ಫೆಬ್ರವರಿ 11, 2009

ಮೀಸೆ ಹೊತ್ತ ಮುಖಗಳು

ಫ್ರೆಂಚ್ ಕತೆಗಾರ "ಗಿದ್ ಮೊಪಾಸ್ಸೊಂ" (ಕನ್ನಡಕ್ಕೆ "ಮೊಪಾಸ" ಎಂದು ಪ್ರಸಿದ್ಧ) ಬರೆದ ಕತೆ "ದಿ ಮುಸ್ಟಾಶ್"ನ ಅನುವಾದ.

ಸಾಲ್ಲೆಸ್ ಬಂಗಲೆ
ಜುಲೈ ೩೦, ೧೮೮೩

ಪ್ರೀತಿಯ ಲೂಸಿ,

ವಿಶೇಷ ಸುದ್ದಿಯೇನೂ ಇಲ್ಲ. ಹೊರಗೆ ಸುರಿಯುತ್ತಿರುವ ಮಳೆಯನ್ನು ನೋಡುತ್ತಾ ನಾವು ಡ್ರಾಯಿಂಗ್ ರೂಮ್ ನಲ್ಲೇ ಕಾಲ ಕಳೆಯುತ್ತಿದ್ದೇವೆ. ಈ ಚಿರಿಚಿರಿ ಮಳೆಯಲ್ಲಿ ಹೊರಗೆ ಹೋಗುವುದು ಸಾಧ್ಯವಿಲ್ಲ, ಹಾಗಾಗಿ ಇಲ್ಲೇ ಈ ನಾಟಕದ ಪ್ರಾಕ್ಟೀಸು ಶುರು ಹಚ್ಚಿದ್ದೇವೆ. ಎಂಥ ತಲೆಹರಟೆ ಮಾರಾಯ್ತಿ, ಜೀವನವೇ ಬಯಲಾಟ ಆಗಿರುವಾಗ ಈ ಜಗಲಿ ನಾಟಕ ಬೇರೆ ಕೇಡು. ಎಲ್ಲ ಬಲವಂತದ ಮಾಘಸ್ನಾನ. ಆ ಜೋಕುಗಳೋ, ಒಂದಕ್ಕೂ ನಗು ಬರುವುದಿಲ್ಲ. ಎಲ್ಲ ಕೃತಕ, ಖುಷಿ ಕೊಡದ, ಕಾಡು ಹರಟೆಗಳು. ನಿಜಕ್ಕೂ ಹೇಳಬೇಕೆಂದರೆ ಈ ಸಾಹಿತಿಗಳಿಗೆ ಸಮಾಜದ ಬಗ್ಗೆ ಎಂತದೂ ಗೊತ್ತಿಲ್ಲ. ನಮ್ಮ ನಾಟಕಕ್ಕೆ ಬೇಕಾದ ಪಾತ್ರಗಳು ಹೇಗೆ ಯೋಚಿಸಬೇಕು ಮತ್ತು ಮಾತನಾಡಬೇಕು ಅನ್ನೋ ವಿಷಯಾನೇ ಇವರಿಗೆ ಗೊತ್ತಿಲ್ಲ. ಇವರಿಗೆ ನಮ್ಮ ರೀತಿ ರಿವಾಜುಗಳ ಮೇಲೆ ಗೌರವ ಇರಬೇಕಂತಿಲ್ಲ, ಅವು ಏನು ಅಂತಲೇ ತಿಳಿದಿಲ್ಲ ಅಂದ್ರೆ ನನಗೆ ಸಹಿಸಲು ಸಾಧ್ಯ ಇಲ್ಲ. ತಮಾಷೆ ಮಾಡಬೇಕು ಅಂತ ಅನಿಸಿದರೆ ಒರಟು ಸಿಪಾಯಿಗಳು ಮಾಡ್ತಾರಲ್ಲ ಆ ತರ, ಇನ್ನು ಅವರುಗಳು ಹೇಳೋ ಜೋಕುಗಳು ಕೂಡ ೫೦ ವರ್ಷ ಹಳೆಯವು.

