ದೇಶದ ಅತ್ಯುನ್ನತ ವೈದ್ಯಕೀಯ ಸಂಸ್ಥೆಯ ಆಡಳಿತ ನಿರ್ದೇಶಕನಾಗಿ ಅಧಿಕಾರ ವಹಿಸಿಕೊಂಡ ಮೊದಲದಿನ ಅವನು ಕೈಗೊಂಡ ಮೊದಲ ನಿರ್ಧಾರವೆಂದರೆ ತಾನು ಕುಳಿತುಕೊಳ್ಳಲಿರುವ ಖುರ್ಚಿಯ ಬದಲಾವಣೆ. ಅದಕ್ಕೆ ಅವನು ಹಲವು ವರ್ಷಗಳಿಂದ ಸಹಿಸಿಕೊಂಡು ಬರುತ್ತಿರುವ ಬೆನ್ನು ನೋವು ಮಾತ್ರವಲ್ಲದೇ ಅವನಿಗೆ ಖುರ್ಚಿಗಳ ಬಗ್ಗೆ ಇರುವ ಖಯಾಲಿಯೂ ಕಾರಣವಾಗಿತ್ತು.
ತನ್ನ ಅಧಿಕಾರದ ಪರಿಮಿತಿಯಲ್ಲಿ ವ್ಯಯಿಸಬಹುದಾದ ಮೊತ್ತದಲ್ಲಿ ಅತೀ ಹೆಚ್ಚು ಬೆಲೆಯ ಖುರ್ಚಿಯನ್ನು ಆಯ್ದುಕೊಂಡು ಅರ್ಡರ್ ಮಾಡಿದ. ಅಷ್ಟೇ ಅಲ್ಲ, ಅದು ಸರಬರಾಜು ಆಗುವವರೆಗೆ ಹಳೆಯ ಖುರ್ಚಿಯಲ್ಲಿ ಕುಳಿತುಕೊಂಡು ಅದರ ಅರ್ಗಾನಾಮಿಕ್ಸ್ ಅನ್ನು ಸಾಣೆ ಹಿಡಿದು ಹುಳುಕುಗಳನ್ನು ತನ್ನ ಕೆಳಗಿನವರಿಗೆ ಬಣ್ಣಿಸಿ ತಾನು ಕೈಗೊಂಡ ನಿರ್ಧಾರವನ್ನು ಸಮರ್ಥಿಸಲು ಯತ್ನಿಸಿದ. ಅವನು ಹೇಳಿದುದನ್ನೆಲ್ಲ ಜ್ಞಾನವೆಂದು ಸ್ವೀಕರಿಸಿ ಕೃತಾರ್ಥರಾಗುವ ಅವನ ಕೆಳಗಿನವರು ಅವನ ಸಮರ್ಥನೆಗಳನ್ನೂ ಬಹಳ ವಿನಯ ಪೂರ್ವಕವಾಗಿ ಹೊಗಳಿದಾಗ ಅವನಿಗೆ ತಾನು ವಿನಾ ಕಾರಣ ಹೆಚ್ಚು ಮಾತನಾಡಿದೆ ಎಂಬ ಅನಿಸಿಕೆಯುಂಟಾಯಿತು.
ಚಿನ್ನದ ಹೊಳಪಿನ ಅಕ್ಷರಗಳಲ್ಲಿ "ರಾಮದಾಸ್ ಸರ್ಕಾರ್ ಎಂ.ಡಿ." ಎಂದು ಬರೆದಿದ್ದ ತನ್ನ ನೇಮ್ ಪ್ಲೇಟನ್ನು ಬಳಿ ಸೆಳೆದು ಒಂದು ಅಕ್ಷರಕ್ಕೆ ತಗಲಿಕೊಂಡಿದ್ದ ಕೊಂಚ ಕಿಲುಬನ್ನು ಬೆರಳಿನಿಂದ ಉಜ್ಜಿ ಹೊಳಪಿಸುತ್ತಾ ಆ ಸಂಕೋಚವನ್ನು ನಿಭಾಯಿಸಿಕೊಂಡ.
ಒಂದು ಮಂಗಳವಾರ ಫರ್ನಿಚರ್ ಅಂಗಡಿಯವನು ಹೊಸ ಖುರ್ಚಿಯನ್ನು ತಂದಿರಿಸಿದಾಗ ಸಡಗರದಿಂದ ತನ್ನ ಸೇವಕರನ್ನು ಕರೆದು ಹಳೆಯ ಖುರ್ಚಿಯನ್ನು ಇತ್ತ ಎಳೆಯುವಂತೆ ಅಜ್ಞೆ ಮಾಡಿದ. ಸೇವಕರು ಅನಾಮತ್ತಾಗಿ ಹಳೆಯ ಖುರ್ಚಿಯನ್ನು ಎತ್ತಿದಾಗ ಅದರ ಗಾಲಿಗಳಿಗೆ ಸುತ್ತಿಕೊಂಡಿದ್ದ ಕಾರ್ಪೆಟ್ಟಿನ ಎಳೆಗಳು ಉದ್ದುದ್ದ ಹೊರಬಂದು ಇವನಿಗೆ ಕಿರಿಕಿರಿಯಾಯಿತು. "ಅರೆರೆ! ಆರಾಮ್ ಸೇ ಆರಾಮ್ ಸೇ..." ಎನ್ನುತ್ತ ಇವನು ಮುಂದೊತ್ತಿ ಬರುವಷ್ಟರಲ್ಲಿ ಟಂಗ್ ಟಂಗೆಂದು ಒಂದರ ಬಳಿಕ ಒಂದು ಎಳೆ ತುಂಡಾಗಿ ನೆಲಕ್ಕೆ ನೆಗೆದು ಸುಯ್ಯೆಂದು ಕಾರ್ಪೆಟ್ ನೊಳಗೆ ನುಸುಳಿ ಮಾಯವಾದಾಗ ಇವನಿಗೆ ಕೊಂಚ ಸಮಾಧಾನವಾಯಿತು. ಸದ್ಯ ಕಾರ್ಪೆಟ್ ಹಾಳಾಗಲಿಲ್ಲ ಎಂದುಕೊಂಡ.
ಸೇವಕರು ಹೊಸ ಖುರ್ಚಿಯನ್ನು ತಂದಿಟ್ಟು ಅದಕ್ಕೆ ಹೊದಿಸಲಾಗಿದ್ದ ಪ್ಲಾಸ್ಟಿಕ್ ಸಿಪ್ಪೆಯನ್ನು ಹರಿಯತೊಡಗಿದ್ದರು. ಇವನು ಅವರನ್ನು ತಡೆದು ಟೇಬಲ್ ಮೇಲಿದ್ದ ಪುಟ್ಟ ಕತ್ತರಿಯನ್ನು ತೆಗೆದುಕೊಂಡು ನೀಟಾಗಿ ಒಂದು ಚೂರು ಪ್ಲಾಸ್ಟಿಕ್ ಉಳಿಯದಂತೆ ಕತ್ತರಿಸಿ ತೆಗೆದು ತನ್ನ ಸೇವಕರ ಕೈಗಿತ್ತು ಮಂದಹಾಸ ಬೀರಿದ.
ಉಗ್ರಾಣದ ಅಧಿಕಾರಿ ಮಿಶ್ರಾಜಿ ಸಡಗರದಿಂದ ಹೊಚ್ಚ ಹೊಸ ಟರ್ಕಿ ಟವೆಲನ್ನು ತಂದು ಹೊಸ ಖುರ್ಚಿಯ ಬೆನ್ನಿಗೆ ಹೊದಿಸಿ ತನ್ನ ಸಂಪೂರ್ಣ ವಿಧೇಯತೆಯಿಂದ ಚಡಪಡಿಸಿದಾಗ ಇವನಿಗೆ ನಗು ಬಂತು. ನಗುತ್ತಾ ಬಂದು ಹೊಸ ಖುರ್ಚಿಯಲ್ಲಿ ಇವನು ವಿರಾಜಮಾನನಾದಾಗ ಎಲ್ಲರೂ ಚಪ್ಪಾಳೆ ತಟ್ಟಿದರು. ಇವನಿಗೆ ಸಂಕೋಚವಾಯಿತು.
"ಅರೇ ಯೇ ಕ್ಯಾ ಕರ್ರಹೆ ಹೈ ಆಪ್ ಲೋಗ್! ಜಾಯಿಯೆ ಕಾಮ್ ದೇಖಿಯೇ" ಎಂದು ಗದರಿಸಿ ತನ್ನ ಮೇಜಿನ ಮೇಲಿದ್ದ ಫೈಲನ್ನು ಮುಂದೆಳೆದು ಗಂಭೀರನಾದ.
