ಡಿಸೆಂಬರ್ 6, 2008
ಭೈರವಿ
ಯಮುನೆಯ ತಟದ ಆ ನಡುಗುಡ್ಡೆಯ ತುದಿಯಲ್ಲಿರುವ ಆ ಶಿಲಾ ಮಂಟಪದ ಕಂಬಕ್ಕೊರಗಿ ಕುಳಿತಿದ್ದ ಬಿಲಾಸ್ ಖಾನ್. ಜೊತೆಗೆ ಭೈರವಿ. ಅವಳ ರೇಷಿಮೆಯ ನುಣುಪಿನ ಕೇಶರಾಶಿ ಇವನ ಎದೆಯ ತುಂಬೆಲ್ಲ ಹರಡಿತ್ತು.
"ಭೈರವೀ..."
"ಹ್ಮೂ....."
"ನನ್ನ ಉಸಿರ ತುಂಬ ನಿನ್ನದೇ ನೆನಪು. ನೀನು ನನ್ನೊಡನೆಯೇ ಇರಬಾರದೆ."
"ನೀನು ಕರೆದಾಗೆಲ್ಲ ಬರುವುದಿಲ್ಲವೇ ನಾನು. ಎಲ್ಲೆಂದರಲ್ಲಿ. ನೀನೇ ಅಂಜುಬುರುಕ. ಇನ್ನು, ಹೀಗೆಲ್ಲ ಈ ಕಾರ್ಗಲ್ಲ ನಡುಗುಡ್ಡೆಯ ಮೇಲೆ ಒಂಟಿ ಹೆಣ್ಣನ್ನು ಕರೆಯುವುದು ಸರಿಯೇ, ಅದೂ ಅಪರಾತ್ರಿಯಲ್ಲಿ."
"ಕೊಂಚದಿನ ತಾಳು ಭೈರವಿ. ನನ್ನ ಅಪ್ಪನ ದಾಸ್ಯದಿಂದ ಬಿಡುಗಡೆಯಾದ ಮೇಲೆ ನನಗೆ ಯಾವ ಹೆದರಿಕೆಯೂ ಇಲ್ಲ."
ಸುಮ್ಮನೆ ನಕ್ಕಳು ಭೈರವಿ. ಸ್ನಿಗ್ಧ ಸುಂದರ ನಗು ಅವಳದು. ಅವಳ ಮಾದಕ ಚೆಲುವಿಗೆ ಮೆರುಗಿಟ್ಟಂತೆ.
ಇಳಿಬಿಟ್ಟ ಕಾಲುಗಳನ್ನು ಲಯಬದ್ಧವಾಗಿ ಜೋಲಾಡಿಸುತ್ತಾ ಝಲ್ಲ್ ಝಲ್ಲೆಂದು ಅಂದುಗೆಯ ಸದ್ದು ಹೊರಡಿಸುತ್ತಿರುವ ಭೈರವಿಯ ಮಡಿಲಲ್ಲಿ ಬಿಲಾಸ್ ಖಾನ್ ತಲೆಯಿಟ್ಟ. ಅವಳು ಮುದ್ದಿನಿಂದ ಅವನ ಹಣೆಯ ಮೇಲಿನ ಪುಚ್ಚು ಕೂದಲನ್ನು ಹಿಂದಕ್ಕೆ ಸವರಿದಳು. ಹಾಗೆಯೇ ಕಣ್ಣು ಮುಚ್ಚಿದ ಬಿಲಾಸ್ ಖಾನ್. ಯಮುನೆಯ
ನೀರವ ರಾತ್ರಿಯಲ್ಲಿ ಮಾದಕತೆಯಿತ್ತು.
ಜಗ್ಗೆಂದು ಎಚ್ಚರಾಯಿತು ಬಿಲಾಸ್ ಖಾನ್ ಗೆ. ಅರೆ ನಾನು ಮಲಗಿಬಿಟ್ಟೆನೆ. ಭೈರವಿ ಯಾವಾಗ ಹೋದಳು. ತಾನು ನಿದ್ರೆಗೆ ಜಾರಿದುದನ್ನು ನೋಡಿ ಮೆಲ್ಲನೆದ್ದು ಹೋಗಿರಬೇಕು ಎಂದುಕೊಂಡ. ಅವಳ ನುಣುಪಾದ ದುಪ್ಪಟ್ಟಾ ಅವನ ತಲೆಯಿಟ್ಟಲ್ಲಿ ಸಿಂಬೆ ಸುತ್ತಿ ಮಲಗಿತ್ತು. "ಜಾಣೆ" ಎಂದು ಸಂಭ್ರಮಿಸಿದ. ಸಿಂಬೆಯನ್ನು ಕೈಗೆತ್ತಿ ಅದರೊಳಗೆ ಮುಖ ಹುದುಗಿಸಿ ಅದರಲ್ಲಿರಬಹುದಾದ ಅವಳ ಮೈಸೊಗಡನ್ನು ಹೀರಿದ.
ಮೇಲ್ಮಹಡಿಯ ಅಪ್ಪನ ಕೋಣೆಯಲ್ಲಿ ದೀಪ ಆರಿದೆ. ಮಲಗಿರಬೇಕು. ಅಂಗಳದ ಬಾಗಿಲನ್ನು ಸದ್ದು ಮಾಡದೇ ಮೆಲ್ಲಗೆ ನೂಕಿ ಒಳ ಹೊಕ್ಕರೆ, ಅಲ್ಲೆ ನಡು ಅಂಗಳದಲ್ಲಿ ಶಾಲು ಹೊದ್ದು ನಿಂತಿರುವ ಆಜಾನುಬಾಹು. ಧಸಕ್ಕೆಂದಿತು ಎದೆ. ಅಪ್ಪ ಎಂದೂ ಹೀಗೆ ನಿದ್ರೆ ತಪ್ಪಿಸಿ ಬಂದವರಲ್ಲ.
