ಫೆಬ್ರವರಿ 27, 2009
ಬಿನಾಕಾ ಬೊಂಬೆಗಳ ಮಧುರ ನೆನಪು
ಒಂದಾನೊಂದು ಕಾಲದಲ್ಲಿ ಬಿನಾಕಾ ಎಂಬ ಹಲ್ಲುಜ್ಜುವ ಪೇಸ್ಟು ಜನಪ್ರಿಯವಾಗಿದ್ದಾಗ ಪ್ರತೀ ಟ್ಯೂಬಿನ ಜೊತೆಗೊಂದು ಅವರೆಕಾಳಿಗಿಂತ ಕೊಂಚ ದೊಡ್ಡ ಗಾತ್ರದ ಗಟ್ಟಿ ಪ್ಲಾಸ್ಟಿಕ್ಕಿನ ಬೊಂಬೆಗಳನ್ನು ಉಚಿತವಾಗಿ ಕೊಡುತ್ತಿದ್ದರು. ಈ ಪುಟಾಣಿ ಬೊಂಬೆಗಳನ್ನು ಪಡೆಯಲು ನಾನೆಷ್ಟು ಉತ್ಸುಕನಾಗಿರುತ್ತಿದ್ದೆ ಎನ್ನುವುದನ್ನು ಯೋಚಿಸಿದಾಗ ಇಂದಿಗೂ ರೋಮಾಂಚನವಾಗುತ್ತದೆ. ಬಹುತೇಕ ಈ ಬೊಂಬೆಗಳು ಪ್ರಾಣಿಗಳ ರೂಪದಲ್ಲೇ ಇರುತ್ತಿದ್ದುದು ನೆನಪು. ಆ ಬೊಂಬೆಯನ್ನು ನನ್ನ ಕಿಸೆಯಲ್ಲೇ ಇಟ್ಟು, ಆಗಾಗ್ಗೆ ಹೊರತೆಗೆದು ಮುಟ್ಟಿ ನೋಡಿ ಪುಳಕಿತನಾಗುವುದು ನನ್ನ ಮೆಚ್ಚಿನ ಅಭ್ಯಾಸಗಳಲ್ಲೊಂದಾಗಿತ್ತು.
ನಾನು ಚಿಕ್ಕಂದಿನಲ್ಲಿ ಕೊಂಚ ಸಂಕೋಚದವನಾಗಿದ್ದೆ. ಒಂದು ಬಾರಿ ನಾವೆಲ್ಲ ಮನೆ ಮಂದಿ, ಸಂಬಂಧಿಯೊಬ್ಬರ ಮನೆಗೆ ಹೋಗಿದ್ದೆವು. ಅಲ್ಲೇನೋ ವಿಶೇಷವಿದ್ದಿರಬಹುದು, ಮನೆ ತುಂಬಾ ಜನವೋ ಜನ. ನಮ್ಮ ತಾಯಿ ಅದಾಗಲೇ ನಮ್ಮನ್ನು ಹೊರಗೆ ಆಡಲು ಬಿಟ್ಟು ಒಳ ಮನೆ ಸೇರಿ ಆಗಿತ್ತು. ನಾನು ಅಲ್ಲೇ ವೆರಾಂದಾದಲ್ಲಿ ಸುಮ್ಮನೆ ಕುಳಿತುಕೊಂಡಿದ್ದೆ. ಹಿರಿಯರೆಲ್ಲ ಆಸೀನರಾಗಿ ಮಾತುಕತೆಯಲ್ಲಿ ತೊಡಗಿದ್ದರು. ಒಬ್ಬ ಹಿರಿಯರು ಕುಳಿತುಕೊಂಡಿದ್ದ ದೊಡ್ಡ ಆರಾಮ ಖುರ್ಚಿ ನನ್ನ ಮನ ಸೆಳೆದಿತ್ತು. ಅದರಲ್ಲೊಮ್ಮೆ ಕುಳಿತುಕೊಳ್ಳಬೇಕೆಂಬ ಹಂಬಲ ಕಾಡತೊಡಗಿತ್ತು.
ಬಹುಶ ಆರತಿ ಸಮಯವಿದ್ದಿರಬಹುದು ಒಮ್ಮೆಲೇ ಹಿರಿಯರೆಲ್ಲ ಎದ್ದು ಒಳಹೋದರು. ಅಲ್ಲಿಯವರೆಗೆ ಗಿಜಿಗುಡುತ್ತಿದ್ದ ವೆರಾಂಡ ಒಮ್ಮೆಲೇ ಖಾಲಿಯಾಯಿತು. ಅಂತೆಯೇ ಆ ಆರಾಮ ಖುರ್ಚಿಯೂ ಕೂಡ. ನಾನು ಚಕ್ಕನೆದ್ದು ಲಗುಬಗೆಯಿಂದ ಧಾವಿಸಿ ಆ ಆರಾಮ ಕುರ್ಚಿಯನ್ನೇರಿ ಕುಳಿತುಕೊಂಡೆ. ಅಹೋ ಎಂತಹ ವಿಶಾಲ ಕುರ್ಚಿಯದು. ಎಷ್ಟು ಹಿಂದೆ ಜಾರಿದರೂ ಬೆನ್ನು ಒರಗಣೆಗೆ ನಿಲುಕದು. ಈಜು ಫಲಕದಂತೆ ಮುಂದಕ್ಕೆ ಚಾಚಿಕೊಂಡ ಆ ಎರಡು ಬಾಹುಗಳೋ ಅದರ ರನ್ ವೇ ಯಂತಹ ನುಣುಪು ಮೈಯಿಂದ ಕಂಗೊಳಿಸುತ್ತಿದ್ದವು. ಈ ಸುಖದ ಸನ್ನಿವೇಶದಲ್ಲಿ ನನ್ನ ಜೇಬಿನೋಳಗಿದ್ದ ಆ ಪುಟಾಣಿ ಬಿನಾಕಾ "ಖಡ್ಗಮೃಗ" ಹೊರಬಂದು ಈ ನುಣುಪಾದ ರನ್ ವೇ ಮೇಲೆ ಜಾರತೊಡಗಿತು. ತನ್ನ ಗಡಸು ಖುರಗಳಿಂದ ಕಾಲು ಕೆದರಿ, ಮೂತಿ ಕೆಳಗೊಡ್ಡಿ ಖಡ್ಗವನ್ನು ಮುಂದಕ್ಕೊತ್ತಿ ವೇಗವಾಗಿ ಆ ವಿಶಾಲ ಆರಾಮ ಖುರ್ಚಿಯ ಯೋಜನ ಬಾಹುಗಳ ಮೇಲೆ ಓಡಾಡತೊಡಗಿತು.
