ಮೇ 21, 2009

ಕರ್ನಾಟಕದ ನಗರೇಶ್ವರ ದೇವಸ್ಥಾನಗಳು

ದಕ್ಷಿಣ ಭಾರತದ ಮಧ್ಯಯುಗದ ಶಿಲಾಶಾಸನಗಳಲ್ಲಿ ನಕರ, ನಖರ, ನಗರಮ್, ನಖರಮು, ನಕರದವರು, ನಖರರು, ನಗರಟ್ಟರ್, ನಕರಟ್ಟಾರ್ ಎಂಬ ಹೆಸರುಗಳ ಉಲ್ಲೇಖಗಳು ದೊರಕುತ್ತವೆ.

ಸುಮಾರು ಎಂಟನೇ ಶತಮಾನದ ಬಳಿಕ ಸಮಾಜ ವ್ಯವಸ್ಥೆಯಲ್ಲಿ ಉಂಟಾದ ಬೆಳವಣಿಗೆಯಲ್ಲಿ ನಾಡು, ಗ್ರಾಮ, ನಗರ, ಮಹಾನಗರ ಎಂಬ ಶ್ರೇಣಿಕೃತ ಕೇಂದ್ರಗಳು ನಿರ್ಮಾಣವಾಗಿರುವ ಬಗೆಯನ್ನು ಇತಿಹಾಸಕಾರರು ವಿವರಿಸುತ್ತಾರೆ. ಒಂಬತ್ತನೇ ಶತಮಾನಕ್ಕೂ ಮೊದಲಿನ ಕೃಷಿ ಆಧಾರಿತ ಆರ್ಥಿಕತೆ ವ್ಯಾಪಕವಾಗಿ ಬೆಳೆಯುತ್ತಿದ್ದಾಗ ನಾಡುಗಳಲ್ಲಿನ ಉತ್ಪಾದನೆ ಮಿಗತೆಯಾಗಿ ಈ ಮಿಗತೆಯ ವಿತರಣೆಯ ಸಲುವಾಗಿ ನಗರ ಎನ್ನುವ ಪರಿಕಲ್ಪನೆ ಉಂಟಾಯಿತು ಎಂದು ಇತಿಹಾಸಕಾರರು ವಿಶ್ಲೇಷಿಸುತ್ತಾರೆ. ನಗರ ಪರಿಕಲ್ಪನೆ ವ್ಯಾಪಕವಾಗಿ ಹರಡಿಕೊಂಡು ನಗರವೆನ್ನುವುದು ಮಾರುಕಟ್ಟೆ ಕೇಂದ್ರಕ್ಕೆ ಪರ್ಯಾಯ ಪದವಾಗಿ ಬಳಕೆಯಾಗತೊಡಗಿತು.

ನಗರ-ನಕರ-ನಖರ ಎಂಬ ಪದ ವ್ಯುತ್ಪತ್ತಿಯನ್ನು ನಾವು ಊಹಿಸಬಹುದಾದರೂ ಶಾಸನಗಳಲ್ಲಿ ಉಲ್ಲೇಖವಾಗಿರುವ ನಕರ ಅಥವಾ ನಖರ ಇಂಥಾ ನಗರವನ್ನಷ್ಟೆ ಪರಿಭಾವಿಸುತ್ತದೆ ಎಂದು ನಾವು ಅರ್ಥೈಸುವುದೂ ಸಮಂಜಸವಾಗದು.

ಇಂತಹ ಒಂದು ಮಾರುಕಟ್ಟೆ ಕೇಂದ್ರದ ಸ್ಥಳೀಯ ವ್ಯಾಪಾರದ ನಿಯಂತ್ರಣ ಸ್ವಾಭಾವಿಕವಾಗಿ ವ್ಯಾಪಾರಿ ಸಮುದಾಯದ ಬಳಿ ಇದ್ದು ಈ ವ್ಯಾಪಾರಿ ಸಮುದಾಯವನ್ನು ನಗರದವರು, ನಗರಟ್ಟಾರ್(ತಮಿಳು) ಎಂದು ಕರೆಯತೊಡಗಿದರು. ಹೀಗೆ ಒಂದು ನಗರದ ಸ್ಥಳೀಯವ್ಯಾಪಾರವನ್ನು ನಿಯಂತ್ರಿಸುವ ವ್ಯಾಪಾರಿಗಳಿಗೆ ನಗರಟ್ಟಾರ್ (ನಗರ್ತ ಪೇಟೆಯು ನಗರಟ್ಟಾರ್ ಪೇಟೆ ಎನ್ನುವುದರ ಒಂದು ರೂಪ) ಎಂದು ತಮಿಳಿನಲ್ಲೂ, ತೆಲುಗು ಮತ್ತು ಕನ್ನಡದಲ್ಲಿ ನಖರರು, ನಖರದವರು, ನಖರದೊಳಗಾದವರು, ನಖರದಲುಳವರು ಎಂಬ ಬಳಕೆಯಾಯಿತು ಎಂಬುದನ್ನು ನಾವು ಊಹಿಸಬಹುದು.