ಇರಲಿ, ನಾವು ನಾಟಕ ಪ್ರಾಕ್ಟೀಸ್ ಮಾಡ್ತಿದ್ದೇವೆ. ನಮ್ಮಲ್ಲಿ ನಾವು ಇಬ್ಬರೇ ಹೆಂಗಸರು ಇರುವುದರಿಂದ ನನ್ನ ಗಂಡನಿಗೆ ಕೂಡ ಒಂದು ಹೆಣ್ಣು ಪಾತ್ರ. ಹಾಗಾಗಿ ಮೀಸೆ ಬೋಳಿಸಿಕೊಂಡಿದ್ದಾರೆ. ಹೇಗೆ ಕಾಣ್ತಾರೆ ಅಂತ ನಿನಗೆ ಯೋಚಿಸ್ಲಿಕ್ಕೆ ಸಾಧ್ಯ ಇಲ್ಲ ಲೂಸೀ... ಮಾರಾಯ್ತಿ... ನನಗೇ ಗುರ್ತ ಸಿಗ್ತಾ ಇಲ್ಲ ಅಂತೀನಿ. ಅವರು ಮತ್ತೆ ಮೀಸೆ ಬೆಳೆಸದಿದ್ದರೆ ನನಗೆ ಅವರ ಮೇಲೆ ಪ್ರೀತಿ ಕೂಡ ಹೊರಟು ಹೋಗಬಹುದು. ಅಷ್ಟು ಅಸಹ್ಯ ಕಾಣ್ತಾರೆ.

ಇನ್ ಫ್ಯಾಕ್ಟ್, ಮೀಸೆ ಇಲ್ಲದ ಗಂಡಸು ಗಂಡಸೇ ಅಲ್ಲ. ಗಡ್ಡ ಬಿಡುವ ವಿಷಯದಲ್ಲಿ ನನಗೆ ಅಷ್ಟೊಂದು ಒಪ್ಪಿಗೆ ಇಲ್ಲ, ಅದೊಂಥರಾ ಅಶಿಸ್ತು. ಆದರೆ ಮೀಸೆ... ಛೆ... ಗಂಡು ಕಳೆಯ ಮುಖಕ್ಕೊಂದು ಮೀಸೆ ಬೇಕೆ ಬೇಕು. ಗಂಡಸರ ಮೇಲ್ದುಟಿಯ ಮೇಲೆ ಒಂದು ಸಾಲು ಕುಚ್ಚು ಕೂದಲುಗಳು ಅದೆಷ್ಟು ಚಂದ, ಬಹಳ ಉಪಕಾರಿ ಕೂಡ. ಇದರ ಬಗ್ಗೆ ನಾನು ಬಹಳ ಚಿಂತನೆ ಮಾಡಿದ್ದೇನೆ ಆದರೆ ಬರೆಯುವ ಧೈರ್ಯ ಮಾಡಿರಲಿಲ್ಲ. ಕಾಗದದ ಮೇಲೆ ಶಬ್ದಗಳು ಒಂಥರಾ ಬೇರೆಯೇ ಅರ್ಥ ಮೂಡಿಸುತ್ತವೆ. ಈ ವಿಷಯವನ್ನು ಬರೆಯುವುದು ಅಷ್ಟು ಸುಲಭವಲ್ಲ, ಬಹಳ ಜಾಗ್ರತೆಯಿಂದ, ನಾಜೂಕಾಗಿ ಬರೆಯುವ ಕಲೆ ತಿಳಿದಿರಬೇಕು.

