ಜನವರಿ 6, 2009

ಕಾರ್ವರ್ ಬರೆದ "ಕ್ಯಾಥೆಡ್ರಲ್"-2


ನಾನು ಸ್ಕಾಚ್ ಬೆರೆಸಿದೆ. ಮೂರು ದೊಡ್ಡ ಗ್ಲಾಸುಗಳಲ್ಲಿ ಗುಟುಕು ನೀರು ಬೆರೆಸಿದ ಸ್ಕಾಚ್. ಸೋಫಾದ ಮೇಲೆ ಆರಾಮವಾಗಿ ಮೈ ಚೆಲ್ಲಿಕೊಂಡು ಸ್ಕಾಚ್ ಗುಟುಕರಿಸುತ್ತ ನಾವು ರಾಬರ್ಟನ ಪ್ರಯಾಣದ ಬಗ್ಗೆ ಅದು ಇದು ಮಾತು ಶುರು ಹಚ್ಚಿದೆವು. ಪಶ್ಚಿಮ ಕರಾವಳಿಯಿಂದ ಉತ್ತರಕ್ಕೆ ಆ ಸುದೀರ್ಘ ವಿಮಾನ ಯಾನದ ಬಳಿಕ ಮತ್ತೆ ಮೂರು ಗಂಟೆಗಳ ರೈಲು ಪ್ರಯಾಣ. ಕೊನೆಯ ಭಾಗಕ್ಕೆ ಮತ್ತೊಂದು ರೌಂಡು ಸ್ಕಾಚ್ ಬೆರೆಸಬೇಕಾಯಿತು.

ಕುರುಡರು ಸಿಗರೇಟು ಸೇದುವುದಿಲ್ಲ ಎಂದು ನಾನು ಎಲ್ಲೋ ಓದಿದ್ದೆ. ಸೇದಿ ಹೊರಕ್ಕೆ ಬಿಟ್ಟ ಹೊಗೆ ಲಯಲಯವಾಗಿ ಸಾಗುವ ಲಹರಿಯನ್ನು ಅವರು ನೋಡಲಾಗುವುದಿಲ್ಲವಲ್ಲ! ಅದಕ್ಕಿರಬಹುದು. ಬಹುಶ ನನಗೆ ಕುರುಡರ ಬಗ್ಗೆ ಗೊತ್ತಿರುವುದು ಆ ಒಂದು ವಿಷಯ ಮಾತ್ರ. ಆದರೆ ಈ ಕುರುಡ ಕೊನೆಯ ದಮ್ಮಿನವರೆಗೆ ಒಂದು ಸಿಗರೇಟು ಸೇದಿ ಮತ್ತೊಂದನ್ನು ಉರಿಸಿದ. ಬೇಗನೆ ತುಂಬಿದ ಆಶ್ ಟ್ರೇಯನ್ನು ನನ್ನ ಹೆಂಡತಿ ಬರಿದು ಮಾಡಿ ತಂದಳು.

ಊಟಕ್ಕೆ ಕೂತಾಗ ಇನ್ನೊಂದು ಸುತ್ತು ಪೇಯ ಹನಿಸಿದೆ. ಎಲ್ಲರ ಮುಂದೆ ಪ್ಲೇಟ್ ಇಟ್ಟು ನನ್ನ ಹೆಂಡತಿ ಚಿಕನ್ ಫ್ರೈ, ಆಲೂಗಡ್ಡೆ ಪಲ್ಯ, ಅವರೇ ಕಾಳಿನ ಉಸುಳಿ ಬಡಿಸಿದಳು. ನಾನು ಎರಡು ಎಸಳು ಬ್ರೆಡ್ಡಿಗೆ ಬೆಣ್ಣೆ ಸವರಿ ಅವನತ್ತ ದೂಡಿದೆ. "ರಾಬರ್ಟ್ ನಿನ್ನ ಬ್ರೆಡ್ ಬಟರ್ ಇಲ್ಲಿದೆ" ಅಂತಂದು ಸ್ಕಾಚ್ ಗುಟುಕರಿಸಿ "ಸರಿ ಇದೀಗ ನಾವು ಪ್ರಾರ್ಥಿಸೋಣ" ಎಂದೆ ನಾನು. ರಾಬರ್ಟ್ ತಲೆ ಬಗ್ಗಿಸಿದ. ನನ್ನ ಹೆಂಡತಿ ಅಚ್ಚರಿಯಿಂದ ನನ್ನತ್ತ ನೋಡಿದಳು. ಪ್ರಾರ್ಥನೆಯೇ? "ಊಟದ ನಡುವೆ ಫೋನು ಬಂದು ಊಟ ತಣ್ಣಗಾಗದಿರಲಿ ಅಂತ ಪ್ರಾರ್ಥನೆ." ಅಂತ ನಕ್ಕೆ ನಾನು. ಹೆಂಡತಿ ದುರುಗುಟ್ಟಿದಳು.

ನಾವು ಕೈ ಹಾಕಿದೆವು. ಮಾಡಿದ್ದೆಲ್ಲವನ್ನೂ ಉಂಡೆವು. ಎಲ್ಲ ಇವತ್ತಿಗೇ ಮುಗಿಸಬೇಕು ಎಂಬಂತೆ ತಿಂದೆವು. ಯಾರೂ ಮಾತಾಡಲಿಲ್ಲ. ಪಟ್ಟಾಗಿ ಕುಳಿತು ಉಂಡು ತೇಗಿದೆವು. ಕುರುಡ ಕೂಡ ತಿನಿಸುಗಳನ್ನು ಸಾಂಗವಾಗಿ ಎತ್ತಿಕೊಂಡ. ಪ್ಲೇಟಿನಲ್ಲಿಟ್ಟದ್ದೆಲ್ಲ ಕಾಣುತ್ತಿರುವ ಹಾಗೆ. ಅವನು ಮಾಂಸದ ಮೇಲೆ ಶಸ್ತ್ರಗಳನ್ನು ಎಸಗುತ್ತಿದ್ದ ಚಾಕಚಕ್ಯತೆಗೆ ನಾನು ಮೆಚ್ಚಿಕೊಂಡೆ. ಅವನು ಎರಡು ತುಣುಕು ಮಾಂಸವನ್ನು ಕೆತ್ತುತ್ತಿದ್ದ. ಅದನ್ನು ಫೋರ್ಕ್ ನಿಂದ ಚುಚ್ಚಿ ಬಾಯಿಗಿಡುತ್ತಿದ್ದ. ಬಳಿಕ ಸೀದಾ ಅಲೂಗಡ್ಡೆಯ ಪಲ್ಯದತ್ತ ಎಟಕಿ, ಆ ಬಳಿಕ ಅವರೆ ಉಸುಳಿ, ಮತ್ತೆ ಬೆಣ್ಣೆ ಹಚ್ಚಿದ ಬ್ರೆಡ್ಡಿನ ಎಸಳನ್ನು ಮುರಿದು ಬಾಯಿಗಿಡುತ್ತಿದ್ದ. ಕೊನೆಗೆ ಒಂದು ಗುಟುಕು ಹಾಲು.

ಎಲ್ಲವನ್ನೂ ಮುಗಿಸಿದೆವು. ಒಂದೊಂದು ಬಟ್ಟಲು ಸ್ಟ್ರಾಬೆರ್ರಿ ಹಲ್ವ ಕೂಡ. ಎಲ್ಲ ಮುಗಿದ ಮೇಲೆ ಒಂದು ಕ್ಷಣ ಗರಬಡಿದವರಂತೆ ಕುಳಿತು ಬಿಟ್ಟೆವು. ಹಣೆಗಳ ಮೇಲೆ ಬೆವರ ಹನಿಗಳ ಸಾಲು. ಕಟ್ಟ ಕೊನೆಗೆ ನಾವು ಎಲೆ ಬಿಟ್ಟೆದ್ದೆವು. ಹಿಂತಿರುಗಿ ನೋಡದೆ ಸೀದಾ ಲಿವಿಂಗ್ ರೂಮ್ ಗೆ ಬಂದು ನಮ್ಮ ಮೊದಲಿನ ಜಾಗೆಗಳಲ್ಲಿ ಕುಕ್ಕರಿಸಿದೆವು. ರಾಬರ್ಟ್ ಮತ್ತು ನನ್ನ ಹೆಂಡತಿ ಸೋಫಾದ ಮೇಲೆ ಕುಳಿತರೆ ನಾನು ನನ್ನ ಯಾವತ್ತಿನ ದೊಡ್ಡ ಆರಾಮ ಕುರ್ಚಿಯಲ್ಲಿ.

ಕಳೆದ ಹತ್ತು ವರ್ಷಗಳಲ್ಲಿ ಅವರ ಜೀವನಗಳಲ್ಲಿ ನಡೆದ ಎಲ್ಲವನ್ನೂ ಅವರು ನೆನಪಿಸಿಕೊಂಡು ಚಪ್ಪರಿಸುತ್ತಿರುವಾಗ ಮತ್ತೆ ಮೂರು ಸುತ್ತು ಪೇಯ ಹನಿಸಿ ನಾನು ಕೃತಾರ್ಥನಾದೆ. ನಾನು ಸುಮ್ಮನೆ ಕೇಳುತ್ತಿದ್ದೆ. ನಡುವೆ ಎಲ್ಲಾದರೂ ಒಂದು ತಪ್ಪಿದಲ್ಲಿ ಎರಡು ನುಡಿಯುತ್ತಿದ್ದೆ. ನಾನು ಕೋಣೆಯಲ್ಲೇ ಇದ್ದೇನೆಂದು ಅವನಿಗೆ ಅರಿವಾಗಲಿ, ಜೊತೆಗೆ ಇವಳೂ ನಾನೆಲ್ಲಿ ಬೋರ್ ಆಗುತ್ತಿದ್ದೇನೋ ಎಂದು ಅಪಾರ್ಥ ಮಾಡಿಕೊಂಡರೆ ಅಂತ. ಅದೇ ಕಳೆದ ಹತ್ತು ವರ್ಷಗಳಲ್ಲಿ ಅವರಿಬ್ಬರಿಗೆ - ಅವರಿಬ್ಬರಿಗೆ- ಏನೇನೆಲ್ಲ ಸಂಗತಿ ಆಯಿತು ಅಂತ ಮಾತನಾಡಿದರು.

