ಸೆಪ್ಟೆಂಬರ್ 19, 2008

ಜವಾರಲಾಲನ ನಿರ್ವಾಣ

ಹೀಗಿರುವಾಗ ಒಂದು ದಿನ ಎಲ್ಲರಿಂದಲೂ ಕಡೆಗಣಿಸಲ್ಪಟ್ಟು ಪಾರ್ಕಿನ ಬೆಂಚೊಂದರಲ್ಲಿ ಕುಳಿತು ಕಡಲೆಕಾಯಿ ಮೆಲ್ಲುತ್ತಿದ್ದ ಜೆ‌ಎಲ್‌ಗೆ ವಿಚಿತ್ರವಾದ ಅನುಭವ ಉಂಟಾಯಿತು. ಸಿಡಿಯುವ ನರನಾಡಿಗಳೊಂದಿಗೆ ತಲೆಯೊಳಗೆ ಸಡನ್ನಾಗಿ ಗೋಚರಿಸಿದ ಅಗಾಧ ಬೆಳಕು, ಕಿವಿಗಡಚಿಕ್ಕುವ ಸದ್ದಿನೊಂದಿಗೆ ಭಯಂಕರ ವಿಸ್ಪೋಟ, ಬೆವೆತು ಕೈಯೊಳಗಿದ್ದ ಕಡಲೆಕಾಯಿ ಪೊಟ್ಟಣ ಜಾರಿ ಕೆಳಗೆ ಬಿದ್ದಿತ್ತು. ತಲೆಯನ್ನು ಕೈಗಳಿಂದ ಒತ್ತಿ ತೋಳುಗಳಿಂದ ಮುಖ ಮುಚ್ಚಿಕೊಂಡರೂ ಮರೆಯಾಗದ ಕಣ್ಣುಕುಕ್ಕುವಂತಹ ಬೆಳಕು, ವಿಭ್ರಾಂತನಾಗಿ ಅಲ್ಲೇ ಒರಗಿಕೊಂಡ ಜೆ‌ಎಲ್‌ಗೆ ತಿಳಿವಾಗುವಾಗ ಕತ್ತಲಾಗಿತ್ತು. ಮೈಯೆಲ್ಲಾ ಸಿಡಿಯುವಂತಹ ಅಸಾಧ್ಯ ನೋವು, ಎದ್ದು ನಿಲ್ಲಲಾಗದಷ್ಟು ನಿತ್ರಾಣ. ಮೆಲ್ಲನೆ ಎದ್ದು ತೂರಾಡುತ್ತಾ ಆಟೋ ಹಿಡಿದು ಮನೆ ಸೇರಿದ.

ಜವಾಹರಲಾಲ ಎನ್ನುವುದು ಜೆ‌ಎಲ್‌ನ ಪೂರ್ಣ ಹೆಸರು. ಅವನ ತಂದೆ ಅಪ್ಪಟ ದೇಶಭಕ್ತನಾಗಿದ್ದುದರಿಂದ ಈ ಹೆಸರು ಇಟ್ಟಿದ್ದರು. ಜನರ ಬಾಯಿಯಲ್ಲಿ ಜವಾರಲಾಲನಾಗಿ ಜವ್ವರನಾಗಿ ಜರ್ರಪ್ಪನಾಗಿದ್ದ ಜೆ‌ಎಲ್‌ಗೆ ತನ್ನ ಹೆಸರೆಂದರೆ ಹೇಸಿಗೆಯಾಗುತ್ತಿತ್ತು. ಅದಕ್ಕಾಗಿ ತನ್ನ ಹೆಸರನ್ನು ಜೆ.ಎಲ್ ಎಂದೇ ಪರಿಚಯಿಸಿಕೊಳ್ಳುತ್ತಿದ್ದ.

ಮೆಲ್ಲನೆ ಎದ್ದು ತೂರಾಡುತ್ತಾ ಅಟೋ ಹಿಡಿದು ಮನೆ ಸೇರಿದ ಜೆ‌ಎಲ್‌ಗೆ ಪ್ರಪಂಚದ ಒಂಬತ್ತನೆ ಅದ್ಭುತವೊಂದು ಕಾದಿತ್ತು. ಬಾಗಿಲು ಬಡಿದಾಗ ತಾಯಿ ಬಂದು ತೆರೆದಳು. ಗಾಢ ನಿಶ್ಯಬ್ದ, ಏನೋ ಬದಲಾಗಿದೆಯೆನಿಸಿತು. ಯಾವಾಗಲೂ ಬಾಗಿಲು ತೆರೆಯುತ್ತಲೇ ಕಿರಿಕಿರಿ ಹಚ್ಚಿಕೊಳ್ಳುವವಳು ಇಂದೇಕೆ ಸುಮ್ಮನಿದ್ದಾಳೆ ಎಂದುಕೊಳ್ಳುತ್ತಾ ತಾಯಿಯತ್ತ ನೋಡಿದ. ಅವಳಾಗಲೇ ಅಡುಗೆಕೋಣೆ ಸೇರಿಯಾಗಿತ್ತು.