"ಎಲ್ಲಿಗೆ ಈ ನಡುರಾತ್ರಿಯಲ್ಲಿ?"
"ಯಮುನೆಯ ತಟಕ್ಕೆ ಹೋಗಿದ್ದೆ, ತಂಗಾಳಿಗೆ ನಿದ್ದೆ ಬಂದದ್ದೆ ತಿಳಿಯಲಿಲ್ಲ. ಈಗಷ್ಟೆ ಎಚ್ಚರಾಯಿತು." ಎಂದ.
"ಸರಿ. ಈಗ ಮಲಕ್ಕೊ. ಬೆಳಿಗ್ಗೆ ಮೊದಲ ಜಾವದಲ್ಲಿ ರಿಯಾಝ್ ಇರುವಾಗ ಹೀಗೆ ನಿರ್ಲಕ್ಷ್ಯ ಸಲ್ಲ. ನೆನಪಿದೆಯಲ್ಲ ಇನ್ನು ಎರಡೇ ವಾರವಿದೆ. ಅಲ್ಲಿ ನನ್ನ ಮಾನಹರಣ ಮಾಡಬೇಡ"
"ಸರಿ" ಎಂದು ತಲೆಬಗ್ಗಿಸಿ ಒಳನಡೆದ ಬಿಲಾಸ್ ಖಾನ್.
ಹೌದು ಇನ್ನೆರಡೇ ವಾರದಲ್ಲಿ ತಮ್ಮ ಪ್ರಯಣ ಶುರು ವೃಂದಾವನಕ್ಕೆ. ಅಪ್ಪನ ಗುರುಗಳಾದ ಸ್ವಾಮಿ ಹರಿದಾಸರ ಜಯಂತಿ ಆಚರಿಸಲು.
ಇನ್ನು ಬರೇ ಇಪ್ಪತ್ತ ಮೂರು ದಿನಗಳು. ಸ್ವಾಮಿ ಹರಿದಾಸ ಸನ್ನಿಧಿಯಲ್ಲಿ ತನ್ನ ಮೊದಲ ಗಾಯನ. ತನ್ನ ಹದಿನೆಂಟು ವರುಶಗಳ ರಿಯಾಝಿನ ಸತ್ವ ಪರೀಕ್ಷೆ. ಮತ್ತು ತನ್ನ ತಂದೆ ತಾನಸೇನರ ಮಾನಹರಣ. ನಗು ಬಂತು ಬಿಲಾಸ್ ಖಾನ್ ಗೆ.
ಅದಾದ ಮೇಲೆ ಈ ವಾಡೆ, ಈ ಮಹಲುಗಳು, ಈ ರಾಜ ಮಂದಿರ, ಕೋಟೆ ಕೊತ್ತಲಗಳ ನಡುವಿನಿಂದ ದೂರಕ್ಕೆ ಓಡಿ ಈ ಬೇಡಿಗಳನ್ನೆಲ್ಲ ಕಳಚಿಕೊಳ್ಳಬೇಕು. ಅಲ್ಲಿ ತಾನು ಮತ್ತು ತನ್ನ ಪ್ರಿಯ ಭೈರವಿ ಮಾತ್ರ.
"ಛೋಟೆ ಸಾಹಬ್, ಛೋಟೆ ಸಾಹಬ್," ಕೆಲಸದಾಳು ರಶೀದ ನಿದ್ರೆಯಿಂದ ಎಚ್ಚರಿಸುತ್ತಿದ್ದಾನೆ. ಎದ್ದು ಕುಳಿತು ಮೈಮುರಿದು ಕಿಟಕಿಯತ್ತ ನೋಡಿದರೆ ಇನ್ನೂ ದಟ್ಟ ಕತ್ತಲು.
ರಿಯಾಝ್ ಸಮಯವಾಯಿತು ಬೇಗ ತಯಾರಾಗಿ ಎಂದ ರಶೀದ. ಲಗುಬಗೆಯಿಂದ ತಯಾರಾಗಿ ರಿಯಾಝ್ ಕೋಣೆ ತಲುಪಿದಾಗ, ಅದಾಗಲೇ ಅಪ್ಪ ತಾನ್ಪುರಾ ಹಿಡಿದು ತನ್ಮಯರಾಗಿದ್ದರು. ಸಾರಂಗಿಯ ವಲೀ ಖಾನ್ ಮತ್ತು ಪಖಾವಾಝ್ ನ ರಮಾಕಾಂತ ಶರ್ಮಾ ಕೂಡ. ಸದ್ದು ಮಾಡದೇ ಎದುರು ಕುಳಿತು ತನ್ನ ತಾನ್ಪುರಾ ಎತ್ತಿ ಶ್ರುತಿ ಮಾಡತೊಡಗಿದ. ಅಪ್ಪನ ಶಿಸ್ತೇ ಅದು. ಅವರ ತಾನ್ಪುರಾ ಮೀಟೀಗೇ ತನ್ನದೂ ಶ್ರುತಿ ಕೂಡಬೇಕು. ಅದರಲ್ಲಿ ಬಿಲಾಸ್ ಖಾನ್ ಏನೂ ಹಿಂದಿಲ್ಲ. ಒಂದೇ ಮೀಟಿಗೆ ಶ್ರುತಿಗೊಳಿಸಿ ತಂದೆಯ ಜೊತೆಗೆ ಇವನದೂ ಝೇಂಕಾರ ಹರಡತೊಡಗಿತು ಆ ಕೋಣೆಯಲ್ಲಿ.
ಆ ಝೇಂಕಾರದಲ್ಲಿ ಮುಳುಗುತ್ತ ಅಪ್ಪ ಮಗ ಇಬ್ಬರೂ ಲಹರಿ ತುಂಬಿಕೊಂಡರು.