ನನ್ನ ಹೆಂಡತಿಯ ಬಾಯಿಂದ ನನ್ನ ಬಗ್ಗೆ ಏನಾದರೂ ಸಿಹಿನುಡಿ ಬರುವುದೋ ಎಂದು ನಾನು ಬಹಳ ಕಾದೆ. "ಕೊನೆಗೆ ನನ್ನ ಬದುಕಿನಲ್ಲಿ ನನ್ನ ಪರಮ ಪ್ರಿಯ ಪತಿಯ ಆಗಮನ ವಾಯಿತು..." ಈ ಥರ ಏನಾದರೂ. ಅಂತದ್ದೇನೂ ನನಗೆ ಕೇಳಲು ಸಿಗಲಿಲ್ಲ. ಎಲ್ಲ ಅವನ ಬಗ್ಗೆಯೇ. ಈ ರಾಬರ್ಟ್ ಎಲ್ಲ ವಿಷಯದಲ್ಲೂ ಸ್ವಲ್ಪ ಸ್ವಲ್ಪ ತೊಡಗಿಸಿಕೊಂಡಿದ್ದಾನೆ. ಒಬ್ಬ ಮಾಮೂಲಿ ಜಾಕ್-ಆಫ್-ಆಲ್-ಟ್ರೇಡ್ ಕುರುಡ. ಇತ್ತೀಚಿಗೆ ಅವನೂ ಅವನ ಹೆಂಡತಿಯೂ "ಆಮ್ ವೇ" ಡಿಸ್ಟ್ರಿಬ್ಯೂಶನ್ ತೆಗೆದುಕೊಂಡಿದ್ದರಂತೆ. ನನಗೆ ಅರಿವಾದ ಮಟ್ಟಿಗೆ ಕೊನೆಗೆ ಅದರಿಂದಲೇ ಅವರು ಜೀವನ ಸಾಗಿಸುತ್ತಿದ್ದರು.

ಈ ಕುರುಡನಿಗೆ ಹ್ಯಾಮ್ ರೇಡಿಯೋದ ಹವ್ಯಾಸ ಕೂಡ ಇದೆ. ಅವನು ದೊಡ್ಡ ಸ್ವರದಲ್ಲಿ ತನ್ನ ಅನುಭವಗಳನ್ನು ಹೇಳುತ್ತಾ ಇದ್ದ. ಗಯಾನಾ, ಫಿಲಿಪ್ಪೈನ್ಸ್, ಮತ್ತೆ ಅಲಾಸ್ಕ, ಅಲ್ಲದೆ ತಾಹಿತಿಯೂ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿರುವ ತನ್ನ ರೇಡಿಯೋ ಗೆಳೆಯರ ಜೊತೆ ನಡೆದ ತನ್ನ ಮಾತುಕತೆಗಳ ಬಗ್ಗೆ ಅವನು ಹೇಳಿದ. ನೀನೆಲ್ಲಿಯಾದರೂ ಆ ದೇಶಗಳಿಗೆ ಪ್ರವಾಸ ಹೋಗುವುದಿದ್ದರೆ ಅಲ್ಲೆಲ್ಲಾ ತನ್ನ ಗೆಳೆಯರಿದ್ದಾರೆ ಎಂದು ನನ್ನ ಹೆಂಡತಿಯನ್ನೂ ಹುರಿದುಂಬಿಸಿದ.

ನಡು ನಡುವೆ ನನ್ನತ್ತ ಅವನ ಕುರುಡು ಕಣ್ಣಿನ ಮುಖ ತಿರುಗಿಸಿ, ಗಡ್ಡದ ಕೆಳಗೆ ಕೈ ಹುದುಗಿಸಿ, ಏನಾದರೂ ಒಂದು ಪ್ರಶ್ನೆ ಕೇಳುತ್ತಿದ್ದ. ನಿನ್ನ ಹಾಲಿ ಕೆಲಸದಲ್ಲಿ ಎಷ್ಟು ಸರ್ವೀಸ್ ಆಯಿತು (ಮೂರು ವರ್ಷ) ಕೆಲಸ ಹೇಗುಂಟು? (ಅಷ್ಟಕಷ್ಟೇ) ಬೇರೆ ನೋಡುವ ಐಡಿಯ ಏನಾದರೂ ಇದೆಯಾ? (ಬೇರೆ ಆಪ್ಶನ್ ಎಲ್ಲಿದೆ?) ಅವನ ಎಲ್ಲ ಪ್ರಶ್ನೆಗಳು ಮುಗಿಯುತ್ತ ಬಂತು ಎಂದು ನನಗೆ ಅರಿವಾಗಲು ತೊಡಗಿದಾಗ ನಾನು ಎದ್ದು ಟಿ.ವಿ. ಹಚ್ಚಿದೆ.

ನನ್ನ ಹೆಂಡತಿಗೆ ಕಿರಿಕಿರಿ ಶುರುವಾಯ್ತು. ಅದು ಕುದಿಯುತ್ತಿದೆ ಅಂತ ಅನಿಸುತ್ತಿದ್ದಾಗ ಅವಳು ಕುರುಡನೆಡೆಗೆ ತಿರುಗಿ "ರಾಬರ್ಟ್ ನಿನ್ನ ಮನೆಯಲ್ಲಿ ಟಿ.ವಿ. ಇದೆಯಾ?" ಎಂದು ಕೇಳಿದಳು.

" ಮೈ ಡಿಯರ್, ನನ್ನತ್ರ ಎರಡು ಟಿ.ವಿ. ಇದೆ. ಒಂದು ಕಲರ್ರು ಇನ್ನೊಂದು ಓಬಿರಾಯನ ಕಾಲದ ಬ್ಲಾಕ್ ಅಂಡ್ ವೈಟು. ನಾನೇನಾದರೂ ಟಿ.ವಿ ಹಚ್ಚಿದರೆ - ನಾನು ಪ್ರತಿ ದಿನ ಟಿ.ವಿ. ಇಡಲುಂಟು- ನಾನು ಕಲರ್ ಟಿ.ವಿ.ಯನ್ನೇ ಹಚ್ಚುವುದು. ತಮಾಷೆ ಅಲ್ವ?"

ನನಗೇನೂ ಹೇಳಬೇಕೆಂದು ತೋಚಲಿಲ್ಲ. ನಾನೇನು ಹೇಳಲಿ. ಖಂಡಿತವಾಗಿಯೂ ನನ್ನ ಬಳಿ ಅದರ ಬಗ್ಗೆ ಅಭಿಪ್ರಾಯವಿರಲಿಲ್ಲ. ನಾನು ಸುಮ್ಮನೆ ವಾರ್ತೆಗಳನ್ನು ನೋಡುತ್ತಾ ಆ ನ್ಯೂಸ್ ರೀಡರ್ ಏನು ಹೇಳುತ್ತಿದ್ದಾನೆ ಎನ್ನುವತ್ತ ಗಮನ ಹರಿಸಲು ಯತ್ನಿಸಿದೆ.

"ಇದು ಕಲರ್ ಟಿವಿ." ಕುರುಡ ಹೇಳಿದ "ಅದು ಹೇಗೆಂದು ಕೇಳಬೇಡಿ. ಆದರೆ ನನಗೆ ಹೇಗೋ ಅದು ಗೊತ್ತಾಗುತ್ತೆ" ಅಂದ.

"ಇತ್ತೀಚೆಗಷ್ಟೆ ಎಕ್ಸ್ಚೆಂಜ್ ನಲ್ಲಿ ಕೊಂಡೆವು" ಅಂದೆ ನಾನು.

ಕುರುಡ ಮತ್ತೊಂದು ಗುಟುಕು ಸ್ಕಾಚ್ ಹೀರಿ ಗಡ್ಡ ಸವರಿದ. ಮುಂದಕ್ಕೆ ಬಗ್ಗಿ ಟೀಪಾಯ್ ಮೇಲೆ ಅಶ್ ಟ್ರೇ ತಡವಿ ಸಜ್ಜುಗೊಳಿಸಿದ. ಮತ್ತೆ ಅವನ ಸಿಗರೇಟಿಗೆ ಲೈಟರ್ ಹಚ್ಚಿದ. ಹಾಯಾಗಿ ಸೋಫಾ ಒರಗಿ ಕಾಲು ಚಾಚಿ ಒಂದು ಕಾಲನ್ನು ಇನ್ನೊಂದರ ಮೇಲೆ ಆನಿಸಿದ.

ನನ್ನ ಹೆಂಡತಿ ಬಾಯಿಗೆ ಕೈ ಅಡ್ಡವಿರಿಸಿ ಆಕಳಿಸಿದಳು. ಮೈಮುರಿದಳು. "ನಾನು ಹೋಗಿ ಡ್ರೆಸ್ ಚೇಂಜ್ ಮಾಡಿ ಬರುತ್ತೇನೆ." ಅಂದಳು "ರಾಬರ್ಟ್ ಏನೂ ದಾಕ್ಷಿಣ್ಯ ಮಾಡಬೇಡ. ಆರಾಮವಾಗಿರು." ಅಂದಳು.