ಎಲ್ಲರೂ ಒಬ್ಬೊಬ್ಬರಾಗಿ ಹೊರ ಹೋಗಿ ಕೋಣೆ ಖಾಲಿಯಾದಾಗ ಮೆಲ್ಲನೆದ್ದು ಖುರ್ಚಿಯನ್ನೊಮ್ಮೆ ಮಮತೆಯಿಂದ ಪರಿಶೀಲಿಸಿದ. ಅದರ ಒರಗು ಬೆನ್ನನ್ನು ಒತ್ತಿ ಆಕ್ಷನ್ ನೋಡಿದ, ತಳಭಾಗದ ಲಿವರ್ ಒತ್ತಿ ಹದವಾದ ಎತ್ತರಕ್ಕೆ ಹೊಂದಿಸಿಕೊಂಡ. ಒಮ್ಮೆ ಹಿಂದೆ ಮುಂದೆಳೆದು ಗಾಲಿಗಳ ನವಿರನ್ನು ಪರಿಶೀಲಿಸುತ್ತಿದ್ದಂತೆ ತೊಡಕಿದಂತಾದಾಗ ಬಗ್ಗಿ ನೋಡಿದರೆ ಕಾರ್ಪೆಟ್ಟಿನ ಎಳೆಗಳು ಅಷ್ಟರಲ್ಲಿಯೇ ಹೊಸ ಖುರ್ಚಿಯ ಗಾಲಿಗಳಿಗೂ ಸುತ್ತಿಕೊಂಡಿದ್ದವು. ಮತ್ತೆ ಸರ್ಕಾರ್ ಗೆ ಕಿರಿಕಿರಿಯೆನಿಸತೊಡಗಿತು.
ಪುನಹ ಬಗ್ಗಿ ಮಂಡಿಗಾಲೂರಿ ಕತ್ತರಿಯಿಂದ ಒಂದು ಗಾಲಿಗೆ ಸುತ್ತಿಕೊಂಡಿದ್ದ ಎಳೆಗಳನ್ನು ಮೆಲ್ಲನೆ ಕಾರ್ಪೆಟ್ಟು ಹಾಳಾಗದಂತೆ ಬಿಡಿಸತೊಡಗಿದಾಗ ಆ ಎಳೆಗಳ ರಚನೆ ಕಾರ್ಪೆಟ್ಟಿನ ಕೂದಲುಗಳಂತಿರದಿರುವುದನ್ನು ಕಂಡು ಸರ್ಕಾರ್ ಗೆ ಅಚ್ಚರಿಯೆನಿಸಿತು. ಧೂಳು ಸವರಿದ ಬಂದಳಿಕೆಯ ಬೇರುಗಳಂತಿತ್ತು ಅವುಗಳ ಸ್ವರೂಪ. ಮೆಲ್ಲನೆ ಒಂದೆರಡು ಗಾಲಿಗಳಿಂದ ಬಿಡಿಸುತ್ತ ಮೊದಲ ಗಾಲಿಯತ್ತ ಕಣ್ಣು ಹಾಯಿಸಿದಾಗ ಅವು ಪುನಹ ಮೊದಲಿಗಿಂತ ಬಿಗಿಯಾಗಿ ಗಾಲಿಗೆ ಸಿಂಬೆ ಸುತ್ತಿದ್ದನ್ನು ನೋಡಿ ಗಾಬರಿಯಾಯಿತು.
ಒಂದು ಎಳೆಯನ್ನು ಬೆರಳುಗಳಿಂದ ಹಿಡಿದು ಎಳೆಯಲು ಪ್ರಯತ್ನಿಸಿದಾಗ ರಬ್ಬರಿನಂತೆ ಸುಯ್ಯೆಂದು ಕಾರ್ಪೆಟ್ಟಿನೊಳಗೆ ನುಸುಳಿ ಮಾಯವಾಯಿತದು. ಅದು ನುಸುಳಿದ ಕಡೆ ಕತ್ತರಿಯ ಮೊನೆಯಿಂದ ಕಾರ್ಪೆಟ್ಟಿನ ಕೂದಲುಗಳನ್ನು ವಿಭಾಗಿಸಿ ಇಣುಕಿದ ಸರ್ಕಾರ್. ಅದರ ಸುಳಿವಿರಲಿಲ್ಲ. ತಲೆಯೆತ್ತಿ ಅಕ್ಕಪಕ್ಕ ಕಣ್ಣಾಡಿಸಿದಾಗ ಆ ಬೇರುಗಳು ಬರೆ ಇವನ ಖುರ್ಚಿ ಮಾತ್ರವಲ್ಲ ಮೇಜಿನ ಕಾಲುಗಳನ್ನೂ ಅಕ್ಕಪಕ್ಕದ ಪೀಠೋಪಕರಣಗಳನ್ನೂ ನೆಲದ ಮೇಲೆ ಇರಿಸಲಾಗಿದ್ದ ಪ್ರತೀ ವಸ್ತುಗಳನ್ನೂ ಸೂಕ್ಷ್ಮವಾಗಿ ಅಪ್ಪಿಕೊಂಡಿದ್ದು ಕಂಡು ಬಂತು.
ಕೋಣೆಯ ಮೂಲೆಯ ಕೋನದಲ್ಲಿ ಕಾರ್ಪೆಟ್ಟಿನ ಹಾಸು ತಲುಪದಿದ್ದುದರಿಂದ ಸಣ್ಣ ತುಂಡನ್ನು ಜೋಡಿಸಲಾಗಿತ್ತು. ಕತ್ತರಿಯ ಮೊನೆಯನ್ನು ಅದರ ಅಂಚಿಗೆ ನುಗ್ಗಿಸಿ ಆ ತುಂಡನ್ನು ಎತ್ತಿದವನೇ ಗಾಬರಿಯಿಂದ ಹೌಹಾರಿ ಎದ್ದು ನಿಂತ ಸರ್ಕಾರ್. ನೆಲವಿಡಿ ಬಂದಳಿಕೆ ಒತ್ತಾಗಿ ಹರಡಿತ್ತು. ಅದೇ ರಬ್ಬರಿನ ಎಳೆಗಳಂತಹ ರಚನೆಗಳು ತೇವ ಜಿನುಗುತ್ತ ಸೂಕ್ಷ್ಮವಾಗಿ ಮಿಸುಗುತ್ತಿದ್ದವು.
ಲಗುಬಗೆಯಿಂದೆದ್ದು ತನ್ನ ಸೇವಕರನ್ನು ಕರೆದ ಸರ್ಕಾರ್. ಇವನ ಗಾಬರಿ ನೋಡಿ ಸೇವಕರೂ ಕಾಳಜಿ ತೋರ್ಪಡಿಸಿದರೂ ಅದರ ಹಿಂದಿನ ಕಾರಣ ತಿಳಿದ ಮೇಲೆ ಅವರು ಅಷ್ಟೇನೂ ವಿಚಲಿತರಾದಂತೆ ತೋರಲಿಲ್ಲ.
"ಏ? ಏತೋ ಸಬ್ ಜಗ ಹೈ, ಸಾಬ್! ಪೂರೇ ಬಿಲ್ಡಿಂಗ್ ಮೆ ಹೈ!"
"ಏನಿದು? ಎಲ್ಲಿಂದ ಬರ್ತಾ ಇದೆ?" ಕೊಂಚ ಅಸಹನೆಯಿಂದಲೇ ಪ್ರಶ್ನಿಸಿದ ಸರ್ಕಾರ್. "ಒತೋ ಪತಾ ನಹೀ ಸಾಬ್" ಎಂದ ಸೇವಕನ ಮಾತಿಗೆ ಇವನ ಪಿ.ಎಸ್. ದನಿಗೂಡಿಸಿದ.
"ಸರ್ ಗಭ್ರಾಯಿಯೇ ನಹೀ! ಏ ಚೀಸ್ ತೋ ಬಹುತ್ ಪಹಲೇ ಸೇಹಿ ಹೆ, ಔರ್ ಕುಚ್ ಪ್ರಾಬ್ಲಮ್ ಭೀ ನಹಿ ಹೈ ಸರ್" ಇವನಿಗೆ ರೇಗಿತು. "ಏನ್ರೀ ಹಾಗಂದ್ರೆ? ಏನೋ ವಿಚಿತ್ರವಾದದ್ದು ಇಲ್ಲಿ ಬೆಳೀತಾ ಇದೆ ಅಂದ್ರೆ! ನಿಮಗೆಲ್ಲ ಅಸಹ್ಯಾನೂ ಹುಟ್ಟಲ್ವಾ? ಯಾರ್ರೀ ಮೆಯಿಂಟೆನೆನ್ಸ್ ನವ್ರು? ಈಗ್ಲೇ ಬರಕ್ಕೇಳ್ರೀ ಅವರನ್ನ!" ಎಂದು ಅಜ್ಞಾಪಿಸಿದ ಸರ್ಕಾರ್.
ಪುನಹ ಖುರ್ಚಿಯ ಮೇಲೆ ಕುಳಿತುಕೊಳ್ಳಲು ಹೋದವನಿಗೆ ಅಸಹ್ಯವೂ ಅಂಜಿಕೆಯೂ ಹುಟ್ಟಿ ಹಿಂದಕ್ಕೆ ಬಂದ.
