ಮಾರ್ಚ್ 24, 2009

ಅವನ ಇಳಿಗಾಲ ಹೊರೆಯಾಗದಿರಲಿ


ರಂಜಿಶ್ ಹೀ ಸಹೀ
ದಿಲ್ ಹೀ ದುಖಾನೆ ಕೆ ಲಿಯೇ ಆ
ಆ ಫಿರ್ ಸೆ ಮುಝೆ ಛೋಡ ಕೆ ಜಾನೇ ಕೆ
ಲಿಯೇ ಆ

ದ್ವೇಷಿಸಿದರೂ ಸರಿಯೇ
ನನ್ನ ಮನ ನೋಯಿಸಲಾದರೂ ಬಾ
ಬಾ ಮತ್ತೊಮ್ಮೆ ನನ್ನ ತೊರೆದು ಹೋಗಲಾದರೂ ಬಾ.

ಅಹಮದ್ ಫರಾಜ್ ಎಂಬ ಉರ್ದು ಕವಿ ಬರೆದ ಮೇಲಿನ ಕವನ ಬಹಳ ಮಂದಿ ಸುಮಧುರ ಕಂಠದವರು ಹಾಡಿದ್ದಾರೆ. ಆದರೆ ಈ ಹಾಡು ಮೆಹದಿ ಹಸನ್ ಎಂಬ ಗಝಲ್ ಗಾಯಕನ ಹಾಡೆಂದೇ ಪ್ರಖ್ಯಾತ. ಅಷ್ಟು ಮೋಡಿಯ ಕಂಠ ಅವನದು. ಲತಾ ಮಂಗೇಶ್ಕರ್ ಅವನ ಹಾಡುಗಳನ್ನು "ಭಗವಾನ್ ಕಾ ಸುರ್" ಅಂತಲೇ ಕರೆದಿದ್ದಾಳೆ.

ಮೆಹದಿ ಹಸನ್ ಅವನ ಮೋಡಿಯ ಕಂಠದಿಂದ, ಅವನ ಹಾಡುಗಳ ಆಯ್ಕೆಯಿಂದ ನಮ್ಮಲ್ಲಿ ಯೌವನದ ಪುಳಕವನ್ನು ನಿರಂತರಗೊಳಿಸಿದ್ದಾನೆ. ಅವನ ಅನೇಕ ಹಾಡುಗಳು ಅವನ ಸ್ವರದಲ್ಲಿಯೆ ನನ್ನ ಒಳಗೆ ರಿನ್ಗಣಿಸುತ್ತಲೇ ಇರುತ್ತವೆ. ಅಷ್ಟೊಂದು ಮಾಂತ್ರಿಕತೆ ಅವನ ಸ್ವರದಲ್ಲಿ. ರಾಗಗಳ ಧ್ಯಾನ ಮತ್ತು ಗಝಲ್ ನ ಲಾಲಿತ್ಯ ಎರಡರ ಉತ್ತುಂಗವನ್ನು ವೇದಿಕೆಗೆ ತಂದ ಅಪೂರ್ವ ಗಾಯಕ ಮೆಹದಿ ಹಸನ್.

ಮೆಹದಿ ಹಸನ್ ಹುಟ್ಟಿದ್ದು ರಾಜಸ್ಥಾನದ ಲೂನ ಎಂಬಲ್ಲಿ ಹಲವಾರು ಪೀಳಿಗೆಗಳಿಂದ "ಧ್ರುಪದ" ಶೈಲಿಯ ಹಾಡುಗಾರಿಕೆಯನ್ನು ಬೆಳೆಸಿಕೊಂಡು ಬಂದಂತಹ "ಕಲಾವಂತ" ಸಮುದಾಯದಲ್ಲಿ. ಧ್ರುಪದ್ ಬಗ್ಗೆ ಇನ್ನೊಮ್ಮೆ ಬರೆಯಬೇಕು. ಧ್ರುಪದ್ ಹಾಡುವುದನ್ನು ಕೇಳುವಾಗ, ಅದರ ಮಂತ್ರದಂತಹ ಆಲಾಪ ಸುತ್ತಲೂ ಟ್ರಾನ್ಸ್ ಹರಡುವಾಗ ಮೈಮರೆಯುವುದೇ ಒಂದು ಅನುಭೂತಿ. ಇರಲಿ.

