ಡಿಸೆಂಬರ್ 26, 2008

ಕಾರ್ವರ್ ಬರೆದ "ಕ್ಯಾಥೆಡ್ರಲ್" - 1


(ಅಮೆರಿಕದಲ್ಲಿ ಇಪ್ಪತ್ತನೇ ಶತಮಾನದ ಪ್ರಮುಖ ಸಾಹಿತಿ ಎಂದು ಗಣಿಸಲಾಗಿರುವ "ರೇಮಂಡ್ ಕಾರ್ವರ್". ಎಂಬತ್ತರ ದಶಕದಲ್ಲಿ ಸಣ್ಣಕತೆಗಳಿಗೆ ಮತ್ತೆ ಉಸಿರು ಕೊಟ್ಟವನು ಎಂದೂ ಖ್ಯಾತ. ಇವನು ಬರೆದ ಒಂದು ಪ್ರಸಿದ್ಧ ಕತೆ "ಕ್ಯಾಥೆಡ್ರಲ್" ಅನ್ನು ನಾನು ಕನ್ನಡೀಕರಿಸಿದ್ದೇನೆ. ಮೊದಲ ಕಂತು ಇಲ್ಲಿದೆ.)


ಈ ಕುರುಡ, ನನ್ನ ಹೆಂಡತಿಯ ಹಳೆಯ ಮಿತ್ರ, ನಮ್ಮಲ್ಲಿಗೆ ಒಂದು ರಾತ್ರಿಗೆ ಉಳಕೊಳ್ಳಲು ಬರುತ್ತಿದ್ದಾನೆ. ಅವನ ಹೆಂಡತಿ ಇತ್ತೀಚೆಗೆ ತೀರಿ ಹೋದಳಂತೆ. ಅವನ ಹೆಂಡತಿಯ ಕಡೆಯವರು ನಮ್ಮ ಊರಿಗೆ ಹತ್ತಿರದ ಊರಲ್ಲಿರುವುದು. ಅಲ್ಲಿಗೆ ಬಂದವನು ನಮ್ಮಲ್ಲಿಗೂ ಬರುತ್ತೇನೆ ಎಂದು ನನ್ನ ಹೆಂಡತಿಗೆ ಫೋನ್ ಮಾಡಿ ಹೇಳಿದುದರಿಂದ ಇವಳಿಗೆ ಬಲು ಖುಷಿ. ಎಲ್ಲ ತಯಾರಿ ಆಯಿತು. ಅವನು ಮೂರು ಗಂಟೆ ಪ್ರಯಾಣ ಮಾಡಿ ರೈಲಿನಲ್ಲಿ ಬಂದಿಳಿಯುವುದು ಮತ್ತು ನನ್ನವಳು ಅವನನ್ನು ಕರೆತರಲು ನಿಲ್ದಾಣಕ್ಕೆ ಹೋಗುವುದು ಎಲ್ಲ ಸಜ್ಜಾಯಿತು.

ನನ್ನವಳು ಅವನನ್ನು ನೋಡದೆ ಸುಮಾರು ಹತ್ತು ವರ್ಷಗಳಾದವು. ಅದರ ಮೊದಲು ಇವಳು ಅವನ ಬಳಿ ಕೆಲಸಕ್ಕಿರುವಾಗ ಆದ ಪರಿಚಯ ಇದು. ಇವಳು ಅವನಲ್ಲಿ ಕೆಲಸ ಬಿಟ್ಟ ಬಳಿಕವೂ ಅವರಿಬ್ಬರೂ ಸಂಪರ್ಕ ಇಟ್ಟು ಕೊಂಡಿದ್ದರು. ಮಾತುಗಳನ್ನು ಟೇಪ್ ರೆಕಾರ್ಡ್ ಮಾಡಿ ಆಕಡೆ ಈಕಡೆ ಕಳುಹಿಸುತ್ತಿದ್ದರಂತೆ. ನನಗೆ ಈ ಕುರುಡ ಬರುವುದು ಅಷ್ಟೇನೂ ಉಮೇದು ತರಲಿಲ್ಲ. ನನಗೆ ಪರಿಚಯವೂ ಇಲ್ಲವಲ್ಲ. ಕುರುಡ ಬೇರೆ. ನನಗೆ ಕುರುಡರ ಬಳಿ ವ್ಯವಹರಿಸಿ ಅನುಭವವೂ ಇಲ್ಲ. ನಾನು ಅವರ ಬಗ್ಗೆ ತಿಳಿದಿರುವುದು ಸಿನೆಮಾಗಳ ಮೂಲಕ ಮಾತ್ರ. ಕುರುಡರು ಕೋಲು ಹಿಡಿದು ನಿಧಾನವಾಗಿ ನಡೆಯುವುದು. ನಗದಿರುವುದು, ಕತ್ತು ಕೊಂಕಿಸಿ ಎತ್ತಲೋ ನೋಡಿ ನುಡಿಯುವುದು ಇವೆಲ್ಲ ಒಂಥರಾ. ನನಗೇಕೋ ಈತ ಬರುವುದು ಇಷ್ಟ ಇರಲಿಲ್ಲ.

ನನ್ನ ಹೆಂಡತಿ ಆಗ ಬಹಳ ಕಷ್ಟದಲ್ಲಿದ್ದಳಂತೆ. ಕೆಲಸವೂ ಇರಲಿಲ್ಲ. ಇವಳು ಆ ಬೇಸಿಗೆ ರಜೆಯ ಕೊನೆಯಲ್ಲಿ ಮದುವೆಯಾಗ ಬಯಸಿದ ಸೈನಿಕ ಇನ್ನೂ ತರಬೇತಿಯಲ್ಲಿದ್ದ. ಅವನ ಬಳಿಯೂ ದುಡ್ಡಿರಲಿಲ್ಲ. ಆದರೆ ಅವರಿಬ್ಬರೂ ಒಬ್ಬರನ್ನೊಬ್ಬರು ಬಹಳ ಪ್ರೀತಿಸುತ್ತಿದ್ದರಂತೆ. ಆಗಲೇ ಅವಳು ಆ ಜಾಹಿರಾತು ಓದಿದ್ದು. "ಹೆಲ್ಪ್ ವಾಂಟೆಡ್ - ರೀಡಿಂಗ್ ಟು ಬ್ಲೈಂಡ್ ಮ್ಯಾನ್" ಅಂತ ಇತ್ತಂತೆ. ಇವಳು ಫೋನ್ ಮಾಡಿ ಭೇಟಿಯಾದಳು. ಕೂಡಲೇ ಕೆಲಸವೂ ಸಿಕ್ಕಿತು.