ಇಂತಹ ನಗರವೆನ್ನುವ ಮಾರುಕಟ್ಟೆ ಕೇಂದ್ರದ ಪ್ರಾರಂಭಿಕ ಪರಿಕಲ್ಪನೆ ಬೆಳೆದು ಆ ಕೇಂದ್ರದ ವ್ಯಾಪಾರಿ ಸಮೂಹವನ್ನು ಸಂಭೋಧಿಸುವ ಪದವಾಗಿ ಬಳಕೆಗೊಂಡು ಬಳಿಕದ ಕಾಲಘಟ್ಟದಲ್ಲಿ ನಗರಮ್/ನಕರ/ನಖರಮು/ನಖರ ಎಂಬ ಸಾಂಸ್ಥಿಕ ಸಂಘಟನೆಯಾಗಿ ಮಾರ್ಪಾಡು ಹೊಂದಿ ಪ್ರವಾಸಿ ರೂಪವನ್ನು ಪಡೆದು ಉಳಿದ ಪ್ರಾಂತ್ಯಗಳಿಗೂ ಹಬ್ಬಿರಬೇಕು.

೧೫ನೇ ಶತಮಾನದ ಭಾಸ್ಕರಾಚಾರ್ಯ ವಿರಚಿತ ವೈಶ್ಯಪುರಾಣವು ನಗರಮ್‌ನ ಸದಸ್ಯರು ವೈಶ್ಯಸಮುದಾಯಕ್ಕೊಳಪಟ್ಟಿದ್ದರು ಎಂದು ಸೂಚಿಸುತ್ತದೆ. ಪೆನುಗೊಂಡೆಯನ್ನು ಮೂಲವಾಗಿಸಿರುವ ೧೦೨ ಗೋತ್ರಗಳ ಆರ್ಯವೈಶ್ಯರೆಂದು ಕರೆಯಲ್ಪಡುವ ಕೋಮಟಿ ಸೆಟ್ಟಿಗಳ ಸಮುದಾಯ. ಸೆಟ್ಟಿ, ಸೆಟ್ಟಿಗಾರ್, ಚೆಟ್ಟಿ, ಚಿಟ್ಟಿ, ಚೆಟ್ಟಿಯಾರ್ ಮುಂತಾಗಿ ಕರೆಯಲ್ಪಡುವ ವ್ಯಾಪಾರವನ್ನೇ ತಮ್ಮ ಮೂಲ ಉದ್ಯೋಗವನ್ನಾಗಿಸಿಕೊಂಡ ಈ ಜಾತಿಯ ಜನರು ಆಂಧ್ರಪ್ರದೇಶ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ವ್ಯಾಪಕವಾಗಿ ನೆಲೆಸಿರುವರು.

ಕೆ. ಸುಂದರಮ್ ಅವರು ನಗರಮ್ ಅಥವಾ ನಕರವು ಕೋಮಟಿ ಸೆಟ್ಟಿಗಳ (ಆರ್ಯವೈಶ್ಯ) ಜಾತಿಗೆ ಸೀಮಿತವಾದ ವ್ಯಾಪಾರಿ ಒಕ್ಕೂಟ ಎಂದು ಊಹಿಸುತ್ತಾರೆ. ಇದಕ್ಕೆ ಪೂರಕವಾಗಿ ನಖರದ ಉಲ್ಲೇಖವಿರುವ ಹೆಚ್ಚಿನ ಶಿಲಾಶಾಸನಗಳಲ್ಲಿ ಕಂಡುಬರುವ ನಖರೇಶ್ವರ ದೇವಸ್ಥಾನಗಳು (ನಗರೇಶ್ವರ ಎನ್ನುವುದು ಇನ್ನೊಂದು ರೂಪ) ಇಂದಿಗೂ ಕನ್ನಿಕಾ ಪರಮೇಶ್ವರಿ, ವಾಸವಾಂಬಾ ಮುಂತಾದ ಹೆಸರಿನಿಂದ ಕರೆಯಲ್ಪಡುತ್ತವೆ. ವಾಸವಿ ಮತ್ತು ಕನ್ನಿಕಾ ಪರಮೇಶ್ವರಿಯು ಆರ್ಯವೈಶ್ಯರ ಕುಲದೇವತೆ ಎನ್ನುವುದನ್ನು ಗಮನಿಸಬೇಕು. ಪೆನುಗೊಂಡೆಯ ಪ್ರಖ್ಯಾತ ನಗರೇಶ್ವರ ದೇವಾಲಯದ ಮತ್ತು ನಗರೇಶ್ವರ ಸ್ವಾಮಿಯ ಉಲ್ಲೇಖವು ಆರ್ಯ ವೈಶ್ಯರ ದೇವತೆಯಾದ ವಾಸವಕನ್ಯೆಯ ಮೇಲೆ ರಚಿತವಾಗಿರುವ ಕನ್ಯಕಾಪುರಾಣದಲ್ಲಿ ದೊರೆಯುತ್ತದೆ.

