತರದ ಭಾಶಾ ಯೋಜನೆಗಳು ಮೂಡಿವೆ. ಲಿಪಿಯ ಬಗೆಗಿನ ವಿವಾದಗಳು ತಲೆದೋರಿದ್ದರೂ ಎರಡೂ ಕಡೆಯ ಮುತ್ಸದ್ದಿಗಳು ವೈಚಾರಿಕ ಎಚ್ಚರ ಸಾಧಿಸಿದ್ದರಿಂದ ಚಳುವಳಿಯ ಕೆಲಸ ನಿಂತಿಲ್ಲ. ಜೊತೆಗೆ ಈ ಬಗೆಗಿನ ಭಿನ್ನಾಭಿಪ್ರಾಯಗಳನ್ನು ಮಾತುಕತೆಯಿಂದ ಬಗೆಹರಿಸುವ ಪ್ರಯತ್ನಗಳು ಫಲಕಾರಿಯಾಗುತ್ತಿರುವುದು ಕೂಡ ಶ್ಲಾಘನೀಯ.

ಮತಾಂತರದ ಚರ್ಚೆಗಳಲ್ಲಿ ಕೊಂಕಣಿಗಳ ಹಿಂದೂ ಇಗೋ ಎಚ್ಚರವಾಗಿ ಅನೇಕ ವೇದಿಕೆಗಳಲ್ಲಿ ಬಿಸಿ ಚರ್ಚೆಗಳು ಉತ್ಪನ್ನವಾಗಿದ್ದರೂ ಮೂರ್ತಿಭಂಜನೆಯಂತಹ ವಿಕೃತ ಮನೋಭಾವವನ್ನು ಕೊಂಕಣಿಗಳು ಹೊಂದಿಲ್ಲ. ಚರ್ಚ್ ದಾಳಿಗೆ ಸಂಬಂಧಿಸಿ ಬಂಧಿತರಾದವರಲ್ಲಿ ಕೊಂಕಣಿಗಳು ಸೇರಿಲ್ಲ ಎನ್ನುವುದು ಗಮನಾರ್ಹ ಅಂಶವಾದರೂ ಸಂಘದ ಐಡಿಯಾಲಜಿಯ ಸ್ಥಾಪನೆ ಸಮಾಜದ ಇತರ ಸ್ತರಗಳಲ್ಲಿಯೂ ಕೈಗೂಡಿರುವುದರಿಂದ ಬದಲಾದ ಸನ್ನಿವೇಶಗಳಲ್ಲಿ ಈ ಸ್ಥಾಪನೆಯಿಂದ ಉಂಟಾದ ಪರಿಣಾಮಗಳ ನೈತಿಕ ಹೊಣೆಯನ್ನು ಕೊಂಕಣಿಗಳು ಹೊರಲು ಸಿದ್ಧರಿದ್ದಾರೆಯೇ ಎನ್ನುವುದೂ ಒಂದು ಪ್ರಶ್ನೆಯೇ.

ಸಂಘನಿಷ್ಟ ಕೊಂಕಣಿಗಳ ಪಾಪಪ್ರಜ್ಞೆ:
ಕೊಂಕಣಿಗಳ ನಿಷ್ಟಾಂತರದಿಂದ ಸಂಘಕ್ಕೂ ಭಾಜಪಾಕ್ಕೂ ಲಾಭವಾಯಿತಾದರೂ ಕೊಂಕಣಿ ಸಮುದಾಯಕ್ಕೆ ಇದರಿಂದೇನೂ ಲಾಭವಾಗಲಿಲ್ಲ. ಮತ್ತು ಲಾಭ ಇಜ್ಜಾಂದಿನ ಕೊಂಕಣೆ.. ಮುಂತಾದ ತುಳುಗಾದೆಮಾತಿಗೆ ವ್ಯತಿರಿಕ್ತವಾಗಿ ಇಲ್ಲಿ ಭಾವನಾತ್ಮಕ ಆಸರೆಯನ್ನು ಬಿಟ್ಟು ಬೇರಾವ ಲಾಭವನ್ನೂ ಕೊಂಕಣಿ ಸಮುದಾಯ ಅಪೇಕ್ಷಿಸಿಲ್ಲ ಎಂಬುದೂ ಸತ್ಯ.