ಒಂದು ಬೇಸಿಗೆ ರಜೆ ಪೂರ್ತಿ ಈ ಕುರುಡನ ಬಳಿ ಕೆಲಸ ಮಾಡಿದಳಂತೆ ನನ್ನ ಹೆಂಡತಿ. ಇವಳ ಕೆಲಸವೆಂದರೆ ಕಾಗದ ಪತ್ರಗಳನ್ನು ಓದಿ ಹೇಳುವುದು. ದಸ್ತಾವೇಜುಗಳು, ರೆಫರೆನ್ಸ್ ಪುಸ್ತಕಗಳು, ವರದಿಗಳು ಇತ್ಯಾದಿ. ಇವಳು ಅಚ್ಚುಕಟ್ಟಾಗಿ ಸರಕಾರೀ ಸಮಾಜ ಕಲ್ಯಾಣ ವಿಭಾಗದಲ್ಲಿದ್ದ ಅವನ ಕಛೇರಿಯನ್ನು ಕೂಡ ಸಜ್ಜುಗೊಳಿಸಿದ್ದಳಂತೆ. ಅವರಿಬ್ಬರೂ, ನನ್ನ ಹೆಂಡತಿ ಮತ್ತು ಆ ಕುರುಡ, ಒಳ್ಳೆಯ ಗೆಳೆಯರಾದರಂತೆ. ಅವನ ಕಛೇರಿಯಲ್ಲಿ ಅವಳ ಕೊನೆಯ ದಿನ, ಕುರುಡ ಇವಳ ಹತ್ತಿರ ಬಂದು ನಿನ್ನ ಮುಖ ಸವರಬಹುದೇ ಅಂತ ಕೇಳಿದನಂತೆ. ಇವಳು ಸರಿ ಅಂದಳು, ಅವನು ನಿಧಾನವಾಗಿ ಅವಳ ಕಣ್ಣು, ಮೂಗು, ಹಣೆ, ಗಲ್ಲ, ತುಟಿ ಮತ್ತು ಅವಳ ಕೊರಳು ಕೂಡ ಸವರಿದನಂತೆ. ಇದು ನನಗೆ ಇವಳೇ ಹೇಳಿದ್ದು. ಅವಳು ಅದನ್ನೆಲ್ಲಾ ಇನ್ನೂ ಮರೆತಿಲ್ಲ. ಇವಳು ಅದರ ಮೇಲೊಂದು ಕವನ ಕೂಡ ಬರೆಯಲು ಯತ್ನಿಸಿದ್ದಳಂತೆ. ಇವಳು ಹಾಗೆ. ಇದ್ದದ್ದಕ್ಕೆಲ್ಲ ಕವನ ಬರೆಯಲು ತೊಡಗುವುದು. ಏನಾದರೂ ವಿಶೇಷ ಘಟಿಸಿದಾಗೆಲ್ಲ ವರ್ಷಕ್ಕೊಂದೋ ಎರಡೋ ಬಾರಿ ಕವನ ಬರೀತಾಳೆ.

ನಾವಿಬ್ಬರೂ ಭೇಟಿಯಾದ ಶುರುವಿನಲ್ಲಿ ಅದೆಲ್ಲ ನನಗೆ ತೋರಿಸಿದ್ದಳು. ಆ ಕವನದಲ್ಲಿ ಕುರುಡನ ಬೆರಳುಗಳು ಹೇಗೆ ಕಂಪಿಸುತ್ತ ನವಿರಾಗಿ ಅವಳ ಮುಖದ ಮೇಲೆ ಓಡಾಡಿದವು ಎಂದು ಬರೆದಿದ್ದಳು. ಮತ್ತೆ, ಅವನ ಬೆರಳುಗಳು, ಅವಳ ತುಟಿಯನ್ನು ಸವರುವಾಗ ಅವಳಲ್ಲಿ ಸರಿದು ಹೋದ ಯೋಚನೆಗಳು, ಇವನ್ನೆಲ್ಲ ಬರೆದಿದ್ದಳು ಎಂದು ಕಾಣುತ್ತದೆ. ನನಗೆ ಅಷ್ಟೇನೂ ಒಳ್ಳೆಯ ಕವನ ಅಂತ ಅನಿಸಿರಲಿಲ್ಲ. ಅದನ್ನು ಅವಳಿಗೆ ಹೇಳಿಯೂ ಇರಲಿಲ್ಲ. ಹಾಗೆ ನೋಡಿದರೆ ನನಗೆ ಕಾವ್ಯದ ಬಗ್ಗೆ ಏನು ಗೊತ್ತಿದೆ. ಕವನಗಳ ಪುಸ್ತಕ ನಾನು ಓದುವುದುಂತ ಇಲ್ಲ.

ಇರಲಿ, ಇಲ್ಲಿ ಈ ಸೈನಿಕ, ನನ್ನ ಹೆಂಡತಿ ಮೊದಲು ಮದುವೆಯಾಗಿದ್ದಳಲ್ಲ, ಈ ಆಫಿಸರ್ ಆಗುವವನು, ಇವಳ ಚಿಕ್ಕಂದಿನ ಗೆಳೆಯ. ಹಾಗೆ ಇವಳು ಆ ಕುರುಡನಿಂದ ಮುಖ ಸವರಿಸಿಕೊಂಡು ಅವನಿಂದ ಬೀಳ್ಕೊಟ್ಟು ಇವನನ್ನ್ನು ಮದುವೆಯಾದಳಂತೆ. ಸೈನಿಕ ಆಗಲೇ ಆಫಿಸರ್ ಆಗಿ ನಿಯುಕ್ತಿ ಆಗಿದ್ದ. ಹಾಗಾಗಿ ಇವರು ದಂಡು ಇರುವಲ್ಲಿ ಮನೆ ಮಾಡಬೇಕಾಯಿತು. ಆದರೆ ಅವರಿಬ್ಬರೂ, ನನ್ನ ಹೆಂಡತಿ ಮತ್ತು ಕುರುಡ, ಸಂಪರ್ಕದಲ್ಲಿದ್ದರಂತೆ.