ಹೀಗೆ ನನ್ನ ಗಂಡ ಸ್ಟೇಜಿಗೆ ಬಂದಾಗ, ಒಂದೇ ಸಲಕ್ಕೆ ನನಗೆ ಅರಿವಾಯಿತು. ಅವನು ಬೇಕಾದರೆ ನಟ ಆಗಿರಲಿ, ಇಲ್ಲವೇ ಫಾದರ್ ಡಿಲ್ದಾನ್ ನಂತಹ ಎಲ್ಲರಿಗಿಂತ ಚಾರ್ಮಿಂಗ್ ಆದ ಪಾದರಿಯೇ ಆಗಿರಲಿ, ನನಗೆ ಅವನ ಮೇಲೆ ಪ್ರೀತಿ ಉಕ್ಕಲು ಸಾಧ್ಯವೇ ಇಲ್ಲ. ಬಳಿಕ ನಾವಿಬ್ಬರೇ (ನಾನು ಮತ್ತು ನನ್ನ ಗಂಡ) ಇರುವಾಗಲಂತೂ... ಅದಕ್ಕಿಂತ ಕಡೆ. ಲೂಸೀ.. ಮಾರಾಯ್ತೀ.. ಮೀಸೆ ಇಲ್ಲದ ಗಂಡಸರು ನಿನಗೆ ಮುತ್ತು ಕೊಡಲು ಬಂದರೆ ಬಿಡಬೇಡ.. ಆಯ್ತಾ?. ಅವರ ಮುತ್ತುಗಳಿಗೆ ಸ್ವಾದವೂ ಇಲ್ಲ ಮಣ್ಣೂ ಇಲ್ಲ. ಅವುಗಳಿಗೆ ಒಂದು ಮಜಾನೂ ಇಲ್ಲ, ಸವಿಯೂ ಇಲ್ಲ. ಒಂದು ನಿಜವಾದ ಮುತ್ತಿನ ಬಿಗಿಯೂ ಅದಕ್ಕಿಲ್ಲ. ಮುತ್ತಿನ ರುಚಿ ಇರುವುದು ಮೀಸೆಯಲ್ಲೇ.

ಒಂದು ಒಣಕಲು ಅಥವಾ ಒದ್ದೆ ರಟ್ಟಿನ ತುಂಡನ್ನು ನಿನ್ನ ತುಟಿಗಳಿಗೆ ಸವರಿದ ಹಾಗೆ ಕಲ್ಪಿಸಿಕೋ. ಮೀಸೆ ಇಲ್ಲದ ಗಂಡಿನ ಮುತ್ತು ಹಾಗೇ ಇರುತ್ತೆ. ಅದರಿಂದ ಯಾವ ಪ್ರಯೋಜನವೂ ಇಲ್ಲ.

ಈ ಮೀಸೆಯ ಮಜಾ ಸಿಗುವುದು ಯಾವಾಗ ಗೊತ್ತ? ನಾನೇ ಹೇಳ್ತೇನೆ ಕೇಳು. ಅದು ನಿನ್ನ ಮುಖಕ್ಕೆ ಕಚಗುಳಿ ಇಡುತ್ತಾ ನಿನ್ನ ತುಟಿಗಳತ್ತ ಸರಿಯುತ್ತಿರುವುದು ನಿನಗೆ ಅರಿವಾದಾಗ ನಿನ್ನ ಮೈಯೆಲ್ಲಾ ಒಂಥರಾ ಸಣ್ಣಗೆ ನಡುಕ ಹುಟ್ಟುತ್ತೆ.

ಆಮೇಲೆ ನಿನ್ನ ಕೊರಳಿನ ಮೇಲೆ.... ನಿನ್ನ ಕೊರಳಿನ ಮೇಲೆ ಮೀಸೆ ಹರಿದಾಡಿ ಅನುಭವ ಇದೆಯಾ ನಿನಗೆ ?. ಒಂಥರಾ ನಶೆ ಹುಟ್ಟಿಸುತ್ತೆ. ಒಮ್ಮೆಲೇ ಪುಳಕ ಹುಟ್ಟಿ ಕಾಲ್ಬೆರಳ ತುದಿವರೆಗೆ ಹಬ್ಬುತ್ತೆ. ಆವಾಗ ನೀನು ಕೊಸರಾಡುತ್ತಿ, ಮೈಯೆಲ್ಲಾ ಅದುರಿಸಿ, ತಲೆಯನ್ನು ಹಿಂದಕ್ಕೆ ಚೆಲ್ಲಿ, ತಪ್ಪಿಸಿಕೊಂಡು ಓಡಿ ಬಿಡೋಣ ಅಂತಾನೂ ಜೊತೆ ಜೊತೆಗೆ ಅಲ್ಲೇ ಇರೋಣಾ ಅಂತಾನೂ ಅನ್ನಿಸುತ್ತೆ. ಅಷ್ಟು ಖುಷಿಯಾಗುತ್ತೆ, ಕಿರಿಕಿರಿನೂ ಆಗುತ್ತೆ. ಅಬ್ಬಾ! ಎಂಥ ಅನುಭವ ಅದು.