ಒಳಮನೆಯಲ್ಲಿ ತಾಯಿ ಊಟಕ್ಕೆ ತಟ್ಟೆ ಇಟ್ಟ ಸದ್ದು ಕೇಳಿಸಿತು. ಕೈಕಾಲು ತೊಳೆದು ಬಂದು ತಟ್ಟೆಯೆದುರು ಕುಳಿತುಕೊಂಡ. ಮೌನ ತಿನ್ನುತ್ತಿತ್ತು. ಏನಿದು? ಇವತ್ತು ಮಾತಿಲ್ಲ ಕತೆಯಿಲ್ಲ ಎನ್ನುತ್ತಾ ತಲೆಯೆತ್ತಿ ತಾಯಿಯ ಮುಖ ನೋಡಿದ. ತುಟಿಗಳು ಚಲಿಸುತ್ತಿದ್ದವು. ಮಾತು ಕೇಳಿಸುತ್ತಿರಲಿಲ್ಲ. ತಾಯಿಯ ಸ್ವರ ಬಿದ್ದುಹೋಗಿ ಮೂಕಿಯಾಗಿರಬಹುದೆ ಎಂಬ ಆಘಾತವಾಗಿ ತಾಯಿಯ ಮುಖವನ್ನೇ ದಿಟ್ಟಿಸಿದ. ’ಏನು ಹಾಗೆ ನೋಡ್ತಿ?’ ಎಂದಿತು ಮುದುಕಿ. ಸದ್ಯ ಮೂಕಿಯಾಗಿಲ್ಲ ಅನಿಸಿತು. ’ನನ್ನ ಮುಖದಲ್ಲೇನು........’ ತುಟಿಗಲೂ ಅಲಗುತ್ತಿದ್ದರೂ ವಾಕ್ಯ ಅರ್ಧಕ್ಕೇ ತುಂಡಾಗಿತ್ತು. ತಲೆ ತಗ್ಗಿಸಿ ಗಬಗಬ ಉಣ್ಣತೊಡಗಿದ ನಿಧಾನವಾಗಿ ಊಟಮಾಡು. ಅದ್ಯಾಕೆ ಹಾಗೆ..... ಪುನಃ ಮಾತಾಡಿತು ಮುದುಕಿ ಅದೂ ಅರ್ಧವೇ. ಅರೆ! ಈ ಮುದುಕಿ ಮೂಕಿಯಾಗಿದೆಯೋ ಅಥವಾ ತಾನೇ ಕಿವುಡಾಗಿದ್ದೇನೋ ಎನ್ನುವ ಭ್ರಮೆ, ಗೊಂದಲ ಶುರುವಾಯಿತು. ಹೊರಗಡೆ ಆಗೊಮ್ಮೆ ಈಗೊಮ್ಮೆ ಸಾಗುವ ವಾಹನಗಳ ಸದ್ದುಗಳೆಲ್ಲವೂ ಸರಿಯಾಗೇ ಕೇಳಿಸುತ್ತಿತ್ತು. ತಟಕ್ಕನೇ ಏನೋ ಹೊಳೆದಂತಾಗಿ ಗರಬಡಿದವನಂತೇ ಕುಳಿತು ಬಿಟ್ಟ ಜೆ.ಎಲ್.

ಜೆ‌ಎಲ್‌ನ ತಾಯಿ ಮಹಾ ಚಡಪಡಿಕೆಯ ಮುದುಕಿ. ಯಾವಾಗಲೂ ವಟಗುಟ್ಟುತ್ತಾ ಇರುವುದೇ ಅವಳ ಹಣೆಬರಹವಂತೆ, ಅವಳೇ ಹೇಳಿದ ಹಾಗೆ. ತನ್ನ ಜೊತೆಗೆ ತನ್ನ ಸುತ್ತುಮುತ್ತಲಿನ ಎಲ್ಲರ ಹಣೆಬರಹವನ್ನು ತಿದ್ದಿ ಅವರ ಬದುಕನ್ನು ನರಕವನ್ನಾಗಿಸುವಷ್ಟು ತೀವ್ರವಾಗಿತ್ತು ಆ ವಟಗುಟ್ಟುವಿಕೆ. ಈ ಕಿರಿಕಿರಿಯನ್ನು ಸಹಿಸಲಾಗದೇ ಆಫೀಸು ಮುಗಿದ ಮೇಲೂ ಮನೆಯಿಂದ ಹೊರಗೇ ಹೆಚ್ಚುಕಾಲ ಕಳೆಯುತ್ತಿದ್ದ ಜೆ‌ಎಲ್. ಈತನಿಗೆ ಗೆಳೆಯರಾರೂ ಇರಲಿಲ್ಲ. ಹೇಳಿಕೊಳ್ಳುವಂತಹ ಹವ್ಯಾಸಗಳೂ, ಪ್ರತಿಭೆಗಳೂ ಇರಲಿಲ್ಲ. ಯಾರ ಬಳಿಯೂ ಹೆಚ್ಚು ಮಾತಾಡುತ್ತಿರಲಿಲ್ಲ. ತನ್ನ ಗೆಳೆತನಕ್ಕೆ ತಕ್ಕವರಾರೂ ಇಲ್ಲ, ತನ್ನನ್ನು ಕಂಡರೆ ಯಾರಿಗೂ ಆಗುವುದಿಲ್ಲ ಎಂದುಕೊಳ್ಳುತ್ತಿದ್ದ ಜೆ‌ಎಲ್ ಜನರಿಂದ ದೂರವಾಗಿ ಪಾರ್ಕೊಂದರಲ್ಲಿ ಕುಳಿತು ಕಡಲೆಕಾಯಿ ತಿನ್ನುತ್ತಿದ್ದ. ಚಿತ್ರ ವಿಚಿತ್ರ ಹಗಲುಗನಸುಗಳನ್ನು ನೇಯುತ್ತಾ ಸಮಯ ಕಳೆಯುತ್ತಿದ್ದ.