"ನಾನು ಹಾಯಾಗಿದ್ದೇನೆ" ಅಂದ ರಾಬರ್ಟ್.

" ನಿನ್ನದೇ ಮನೆ ಅಂತ ತಿಳಕೋ. ದಾಕ್ಷಿಣ್ಯ ಮಾಡಬೇಡ" ಅಂದಳು ಪುನಃ.

"ನನಗೇನೂ ದಾಕ್ಷಿಣ್ಯವಿಲ್ಲ, ನೀನು ಯೋಚನೆ ಮಾಡಬೇಡ' ಅಂದ ರಾಬರ್ಟ್.

ಅವಳು ಅತ್ತ ಹೋದ ಮೇಲೆ ನಾವಿಬ್ಬರೂ ಹವಾಮಾನ ವರದಿ ಕೇಳಿದೆವು. ಬಳಿಕ ಸ್ಪೋರ್ಟ್ಸ್ ರೌಂಡಪ್. ಅಷ್ಟಾದರೂ ಅವಳು ಮರಳಿ ಬರಲಿಲ್ಲ. ಅವಳು ಬರುತ್ತಾಳೋ ಇಲ್ಲವೊ ಎನ್ನುವ ಅನುಮಾನ ಆಗತೊಡಗಿತು ನನಗೆ. ಮಲಗಿ ನಿದ್ರೆ ಹೋದಳೋ ಏನೋ. ಅವಳು ಕೆಳಗೆ ಬಂದಿದ್ದರೆ ಒಳ್ಳೆಯದಿತ್ತು ಎಂದು ಅನಿಸತೊಡಗಿತು. ಈ ಕುರುಡನ ಜೊತೆಗೆ ಒಬ್ಬನೇ ಇರುವುದು ನನಗೆ ಬೇಕಿರಲಿಲ್ಲ. "ಇನ್ನೊಂದು ರೌಂಡು ಡ್ರಿಂಕ್ ತರಲೇನು" ಅಂತ ಕೇಳಿದೆ ಅವನಲ್ಲಿ. "ಶೂರ್" ಅಂದ.

"ನಿಮಗೆ ಗಾಂಜಾ ಎಳೆದು ಅಭ್ಯಾಸವಿದ್ದರೆ, ಒಂದು ಹೊಸ ಬೀಡಿ ರೆಡಿ ಉಂಟು, ನಾನೂ ಇದ್ದೇನೆ" ಅಂತ ಅಂದೆ. ಸುಮ್ಮನೆ ಹೇಳಿದ್ದು. ಅಲ್ಲ, ರೆಡಿ ಮಾಡಲು ಎರಡು ನಿಮಿಷ ಸಾಕು ನನಗೆ.
"ಒಂದು ಕೈ ನೋಡೇ ಬಿಡುವ" ಅಂತ ದೊಡ್ಡ ಸ್ವರದಲ್ಲಿ ನಕ್ಕ ರಾಬರ್ಟ್.
"ರೈಟೋ.. ಅದು ಜವಾಬು." ಅಂತಂದೆ.
ಎರಡು ಡ್ರಿಂಕ್ ಸುರಿದುಕೊಂಡು ಬಂದು ಸೋಫಾದಲ್ಲಿ ಕುಳಿತು ನಾನು ಬೀಡಿ ಸುತ್ತತೊಡಗಿದೆ. ದಪ್ಪಗಿನ ಎರಡು ಬೀಡಿ ಸುತ್ತಿ, ಒಂದನ್ನು ಉರಿಸಿ ಅವನ ಬೆರಳಿಗಿರಿಸಿದೆ. ಅವನು ಅದನ್ನು ಬಾಯಿಗಿಟ್ಟು ಸೇದಿದ. "ಸಾಧ್ಯವಾದಷ್ಟು ಹೊತ್ತು ಒಳಗಿರಲಿ" ಎಂದೆ ನಾನು. ಅವನು ಇದೇ ಮೊದಲು ಸೇದುವುದು ಎನ್ನುವುದು ನನಗೆ ಸ್ಪಷ್ಟವಾಗಿ ತಿಳಿಯಿತು.

ನನ್ನ ಹೆಂಡತಿ ತಿಳಿ ಕೆಂಪು ನಿಲುವಂಗಿ ಮತ್ತು ತಿಳಿ ಕೆಂಪು ಚಪ್ಪಲಿ ಧರಿಸಿ ಕೆಳಗಿಳಿದು ಬಂದಳು.

"ಎಂತದ್ದು ವಾಸನೆ" ಅವಳ ಮೂಗು ಬಲು ಸೂಕ್ಷ್ಮ.

"ನಮಗೆ ಒಂದೊಂದು ದಮ್ಮು ಸೇದುವ ಉಮೇದು ಬಂತು" ಎಂದೆ ನಾನು.

ನನ್ನ ಹೆಂಡತಿ ನನ್ನತ್ತ ಉಗ್ರ ನೋಟ ಬೀರಿದಳು. ಮತ್ತೆ ಕುರುಡನತ್ತ ತಿರುಗಿ "ರಾಬರ್ಟ್, ನೀನೂ ಸೇದುತ್ತಿ ಎಂದು ಗೊತ್ತೇ ಇರಲಿಲ್ಲ ನನಗೆ" ಅಂದಳು.

"ಈಗ ಸೇದಿದೆ ಮೈ ಡಿಯರ್. ಎಲ್ಲ ಒಮ್ಮೆ ಟ್ರೈ ಮಾಡಬೇಕು. ಆದರೆ ನನಗಿನ್ನೂ ಏನೂ ತಾಗುತ್ತಿಲ್ಲ" ಅಂದ ರಾಬರ್ಟ್.

"ಇದು ಸ್ವಲ್ಪ ಲೈಟು" ಅಂದೆ ನಾನು " ಬೇಗ ತಾಗುವುದಿಲ್ಲ. ಕಂಟ್ರೋಲ್ ಇರುತ್ತದೆ. ಮತ್ತೆ ಹಾಗೆಲ್ಲ ಔಟ್ ಮಾಡುವುದಿಲ್ಲ" ಅಂತಂದೆ.

"ಹೌದು ಔಟ್ ಆಗುವುದಿಲ್ಲ" ಎಂದು ಜೋರಾಗಿ ನಕ್ಕ ರಾಬರ್ಟ್.

ನನ್ನ ಹೆಂಡತಿ ಸೋಫಾದಲ್ಲಿ ನಮ್ಮಿಬ್ಬರ ನಡುವೆ ಕುಳಿತಳು. ನಾನು ಸೇದಿ ಅವಳಿಗೆ ನೀಡಿದೆ. ಅವಳೂ ಒಮ್ಮೆ ಸೇದಿ ನನಗೆ ಮರಳಿ ನೀಡಿದಳು "ಇದು ಯಾರಿಗೆ" ಅಂದಳು " ಇದೆಲ್ಲ ಸೇದಬಾರದು ನಾನು. ನನಗೆ ಈಗಲೇ ಹೊಟ್ಟೆ ಭಾರ ಆಗಿ ನಿದ್ದೆ ಬರುತ್ತಿದೆ, ಅಷ್ಟು ತಿನ್ನ ಬಾರದಿತ್ತು ನಾನು. ಅಂದಳು.

"ಅದು ನಿನ್ನ ಸ್ಟ್ರಾಬೆರ್ರಿ ಹಲ್ವ" ಕುರುಡ ಹೇಳಿದ "ತುಪ್ಪದ್ದಲ್ವ. ಭಾರ ಆಗದೆ ಇನ್ನೇನು" ಅಂತ ಅವನ ದೊಡ್ಡ ನಗೆ ನಕ್ಕ. ಒಮ್ಮೆ ತಲೆ ಕೊಡವಿದ.

"ಸ್ಟ್ರಾಬೆರ್ರಿ ಹಲ್ವ ಇನ್ನೂ ಉಂಟು." ಅಂದೆ ನಾನು.
"ರಾಬರ್ಟ್ ಸ್ವಲ್ಪ ತರ್ಲಾ ನಿಮಗೆ?" ಅಂದಳು ನನ್ನ ಹೆಂಡತಿ.
"ಸ್ವಲ್ಪ ತಡೆದು" ಅಂದ ರಾಬರ್ಟ್.

ನಾವು ಟಿ.ವಿಯತ್ತ ಗಮನ ಹರಿಸಿದೆವು. ನನ್ನ ಹೆಂಡತಿ ಮತ್ತೊಮ್ಮೆ ಆಕಳಿಸಿದಳು. "ರಾಬರ್ಟ್ ನಿನಗೆ ಮಲಗಬೇಕೆನಿಸಿದರೆ ಹಾಸಿಗೆ ಹಾಸಿದ್ದೇನೆ. ಆಯಾಸ ಆಗಿರಬೇಕು ನಿನಗೆ. ಮಲಗಬೇಕೆನಿಸಿದರೆ ಹೇಳು" ಅಂತ ಹೇಳಿದಳು ನನ್ನ ಹೆಂಡತಿ.

" ರಾಬರ್ಟ್.." ಅವನ ತೋಳು ಜಗ್ಗಿದಳು ನನ್ನ ಹೆಂಡತಿ

ಅವನು ಇಹಕ್ಕಿಳಿದು ಹೇಳಿದ "ನನಗೆ ಬಹಳ ಗಮ್ಮತ್ತಾಯಿತು. ಇದರ ಮುಂದೆ ಕ್ಯಾಸೆಟ್ಟು, ಟೇಪು.. ಎಲ್ಲ ಯಾವ ಲೆಕ್ಕ, ಅಲ್ಲ್ವಾ ಡಿಯರ್?"