ಮೀಸೆ ಇಲ್ಲದ ತುಟಿ ಅಂದರೆ ಉಡುಪು ತೊಡದ ದೇಹದಂತೆ. ಬಟ್ಟೆ ತೊಡಲೇಬೇಕು, ಚೂರು ಪಾರು ಆದರೂ ಸರಿ, ಉಡುಪು ತೊಡದಿದ್ದರೆ ಮರ್ಯಾದೆ ಇಲ್ಲ.

ನಂಗೊಂದು ವಾಕ್ಯ (ಒಬ್ಬ ರಾಜಕಾರಣಿಯ ಹೇಳಿಕೆ ಅದು) ನೆನಪಾಗುತ್ತಿದೆ. ನನ್ನ ತಲೆಯೊಳಗೆ ಅದು ಸುಮಾರು ಮೂರು ತಿಂಗಳುಗಳಿಂದ ಸುತ್ತುತ್ತಿದೆ. ನನ್ನ ಗಂಡ, ಪೇಪರ್ ಓದ್ತಾರಲ್ಲ, ಮೊನ್ನೆ ಒಂದು ಸಲ, ನಮ್ಮ ಕೃಷಿ ಮಂತ್ರಿ ಮಿಸ್ಟರ್ ಮೇಲಿನ್ ಅಂತ, ಈಗ ಅವರೇ ಇದ್ದಾರೋ ಬದಲಾಗಿದ್ದಾರೋ ಗೊತ್ತಿಲ್ಲ, ಇರಲಿ, ಅವರ ಭಾಷಣ ಒಂದನ್ನು ಹಾಗೇ ಓದಿ ಹೇಳ್ತಾ ಇದ್ರು.

ನಾನು ಆ ಕಡೆ ಕಿವಿ ಕೊಡ್ತಾ ಇರಲಿಲ್ಲ. ಆದರೆ ಆ ಮೇಲಿನ್ ಅಂತ ಹೆಸರು ನನಗೆ ಕುತೂಹಲ ಮೂಡಿಸಿತು. ಅದು ಯಾರೋ ಕೃಷಿ ಕಾರ್ಮಿಕರ ಬಗ್ಗೆಯೋ ಅಥವಾ ಇನ್ನೆಂತದೋ.. ನೋಡು ನನಗೆ ಅದರಲ್ಲಿ ತಲೆಗೆ ಹೊಕ್ಕಿದ್ದೆಷ್ಟು ಅಂತ ನಿನಗೀಗ ಅರ್ಥ ಆಗಿರಬಹುದು. ಈ ಮಿಸ್ಟರ್ ಮೇಲಿನ್ ಆ ಅಮೆನ್ಸಿನ ಜನರನ್ನು ಉದ್ದೇಶಿಸಿಯೋ ಅಥಾವ ಬೇರೆ ಯಾರನ್ನೋ...., "ಕೃಷಿಯ ವಿನಾ ದೇಶಭಕ್ತಿಯಿಲ್ಲ" ಅಂತ ಅಂದರಪ್ಪ. ನಾನು ಆವತ್ತಿನಿಂದ ಹಾಗೆಂದರೇನು ಅಂತ ಯೋಚನೆ ಮಾಡುತ್ತಿದ್ದೆ. ನೋಡು, ನಂಗೆ ಅದು ಈಗ ಅರ್ಥ ಆಯ್ತು ನೋಡು. ಹಾಗಾಗಿ ನಾನು ಹೇಳುವುದೇನೆಂದರೆ "ಮೀಸೆಯ ವಿನಾ ಪ್ರೇಮವಿಲ್ಲ" ಹಾಗೇ ಹೇಳುವಾಗ ಒಂಥರಾ ತಮಾಷೆಯಾಗಿದೆ ಅಲ್ವ?

"ಮೀಸೆಯ ವಿನಾ ಪ್ರೇಮವಿಲ್ಲ."

"ಕೃಷಿಯ ವಿನಾ ದೇಶಭಕ್ತಿಯಿಲ್ಲ" ಅಂತ ಹೇಳಿದರು ಆ ಮೇಲಿನ್. ಆ ಮಂತ್ರಿ ಹೇಳಿದ್ದು ಸರಿ. ನಂಗೆ ಈಗ ತಿಳಿತಾ ಇದೆ.

