ಫೆಬ್ರವರಿ 3, 2011

ಒಂದು ಹೆಸರಿಲ್ಲದ ಕೊಂಕಣಿ ಕವಿತೆ


ಮನೆಯೊಳಗೆ ಬರೀ ಮನುಷ್ಯರಷ್ಟೇ ಅಲ್ಲ
ನಾಯಿ ಬೆಕ್ಕುಗಳೂ ಬೇಕು
ಅವಿಲ್ಲದೇ ಮನೆ ಮನೆಯಾಗುವುದಿಲ್ಲ


ಮನೆಯೊಳಗೆ ಇಲಿ ಇರಬೇಕು
ಮನೆಯೊಳಗೆ ಜಿರಲೆಗಳೂ ಬೇಕು
ಮನೆಯೊಳಗೆ ಬೇಕು ಹಲ್ಲಿ
ಮನೆಯೊಳಗಿರಬೇಕು ಸೊಳ್ಳೆಗಳು


ಮನೆಗೆ ಆಗಾಗ ಬರುತ್ತಿರಬೇಕು ನೆಂಟರು
ಆಯುಷ್ಯದಲ್ಲಿ ಒಮ್ಮೆಯಾದರೂ
ಮನೆಯೊಳಗೆ ಬರಬೇಕು ಹಾವು
ಹಾಗಾಗದೇ ಮನೆ ಮನೆಯೆನಿಸುವುದಿಲ್ಲ


ಮನೆ ಕೇವಲ ಮನುಷ್ಯನದೇ ಮತ್ತು
ಮನುಷ್ಯನಿಗಾಗಿಯಷ್ಟೇ ಅಲ್ಲ
ಮನೆ ಸರ್ವ ಪ್ರಾಣಿಸಂಕುಲಕ್ಕೆ ಸೇರಿದ್ದು


ನಾನು ವಾಸಿಸುವ ಮನೆಯೊಳಗೆ
ಅವೆಲ್ಲ ಇವೆ.
ನಾನೇ ಇಲ್ಲ!


- ಕಾಶಿನಾಥ್ ಶಾಂಬಾ ಲೋಲಿಯೆಂಕಾರ್


ಎಸ್. ಡಿ. ತೆಂಡುಲ್ಕರ್ ಎನ್ನುವ ಮಹಾನುಭಾವ ಕೊಂಕಣಿ ಕವಿತೆಗಳನ್ನು ಬರೆಯುವುದು ಕಾಶಿನಾಥ್ ಶಾಂಬಾ ಲೋಲಿಯೆಂಕಾರ್ ಎನ್ನುವ ಹೆಸರಿನಲ್ಲಿ.
ವಿಚಿತ್ರ ಸ್ವಭಾವದ ಈ ಕವಿ, ತನ್ನ ಫೋಟೋ ಯಾರಿಗೂ ಕೊಡುವುದಿಲ್ಲ. ಫೋಟೋ ತೆಗೆಯಲೂ ಬಿಡುವುದಿಲ್ಲ. ಪ್ರಶಸ್ತಿಗಳಿಗೆ ಪುಸ್ತಕ ಕಳುಹಿಸುವುದಿಲ್ಲ. ಯಾರಾದರೂ ತಾವಾಗಿಯೇ ಪ್ರಶಸ್ತಿ ನೀಡಿದರೂ ಸ್ವೀಕರಿಸುವುದಿಲ್ಲ. 
ಅವರ ಕವಿತೆಗಳೂ ಅವರಂತೆಯೇ, ಬೇರೇಯೇ ತರದವು. ಇಡೀ ಭಾರತೀಯ ಸಾಹಿತ್ಯದಲ್ಲೇ ಬೇರೆಯೇ ಎನಿಸುವಂತವು.


ಕೃಪೆ: http://www.kavitaa.com/