ಬೀಡಿ ಅವನ ಕೈಗಿರಿಸಿ "ನಿನ್ನ ಸರದಿ" ಅಂದೆ ನಾನು. ಅವನು ಉದ್ದಕ್ಕೆ ಎಳೆದು, ಹೊಗೆ ಒಳಗೆ ಹಿಡಕೊಂಡು, ಹೊರಗೆ ಬಿಟ್ಟ. ಹೈಸ್ಕೂಲಿಂದಲೇ ಎಳೆದು ಅಭ್ಯಾಸವಿರುವಂತೆ.

"ಥ್ಯಾಂಕ್ಸ್. ಆದರೆ ನನಗಿನ್ನೂ ಸಾಕು. ಸ್ವಲ್ಪ ಟೈಟ್ ಆಗಲಿಕ್ಕೆ ಶುರು ಆಯ್ತು." ಉರಿಯುತ್ತಿರುವ ಬೀಡಿಯನ್ನು ನನ್ನ ಹೆಂಡತಿಯತ್ತ ಚಾಚಿ ಅವನಂದ. "ನನಗೂ ಅಷ್ಟೆ!, ಸಾಕು" ಅವಳೂ ಅದನ್ನು ಇಸಕೊಂಡು ನನ್ನತ್ತ ಚಾಚಿದಳು. "ನಾನು ಇಲ್ಲೇ ನಿಮ್ಮ ಇಬ್ಬರ ನಡುವೆ ಕುಳಿತು ಒಂದು ಗಳಿಗೆ ಕಣ್ಣು ಮುಚ್ಚುತ್ತೇನೆ. ನಿಮಗೆ ತೊಂದರೆಯಾದರೆ ಹೇಳಿ." ಹೇಳಿದಳು ನನ್ನ ಹೆಂಡತಿ "ರಾಬರ್ಟ್ ನಿನಗೆ ಹಾಸಿಗೆ ಹಾಸಿಟ್ಟಿದ್ದೇನೆ. ನಿನಗೆ ನಿದ್ರೆ ಬಂದರೆ ಹೇಳು. ಇಲ್ಲೇ ಮೆಟ್ಟಲು ಹತ್ತಿ ಬಲಕ್ಕೆ ನಮ್ಮ ಕೋಣೆಯ ಎಡ ಬದಿಗೆ ನಿನಗೆ ಕೋಣೆ. ನಾವು ನಿನಗೆ ತೋರಿಸುತ್ತೇವೆ. ನಾನು ಮಲಗಿ ಬಿಟ್ಟರೆ ಯಾರಾದರೂ ಎಚ್ಚರಿಸಿ ನನ್ನನ್ನು" ಅಂದಳು.

ವಾರ್ತೆಗಳ ಕಾರ್ಯಕ್ರಮ ಮುಗಿದಿತ್ತು. ನಾನು ಎದ್ದು ಚ್ಯಾನೆಲ್ ಬದಲಿಸಿದೆ. ನನ್ನ ಹೆಂಡತಿ ಎಚ್ಚರವಿದ್ದರೆ ಒಳ್ಳೆಯದಿತ್ತು. ಸೋಫಾದ ಬೆನ್ನಿಗೆ ಅವಳು ತಲೆ ಒರಗಿಸಿ ಬಾಯಿ ತೆರೆದು ಮಲಗಿದ್ದಳು. ಅವಳು ಮಲಗಿದ್ದ ಭಂಗಿಯಲ್ಲಿ ಅವಳು ಉಟ್ಟಿದ್ದ ಉಡುಪು ಕೊಂಚ ಅಸ್ತವ್ಯಸ್ತವಾಗಿ ಮೇಲೇರಿ ಅವಳ ಮೊಣಕಾಲವರೆಗೆ ಏರಿತ್ತು. ನಾನು ಅದನ್ನು ಸರಿ ಪಡಿಸಲು ಕೈ ಚಾಚಿದೆ. ಕುರುಡನತ್ತ ನೋಡಿದೆ. "ಎಂತ ಆಗಲಿಕ್ಕುಂಟು" ಅಂತ ಅವಳ ಉಡುಪನ್ನು ಹಾಗೆ ಬಿಟ್ಟೆ.

"ನಿನಗೆ ಸ್ಟ್ರಾಬೆರ್ರಿ ಹಲ್ವ ತಿನ್ನಬೇಕೆನಿಸಿದಾಗ ಹೇಳು" ಅಂದೆ ನಾನು "ಸರಿ" ಅಂದ ರಾಬರ್ಟ್.

"ಆಯಾಸ ಆಗಿದೆಯಾ? ನಿನಗೆ ಮಲಗಬೇಕೆನಿಸಿದರೆ ನಾನು ರೂಮ್ ಗೆ ಕರಕೊಂಡು ಹೋಗುತ್ತೇನೆ." ಅಂದೆ.

"ಇಲ್ಲ ಇಲ್ಲ." "ನಾನು ಇಲ್ಲೇ ನಿನ್ನ ಜೊತೆ, ನೀನು ಮಲಗಲು ಹೋಗುವವರೆಗೆ ಕೂತಿರುತ್ತೇನೆ" ಅಂದ ರಾಬರ್ಟ್ "ನಿನ್ನತ್ರ ಮಾತನಾಡಲು ಚಾನ್ಸ್ ಸಿಗಲಿಲ್ಲ. ತಿಳೀತಾ ನಿನಗೆ. ಸಂಜೆಯಿಡೀ ನಾವಿಬ್ಬರೂ -ನಾನು ಮತ್ತು ಇವಳು- ಮೊನೋಪೋಲೈಸ್ ಮಾಡಿದೆವು. ಅವನೊಮ್ಮೆ ಗಡ್ಡ ನೀವಿ ಸಿಗರೇಟು ಬಾಯಿಗಿಟ್ಟು ಲೈಟರು ಎತ್ತಿಕೊಂಡ.

"ತೊಂದರೆ ಇಲ್ಲ" ಅಂದೆ ನಾನು "ನನಗೂ ಕಂಪೆನಿ ಸಿಕ್ಕ ಹಾಗೆ ಆಯ್ತು" ಅಂದೆ. ಪ್ರತಿದಿನ ಬಹಳ ಹೊತ್ತು ನಿದ್ದೆ ಬರುವವರೆಗೆ ನಾನು ನಶೆ ಎಳೆದು ಕೂತಿರುತ್ತಿದ್ದೆ. ನಾನು ಮತ್ತು ನನ್ನ ಹೆಂಡತಿ ಒಟ್ಟಿಗೆ ಮಲಗಲು ಹೋಗಿದ್ದು ಅಪರೂಪ. ನಾನು ನಿದ್ದೆ ತೊಡಗಿದಾಗೆಲ್ಲ ನನಗೆ ಆ ವಿಚಿತ್ರ ಕನಸುಗಳು ಬೀಳುತ್ತವೆ. ಹೆಚ್ಚಾಗಿ ನಾನು ಕನಸುಗಳಿಂದ ಎಚ್ಚೆತ್ತು ಕುಳಿತುಕೊಳ್ಳುತ್ತಿದ್ದೆ. ಎದೆಯಲ್ಲೆಲ್ಲ ಎಂತದೋ ಕಳವಳ.

ಮಧ್ಯಕಾಲೀನ ಚರ್ಚುಗಳ ಬಗ್ಗೆ ಅದೆಂತದೋ ಕಾರ್ಯಕ್ರಮ ಟಿ.ವಿಯಲ್ಲಿ ಪ್ರಸಾರವಾಗುತ್ತಿತ್ತು. ಯಾವತ್ತಿನ ಕಾರ್ಯಕ್ರಮದಂತಿರಲಿಲ್ಲ. ನನಗೆ ಬೇರೇನಾದರೂ ನೋಡುವ ಅಂತನ್ನಿಸಿ ನಾನು ಚ್ಯಾನೆಲ್ ಬದಲಿಸಿದೆ. ಯಾವುದರಲ್ಲೂ ಆಸಕ್ತಿ ಬರುವಂತದ್ದೇನೂ ಇರಲಿಲ್ಲ. ಮತ್ತೆ ಮೊದಲ ಚ್ಯಾನೆಲ್ ಗೆ ಮರಳಿ "ಸಾರಿ" ಹೇಳಿದೆ ರಾಬರ್ಟ್ ಗೆ.

"ಛೆ ಛೆ. ತೊಂದರೆ ಇಲ್ಲ. ನಿನಗೆ ಏನು ನೋಡಬೇಕೆನಿಸುತ್ತೋ ಅದನ್ನೆ ಹಾಕು. ನನಗೆ ತೊಂದರೆ ಇಲ್ಲ. ನನಗೆ ಎಲ್ಲದರಲ್ಲೂ ಕಲಿಯಲು ದೊರೆಯುತ್ತೆ. ಲರ್ನಿಂಗ್ ನೆವರ್ ಎನ್ಡ್ಸ್ . ಈಗ ಕೂಡ ಏನಾದರೂ ಕಲಿಯಲು ಸಿಗಬಹುದು. ನಾನು ಕಿವಿಗೊಡುತ್ತೇನೆ" ಅಂದ ರಾಬರ್ಟ್.