ಮುದುವೆಯಾಗಿ ಸುಮಾರು ಒಂದು ವರ್ಷದ ಬಳಿಕ ಇವಳು ಮೊದಲ ಫೋನ್ ಮಾಡಿದ್ದು ಅವನಿಗೆ. ಯಾವುದೋ ಏರ್ಫೋರ್ಸ್ ಬೇಸ್ ನಿಂದ. ಇವಳಿಗೆ ಮಾತನಾಡಬೇಕು ಅಂತ ಅನಿಸಿತ್ತು. ಇಬ್ಬರೂ ತುಂಬ ಮಾತನಾಡಿದರಂತೆ. ಆಮೇಲೆ ನಿನಗೆ ಇನ್ನು ಮಾತನಾಡಬೇಕು ಅಂತ ಕಂಡರೆ ಮಾತು ರೆಕಾರ್ಡ್ ಮಾಡಿ ಟೇಪು ಕಳುಹಿಸು ಅಂತ ಅವನು ಹೇಳಿದ. ಇವಳು ಹಾಗೆ ಮಾಡಿದಳು. ಎದೆಯಾಳದ ಎಲ್ಲ ಮಾತುಗಳು. ತಾನು ತನ್ನ ಗಂಡನನ್ನು ಬಹಳ ಪ್ರೀತಿಸುತ್ತಿರುವುದು, ಆದರೆ ಅವನ ಈ ಸೈನ್ಯದ ಕೆಲಸ ಇವಳಿಗೆ ಸ್ವಲ್ಪವೂ ಇಷ್ಟವಿಲ್ಲದಿರುವುದು, ಮನೆಯಲ್ಲೆಲ್ಲ ತಾನೊಬ್ಬಳೇ ಕಟ್ಟಿ ಹಾಕಿದಂತೆ ಮುಂತಾಗಿ ಎಲ್ಲವನ್ನೂ ಆ ಕುರುಡನಿಗೆ ಕಳುಹಿಸುತ್ತಿದ್ದ ಟೇಪ್ ನಲ್ಲಿ ಹೇಳುತ್ತಿದ್ದಳಂತೆ. ಇವಳು ಅವನ ಮೇಲೆ ಕವನ ಬರೆದ ವಿಷಯವೂ ಹೇಳಿದ್ದಳಂತೆ. ಮತ್ತೊಂದು ಕವನ ಬರೆಯ ತೊಡಗಿದ್ದು, ಅದರಲ್ಲಿ ಒಬ್ಬ ಸೈನಿಕನ ಹೆಂಡತಿಯಾಗಿ ಇರುವುದು ಅಂದರೇನು ಎಂಬ ಭಾವ ಇರುವುದು ಎಲ್ಲ ಹೇಳಿದ್ದಳಂತೆ. ಬಹುಶ ಆ ಕವನವನ್ನು ಅವಳು ಪೂರ್ತಿಯೇ ಮಾಡಿಲ್ಲ. ಪ್ರತಿಯಾಗಿ ಆ ಕುರುಡುಗೆಳೆಯ ಕೂಡ ಟೇಪ್ ಮಾಡಿದ, ಇವಳಿಗೆ ಕಳುಹಿಸಿದ. ಹೀಗೆ ಇವರಿಬ್ಬರ ನಡುವೆ ತೆಪುಗಳ ವಿನಿಮಯ ಸಾಗತೊಡಗಿತು. ನನ್ನ ಹೆಂಡತಿಯ ಮೊದಲ ಗಂಡನಿಗೆ ವರ್ಷಕ್ಕೊಂದು ಟ್ರಾನ್ಸ್ಫರ್ ಆಗುತ್ತಿತ್ತು. ಹೋದ ಕಡೆಯಿಂದೆಲ್ಲ ಇವಳು ಟೇಪು ಕಳುಹಿಸುವುದು.

ಹೀಗೆ ಒಮ್ಮೆ ಬೇಸತ್ತು, ಈ ಸುತ್ತಾಟದಲ್ಲಿ ತನಗೆ ಪರಿಚಯವಾಗಿ ಗಾಢವಾಗುವುದರೊಳಗೆ ಮುಗಿದು ಹೋಗುವ ತನ್ನ ಸಂಬಂಧಗಳನ್ನೆಲ್ಲ ತುಂಡರಿಸಿ, ಏಕಾಂಗಿತನವನ್ನು ಅನುಭವಿಸುತ್ತ ತನ್ನೊಳಗೆ ತಾನು ಮುಳುಗತೊಡಗಿದಳಂತೆ ನನ್ನ ಹೆಂಡತಿ. ಬದುಕು ಅಸಹನೀಯವಾದಾಗ ಒಂದು ಮುಷ್ಟಿ ನಿದ್ದೆ ಮಾತ್ರೆ ನುಂಗಿ ಮಲಗಿದಳಂತೆ. ಹಣೆ ಬರಹ, ಸಾಯಲಿಲ್ಲ. ಎಲ್ಲ ವಾಂತಿ ಮಾಡಿಕೊಂಡುಬಿಟ್ಟಳು. ಸೈನಿಕ ಗಂಡ ಬಂದು ನೋಡಿದರೆ ಇವಳು ಹೀಗೆ ಬಿದ್ದಿದ್ದಾಳೆ. ಇವಳನ್ನು ಆಸ್ಪತ್ರೆಗೆ ಹಾಕಿ ಅವನು ನೋಡಿಕೊಂಡ. ಇವಳು ಕೊಂಚ ಗೆಲುವಾದಳು. ಇದನ್ನೆಲ್ಲವನ್ನೂ ಕುರುಡನಿಗೆ ಟೇಪ್ ಕಳುಹಿಸಿ ತೋಡಿಕೊಂಡಿದ್ದಳು. ಹೀಗೆ ವರ್ಶಾನುಗಟ್ಟಲೆ ಇವರ "ಟೇಪು ವ್ಯವಹಾರ" ಬಿರುಸಾಗಿ ಸಾಗಿತ್ತು. ಬಹುಶ ಇವಳಿಗೆ ಪಾಪ ವರ್ಷಕ್ಕೊಂದು ಕವನ ಬರೆಯುವುದು ಬಿಟ್ಟರೆ ಇದೆ ಒಂದು ಮನರಂಜನೆ ಆಗಿತ್ತೋ ಏನೋ.
ಒಂದು ಟೇಪ್ನಲ್ಲಿ ಇವಳು ತಾನು ತನ್ನ ಸೈನಿಕ ಗಂಡನಿಂದ ದೂರ ಇರುವ ನಿರ್ಧಾರ ಮಾಡಿದ್ದಾಗಿ ಹೇಳಿದ್ದಳು. ಆಮೇಲೆ ಇನ್ನೊಂದರಲ್ಲಿ ತಾನು ಡೈವೋರ್ಸ್ ಪಡೆಯುತ್ತಿರುವ ಬಗ್ಗೆ ಕೂಡ ಹೇಳಿದ್ದಳು. ಆಗಲೇ ನಾನು ಮತ್ತು ಅವಳು ಜೊತೆಗೆ ತಿರುಗಾಡಲು ತೊಡಗಿದ್ದು. ಅದನ್ನೂ ಅವಳು ಕುರುಡನಿಗೆ ಹೇಳಿದ್ದಳು. ಏನಿದ್ದರೂ ಅವನಿಗೊಂದು ಹೇಳಬೇಕು ಅವಳಿಗೆ. ಬಹುಶ ನನಗೆ ಹಾಗೆ ಅನಿಸುತಿದ್ದಿರಬಹುದು.