ಹೀಗೆ ಯಾವತ್ತಿನ ರೂಢಿಯಂತೇ ಪಾರ್ಕಿನೊಳಗಿನ ಬೆಂಚಲ್ಲಿ ಕುಳಿತು ಕಡಲೆಕಾಯಿ ಮೆಲುಕಾಡಿಸುತ್ತಿದ್ದಾಗಲೇ ತಲೆಯೊಳಗಿನ ಆ ವಿಸ್ಫೋಟ ನಡೆದಿದ್ದು.

’ಅಮ್ಮಾ’ ಎಂದ. ’ಏನೋ?’ ಎಂದಿತು ಸ್ಪಷ್ಟವಾಗಿ ಮುದುಕಿ. ’ಸಾರಿಗೆ ಉಪ್ಪು ಜಾಸ್ತಿ’ ಬೇಕೆಂದೇ ಹೇಳಿದ ಮಾತಿದು. ತಾಯಿಯ ಮುಖ ನೋಡಿದ. ಶುರುವಾಗಿತ್ತು ಬಿರುಸು ಬಾಣಗಳ ಮತಾಪು. ಬಡಬಡನೇ ತುಟಿಗಳು ಹೊಡೆದುಕೊಳ್ಳುತ್ತಿದ್ದವು. ಗಂಟಲನರಗಳೂ ಉಬ್ಬಿ ಆ ಮಾತುಗಳ ವಾಲ್ಯೂಮ್ ಎಷ್ಟಿರಬಹುದೆಂದು ಊಹಿಸಬಹುದಿತ್ತು. ಆದರೆ ಜೆ.ಎಲ್‌ಗೆ ಯಾವ ಮಾತುಗಳೂ ಕೇಳಿರಲಿಲ್ಲ. ಯಾಕೆ ಹೀಗೆ? ತಾಯಿಯ ಬೈಗಳು, ವಟಗುಟ್ಟುವಿಕೆಗಳು ಮಾತ್ರ ಇಂದು ತನಗೆ ಕೇಳಿಸುತ್ತಿಲ್ಲ? ಉಳಿದಂತೇ ಇತರ ಮಾತುಗಳೆಲ್ಲವೂ ಸರಿಯಾಗೇ ಕೇಳಿಸುತ್ತಿವೆಯಲ್ಲ? ಇದೇ ಗೊಂದಲದಲ್ಲಿ ಎದ್ದು ಕೈ ತೊಳೆದು ಚಾಪೆಯಲ್ಲಿ ಬಿದ್ದುಕೊಂಡವನಿಗೆ ಗಾಢನಿದ್ದೆ.

ಜೆ.ಎಲ್‌ನ ಬಾಲ್ಯ ಬಹು ದುಸ್ತರವಾಗಿತ್ತು. ತಂದೆ ವರದಪ್ಪ, ಪಾರ್ಟಿ, ಮೀಟಿಂಗು, ಅಂತೆಲ್ಲಾ ನೇತಾಗಳ ಹಿಂದೆ ಸುತ್ತುತ್ತಿದ್ದು ಮನೆಗೇ ಬರುತ್ತಿದ್ದಿಲ್ಲ. ತಾಯಿಯೇ ಬೀಡಿಕಟ್ಟಿ, ಅಲ್ಲಿ ಇಲ್ಲಿ ದುಡಿದು ಇವನನ್ನು ಎಸ್ಸೆಲ್ಸಿ ತನಕ ಓದಿಸಿದ್ದಳು. ಒಂದು ದಿನ ರ್‍ಯಾಲಿಯೊಂದರಲ್ಲಿ ದೊಂಬಿ ನಡೆದು ಲಾಠಿ ಏಟಿಗೆ ತಲೆ ಒಡೆದು ಇವನ ತಂದೆ ಸತ್ತೇ ಹೋದಾಗ ಪಾರ್ಟಿ ಮುಖಂಡರೊಬ್ಬರ ಕೃಪೆಯಿಂದ ಸಹಕಾರಿ ಸಂಘವೊಂದರಲ್ಲಿ ಗುಮಾಸ್ತನಾಗಿ ಕೆಲಸ ದೊರಕಿತ್ತು ಜೆ.ಎಲ್.ಗೆ.

ಸಂಘದ ಸೆಕ್ರೆಟರಿಗೆ ಇವನನ್ನು ಕಂಡರಾಗುತ್ತಿರಲಿಲ್ಲ. ಅಥವಾ ಹಾಗೆಂದು ಇವನೇ ತಿಳಿದುಕೊಂಡಿದ್ದ. ಮತ್ತೇನು? ಇವನ ಕೆಲಸಗಳಲ್ಲ ಸೆಕ್ರೆಟರಿಗೆ ತಪ್ಪುಗಳು ಸಿಗುವುದು. ಆ ಮಿಟುಕುಲಾಡಿ ಟೈಪಿಸ್ಟಿಣಿ ಮೀನಾಳ ಎಷ್ಟೂ ತಪ್ಪುಗಳನ್ನು ಮಾಫು ಮಾಡಲು ತಯಾರಿದ್ದ ಸೆಕ್ರಟರಿಗೆ ತನ್ನನ್ನು ಹಂಗಿಸುವುದೆಂದರೆ ಖಯಾಲಿಯಾಗಿ ಬಿಟ್ಟಿತ್ತು. ಸೆಕ್ರೆಟರಿಯ ಡಯಲಾಗುಗಳಿಗೆಲ್ಲಾ ಟೈಪಿಸ್ಟಿಣಿಯ ನಗು ಗಾಯಕ್ಕೆ ಉಪ್ಪು ಸವರುತ್ತಿತ್ತು. ಬಳಿಕ ದಿನವಿಡೀ ತೀವ್ರವಾದ ದುಗುಡ ಅವನನ್ನು ಕವಿದಿರುತ್ತಿತ್ತು.