ನಾವಿಬ್ಬರೂ ಬಹಳ ಹೊತ್ತು ಮಾತನಾಡಲಿಲ್ಲ. ಅವನು ಮುಂದಕ್ಕೆ ಬಗ್ಗಿ ಕತ್ತು ನನ್ನೆಡೆಗೆ ಕೊಂಕಿಸಿ, ಅವನ ಬಲಗಿವಿಯನ್ನು ಟಿವಿಯತ್ತ ಆನಿಸಿ ಕುಳಿತಿದ್ದ. ಅವನ ಕಣ್ಣ ರೆಪ್ಪೆಗಳು ಆಗಾಗ ಮುಚ್ಚಿ ರಪ್ಪೆಂದು ತೆರೆದುಕೊಳ್ಳುತ್ತಿದ್ದವು. ಅಸಹ್ಯವೆನಿಸಿತು ನನಗೆ. ಆಗಾಗ ಅವನು ಅವನ ಗಡ್ಡವನ್ನು ಬೆರಳುಗಳಿಂದ ಕೆಳಗೆಳೆಯುತ್ತಿದ್ದ. ಟಿವಿಯಲ್ಲಿ ಬರುತ್ತಿರುವ ವಿಷಯದ ಬಗ್ಗೆ ಯೋಚಿಸುತ್ತಿರುವಂತಿತ್ತು.

ಟಿ.ವಿಯಲ್ಲಿ ಸಂತರಂತೆ ನಿಲುವಂಗಿ ಧರಿಸಿದ ಒಂದಷ್ಟು ಜನರಿಗೆ ಭೂತದಂತಹ ಮತ್ತು ಮೂಳೆ ಹಂದರದ ಪೋಷಾಕು ಧರಿಸಿದ ಒಂದಷ್ಟು ಜನ ಪೀಡೆ ಕೊಡುತ್ತಿದ್ದರು. ಭೂತ ಅಂದರೆ ಒನಿಡಾ ಟಿವಿ ಜಾಹಿರಾತಿಗೆ ಬರುತ್ತದಲ್ಲ ಅದು. ಎರಡು ಪುಟ್ಟ ಕೊಂಬುಗಳು, ಕೋರೆ ದಾಡೆಗಳು, ಮತ್ತು ಉದ್ದನೆಯ ಕ್ಷಿಪಣಿ ಬಾಲ. ಈ ದೃಶ್ಯಾವಳಿ ಒಂದು ಮೆರವಣಿಗೆಯ ಭಾಗವಾಗಿತ್ತು. ಈ ಉತ್ಸವ ವರ್ಷಕ್ಕೊಂದು ಬಾರಿ ಸ್ಪೇನ್ ನಲ್ಲಿ ಜರುಗುತ್ತದೆ ಎಂದು ಇಂಗ್ಲೀಷಿನಲ್ಲಿ ವಿವರಣೆ ಸಾಗುತ್ತಿತ್ತು. ನಾನು ಏನು ನಡೆಯುತ್ತಿದೆ ಎಂದು ಕುರುಡನಿಗೆ ವಿವರಿಸಲು ಯತ್ನಿಸಿದೆ.

"ಸ್ಕೆಲೆಟನ್ಸ" ಅವನಂದ "ಸ್ಕೆಲೆಟನ್ಸಗಳ ಬಗ್ಗೆ ನನಗೆ ಗೊತ್ತಿದೆ." ತಲೆ ಅಲ್ಲಾಡಿಸಿದ ಅವನು.

ಟಿವಿಯಲ್ಲಿ ಈಗ ಒಂದು ಕ್ಯಾಥೆಡ್ರಲ್ ತೋರಿಸಲಾಗುತಿತ್ತು. ಮತ್ತೆ ಇನ್ನೊಂದು ಕ್ಯಾಥೆಡ್ರಲ್ನ ನಿಧಾನವಾದ ಸುದೀರ್ಘ ದೃಶ್ಯ. ಈಗ ಪ್ಯಾರೀಸಿನ ಆ ಪ್ರಸಿದ್ಧ ಕ್ಯಾಥೆಡ್ರಲ್ ಗೆ ದೃಶ್ಯ ಬದಲಾಯಿತು.

ಅದರ ಸುಂದರ ಕಮಾನು ಭುಜಗಳು ಮತ್ತು ಗೋಪುರಗಳನ್ನು ತೋರಿಸಲಾಗುತ್ತಿತ್ತು. ಮತ್ತೀಗ ಕ್ಯಾಮೆರ ದೂರ ಸರಿದು ಆಕಾಶದೆತ್ತರಕ್ಕೆ ಚಾಚಿ ನಿಂತಿರುವ ಇಡೀ ಕ್ಯಾಥೆಡ್ರಲ್ನ ಅಗಾಧ ಕಾಯವನ್ನು ತೋರಿಸಲು ತೊಡಗಿತು.

ಕೆಲವೊಮ್ಮೆ ಹಿನ್ನೆಲೆ ವಿವರಣೆ ನೀಡುತ್ತಿದ್ದವನು ಸುಮ್ಮನಾಗಿ ಬಿಡುತ್ತಿದ್ದ. ಕ್ಯಾಮರಾ ತನ್ನ ಪಾಡಿಗೆ ತಾನು ಇಡೀ ಕ್ಯಾಥೆಡ್ರಲ್ ನ ಉದ್ದಗಲಕ್ಕೆ ಸಾಗುತ್ತ ಅದರ ವಾಸ್ತು ಸೌಂದರ್ಯವನ್ನು ತೋರಿಸುತ್ತಿತ್ತು. ಇಲ್ಲವೇ ಆ ಕ್ಯಾಥೆಡ್ರಲ್ ನ ಪಕ್ಕದ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದ ರೈತರನ್ನು ತೋರಿಸುತ್ತಿತ್ತು. "ಈಗವರು ಈ ಕ್ಯಾಥೆಡ್ರಲ್ ನ ಹೊರಭಾಗವನ್ನು ತೋರಿಸುತ್ತಿದ್ದಾರೆ. ಗರ್ಗೊಯ್ಲ್ ಗಳು. ರಾಕ್ಷಸರಂತಿರುವ ಸಣ್ಣ ಸಣ್ಣ ಶಿಲ್ಪಗಳನ್ನು ಆ ಕ್ಯಾಥೆಡ್ರಲ್ ನ ಹೊರ ಗೋಡೆಗಳಲ್ಲಿ ಕೆತ್ತಲಾಗಿದೆ. ಇದು ಬಹುಶ ಇಟಲಿ. ಹೌದು ಈಗ ಇಟಲಿಯಲ್ಲಿ. ಈ ಚರ್ಚಿನ ಗೋಡೆಗಳ ಮೇಲೆ ಪೇಂಟಿಂಗ್ ಗಳು ಇವೆ."

"ಅವು ಫ್ರೆಸ್ಕೋ ಪೇಂಟಿಂಗ್ ಗಳೇನು?" ಅವನು ನುಡಿದು ಅವನ ಕೈಯಲ್ಲಿದ್ದ ಗ್ಲಾಸಿನಿಂದ ಒಂದು ಗುಟುಕು ಹೀರಿದ.

ನಾನೂ ನನ್ನ ಗ್ಲಾಸಿನತ್ತ ಚಾಚಿದೆ. ಆದರೆ ಅದು ಖಾಲಿಯಾಗಿತ್ತು. "ನೀನು ಫ್ರೆಸ್ಕೋ ನ ಪೇಂಟಿಂಗ್ ಗಳ ಬಗ್ಗೆ ಕೇಳುತ್ತಿದ್ದಿಯ?" " ಸಾರಿ ನನಗೆ ಗೊತ್ತಿಲ್ಲ" ಎಂದೆ ನಾನು.

ಇದೀಗ ಕ್ಯಾಮೆರ ಲಿಸ್ಬನ್ ನ ಹೊರವಲಯದ ಕ್ಯಾಥೆಡ್ರಲ್ ಒಂದನ್ನು ತೋರಿಸುತ್ತಿತ್ತು. ಫ್ರೆಂಚ್, ಇಟಾಲಿಯನ್ ಕ್ಯಾಥೆಡ್ರಲ್ ಗಳಿಗೂ ಪೋರ್ಚುಗೀಸ್ ಕ್ಯಾಥೆಡ್ರಲ್ ಗಳಿಗೂ ಅಷ್ಟೇನೂ ವ್ಯತ್ಯಾಸ ಇರದಿದ್ದರೂ, ಕೊಂಚ ವ್ಯತ್ಯಾಸವಿತ್ತು. ಒಳಾಂಗಣದಲ್ಲಿ ಮಾತ್ರ.

ನನಗೆ ಆಕ್ಷಣ ಅದೇನೋ ಹೊಳೆಯಿತು. ನಾನು ಅವನತ್ತ ತಿರುಗಿ ಕೇಳಿದೆ. " ನಿನಗೆ ಕ್ಯಾಥೆಡ್ರಲ್ ಅಂದರೆ ಏನು ಅಂತ ಗೊತ್ತ? ಅದು ಹೇಗಿದೆ?..... ನಿನಗೆ ಅರ್ಥವಾಗುತ್ತಿದೆಯಾ? ...... ಈಗ ನಿನಗೆ ಯಾರಾದರೂ ಕ್ಯಾಥೆಡ್ರಲ್ ಬಗ್ಗೆ ಹೇಳಿದರೆಂದು ಇಟ್ಟುಕೊಳ್ಳೋಣ. ನಿನಗೆ ಅವರೇನು ಮಾತನಾಡುತ್ತಿದ್ದಾರೆಂದು ಅರ್ಥ ಆಗತ್ತಾ? ನಿನಗೆ ಒಂದು ಕ್ಯಾಥೆಡ್ರಲ್ಗೂ ಒಂದು ಬ್ಯಾಪ್ಟಿಸ್ಟ್ ಚರ್ಚಿಗೂ ವ್ಯತ್ಯಾಸ ಗೊತ್ತಾ....?