ಒಂದು ವರ್ಷದ ಕೆಳಗೆ ಒಮ್ಮೆ ಇವಳು ನನಗೆ ತನ್ನ ಗೆಳೆಯನ ಟೇಪು ಕೇಳು ಬಾ ಅಂತ ಕೇಳಿಸಿದ್ದಳು. ನನ್ನ ವಿಷಯ ಎಂತದೋ ಇತ್ತಂತೆ. ಓಹೋ ನಾನು ಆಯ್ತು ಎಂದೆ. ನಾನು ನಮಗೆ ಡ್ರಿಂಕ್ಸ್ ತಯಾರು ಮಾಡುತ್ತಿರುವಾಗ ನನ್ನ ಹೆಂಡತಿ ರೆಕಾರ್ಡ್ ಪ್ಲೇಯರ್ ತಂದು ರೆಡಿ ಮಾಡಿದಳು. ಕ್ಯಾಸೆಟ್ ಹಾಕಿ ಗುಂಡಿ ಒತ್ತಿದ್ದಾಗ ಗರಗರ ಸದ್ದಾಗತೊಡಗಿತು. ನಾನು ಬಂದು ಅವಳಿಗೆ ಡ್ರಿಂಕ್ ಇತ್ತು ಸೋಫಾದ ಮೇಲೆ ಕುಕ್ಕರಿಸಿದಾಗ ಅವನ ಮಾತುಗಳು ಹರಿದು ಬರತೊಡಗಿದವು. ದೊಡ್ಡ ಸ್ವರದಲ್ಲಿ. ಇವಳು ಕೊಂಚ ವಾಲ್ಯೂಮ್ ಕಡಿಮೆ ಮಾಡಿದಳು.

ಒಂದಷ್ಟು ಅನಾವಶ್ಯಕ ಹರಟೆಯ ಬಳಿಕ ಈ ಅಪರಿಚಿತ ಕಂಠದಿಂದ ಮೊದಲ ಬಾರಿ ನನ್ನ ಹೆಸರು ಕೇಳಿಸಿತು. ನನಗೆ ಯಾರೆಂದು ಕೂಡ ಗೊತ್ತಿಲ್ಲದ ಈ ಕುರುಡ ಅದೇನು ಹೇಳುತ್ತಾನೆ ಎಂಬ ಕುತೂಹಲ. ಅವನು ಮಾತನಾಡುತ್ತಿದ್ದ "ನೀನು ಅವನ ಬಗ್ಗೆ ಅಷ್ಟು ಹೇಳಿದ್ದು ನೋಡುವಾಗ ನನಗೆ ಅವನ ಬಗ್ಗೆ ಅನಿಸಿದ್ದೆಂದರೆ..." ಅಷ್ಟರಲ್ಲೇ ಬಾಗಿಲ ಕರೆಗಂಟೆ ಹೊಡೆದು ಅದಕ್ಕೆ ಅಡ್ಡಿಯಾಯಿತು. ಅಷ್ಟೆ ಆಮೇಲೆ ಬಹುಶ ನಾನು ಮರೆತೆ ಬಿಟ್ಟಿದ್ದೆ. ನನಗೆ ಆಸಕ್ತಿ ಕೂಡ ಇರಲಿಲ್ಲ.

ಇಂತಹ ಈ ಕುರುಡ, ಇವಳ ಗೆಳೆಯ, ಇವತ್ತು ನಮ್ಮ ಮನೆಯಲ್ಲಿ ಉಳಕೊಳ್ಳಲು ಬರುತ್ತಿದ್ದಾನೆ.

"ಬಹುಶ ನಾನು ಅವನನ್ನು ಬಿಲ್ಲಿಯರ್ದ್ಸ್ ಆಡಲು ಕರೆಕೊಂಡು ಹೋಗಬಹುದು ಅಲ್ಲವೇ ಪ್ರಿಯೆ" ಎಂದೆ ನಾನು. ನನ್ನ ಹೆಂಡತಿ ಅವರೇ ಕಾಳು ಸುಲಿಯುತ್ತಿದ್ದವಳು ಒಂದು ಕ್ಷಣ ತಲೆಯೆತ್ತಿ ನನ್ನತ್ತ ನೋಡಿ "ನಿನಗೆ ನನ್ನ ಮೇಲೆ ಪ್ರೀತಿ ಇದ್ದರೆ ದಯವಿಟ್ಟು ಅಷ್ಟು ಮಾಡು. ಪ್ರೀತಿ ಇಲ್ಲದಿದ್ದರೆ ಬೇಡ. ನಿನಗೊಬ್ಬ ಗೆಳೆಯನಿದ್ದಿದ್ದರೆ, ಯಾವನೇ ಗೆಳೆಯ, ಅವನು ನಮ್ಮ ಮನೆಗೆ ಬಂದರೆ ನಾನು ಅವನನ್ನು ಸಾಧ್ಯವಾದಷ್ಟು ಖುಶಿಗೊಳಿಸಲು ನೋಡುತ್ತಿದ್ದೆ. ಅಂತ ಹೇಳಿ ಎದ್ದು ಸಿಂಕ್ ಬಳಿ ಕಾಳು ತೊಳೆಯಲು ಹೋದಳು.

"ನನಗೆ ಯಾರು ಕುರುಡ ಗೆಳೆಯರಿಲ್ಲ" ಅಂದೆ ನಾನು. "ನಿಮಗೆ ಗೆಳೆಯರೇ ಇಲ್ಲ" ಅವಳಂದಳು. ಸಿಟ್ಟು ಬಂದಿರಬೇಕು. ಸ್ವರ ಸ್ವಲ್ಪ ಜಾಸ್ತಿಯೇ ಏರಿತ್ತು. "ಎಂತ ಮಾತಾಡ್ತಿ ನೀನು. ಒಂಚೂರು ಯೋಚನೆ ಮಾಡು. ಅವನ ಹೆಂಡತಿ ನಿನ್ನೆ ಮೊನ್ನೆಯಷ್ಟೇ ತೀರಿ ಹೋಗಿದ್ದು. ಅಷ್ಟೂ ಗೊತ್ತಾಗಲ್ವ ನಿನಗೆ."

ನಾನು ಸುಮ್ಮನಿದ್ದೆ. ಅವಳೊಮ್ಮೆ ಅವನ ಹೆಂಡತಿಯ ಬಗ್ಗೆ ಹೇಳಿದ್ದಳು. ಅವಳ ಹೆಸರೆಂತದೋ ಬ್ಯೂಲಾ ಅಂತೇನೋ ಇತ್ತೆಂದು ನೆನಪು. ಬ್ಯೂಲಾ ಅಂದರೆ ನೀಗ್ರೋ ಹೆಸರಲ್ಲವೆ.

"ಅವನ ಹೆಂಡತಿ ನೀಗ್ರೋನಾ?" ಅಂತ ಬಾಯಿ ತಪ್ಪಿ ಕೇಳಿಯೇ ಬಿಟ್ಟೆ.