ಪಾರ್ಕಿನಲ್ಲಿನ ಸ್ಫೋಟದ ನಂತರ ಜೆ‌ಎಲ್ ವಿಚಿತ್ರವಾಗಿ ಬದಲಾಗಿದ್ದ. ತನ್ನ ತಾಯಿಯ ಪಿರಿಪಿರಿ, ಸೆಕ್ರೆಟರಿಯ ಬೈಗಳು, ಮೀನಾಳ ನಗು ಇತರ ಸಹೋದ್ಯೋಗಿಗಳ ಕೀಟಲೆ, ಇನ್ನೂ ಬೇರೆ ಯಾರಾದರೂ ಇವನನ್ನು ತಾತ್ಸಾರ ಅಥವಾ ನಿಕೃಷ್ಟವಾಗಿ ಕಂಡು ಆಡುವ ಮಾತುಗಳೆಲ್ಲಾ ಗಪ್ಪೆಂದು ಮೂಕವಾಗಿ ಬಿಡುತ್ತಿದ್ದವು. ಆ ವಾಕ್ಯಗಳಲ್ಲಿನ ಕೊಮಾ, ಫುಲ್‌ಸ್ಟಾಪ್ ಮತ್ತು ಇತರ ನಿರುಪದ್ರವಿ ಶಬ್ದ ಸಮೂಹಗಳನ್ನಷ್ಟೇ ಇವನ ಕಿವಿ ಗ್ರಹಿಸುತ್ತಿತ್ತು.

ಮೊದಮೊದಲು ತನ್ನ ಸುತ್ತುಮುತ್ತಲಿನವರ ಮಾತುಗಳು ಮೂಕವಾದಾಗ ಅದು ತನ್ನ ಬಗ್ಗೆಯೇ ಎಂದು ಹೊಳೆದು ಬೇಸರವಾಗುತ್ತಿತ್ತು. ದಿನಕಳೆದ ಹಾಗೇ ಅದಕ್ಕೆ ಹೊಂದಿಕೊಂಡ ಜೆ‌ಎಲ್, ಹಾನಿಕಾರಕ ಮಾತುಗಳು ಕಿವಿಗೆ ಬೀಳದಿರುತ್ತಿದ್ದುದರಿಂದ ಮೊದಲಿನ ದುಗುಡವಾಗಲೀ ಬೇಸರವಾಗಲೀ ಆಗದೇ ಕೊಂಚ ಸಮಾಧಾನವಾಗಿರುತ್ತಿದ್ದ.

ಆದರೆ ಬರಬರುತ್ತಾ ಜೆ‌ಎಲ್‌ಗೆ ಒಂದು ರೀತಿಯ ಅಸಹನೀಯ ಮೌನ ಮತ್ತು ಏಕಾಂತತೆ ಕಾಡಲಾರಂಭಿಸಿತು. ತನ್ನೊಳಗೆ ತಾನೇ ಆಳವಾದ ಕತ್ತಲೆಯಲ್ಲಿ ಕಳೆದುಹೋಗುತ್ತಿರುವಂತೇ ಚಡಪಡಿಸತೊಡಗಿದ. ಯಾರ ಬಳಿಯಾದರೂ ಮಾತಾಡಬೇಕು, ಅವರು ಮಾತನಾಡಿದ್ದನ್ನು ಕೇಳುತ್ತಲೇ ಇರಬೇಕು ಎನ್ನುವ ತವಕ. ಯಾರ ಬಳಿಯೂ ಮಾತನಾಡಿ ಅಭ್ಯಾಸವೇ ಇರದಿದ್ದುರಿಂದ ಹೊಸದಾಗಿ ಪರಿಚಯ ಮಾಡಿಕೊಳ್ಳುವಷ್ಟು ಧೈರ್ಯವೂ ಇರಲಿಲ್ಲ. ತನ್ನನ್ನು ಎಲ್ಲರೂ ಕೀಳುಗೈಯುತ್ತಾರೆ. ತನ್ನ ಗೆಳೆತನ ಯಾರಿಗೂ ಬೇಡ ಎನ್ನುವ ಯೋಚನೆ ಅವನನ್ನು ಪುನಃ ಒಳಗೆಳೆಯುತ್ತಿತ್ತು.

ಜೆ‌ಎಲ್‌ನ ಆಲೋಚನೆಗಳಿಗೂ ತಲೆಯೊಳಗೆ ಸುಳಿದಾಡುತ್ತಿದ್ದ ಚಿತ್ರ ವಿಚಿತ್ರ ಕಲ್ಪನೆಗಳಿಗೂ ಇದೀಗ ಮೌನ ಕವಿದಿತ್ತು. ಏನೂ ಹೊಳೆಯುತ್ತಿರಲಿಲ್ಲ. ಎಲ್ಲ ಖಾಲಿಖಾಲಿ. ಪಾರ್ಕಿನಲ್ಲಿ ಮೊದಲಿನಂತೆ ಕುಳಿತಿರಲೂ ಭಯವಾಗುತ್ತಿತ್ತು ಈ ಮೌನದಿಂದ. ಅಲ್ಲಿಂದ ಎದ್ದು ರಸ್ತೆಯ ಬಳಿ ಬರುತ್ತಿದ್ದ. ವಾಹನಗಳ ಭರಾಟೆ, ಕರ್ಕಶ ಹಾರ್ನ್, ಬ್ರೇಕುಗಳ ಕ್ಲೀಚು, ಕಿವಿಗೊಟ್ಟು ಆಲಿಸುತ್ತಿದ್ದ. ಆಪ್ಯಾಯಮಾನವಾಗಿರುತ್ತಿತ್ತು. ಗಂಟೆಗಟ್ಟಲೆ ಅಲ್ಲೇ ನಿಂತಿರುತ್ತಿದ್ದ ಜೆ‌ಎಲ್.