ಇನ್ನೊಂದು ದೃಷ್ಟಿಯಿಂದ ಮೀಸೆ ಅತ್ಯಗತ್ಯ. ಅದು ಮುಖಕ್ಕೊಂದು ವ್ಯಕ್ತಿತ್ವವನ್ನು ಕಲ್ಪಿಸುತ್ತದೆ. ಒಬ್ಬ ಗಂಡಸು ಸ್ವಾಭಿಮಾನಿ, ಮೃದು ಹೃದಯಿ, ದಯಾಮಯ, ಉಗ್ರ, ರಾಕ್ಷಸ ಅಥವಾ ಕ್ರಿಯಾಶೀಲ ಅಂತ ಕಾಣುವ ಹಾಗೇ ಅದು ಮಾಡುತ್ತೆ. ಒಬ್ಬ ತುಂಬು ಗಡ್ಡದ ಗಂಡಸು ಸುಸಂಸ್ಕೃತನ ಹಾಗೇ ಕಾಣಲು ಸಾಧ್ಯವೇ ಇಲ್ಲ, ಯಾಕೆಂದರೆ ಅವನ ಚಹರೆಯನ್ನೆಲ್ಲ ಆ ಕೂದಲು ಅಡಗಿಸಿಬಿಡುತ್ತೆ. ಅವನ ದವಡೆ ಮತ್ತು ಗಲ್ಲ ಅಡಗಿಕೊಂಡು, ಮುಖಭಾವವನ್ನು ಓದಬಲ್ಲವರಿಂದ ಬಹಳಷ್ಟು ಸುಳುಹುಗಳನ್ನು ಮರೆ ಮಾಚುತ್ತೆ.

ಆದರೆ ಮೀಸೆ ಮಾತ್ರ ಇರುವ ಗಂಡಸು ತನ್ನ ಮುಖ ಭಾವಗಳನ್ನೂ, ಸಭ್ಯತನವನ್ನೂ ಸ್ಪಷ್ಟವಾಗಿ ತೋರ್ಪಡಿಸಲು ಸಾಧ್ಯ.

ಇನ್ನು ಅದೆಷ್ಟು ಬಗೆಯ ಮೀಸೆಗಳು. ತುಂಟ ಮೀಸೆ, ತಿರುಚು ಮೀಸೆ, ಗುಂಗುರು ಮೀಸೆ ಮುಂತಾದ ಹೆಂಗಳೆಯರು ಇಷ್ಟ ಪಡುವ ಮೀಸೆಗಳು.

ಮತ್ತೆ ಕೆಲವು ನೇರ ಸೂಜಿ ಮೊನೆಯಂತೆ ಚೂಪಾದ, ಭಯ ಹುಟ್ಟಿಸುವ ಮೀಸೆಗಳು. ಅವು ಮದಿರೆ, ಯುಧ್ಧ ಮತ್ತು ಕುದುರೆಗಳನ್ನು ಇಷ್ಟಪಡುವವರಿಗೆ ಹೆಚ್ಚು ಸಲ್ಲುತ್ತವೆ.

ಇನ್ನು ಕೆಲವೊಮ್ಮೆ, ಅಗಾಧ, ಜೋತುಬಿದ್ದ, ಭಯಾನಕ ಮೀಸೆಗಳು... ಅವನ್ನು ಹೊತ್ತವರ ನಿಜ ಭಾವನೆಗಳನ್ನು ಅಡಗಿಸಿಡುತ್ತ, ಕೈಲಾಗತನವನ್ನು ಕರುಣೆ ಎಂಬಂತೆ, ಅಳುಕನ್ನು ಸೌಜನ್ಯ ಎಂಬಂತೆ ತೋರಿಸುತ್ತವೆ.

ಎಲ್ಲಕ್ಕಿಂತ ಹೆಚ್ಚು ನನಗೆ ಮೀಸೆ ಇಷ್ಟ ಆಗುವುದು ಅದು ಫ್ರೆಂಚ್ ಎಂಬ ಕಾರಣಕ್ಕೆ. ಅಪ್ಪಟ ಫ್ರೆಂಚ್. ನಮ್ಮ ಪೂರ್ವಜರಾದ ಗೌಲ್ ಗಳಿಂದ ಹಿಡಿದು ಇಂದಿನವರೆಗೆ ಮೀಸೆ ನಮ್ಮ ರಾಷ್ಟ್ರೀಯ ವ್ಯಕಿತ್ವದ ಲಾಂಛನದಂತೆ ಉಳಿದು ಬಂದಿದೆ.