ಒಂದು ಸ್ವರ ಹುಟ್ಟಿ ಮಂದ್ರವಾಗಿ ತಾನ್ಪುರಾದ ಝೇಂಕಾರದಲೆಗಳ ಒತ್ತಿಗೇ ಹರಡಿಕೊಳ್ಳುತ್ತಾ ಬಿಗಿಯಾಗತೊಡಗಿತು.
ಮೆಲ್ಲನೆ ಕಣ್ಣುತೆರೆದ ಬಿಲಾಸ್ ಖಾನ್. ತಂದೆ ಶುರು ಹಚ್ಚಿದ್ದರು. ಮತ್ತೆ ಕಣ್ಣು ಮುಚ್ಚಿ ತನ್ಮಯತೆಯನ್ನು ತಂದು ಕೊಂಡ.
ಸ್ವರ ಪ್ರಸ್ತಾರ ಝೇಂಕಾರದಲೆಗಳ ನಡುವಿನಿಂದ ಮೇಲೆದ್ದು ನಿಲ್ಲ ತೊಡಗಿತ್ತು. ಮಿಂಯಾ ತಾನಸೇನರ ಕಂಠದಿಂದ ಹೊರಬಿದ್ದ ಸ್ವರಗಳು ಸ್ವತಂತ್ರ ಸಂಚಾರಿಗಳು.
ಬಿಲಾಸ್ ಖಾನ್ ಗೂ ಲಹರಿ ತುಂಬಿತ್ತು. ಅದರಲ್ಲೇ ಮೈಮರೆತ.
ಅಹಿರ ಭೈರವ ತಂದೆಯ ದಿವ್ಯ ಕಂಠದಿಂದ ದಬದಬೆಯ ಗಂಭೀರತೆಯಲ್ಲಿ ಹರಿದು ಬರುತಿತ್ತು. ಬೆಳಗಿನ ಮೊದಲ ಜಾವದ ನೀರವತೆಗೆ ಭಂಗ ತರದೇ ಆ ನೀರವತೆಯನ್ನು ಇನ್ನಷ್ಟು ಗಾಢಗೊಳಿಸುವ ಗಂಡು ಮೆಟ್ಟಿನ ರಾಗವದು.
ಪ್ರಸ್ತಾರ ಮುಂದುವರಿಸಿ ವಿಲಂಬಿತದ ಮೊದಲ ಸಂನಲ್ಲಿ ಶರ್ಮಾಜಿಯ ಪಖಾವಾಝದ ಪೆಟ್ಟು.
ತುಮ ರಾಖೊ ನಿತ ನಿರಮಲ ಗಂಗಾಧರ
ಕಣ್ಣು ಮುಚ್ಚಿ ಮಗ್ನನಾಗಿ ಸಂಗೀತದಲೆಗಳಲ್ಲಿ ಮುಳುಗಿದ್ದ ಬಿಲಾಸಖಾನನಿಗೆ ಜಗ್ಗೆಂದು ಭೈರವಿಯ ನೆನಪು. ಅವಳ ಝಲ್ಲೆನ್ನುವ ಕಾಲಂದಿಗೆಯ ತಾನ, ಅವಳ ಮಾಟವಾದ ಅಂಗರೇಖೆ, ಅವಳ ಸೊಬಗಿನ ಕೇಶರಾಶಿ, ಅವಳ ಸ್ನಿಗ್ಧ ಸುಂದರ ನಗು, ಅವಳ....
"ಬಂದ್ ಕರೋ...." ಅಬ್ಬರಿಸಿದ ತಾನಸೇನನ ಬೊಬ್ಬೆಗೆ ಬೆಚ್ಚಿ ಕಣ್ಣು ತೆರೆದ ಬಿಲಾಸ್ ಖಾನ್. ತಂದೆ ಸಿಟ್ಟಿನಿಂದ ಎದ್ದು ನಿಂತಿದ್ದರು. ಅಪ್ಪನೆದುರು ಕೂರಲಾರದೇ ಇವನೂ ತಾನ್ಪುರಾ ಕೆಳಗಿಟ್ಟು ಎದ್ದು ನಿಂತ. ಛಟೀರ್ ಎಂದು ಕೆನ್ನೆ ಕೆಂಪಾಯಿತು.
"ನೀನಿನ್ನೂ ಭೈರವಿಯ ಹುಚ್ಚು ಬಿಟ್ಟಿಲ್ಲ.! ನಾನು ಹಾಡಬೇಡ ಎಂದರೂ ಭೈರವಿ ಹಾಡಲು ನಿನಗೆಷ್ಟು ಧೈರ್ಯ.
ಕೇಳು.. ನಿನಗೆ ಇಂದಿನಿಂದ ಭೈರವಿ ನಿಷೇಧ. ಮತ್ತೆ ಭೈರವಿ ಹಾಡಿದರೆ ನಿನ್ನ ಕಂಕಣ ಕಿತ್ತೊಗೆಯುತ್ತೆನೆ." ದುರ್ದಾನ ತೆಗೆದುಕೊಂಡವನಂತೆ ಹೊರನಡೆದ ತಾನಸೇನ. ಉಳಿದಿಬ್ಬರೂ ಹೊರಹೋದ ಮೇಲೆ ಇವನೊಬ್ಬನೆ ಉಳಿದ.
ಕೆನ್ನೆ ಚುರುಗುಡುತ್ತಿತ್ತು. ಅಲ್ಲೆ ನಿಂತು ಮೈಮರೆತಿದ್ದ ಬಿಲಾಸ್ ಖಾನ್ ಕೆನ್ನೆಗೆ ತಂಗಾಳಿ ಸೋಕಿದಂತಾಗಿ ಕಣ್ಣುತೆರೆದರೆ ಭೈರವಿ. ಅವಳ ಉಸಿರನ್ನು ತನ್ನ ಕೆನ್ನೆಗೆ ಊದಿ ಸಂತೈಸುತ್ತಿದ್ದಾಳೆ. ಹಾಗೆ ತಬ್ಬಿಕೊಂಡವನ ಎದೆಗೆ ಒರಗಿದಳು ಭೈರವಿ.