"ಸರ್, ಮೆಯಿಂಟೆನೆನ್ಸ್ ಶರ್ಮಾಜಿ ರಜೆಯಲ್ಲಿದ್ದಾರೆ" ಎಂದ ಪಿ.ಎಸ್. ಆರೋಗ್ಯ ಸಚಿವಾಲಯದ ಮೀಟಿಂಗ್ ಗೆ ತಡವಾಗುತ್ತಿರುವುದನ್ನು ನೆನಪಿಸಿದಾಗ ಅ ವಿಷಯವನ್ನು ಅವತ್ತಿನ ಮಟ್ಟಿಗೆ ಕೊನೆಗೊಳಿಸಬೇಕಾಯಿತು.
ಮರುದಿನ ಬೆಳಿಗ್ಗೆ ಬಂದಾಕ್ಷಣ ಎಲ್ಲ ಸೆಕ್ಷನ್ ಹೆಡ್ ಗಳನ್ನೂ ಮೆಯಿಂಟೆನೆನ್ಸ್ ನ ಶರ್ಮಾನನ್ನೂ ಕರೆಯಿಸಿ ಮೀಟಿಂಗ್ ಮಾಡಿದಾಗ ಹೊರಬಂದ ಅಂಶಗಳು ಇವು:
ಈ ಸಮಸ್ಯೆ ಈಗಾಗಲೇ ಬೆಳಕಿಗೆ ಬಂದಿದ್ದರೂ ಯಾರೂ ಇದನ್ನು ಒಂದು ಸಮಸ್ಯೆಯೆಂದೇ ಯಾರೂ ಪರಿಗಣಿಸಿರಲಿಲ್ಲ. ಕೆಲವು ಸೆಕ್ಷನ್ ಹೆಡ್ ಗಳಿಗೆ ಈ ವಿಷಯದ ಬಗ್ಗೆ ಅರಿವೇ ಇಲ್ಲದಿದ್ದರೂ ಈಗಲೂ ಅವರು ವಿಶೇಷವಾಗಿ ಚಿಂತಿತರಾದಂತೆ ತೋರಲಿಲ್ಲ. ಮೆಯಿಂಟೆನೆನ್ಸ್ ಶರ್ಮಾಜಿಯ ಪ್ರಕಾರ ಇದು ನಿರುಪದ್ರವಿ ಆಗಿದ್ದು ಇದಕ್ಕೆ ಇದರ ನಿರ್ಮೂಲನಕ್ಕೆ ಪರಿಣಾಮಕಾರಿ ಮದ್ದು ಇನ್ನೂ ಯರಿಗೂ ತಿಳಿದಿರಲಿಲ್ಲ.
ಈ ರೀತಿಯ ವರ್ತನೆ ಬಹಳ್ ಬೇಜವಾಬ್ದಾರಿಯದ್ದೆಂದು ತೋರಿತು ಸರ್ಕಾರ್ ಗೆ. ಎಲ್ಲರನ್ನೂ ಕರೆದು ಕೊಂಡು ಪೂರ್ತಿ ಕ್ಯಾಂಪಸ್ ನ ಸರ್ವೆ ಮಾಡಿದ. ಕ್ಯಾಂಪಸ್ ನ ಎಲ್ಲ ಬಿಲ್ಡಿಂಗ್ ಗಳಲ್ಲೂ ಈ ಬಂದಳಿಕೆಯ ಕಾಟ ಹರಡಿತ್ತು. ಸೂಕ್ಷ್ಮವಾಗಿ ಮೇಲ್ನೋಟಕ್ಕೆ ಕಂಡು ಬರದಿದ್ದರೂ ಬೆಳಕು ಕಡಿಮೆಯಿರುವ ಸ್ಥಳಗಳಲ್ಲಿ, ಕಾರ್ಪೆಟ್ಟುಗಳ ಕೆಳಗೆ, ಕೊಂಚ ಹೆಚ್ಚು ಪ್ರಬಲವಾಗಿ ಹರಡಿದ್ದವು. ಶವಾಗರದ ಹಿಂಬದಿಯಲ್ಲಿ ನೀರಿನ ಟಾಂಕಿಯ ಕೆಳಗಿನ ಕೋಣೆಯಲ್ಲಿ ಕತ್ತಲು ಮಾತ್ರವಲ್ಲ ತೇವವೂ ಇದ್ದ ಜಾಗದಲ್ಲಿ ನಡುಗೋಡೆಯ ಎತ್ತರಕ್ಕೆ ಬರೆ ಬಂದಳಿಕೆಯಂತಲ್ಲದೆ ಕಂದು ಬಣ್ಣದ ಬಳ್ಳಿಗಳ ತರ ಬೆಳೆದಿತ್ತು.
ತನ್ನ ಕಛೇರಿಗೆ ಮರಳಿದವನೇ ಈ ಬಗ್ಗೆ ರಿಪೋರ್ಟನ್ನು ಡಿಕ್ಟೇಟ್ ಮಾಡಿ ಒಂದು ಫೈಲ್ ಹುಟ್ಟಿಸಲು ಹೇಳಿದ ಮತ್ತು ಈ ಫೈಲಿಗೆ ಎಲ್ಲ ಸೆಕ್ಷನ್ ಹೆಡ್ ಗಳಿಂದ ನೋಟಿಂಗ್ ಮಾಡಿಸಿ ಒಂದು ಬಯಾಲಾಜಿಕಲ್ ತನಿಖೆಯನ್ನು ಆದೇಶಿಸಿದ.
ಲ್ಯಬೊರೆಟರಿಯ ಮುಖ್ಯಸ್ಥ ಫೈಲು ಸಿಕ್ಕಿದ ಕೂಡಲೇ ಧಾವಿಸಿಬಂದು, ತನ್ನ ವಿಭಾಗ ರುಟೀನ್ ನಲ್ಲಿ ಅದೆಷ್ಟು ವ್ಯಸ್ಥ ವಾಗಿದೆ ಮತ್ತು ಈ ತನಿಖೆಯನ್ನು ನಡೆಸಲು ಅಸಮರ್ಥರಾಗಿರುವುದಕ್ಕೆ ಉಪಕರಣಗಳ ಕೊರತೆಯೇ ಕಾರಣವೆಂದು ಅಲವತ್ತು ಕೊಂಡಾಗ ಇವನು ಸಿಟ್ಟಾದ. ಸೆಕ್ಷನ್ ಮುಖ್ಯಸ್ಥ ಇವನನ್ನು ಸಮಾಧಾನ ಮಾಡಿ ಇಂತಹ ತನಿಖೆ ಅದೆಷ್ಟು ಸೂಕ್ಷ್ಮದ್ದೆಂದೂ ಇದನ್ನು ನ್ಯಾಶನಲ್ ಸೈಂಟಿಫಿಕ್ ರೀಸರ್ಚ್ ಸಂಸ್ಥೆಯವರೇ ಕೈಗೊಳ್ಳಲು ಸಮರ್ಥರೆಂದೂ, ಮತ್ತು ಅದು ಉನ್ನತ ಮಟ್ಟದ ಸಂಸ್ಥೆಯಾಗಿರುವುದರಿಂದ ಅದರ ಸಲಹೆಯ ಅನುಷ್ಟಾನವೂ ಯಾವುದೆ ಕಾರ್ಯವಾಹಿ ತೊಡಕುಗಳಿಲ್ಲದೇ ನಡೆಯುವುದೆಂದೂ ಲ್ಯಾಬ್ ನ ಮುಖ್ಯಸ್ಥ, ರಾಮದಾಸ್ ಸರ್ಕಾರ್ ನನ್ನು ಒಪ್ಪಿಸಿದ.
ಸರ್ಕಾರ್ ಗೆ ಅಸಹನೀಯ ಚಡಪಡಿಕೆ ಶುರುವಾಗಿತ್ತು. ತನ್ನ ಅಧಿಕಾರದ ಪರಿಧಿಯಲ್ಲಿ ತನ್ನ ನಿಯಂತ್ರಣಕ್ಕೆ ಮೀರಿದ ವಿಷಯವೊಂದು ನಿರಂಕುಶವಾಗಿ ಬೆಳೆಯುತ್ತಿರುವಾಗ ಇವನು ತಾನೆ ಹೇಗೆ ನಿಶ್ಚಿಂತೆಯಿಂದಿರಲು ಸಾಧ್ಯ. ನ್ಯಾಶನಲ್ ಸೈಂಟಿಫಿಕ್ ರೀಸರ್ಚ್ ಸಂಸ್ಥೆಯವರು ತಮ್ಮ ತಂಡವನ್ನು ಕಳುಹಿಸಿ ಸ್ಯಾಂಪಲ್ ಸಂಗ್ರಹಿಸಿ ಒಂದು ವಾರ ಕಳೆದರೂ ಸುದ್ದಿಯಿರಲಿಲ್ಲ. ಇವನಿಗೆ ದಿನವೂ ತನ್ನ ಅಫೀಸಿಗೆ ಹೋಗುವುದೆಂದರೆ ಅಸಹ್ಯ ಹುಟ್ಟತೊಡಗಿತು. ನಿರ್ವಾಹವಿಲ್ಲದೆ ಮುಳ್ಳಿನ ಮೇಲೆ ಕುಳಿತುಕೊಂಡಂತೆ ದಿನ ದೂಡಿದ ರಾಮದಾಸ್.