ಅವನು ಹೊಗೆಯನ್ನು ಹೊರಗೆ ಊದಿ ನುಡಿದ "ನೂರಾರು ಜನ ನೂರಾರು ವರ್ಷ ಕೆಲಸ ಮಾಡಿ ಅದನ್ನು ಕಟ್ಟಿದರೆಂದು ನನಗೆ ಗೊತ್ತು, ಅದೇ ಅವನೀಗ ಹೇಳಿದನಲ್ಲ, ಹಾಗೆ ನನಗೆ ಗೊತ್ತು. ಒಂದು ಕುಟುಂಬದ ಕೆಲವು ತಲೆಮಾರುಗಳೂ ಒಂದು ಕ್ಯಾಥೆಡ್ರಲ್ನ ನಿರ್ಮಾಣದಲ್ಲಿ ಕೆಲಸ ಮಾಡಿರುತ್ತಾರೆ ಎಂದು ಕೂಡ ಅವನು ಹೇಳಿದ್ದ. ತಮ್ಮ ಇಡೀ ಬದುಕಿನ ಶ್ರಮವನ್ನು ಅದರಲ್ಲಿ ತೊಡಗಿಸಿ ಅವರ ಶ್ರಮದ ಫಲಿತಾಂಶ ಕಾಣಲು ಅವರು ಇರುವುದಿಲ್ಲ. ಹಾಗೆ ನೋಡಿದರೆ ಅವರಿಗೂ ನಮಗೂ ಯಾವ ವ್ಯತ್ಯಾಸವೂ ಇಲ್ಲ." ಹಾಗಂದು ಅವನು ನಕ್ಕ.

ಅವನ ಕಣ್ಣೆವೆ ಮುಚ್ಚಿಕೊಂಡಿತು. ಒಂದು ಕ್ಷಣ ತೂಕಡಿಸಿದವನ ಹಾಗೆ ಅವನ ತಲೆ ಜೋಲಿ ಹೊಡೆಯಿತು. ಬಹುಶ ಅವನು ತನ್ನನ್ನು ಪೋರ್ತುಗಲ್ ನಲ್ಲಿದ್ದ ಹಾಗೆ ಯೋಚಿಸುತ್ತಿರಬೇಕು. ಟಿವಿ ಯು ಇನ್ನೊಂದು ಕ್ಯಾಥೆಡ್ರಲ್ ತೋರಿಸುತ್ತಿತ್ತು. ಇದು ಜರ್ಮನಿಯ ಕ್ಯಾಥೆಡ್ರಲ್. ವಿವರಣೆ ಸಾಗಿತ್ತು. "ಕ್ಯಾಥೆಡ್ರಲ್" ಕುರುಡ ನುಡಿದ. ಅವನು ಒಮ್ಮೆ ನೇರ ಕುಳಿತು ತಲೆಯನ್ನು ಹಿಂದಕ್ಕೆ ಮುಂದಕ್ಕೆ ಆಡಿಸಿದ. "ನಿಜ ಹೇಳಬೇಕೆಂದರೆ, ನನಗೆ ಗೊತ್ತಿರುವುದು ಅಷ್ಟೆ. ಅವನು ಹೇಳಿದ್ದು, ನಾನು ಕೇಳಿದ್ದು. ಅಷ್ಟೆ. ಆದರೆ ನೀನು ನನಗೆ ಇನ್ನಷ್ಟು ವಿವರಿಸಬಹುದು. ನೀನು ಹೇಳಿದರೆ ಒಳ್ಳೆಯದಿತ್ತು... ನಿಜ ಹೇಳಬೇಕೆಂದರೆ, ನನಗೆ ಸರಿಯಾಗಿ ಐಡಿಯಾವೇ ಇಲ್ಲ.

ನಾನು ಒಂದು ಸಲ ಟಿವಿಯಲ್ಲಿ ತೋರಿಸಲಾಗುತ್ತಿರುವ ಕ್ಯಾಥೆಡ್ರಲ್ ಅನ್ನು ಗಾಡವಾಗಿ ವೀಕ್ಷಿಸಿದೆ. ನಾನು ಇವನಿಗೆ ಹೇಗೆ ವಿವರಿಸಲಿ. ಏನಂತ ವಿವರಿಸಲಿ. ಇವನಿಗೆ ಏನೆಂದರೆ ಏನೂ ಗೊತ್ತಿಲ್ಲ. ಸರಿ... ಹೀಗೆ ಮಾಡೋಣ... ಇದೀಗ ನನ್ನ ಬದುಕಿಡೀ ನನ್ನ ಉತ್ತರದ ಮೇಲೆ ನಿಂತಿದೆ. ಒಬ್ಬ ತಲೆ ಕೆಟ್ಟ ಹುಚ್ಚ ನನಗೆ 'ನೀನು ಹೇಳಲೇಬೇಕು ಹೇಳದಿದ್ದರೆ....' ಅಂತ ಬೆದರಿಕೆ ಹಾಕಿದರೆ...

ನಾನು ಕ್ಯಾಥೆಡ್ರಲ್ ನತ್ತ ಇನ್ನಷ್ಟು ಹೊತ್ತು ದಿಟ್ಟಿಸಿದೆ. ಆದರೆ ಅದರಿಂದ ಸಹಾಯವಾಗಲಿಲ್ಲ. ನಾನು ಕುರುಡನತ್ತ ತೊಡಗಿ, ಹೇಳತೊಡಗಿದೆ "ಸರಿ... ಅದು... ಈ ಕ್ಯಾಥೆಡ್ರಲ್ ಗಳು ಬಹಳ ಎತ್ತರ ಇರುತ್ತವೆ." ಏನಾದರೂ ಹೊಳೆಯಬಹುದೆಂದು ಆ ಕೋಣೆಯಲ್ಲಿ ಒಂದು ಕುರುಹಿಗಾಗಿ ಅತ್ತಿತ್ತ ಹುಡುಕತೊಡಗಿದೆ. "ಅದರ ಗೋಪುರ ಬಹಳ ಮೇಲೆ ಮೇಲಕ್ಕೆ, ಆಕಾಶದೆತ್ತರಕ್ಕೆ ಸಾಗುತ್ತವೆ. ಅವು ಎಷ್ಟು ಅಗಾಧವೆಂದರೆ... ಕೆಲವು.....ಅವಕ್ಕೆ ಬದಿಗಳಲ್ಲಿ ಈ ಥರದ ಆಧಾರಗಳನ್ನು ಕೊಡುತ್ತಾರೆ. ಅವಕ್ಕೆ ಕಮಾನುಗಳೆಂದು ಹೆಸರು.... ಅವು ಸೇತುವೆಯ ಕೆಳಗೆ ಇರುತ್ತದಲ್ಲ ಆ ತರ ಇರುತ್ತವೆ. ಆದರೆ ನಿನಗೆ ಸೇತುವೆ ಕೂಡ ಗೊತ್ತಿಲ್ಲ. ಅಲ್ಲವೇ. ಕೆಲವೊಮ್ಮೆ... ಈ ಕ್ಯಾಥೆಡ್ರಲ್ ಗಳ ಗೋಡೆಗಳಲ್ಲಿ ರಾಕ್ಷಸರ ಮೂರ್ತಿಗಳನ್ನು, ದೇವ ದೇವತೆಗಳ ಮೂರ್ತಿಗಳನ್ನೂ ನಿಲ್ಲಿಸಿರುತ್ತಾರೆ. ಯಾಕೆಂದು ಕೇಳಬೇಡ."

ಅವನು ತಲೆಯಲ್ಲಾಡಿಸುತ್ತಿದ್ದ. ಸೊಂಟದ ಮೇಲಿನ ದೇಹವಿಡೀ ಹಿಂದಕ್ಕೆ ಮುಂದಕ್ಕೆ ಜೀಕುತ್ತಿದ್ದ ಅವನು.

"ನನಗೆ ವಿವರಿಸಲು ಬರುವುದಿಲ್ಲ, ಮಾರಾಯ." ಅಂದೆ ನಾನು "ನಿನಗೇನಾದರೂ ಅರ್ಥ ಆಯ್ತಾ?"

ಅವನು ಮುಂದಕ್ಕೆ ಸೋಫಾದ ಅಂಚಿನಲ್ಲಿ ಕುಳಿತು ಕೊಂಡು ನನ್ನನ್ನು ತದೇಕ ಚಿತ್ತದಿಂದ ಆಲಿಸುತ್ತಿದ್ದುದು, ಪದೇ ಪದೇ ಗಡ್ಡ ಕೆರೆಯುತ್ತಿದ್ದದ್ದು, ತಲೆ ಅಲುಗಿಸುವುದು ನೋಡಿದರೆ ನಾನು ಹೇಳಿದ್ದು ಅವನ ತಲೆಗೆ ಹೋಗಿಲ್ಲವೆಂದು ನನಗೆ ಅರಿವಾಗುತ್ತಿತ್ತು. ಆದರೂ ಅವನು ನಾನು ಮುಂದುವರಿಸಲೆಂದು ಕಾಯುತ್ತಿರುವಂತಿತ್ತು. ನಾನು ಇನ್ನೇನು ಹೇಳುವುದೆಂದು ಯೋಚಿಸ ತೊಡಗಿದೆ. "ಭಾಳ ದೊಡ್ಡದು, ಅಗಾಧ... ಅವುಗಳನ್ನು ಶಿಲೆ ಕಲ್ಲುಗಳಲ್ಲಿ ಕಟ್ಟುತ್ತಾರೆ. ಕೆಲವೊಮ್ಮೆ ಮಾರ್ಬಲ್ ಬಳಸಿಯೂ ಕಟ್ಟುತ್ತಾರೆ. ಹಿಂದಿನ ಕಾಲದಲ್ಲಿ... ಈ ಮಾನವ ಇಂಥ ಕ್ಯಾಥೆಡ್ರಲ್ ಕಟ್ಟುವಾಗ... ಬಹುಶ ದೇವರಿಗೆ ಹತ್ತಿರವಾಗಿರಬೇಕು ಎಂದು ಬಯಸಿ ಕಟ್ಟಿದ್ದಿರಬಹುದು. ಆಕಾಶದೆತ್ತರಕ್ಕೆ. ಆ ಕಾಲಕ್ಕೆ, ಬಹುಶ ದೇವರು ಎಲ್ಲರ ಬದುಕಿನಲ್ಲಿ ಬಹಳ ಪ್ರಾಮುಖ್ಯ ಸಂಗತಿ ಆಗಿದ್ದಿರಬಹುದು. ನಿನಗೆ ಈ ಕೆಥೆಡ್ರೆಲ್ ಅನ್ನು ನೋಡಿದರೆ ಅದು ಗೊತ್ತಾಗುತ್ತ... ಐ ಯಾಮ್ ಸಾರಿ" ಅಂದೆ ನಾನು "ಆದರೆ ನನಗೆ ಇದಕ್ಕಿಂತ ಹೆಚ್ಚು ಒಂದು ಶಬ್ದವೂ ಹೊಳೆಯುತ್ತಿಲ್ಲ, ನನ್ನಿಂದ ಸಾಧ್ಯವಿಲ್ಲ" ಎಂದು ಮುಗಿಸಿದೆ.