ರಾತ್ರಿ ಮಲಗಿದರೂ ನಿದ್ರೆ ಸುಳಿಯುತ್ತಿರಲಿಲ್ಲ. ಕಣ್ಣು ಮುಚ್ಚಿದರೆ ಮತ್ತದೇ ಬೆಳಕು ಪಾರ್ಕಿನಲ್ಲಿ ಕಂಡಂತೇ ಜಗ್ಗೆಂದು ಹೊಳೆದು ಕಣ್ಣುಕುಕ್ಕಿ ಮಾಯವಾಗಿ, ಮರುಕ್ಷಣ ನೀರವ ಸ್ಮಶಾನ ಮೌನ. ಪ್ರಪಾತದಾಳಕ್ಕೆ ಜಾರುತ್ತ ವೇಗ ಹೆಚ್ಚುಹೆಚ್ಚಾಗಿ ಚೀರಿಕೊಳ್ಳುವಷ್ಟು ಭಯ. ರಪ್ಪೆಂದು ಎಚ್ಚರವಾಗಿ ಬಿಡುತ್ತಿತ್ತು. ಮತ್ತೆ ರಾತ್ರಿ ಪೂರ್ತಿ ನಿದ್ರೆಯಿಲ್ಲದೇ ಹೊರಳಾಡುತ್ತಿದ್ದ. ಬೆಳಗಿನ ಜಾವಕ್ಕೊಮ್ಮೆ ಅರೆನಿದ್ರೆ ಬರುತ್ತಿತ್ತು.

ದಿನಕಳೆದಂತೇ ಮೌನ ಜೆ.ಎಲ್‌ನೊಳಗೆ ಗಾಢವಾಗುತ್ತಾ ಹೋಯಿತು. ವಾಹನಗಳ ಭರಾಟೆ ನಿರ್ಜೀವ ಅನಿಸುತ್ತಿತ್ತು. ತಾಯಿಯ ಮಟಗುಟ್ಟುವಿಕೆಯೊಳಗಿನ ಮಾತುಗಳು ನೆನಪಿಗೆ ಬರುತ್ತಿದ್ದವು. ಸಹೋದ್ಯೋಗಿಗಳ ಕೀಟಲೆ, ಸೆಕ್ರೆಟರಿಯ ಬೈಗಳನ್ನು ಕೇಳಬೇಕೆನಿಸುತ್ತಿತ್ತು.

ರಾತ್ರಿ ನಿದ್ರೆ ಇಲ್ಲದೇ ಬೆಳಗ್ಗೆ ಏಳುವುದು ತಡವಾಗಿತ್ತು. ಬೇಗ ತಿಂಡಿ ತಿಂದು ಆಫೀಸಿಗೆ ತಲುಪಿದಾಗ ಗಂಟೆ ಹತ್ತೂವರೆ, "ಸಾಹೇಬ್ರು ಕರೀತಿದ್ದಾರೆ" ಪಿಯೋನ್ ಮೂಲಕ ಬಂತು ಸೆಕ್ರೆಟರಿಯ ಬುಲಾವ್. ಬಳಿಹೋಗಿ ಅವರ ಮೇಜಿನ ಬದಿಗಳನ್ನು ಬೆರಳಿನಿಂದ ಸವರುತ್ತಾ ನಿಂತ. ಮೌನ ಇನ್ನೂ ಇತ್ತು. ಮೆಲ್ಲನೆ ಸೆಕ್ರೆಟರಿಯ ಮುಖ ನೋಡಿದ. ಇವನನ್ನೇ ದುರುಗುಟ್ಟಿ ನೋಡುತ್ತಾ ಏನೋ ಹೇಳುತ್ತಿದ್ದರು. ತುಟಿಗಳು ಪಟಪಟನೇ ಹೊಡೆದುಕೊಳ್ಳುತ್ತಿದ್ದವು. ಜೆ.ಎಲ್‌ಗೆ ವಿಚಿತ್ರ ಖುಶಿಯುಂಟಾಯಿತು. ಮೆಲ್ಲನೇ ಆ ಮೂಕ ತುಟಿಗಳ ಚಲನೆಯೊಳಗೆ ಮಾತುಗಳನ್ನು ಕಲ್ಪಿಸಿ ತುಂಬ ತೊಡಗಿದ. "ಏನ್ರೀ ಆಫೀಸಿಗೆ ಬರೋದಿಕ್ಕೆ ಹೊತ್ತು ಗೊತ್ತು ಏನೂ ಇಲ್ವಾ? ದಿನಾ ಲೇಟ್ ಮಾಡ್ತಿರಲ್ರೀ. ಇದೇನು ನಿಮ್ಮತ್ತೆ ಮನೆ ಅಂತ ತಿಳಕಂಡ್ರಾ?" ಆಹಾ! ರೋಮಾಂಚನವೇ! ನವೆಯಾದಾಗ ಕರೆದುಕೊಳ್ಳುವ ಸುಖ. ಇವನ ಮುಖದ ಮೇಲಿನ ಮಂದಹಾಸ ಕಂಡು ಸೆಕ್ರೆಟರಿ ಸಿಟ್ಟಿನಲ್ಲಿ ಎದ್ದು ನಿಂತು ಕೂಗಾಡಹತ್ತಿದರು.