"ನಿನಗೆ ಹುಚ್ಚು ಹಿಡಿದಿದೆಯಾ?, ತಲೆಗಿಲೆ ಕೆಟ್ಟಿದೆಯೋ ಏನು?" ಅವಳಿಗೆ ಸಿಟ್ಟು ತಡೆಯಲಿಲ್ಲ. ಕೈಯಲ್ಲಿ ಆಲೂಗಡ್ಡೆ ಹಿಡಿದಿದ್ದವಳು ನನ್ನತ್ತ ಬೀಸಿ ಒಗೆದ ಪೆಟ್ಟಿಗೆ ನಾನು ಬಗ್ಗಿದ್ದರಿಂದ ಗೋಡೆಗಪ್ಪಳಿಸಿ ಕೆಳಗೆ ಬಿದ್ದು ಕಪಾಟಿನ ಕೆಳಗೆ ಉರುಳಿ ಹೋಯಿತು. "ಕುಡಿದ್ದಿಯ ಹೇಗೆ?" ಅಂತ ಕೇಳಿದಳು. ಚಾಕು ಬೇರೆ ಕೈಯಲ್ಲಿತ್ತು.

"ಸುಮ್ಮನೆ ಕೇಳಿದೆ ಮಾರಾಯ್ತಿ" ಅಂತ ಸಮಜಾಯಿಸಿದೆ.

ಸ್ವಲ್ಪ ಸಮಾಧಾನ ಆಗಿರಬೇಕು. ಎಲ್ಲ ಹೇಳಲು ಶುರು ಹಚ್ಚಿದಳು. ಮೆಲ್ಲ ಮೆಲ್ಲ ಎಲ್ಲ ವಿಷಯ ತಿಳಿಯತೊಡಗಿತು ನನಗೆ.


ನನ್ನ ಹೆಂಡತಿ ಬಿಟ್ಟ ಮೇಲೆ ಈ ಬ್ಯೂಲಾ ಅನ್ನುವ ಹುಡುಗಿ ಕುರುಡನ ಬಳಿ ಕೆಲಸಕ್ಕೆ ತೊಡಗಿದ್ದವಳಂತೆ. ಕೆಲವೇ ದಿನಗಳಲ್ಲಿ ಒಂದು ಚರ್ಚಿನಲ್ಲಿ ಮಾಡುವೆ ಮಾಡಿಕೊಂಡರಂತೆ. ಈ ಬ್ಯೂಲಾ ಮತ್ತು ಈ ಕುರುಡ. ಅದೊಂದು ಸಣ್ಣ ಮದುವೆಯಂತೆ - ಯಾರು ತಾನೆ ಇಂತಹ ವಿಲಕ್ಷಣ ಮದುವೆಗೆ ಹೋಗುತ್ತಾರೆ- ಇಬ್ಬರೇ ಇದ್ದರಂತೆ ಬ್ಯೂಲಾ, ಕುರುಡ, ಪಾದ್ರಿ ಮತ್ತು ಪಾದ್ರಿಯ ಸೇವಕ. ಆದರೆ ಚರ್ಚು ಮದುವೆ ಅಂದರೆ ಮದುವೆ. ಯಾರಿದ್ದರೇನು ಇಲ್ಲದಿದ್ದರೇನು. ಬ್ಯೂಲಾಳೆ ವತ್ತಾಯಿಸಿದ್ದಳಂತೆ. ಅದಕ್ಕೆ ಅಲ್ಲಿ ಅಂತ ಅಂದನಂತೆ ಕುರುಡ.

ಅಷ್ಟೆಲ್ಲಾ ಆದಾಗ್ಯೂ ಅದಾಗಲೇ ಬ್ಯೂಲಾಳ ಒಡಲಲ್ಲಿ ಒಂದು ಕ್ಯಾನ್ಸರ್ ಗೆಡ್ಡೆ ಬೆಳೆಯುತ್ತಿದ್ದಿರಬೇಕು. ಒಬ್ಬರನ್ನೊಬ್ಬರು ಅಗಲಿರದಂತೆ - ನನ್ನ ಹೆಂಡತಿಯ ಶಬ್ದಗಳಿವು "ಅಗಲಿರದಂತೆ"- ಎಂಟು ವರ್ಷ ಕಳೆಯುತ್ತಿರುವಾಗ ಬ್ಯೂಲಾಳ ಆರೋಗ್ಯ ವೇಗವಾಗಿ ಕುಸಿಯುತ್ತಾ ಬಂತಂತೆ. ಅವಳಲ್ಲೇ ಒಂದು ಆಸ್ಪತ್ರೆಯ ರೂಮ್ ನಲ್ಲಿ ಸಾಯುತ್ತಿರುವಾಗ ಇವನು, ಕುರುಡ, ಅವಳ ಕೈ ಹಿಡಕೊಂಡು ಬಳಿಯಲ್ಲೇ ಇದ್ದನಂತೆ. ಅವರು ಮದುವೆಯಾಗಿ, ಜೊತೆಯಾಗಿ ಬದುಕಿ, ಬಾಳಿ, ಕೆಲಸ ಮಾಡಿ, ಜೊತೆಯಾಗಿ ಮಲಗಿ - ಸೆಕ್ಸು ಕೂಡ - ಈಗ ನೋಡಿ ಈ ಕುರುಡ ಅವಳನ್ನು ಸಮಾಧಿ ಮಾಡಬೇಕಾಯಿತು.ಇಷ್ಟೆಲ್ಲಾ ಅವನು ಮಾಡಿದರೂ ಒಬ್ಬ ಹೆಂಗಸಿನಂಥಾ ಹೆಂಗಸು ಹೇಗಿರುತ್ತಾಳೆ ಅಂತ ಗೊತ್ತೇ ಆಗಲಿಲ್ಲವಲ್ಲ ಅವನಿಗೆ ಅಂದರೆ ಏನು ಹೇಳೋಣ. ನನಗಂತೂ ಇದನ್ನೆಲ್ಲಾ ನಂಬಲಿಕ್ಕೆ ಆಗಲಿಲ್ಲ. ಒಮ್ಮೆ ಆ ಕುರುಡನ ಬಗ್ಗೆ ಪಾಪ ಅನಿಸಿತು.