"ದಟ್ಸ್ ಅಲ್ ರೈಟ್, ತೊಂದರೆ ಇಲ್ಲ..." ಕುರುಡ ಹೇಳಿದ "ನಾನು ನಿನಗೊಂದು ಸಿಂಪಲ್ ಪ್ರಶ್ನೆ ಕೇಳುತ್ತೇನೆ... ನನ್ನ ಕುತೂಹಲಕ್ಕೆ ಇದನ್ನು ಕೇಳುವುದು ನಾನು. ಬೇಜಾರು ಮಾಡಿಕೊಳ್ಳಬೇಡ... ನೀನು ನನ್ನ ಹೋಸ್ಟ್... ಆದರೂ... ನಿನಗೆ ದೇವರ ಮೇಲೆ ಭಕ್ತಿ ಇದೆಯಾ? ನಾನು ಕೇಳಿದ್ದಕ್ಕೆ ಬೇಜಾರಿಲ್ಲಲ್ಲ? "

ನಾನು ತಲೆ ಅಲ್ಲಾಡಿಸಿದೆ. ಅವನಿಗೆಲ್ಲಿ ಕಾಣುತ್ತೆ. ಒಂದು ಕಣ್ಣರೆಪ್ಪೆ ಅಲುಗಿಸುವುದೂ ತಲೆ ಅಲ್ಲಾಡಿಸುವುದು, ಒಂದೇ ಕುರುಡನ ಮುಂದೆ.

"ಇಲ್ಲ ನನಗೆ ನಂಬಿಕೆ ಇಲ್ಲ... ಯಾವುದರಲ್ಲೂ... ನಿನಗೆ ತಿಳೀತಲ್ಲ..?" ಅಂದೆ ನಾನು.

"ಹೌದು ತಿಳೀತು." ಅಂದ ಕುರುಡ.

"ರೈಟ್" ಅಂದೆ ನಾನು.

ಟಿವಿಯಲ್ಲಿ ವಿವರಣೆ ಮುಂದುವರೆದಿತ್ತು. ನನ್ನ ಹೆಂಡತಿ ನಿದ್ದೆಯಲ್ಲಿಯೇ ನಿಡಿದಾದ ಉಸಿರೆಳೆದು ಇನ್ನಷ್ಟು ಗಾಢ ನಿದ್ದೆಗೆ ಜಾರಿದಳು.

"ಸಾರಿ ಮಾರಾಯ.... ನನ್ನಿಂದ ಒಂದು ಕ್ಯಾಥೆಡ್ರಲ್ ಹೇಗಿದೆ ಅಂತ ವಿವರಿಸಲು ಆಗಲಿಲ್ಲ. ನನಗೆ ಇನ್ನೇನೂ ಹೊಳೆಯುತ್ತಿಲ್ಲ. ಆ ಕಲೆಯೇ ನನ್ನಲ್ಲಿಲ್ಲ."

ಕುರುಡ ಸುಮ್ಮನೆ ಕುಳಿತಿದ್ದ. ತಲೆ ತಗ್ಗಿಸಿ. ನಾನು ಹೇಳುತ್ತಿರುವುದನ್ನು ಆಲಿಸುತ್ತಿರುವ ಹಾಗೆ.

"ನಿಜ ಹೇಳಬೇಕೆಂದರೆ... ನನಗೆ ಕ್ಯಾಥೆಡ್ರಲ್ ಅಂದರೆ ಏನೂ ಅಲ್ಲ. ಅದೊಂದು ವಿಶೇಷವೇ ಅಲ್ಲ. ಎಲ್ಲಾದರೂ ಹೀಗೆ ಟಿವಿಯಲ್ಲಿ ಕಂಡು ಬಂದರೆ ಒಮ್ಮೆ ನೋಡುವ ವಿಷಯ ಅಷ್ಟೆ." ಅಂದೆ ನಾನು.

ಕೊನೆಗೊಮ್ಮೆ ಆ ಕುರುಡ ಮಾತನಾಡಲು ತೊಡಗುವವನಂತೆ ಗಂಟಲು ಕದಡಿದ. ತನ್ನ ಪ್ಯಾಂಟಿನ ಜೇಬಿನಿಂದ ಕರ್ಚೀಪು ತೆಗೆದು ತುಟಿ ಒರಸಿಕೊಂಡ. "ಬಿಟ್ಟು ಬಿಡು.. ನನಗೆ ಅರ್ಥ ಆಗತ್ತೆ.. ನಿನ್ನ ಕಷ್ಟ.. ನೀನು ಬೇಜಾರು ಮಾಡಬೇಡ." ಅಂದ "ಹೇಯ್ ಹೀಗೆ ಮಾಡಿದರೆ ಹೇಗೆ. ಐಡಿಯಾ... ಹೀಗೆ ಮಾಡೋಣ...ಒಂದು ದಪ್ಪದ ಕಾಗದ ಮತ್ತು ಒಂದು ಪೆನ್ನು ತರ್ತೀಯ... ನಾವಿಬ್ಬರೂ ಕೂಡಿ ಅದರ ಚಿತ್ರ ಬಿಡಿಸೋಣ.... ಹೋಗು ಗೆಳೆಯ... ತಾ... ದಪ್ಪ ಕಾಗದ ಮತ್ತು ಪೆನ್ನು."

ಸರಿ. ನಾನು ಮಹಡಿ ಮೆಟ್ಟಲು ಹತ್ತಿದೆ. ನನ್ನ ಕಾಲಿಗೆ ಬಲವಿಲ್ಲದಂತೆ ನನಗೆ ಅನಿಸುತ್ತಿತ್ತು. ನೂರು ಬಸ್ಕಿ ಹೊಡೆದಂತೆ. ನನ್ನ ಹೆಂಡತಿಯ ಕೊನೆಯಲ್ಲಿ ಕೆಲವು ಬಾಲ್ ಪೆನ್ನುಗಳು ಮೇಜಿನ ಮೇಲೆ ದೊರೆತವು. ಇದೀಗ ಈ ದಪ್ಪ ಕಾಗದಕ್ಕೆ ಎಲ್ಲಿ ಹುಡುಕಲಿ ಎಂದು ತಲೆ ಕೆರೆದುಕೊಂಡೆ.

ಮತ್ತೆ ಕೆಳಬಂದು ಅಡುಗೆ ಕೋಣೆಯಲ್ಲಿ ಹುಡುಕಾಡಿದಾಗ, ಒಂದು ರಟ್ಟಿನ ಶಾಪಿಂಗ್ ಬ್ಯಾಗ್ ಸಿಕ್ಕಿತು. ಅದರ ತಳದಲ್ಲಿದ್ದ ನೀರುಳ್ಳಿ ಸಿಪ್ಪೆಗಳನ್ನು ಅಲ್ಲೇ ಕೊಡವಿ, ಹೊರ ತಂದು ಅವನ ಕಾಲ ಬಳಿ ಕೆಳಗೆ ಕುಳಿತುಕೊಂಡೆ. ಟೀಪಾಯ್ ಹತ್ತಿರ ಎಳೆದು ಅದರ ಮೇಲಿದ್ದ ವಸ್ತುಗಳನ್ನು ಸರಿಸಿ ಜಾಗ ಮಾಡಿಕೊಂಡೆ. ಶಾಪ್ಪಿಂಗ್ ಬ್ಯಾಗ್ ಅನ್ನು ಹರಿದು, ದೊಡ್ಡ ಹಾಳೆಯನ್ನಾಗಿ ಮಾಡಿ ಅದರ ಸುಕ್ಕುಗಳನ್ನೆಲ್ಲ ಗಟ್ಟಿಯಾಗಿ ಒರಸಿ ಸಪಾಟು ಮಾಡಿದೆ. ಮತ್ತು ಟೀಪಾಯ್ ಮೇಲೆ ಸಜ್ಜುಗೊಳಿಸಿದೆ.

ಕುರುಡನೂ ಸೋಫಾದಿಂದ ಜಾರಿ ನನ್ನ ಬಳಿ ಕುಳಿತುಕೊಂಡ. ದಪ್ಪಗಿನ ಆ ಹಾಳೆಯನ್ನೊಮ್ಮೆ ತನ್ನ ಬೆರಳುಗಳಿಂದ ಸವರಿದ. ಮೊದಲು ಅದರ ಮೇಲೆಲ್ಲಾ. ಬಳಿಕ ಅದರ ಅಂಚುಗಳನ್ನು, ಮತ್ತೆ ನಾಲ್ಕು ಮೂಲೆಗಳನ್ನೂ ಕೂಡ ಸವರಿದ.