ಹೆಚ್ಚಿನ ಕೊಂಕಣಿಗಳು ಭಾಜಪಾಗೆ ಮತ ಹಾಕುವುದು ಮತ್ತು ಲೋಕಲ್ ಕಟ್ಟೆ ಹರಟೆಗಳಲ್ಲಿ ಭಾಜಪಾ ಪರವಾಗಿ ವಾದಿಸಿ ತೀರ್ಪು ನೀಡುವಷ್ಟಕ್ಕೆ ತಮ್ಮ ಸಂಘಪ್ರೇಮವನ್ನು ಸೀಮಿತಗೊಳಿಸಿದರೆ ಅನೇಕ ಕೊಂಕಣಿಗಳು ಸಂಘದೊಂದಿಗೆ ದಿನನಿತ್ಯದ ಸಂಪರ್ಕ ಇರಿಸಿಕೊಂಡವರು. ಸಂಘದ ಮನೆಯಾಗಿ ನಡೆದುಕೊಂಡವರು. ಹೆಚ್ಚಿನ ಕೊಂಕಣಿಗಳು ತಮ್ಮ ಚರ್ಚೆ ಮುಗಿದ ಬಳಿಕ ದಿಡ್ಡಿಬಾಗಿಲು ಮುಚ್ಚಿ ಗೂಡಿನೊಳಗೆ ಸೇರಿಕೊಂಡರೆ ಇವರು ಶಿಸ್ತಿನಿಂದ ಸಂಘದ ಏಳು ಬೀಳುಗಳಲ್ಲೂ ಸ್ಥಿರವಾಗಿ ನಿಂತವರು. ಇವರ ಮಾತು, ಚರ್ಯೆಗಳು ಉಳಿದವರಿಗಿಂತ ಹೆಚ್ಚು ತೂಕದ್ದು. ಇವರನ್ನು ಸಂಘನಿಷ್ಟ ಕೊಂಕಣಿಗಳು ಎಂದು ಮುಂದಕ್ಕೆ ಉಲ್ಲೇಖಿಸಬಯಸುತ್ತೇನೆ.

ಕೊಂಕಣಿಗಳು ತಮ್ಮೊಳಗಿನ ಒಗ್ಗಟ್ಟಿಗಾಗಿ ಇತರ ಸಮುದಾಯದವರಿಂದ ಉಲ್ಲೇಖಿಸಲ್ಪಡುತ್ತಾರೆ. ಇದಕ್ಕೆ ಪೂರಕವಾಗಿ ಕೊಂಕಣಿ ಸಮುದಾಯವು ಇಂದಿಗೂ ಒಂದು ಗೇಟೆಡ್ ಕಮ್ಯೂನಿಟಿಯಾಗಿಯೇ ಉಳಿದುಕೊಂಡಿದೆ. ತನ್ನ ಸಮುದಾಯದ ಒಳಗಿನ ಆರ್ಥಿಕ ಅವಶ್ಯಕತೆಗಳನ್ನು ಸ್ವಾವಲಂಬಿಯಾಗಿ ಪೊರೈಸಿಕೊಳ್ಳುತ್ತಾ ತನ್ನ ಧಾರ್ಮಿಕ ಚಟುವಟಿಕೆಗಳನ್ನು ವೈಭವ ಮತ್ತು ವಿಜ್ರಂಬಣೆಗಳಿಂದ ನಡೆಸಿಕೊಂಡು ಬಂದಿದೆ. ಕೊಂಕಣಿಗಳ ದೇವಸ್ಥಾನಗಳು ಇತರ ಸಮುದಾಯಗಳ ದೇವಸ್ಥಾನಗಳಂತೆಯೇ ಜಾತಿವರ್ಗ ಆಧಾರಿತ ನಿರ್ಬಂಧವನ್ನು ಮಾಡದೇ ನಿರ್ಲಿಪ್ತವಾಗಿದ್ದುಕೊಂಡು ಬಂದರೂ ಉಳಿದ ಸಮುದಾಯಗಳು ತೆರೆಯುವಂತೆ ತನ್ನ ಚಟುವಟಿಕೆಗಳಲ್ಲಿ ಇತರ ಸಮುದಾಯಗಳನ್ನು ಸೇರಿಸಿಕೊಂಡಿಲ್ಲ. ಉದಾಹರಣೆಗೆ ಇತರ ಸಮುದಾಯಗಳ ದೇವಸ್ಥಾನಗಳು ಬ್ರಹ್ಮಕಲಶೊತ್ಸವದಂತಹ ಬ್ರಹತ್ ಕಾರ್ಯಗಳಲ್ಲಿ ಆರ್ಥಿಕ ಉಪಯುಕ್ತತೆಯ ದೃಷ್ಟಿಯಿಂದಾದರೂ ಸರಿಯೇ, ಒಂದು ಸ್ವಾಗತ ಸಮಿತಿ, ಕಾರ್ಯಕಾರಿ ಸಮಿತಿ ಮುಂತಾದವುಗಳನ್ನು ರಚಿಸಿ ಇತರ ಸಮುದಾಯದ ಯಾ ಒಟ್ಟೂ ಸಮಾಜದ ಇತರ ಗಣ್ಯರನ್ನು ಆಹ್ವಾನಿಸಿ ಸಮಿತಿಗಳಲ್ಲಿ ಪದಾಧಿಕಾರವನ್ನು ಹಂಚುವುದು ರೂಢಿಯಲ್ಲಿದೆ. ಆದರೆ ಇದುವರೆಗೆ ಕೊಂಕಣಿ ಸಮುದಾಯದ ದೇವಸ್ಥಾನಗಳು ಹಮ್ಮಿಕೊಂಡ ಯಾವ ಪ್ರಮಾಣದ ಕಾರ್ಯಕ್ರಮಗಳಲ್ಲೂ ಇತರ ಸಮುದಾಯದವರನ್ನು ಸೇರಿಸಿಕೊಂಡಿಲ್ಲ.