"ನಗ್ತೀರಲ್ರೀ? ನಿಮ್ಗೆ ಮಾನಮರ್ಯಾದೆ ಒಂದೂ ಇಲ್ವಾ? ಹೋಗ್ರೀ ನಿಮ್ಮ ಕೆಲಸ ನೋಡ್ರೀ. ನಾಳೆಯಿಂದ ಲೇಟಾಗಿ ಬಂದ್ರೆ ಅಧ್ಯಕ್ಷರಿಗೆ ಹೇಳಿ ಡಿಸ್ ಮಿಸ್ ಮಾಡ್ಸಿಬಿಡ್ತೀನಿ ನಿಮ್ಮನ್ನು" ಇದಷ್ಟೂ ಅವನೇ ಕಲ್ಪಿಸಿಕೊಂಡು ತುಂಬಿದ್ದ ಮಾತುಗಳು.

ಮತ್ತೇರಿದಂತೇ ತೇಲಾಡುವ ಖುಶಿಯಲ್ಲಿ ನಡೆಯುತ್ತಾ ಬಂದು ತನ್ನ ಕುರ್ಚಿಯಲ್ಲಿ ಕೂತಾಗ ಟೈಪಿಸ್ಟಿಣಿ ಇವನನ್ನು ಗರಬಡಿದಂತೇ ನೋಡುತ್ತಿದ್ದಳು. ಆ ದಿನವಿಡೀ ಖುಶಿಯಲ್ಲೇ ಕಳೆದ ಜೆ‌ಎಲ್.

ಜನರ ತುಟಿಗಳನ್ನು ಗಮನಿಸುವುದೇ ಈಗ ಜೆ‌ಎಲ್‌ಗೆ ರೋಮಾಂಚನ ನೀಡುತ್ತಿತ್ತು. ಇತರರ ಬಡಬಡಿಸುವ ತುಟಿಗಳ ನಡುವೆ ಮಾತುಗಳನ್ನು ತುರುಕಿ ತನ್ನ ಕ್ರಿಯಾಶೀಲತೆಗೆ ತಾನೇ ಹೆಮ್ಮೆ ಪಟ್ಟುಕೊಳ್ಳುತ್ತಿದ್ದ. ಕೆಲವೊಮ್ಮೆ ಅವರು ನಿಜಕ್ಕೂ ಆಡುತ್ತಿದ್ದ ನಿರುಪದ್ರವಿ ಮತುಗಳು ಇವನಿಗೆ ಕೇಳುತ್ತಿದ್ದರೂ ಕಿವಿಯ ಮೇಲೆ ಕೈಯನ್ನಾಡಿಸಿ ಅವನ್ನು ಗಾಳಿಗೆ ಚದುರಿಬಿಟ್ಟು, ಆ ಜಾಗದಲ್ಲಿ ತನ್ನ ಸ್ವಂತ ರಚನೆಗಳನ್ನು ಜೋಡಿಸುತ್ತಿದ್ದ. ಎಷ್ಟು ಬೈಗಳನ್ನು ಕಲ್ಪಿಸಿಕೊಂಡರೂ ತೃಪ್ತಿ ಇಲ್ಲ. ಅದಕ್ಕೆ ಬೇಕಾದ ಸನ್ನಿವೇಶಗಳನ್ನೂ ಇವನೇ ಸೃಷ್ಟಿಸಿ ಕೊಳ್ಳುತ್ತಿದ್ದ. ವಾಹನಗಳಿಗೆ ಅಡ್ಡ ಹೋಗಿ ಅವು ದಬಕ್ಕೆಂದು ಬ್ರೇಕು ಹೊಡೆದಾಗ ಚಾಲಕರ ಮುಖ ನೋಡುತ್ತಿದ್ದ. ಸಿಟ್ಟಿನಿಂದ ಕೆಂಪಾಗುವ ಅವರ ಮುಖ ಮತ್ತು ತುಟಿಗಳ ಚಲನೆಯಲ್ಲಿ ಜೆ‌ಎಲ್‌ಗೆ ಸ್ವರ್ಗಸುಖವಿತ್ತು. ಮನೆಯಲ್ಲೂ ಅಂದಿಗೆಯ ಮೇಲಿನ ಡಬರಿಯನ್ನು ದಢಾರೆಂದು ಕೆಳಗೆಳೆದು ತಾಯಿಯ ಮುಖ ನೋಡಿದ್ದ. ಸಿಟ್ಟಿನಲ್ಲಿ ತರ್ರೆಂದು ತರಗುಟ್ಟುವ ಅವಳ ತುಟಿಗಳ ನಡುವೆ ಬೈಗುಳನ್ನು ತುರುಕುವುದು ಇವನಿಗೇ ಕಷ್ಟವಾಗಿತ್ತು.

ಹೀಗೆ ಒಂದಾನೊಂದು ಕಾಲದಲ್ಲಿ ಯಾವ ಮಾತುಗಳನ್ನು ಕೇಳಿದಾಗ ಜವಾರಲಾಲ ಎಂಬ ಹೆಸರಿನ ಜೆ‌ಎಲ್‌ಗೆ ಬೇಸರವಾಗಿ ಬದುಕೇ ಕಿರಿಕಿರಿ ಎನಿಸುತ್ತಿತ್ತೋ ಇದೀಗ ಅವೇ ಮಾತುಗಳನ್ನು ಮತ್ತು ಕೆಲವೊಮ್ಮೆ ಅದಕ್ಕಿಂತಲೂ ಕೆಟ್ಟಮಾತುಗಳನ್ನು ಕಲ್ಪಿಸಿಕೊಳ್ಳುವುದರಲ್ಲಿ ವಿಚಿತ್ರ ಖುಶಿ ಸಿಗುತ್ತಿರುವುದು ವಿಪರ್ಯಾಸವಾಗಿತ್ತು.