ಭೈರವಿ ತನ್ನ ಭ್ರಮೆಯಂತೆ. ಹಾಗೆಂದವರಿಗೆ ಹುಚ್ಚು. ಇಗೋ ಇಲ್ಲಿ ನನ್ನೆದುರಿಗೆ ಅಂಗಾಂಗ ತುಂಬಿ ನಿಂತಿರುವ ಈ ಸೌಂದರ್ಯದ ಖಣಿ ನನ್ನ ಕಲ್ಪನೆಯೇ?.
ಅವಳ ಮುಖವನ್ನು ತನ್ನ ಬೊಗಸೆಯಲ್ಲಿ ತುಂಬಿಕೊಂಡು ಅವಳ ಕಣ್ಣ ಮೇಲೆ ಹೂಮುತ್ತನ್ನಿತ್ತ.
"ಭೈರವಿ..."
"ಹ್ಮೂ.."
"ನೀನು ಭ್ರಮೆಯೇ? ನನ್ನ ಕಲ್ಪನೆ ಮಾತ್ರವೇ?"
ಗಿಲ್ಲನೆ ನಕ್ಕು ಕತ್ತು ಕೊಂಕಿಸಿದಳು ಭೈರವಿ.
"ಯಾರು ಹಾಗೆಂದರು?"
"ಎಲ್ಲರೂ.. ನೀನು ರಾಗಿಣಿಯಂತೆ... ಕವಿಗಳ ಕಲ್ಪನೆಯಂತೆ... ನನ್ನ ಭ್ರಮೆಯಂತೆ... ಹೌದೆ?"
ಮತ್ತೆ ನಕ್ಕು ಎದೆಗೊರಗಿದಳು. ಅವಳ ನಗುವಿನಲೆಗಳು ತಂದೆ ಕೊಂಚ ಹೊತ್ತಿನ ಮೊದಲು ಹಾಡಿ ಬಿಟ್ಟಿದ್ದ ಅಹಿರ್ ಭೈರವದ ಲಹರಿಯ ಮೇಲೆ ಹರಡಿಕೊಳ್ಳತೊಡಗಿದವು.
"ನಿನಗೇನು ಅನ್ನಿಸುತ್ತೆ..."
"ನನಗೆ ಅದೆಲ್ಲ ಸುಳ್ಳು ಅನಿಸುತ್ತದೆ. ನೀನೆ ಸತ್ಯ. ನೀನು ನನ್ನ ಉಸಿರು, ನನ್ನ ಪ್ರಿಯೆ, ನನ್ನ ಬದುಕು. ಇಲ್ಲಿ ನನ್ನ ಕಣ್ಣೆದುರಿಗೆ ನಗುತ್ತಿರುವುದು ನನಗೆ ಕಿವಿಯಾರೆ ಕೇಳುತ್ತಿದೆ. ಇದು ಭ್ರಮೆಯೇ?. ನನ್ನನ್ನು ತಬ್ಬಿಕೊಂಡಿರುವ ನಿನ್ನ ಅಂಗ ಸ್ಪರ್ಶವೂ ನನ್ನ ಅರಿವಿಗೆ ಬರುತ್ತಿದೆ. ಇದು ಕಲ್ಪನೆಯೇ? ನಿನ್ನ ಬಿಸಿಯುಸಿರಿನ ಪರಿಮಳವೂ ನನ್ನ ಮತ್ತೇರಿಸುತ್ತಿದೆ. ಇದು ಭ್ರಮೆಯೇ? ಇಲ್ಲ ನೀನು ನನ್ನ ಜೀವ. ಭೈರವಿ..
ಇನ್ನು ಕೆಲವೇ ದಿನಗಳು.. ಮತ್ತೆ ನಾವಿಬ್ಬರೇ ಜೊತೆಯಾಗಿ ಎಲ್ಲಾದರೂ ಹೋಗಿ ಬಿಡೋಣ. ನನ್ನ ಜೊತೆ ಬರ್ತಿಯಲ್ಲ ನೀನು?"
"ಹ್ಮೂ... ಆದರೆ ಮತ್ತೆ ಆ ಕಲ್ಲು ಮಂಟಪಕ್ಕೆ ಕರೆಯಬೇಡ. ನನಗೆ ಹೆದರಿಕೆ" ಎಂದು ಹುಸಿಕೋಪದಿಂದ ಅವನೆದೆ ಗಿಲ್ಲಿದಳು ಭೈರವಿ.
ಯಾರೋ ಕೆಮ್ಮಿದಂತಾಯಿತು. ಬಾಗಿಲಲ್ಲಿ ಶರ್ಮಾಜಿ ಮತ್ತು ವಲೀ ಖಾನ್ ನಿಂತಿದ್ದರು. ಭೈರವಿ ಇವನ ಕೆನ್ನೆಗೊಂದು ಮುತ್ತನ್ನಿಟ್ಟು ಅಂದುಗೆಯ ಸದ್ದು ಮಾಡುತ್ತಾ ಮೆಲ್ಲನೆ ಹೊರನಡೆದಳು.
"ಶುರುಮಾಡೋಣವೇ ಸಾಹಬ್..."