ಈ ಅಂಶವು ಸಂಘದ ನಿಷ್ಟಾವಂತ ಕೊಂಕಣಿಗಳಿಗೆ ಅಸಮಾಧಾನವನ್ನು ಉಂಟುಮಾಡುತ್ತದೆ. ಕೊಂಕಣಿ ಸಮುದಾಯಕ್ಕೆ ಸೀಮಿತವಾದ ಚಟುವಟಿಕೆಗಳಲ್ಲಿ ಇಂತಹ ಸಂಘನಿಷ್ಟ ಕೊಂಕಣಿಗಳು ಭಾಗವಹಿಸದೇ ಬಹಿರಂಗವಾಗಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಿದೆ. ಸಮಗ್ರ ಹಿಂದೂ ಸಮಾಜಕ್ಕೊಸ್ಕರ ಏನನ್ನಾದರೂ ಮಾಡುವುದಿದ್ದಲ್ಲಿ ಮಾತ್ರ ತಮ್ಮ ಬಳಿಗೆ ಬನ್ನಿ ಎಂಬಂತಹ ಮಾತುಗಳಿಂದ ಜಾತಿ ರಹಿತ ಹಿಂದೂ ಸಮಾಜದ ಏಕೀಕರಣದಂತಹ ಸಂಘೋದ್ದೇಶವನ್ನು ಅವರು ಮುಂದಕ್ಕೊಯ್ಯುತ್ತಾರೆ. ಜಿಲ್ಲೆಯಾದ್ಯಂತ ಹರಡಿರುವ ತಮ್ಮ ದೇವಸ್ಥಾನಗಳಿಂದ ಕೊಂಕಣಿಗಳ ಧಾರ್ಮಿಕ ಅಗತ್ಯಗಳು ಪೂರೈಸಿದರೂ ಸಮುದಾಯದ ಇನ್ನಿತರ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಅಗತ್ಯವಾದ ಸಾಮಾಜಿಕ ಒಗ್ಗಟ್ಟು ಕೊಂಕಣಿಗಳಲ್ಲಿ ಬೆಳೆಯಲು ಇದೇ ವಿಚಾರಧಾರೆ ತೊಡಕಾಯಿತು. ಸಂಘನಿಷ್ಟ ಕೊಂಕಣಿಗಳು ಜಿ.ಎಸ್.ಬಿ. ಸಮಾಜ ಸೇವಾ ಸಮಿತಿಗಳಂತಹ ಪ್ರಯತ್ನಗಳು ನಡೆದಾಗ ಅವುಗಳನ್ನು ಪ್ರೋತ್ಸಾಹಿಸದೇ ತಮ್ಮ ಅಸಮ್ಮತಿಯನ್ನು ಸೂಚಿಸಿದರು.
ಕೊಂಕಣಿ ಸಮುದಾಯದ ಉತ್ತಮ ಸಂಘಟಕರು ಸಂಘನಿಷ್ಟರಾದುದರಿಂದ ಸಮುದಾಯದ ಸ್ವಂತದ ಸಾಮಾಜಿಕ ಕೆಲಸಕ್ಕೆ ಸಂಘಟಕರ ಕೊರತೆ ಎದ್ದು ಕಾಣುತ್ತದೆ. ಧಾರ್ಮಿಕ ಕಾರ್ಯಕ್ರಮಗಳು ಇದರಿಂದ ನಿರ್ಬಾಧಿತವಾದರೂ ಸಾಮಾಜಿಕ ಸಂಘಟನೆಗೆ ಹೆಚ್ಚು ಉತ್ಸಾಹ ಕಂಡು ಬರುತ್ತಿಲ್ಲ. ಸಮುದಾಯ ಒಂದು ರೀತಿಯಲ್ಲಿ ನಿಂತ ನೀರಾದಂತೆ ತೋರುತ್ತದೆ. ಧಾರ್ಮಿಕ ಕಾರ್ಯಕ್ರಮಗಳನ್ನು ಬಿಟ್ಟು ಬೇರೆ ಯಾವ ಕಾರ್ಯಕ್ರಮಗಳಿಗೂ ತೀವ್ರ ನಿರ್ಲಕ್ಷವನ್ನು ಸಮುದಾಯ ತೋರುತ್ತಿದೆ.