ಸಂಶೋಧನಾ ಸಂಸ್ಥೆಗೆ ಫೋನ್ ಹಚ್ಚಿ ವಿಚಾರಿಸುವಂತೆ ಪಿ.ಎಸ್.ಗೆ ಅದೇಶಿಸಿ ಕುಳಿತವನಿಗೆ ಇಂಟರ್ ಕಾಮ್ ಕಿರ್ರೆಂದಾಗ ಆತಂಕವೂ ಸಮಾಧಾನವೂ ಒಂದೇಬಾರಿಗೆ ಉಂಟಾಯಿತು. ಉನ್ನತ ಅಧಿಕಾರಿಯೇ ಇವನ ಬಳಿ ಮಾತನಾಡಲು ಬಯಸಿದ್ದ.
"ಮಿ. ಸರ್ಕಾರ್ ದಿಸ್ ಇಸ್ ಎಬೌಟ್ ದಿ ವೈನ್ಸ್ ಸ್ಪ್ರೆಡಿಂಗ್ ಅನ್ಡರ್ನೀತ್ ಯುವರ್ ಫ್ಲೋರ್ಸ್. ಐ ಯಾಮ್ ಒ. ಪಿ. ಮೆಹತಾ ಎಕ್ಸಿಕ್ಯುಟಿವ್ ಡೈರೆಕ್ಟರ್. ನಿಮ್ಮ ಬಳಿ ನಾನೆ ಮಾತನಾಡೋಣಾ ಅಂತ ಫೋನ್ ತಗೊಂಡೆ. ಯು ನೋ ಸಮ್ ಬಡಿ ಹ್ಯಾಸ್ ಟು ಟೇಕ್ ದಿ ಕಾಲ್. ಈ ಹೊತ್ತಿಗೆ ನಾನು ಅನ್ ಆಫೀಶಿಯಲಿ ನಿಮಗೆ ಹೇಳುವುದೇನೆಂದರೆ ಈ ಸ್ಪೀಶಿಸ್ ಬಗ್ಗೆ ನಮಗೆ ಹೆಚ್ಚೇನೂ ಈಗ ಡಾಟಾ ದೊರಕುತ್ತಿಲ್ಲ. ಆದರೆ ಗಹನೀಯ ವಿಚಾರವೆಂದರೆ ಈ ಸ್ಪೀಶಿಸ್ ಇದೀಗ ದೆಹಲಿಯ ಹಲವು ಕಡೆಗಳಲ್ಲಿ ಹರಡುತ್ತಿದೆ. ಇಟ್ ಸೀಮ್ಸ್ ಟು ಬಿ ಎವೆರಿ ವೇರ್. ನಿಮ್ಮ ಹಾಗೆ ಜವಾಬ್ದಾರಿ ತಗೊಂಡು ತನಿಖೆಗೆ ಅದೇಶಿಸಿದವರು ಹೆಚ್ಚು ಮಂದಿಯಿಲ್ಲ ಆದರೆ ಅಲ್ಲೆಲ್ಲ ಇದೇ ಸಮಸ್ಯೆ ಕಾಣಿಸಿಕೊಂಡಿದೆ. ಅದು ಇನ್ನೂ ಹಲವು ಪ್ರದೇಶಗಳಲ್ಲಿಯೂ ಹರಡಿರಬಹುದು. ಅನ್ ಫಾರ್ಚುನೇಟ್ಲಿ ನಾನು ಈ ಬಗ್ಗೆ ಆಫೀಶಿಯಲ್ ಆಗಿ ಯಾವುದೇ ರಿಪೋರ್ಟನ್ನು ನಿಮಗೆ ನೀಡಲಾರೆ. ನೀವು ಕೂಡ ನಮಗೆ ಒತ್ತಡ ತರದೆ ಸಹಕರಿಸಬೇಕಾಗಿ ನನ್ನ ವಿನಂತಿ. ಇದರ ಬಗ್ಗೆ ಹೆಚ್ಚೇನಾದರು ತಿಳಿದು ಬಂದಲ್ಲಿ ನಿಮ್ಮನ್ನು ನಮ್ಮ ಪ್ರಯಾರಿಟಿ ಲಿಸ್ಟನ ಪ್ರಕಾರ ಸಂಪರ್ಕಿಸುತ್ತೇವೆ. ಟಿಲ್ ದೆನ್ ಯೂ ನೀಡ್ ಟು ಕಾಪರೇಟ್. ದಿಸ್ ಇಸ್ ಮೈ ಪರ್ಸನಲ್ ರಿಕ್ವೆಸ್ಟ್." ಅಂತ ಆ ಅಧಿಕಾರಿ ಫೋನ್ ಇಟ್ಟಾಗ ಇವನ ಅತಂಕ ಇನ್ನಷ್ಟು ಹೆಚ್ಚಾಯಿತು.
ಮನೆಗೆ ಬಂದವನೇ ಸೀದಾ ಕಿಚನ್ ಗೆ ಹೋಗಿ ನೋಡಿದ. ಬಹಳ ಸೂಕ್ಷ್ಮವಾಗಿ ನೋಡಿದರೆ ಮಾತ್ರ ಕಾಣುವಷ್ಟು ಇದ್ದವು ಅಲ್ಲೂ. ಹೆಂಡತಿಯ ಅದನ್ನು ಗಹನವಾಗಿ ತೆಗೆದುಕೊಳ್ಳದಂತೆ ಮಾಮೂಲಾಗಿ ಸಾರಿಸಿ ಬಿಟ್ಟ. ಸಂಶೋಧನಾ ಸಂಸ್ಥೆಯ ಅಧಿಕಾರಿ ಅದನ್ನು ವೈನ್ಸ್ ಎಂದು ಉಲ್ಲೇಖಿಸಿದ್ದು ನೆನಪಾಯಿತು. ವೆಯಿನ್ಸೋ ವೈನ್ಸೋ ಎಂದು ಗೊಂದಲವುಂಟಾಯಿತು. ಮರುದಿನ ಮುಖತಹ ಅವರನ್ನು ಕಾಣಬೇಕು ಎಂದು ಮನಸ್ಸಿನಲ್ಲೇ ನೋಟ್ ಮಾಡಿಕೊಂಡ ಸರ್ಕಾರ್. ವೆಯಿನ್ಸ್ (ನರಗಳು) ಇರಲಾರದು ವೈನ್ಸ್ (ಬಳ್ಳಿ) ಇರಬಹುದು ಎಂದು ತನ್ನನು ತಾನೇ ಸಮಾಧಾನಿಸಿಕೊಂಡಾಗ ನಗುಬಂತು. ಜೀವ ವಿಜ್ಞಾನದ ಅತ್ಯುನ್ನತ ಸಂಸ್ಥೆಯ ಮುಖ್ಯಸ್ಥನಾಗಿದ್ದುಕೊಂಡು ತಾನು ಇಂತಹ ಬಾಲಿಶ ರೀತಿಯಲ್ಲಿ ಆಲೋಚಿಸುತ್ತಿರುವುದನ್ನು ಶಪಿಸಿಕೊಂಡ.
ಬೆಡ್ ರೂಂಗೆ ತೆರಳಿ ಬಟ್ಟೆ ಬದಲಾಯಿಸುತ್ತಿರುವಾಗೊಮ್ಮೆ ಮಂಚದಕಾಲಿನತ್ತ ಬಗ್ಗಿ ನೋಡಿದ. ಮನೆಯಲ್ಲಿ ಕಾರ್ಪೆಟ್ ಇಲ್ಲದಿರುವುದರಿಂದ ಟೈಲ್ಸ್ ನ ಸಂಧುಗಳಿಂದ ಪೀಠೋಪಕರಣಗಳನ್ನಿಟ್ಟ ಕಡೆಯಷ್ಟೇ ಸೂಕ್ಷ್ಮವಾಗಿ ಹೊರ ಬಂದಿದ್ದವು ಆ ನರಗಳಂತಹ, ಬೇರುಗಳಂತಹ, ಬಳ್ಳಿಗಳು.
ಇದೇ ಕಿರಿಕಿರಿಯಿಂದ ನಿದ್ದೆ ಬರದೆ ಹೊರಳಾಡಿದ ರಾಮದಾಸ. ಹೆಂಡತಿ ಸೌಮ್ಯವಾಗಿ ಮಲಗಿ ನಿದ್ರೆ ಮಾಡುತ್ತಿದ್ದಳು. ಸಂಶೋಧನಾ ಕೇಂದ್ರದ ಅಧಿಕಾರಿ ಅನುಮಾನಿಸಿದ ಹಾಗೆ ಇದು ನಗರವನ್ನಿಡೀ ಹರಡಿಕೊಂಡಿರಬಹುದೆ? ಅದು ಮೇಲ್ಮೈಯಲ್ಲೇ ಇಷ್ಟು ತೀವ್ರವಾಗಿ ಆವರಿಸಿರಬೇಕಾದರೆ ಇನ್ನು ಭೂಮಿಯ ಕೆಳಗೆಷ್ಟು ಒತ್ತಾಗಿರಬಹುದು. ಅದರ ಅಗಾಧ ವ್ಯಾಪ್ತಿಯನ್ನು ಊಹಿಸಿ ದಿಗಿಲಾಯಿತು. ಈ ವಿಷಯವಾಗಿ ಹೆಚ್ಚೇನು ಹೇಳಲು ಸಿದ್ಧವಿರಲಿಲ್ಲ ಆ ಅಧಿಕಾರಿ.