ಮತ್ತೆ ಶುರುವಾಯಿತು ತಾಲೀಮು. ತನ್ನ ತಂದೆಯಡಿ ಪಳಗಿದ ಇಬ್ಬರು ದಿಗ್ಗಜರ ನಿಗರಾವಣೆಯಲ್ಲಿ ಭೈರವಿಗೆ ಪ್ರವೇಶವೆಲ್ಲಿ. ಬಿಲಾಸ್ ಖಾನ್ ಭಾರವಾದ ಬೇಡಿಗಳನ್ನು ಕಾಲಿಗೆ ತೊಡಿಸಿದಂತೆ ಚಡಪಡಿಸತೊಡಗಿದ. ಹಂಬಲ... ಅಲವತ್ತಾಯಿತು. ತನ್ನ ಅಸ್ತಿತ್ವವೇ ಭಾರವಾಗಿ ಸೋರತೊಡಗಿತು. ಭೈರವಿಯ ಸ್ಪರ್ಶದ ಮದ್ದಿಲ್ಲದೆ ಬಿಲಾಸ್ ಖಾನ್ ನರಳ ತೊಡಗಿದ. ಇನ್ನೇನು ಗ್ವಾಲಿಯರ್ ಗೆ ತೆರಳಲು ಎರಡು ದಿನ ಇರುವಾಗ ತೀವ್ರ ಜ್ವರದ ತಾಪದಿಂದ ಬಸವಳಿಯತೊಡಗಿದ ಬಿಲಾಸ್ ಖಾನ್.
ವೈದ್ಯರ ಮೇಲ್ವಿಚಾರಣೆಯಲ್ಲಿ ಇವನನ್ನು ಪಲ್ಲಕ್ಕಿಯಲ್ಲಿಟ್ಟು ಕಾರಂವಾ ಹೊರಟಿತು ವೃಂದಾವನದತ್ತ. ಹಾದಿಯುದ್ದಕ್ಕೂ ಕನವರಿಸುತ್ತಿದ್ದ ಬಿಲಾಸ್ ಖಾನ್. ಭೈರವಿ ಕಣ್ಣು ಮುಚ್ಚಾಲೆಯಾಡುತ್ತಿದ್ದಳು. ಅವಳ ನೆನಪು ಸುಳಿದಾಗೆಲ್ಲ ತನ್ನ ಕೆನ್ನೆ ಮತ್ತೆ ಚುರುಗುಟ್ಟಿದ ಅನುಭವ. ಅದೇ ಗುಂಗಿನಲ್ಲಿ ಪಲ್ಲಕ್ಕಿಯ ಒಳಗೆಲ್ಲ ತೀವ್ರವಾಗಿ ಜ್ವಲಿಸುವ ಸ್ವರ ಸಂಚಾರಗಳು.
ವೃಂದಾವನ ತಲುಪಿದ ಮೇಲೆ ನಿರಂತರ ಮದ್ದು, ಲೇಪಗಳಿಂದ ಜ್ವರವೇನೋ ಇಳಿತಕ್ಕೆ ಬಂತು. ಆದರೆ ಬಿಲಾಸ್ ಖಾನ್ ಮಂಕಾಗಿ ಹೋಗಿದ್ದ.
ಸಮಾರೋಹದ ಹಿಂದಿನ ರಾತ್ರಿ ಬಿಲಾಸ್ ಖಾನ್ ಇರುವ ಖೋಲಿಗೆ ತಾನಸೇನ ಬಂದಾಗ ಕಂಡದ್ದು ಆ ಮಂದವಾದ ಲಾಟೀನು ಬೆಳಕಿನಲ್ಲಿ ಒಬ್ಬನೆ ತಾನ್ಪುರಾ ಮೀಟುತ್ತಾ ರಿಯಾಝ್ ಮಾಡುತ್ತಿರುವ ಬಿಲಾಸ್ ಖಾನ್. ಸಮಾಧಾನವಾಯಿತು ತಾನಸೇನನಿಗೆ. ಕೊಂಚ ಹೊತ್ತು ನಿಂತಿದ್ದು ಹಿಂತಿರುಗಿದ.
ಅಂದು ರಾಧಾ ಅಷ್ಟಮಿ, ಮತ್ತು ಅಂದೇ ಸ್ವಾಮಿ ಹರಿದಾಸರ ಜಯಂತಿ. ಬಾಂಕೆ ಬಿಹಾರಿಯ ದೇವಳ, ಸ್ವಾಮಿ ಹರಿದಾಸರ ಸಮಾಧಿಯ ನಿಧಿವನ ಮತ್ತು ವ್ರುಂದಾವನದಲ್ಲೆಲ್ಲ ಸಡಗರದ ಹಬ್ಬ. ತಳಿರು ತೋರಣಗಳು, ಹೂ ಮಾಲೆಗಳಿಂದ ರಸ್ತೆಯ ಇಕ್ಕೆಲಗಳಲ್ಲಿ ಸಂಭ್ರಮ. ಬಾಂಕೆ ಬಿಹಾರಿಗೆ ವಿಶೇಷ ಪೂಜೆ, ಉತ್ಸವ. ಮುಂಜಾವ ಎರಡನೇ ಪ್ರಹರಕ್ಕೆ ನಿಧಿವನದ ಸಮಾಧಿ ಸ್ಥಲದಲ್ಲಿ ಸ್ವಾಮಿ ಹರಿದಾಸ ಸಂಗೀತ ಸಮಾರೋಹ. ಮೊದಲು ಶಿಷ್ಯ ಪರಂಪರೆಯ ಕಂಕಣಧಾರಕರಿಗೆ ಅವಕಾಶ.
ಸ್ವಾಮಿ ಹರಿದಾಸರ ಶಿಷ್ಯನಾದ ತಾನಸೇನನ ಮಗ ಮತ್ತು ಶಿಷ್ಯ ಬಿಲಾಸ್ ಖಾನ್ ನ ಹದಿನೆಂಟು ವರುಶಗಳ ನಿರಂತರ ತಾಲೀಮಿನ ಸತ್ವ ಪರೀಕ್ಷೆ.
ಹೆಸರಾಂತ ಸಂಗೀತಗಾರರು, ದಿಗ್ಗಜರು, ಶ್ರೀಮಂತ ಕಲಾಪ್ರೇಮಿಗಳು, ರಾಜರುಗಳು, ಪ್ರತಿನಿಧಿಗಳ ತೂಕದ ಸಭೆ. ಹಾಡುಗಾರಿಕೆಯಲ್ಲಿ ಕೊಂಚ ಹಿಂದು ಮುಂದಾದರೂ ಆ ಹದಿನೆಂಟು ವರುಶಗಳ ಅವಿರತ ಸಾಧನೆಗೆ ನೀರು ಸುರಿದಂತೆ. ತಾನಸೇನನ ಬಳಗದಲ್ಲೆಲ್ಲ ಬಿಗಿ ಉಸಿರಿನ ವಾತಾವರಣ.