ಬಹುಶ ಈ ಮನೋಭಾವವು ಸಂಘದ ಸಂಪರ್ಕ ಈ ನಿಷ್ಟರಲ್ಲಿ ಉಂಟು ಮಾಡಿದ ಮೇಲ್ವರ್ಗಕ್ಕೆ ಫಲಿತವಾದ ಪಾಪಪ್ರಜ್ಞೆಯ ಇನ್ನೊಂದು ರೂಪ ಎಂದು ನನಗೆ ಅನಿಸುತ್ತಿದ್ದೆ. ಸಂಘದ ಉಳಿದ ಮೇಲ್ವರ್ಗದ ಪ್ರಮುಖರು ತುಳುನಾಡಿನ ಪಾರಂಪರಿಕ ಸಮಾಜ ವ್ಯವಸ್ಥೆಯಲ್ಲಿ ಕೊಂಕಣಿಗಳಂತೆ ಹೊರಗಿನವರಲ್ಲ. ಇತರ ಜಾತಿಯವರೊಡನೆ ಸಾಮಾಜಿಕ, ಧಾರ್ಮಿಕ, ಮತ್ತು ವ್ಯಾವಹಾರಿಕ ಸಂವಹನಗಳೂ ಈ ಮೇಲ್ವರ್ಗದವರಿಗೆ ಸಹಜ ಸಾಧ್ಯವಾಗುತ್ತದೆ. ಈ ಕಾರಣಗಳಿಂದ ಬ್ರಾಹ್ಮಣರು, ಮತ್ತು ಇತರ ಮೇಲ್ವರ್ಗದವರಂತೆ ಕೊಂಕಣಿಗಳು ಸಂಘದೊಳಗಿನ ನಾಯಕತ್ವಗಳಿಗೆ ಸ್ವಾಭಾವಿಕ ಆಯ್ಕೆ ಆಗಲು ತೊಡಕಾಯಿತು.

ಜೊತೆಗೆ ಭಾಜಪಾದೊಳಗೂ ಇರುವ ಜಾತಿ ರಾಜಕಾರಣದ ಲೆಕ್ಕಾಚಾರಗಳು ಎಂದಿಗೂ ಕೊಂಕಣಿ ಅಭ್ಯರ್ಥಿಗಳಿಗೊಂದು ಸ್ವಾಭಾವಿಕ ಸ್ಥಾನವನ್ನು ನಿರ್ಮಾಣ ಮಾಡಲೇ ಇಲ್ಲ. ಕೊಂಕಣಿಗಳಿಗಿಂತ ಕಡಿಮೆ ಸಂಖ್ಯೆ ಇರುವ ಕೊಂಕಣೇತರ ಸಮುದಾಯದ ಅಭ್ಯರ್ಥಿ ಸ್ಪರ್ಧಾಳುವಾಗಿ ಆರಿಸಿಬಂದು ಚುನಾವಣೆಯನ್ನು ಗೆದ್ದು ಬರುವ ಸಾಧ್ಯತೆಯಿದ್ದರೂ ಆ ಸ್ಥಾನದಲ್ಲಿ ಕೊಂಕಣಿಯೊಬ್ಬ ಸೋಲುವ ಸಾಧ್ಯತೆಗಳು ಹೆಚ್ಚು ಧ್ವನಿಸುತ್ತದೆ. ಅದಕ್ಕೆ ಕೊಂಕಣಿಗಳು ಪೋಷಿಸಿಕೊಂಡು ಬಂದ ಗೇಟೆಡ್ ಮನೋಭಾವ ಕಾರಣ ಎನ್ನುವ ಸಾರ್ವಕಾಲಿಕ ಸತ್ಯವನ್ನು ಸಂಘನಿಷ್ಟ ಕೊಂಕಣಿಗಳು ಒಪ್ಪಿಕೊಳ್ಳಬಹುದು. ಸಂಘದ ಚಟುವಟಿಕೆಗಳಲ್ಲಿ ತನು ಮನ ಧನಗಳಿಂದ ಪಲಾಪೇಕ್ಷೆಯಿಲ್ಲದೇ ತೊಡಗಿಸಿಕೊಂಡು ಈ ಪಾಪಪ್ರಜ್ಞೆಯನ್ನು ನಿವಾರಿಸಿಕೊಳ್ಳುವ ಅವಕಾಶವನ್ನು ಸಂಘವು ಕೊಂಕಣಿಗಳಿಗೆ ನೀಡಿದೆ.