ಅದು ನಮ್ಮ ಹೆಮ್ಮೆಯ, ಧೀರತೆಯ, ಶೌರ್ಯದ ಪ್ರತೀಕ. ಅದು ಎಷ್ಟು ಚೆನ್ನಾಗಿ ಮದ್ಯ ಹೀರುತ್ತೆ ಮತ್ತು ನಗುವಾಗ ಕೂಡ ಬಹಳ ಸೊಗಸಾಗಿ ಕಾಣುತ್ತೆ. ಆ ಗಡ್ಡದ ಗಲ್ಲಗಳೆಲ್ಲ ಏನು ಮಾಡಿದರೂ ಅಸಹ್ಯವೇ.

ಇದೆಲ್ಲ ಹೇಳುತ್ತಿದ್ದಂತೆ ನನಗೊಂದು ಘಟನೆ ನೆನಪಾಗುತ್ತಿದೆ. ಆ ಘಟನೆಯಿಂದಾಗಿ ತುಂಬ ಅತ್ತಿದ್ದೆ ನಾನು. ಅದಲ್ಲದೆ -ನೋಡು ನನಗೆ ಈಗ ಹೊಳೆಯಿತು- ಆ ಘಟನೆಯ ಬಳಿಕವೆ ಮೀಸೆ ಇರುವ ಗಂಡಸಿನ ಮುಖವನ್ನು ನಾನು ಬಹಳ ಇಷ್ಟ ಪಡಲು ತೊಡಗಿದ್ದು

ಆಗ ಯುದ್ಧದ ಕಾಲ. ನಾನು ಇನ್ನೂ ಸಣ್ಣ ಹುಡುಗಿ. ತಂದೆಯ ಕೋಟೆಯಂತ ಬಂಗಲೆಯಲ್ಲಿದ್ದೆ. ನಮ್ಮ ಬಂಗಲೆಯ ಬಳಿ ಗಲಾಟೆ ಶುರು ಆಗಿತ್ತು. ಬೆಳಗಿನಿಂದ ಒಂದೇ ಸಮನೆ ತೋಪು ಸಿಡಿದ ಸದ್ದು ಮತ್ತು ಹಲವು ಸುತ್ತು ತುಪಾಕಿ ಸಿಡಿದ ಸದ್ದು. ಆ ಸಂಜೆ ನಮ್ಮ ಮನೆಗೆ ಒಬ್ಬ ಜರ್ಮನ್ ಕರ್ನಲ್ ಉಳಕೊಳ್ಳಲು ಬಂದ. ರಾತ್ರಿ ಇದ್ದು ಮರುದಿನ ಬೆಳಿಗ್ಗೆ ಹೊರಟು ಹೋದ.

ಅಲ್ಲೆಲ್ಲಾ ಹಲವಾರು ಹೆಣಗಳು ಹರಡಿ ಬಿದ್ದಿದ್ದಾವೆ ಅಂತ ತಂದೆಯವರಿಗೆ ಸುದ್ದಿ ಬಂತು. ತಂದೆ ಕೂಡಲೇ ಆ ಹೆಣಗಳನ್ನು ಒಟ್ಟಿಗೆ ಹುಗಿಯುವ ಏರ್ಪಾಡು ಮಾಡಲು ನಮ್ಮಲ್ಲಿಗೆ ತರಿಸಿದರು. ನಮ್ಮ ಆ ಕೋಟೆಯಂತ ಬಂಗಲೆಗೆ ಬರಲು ಇಕ್ಕೆಲಗಳಲ್ಲಿಯೂ ಸಾಲು ಮರಗಳಿರುವ ನೇರವಾದ ರಸ್ತೆಯಿದೆ. ಈ ರಸ್ತೆಯ ಇಕ್ಕೆಲಗಳಲ್ಲಿ ಆ ಹೆಣಗಳನ್ನು ತಂದು ಸಾಲಾಗಿ ಮಲಗಿಸಲಾಯಿತು. ಅವುಗಳನ್ನು ಹುಗಿಯಲು ದೊಡ್ಡದೊಂದು ಹೊಂಡ ತೊಡುವ ಕೆಲಸ ಇನ್ನೊಂದು ಕಡೆ ನಡೆಯುತ್ತಿತ್ತು. ಆ ಕೆಲಸ ಇನ್ನೂ ಮುಗಿದಿರಲಿಲ್ಲ. ಅಷ್ಟರಲ್ಲಿ ಈ ಹೆಣಗಳೆಲ್ಲ ವಾಸನೆ ಬೀರಲು ತೊಡಗಿದ್ದರಿಂದ ಅವುಗಳನ್ನು ತಲೆ ಮಾತ್ರ ಹೊರಗೆ ಕಾಣುವಂತೆ ಬಿಟ್ಟು ಮಲಗಿಸಿದ್ದಲ್ಲೇ ಮಣ್ಣು ಮುಚ್ಚಿದ್ದರು.