ಬಿಲಾಸ್ ಖಾನ್ ಮಾತ್ರ ಅದೇ ಮಂಕು ಕಂಗಳ ನೀರಸ ಮುದ್ರೆ. ಜ್ವರ ಬಿಟ್ಟಿದ್ದರೂ ನಿಶ್ಶಕ್ತಿ ಮುಖದಲ್ಲಿ ಎದ್ದು ಕಾಣುತ್ತಿತ್ತು.
ಸಾಥಿ ದಿಗ್ಗಜರದ್ದು. ಸಾರಂಗಿಗೆ ಉಸ್ತಾದ್ ಜೈನುಲ್ ಅಬೇದಿನ್ ಮತ್ತು ಪಖಾವಾಝದಲ್ಲಿ ಪಂಡಿತ್ ಓಂಕಾರ್ ನಾಥ ಮಿಶ್ರಾ. ದಿಗ್ಗಜ ಸಭೆಯನ್ನು ನೋಡಿ ಅತ್ತಿತ್ತ ಬೆರ್ಚಿ ಹರಿಹಾಯದಂತೆ ಸುಭದ್ರ ಬೇಲಿಗಳು ಇಬ್ಬರೂ.
ಸಮಾಧಿಗೆ ನಮಿಸಿ ಬಂದ ಬಿಲಾಸ್ ಖಾನ್ ಗುರುಗಳೂ ತಂದೆಯವರೂ ಆದ ತಾನಸೇನರಿಗೆ ಸಾಷ್ಟಾಂಗವೆರಗಿದ. ವೇದಿಕೆಯೇರಿ ಸಭಿಕರಿಗೆ ನಮಿಸಿ, ತಾನ್ಪುರಾಗೆ ನಮಿಸಿ ಶ್ರುತಿಗೊಳಿಸಿದ. ಝೇಂಕಾರ ಹರಡತೊಡಗಿತು. ಮುಂಜಾನೆಯ ನಸು ಬೆಳಕಿನಲ್ಲಿ ನಿಸರ್ಗದ ಸಹಜ ಶಬ್ದ ಬಿಟ್ಟರೆ ಬೆರೆಲ್ಲವೂ ನಿಶ್ಶಬ್ದ ಏಕಾಗ್ರ.
ತಾನ್ಪುರಾದ ಝೇಂಕಾರ ಸ್ಥಾಯಿಯಾಗಿ ನೆಲೆಸುತ್ತಿದ್ದಂತೆ ಅದಕ್ಕೆ ಒತ್ತಿಕೊಂಡ ಹಾಗೆ ಉಧ್ಬವಿಸಲಾರಂಭಿಸಿತು ಮೊದಲ ಸ್ವರ. ಸ್ವರ ಪ್ರಸ್ತಾರವಾಗುತ್ತಿದ್ದಂತೆ ರಾಗ ತೋಡಿಯ ಅಂಗ ನಿಚ್ಚಳತೆ. ತಾನಸೇನನಿಗೆ ಸಮಾಧಾನ.
ಝಲ್ಲೆನ್ನುವ ಅಂದುಗೆಯ ಸದ್ದು. ಗಾಯನದ ಲಯದಲ್ಲಿದ್ದಂತೆಯೇ ಬಿಲಾಸ್ ಖಾನ್ ತನ್ನ ಅರೆ ತೆರೆದ ಕಣ್ಣುಗಳಿಂದ ಅತ್ತ ನೋಟ ಹಾಯಿಸಿದ. ಅಗೋ ಅಲ್ಲಿ ಸಮಾಧಿ ಸ್ಥಲದ ಹತ್ತಿರದ ಕಲ್ಲು ಕಟ್ಟೆಯ ಮೇಲೆ ಕುಳಿತು ಕಾಲು ಜೋಲಾಡಿಸುತ್ತಿದ್ದಾಳೆ ಭೈರವಿ ಲಯಬದ್ಧವಾಗಿ. ಬೆಳ್ಳನೆಯ ಕಸೂತಿಯ ಲೆಹೆಂಗಾ ಮತ್ತು ಅಂಗವಸ್ತ್ರ. ಅವಳ ಮಾದಕ ಸೌಂದರ್ಯವನ್ನು ಇಮ್ಮಡಿಗೊಳಿಸುವ ಕಂಚುಕ. ಹುಲ್ಲುಗರಿಕೆಯ ಮೇಲೆ ನಿಂತ ಮಂಜು ಹನಿಗಳ ಕೋಮಲತೆ ಅವಳ ಇರುವಿಕೆಯಲ್ಲಿ.
ಸಭೆಯಲ್ಲಿ ಗುಸುಗುಸು... ಯಾವ ರಾಗವಿದು.....ತೋಡಿಯ ಅಂಗನಿಚ್ಚಳತೆಯಿದೆ.... ಆದರೆ ತೋಡಿಯಲ್ಲ..... ಭೈರವಿಯ ಎಲ್ಲ ಸ್ವರಗಳಿವೆ...ಭೈರವಿಯೂ ಅಲ್ಲ.. . ರೋಮಾಂಚಕರ ಸ್ವರ ಸಂಚಾರಗಳು.
ತಾನಸೇನನಿಗೂ ಸಿಟ್ಟು. ಆದರೆ ಸಭಾ ಮರ್ಯಾದೆಯನ್ನು ಉಲ್ಲಂಘಿಸುವಂತಿಲ್ಲ. ಗಾಯಕ ಸಂಗೀತದ ನಿಯಮಗಳಿಂದ ಒಂದಿನಿತೂ ಅತ್ತಿತ್ತ ಜರುಗಿಲ್ಲ. ತನ್ನ ನಿಷೇದವನ್ನೂ ಮೀರಲಿಲ್ಲ.