ಇತರ ಎಲ್ಲ ಸಮುದಾಯಗಳು ತಮ್ಮ ಸಮುದಾಯದ ಅಭ್ಯರ್ಥಿಪದದಿಂದ ತೊಡಗಿ ಮಂತ್ರಿ ಪದವಿಯ ತನಕ ಹಠ ಹಿಡಿದು ಪಡೆದುಕೊಳ್ಳುತ್ತಿರುವಾಗ ಕೊಂಕಣಿ ಸಮುದಾಯಕ್ಕೆ ಸೇರಿದ ಭಾಜಪಾ ಶಾಸಕನ ಸ್ವಂತ ಪದನಿರ್ಮೋಹದ ಹೊರತಾಗಿಯೂ ಸಚಿವ ಪದವಿಗೆ ಸಲ್ಲಿಸಿದ ಸಮುದಾಯದ ಬೇಡಿಕೆಯನ್ನು ಪಿಸುಮಾತಿನ ಗದರಿಕೆಗಳಿಂದ ತಣ್ಣೀರೆರಚಿದ್ದ ಸಂಘ, ಕೊಂಕಣಿ ಸಂಘನಿಷ್ಟೆಯನ್ನು ಟೇಕನ್ ಫಾರ್ ಗ್ರಾಂಟೆಡ್ ಎಂದು ಪರಿಗಣಿಸಿದೆ ಎನ್ನುವುದರಲ್ಲಿ ಯಾವುದೇ ಸಂದೇಹಗಳಿಲ್ಲ. ಕೊಂಕಣಿ ಸಮುದಾಯವನ್ನು ಗುಡ್ ಬೊಯ್ ಪದವಿ ನೀಡಿ ನೀವು ಕೂಡ ಹಠ ಹಿಡಿದರೆ ನಿಮಗೂ ಉಳಿದವರಿಗೂ ಏನು ವ್ಯತ್ಯಾಸ ಎಂಬ ದಿವ್ಯ ಸತ್ಯವನ್ನು ಸಂಘ ಉಪದೇಶಿಸಿ ಕೊಂಕಣಿ ಕಾರ್ಯಕರ್ತರನ್ನು ಸಂತೈಸಿದ್ದು ಈಗ ಸಮುದಾಯಕ್ಕೆ ಅರ್ಥವಾಗಿದೆ. ಕೊಂಕಣಿಗಳ ಓಟಿನಿಂದಷ್ಟೆ ಒಬ್ಬ ಅಭ್ಯರ್ಥಿಯು ಗೆಲ್ಲಲು ಸಾಧ್ಯವಿಲ್ಲದಿದ್ದರೂ ಕೊಂಕಣಿಗಳ ಓಟಿಲ್ಲದೆಯೂ ಅದು ಕಷ್ಟ ಸಾಧ್ಯ ಎಂಬುದನ್ನು ಭಾಜಪಾದ ಚುಕ್ಕಾಣಿ ಹಿಡಿದಿರುವ ಸಂಘದ ಮುತ್ಸದ್ದಿಗಳಿಗೆ ಮನವರಿಕೆ ಮಾಡಿಕೊಡುವ ಛಾತಿಯೂ ಕೊಂಕಣಿಗಳಲ್ಲಿ ಇದೆ ಎಂಬುದರ ಬಗ್ಗೆ ನನಗೆ ಸಂಶಯವಿದೆ.

ಸೈದ್ಧಾಂತಿಕವಾಗಿ ಭಾಜಪಾ ಕೊಂಕಣಿ ಸಮುದಾಯ ಬಯಸುತ್ತಿರುವ ಆಶೋತ್ತರಗಳನ್ನು ಉಳಿಸಿಕೊಂಡಿದೆಯೇ? ಎನ್ನುವುದು ಒಂದು ಪ್ರಶ್ನೆ. ಗಣಿವೈಭವ ಸಾಮ್ರಾಜ್ಯವು ಉತ್ತರ ಕರ್ನಾಟಕವನ್ನು ಕುಲಗೆಡಿಸಿಕೊಂಡಿರುವಾಗ ದಕ್ಷಿಣ ಕನ್ನಡದಲ್ಲಿ ತಣ್ಣಗೆ ಕುಳಿತು ಸಂಘದ ಮನಿಬ್ಯಾಗ್ ಆಗಿರುವ ಮಾತ್ರಕ್ಕೆ ನಡೆಯುತ್ತಿರುವ ಸಮಗ್ರ ಆಗುಹೋಗುಗಳಿಗೆ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಬೇಕಾದ ಇಂದಿನ ಪರಿಸ್ಥಿತಿಯಲ್ಲಿ ಕೊಂಕಣಿ ಸಮುದಾಯ ತನ್ನ ಸಂಘನಿಷ್ಟೆಯನ್ನು ಪುನರ್ ವಿಮರ್ಶಿಸಿಕೊಳ್ಳಬೇಕು.

ಉಪಸಂಹಾರ:
ಈ ಮೇಲಿನ ಎಲ್ಲ ಆಧಾರಪೂರ್ವಕ ವಿವರಣೆಗಳನ್ನು ಆಧಾರವಾಗಿಟ್ಟುಕೊಂಡು ಈ ಇಡೀ ಪ್ರಬಂಧವು ಶ್ರುತಪಡಿಸುವ ಅಂಶಗಳನ್ನು ಕೆಳಗೆ ನೀಡುತ್ತಿದ್ದೇನೆ.