ಮೆಲ್ಲನೆ ಮಂಪರು ಕವಿದಾಗ ಕಾಲಿಗೆ ಕಚಗುಳಿಯೆನಿಸಿತು. ಇನ್ನೊಂದು ಕಾಲಿನಿಂದ ಸವರಿದಾಗ ಆ ಬೇರುಗಳ ಸ್ಪರ್ಶವಾದಂತೆನಿಸಿ ಧಿಗ್ಗನೆದ್ದು ಕೂತ. ಹಾಸಿಗೆಯಲ್ಲೆಲ್ಲ ಆ ಬೇರುಗಳಂತಹ ಬೇರುಗಳು ಹರಡಿದ್ದವು. ಬೆಡ್ ಲ್ಯಾಂಪಿನ ನಸುಬೆಳಕಿನಲ್ಲೂ ಅದರ ಜಿನುಗಿನ ಹೊಳಪು ಅಸಹ್ಯವಾಗಿ ಕಾಣುತ್ತಿತ್ತು. ಮೆಲ್ಲನೆ ಮಿಸುಗುತ್ತಾ ಹರಡಿಕೊಳ್ಳುತ್ತಿದ್ದವು ಆ ಬೇರುಗಳು. ಕಾಲುಗಳಿಂದ ಅವನ್ನೆಲ್ಲ ಆಚೆ ತಳ್ಳಲು ಪ್ರಯತ್ನಿಸಿದ ಸರ್ಕಾರ್. ಒಮ್ಮೆ ಕೆಳಗೆ ಬಿದ್ದ ಆ ಬೇರುಗಳು ಇನ್ನಷ್ಟು ತೀವ್ರವಾಗಿ ಮೇಲೇರಿ ಹಾಸಿಗೆಯಲ್ಲೆಲ್ಲ ಹರಡಿಕೊಳ್ಳಲು ತೊಡಗಿದವು. ಇದೀಗ ಅವನ್ನು ಬೇರುಗಳೆನ್ನುವುದಕ್ಕಿಂತ ಬಳ್ಳಿಗಳೆನ್ನುವುದೇ ಸೂಕ್ತವೆನ್ನಿಸುವಷ್ಟು ದಪ್ಪವೂ ಬಲಿಷ್ಟವೂ ಆಗಿದ್ದವು. ಮೆಲ್ಲನೆ ರಾಮದಾಸನ ಕಾಲಿಗೆ ಸುತ್ತಿಕೊಳ್ಳತೊಡಗಿತು ಒಂದು ಬಳ್ಳಿ. ರಾಮದಾಸ ಗಾಬರಿಯಿಂದ ಕೊಡವತೊಡಗಿದ. ಅದರ ಬಿಗಿತ ಇನ್ನಷ್ಟು ಹೆಚ್ಚಾಗತೊಡಗಿತು. ಇವನು ಹೆದರಿಕೆಯಿಂದ ಒದ್ದಡುತ್ತಿದ್ದಂತೆ ಒಂದೊಂದಾಗಿ ಬಳ್ಳಿಗಳು ಇವನ ಮೈಯನ್ನು ಆವರಿಸಿ ಸುತ್ತಿಕೊಳ್ಳತೊಡಗಿದವು. ಅದರ ಅಸಹ್ಯ ಜಿನುಗು ಮೈಯನ್ನು ತಣ್ಣಗೆ ತಾಗಿದಾಗ ಇವನ ಹೆದರಿಕೆ ತೀವ್ರವಾಗಿ ಬೆವರತೊಡಗಿದ ಸರ್ಕಾರ್. ಇನ್ನಷ್ಟು ಬಳ್ಳಿಗಳು ಮಂಚದ ಮೇಲಕ್ಕೆ ಬರುತ್ತಿದ್ದವು. ಒತ್ತೊತ್ತಾಗಿ ಮೈಯನ್ನು ಸುತ್ತಿಕೊಳ್ಳುತ್ತ ಬಳ್ಳಿಯ ಮೊನೆಗಳು ಇವನ ಕಿವಿ ಮೂಗು ಹಾಗೂ ಇತರ ರಂಧ್ರಗಳಲ್ಲೂ ನುಗ್ಗತೊಡಗಿದಾಗ.... ಜಗ್ಗನೆದ್ದು ಕುಳಿತ ರಾಮದಾಸ.
ಅವನು ಕಂಡದ್ದೊಂದು ಕನಸೆಂದು ಅರಿವಾಗಲು ಕೊಂಚ ಸಮಯ ಹಿಡಿಯಿತು. ಎದ್ದು ಲೈಟು ಹಾಕಿ ಮಂಚದ ಕೆಳಗೊಮ್ಮೆ ಬಗ್ಗಿ ನೋಡಿದ. ಅಲ್ಲೇನೂ ಇರಲಿಲ್ಲ. ಆ ನಿರುಪದ್ರವಿ ಸಣ್ಣ ಬೇರಿನಂತಹ ರಚನೆಗಳು ಮಂಚದ ಕಾಲಿನ ಬುಡವನ್ನು ಪುಟ್ಟದಾಗಿ ಅಪ್ಪಿ ಹಿಡಿದಿದ್ದವು. ಹೆಂಡತಿಯತ್ತ ನೋಡಿದ ರಾಮದಾಸ.
ಸೌಮ್ಯವಾಗಿ ಮಲಗಿ ದೀರ್ಘ ನಿದ್ದೆಯೊಳಗಿದ್ದ ಅವಳು ಮಲಗಿದ್ದ ಭಂಗಿ ಆಕರ್ಷಕವೆನಿಸಿ ಪುಳಕ ಹುಟ್ಟಿತು ರಾಮದಾಸನಲ್ಲಿ. ಲೈಟು ಆರಿಸಿ ಹೆಂಡತಿಯ ಬಳಿಸಾರಿ ಹಿಂದಿನಿಂದ ಅಪ್ಪಿ ಹಿಡಿದು ಮಲಗಿದ. ಹೆಂಡತಿ ಇವನ ಅಪ್ಪುಗೆಗೆ ಮುಲುಗಿ ಇನ್ನಷ್ಟು ಒತ್ತಿಕೊಂಡಳು. ಪ್ರಚೋದಿತನಾದ ರಾಮದಾಸನಲ್ಲಿ ಆಕಾಂಕ್ಷೆ ಭೋರ್ಗರೆಯಿತು. ಉತ್ಕಟ ಪ್ರೀತಿಯ ತುತ್ತತುದಿಯಲ್ಲಿದ್ದಾಗ ಧುತ್ತೆಂದು ಈಗಷ್ಟೇ ಬಿದ್ದ ಕನಸು ನೆನಪಾಯಿತು. ತನ್ನ ರಂಧ್ರದೊಳಗೆ ಹೊಕ್ಕಲಿದ್ದ ಬಳ್ಳಿಗಳ ನೆನಪಾಗಿ ನಿರ್ವಿಣ್ಣನಾದ. ಕುಸಿದು ಅತ್ತ ಹೊರಳಿ ಮಲಗಿದವನಿಗೆ ಮತ್ತೆ ನಿದ್ದೆ ಬರಲಿಲ್ಲ.
ಮರುದಿನ ಆಫೀಸಿಗೆ ಹೋಗುವಾಗ ರಸ್ತೆಯ ಇಕ್ಕೆಡೆಗಳಲ್ಲಿ ಮರಗಿಡಗಳ ಮೇಲೆ ಮತ್ತವೇ ಬೇರುಗಳಂತಹ ಬಳ್ಳಿಗಳು ಕಂಡಂತಾಗಿ ಕಸಿವಿಸಿಯಾಗತೊಡಗಿತು. ನಿದ್ರೆಯಿಲ್ಲದೆ ಸಣ್ಣಗೆ ತಲೆಯೂ ನೋಯುತ್ತಿತ್ತು. ಒಂದು ಡಿಸ್ಪಿರಿನ್ ನುಂಗಿ ನೀರು ಕುಡಿದ.
