ಜನವರಿ 20, 2011

ಒಂದು ಗುಟ್ಟು

ಇಬ್ಬರು ಹುಡುಗಿಯರು
ಜೀವನದ ಗುಟ್ಟನ್ನು ಕಾವ್ಯದ
ಒಂದು ಅಚಾನಕ್ ಸಾಲಿನಲ್ಲಿ
ಕಂಡುಕೊಂಡರಂತೆ.

ಆ ಗುಟ್ಟನ್ನು
ತಿಳಿಯದಿರುವ ನಾನೇ 
ಆ ಸಾಲನ್ನು ಬರೆದಿದ್ದೆ. ಅವರು ನನಗೆ 
ಹೇಳಿ ಕಳುಹಿಸಿದರು,

(ಯಾರದೋ ಮೂಲಕ)
ಅವರು ಅದನ್ನು 
ಕಂಡುಕೊಂಡಿರುವರೆಂದು,
ಅದು ಏನೆಂದು ಅಥವಾ

ಯಾವ ಸಾಲಿನಲ್ಲೆಂದು 
ಕೂಡ ಅಲ್ಲ. ಒಂದು ವಾರಕ್ಕೆ 
ಮಿಗಿಲಾಯ್ತು, ಇದೀಗ ಅವರು
ಆ ಗುಟ್ಟನ್ನು ಮರೆತಿರುವುದರಲ್ಲಿ

ಸಂಶಯವಿಲ್ಲ,
ಆ ಸಾಲು ಮತ್ತು ಕವಿತೆಯ
ಹೆಸರನ್ನೂ ಕೂಡ. ನಾನೂ ಕಾಣದ್ದನ್ನು
ಅವರು ಕಂಡದ್ದಕ್ಕೆ, ನನಗೆ

ಅವರ ಮೇಲೆ ಪ್ರೀತಿ,
ಆ ಸಾಲನ್ನು ಬರೆದುದಕ್ಕಾಗಿ
ನನ್ನ ಪ್ರೀತಿಸಿದರಲ್ಲ ಅದಕ್ಕೂ, ಜೊತೆಗೆ
ಮರೆತುಬಿಟ್ಟದ್ದಕ್ಕೂ. ಅವರಿನ್ನು 

ಸಾವಿರ ಸಲ, ಸಾವು 
ಅವರನ್ನು ಅರಸುವ ತನಕ, 
ಮತ್ತೆ ಮತ್ತೆ ಕಂಡುಕೊಳ್ಳಬಹುದು, ಇತರ
ಸಾಲುಗಳಲ್ಲಿ,

ಇತರ ಘಟನೆಗಳಲ್ಲಿ. ಮತ್ತು
ಅದನ್ನು ತಿಳಿಯ 
ಬಯಸಿದ್ದಕ್ಕಾಗಿ, 
ಹಾಗೊಂದು ಗುಟ್ಟು 

ಇದೆಯೆಂದು
ಊಹಿಸಿದ್ದಕ್ಕಾಗಿ, ಹೌದು,
ಅದನ್ನು ಎಲ್ಲಕ್ಕಿಂತ ಹೆಚ್ಚು
ಪ್ರೀತಿಸುತ್ತೇನೆ.
_____________________
ಡೆನಿಸ್ ಲೆವೆರೆಟಾವ್

0 comments:

ಕಾಮೆಂಟ್‌‌ ಪೋಸ್ಟ್‌ ಮಾಡಿ