ಆ ಆವೆ ಮಣ್ಣು ಮುಚ್ಚಿದ ದೇಹಗಳಿಂದ ತಲೆಗಳಷ್ಟೇ ಹೊರಗೆ ಬಂದು ಕಣ್ಣು ಮುಚ್ಚಿರುವ ಆ ಮುಖಗಳೆಲ್ಲ ಮಣ್ಣಿನ ಬಣ್ಣಕ್ಕೆ ತಿರುಗಿದ್ದವು.

ನನಗೆ ಅವನ್ನು ನೋಡಬೇಕೆಂದು ಅನಿಸಿ ಅಲ್ಲಿಗೆ ಹೋಗಿದ್ದೆ. ಆ ಎರಡು ಸಾಲು ಭಯಾನಕ ಮುಖಗಳನ್ನು ನೋಡಿ ನಾನು ಬವಳಿ ಬೀಳುವುದೊಂದೇ ಬಾಕಿ. ಆದರೂ ಒಂದೊಂದಾಗಿ ಆ ಮುಖಗಳನ್ನು ಗಮನಿಸುತ್ತಾ ಅವರು ಯಾವ ತರದ ವ್ಯಕ್ತಿಗಳಾಗಿರಬಹುದು ಎಂದು ಊಹಿಸಲು ಯತ್ನಿಸುತ್ತಿದ್ದೆ.

ಅವರ ಸಮವಸ್ತ್ರಗಳು ಮಣ್ಣಿನಡಿಯಲ್ಲಿ ಮುಚ್ಚಿ ಹೋಗಿದ್ದವು. ಆದರೂ ಕೂಡಲೇ .. ಆ ಕೂಡಲೇ.. ನಾನು ಫ್ರೆಂಚ್ ಮುಖಗಳನ್ನು ಗುರುತಿಸಿದ್ದು ಅವರ ಮೀಸೆಯಿಂದಲೇ.

ಕೆಲವರೆಲ್ಲ ಯುದ್ಧದ ದಿನವಷ್ಟೇ ಶೇವ್ ಮಾಡಿರಬೇಕು, ಕೊನೆಯವರೆಗೂ ಶಿಸ್ತಾಗಿರೋಣ ಎನ್ನುವಂತೆ. ಇನ್ನು ಕೆಲವು ಮುಖಗಳ ಮೇಲೆ ಒಂದು ವಾರದ ಕುರುಚಲು ಗಡ್ಡ. ಆದರೆ ಅವರೆಲ್ಲರಿಗೂ ನೀಟಾದ ಫ್ರೆಂಚ್ ಮೀಸೆ ಇತ್ತು. ಆ ಮೀಸೆ ನನಗೆ ಹೀಗೆ ಹೇಳುತ್ತಿರುವಂತೆ ಭಾಸವಾಯಿತು "ನನ್ನನ್ನು ಈ ಗಡ್ದಗಳ ಜೊತೆ ಹೋಲಿಸಬೇಡ ಮರಿ, ನಾನು ಫ್ರಾನ್ಸ್ ತಾಯಿಯ ಮಗ "

ಅಷ್ಟೇ! ನಾನು ಅತ್ತೇ ಬಿಟ್ಟೆ. ಆ ಬಡಪಾಯಿ ಸತ್ತ ಗಂಡಸರನ್ನು ನಾನು ಗುರುತಿಸದೆ ಇರುತ್ತಿದ್ದಲ್ಲಿ ಅಷ್ಟು ಅಳುತ್ತಿರಲಿಲ್ಲವೇನೋ.