ಆಮೇಲೆ ಈ ಕುರುಡನನ್ನು ಕಟ್ಟಿಕೊಂಡು ಆ ಹೆಂಗಸಿನ ಬದುಕು ಹೇಗಿದ್ದಿರಬಹುದು ಎಂದು ಯೋಚಿಸತೊಡಗಿದೆ. ತನ್ನನ್ನು ಪ್ರೀತಿಸುವವನ ಕಣ್ಣಲ್ಲಿ ತಾನು ಹೇಗೆ ಕಾಣುತ್ತಿರಬಹುದು ಎಂದು ಅರಿಯಲಾರದ ಒಬ್ಬ ಹೆಂಗಸನ್ನು ಊಹಿಸಿ. ದಿನ ದಿನವೂ ಜೋತೆಯಾಗಿದ್ದರೂ ಒಂದೇ ಒಂದು ದಿನವೂ ತನ್ನ ಗಂಡನಿಂದ "ನೀನು ಎಷ್ಟು ಚೆನ್ನಾಗಿ ಕಾಣುತ್ತಿಯ" ಎಂಬ ಮಾತನ್ನು ಕೇಳದೆಯೇ ಸತ್ತು ಹೋದಳಲ್ಲ ಆ ಬ್ಯೂಲಾ. ತನ್ನ ಹೆಂಡತಿಯ ಮುಖದ ಮೇಲಿನ ಭಾವನೆಗಳನ್ನು ಓದಲಾರದ ಗಂಡನನ್ನು ಹೊಂದಿರುವುದು ಕೊರಗಲ್ಲದೆ ಮತ್ತೇನು. ಸಿಂಗಾರ ಗೊಳ್ಳಲಿ, ಇಲ್ಲದಿರಲಿ, ಅವನಿಗ್ಯಾವ ವ್ಯತ್ಯಾಸವೂ ಇಲ್ಲ. ಅವಳು ಬೇಕಿದ್ದರೆ ಒಂದು ಕಣ್ಣಿನ ಕೆಳಗೆ ಹಸಿರು ಅಯ್ ಶ್ಯಾಡೋ, ಮೂಗುತಿಯ ಬದಲಾಗಿ ಒಂದು ಗುಂಡು ಪಿನ್ನು, ಹಳದಿ ಬಣ್ಣದ ಕಾಲು ಚೀಲ, ಕೆಂಪು ಚಪ್ಪಲಿ ಎಂತ ಮಾಡಿದರೂ ತೊಂದರೆ ಅವನಿಗಿಲ್ಲ. ಅಲ್ಲ ನಾನು ಹೀಗೆ ಅಂದಾಜು ಮಾಡುವುದು. ಅವಳೆಂಥ ನಿರ್ಭಾಗ್ಯೆ ಅಂತ ? ತಾನು ಸಾಯುತ್ತಿದ್ದೇನೆ, ತನ್ನ ಗಂಡ ತನ್ನ ಬಳಿಯಲ್ಲಿ ಕುಳಿತು, ತನ್ನ ಕೈ ಹಿಡಿದು ಕಣ್ಣೀರು ಸುರಿಸುತ್ತಿದ್ದಾನೆ. ಅವಳು ಆ ಸಾವಿನೊಳಕ್ಕೆ ಜಾರುತ್ತಿರುವಾಗ ಬಹುಶ ಅವಳ ಕೊನೆಯ ಯೋಚನೆ ಇದೆ ಇರಬಹುದು, ತನ್ನ ಗಂಡನಿಗೆ ತಾನು ಹೇಗಿದ್ದೆನೆಂದೂ ತಿಳಿದಿಲ್ಲವಲ್ಲ ಅಂತ. ಪಾಪ.

ಹಾಗೂ ಹೀಗೂ, ನನ್ನ ಹೆಂಡತಿ ಅವನನ್ನು ಕರಕೊಂಡು ಬರಲು ಹೋದಳು. ನಾನು ಹೀಗೆ ಒಂದು ಪೆಗ್ ರೆಡಿ ಮಾಡಿ ಟಿ.ವಿ. ನೋಡುತ್ತಾ ಕುಳಿತಿದ್ದೆ. ನನಗಿನ್ನೇನು ಕೆಲಸವಿದೆ. ಕಾರು ಅಂಗಳಕ್ಕೆ ಬಂದು ನಿಂತಾಗ ಕಿಟಕಿಯ ಬಳಿ ಬಂದು ಇಣುಕಿ ನೋಡಿದೆ. ನನ್ನ ಹೆಂಡತಿ ನಗು ನಗುತ್ತ ಇಳಿಯುತ್ತಿದ್ದಳು. ಅವಳು ಇಳಿದು ಬಾಗಿಲು ಮುಚ್ಚಿ ಬಳಸಿ ಬಂದು ಆ ಕಡೆಯ ಬಾಗಿಲನ್ನು ತೆರೆಯುವಾಗ ಅವನು ಕೂಡ ಇಳಿಯತೊಡಗಿದ್ದ. ಅವಳ ಮುಖದ ನಗು ಇನ್ನೂ ತುಂಬು ತುಂಬು ಚೆಲ್ಲುತ್ತಿತ್ತು. ನನ್ನ ಹೆಂಡತಿ ಎಷ್ಟು ಚಂದ. ಈ ಕುರುಡ! ಒಮ್ಮೆ ಊಹಿಸಿ, ಮುಖದ ತುಂಬ ಗಡ್ಡ. ಗಡ್ಡದ ಕುರುಡ, ಯಾಕೋ ಅತೀ ಅನಿಸಿತು. ಕುರುಡ ಹಿಂಬದಿಯ ಸೀಟಿನತ್ತ ಬಾಗಿ ಒಂದು ಸೂಟ್ ಕೇಸು ಎಳೆದುಕೊಂಡ. ನನ್ನ ಹೆಂಡತಿ ಅವನ ಕೈಯನ್ನು ಹಿಡಿದು, ಕಾರಿನ ಬಾಗಿಲನ್ನು ಮುಚ್ಚಿ, ಕಾರನ್ನು ಬಳಸಿ ಕೊಂಡು ಅಂಗಳ ದಾಟಿ ಮಾತನಾಡುತ್ತಾ ಮೆಟ್ಟಲೇರಿ ಮನೆಯೊಳಗೆ ಬರುತ್ತಿರುವಾಗ ನಾನು ನನ್ನ ಗ್ಲಾಸನ್ನು ಎತ್ತಿಟ್ಟು ಟಿ.ವಿ. ಬಂದ್ ಮಾಡಿ ಎದುರ್ಗೊಳ್ಳಲು ಬಾಗಿಲಿನತ್ತ ಹೋದೆ.

"ಇವರು ರಾಬರ್ಟ್" ಅಂದಳು ನನ್ನ ಹೆಂಡತಿ "ರಾಬರ್ಟ್ ಇವರು ನನ್ನ ಗಂಡ. ನಾನು ಈಗಾಗಲೇ ನಿನಗೆ ಎಲ್ಲ ಹೇಳಿದ್ದೆನಲ್ಲ ಇವರ ಬಗ್ಗೆ" ತುಂಬು ಅಭಿಮಾನದಿಂದ ನುಡಿದಳು ನನ್ನ ಹೆಂಡತಿ. ಅವನ ಕೈ ಇನ್ನೂ ಅವಳ ಕೈಯೊಳಗಿತ್ತು.

ರಾಬರ್ಟ್ ಸೂಟ್ ಕೇಸು ಕೆಳಗಿಟ್ಟು ಕೈ ಚಾಚಿದ. ನಾನು ಅವನ ಕೈ ಹಿಡಿದೆ. ಅವನು ನನ್ನ ಕೈಯನ್ನು ಬಿಗಿಯಾಗಿ ಅಮುಕಿ ಎಳೆದು ಬಿಟ್ಟ.