೧. ತುಳುನಾಡಿನಲ್ಲಿ ೭ನೇ ಶತಮಾನದಿಂದಲೇ ಮುಸ್ಲಿಮರು ವ್ಯಾಪಾರದಲ್ಲಿ ಪ್ರಬಲರಾಗಿದ್ದುದಕ್ಕೆ ಇತಿಹಾಸ ಪುರಾವೆ ನೀಡುತ್ತಿದೆ. ಆದುದರಿಂದ ೨೦ನೇ ಶತಮಾನದ ಉತ್ತರಾರ್ಧದಲ್ಲಿ ಮುಸ್ಲಿಮರು ವ್ಯಾಪಾರದಲ್ಲಿ ಪ್ರಬಲರಾಗತೊಡಗಿದರು ಎಂದು ಊಹಿಸುವುದು ಅಸಮಂಜಸ.
೨. ತುಳುನಾಡಿನಲ್ಲಿ ಕೊಂಕಣಿಗಳು ನೆಲೆಯೂರುವ ಮೊದಲೇ ಹಿಂದುಗಳ ಮತ್ತು ಮುಸ್ಲಿಮರ ನಡುವೆ ಗಹನತರದ ಗಲಭೆಗಳು ನಡೆದಿರುವುದನ್ನು ಇತಿಹಾಸ ಉಲ್ಲೇಖಿಸುತ್ತದೆ. ತುಳುನಾಡಿನಲ್ಲಿ ಮುಸ್ಲಿಮರ ಬಗೆಗೊಂದು ಅಸಹನೆ ಬಹಳ ಹಿಂದಿನಿಂದಲೂ ಇತ್ತು ಎನ್ನುವುದನ್ನು ಈ ಉಲ್ಲೇಖಗಳು ಸೂಚಿಸುತ್ತವೆ. ಆದುದರಿಂದ ಕೊಂಕಣಿ ಮತ್ತು ಮುಸ್ಲಿಂ ವ್ಯಾಪಾರಿಗಳ ನಡುವಿನ ಸ್ಪರ್ಧೆಯು ಕೋಮುದ್ವೇಶದ ಅಗತ್ಯವನ್ನು ಹುಟ್ಟುಹಾಕಿತು ಎಂದು ಊಹಿಸುವುದು ಕೂಡ ಅಸiಂಜಸವೇ.
೩. ಕೊಂಕಣಿ ಮತ್ತು ಮುಸ್ಲಿಮ್ ಈ ಎರಡೂ ಸಮುದಾಯಗಳಲ್ಲಿ ಒಂದು ವ್ಯಾವಹಾರಿಕವಾದ ಸಂಬಂಧವಿದೆ. ಇದು ಎರಡೂ ಸಮುದಾಯಗಳು ಒಂದು ಅವಿನಾಭಾವ ಸಂಬಂಧವನ್ನಿರಿಸಿಕೊಂಡಿರುವುದನ್ನು ಸೂಚಿಸುತ್ತವೆ.
೪. ಕೊಂಕಣಿಗಳು ಸಂಘದತ್ತ ನಿಷ್ಟಾಂತರವಾದದ್ದು ತುರ್ತುಪರಿಸ್ಥಿತಿಯ ಆಸುಪಾಸಿನ ಸಾಮಾಜಿಕ, ರಾಜಕೀಯ ಮತ್ತು ಭಾವನಾತ್ಮಕ ಕಾರಣಗಳಿಂದಲ್ಲದೇ ಮುಸ್ಲಿಂ ವ್ಯಾಪಾರಿಗಳ ದಮನ ವೆನ್ನುವ ವ್ಯಾಪಾರಿ ಕಾರಣದಿಂದಲ್ಲ. ಹಿಂದೂ ಧರ್ಮವೆನ್ನುವ ಇಗೋ ಮತ್ತು ದೇಶ ಪ್ರೇಮದ ಉನ್ಮಾದ ಇವೆರಡನ್ನೂ ಬಿಟ್ಟು ವ್ಯಾಪಾರಿ ಕಾರಣಗಳಿಂದ ಕೊಂಕಣಿಗಳನ್ನು ನಿಯಂತ್ರಿಸಲು ಯಾರಾದರೂ ಬಯಸಿದಲ್ಲಿ ಅದಕ್ಕೆ ಒಳಗಾಗದೆ ತಪ್ಪಿಸಿಕೊಳ್ಳುವಷ್ಟು ಚಾಣಾಕ್ಷತನ ಕೊಂಕಣಿಗಳ ಬಳಿ ಇದೆ. ಆದುದರಿಂದ ಮುಸ್ಲಿಂ ವ್ಯಾಪಾರಿಗಳ ವಿರುದ್ಧ ಕೊಂಕಣಿ ವ್ಯಾಪಾರಿಗಳನ್ನು ಸಂಘವು ಎತ್ತಿ ಕಟ್ಟಿತು ಎಂಬಂತಹ ಅಭಿಪ್ರಾಯವೂ ಅಸಮಂಜಸ.