ಛೆ ನಾನು ಇದನ್ನೆಲ್ಲಾ ನಿನಗೆ ಹೇಳಬಾರದಿತ್ತು. ಇನ್ನು ಬರೆಯುವ ಮೂಡೇ ಹೊರಟು ಹೋಯಿತು.

ಸರಿ. ಗುಡ್ ಬೈ, ಪ್ರಿಯ ಲೂಸಿ, ನಿನಗೊಂದು ಪ್ರೀತಿಯ ಕಿಸ್ ಕಳುಹಿಸುತ್ತಿದ್ದೇನೆ.
ಮೀಸೆ ಚಿರಾಯುವಾಗಲಿ.

ಜೀನ್.

4 comments:

ಅನಾಮಧೇಯ ಹೇಳಿದರು...

ನಿಮ್ಮ ಎಲ್ಲಮ್ಮನ ಹಾಡು ಇಲ್ಲಿ ಹಾಕಿ...

ಅನಿವಾಸಿ ಓದಲು ಹೇಳಿಹರು... ಒಮ್ಮೆ ಓದಿದೆ.. ಚನ್ನಾಗಿದೆ.

ಪುರುಷೋತ್ತಮ ಬಿಳಿಮಲೆ ಹೇಳಿದರು...

ನಾನು ಮತ್ತೆ ಮೀಸೆ ಬಿಡುವ ಆಲೋಚನೆಯಲ್ಲಿ ಇದ್ದೇನೆ. ಎಷ್ಟೊಂದು ಸರಳ ಸುಂದರ ಕತೆ! ಅನುವಾದ ಚೆನ್ನಾಗಿದೆ. ಕತೆ ಬರೆಯಲು ನಿನಗೆ ಇನ್ನೇನ ಬೇಕ? ಮುಖದ ಮೀಸೆ ಸಾಕಾ?

suragi \ ushakattemane ಹೇಳಿದರು...

ನನ್ನ ಗೆಳೆಯ ಪೋನಿನಲ್ಲಿ ಇಷ್ಟವಾಗುತ್ತಾನೆ.ಎದುರಿಗೆ ಬಂದರೆ ಕಿರಿಕಿರಿಯಾಗುತ್ತದೆ.ಯಾಕೆಂದು ಈಗ ಅರ್ಥವಾಯ್ತು.ಥ್ಯಾಂಕ್ಸ್ ಗುರು!

Unknown ಹೇಳಿದರು...

ಮಾಯ್ಸ,
ಎಲ್ಲಮ್ಮನ ಹಾಡು ಪೂರ್ತಿ ಚರ್ಚೆಯ ಜೊತೆಗೆ ಹಾಕುತ್ತೇನೆ. :-)

ಬಿಳಿಮಲೆ,
ಸರ್ ನಿಮ್ಮ ಮೀಸೆ ನಿಮ್ಮನ್ನು ಮತ್ತೆ ಹೋರಾಟದ ದಿನಗಳಿಗೆ ಒಯ್ಯಬಹುದೇ ? ನಿಮ್ಮ ಹಳೆಯ "ಶಿಷ್ಟ ಪರಿಶಿಷ್ಟ" ಪುಸ್ತಕದಲ್ಲಿ ಇರುವ ನಿಮ್ಮ ಫೋಟೋದಲ್ಲಿ ಮೀಸೆ ಕಂಡ ನೆನಪು.

ಸುರಗಿ,
ದೆಹಲಿಯಲ್ಲಿ ಮೀಸೆ ಇಲ್ಲದ ಮುಖಗಳೇ ಹೆಚ್ಚು. ಹಾಗಾಗಿ ಕೆಲವೊಮ್ಮೆ ನನಗೂ ಮೀಸೆ ಇಲ್ಲವೇನೋ ಎಂದೂ ಭ್ರಮೆಯಾಗುವುದು ಉಂಟು. :-)

ಕಾಮೆಂಟ್‌‌ ಪೋಸ್ಟ್‌ ಮಾಡಿ