"ನಾವು ಈಗಾಗಲೇ ಭೇಟಿಯಾದ ಹಾಗೆ ನನಗೆ ಅನಿಸುತ್ತಿದೆ" ಅಂದ ರಾಬರ್ಟ್. "ನನಗೂ ಅಷ್ಟೆ" ಅಂತ ಮರುನುಡಿದೆ. ನನಗೆ ಎಂತ ಹೇಳುವುದು ಎಂದು ತೋಚಲಿಲ್ಲ. ಮತ್ತೆ ಸಾವರಿಸಿ "ವೆಲ್ಕಂ, ನಿಮ್ಮ ಬಗ್ಗೆ ಸಾಕಷ್ಟು ಕೇಳಿದ್ದೇನೆ." ಅಂದೆ.

ನಾವೆಲ್ಲ ಮನೆಯೊಳಕ್ಕೆ ನಡೆದೆವು. ನನ್ನ ಹೆಂಡತಿ ರಾಬರ್ಟನ ತೋಳು ಹಿಡಕೊಂಡಿದ್ದಳು. ಇನ್ನೊಂದು ಕೈಯಲ್ಲಿ ಸೂಟ್ ಕೇಸು ಹಿದಕೊಂಡಿದ್ದ ರಾಬರ್ಟ್. ನನ್ನ ಹೆಂಡತಿ ಅವನಿಗೆ ಸೂಚನೆಗಳನ್ನು ಕೊಡುತ್ತಾ ಇದ್ದಳು "ರಾಬರ್ಟ್ ನಿನ್ನ ಎಡಕ್ಕೆ, ಈಗ ಬಲಕ್ಕೆ, ಹುಷಾರು ಅಲ್ಲೊಂದು ಖುರ್ಚಿ ಇದೆ. ಆಯಿತು.. ಇದು ಸೋಫಾ. ಇದನ್ನು ನಾವು ಎರಡು ವಾರಗಳ ಹಿಂದೆಯಷ್ಟೇ ಕೊಂಡಿದ್ದು".

ನಾನು ನಮ್ಮ ಹಳೆಯ ಸೋಫಾದ ಬಗ್ಗೆ ಹೇಳಬೇಕು ಅಂತ ಅನಿಸಿತು. ನನಗೆ ಬಹಳ ಇಷ್ಟದ ಸೋಫಾ ಆಗಿತ್ತದು. ಆದರೆ ಸುಮ್ಮನಿದ್ದೆ. ಏನಾದರೂ ಮಾತನಾಡಬೇಕು ಅನಿಸಿತು. ಹೀಗೆ ಸೌಜನ್ಯಕ್ಕೆ. ರೈಲಿನಲ್ಲಿ ಬರುವಾಗ ಹಾದಿಯುದ್ದದ ನಿಸರ್ಗ ಸೌಂದರ್ಯದ ಬಗ್ಗೆ. ನಮ್ಮೂರಿಗೆ ಬರುತ್ತಿರಬೇಕಾದರೆ ರೈಲಿನಲ್ಲಿ ಎಡ ಬದಿಯಲ್ಲಿ ಕುಳಿತು ಕೊಂಡರೆ ಚೆನ್ನ. ಹಾಗೆ ಹೋಗುವಾಗ ಬಲ ಬದಿಯಲ್ಲಿ.

"ನಿಮ್ಮ ರೈಲು ಪ್ರಯಾಣ ಹೇಗಿತ್ತು" ಅಂತ ಕೇಳಿದೆ. "ನೀವು ಬರುವಾಗ ಯಾವ ಸೈಡಲ್ಲಿ ಕುಳಿತಿದ್ದು" ಅಂದೆ.

"ಅದೆಂತದದು ಯಾವ ಬದಿಯಲ್ಲಿ ಅಂದರೆ?" ನನ್ನ ಹೆಂಡತಿ ಬಾಯಿ ಹಾಕಿದಳು. "ಯಾವ ಬದಿಯಲ್ಲಿ ಕುಳಿತರೆನು" ಸಿಡುಕಿ.

"ಸುಮ್ಮನೆ ಕೇಳಿದೆ" ನಾನಂದೆ.

"ಬಲ ಬದಿಯಲ್ಲಿ" ಅಂದ ರಾಬರ್ಟ್. "ನಾನು ಸುಮಾರು ನಲವತ್ತು ವರ್ಷ ಆಯ್ತು ರೈಲಿನಲ್ಲಿ ಕುಳಿತು ಕೊಳ್ಳದೆ. ನಾನು ಚಿಕ್ಕವನಿರುವಾಗ ನನ್ನ ತಂದೆ ತಾಯಿ ಜೊತೆಗೆ ಹೋಗಿದ್ದು. ಬಹಳ ಹಿಂದೆ. ನನಗೆ ಮರೆತೆ ಹೋಗಿತ್ತು ರೈಲಂದರೆ ಹೇಗಿರಬಹುದು ಅಂತ. ಈಗ ನನ್ನ ಗಡ್ಡ ಬಿಳಿಯಾಗಿ ಬಿಟ್ಟಿದೆ." ಅಂದ "ಹಾಗಂತ ಯಾರೋ ಹೇಳಿದರು. ನಿಜಕ್ಕೂ ನಾನು ಒಂದು ದೊಡ್ಡ ಜನದ ಹಾಗೆ ಕಾಣುತ್ತಿದ್ದೆನಾ? ಡಿಯರ್" ಕುರುಡ ನನ್ನ ಹೆಂಡತಿಯನ್ನು ಕೇಳಿದ.

"ನೀನು ಚೆನ್ನಾಗಿ ಕಾಣುತ್ತಿದ್ದಿ ರಾಬರ್ಟ್ ಗಣ್ಯ ವ್ಯಕ್ತಿಯ ಹಾಗೆ" ಅವಳು ನುಡಿದಳು "ರಾಬರ್ಟ್.... ರಾಬರ್ಟ್, ಇಟ್ಸ್ ಸೊ ಗುಡ್ ಟು ಸೀ ಯು." ಅಂದಳು.

ನನ್ನ ಹೆಂಡತಿ ಕೊನೆಗೂ ಅವಳ ಕಣ್ಣುಗಳನ್ನು ಆ ಗಣ್ಯ ಕುರುಡನ ಮೇಲಿನಿಂದ ಎತ್ತಿ ನನ್ನತ್ತ ಹಾಯಿಸಿದಳು. ಯಾಕೋ ನನ್ನನ್ನು ನೋಡಿ ಅವಳಿಗೆ ಇಷ್ಟವಾದಂತಿರಲಿಲ್ಲ. ನಾನು ಕೂತಲ್ಲೇ ತಿಣುಕಿದೆ.