ಪ್ರಸ್ತಾರ ಮುಂದುವರೆಸಿ ಖಯಾಲ ತೊಡಗಿರುವಂತೆಯೆ ಪಖಾವಜದ ಧಾ.. ಸಮ್ಮಿಳಿತ.
ನಯನ ಮೊರೆ ಜಲ ಭರ ಆಯೆ.. ದಿಖತ ತೊಹೆ...
ಕಾಹೆ ಪಿಯಾ ನಹಿ ದೇತಾ ದರಸ ಮೊಹೆ...
ವಿರಹದಿಂದ ಪರಿತಪಿತಳಾದ ಹೆಣ್ಣಿನ ಆರ್ದ್ರ ಮೊರೆ. ಸುಂದರ ನಗು ಚೆಲ್ಲುತ್ತಾ ತನ್ನತ್ತ ನೋಡಿ ಸಮ್ಮತಿಸುತ್ತಿದ್ದಾಳೆ ಭೈರವಿ.
ಮೊದಲ ಚೀಜಿನಿಂದ ಸರಸ್ವತಿಯನ್ನು ವಂದಿಸುವುದು ಪರಂಪರೆ. ತಾನಸೇನ ಸಿಟ್ಟೆದ್ದು ಅಲ್ಲಿಂದ ಹೊರಹೋಗಿದ್ದು ಗಮನಿಸದಷ್ಟು ಮಂತ್ರ ಮುಗ್ಧ ಸಭಾಸದರು. ನಡುವೆ ಪ್ರತಿ ಸಮ್ಮಿಗೂ ವಾಹ್ ವಾಹ್ ಎಂದು ಅಭಿನಂದಿಸಿ ತಲೆದೂಗುವ ನಿಪುಣ ಕಲಾಪ್ರೇಮಿಗಳು. ಮೊದಲ ಸಾಲಿನ ಉದ್ಗಾರಗಳು ಯಾವತ್ತೂ ಕಲಾವಿದರಿಗೆ ಸಮ್ಮಾನದ ಪಾರಿತೋಷಕ. ಅವನ ಲಯಕಾರಿ ಅಷ್ಟು ನಿಚ್ಚಳ. ಸಾರಂಗಿಯಂತಹ ವಾದ್ಯಗಳಲ್ಲಿ ಮಾತ್ರ ಹೊರಡಿಸಬಹುದಾದಂತಹ ಕೆಲವು ಸ್ವರಗಳ ಸಂಚಾರವನ್ನು ನಿರಾಳವಾಗಿ ಹಾಡುವ ಚಾಕಚಕ್ಯತೆ. ವಿಶಿಷ್ಟ ರಾಗ. ಸಮ್ಮೋಹಿತ ಶ್ರೋತೃಗಣ. ಆದರೆ ಇದು ಯಾವುದನ್ನೂ ಗಮನಿಸದ ಗಾಯಕ ತನ್ನದೇ ಆದ ಲೋಕವೊಂದರಲ್ಲಿ ವಿಹರಿಸುತ್ತಿದ್ದಾನೆ. ಭೈರವಿಯಾ ಮೋಹಕ ನರ್ತನಕ್ಕೆ ಸ್ಪಂದಿಸುತ್ತಾ.
ವಿಲಂಬಿತ ಖಯಾಲದ ಅಂತರಾ ಪ್ರವೇಶ.. ಮಧ್ಯಲಯದಲ್ಲಿ.
ಶೋಕ ಮನ ಛಾಯೇ, ಯಾದ ದರಸಾಯೇ..
ಕೈಸೆ ಧರೂಂ ಧಿರ್ ದೇವೋ ದರಸ ಮೊಹೆ...
ಬಿಲಾಸ್ ಖಾನ್ ಹಾಡುತ್ತಿರುವ ರಾಗದ ಪ್ರತೀ ರೋಮಾಂಚಕರ ಸಂಚಾರಕ್ಕೂ ಸಭೆಯಲ್ಲಿ ಹರ್ಷೋದ್ಗಾರಗಳು. ಇತಿಹಾಸ ನಿರ್ಮಿಸಿದ್ದ ಬಿಲಾಸ್ ಖಾನ್. ಮೊದಲ ಗಾಯನದಲ್ಲಿಯೇ ದಿಗ್ಗಜರ ಮನ್ನಣೆ. ಹೊಸ ರಾಗವೊಂದರ ಆವಿರ್ಭಾವ. ತಾನಸೇನನ ಮಾನಹರಣವಲ್ಲ ನಾಮೋದ್ಧರಣ.
ಅದಾಗಲೇ ವಿಲಂಬಿತದಿಂದ ಧ್ರುತಕ್ಕೆ ಪ್ರವೇಶಿಸಿದ್ದ ಬಿಲಾಸ್ ಖಾನ್.. ಅವನು ಮತ್ತು ಅವನ ಕಣ್ಣ ಮುಂದೆ ಈಗ ಭೈರವಿ ಮಾತ್ರ.
ಭೈರವಿಯೂ ಅವಳ ಶ್ವೇತ ಲೆಹೆಂಗಾದ ಜಲಪಾತದಂತಹ ನೆರಿಗೆಗಳನ್ನು ಚಿಮ್ಮಿಸಿ ನರ್ತಿಸುತ್ತಿದ್ದಾಳೆ. ಸಮಾಧಿಯ ಮುಂದಣ ರಂಗವಲ್ಲಿಯ ವರ್ತುಲದಲ್ಲಿ. ಅವಳ ನರ್ತನಕ್ಕೆ ಇಂಬುಕೊಡುವ ಮಿಶ್ರಾಜಿಯ ಪಖಾವಾಝದ ಧಿನನ.