ಬರುಬರುತ್ತಾ ಜೆ‌ಎಲ್‌ಗೆ ರಚನೆಗಳೆಲ್ಲಾ ರೆಕಾರ್ಡ್ ತಿರುಗಿದಂತೆ ತಿರುಗಿ ಸವಕಲಾಗಿದ್ದವು. ಕೆಲವೊಮ್ಮೆ ಖುಶಿ ಕೊಡುವ ಬೈಗುಳೇ ಹೊಳೆಯುತ್ತಿರಲಿಲ್ಲ. ಎಲ್ಲಾ ಅವೇ ಹಳೆ ರೆಕಾರ್ಡ್. ತುಥ್ ಎಂದು ತಲೆಕೊಡವಿ ಎದ್ದು ಹೋಗುತ್ತಿದ್ದ. ಸನ್ನಿವೇಶಗಳೂ ಪುನರಾವರ್ತನೆಯೇ. ಹೊಸ ಸನ್ನಿವೇಶಗಳನ್ನು ಸೃಷ್ಟಿಸಿಕೊಳ್ಳುವ ತವಕ ಮತ್ತು ಕಾತರದಲ್ಲಿ ಆಫೀಸಿಗೆ ಹೋಗದೇ ಬೀದಿ ಸುತ್ತತೊಡಗಿದ ಜೆ‌ಎಲ್.

ಒಂದು ದಿನ ಇಂತಹ ಸನ್ನಿವೇಶವನ್ನು ಸೃಷ್ಟಿಸಿಕೊಳ್ಳುವ ಸನ್ನಾಹದಲ್ಲಿ ರಸ್ತೆಗೆ ಅಡ್ಡವಾಗಿ ನಡೆಯುತ್ತಿದ್ದಾಗ ವೇಗವಾಗಿ ವಾಹನವೊಂದು ಕ್ಲೀ........ಚೆಂದು ಬ್ರೇಕು ಹೊಡೆದು ಒಂದೇ ಗೇಣು. ಅತ್ತಿತ್ತ ನೋಡುವಷ್ಟರೊಳಗೆ ದಢದಢನೇ ಕೆಳಗಿಳಿದು ಬಂದ ಚಾಲಕ ಇವನ ರಟ್ಟೆ ಹಿಡಿದೆಳೆದು ಕಪಾಳಕ್ಕೆರಡು ಬಿಗಿದ.

ಝಮ್ಮೆಂದು ಹೊರಟ ಗುಂಜಾರವ ಸುಳಿಸುಳಿಯಾಗಿ ರೋಮಾಂಚನದ ಪರಾಕಾಷ್ಠೆ, ಮತ್ತೊಮ್ಮೆ ಠಳಾರ್ ಎಂದು ಸಿಡಿಲು, ಧಾರಾಕಾರ ಮಳೆ ಮತ್ತು ತೊಯ್ದು ತೊಪ್ಪೆ. ಕಣ್ಣು ತೇಲಿಸಿ ಕೆಳಬಿದ್ದವನ್ನು ಜನರು ಎತ್ತಿರಸ್ತೆ ಬದಿ ಮಲಗಿಸಿದ್ದರು.