೫. ಸ್ವತಹ ಕೊಂಕಣಿ ವ್ಯಾಪಾರಿಗಳೇ ಮುಸ್ಲಿಂ ವ್ಯಾಪಾರಿಗಳ ದಮನಕ್ಕೋಸ್ಕರ ಸಂಘವನ್ನು ದಕ್ಷಿಣ ಕನ್ನಡದಲ್ಲಿ ಕಟ್ಟಿದರು ಎನ್ನುವುದು ಕೂಡ ಅಸಮಂಜಸವೇ. ಮುಸ್ಲಿಂ ವ್ಯಾಪಾರಿಗಳ ಶಕ್ತಿ, ಸಾಮರ್ಥ್ಯ, ರಿಸ್ಕ್ ತೆಗೆದುಕೊಳ್ಳುವ ಛಾತಿ, ಯಾವ ಕೆಲಸಕ್ಕೂ ಸಿದ್ಧರಾಗಿರುವ ಮನೋಭಾವ, ಕಸುಬುಗಾರಿಕೆ ಇವುಗಳ ಬಗ್ಗೆ ಕೊಂಕಣಿ ವ್ಯಾಪಾರಿಗಳಿಗೆ ಮೆಚ್ಚುಗೆ ಇದೆ. ತಮ್ಮ ವ್ಯಾಪಾರದಲ್ಲಿ ಮುಸ್ಲಿಂ ಗ್ರಾಹಕರ ಗಣನೀಯ ಪಾಲನ್ನು ಗಮನಿಸಿದಾಗ ಅಂತಹ ಯಾವ ಪ್ರಯತ್ನವೂ ತಮಗೆ ಮಾರಕವಾದೀತು ಎಂಬ ಸರಳ ಸತ್ಯದ ಅರಿವು ಕೊಂಕಣಿಗಳಿಗಿದೆ. ಅಂಗಡಿ ವ್ಯಾಪಾರದಲ್ಲಿ ಉತ್ಸಾಹವನ್ನೂ ಕೊಂಕಣಿಗಳು ಕಳೆದುಕೊಂಡು ಕಾರ್ಪೋರೇಟ್ ಜಗತ್ತಿನತ್ತ ತಿರುಗಿ ದಶಕಗಳೇ ಕಳೆದಿವೆ. ಜೊತೆಗೆ ಅಂತಹ ದಮನದ ಉದ್ದೇಶವಿರುತ್ತಿದ್ದರೆ ಕೊಂಕಣಿ ಸಮುದಾಯದ ಸದಸ್ಯರು ಮುಸ್ಲಿಮರಿಗೆ ಭಂಡಸಾಲೆಗಳನ್ನು ಮಾರಿದ ಸನ್ನಿವೇಶಗಳು ನಿರ್ಮಾಣವಾಗುತ್ತಿರಲಿಲ್ಲ.
೬. ಕೊಂಕಣಿಗಳು ಸಂಘನಿಷ್ಟರಾದುದರಿಂದ ಕೊಂಕಣಿ ಸಮುದಾಯಕ್ಕೆ ಯಾವ ತರದ ಲಾಭವೂ ಆಗಲಿಲ್ಲ. ಬದಲಾಗಿ ಕೊಂಕಣಿ ಸಮುದಾಯದ ಒಳಗಿನ ಸಾಮಾಜಿಕ ಒಗ್ಗಟ್ಟು ಬೆಳೆಯಲು ಸಂಘದ ವಿಚಾರಧಾರೆಯು ತೊಡಕಾಯಿತು.

ಒಟ್ಟಿನಲ್ಲಿ ಕೊಂಕಣಿಗಳು ವ್ಯಾಪಾರಿ ಲಾಭಕ್ಕೋಸ್ಕರ ಕೋಮು ದ್ವೇಷವನ್ನು ಹುಟ್ಟು ಹಾಕಿದರು ಎನ್ನುವುದಕ್ಕಿಂತ ಸಂಘ ಪ್ರೇರಿತ ಹಿಂದೂ ಮೂಲಭೂತ ಸಿದ್ಧಾಂತದ ಉಪಉತ್ಪನ್ನವಾಗಿ ಹೊರಹೊಮ್ಮಿದ ಕೋಮು ದ್ವೇಷದಿಂದ ಕೊಂಕಣಿಗಳ ಮತ್ತು ಮುಸ್ಲಿಮರ ನಡುವಿನ ವ್ಯಾಪಾರಿ ಸಂಬಂಧವು ಮೊದಲಿನ ವಿಶ್ವಾಸವನ್ನು ಕಳೆದುಕೊಂಡು ಅಪನಂಬಿಕೆ ಸುತ್ತಿಕೊಂಡಿತು ಎನ್ನುವುದು ಸೂಕ್ತ. ಈ ಎಲ್ಲಾ ಕೋಮುಗಲಭೆಗಳ ಕಾರಣದಿಂದ ಸಂಭವಿಸುವ ನಷ್ಟವು ವ್ಯಾಪಾರಿಗಳದ್ದೇ ಹೆಚ್ಚು ಆಗಿರುವ ಕಾರಣದಿಂದ ಕೊಂಕಣಿ ವ್ಯಾಪಾರಿಗಳನ್ನು ಆರೋಪಿಯನ್ನಾಗಿ ನೋಡದೇ ಸಂತ್ರಸ್ತ ಎಂಬುದಾಗಿಯೇ ಗ್ರಹಿಸಿಕೊಳ್ಳಬೇಕಾಗುತ್ತದೆ.