ಆಫೀಸಿಗೆ ಬಂದ ಕೂಡಲೇ ಮೆಯಿಂಟೆನೆನ್ಸನ ಶರ್ಮನನ್ನು ಕರೆದ. ತನ್ನ ರೂಮಿನ ಕಾರ್ಪೆಟನ್ನು ಕಿತ್ತು ಅದರ ಕೆಳಗೆ ಹರಡಿರುವ ಬೇರುಗಳನ್ನು ಕೆರೆದು ತೆಗೆಯಲು ಆದೇಶಿಸಿ ಇವನು ಮೂರುದಿನ ರಜೆ ಹಾಕಿ ಮನೆಯಲ್ಲಿ ಕೂತ. ಎರಡನೇ ದಿನ ಆಫೀಸಿನಿಂದ ಫೋನ್ ಬಂತು. ಹಿಂದಿನದಿನ ಒಮ್ಮೆ ಕೆರೆದು ತೆಗೆದ ಬೇರುಗಳೆಲ್ಲ ಇಂದು ಮತ್ತೆ ಹಿಂದಿಗಿಂತ ಹೆಚ್ಚೇ ಹರಡಿಕೊಂಡಿವೆ. ಇವನು ಕೂಡಲೆ ಆಫೀಸಿಗೆ ತೆರಳಿದ. ಇವನ ಆಫೀಸು ಆರನೇ ಮಹಡಿಯಲ್ಲಿದ್ದರೂ ಅದು ಹರಡಿಕೊಳ್ಳುವ ತೀವ್ರತೆಗೆ ಅಚ್ಚರಿಯೆನಿಸುತ್ತಿತ್ತು.
ಒಮ್ಮೆ ತನ್ನ ಕೋಣೆಯಲ್ಲಿ ಕಣ್ಣಾಡಿಸಿದ. ಪೀಠೋಪಕರಣಗಳನ್ನೆಲ್ಲ ಇನ್ನೊಂದು ಕೊಠಡಿಗೆ ವರ್ಗಾಯಿಸಲಾಗಿತ್ತು. ಕಾರ್ಪೆಟ್ ಇಲ್ಲದೇ ಇರುವುದು ಅರಿವಿಗೆ ಬರದಂತೆ ಒತ್ತಾಗಿ ಬೇರುಗಳು ಹರಡಿಕೊಂಡಿದ್ದವು ಮಾತ್ರವಲ್ಲದೇ ಗೋಡೆಯ ಮೇಲಕ್ಕೆರಲೂ ಪ್ರಾರಂಭಿಸಿದ್ದವು. ಕಿಟಕಿಗೆ ತೊಡಿಸಲಾಗಿದ್ದ ಪರದೆಗಳನ್ನು ತೆಗೆದಿಡಲು ಆದೇಶಿಸಿ ಕೆಳಗೆ ಬರುವಷ್ಟರಲ್ಲಿ ಸೀ ಟೀವಿ ನ್ಯೂಸ್ ನಿಂದ ಫೋನ್ ಬಂದ ಬಗ್ಗೆ ಪಿ.ಎಸ್. ಹೇಳಿದ. ಉನ್ನತ ಶಿಕ್ಷಣದ ಬಗ್ಗೆ ಅಂದು ಪ್ರಸಾರವಾಗಲಿರುವ ಚರ್ಚೆಯಲ್ಲಿ ಭಾಗವಹಿಸಲು ಅಹ್ವಾನಿಸಿದ್ದರು. ಮೊದಲಿನಿಂದಲೂ ಇಂತಹ ಚರ್ಚೆಗಳ ಬಗ್ಗೆ ಆಸಕ್ತಿ ವಹಿಸುತ್ತ ಕೊಂಚ ಹೆಸರು ಮಾಡಿದ್ದ ಸರ್ಕಾರ್ ಗೆ ಈ ಅವಕಾಶವನ್ನು ತಪ್ಪಿಸಿಕೊಳ್ಳಲು ಮನಸ್ಸಗಲಿಲ್ಲ. ಮೂರು ಗಂಟೆಗೆ ನಡೆಯಲಿರುವ ರೆಕಾರ್ಡಿಂಗ್ ಗೆ ತಾನು ಬರುವೆನೆಂದು ಹೇಳಲು ಸೂಚನೆ ನೀಡಿ ಕೆಳ ಬಂದ ಸರ್ಕಾರ್. ಮನೆಗೆ ಹೋಗಿ ಊಟ ಮುಗಿಸಿ ಸ್ಟುಡಿಯೋದತ್ತ ಸಾಗಿದ ಸರ್ಕಾರ್ ತಾನು ಮಾತನಾಡಬಹುದಾದ ಪಾಯಿಂಟ್ ಗಳನ್ನು ಮನಸ್ಸಿನಲ್ಲಿ ನೋಟ್ ಮಾಡಿಕೊಂಡ.
ಇವನಲ್ಲದೆ ವಿವಿಧ ರಾಜಕೀಯ ಪಕ್ಷಗಳ ವಕ್ತಾರರೂ ಇದ್ದರು. ಚರ್ಚೆ ಉತ್ತಮವಾಗಿ ಮೂಡಿ ಬಂತು. ಮುಗಿದ ಮೇಲೆ ಇವನ ಬಳಿಗೆ ಬಂದ ಟೀವಿಯ ಪ್ರಮುಖ ಪತ್ರಕರ್ತ ಇವನು ಉಲ್ಲೇಖಿಸಿದ ಪಾಯಿಂಟ್ ಗಳು ಎಷ್ಟೊಂದು ಮೌಲ್ಯಯುತವಾದುದೆಂದು ಹೊಗಳಿದಾಗ ಇವನಿಗೆ ಸಂಕೋಚದ ಜೊತೆಗೆ ಖುಶಿಯೂ ಆಯಿತು. ಖುರ್ಚಿಯಿಂದ ಎದ್ದು ಹೊರಡಬೇಕೆನ್ನುವಷ್ಟರಲ್ಲಿ ಬೇರುಗಳ ಸಮಸ್ಯೆ ನೆನಪಾಯಿತು. ಇಲ್ಲೇನಾದರೂ ಆ ಸಮಸ್ಯೆ ಇರಬಹುದೇ ಎಂದು ಖುರ್ಚಿಯ ಕಾಲಿನ ಕಡೆ ಬಗ್ಗಿ ನೋಡಿದ ಸರ್ಕಾರ್. ಈ ಖುರ್ಚಿಗಳಿಗೆ ಗಾಲಿಗಳಿರಲಿಲ್ಲ. ಅದರ ಕಾಲುಗಳನ್ನು ಸೂಕ್ಷ್ಮವಾಗಿ ಆವರಿಸಿದ್ದವು ಬೇರುಗಳು. "ಮೆ ಐ ಹೆಲ್ಪ್ ಯೂ ಮಿ. ಸರ್ಕಾರ್. ಏನಾದರೂ ಕಳೆದು ಹೋಯಿತೆ" ಎಂದು ಕಾಳಜಿ ತೋರಿಸಿ ಬಳಿ ಬಂದ ಪತ್ರಕರ್ತನಿಗೆ ಇವನು ಆ ಬೇರುಗಳನ್ನು ತೋರಿಸಿ ತನ್ನ ಆಫೀಸಿನಲ್ಲಿ ಇದರ ಕಾಟ ಎಷ್ಟು ಜೋರಾಗಿದೆ ಎಂದು ವಿವರಿಸುವಷ್ಟರಲ್ಲಿ ಪತ್ರಕರ್ತನಿಗೆ ಆಸಕ್ತಿ ಮೂಡಿತು. ಉತ್ತೇಜಿತನಾದ ಸರ್ಕಾರ್ ಸಹಜವಾಗಿ "ಯು ಶುಡ್ ಸೀ ಹೌ ದಿಸ್ ಈಸ್ ಸ್ಪ್ರೆಡಿಂಗ್ ಇನ್ ಮೈ ಛೇಂಬರ್" ಎಂದ. ಅದನ್ನೇ ಆಹ್ವಾನವೆಂದು ಸ್ವೀಕರಿಸಿದ ಪತ್ರಕರ್ತ ಕೂಡಲೆ ತನ್ನ ಸಿಬಂದಿಗೆ ಹೊರಡುವಂತೆ ತಿಳಿಸಿ ಇವನ ಜೊತೆ ಕಾರಿನಲ್ಲಿ ಹೊರಟ. ಹಿಂದಿನಿಂದ ಒಬಿ ವ್ಯಾನ್ ಕೂಡ ಹಿಂಬಾಲಿಸುತ್ತಿರುವುದು ಸರ್ಕಾರ್ ನ ಗಮನಕ್ಕೆ ಬರಲಿಲ್ಲ.