ಕರ್ನಾಟಕದಲ್ಲಿರುವ ಕೆಲವು ನಖರೇಶ್ವರ/ನಗರೇಶ್ವರ ದೇವಸ್ಥಾನಗಳು
೧. ನಗರೇಶ್ವರ ದೇವಸ್ಥಾನ ಅಥವಾ ಅರವತ್ತು ಕಂಭದ ಗುಡಿ ಬಂಕಾಪುರ್, ಹಾವೇರಿ
೨. ನಗರೇಶ್ವರ ಮತ್ತು ಚೆನ್ನಕೇಶವ ದೇವಸ್ಥಾನ, ಮೊಸಳೆ, ಹಾಸನ.
೩. ನಗರೇಶ್ವರ ದೇವಸ್ಥಾನ ಕಾಂಪ್ಲೆಕ್ಸ್, ಹಳೇಬೀಡು
೪. ನಗರೇಶ್ವರ ದೇವಸ್ಥಾನ, ಹೆಡತಲೆ
೫. ನಗರೇಶ್ವರ ದೇವಸ್ಥಾನ, ಮುಲಗುಂದ
೬. ನಕರೇಶ್ವರ ದೇವಸ್ಥಾನ, ಕುಂಟೋಜಿ, ರೋಣ ತಾಲುಕು, ಧಾರವಾಡ ಜಿಲ್ಲೆ
೭. ನಕರೇಶ್ವರ ದೇವಸ್ಥಾನ-ಅಣ್ಣಿಗೆರೆ, ಗದಗ ತಾಲುಕು, ಧಾರವಾಡ ಜಿಲ್ಲೆ
೮. ನಗರೇಶ್ವರ ದೇವಸ್ಥಾನ, ಹುಬ್ಬಳ್ಳಿ
೯. ನಗರೇಶ್ವರ ದೇವಸ್ಥಾನ / (ನಂದನೇಶ್ವರ)- ಪಡುವ ಪಣಂಬೂರು, ದಕ್ಷಿಣ ಕನ್ನಡ
೧೦. ನಖರೇಶ್ವರ ದೆವಸ್ಥಾನ - ಬಸರೂರು, ಉಡುಪಿ ಜಿಲ್ಲೆ.
೧೧. ನಗರೇಶ್ವರ ದೇವಸ್ಥಾನ - ಬಸವೇಶ್ವರ ನಗರ, ಬೆಂಗಳೂರು

ಉಡುಪಿ ಜಿಲ್ಲೆಯ ಬಸರೂರಿನ ನಖರೇಶ್ವರ ದೇವಸ್ಥಾನದ ದೀಪ ಸ್ಥಂಭದ ಚಿತ್ರಗಳನ್ನು ನಿಮ್ಮ ಮುಂದಿಡಲು ಬಯಸುತ್ತೇನೆ. ಈ ದೇವಸ್ಥಾನವು ಸುಮಾರು ಒಂದು ಸಾವಿರ ವರ್ಷಗಳಷ್ಟು ಹಳೆಯದು. ಈ ಲೋಹಸ್ಥಂಭವು ಒಂದು ವಿಶಾಲವಾದ ಆಮೆಯ ಬೆನ್ನ ಮೇಲೆ ನಿಂತಿದೆ.


ಈ ಸ್ಥಂಭದ ವಿಶೇಷವಿರುವುದು ಇದರ ಬುಡಕ್ಕಿಂತ ಕೊಂಚ ಮೇಲೆ ರಚಿಸಲಾಗಿರುವ ಒಂದು ಕಲಾಕೃತಿಯಲ್ಲಿ. ಸುಮಾರು ಹತ್ತು ಅಡಿಗಳ ಎತ್ತರದಲ್ಲಿ ಈ ಸ್ಥಂಭದಲ್ಲಿ ಆನೆಯ ರಚನೆಯು ಕಾಣಸಿಗುತ್ತದೆ.