"ಆಲ್ ರೈಟ್... ಶುರು ಮಾಡೋಣ" ಎಂದ.

ನನ್ನ ಕೈಗಾಗಿ ತಡಕಾಡಿದ. ನಾನು ಕೈ ಚಾಚಿದೆ. ಪೆನ್ನು ಹಿಡಿದುಕೊಂಡಿದ್ದ ನನ್ನ ಕೈಯ ಮೇಲೆ ಅವನ ಅಂಗೈಯನ್ನು ಆವರಿಸಿಕೊಂಡು ಕಾಗದದ ಮೇಲಿಟ್ಟ. "ಸರಿ ಬಿಡಿಸು ಗೆಳೆಯ ಬಿಡಿಸು... ನಾನು ಹೇಳಿದ ಹಾಗೆ ಮಾಡು... ನೀನು ಬಿಡಿಸು ನನಗೆ ಅದು ಗೊತ್ತಾಗ್ತಾ ಹೋಗುತ್ತೆ... ಬಿಡಿಸು.." ಅಂದ ಕುರುಡ.

ನಾನು ಶುರು ಮಾಡಿದೆ. ಮೊದಲು ನಾನು ಸಪೂರದ ಉದ್ದವಾದ ಒಂದು ಪೆಟ್ಟಿಗೆ ಬಿಡಿಸಿದೆ. ನಾನಿರುವ ಮನೆಯೂ ಆಗಬಹುದಾಗಿತ್ತದು. ಆಮೇಲೆ ಅದಕ್ಕೊಂದು ಮಾಡು ತೊಡಿಸಿದೆ. ಜೊತೆಗೆ ಆ ಮಾಡಿನ ಇಕ್ಕೆಲಗಳಲ್ಲಿ ಗೋಪುರಗಳು.

"ವೆಲ್ ..." ಅವನಂದ " ಡೂಯಿಂಗ್ ಗುಡ್... " ನಿನ್ನ ಬದುಕಲ್ಲಿ ಇಂತದ್ದೊಂದು ನೀನು ಮಾಡಬಹುದು ಅಂತ ಯೋಚಿಸಿದ್ದೆಯಾ... ಬದುಕೆನ್ನುವುದೇ ವಿಚಿತ್ರ... ಎಲ್ಲರಿಗೂ ಗೊತ್ತದು... ಸರಿ ಮುಂದೆ.. ಬಿಡಿಸು.."

ನಾನು ಉದ್ದುದ್ದುದದ ಕಿಟಕಿಗಳನ್ನು ಬಿಡಿಸಿದೆ. ಬದಿಯ ಕಂಭಗಳನ್ನು ಬಿಡಿಸಿ ಕಮಾನು ತೊಡಿಸಿದೆ. ದೊಡ್ಡ ಬಾಗಿಲುಗಳನ್ನು ಜೋಡಿಸಿದೆ... ನಾನು ನಿಲ್ಲಿಸಲಿಲ್ಲ.... ಅಷ್ಟರಲ್ಲಿ ಆ ಚ್ಯಾನೆಲ್ ಸಂಪರ್ಕ ಕಳಚಿ ಟಿವಿ ಜಿರ್ರೆಂದಿತು. ನಾನು ಕೈ ಸಡಿಲಿಸಿ ಪೆನ್ನು ಕೆಳಗಿತ್ತೆ. ಅವನು ಅವನ ಬೆರಳುಗಳನ್ನು ಆ ಕಾಗದದ ಮೇಲೆ ನಾವು ಬರೆದ ಗೆರೆಗಳ ಅಂಚಿಗೆ ಸವರುತ್ತಾ ತಲೆ ಕುಲುಕತೊಡಗಿದ.

"ಚೆನ್ನಾಗಿ ಬರುತ್ತಿದೆ..." ಎಂದ ಕುರುಡ.

ನಾನು ಮತ್ತೆ ಪೆನ್ನು ಎತ್ತಿಕೊಂಡೆ. ಅವನು ನನ್ನ ಕೈ ಹಿಡಿದ. ನಾನು ಬಿಡಿಸತೊಡಗಿದೆ. ನಾನೇನೂ ಕಲಾವಿದನಲ್ಲ. ಆದರೂ ಬಿಡಿಸತೊಡಗಿದೆ. ಸರಾಗವಾಗಿ.

ನನ್ನ ಹೆಂಡತಿ ನಿದ್ದೆಯಿಂದೆದ್ದು ನಮ್ಮನ್ನು ದಿಟ್ಟಿಸುತ್ತಿದ್ದಳು. ಅವಳು ಸೋಫಾದ ಮೇಲೆ ನೇರ ಕೂತು "ಎಂತ ಮಾಡ್ತಾ ಇದ್ದೀರಿ ನೀವಿಬ್ಬರೂ.. ಹೇಳಿಯಪ್ಪ.." ಅಂದಳು. ಅವಳ ಉಡುಪು ಇನ್ನಷ್ಟು ತೆರೆದುಕೊಂಡಿತ್ತು.

ನಾನು ಮಾತನಾಡಲಿಲ್ಲ.

ಕುರುಡ ನುಡಿದ "ನಾವು ಒಂದು ಕ್ಯಾಥೆಡ್ರಲ್ ಬಿಡಿಸುತ್ತಿದ್ದೇವೆ.. ನಾನು ಮತ್ತು ಇವನು.. ಸ್ವಲ್ಪ ಗಟ್ಟಿ ಒತ್ತು" ನನಗಂದ ಅವನು. "ದಟ್ಸ್ ರೈಟ್... ಗುಡ್.." " ಸರಿ.. ಆಯಿತಲ್ಲ ಗೆಳೆಯ.. ನೀನು ನಿನ್ನಿಂದಾಗದು ಎಂದು ಕೊಂಡಿದ್ದೆ.. ನೀನೆ ಮಾಡಿದಿಯಲ್ಲ. ಈಗ.. " ಅವನಂದ. "ಕೆಲವು ಮನುಷ್ಯರನ್ನೂ ಬಿಡಿಸು.. ಮನುಷ್ಯರಿಲ್ಲದೆ ಎಂತಹ ಕೆಥೆಡ್ರೆಲ್ ಅದು?" ಅಂದ.

"ಏನಾಗ್ತಾ ಇದೆ ಇಲ್ಲಿ.." ನನ್ನ ಹೆಂಡತಿ ಮತ್ತೆ ಕೇಳಿದಳು "ರಾಬರ್ಟ್.. ಏನು ಮಾಡ್ತಾ ಇದ್ದಿ ನೀನು?"

"ಇಟ್ಸ್ ಆಲ್ ರೈಟ್" ಅವಳಿಗೆ ಹೇಳಿದ ಅವನು. "ಈಗ ನೀನು ಕಣ್ಣು ಮುಚ್ಚು" ನನಗೆ ಹೇಳಿದ ಕುರುಡ.

ಅವನು ಹೇಳಿದ ಹಾಗೆ ನಾನು ಕಣ್ಣು ಮುಚ್ಚಿದೆ.

"ಮುಚ್ಚಿದೆಯ?" ಕೇಳಿದ ಅವನು "ತೆರೆಯ ಬೇಡ"

"ಮುಚ್ಚಿದೆ" ಅಂದೆ.

"ಹಾಗೆ ಮುಚ್ಚಿಯೇ ಇರಲಿ. ತೆರೆಯಬೇಡ" ಎಂದ. "ಈಗ ನಿಲ್ಲಿಸಬೇಡ... ಬಿಡಿಸು"

ಸರಿ ನಾವು ಮುಂದುವರಿಸಿದೆವು. ಅವನ ಬೆರಳುಗಳು ನನ್ನ ಕೈಯನ್ನು ಆವರಿಸಿ ಬಿಡಿಸತೊಡಗಿದೆವು. ನಾನು ಈವರೆಗೆ ನನ್ನ ಬದುಕಿನಲ್ಲಿ ಅನುಭವಿಸಿರದ ಅನುಭವ ಅದು.

ಕೊನೆಗೊಮ್ಮೆ ಅವನಂದ "ಬಹುಶ ಮುಗಿಯಿತು.. ಈಗ ಬಂದಿರಬೇಕು..." "ಒಮ್ಮೆ ಕಣ್ಣು ತೆರೆದು ನೋಡು" ಅಂದ.

ಆದರೆ ನನ್ನ ಕಣ್ಣುಗಳು ಮುಚ್ಚಿದ್ದವು. ಇನ್ನೂ ಕೊಂಚ ಹೊತ್ತು ಹಾಗೆ ಇರೋಣವೆಂದು ಮನಸ್ಸಾಯಿತು ನನಗೆ. ನನಗೇನೋ ಹಾಗೆಯೇ ಇರಬೇಕೆಂದು ಅನಿಸತೊಡಗಿತು.

"ವೆಲ್.. ನೀನು ನೋಡುತ್ತಾ ಇದ್ದೀಯ?" ಅಂತ ಅವನು ಕೇಳಿದ.

ನನ್ನ ಕಣ್ಣುಗಳು ಇನ್ನೂ ಮುಚ್ಚಿದ್ದವು. ನಾನು ನನ್ನ ಮನೆಯೊಳಗಿದ್ದೆ. ಆದರೆ ನಾನು ಯಾವುದರ ಒಳಗೂ ಇಲ್ಲದಂತೆ ನನಗೆ ಅನಿಸತೊಡಗಿತು.

"ಇಟ್ಸ್ ರಿಯಲಿ ಸಂಥಿಂಗ್" ಅಂದೆ ನಾನು.

0 comments:

ಕಾಮೆಂಟ್‌‌ ಪೋಸ್ಟ್‌ ಮಾಡಿ