ವಿಭಜನೆಯ ನೋವಿನ ದಿನಗಳಲ್ಲಿ ಧರ್ಮದ ಆಧಾರದ ಮೇಲೆ ದೇಶ ವಿಭಜನೆಗೊಳ್ಳುವಾಗ ವೈಯಕ್ತಿಕ ಆಯ್ಕೆಗೆ ಬೆಲೆಯಿರದ ಗಡಿ ಪ್ರದೇಶದಲ್ಲಿ ವಾಸಿಸುತ್ತಿದ್ದ ಮೆಹದಿ ಹಸನ್ ಕುಟುಂಬ ಪಾಕಿಸ್ತಾನಕ್ಕೆ ವಲಸೆ ಹೋಗಬೇಕಾಗಿ ಬಂತು. ಹೊಟ್ಟೆ ಪಾಡಿಗಾಗಿ ಸೈಕಲ್ ರಿಪೇರಿ, ಮೋಟಾರ್ ರಿಪೇರಿ ಮಾಡಿ ಹಲವು ದಿನ ದೂಡಿದರೂ ಮೆಹದಿ ಹಸನ್ ನೊಳಗೆ ಸಂಗೀತದ ತುಡಿತ ಜೀವಂತವಾಗಿತ್ತು. ಕೊನೆಗೊಮ್ಮೆ ರೇಡಿಯೋ ಪಾಕಿಸ್ತಾನ್ ನಲ್ಲಿ ತುಮರಿ ಗಾಯಕನಾಗಿ ಕೆಲಸ ದೊರಕಿದಾಗ ಅವನ ಬದುಕಿನ ಹೋರಾಟ ಕೊನೆಗೊಂಡಿತು. ಮತ್ತೆ ನಡೆದದ್ದು ಒಂದು ಇತಿಹಾಸ. ಅವನ ಅನಭಿಷಿಕ್ತ ಗಝಲ್ ಸಾಮ್ರಾಟ್ ಎನ್ನುವ ಪದಕ್ಕೆ ಸಮನಾದವರು ತಾವಲ್ಲ ಎನ್ನುವುದನ್ನು ಎಲ್ಲ ಗಾಯಕರೂ ಒಪ್ಪಿಕೊಳ್ಳುತ್ತಾರೆ.

ಇಂದು ದೆಹಲಿಯ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಸುದ್ದಿಯೊಂದು ನನ್ನನ್ನು ಕಾಡುತ್ತಿದೆ. ಮೆಹದಿ ಹಸನ್ ವೈದ್ಯಕೀಯ ಖರ್ಚುಗಳನ್ನು ಭರಿಸಲು ಅವನ ಕುಟುಂಬಕ್ಕೆ ಕಷ್ಟವಾಗುತ್ತಿದೆ. ಶ್ವಾಸಕೋಶದ ಸೋಂಕಿನಿಂದ ನರಳುತ್ತಿರುವ ಮೆಹದಿ ಹಸನ್ ಆಸ್ಪತ್ರೆಯಿಂದ ಮನೆಗೆ ಮರಳಿದರೂ ಅವನ ಇಳಿಗಾಲದಲ್ಲಿ ವೈದ್ಯಕೀಯ ಖರ್ಚೇ ಹೊರೆಯಾಗುತ್ತಿದೆ. ನಿಜಕ್ಕೂ ಅದು ದೊಡ್ಡ ವಿಷಯವಲ್ಲ. ವಿಶ್ವದಲ್ಲೆಲ್ಲ ಹರಡಿರುವ ಅವನ ಅಭಿಮಾನಿಗಳು ಹಣ ಕಳುಹಿಸಲು ಹಿಂದೆ ಮುಂದೆ ನೋಡಲಾರರು. ಎಲ್ಲಿ, ಹೇಗೆ ಎನ್ನವುದೇ ಸಮಸ್ಯೆ.