ದೇವಸ್ಥಾನದ ಮಹಾದ್ವಾರದಿಂದ ಒಳಹೊಕ್ಕು ನಿಂತರೆ ಮೊದಲಿಗೆ ಧ್ವಜಸ್ಥಂಭವೂ ಬಳಿಕ ಆಮೆಯ ಮೇಲೆ ಸ್ಥಾಪಿಸಲಾಗಿರುವ ಈ ದೀಪಸ್ಥಂಭದ ಮೇಲಿನ ಆನೆಯ ಪೃಷ್ಠಭಾಗವೂ ಅದರ ಮೇಲೆ ಕುಳಿತು ಅಂಕುಶ ಪ್ರಯೋಗ ಮಾಡುತ್ತಿರುವ ಮಾಹುತನೂ ಜೊತೆಗೆ ಕೊಂಚ ಮೇಲ್ಭಾಗದಲ್ಲಿ ನಮಸ್ಕಾರ ಭಂಗಿಯಲ್ಲಿ ನಿಂತಿರುವ ಪೇಟ ಧರಿಸಿರುವ ಮಾನವ ಮೂರ್ತಿಯೂ ಕಂಡುಬರುತ್ತದೆ. (ವೈಶ್ಯ ಲಾಂಛನ).


ಈ ಇಡೀ ಭಾಗವು ವಾಸ್ತು ಪರಿಕಲ್ಪನೆಗೂ ಸಾಮಾನ್ಯ ಸಂವೇದನೆಗೂ ಘಾಸಿಯೊಡ್ಡುವ ತರದಲ್ಲಿ ನಿರ್ಮಾಣವಾಗಿರುವ ನಾಲ್ಕು ಕಂಭಗಳ ಮೇಲೆ ಎತ್ತರಿಸಿ ಕಟ್ಟಲಾಗಿರುವ ಕಾಂಕ್ರೀಟು ಕೋಣೆಯ ಹಿಂಭಾಗವೊಂದರಲ್ಲಿ ಹುದುಗಿದೆ.

ಈ ಕೋಣೆಯಲ್ಲೇನಿದೆ ಎಂದು ನೋಡೋಣ. ಈ ಕೋಣೆಗೆ ಪ್ರವೇಶಿಸಲು ದೇವಸ್ಥಾನದ ಗರ್ಭಗೃಹಕ್ಕೆ ಮುಖವಾಗಿಸಿ ಒಂದು ಏಣಿಯನ್ನಿರಿಸಿದ್ದಾರೆ. ಈ ಏಣಿಯನ್ನೇರಿ ನೋಡಿದರೆ ದೀಪಸ್ಥಂಭದ ನಿರ್ಮಿಸಲಾಗಿರುವ ಆನೆಯ ಮುಂದಿನ ಭಾಗವು ಕಾಣಸಿಗುತ್ತದೆ. ಜೊತೆಗೆ ಅದರ ಮೇಲೆ ವಿರಾಜಮಾನವಾಗಿರುವ ಗಣೇಶ ಮೂರ್ತಿಯೂ ಕಂಡು ಬರುತ್ತದೆ.

ಮೂರ್ತಿ ಕಂಡಲ್ಲೆಲ್ಲಾ ಪೂಜೆಗೆ ತವಕಿಸುವ ನಮ್ಮ ಮಂದಿಯ ಆತುರತೆ ಒಂದು ಐತಿಹಾಸಿಕ ಸ್ಮಾರಕವೆನಿಸುವ ಇಂತಹ ಕಲಾಕೃತಿಯನ್ನು ಕಾಂಕ್ರೀಟು ಬಂಧನಗೊಳಿಸಿದ್ದು ನೋಡಿ ವಿಷಾದವಾಯಿತು.

1 comments:

shivu.k ಹೇಳಿದರು...

ಗುರುಬಾಳೀಗ ಸರ್,

ನಗರೇಶ್ವರ ಪದ ಬಂದ ಬಗೆ, ನಗರೇಶ್ವರ ದೇವಾಲಯಗಳು ಇರುವ ಸ್ಥಳಗಳು, ಅದರ ಇತ್ಯಾದಿ ವಿವರಗಳನ್ನು ಸೊಗಸಾದ ಉಪಯುಕ್ತ ಮಾಹಿತಿಯಾಗಿ ಕೊಟ್ಟಿದ್ದೀರಿ...ಮತ್ತು ಫೋಟೋಗಳು ಕೂಡ ಚೆನ್ನಾಗಿವೆ...

ಧನ್ಯವಾದಗಳು...
ಬಿಡುವಾದರೆ ನನ್ನ ಛಾಯಾಕನ್ನಡಿ ಬ್ಲಾಗಿಗೊಮ್ಮೆ ಬೇಟಿಕೊಡಿ..
http://chaayakannadi.blogspot.com/

ಕಾಮೆಂಟ್‌‌ ಪೋಸ್ಟ್‌ ಮಾಡಿ