ತನ್ನ ಆಫೀಸು ಕೋಣೆಗೆ ಕರೆದುಕೊಂಡು ಹೋದ ಸರ್ಕಾರ್ ಪತ್ರಕರ್ತನ ಬಳಿ ಮಾತನಾಡಲು ಹಿಂದೆ ತಿರುಗಿದಾಗ ಟೀವಿ ಕ್ಯಾಮರಾ ನೋಡಿ ಆತಂಕವಾಯಿತು. ಆದರೂ ತೋರ್ಪಡಿಸಿಕೊಳ್ಳದೆ ವಿವರಿಸತೊಡಗಿದ. ಪತ್ರಕರ್ತ ಇವನು ಮಾತನಾಡುವುದು ಮುಗಿದ ಕೂಡಲೇ. ಇವನ ಮುಂದೆ ಮೈಕು ಚಾಚಿ "ಈ ಸಮಸ್ಯೆಯ ಬಗ್ಗೆ ನೀವು ಯಾವ ಕ್ರಮ ಕೈಗೊಂಡಿದ್ದೀರಿ" ಎಂದು ಪ್ರಶ್ನಿಸಿದ. ಸರ್ಕಾರ್ ತಾನು ನ್ಯಾಶನಲ್ ಸೈಂಟಿಫಿಕ್ ರೀಸರ್ಚ್ ಸಂಸ್ಥೆಯವರನ್ನು ಸಂಪರ್ಕಿಸಿದ್ದಾಗಿಯೂ ಅವರು ಸ್ಯಾಂಪಲ್ ಸಂಗ್ರಹಿಸಿರುವರೆಂದೂ ತಾನು ಅವರ ರಿಪೋರ್ಟನ ನಿರೀಕ್ಷೆಯಲ್ಲಿರುವೆನೆಂದೂ ಹೇಳಿದ. ಇನ್ನೊಂದೆರಡು ಸಹಜವಾದ ಪ್ರಶ್ನೆಗಳಿಗೆ ಇವನಿಂದ ಉತ್ತರವನ್ನು ಪಡೆದ ಮೇಲೆ ಕ್ಯಾಮರಾದತ್ತ ತಿರುಗಿದ ಪತ್ರಕರ್ತ "ದೇಶದ ಅತ್ಯುನ್ನತ ಜೀವ ವಿಜ್ಞಾನ ಸಂಸ್ಥೆಯ ಆಡಳಿತ ನಿರ್ದೇಶಕನ ಕೊಠಡಿಯಲ್ಲಿ ಮಾತ್ರವಲ್ಲ ಇಡೀ ಕ್ಯಾಂಪಸ್ ನಲ್ಲಿ ಇಂತಹ ವಿಚಿತ್ರ ವಸ್ತುವೊಂದು ಬಹಳ ತೀವ್ರವಾಗಿ ಬೆಳೆಯಬೇಕಾದರೆ ಈ ಸಂಸ್ಥೆಯ ಸಾಮರ್ಥ್ಯದ ಬಗ್ಗೆ ಹಲವು ಪ್ರಶ್ನೆಗಳು ಮೂಡುತ್ತಿದೆ. ಕೇವಲ ಸೀ ಟೀವಿ ನಿಮಗಾಗಿ ಈ ವಿಚಿತ್ರ ಘಟನೆಯ ಪೂರ್ಣ ವಿವರವನ್ನು ಇಂದು ರಾತ್ರಿ ಒಂಬತ್ತು ಗಂಟೆಗೆ ಪ್ರಸಾರ ಮಾಡಲಿದೆ, ಕ್ಯಾಮರಾ ಮನ್ ಸಂಜೀವ್ ಶರ್ಮಾಕೆ ಸಾತ್, ಮೈ ರಾಜೀವ್ ತ್ರಿವೇದಿ, ಸೀ ಟೀವಿ ನ್ಯೂಸ್, ನಯಿ ದಿಲ್ಲಿ.... ಎನ್ನುತ್ತಿರಬೇಕಾದರೆ ಸರ್ಕಾರ್ ಶಾಕ್ ತಗುಲಿದಂತಾಯಿತು.
ಆ ಪತ್ರಕರ್ತನನ್ನು ಬಳಿಗೆಳೆದು ಸಿಟ್ಟಿನಲ್ಲಿ ಗದರಿದ. " ವಾಟ್ ಆರ್ ಯೂ ಟಾಕಿಂಗ್ ನಾನ್ಸೆನ್ಸ್. ನಿಮ್ಮ ಸ್ಟುಡಿಯೋದಲ್ಲೂ ನೋಡಿಲ್ವಾ ನೀವು ಇದನ್ನು. ಇದು ಇಲ್ಲಿ ಮಾತ್ರವಲ್ಲ ಇಡೀ ಊರಿಗೆ ಹರಡಿದೆ. ಬೀ ರೆಸ್ಪಾನ್ಸಿಬಲ್" ಸರ್ಕಾರ್ ಸಿಟ್ಟಿನಿಂದ ನಡುಗುತ್ತಿದ್ದ. ಇವನು ಮಾತನಾಡಿದ್ದಷ್ಟೂ ಕ್ಯಾಮರಾದಲ್ಲಿ ರೆಕಾರ್ಡ್ ಆಗಿತ್ತು. ಆ ಸಿಟ್ಟಿನಲ್ಲಿಯೇ ಯಾರನ್ನೂ ಕಾಯದೆ ಕೆಳಗೆ ಇಳಿದು ಮನೆಗೆ ಬಂದ.
ಸೀ ಟಿವಿಯಲ್ಲಿ ತನ್ನ ಸಂಸ್ಥೆಯ ಇಡೀ ಕ್ಯಾಂಪಸ್ಸಿನಲ್ಲಿ ಬೆಳೆದಿರುವ ಈ ವಿಚಿತ್ರ ಬೇರುಗಳನ್ನು ತೋರಿಸುತ್ತಿದ್ದರು. ಪ್ರತಿ ಬಾರಿಯೂ ಇದನ್ನೊಂದು ತನ್ನ ಸಂಸ್ಥೆಯ ಮತ್ತು ಅಡಳಿತದ ವೈಫಲ್ಯವೆಂದು ಸಾರಿ ಸಾರಿ ಹೇಳಲಾಗುತ್ತಿತ್ತು. "ಸನ್ ಸನೀ ತೇಝ್ ಖುಲಾಸಾ" ಎಂದು ಪದೆ ಪದೆ ಹೇಳುತ್ತಾ ಇವನು ಮಾತನಾಡುವುದು, ಇವನ ಕೋಣೆಯ ಬೇರುಗಳು, ಇವನು ಪತ್ರಕರ್ತನನ್ನು ಸಿಟ್ಟಿನಿಂದ ಎಳೆಯುವುದು ಮತ್ತು ಸಿಟ್ಟಿನಿಂದಲೇ ತಿರುಗಿ ಹೊರಡುವುದನ್ನು ತೋರಿಸಿ ಹಲವು ಅಪದ್ಧ ಪ್ರಶ್ನೆಗಳನ್ನು ಎತ್ತುತ್ತಿದ್ದರು. ಇದೊಂದು ಜೈವಿಕ ಅಚ್ಚರಿಯೆಂದು ತೋರಿಸುವ ಬದಲು ಮಾಮೂಲಿ ಭ್ರಷ್ಟಾಚಾರದ ಮತ್ತೊಂದು ಖುಲಾಸೆಯೆನ್ನುವಂತೆ ಬಿಂಬಿಸುತ್ತಿದ್ದರು. ಆಶ್ಚರ್ಯವೆಂದರೆ ತನ್ನ ಮಾತಿನ ತುಣುಕನ್ನೂ ಎಡಿಟ್ ಮಾಡಿ ತಾನು ಎನ್.ಎಸ್.ಆರ್.ಐ.ಗೆ ರೆಫರ್ ಮಾಡಿದ್ದನ್ನು ಬಿಟ್ಟು ಹಾಕಲಾಗಿತ್ತು. ರೇಜಿಗೆ ಹುಟ್ಟಿ ಟೀವಿ ಆಫ್ ಮಾಡಿದ.
ಬಾಸ್ಟರ್ಡ್ಸ್ ಎಂದು ಹಲ್ಲು ಕಡಿದ ಸರ್ಕಾರ್. ಇವನ ಮೊಬೈಲ್ ರಿಂಗ್ ಆಯಿತು. ಹೆಲ್ತ್ ಸೆಕ್ರೆಟರಿ ಮಾತನಾಡುತ್ತಿದ್ದ. "ವಾಟ್ ಇಸ್ ದಿಸ್ ಮಿ. ಸರ್ಕಾರ್. ಮಂತ್ರಿಗಳು ಸಿಟ್ಟಾಗಿದ್ದಾರೆ. ಇಂತಹ ಗಹನೀಯ ವಿಷಯವೊಂದು ನಿಮ್ಮಲ್ಲಿ ನಡೆಯುತ್ತಿದ್ದರೆ ನೀವು ಇಷ್ಟು ದಿನ ಯಾಕೆ ಕೈ ಕಟ್ಟಿ ಕೂತಿದ್ದೀರಿ." ಇವನು ವಿವರಿಸಲು ಯತ್ನಿಸಿದ. ಆದರೆ ಮಂತ್ರಿಯ ಸಿಟ್ಟಿನ ಕಾವು ಸೆಕ್ರೆಟರಿಯ ಮಾತಿನ ಮೂಲಕ ಇವನಿಗೆ ಇಳಿದು ಬರುತ್ತಿತ್ತು. "ನೀವು ಈ ಕೂಡಲೇ ಮಂತ್ರಿಗಳನ್ನು ಕಾಣಬೇಕೆಂದು ಆದೇಶವಾಗಿದೆ. ನೀವು ಕೂಡಲೆ ಬನ್ನಿ" ಎಂದು ಫೋನ್ ಇಟ್ಟ ಸೆಕ್ರೆಟರಿ.