ನಾನು ಇಷ್ಟರವರೆಗೆ ಯಾವುದೇ ಕುರುಡನನ್ನು ಭೇಟಿಯಾಗಿದ್ದಾಗಲೀ, ಪರಿಚಯವಾಗಲೀ ಆಗಿಲ್ಲ. ಇದೇ ಮೊದಲು. ಈ ಕುರುಡ ಸುಮಾರು ಐವತ್ತರ ಆಸುಪಾಸಿನವನು. ತಲೆ ಬೋಳಾಗುತ್ತಿರುವ ದೊಡ್ಡ ದೇಹದ ಮನುಷ್ಯ. ಅತೀವ ಭಾರವನ್ನು ಹೊತ್ತಂತೆ ಕೊಂಚ ಬಾಗಿರುವ ಭುಜ. ಕಂದು ಸಾಕ್ಸು, ಶೂಸು, ಕಂದು ಪ್ಯಾಂಟು, ತಿಳಿ ಕಂದು ಬಣ್ಣದ ಶರ್ಟು ಮತ್ತು ಟೈ ಧರಿಸಿದ್ದ. ಮೇಲೊಂದು ಸ್ಪೋರ್ಟ್ಸ್ ಕೋಟು. ಗಡ್ಡ ಬೇರೆ ಇದೆಯಲ್ಲವೇ.
ಆದರೆ ಕೈಯಲ್ಲಿ ಕೋಲಾಗಲಿ, ಕಣ್ಣಿಗೆ ಕಪ್ಪು ಕನ್ನಡಕವಾಗಲೀ ಇರಲಿಲ್ಲ. ಆಶ್ಚರ್ಯ. ನಾನು ಕುರುಡರು ಕಪ್ಪು ಕನ್ನಡಕ ಧರಿಸಿರಲೆಬೇಕೋ ಎಂದು ಕೊಂಡಿದ್ದೆ.

ನಿಜವೆಂದರೆ ಅವನ ಬರೀ ಕಣ್ಣು ನೋಡಿ ನನಗೆ ಅವನು ಕಪ್ಪು ಕನ್ನಡಕ ಹಾಕಿದ್ದಿದ್ದರೆ ಒಳಿತೆಂದು ಅನಿಸತೊಡಗಿತ್ತು. ಮೇಲ್ನೋಟಕ್ಕೆ ಎಲ್ಲರಂತೆ ಕಂಡರೂ, ಗಮನವಿಟ್ಟು ನೋಡಿದರೆ ಅವನ ಕಣ್ಣುಗಳ ವ್ಯತ್ಯಾಸ ಕಾಣುತ್ತಿತ್ತು. ಕಣ್ಣ ಬಿಳಿ ಬೊಂಬೆ ಹೆಚ್ಚು ಜಾಗ ಆಕ್ರಮಿಸಿಕೊಂಡಿತ್ತು. ಕಣ್ಣ ಮಣಿಗಳೂ ಅವನ ಅಂಕೆಗೆ ಸಿಗದೇ ಅತಿತ್ತ ಕಣ್ಣ ಗುಂಡಿಯೋಳಗೆಲ್ಲ ಚಲಿಸುತ್ತಿರುವಂತೆ ಕಂಡು ಭಯವೆನಿಸಿತು. ನಾನು ಅವನ ಮುಖವನ್ನು ದಿಟ್ಟಿಸುತ್ತಿದ್ದ ಹಾಗೆ ಅವನ ಎಡ ಕಣ್ಣಮಣಿ ಮೂಗಿನತ್ತ ತಿರುಗಿದರೆ, ಇನ್ನೊಂದು ಕಣ್ಣು ಅಲುಗದೆ ನಿಲ್ಲಲು ಯತ್ನಿಸುತ್ತಿತ್ತು. ಒಂದೇ ಕ್ಷಣ. ಮತ್ತೆ ಮೊದಲಿನ ಹಾಗೆ ಗರ ಗರ ತಿರುಗತೊಡಗಿತು.

ನಾನು ಎದ್ದೆ. "ನಾನು ನಿಮಗೆ ಕುಡಿಯಲೇನಾದರೋ ತರುತ್ತೇನೆ. ಏನು ಕೊಡಲಿ. ನಮ್ಮಲ್ಲಿ ಸ್ವಲ್ಪ ಸ್ವಲ್ಪ ಅಂತ ಎಲ್ಲ ತಂದು ಇಟ್ಟಿದ್ದೇವೆ." ಅಂತ ಕೇಳಿದೆ.

"ಹೋ ನಾನೊಬ್ಬ ಸ್ಕಾಚ್ ಪುರುಷ" ಅಂತ ಅವನ ದೊಡ್ಡ ಸ್ವರದಲ್ಲಿ ಹೇಳುತ್ತಾ ಗಹಗಹಿಸಿ ನಕ್ಕ ರಾಬರ್ಟ್.

"ರೈಟ್.. ನನಗೊತ್ತು." ಅಂದೆ

ಅವನು ಸೋಫಾದ ಬದಿಯಲ್ಲಿತ್ತಿರುವ ಸೂಟ್ ಕೇಸನ್ನು ಕೈಯಿಂದ ಒಮ್ಮೆ ಸವರಿದ.

"ನಾನಿದನ್ನು ನಿನ್ನ ರೂಮಲ್ಲಿ ಇಡಲೇನು?" ಅಂತ ನನ್ನ ಹೆಂಡತಿ ಕೇಳಿದಳು ರಾಬರ್ಟ್ ಗೆ.

"ಬೇಡ! ಇಲ್ಲೇ ಇರಲಿ". ಅಂದ ರಾಬರ್ಟ್." ನಾನು ಹೋದಾಗಲೇ ಕೊಂಡು ಹೋದರಾಯಿತು." ಅಂದ.

"ಸ್ಕಾಚ್ ಗೆ ಕೊಂಚ ನೀರು ಬೆರೆಸಲೇ" ಅಂತ ಕೇಳಿದೆ ನಾನು.

" ಸ್ವಲ್ಪ ಸಾಕು" ಅಂದ "ಸರಿ" ಅಂದೆ.

" ಆ ಐರಿಶ ನಟ ಬ್ಯಾರೀ ಫಿಟ್ಸ್ ಜೆರಾಲ್ಡ್ ಹೇಳುವ ಹಾಗೆ. ನಾನು ಅವನ ಹಾಗೆಯೇ. ನೀರು ಕುಡಿಯುವಾಗ ನೀರು ಮಾತ್ರ ಕುಡಿಯುವುದು. ಮತ್ತು ಸ್ಕಾಚ್ ಕುಡಿಯುವಾಗ ಸ್ಕಾಚ್ ಮಾತ್ರ" ನನ್ನ ಹೆಂಡತಿ ಅವನ ಮಾತಿಗೆ ನಕ್ಕಳು. ಅವನು ತನ್ನ ಗಡ್ಡವನ್ನೊಮ್ಮೆ ಕೈಯಿಂದ ಸವರಿದ.

ಇನ್ನೂ ಇದೆ.....

0 comments:

ಕಾಮೆಂಟ್‌‌ ಪೋಸ್ಟ್‌ ಮಾಡಿ