ವಿಶ್ವಸ್ತರದಲ್ಲಿ ಆಕ್ರಮಿಸಿಕೊಳ್ಳುತ್ತಿರುವ ಭಯೋತ್ಪಾದನೆ ಎಂಬ ಗುಮ್ಮವನ್ನು ಸ್ಥಳೀಯ ಮುಸ್ಲಿಮರ ವಿಶ್ವಾಸವನ್ನು ಗಳಿಸಿಕೊಳ್ಳದೇ ಎದುರಿಸುವುದು ಅಸಾಧ್ಯ. ಸಂಸ್ಕೃತಿ ಉಳಿಸುವ ನೆವದಲ್ಲಿ ಅಸಹನೆಯ ಆಕ್ರಮಣಗಳು, ಪ್ರಚೋದನಾತ್ಮಕ ಪಿಸುಗುಟ್ಟುವಿಕೆಗಳು, ಆಧಾರ ರಹಿತ ಹೇಟ್ ಈಮೇಲ್ಗಳು ಇವೆಲ್ಲ ಈ ಸಮಾಜವನ್ನು ಇನ್ನಷ್ಟು ಶಿಥಿಲಗೊಳಿಸುತ್ತದೆ. ಹಿಂದೂ ಮುಸ್ಲಿಮರ ನಡುವೆ ಸಾಮರಸ್ಯ ಸಾಧಿಸಲು ಮುಸ್ಲಿಮರೊಂದಿಗೆ ಹೆಚ್ಚಿನ ಸಂಪರ್ಕವಿರುವ ಕೊಂಕಣಿಗಳೇ ಮುಂದಾಗಬೇಕು.
ಆಕರಗಳು :
1. M.N. Pearson: Banyas and Brahmins- their role in the Portuguese Indian Economy: Coastal Western India: Page: 93-111
2. B.S.Shastry: Goa-Kanara Portuguese Relations 1498 – 1763: Various Ref.
3. K.V.Ramesh: Tulunadu Jaina Art and Architecture: Encyclopedia of Jainism: Page: 6819
4. ಡಾ. ವಹಾಬ್ ದೊಡ್ಡಮನೆ: ತುಳುನಾಡಿನ ಮುಸ್ಲಿಮರು
5. Ibn Battuta/HAR Gibb: Selections from the travels of Ibn Battuta: Page 233
6. South Indian Inscritpions: Vol VII: No. 182
7. Karnataka Inscriptions: Vol I: 48
8. Francis H. Buchanan: A Journey fro Madras through the countries of Mysore, Canara and Malabar: Vol II
9. ಗಣಪತಿರಾವ್ ಐಗಳ್: ಶ್ರೀ ಮದನಂತೇಶ್ವರ ದೇವಸ್ಥಾನಕ್ಕೆ ಸಂಮ್ಮಂಧಪಟ್ಟ ಶಾಸನಗಳೂ ಕರಾರುಗಳೂ: ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ: ಪರಿಶಿಷ್ಟ೧.
10. Kuldip Nayyar: Between the Lines:
11. Election Commission of India: Statistical Report on Gen. Elections The Legislative Assembly of Mysore
12. Election Commission of India: Statistical Report on Gen. Elections 1951, The First Loksabha: Vol I
13. Refer Election Commission of India Statistical Reports of consecutive years for Loksabha.
14. Prof. Balraj Mudhok: Indianisation? What, Why and How. 1970: Page 108;
15. Prof. Muzaffar Assadi: Communal Violence in Coastal Belt, Economic and Political Weekly, September, 2004.
16. Christopher Jefferlot: The Hindu Nationalist Movement and Indian Politics. Page: 238
17. B.A.Prakash: Trends and Patterns of Emigration to the West Asian Countries: Page:102 of Kerala’s Economic Development.
18. Historical Archives of Goa: Conselho Da Fazenda, No 2(1618-25) ; M.N.Pearson: Indian Seafarers in the Sixteenth Century: Coastal Western India: Page 116-137
Dharma Kumar: Land and Castes in South India: Page 8
19. ಕುಂಬಳೆ ನಾಯಕರ ಕುಟುಂಬದ ದಾಖಲೆಗಳು.