ಮೊಬೈಲ್ ಮತ್ತೆ ಮತ್ತೆ ರಿಂಗ್ ಆಗುತ್ತಿತ್ತು. ಸೀ ಟೀವಿಗೆ ಸಿಕ್ಕಿದ ಬೈಟ್ ಎಲ್ಲ ಚ್ಯಾನಲ್ ನವರಿಗೂ ಬೇಕಾಗಿತ್ತು. ಕೆಲವರು ನೇರವಾಗಿ ಇವನ ಫೋನ್ ಉತ್ತರವನ್ನೇ ರೆಕಾರ್ಡ್ ಮಾಡತೊಡಗಿದ್ದರು. ಫೋನ್ ಸೈಲೆಂಟ್ ನಲ್ಲಿಟ್ಟು. ಕಾರು ಹತ್ತಿ ಡ್ರೈವರ್ ಗೆ ಸಚಿವಾಲಯಕ್ಕೆ ಕರೆದುಕೊಂಡು ಹೋಗಲು ಆದೇಶಿಸಿದ.
ಸಚಿವರ ಕೊಠಡಿಯ ಹೊರಗೆ ಸೆಕ್ರೆಟರಿ ಮತ್ತು ಇನ್ನೊಬ್ಬ ವ್ಯಕ್ತಿ ಕಾಯುತ್ತಿದ್ದರು. ಇನ್ನೊಬ್ಬ ವ್ಯಕ್ತಿ ತಾನು ಎನ್. ಎಸ್. ಆರ್. ಐ. ನ ಒ.ಪಿ. ಮೆಹತಾ ಎಂದು ಪರಿಚಯಿಸಿಕೊಂಡ. ಅಷ್ಟರಲ್ಲಿ ಒಳಗಿಂದ ಕರೆ ಬಂತು. ಎಲ್ಲರೂ ಒಳಗೆ ಹೋದರು. ಮಂತ್ರಿ ಫೋನಿನಲ್ಲಿದ್ದ. ಬಹುಶಃ ಯಾವುದೋ ಟೀವಿ ಚ್ಯಾನಲ್ ಗೆ ಫೋನ್ ಮೂಲಕ ಸಂದರ್ಶನ ನೀಡುತ್ತಿದ್ದಂತಿತ್ತು.
"ನೋ ನೋ. ಈ ವಿಷಯವನ್ನು ನಾವು ಬಹಳ ಸೀರಿಯಸ್ ಆಗಿ ತೆಗೆದುಕೊಂಡಿದ್ದೇವೆ. ಕೂಡಲೇ ಕಠಿಣ ಕ್ರಮವನ್ನು ಸಂಸ್ಥೆಯ ವಿರುದ್ಧ ತೆಗೆದುಕೊಳ್ಳಲಿದ್ದೇವೆ. ಈ ಬಗ್ಗೆ ಈಗಾಗಲೇ ಉನ್ನತ ತನಿಖೆಗೆ ಅದೇಶಿಸಿದ್ದೇವೆ. ವರದಿ ಹೊರಬರುವವರೆಗೆ ಉನ್ನತ ಅಧಿಕಾರಿಗಳನ್ನು ಸಸ್ಪೆನ್ಶನ್ ನಲ್ಲಿಡಲಾಗುವುದು"
ಮಾತು ಮುಗಿಸಿ ಇವನತ್ತ ರೇಜಿಗೆಯಿಂದ ನೋಡಿದ ಮಂತ್ರಿ. "ಎಂತಾ ಮನುಷ್ಯನಯ್ಯ ನೀನು..." ಇವನು "ಸರ್ ದಯವಿಟ್ಟು ನನಗೆ ಮಾತನಾಡಲು ಅವಕಾಶ ನೀಡಿ. ಇದು ಬರೆ ನಮ್ಮಲ್ಲಿ ಮಾತ್ರವಲ್ಲ ನಗರದ ಎಲ್ಲ ಕಡೆ ಹರಡುತ್ತಾ ಇದೆ. ಬೇಕಾದ್ರೆ ಮೆಹತಾ ಅವರನ್ನೇ ಕೇಳಿ" ಎಂದ. ಮಂತ್ರಿ " ಅದಕ್ಕೆ? ನೀನು ಸೀದಾ ಹೋಗಿ ಟೀವಿಯವರನ್ನು ಕರಕೊಂಬಂದು ಎಲ್ಲ ತೋರಿಸಿ ಬಿಡೋದೇ? ಸ್ವಲ್ಪಾನು ಜವಾಬ್ದಾರಿ ಇಲ್ವ ನಿನಗೆ. ಇದೀಗ ನ್ಯಾಶನಲ್ ಇಶ್ಯೂ ಆಗ್ಬಿಡುತ್ತೆ. ಎಲ್ಲ ಕಡೆ ಹರಡ್ತಾ ಇದೆ ಅಂದ್ರೆ ಪಬ್ಲಿಕ್ ಪ್ಯಾನಿಕ್ ಅಗ್ಬಿಡಲ್ವೇನ್ರಿ. ಅಷ್ಟೂ ಕಾಮನ್ ಸೆನ್ಸ್ ಇಲ್ವಾ ನಿಮಗೆ. ಇಲೆಕ್ಷನ್ ಬೇರೆ ಬರ್ತಾ ಇದೆ. ಎಲ್ಲ ಕಡೆಯಿಂದ ನಾನೀಗ ಮ್ಯುಸಿಕ್ ಫೇಸ್ ಮಾಡ್ಬೇಕು." ಎಂದ. ಎಂದ ಅಷ್ಟರಲ್ಲಿ ಮಂತ್ರಿಗಳ ಪಿ.ಎಸ್. ಕ್ಯಾಬಿನೆಟ್ ಮೀಟಿಂಗ್ ಗೆ ತಡವಾಗುತ್ತಿರುವುದನ್ನು ನೆನಪಿಸಿದ. "ನೋಡಿ ನಾವೀಗ ಇದನ್ನು ಪ್ಲೇ ಡೌನ್ ಮಾಡಬೇಕು. ನಿಮ್ಮನ್ನು ಕೂಡಲೇ ಸಸ್ಪೆಂಡ್ ಮಾಡ್ತಾ ಇದೀನಿ. ಇದೆಲ್ಲ ಸ್ವಲ್ಪ್ ಥಂಡಾ ಆದ ಮೇಲೆ ರಿಇನ್ಸ್ಟೇಟ್ ಮಾಡೋಣ" ಎನ್ನುತ್ತ ಹೊರನಡೆದ ಮಂತ್ರಿ. ಸೆಕ್ರೆಟರಿಯೂ ಹಿಂಬಾಲಿಸಿದ.
ಮೆಹತಾ ಇವನತ್ತ ಕನಿಕರದಿಂದ ನೋಡುತ್ತಾ "ನಾನು ಅವತ್ತೆ ನಿಮ್ಗೆ ಚಿಕ್ಕದಾಗಿ ಸೂಚನೆ ಕೊಟ್ಟಿದ್ದೆ. ಇದನ್ನು ಅಫೀಶಿಯಲ್ ಆಗಿ ಹೇಳಕ್ಕಾಗಲ್ಲ ಅಂತ. ನೀವು ಅರ್ಥ ಮಾಡ್ಕೋಬಹುದು ಅಂದ್ಕೊಂಡಿದ್ದೆ. ಸಾರಿ.." ಎಂದು ಹೊರಹೋದ ಬಳಿಕ ಇಡೀ ಛೇಂಬರ್ ನಲ್ಲಿ ಇವನೊಬ್ಬನೆ ಉಳಿದ.
ತನ್ನದಲ್ಲದ ಅಪರಾಧಕ್ಕೆ ಎಲ್ಲರೂ ತನ್ನನ್ನು ಬಲಿಪಶು ಮಾಡುತ್ತಿರುವುದು ಇವನಲ್ಲಿ ಅತೀವ ರೇಜಿಗೆಯನ್ನೂ, ಕ್ರೋಧವನ್ನೂ ಉಂಟುಮಾಡುತ್ತಿತ್ತು. ಸುಮ್ಮನೆ ನೆಲ ನೋಡಿ ಕುಳಿತವನಿಗೆ ಮಂತ್ರಿಯ ಮೇಜಿನ ಕಾಲ ಬುಡದಲ್ಲಿ ಮಗುಮ್ಮಾಗಿ ಅವಚಿಕೊಂಡಿರುವ ಬೇರುಗಳು ಕಣ್ಣಿಗೆ ಬಿದ್ದವು. ಕೆಟ್ಟ ಕುತೂಹಲದಿಂದ ಎದ್ದು ಮಂತ್ರಿ ಕುಳಿತುಕೊಳ್ಳುವ ಖುರ್ಚಿಯ ಬುಡವನ್ನೊಮ್ಮೆ ಇಣುಕಿದ. ಬಲಿಷ್ಟವಾದ ಬಳ್ಳಿಗಳಂತಹ ನಸುಗಂದು ಬಣ್ಣದ ಬೇರುಗಳು ಗಾಲಿಗಳಿರುವ ಖುರ್ಚಿಯ ಬುಡವನ್ನು ಆತುಕೊಂಡಿದ್ದವು.