ಜಾ ಜಾರೆ ಜಾ ಓ ಖಗವಾ,
ಇತನೋ ಸಂದೇಸ್ ಮೊರೆ ಕಹಿಯೋ ಜಾರೆ..
ಜೊ ಆಯೆ ಪ್ರೀತಮ ದ್ವಾರ
ನೈನಾ ಭಿಚಾವೂಂ ಮಗವಾ.
ಧ್ರುತಲಯದಲ್ಲಿ ಬಂದಿಶ್. ಬಿಲಾಸಖಾನನ ಚಂಚಲ ತಾನಕಾರಿಗಳಿಂದ ಭೈರವಿಯ ನರ್ತನಕ್ಕೆ ರಂಗು ತುಂಬುವ ರಾಗಸುಧೆ. ತುದಿಗಾಲಲ್ಲಿ ಗಿರಗಿರನೆ ಚಕ್ರಧಾರ ತಿರುಗುತ್ತಿರುವ ಭೈರವಿ. ನೆಲ ಬಿಟ್ಟು ಮೇಲೆ ಗಾಳಿಯಲ್ಲಿ ನರ್ತಿಸುವ ಹಾಗೆ. ಇಡೀ ನಿಸರ್ಗವೇ ಈ ಸಮಾಗಮವನ್ನು ಪ್ರತಿನಿಧಿಸುತ್ತಿದೆಯೋ ಎಂಬಂತೆ ಸ್ಥಬ್ದ ವಾಗಿರುವ ವಾತಾವರಣ. ಸೂರ್ಯನ ಹೊಂಬೆಳಕಿನ ಕಿರಣಗಳು ಭೈರವಿಯ ಮುಖವನ್ನು ಬೆಳಗಿಸಿದ್ದವು. ಬಿಲಾಸ್ ಖಾನ್ ಆ ರಾಗಿಣಿಯ ದಿವ್ಯತೆಯತ್ತ ಸಮ್ಮೋಹಿತನಾಗಿದ್ದ. ಎಲ್ಲವೂ ಮಾಯವಾಗಿದ್ದವು. ಸ್ವಾಮಿ ಹರಿದಾಸರ ಸಮಾಧಿ, ವೇದಿಕೆ, ಸಭಾಸದರು, ನಿಧಿವನ, ವ್ರಂದಾವನ, ಬಾಂಕೆ ಬಿಹಾರಿ.. ಉಳಿದಿದ್ದು ಆ ಸುಂದರ ರಾಗವೊಂದರ ಲಹರಿ ಮಾತ್ರ. ರಾಗ ಬಿಲಾಸ್ ಖಾನಿ ತೋಡಿ.
("ಭೈರವಿ" ಕತೆಯನ್ನು ನಾನು ಮೊದಲ ಬಾರಿ ಬರೆದದ್ದು ಸುಮಾರು ಹದಿನೈದು ವರ್ಷಗಳ ಹಿಂದೆ. ಮೈಸೂರು ವಿವಿಯ ಅಂತರ್ ಕಾಲೇಜು ನಾಟಕೋತ್ಸವದಲ್ಲಿ ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿಯರ ತಂಡವೊಂದು ಈ ಕತೆಯನ್ನು ನಾಟಕವನ್ನಾಗಿಸಿ ಅಭಿನಯಿಸಿ ಬಹುಮಾನ ಗಳಿಸಿತ್ತು. ಆದರೆ ಆ ಕತೆಯ ಹಸ್ತ ಪ್ರತಿ ನನ್ನಲ್ಲಿ ಕಳೆದು ಹೋಗಿತ್ತು.
ಅದಕ್ಕೆ ಮತ್ತೆ ಹೊಸದಾಗಿ ಅದೇ ವಸ್ತುವಿನ ಮೇಲೆ ಈ ಕತೆಯನ್ನು ಬರೆದಿದ್ದೇನೆ. ಆ ಕತೆಯ ಚೌಕಟ್ಟಿಗೂ ಈ ಕತೆಗೂ ತುಂಬ ಅಂತರವಿದೆ.
"ಬಿಲಾಸ್ ಖಾನಿ ತೋಡಿ" ರಾಗ ಹಿಂದುಸ್ತಾನಿ ಸಂಗೀತದ ಒಂದು ವಿಶಿಷ್ಟ ರಾಗ. ಈ ರಾಗಕ್ಕೆ ತೋಡಿಯ ರಾಗಾಂಗವಿದ್ದರೂ ಥಾಟ್ ಭೈರವಿಯಾಗಿದ್ದು ಭೈರವಿ ರಾಗದ ಮಾಟವಾದ ಸಂಚಾರಗಳನ್ನು ಇದು ಒಳಗೊಂಡಿದೆ. ಇದು ಹೇಗೆ ಹುಟ್ಟಿಕೊಂಡಿತು ಎಂಬುದರ ಬಗ್ಗೆ "ಹಲವು" ದಂತ ಕತೆಗಳು ಇರುವುದಾದರೂ ಈ ಕತೆಯಲ್ಲಿ ನಡೆವ ಸನ್ನಿವೇಶ ಪೂರ್ತಿ ನನ್ನ ಕಲ್ಪನೆ.)
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
2 comments:
ತುಂಬಾ ಚೆನ್ನಾಗಿದೆ
ಸರಳ ಭಾಷೆ..ಓದಿಸಿಕೊಂಡು ಹೋಗುತ್ತದೆ...
ಮನಸ್ಸನ್ನು ಆವರಿಸಿ ಕೊಂಡು ಬಿಡುತ್ತದೆ...
ಇದನ್ನು ಬೆರೆ ಥರ ಕೇಳಿದ್ದೆ...
ಧನ್ಯವಾದಳು...
ಓದಿ ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದ ಪ್ರಕಾಶ್.
ಕಾಮೆಂಟ್ ಪೋಸ್ಟ್ ಮಾಡಿ