ಜೆ‌ಎಲ್ ಈಗ ಎಲ್ಲಾದರೂ ಕುಳಿತು ರಾತ್ರಿ ಕಳೆಯುತ್ತಾನೆ. ಮನೆಗೂ ಹೋಗುವುದಿಲ್ಲ. ಕಪಾಳಮೋಕ್ಷದಿಂದ ದೊರೆತ ನಿರ್ವಾಣದ ಥ್ರಿಲ್ ನೆನಪಿನಂಗಳದಲ್ಲಿ ಸುಳಿದಾಗಲೊಮ್ಮೆ ಬಾಯಿ ಚಪ್ಪರಿಸುತ್ತಾನೆ. ಮತ್ತೊಮ್ಮೆ ಅದರ ಗುಂಗಿನಲ್ಲಿಳಿದು ನೀರಾಗುತ್ತಾನೆ. ನೆನಪಿನ ರೀಲು ಮುಸುಕಾಗತೊಡಗಿದಾಗ ಮತ್ತೊಮ್ಮೆ ಹೊಡೆತ ತಿನ್ನುವ ತವಕ. ಅಂಗಡಿ ಸಾಲುಗಳೆದುರು ನಿಂತು ದುರುಗುಟ್ಟಿ ನೋಡುತ್ತಾನೆ. ಲೇಯ್ ಹುಚ್ಚ, ತೊಲಗಾಚೆ ಎನ್ನುತ್ತಾರೆ ಜನ. ಅಲ್ಲ, ನಾನು ಹುಚ್ಚನಲ್ಲ, ನೀನು ಹುಚ್ಚ. ಅಂಗಡಿಯ ಶೋಕೇಸ್ ಗಾಜಿನಲ್ಲಿ ಪ್ರತಿಬಿಂಬ. ಕೆದರಿದ ತಲೆ, ನಿದ್ರೆ ಇಲ್ಲದ ಕೆಂಪು ಕಣ್ಣುಗಳು, ಹರಿದ ಶರ್ಟು, ಮುಖದ ತುಂಬೆಲ್ಲಾ ಗಡ್ಡ. ಅದು ನಾನೇ, ಹೌದು ನಾನೇ, ನಾನು ಹುಚ್ಚ! ಅಲ್ಲಲ್ಲ, ನಾನು ಹುಚ್ಚನಲ್ಲ! ಕಟವಾಯಿಯಲ್ಲಿ ಸುರಿಯುವ ಜೊಲ್ಲನ್ನು ಒರಸಿಕೊಂಡು ಕೈಯಲ್ಲಿದ್ದ ಕಲ್ಲನ್ನು ಬೀಸಿ ಒಗೆಯುತ್ತಾನೆ. ಪಳ್ ಪಳಾರ್. ನೆಲದ ಮೇಲೆ ಹರಡಿದ ಅಸಂಖ್ಯಾತ ಗಾಜಿನ ಚೂರುಗಳಿಂದ ಮತ್ತದೇ ಜಗ್ಗೆಂದು ಹೊಳೆವ ಬೆಳಕು. ಪ್ರತೀ ಚೂರುಗಳಿಂದ ಇಣುಕುವ ತನ್ನ ತಾಯಿ, ತಂದೆ, ಸೆಕ್ರೆಟರಿ, ಟೈಪಿಷ್ಟಿಣಿ ಮೀನಾ, ಅಧ್ಯಕ್ಷರು, ಅಂಗಡಿ ಮಾಲಿಕ, ಸರಕಾರ, ಪೋಲಿಸರು ಎಲ್ಲರೂ ಹುಚ್ಚರು. ನೀವೆಲ್ಲಾ ಹುಚ್ಚರು.. ಕಿರುಚುತ್ತಾನೆ ಜೆ‌ಎಲ್ ಎಲ್ಲರೂ ಗಾಜಿನ ಚೂರುಗಳಿಂದ ಹೊರಬಂದು ಇವನನ್ನು ಅಟ್ಟಿಸಿಕೊಂಡು ಬರುತ್ತಾರೆ. ಓಡು! ಓಡು! ಜೆ‌ಎಲ್ ಓಡು! ದಢದಢದಢ.. ನಾನು ಯಾರಿಗೂ ಸಿಗಲಾರೆ ಬನ್ನಿ ಹಿಡಿಯಿರಿ ಬನ್ನಿ ಬನ್ನಿ...

ಹೀಗೆ ಎಲ್ಲರಿಂದಲೂ ಕಡೆಗಣಿಸಲ್ಪಟ್ಟು ಒಬ್ಬಂಟಿಯಾಗಿದ್ದ ಜವಾರಲಾಲ ಎಂಬ ಹೆಸರಿನ ಜೆ‌ಎಲ್ ಇಂದು ಎಲ್ಲರಿಂದಲೂ ತಪ್ಪಿಸಿಕೊಂಡು ಓಡುತ್ತಾನೆ. ಎಲ್ಲರೂ ತನ್ನನ್ನು ಅಟ್ಟಿಸಿಕೊಂಡು ಬರುತ್ತಿರುವುದರಲ್ಲಿ ವಿಚಿತ್ರ ಖುಶಿ ಅವನಿಗಿದೆ.

2 comments:

Mahen ಹೇಳಿದರು...

"ಕೊನೆಯ ವಾಕ್ಯ ತುಸು ದೂರದಿಂದ ಕೇಳಿದಾಗ ದೇವಪ್ಪನಿಗೆ ಅವರ ನಿರ್ಗಮನದ ಅರಿವಾಯ್ತು."
ಇಂತಹ ಸಣ್ಣ ಸಣ್ಣ ಸೂಕ್ಷ್ಮತೆ ಇಂದ ಕಥೆ ಬಹಳ ವಿಶ್ವಲ್ ಆಗುತ್ತದೆ. ಅವನಿಗೆ ಕಾಣದೇ ಇರುವುದೆಲ್ಲಾ ನಮಗೆ ಕಾಣುತ್ತದೆ, ಅವನ ಅರಿವಿಗೆ ಬರುವುದು ನಾವು ಹೇಗೆ ಕಳೆದುಕೊಳ್ಳುತಿದ್ದೇವೆ? ಎನ್ನುವ ಭಯ ಸಣ್ಣಗೆ ಮೂಡಿಸುತ್ತದೆ, ಬಹಳ ಗಮನಿವಿಟ್ಟು ಬಳಸಿರುವ ಪದಪ್ರಯೋಗ.
ಕಣ್ಣಿಲ್ಲದ ದೇವಪ್ಪನ ಕಣ್ಣಲ್ಲಿನ ಜಗತ್ತನ್ನು ಮತ್ತು ಅವನಂತರಂಗವನ್ನು ಹಿಡಿದಿಟ್ಟಿರುವ ಪರಿ ವಿಶ್ಮಯವಾಗಿದೆ.
ಮೊದಲ ಪ್ರ್ಯಯತ್ನ ಅನ್ನಿಸುವುದೇ ಇಲ್ಲ. ’ದರ್ಶನ’ ಕಣ್ತೆರಿಸಿತು, ನಿಮ್ಮಲ್ಲೊಬ್ಬ ಉತ್ತಮ ಬರಹಗಾರನಿದ್ದಾನೆಂಬ ಸತ್ತ್ಯಕ್ಕೆ.
ಅಲ್ ದಿ ಬೆಸ್ಟ್
ಮಹೇಂದ್ರ

Unknown ಹೇಳಿದರು...

ಸೊಲ್ಮೆಲು ಮಹೇಂದ್ರ

ಕಾಮೆಂಟ್‌‌ ಪೋಸ್ಟ್‌ ಮಾಡಿ