ನಮ್ಮ ಹರೆಯವನ್ನು ನಿರಂತರವಾಗಿಸಿದ ಮೆಹದಿ ಹಸನ್ ಗೆ ಇಳಿಗಾಲ ಹೊರೆಯಾಗದಿರಲಿ ಎನ್ನುವುದಷ್ಟೇ ನನ್ನ ಆಶಯ.


2 comments:

shivu.k ಹೇಳಿದರು...

ಗುರುಬಾಳಿಗ,

ನೀವು ನನ್ನ ಬ್ಲಾಗಿಗೆ ಬಂದು ನನ್ನ ಲೇಖನಕ್ಕೆ ಕಾಮೆಂಟು ಮಾಡಿದಿರಿ..ಥ್ಯಾಂಕ್ಸ್...ಮತ್ತೆ ನಿಮ್ಮ ಬ್ಲಾಗಿಗೆ ಬಂದಾಗ ನಿಮ್ಮ ಅಭಿರುಚಿ ನೋಡಿದೆ...ನಿಮಗೆ ಸಂಗೀತ, ಘಜಲ್, ಹಾಡಿನ ಬಗ್ಗೆ ತೀರ್ವ ಆಸಕ್ತಿ ಇದೆ. ಮೆಹದಿ ಹಸನ್ ಬಗ್ಗೆ ಓದಿ ಮೊದಲು ಖುಷಿಯಾದರೂ ಅವನ ಕೊನೆಗಾಲದ ದಿನಗಳನ್ನು ತಿಳಿದು ಬೇಸರವಾಯಿತು...ನಿಮ್ಮ ಕಾಳಜಿಗೆ ನಾನು ಬೆರಗಾಗಿದ್ದೇನೆ...ನಿಮ್ಮ ಬ್ಲಾಗನ್ನು ಹಿಂಬಾಲಿಸುತ್ತಿದ್ದೇನೆ...ಕಾರಣ ನಿಮ್ಮ ಸಂಗೀತದ ಆಸಕ್ತಿ..ಇದರಿಂದ ನಾನೇನಾದರೂ ಕಲಿಯಬಹುದು ಅಂತ...ಉಳಿದ ಲೇಖನಗಳನ್ನು ಬಿಡುವು ಮಾಡಿಕೊಂಡು ನೋಡುತ್ತೇನೆ...ನಿಮಗೂ ಬಿಡುವಾದರೆ ನನ್ನ ಹಿಂದಿನ ಲೇಖನಗಳನ್ನು ನೋಡಿ...
ಪ್ರೀತಿಯಿಂದ..
ಧನ್ಯವಾದಗಳು...

ಪುರುಷೋತ್ತಮ ಬಿಳಿಮಲೆ ಹೇಳಿದರು...

ಮೆಹದಿ ಹಸನ್ ನಮ್ಮ ಕಾಲದ ಅತಿ ದೊಡ್ಡ ಹಾಡುಗಾರ . ಅವರು ಹಾಡುಗಳ ಮೂಲಕ ನಮ್ಮಲ್ಲಿ ಕನಸುಗಳನ್ನು ಹುಟ್ಟಿಸುತ್ತಿದ್ದರು. ಇವತ್ತು ಅವರ ಬಗ್ಗೆ ವರದಿ ನೋಡಿದೆ. ಪಾಕಿಸ್ತಾನಿಗಳು ಸಂಗೀತ ಪ್ರಿಯರು, ಹಸನ್ ಅವರನ್ನು ಮರೆತು ಬಿಡಲಾರರು ಅಂತ ಭಾವಿಸುವೆ..

ಕಾಮೆಂಟ್‌‌ ಪೋಸ್ಟ್‌ ಮಾಡಿ