"ಏಳು ಮರಿ ಅಜ್ಜನಿಗೆ ಕುಳಿತುಕೊಳ್ಳಲು ಬಿಡು" ಎಂದಾಗ ನಾನು ಇಹಕ್ಕವತರಿಸಿದೆ. ಆ ಇಳಿಯುವ ಗಡಿಬಿಡಿಯಲ್ಲಿ ನನ್ನ ರೈನೋ ಪುತುಕ್ಕನೆ ಜಾರಿ ಆ ವಿಶಾಲವಾದ ಖುರ್ಚಿಯಲ್ಲೇಲ್ಲೋ ಬಿದ್ದು ಅಂತರ್ಧಾನವಾಯಿತು. ನಾನು ಅಜ್ಜನಿಗೆ ಜಾಗ ಬಿಟ್ಟು ಅಲ್ಲೇ ಅನತಿ ದೂರದಲ್ಲಿದ್ದು ಖುರ್ಚಿಯ ಮೇಲೆ ಕಣ್ಣಿಟ್ಟೆ ಕಾಯತೊಡಗಿದೆ. ಇವರೆಲ್ಲ ಇನ್ನೊಂದು ಬಾರಿ ಎದ್ದು ಹೋದಾಗ ರೈನೋವನ್ನು ಎತ್ತಿಕೊಳ್ಳುವುದು ನನ್ನ ಹವಣಿಕೆಯಾಗಿತ್ತು.
ಸ್ವಲ್ಪ ಹೊತ್ತಿನ ಬಳಿಕ "ಹೋ ಇದಾರದು ರೈನೋ, ಬಿನಾಕ ರೈನೋ" ಎಂದು ಉದ್ಗರಿಸಿದರು ಆ ಅಜ್ಜ. ನನಗೆ ಅದು ನನ್ನದು ಎನ್ನಲು ಸಂಕೋಚ. ಸುಮ್ಮನಿದ್ದೆ. ಅಜ್ಜ ಮತ್ತೆ ಅದನ್ನು ಖುರ್ಚಿಯೊಳಗೆ ಇಟ್ಟರು. ಬಹುಶ ಆ ಬಾಹುಗಳ ಕೆಳಗಿನ ಚೌಕಟ್ಟಿನೊಳಗೆ ಆಯಕಟ್ಟಿನ ಜಾಗದಲ್ಲಿ ಅದು ನುಸುಳಿರಬೇಕು. ಇರಲಿ ಆಮೇಲೆ ತೆಗೆದುಕೊಂಡರಾಯಿತು ಎಂದು ಸುಮ್ಮನಾದೆ. ಕೊಂಚ ಸಮಯದ ಬಳಿಕ ಅಜ್ಜ ಖುರ್ಚಿ ಬಿಟ್ಟೆದ್ದಾಗ ಮತ್ತೆ ಖುರ್ಚಿಯನ್ನೇರಿ ನನ್ನ ರೈನೋವನ್ನು ಹುಡುಕತೊಡಗಿದೆ. ಅಜ್ಜನ ಕಣ್ಣಿಗೆ ಸಲೀಸಾಗಿ ಬಿದ್ದ ರೈನೋ ನನ್ನೊಡನೆ ಯಾಕೋ ಕಣ್ಣು ಮುಚ್ಚಾಲೆಯಾಡುತ್ತಿತ್ತು. ಬಹುಶ ಅದು ಯಾವುದೋ ಒಂದು ಕೋನದಿಂದ ಮಾತ್ರ ಗೋಚರವಾಗುತ್ತಿದ್ದಿರಬೇಕು. ಎಷ್ಟು ಹುಡುಕಿದರೂ ನನ್ನ ಕಣ್ಣಿಗೆ ಬೀಳಲಿಲ್ಲ.
"ಏಳು ಮರಿ ಆಂಟಿಗೆ ಜಾಗ ಬಿಡು" ಅಷ್ಟರಲ್ಲಾಗಲೇ ಧಡೂತಿ ಮಹಿಳೆಯೊಬ್ಬರು ಆ ಖುರ್ಚಿಗೆಂದೆ ಹೇಳಿದಂತಿದ್ದ ವಿಶಾಲ ಕಾಯವನ್ನು ಹೊತ್ತು ಬಂದಾಗ ನಾನು ಮತ್ತೆ ಜಾಗ ಬಿಡಬೇಕಾಯಿತು. ಆ ಮಹಿಳೆಯ ಜೊತೆಗೊಂದು ಪುಟಾಣಿ ಹುಡುಗಿಯೂ ಇತ್ತು. ನಾನು ಮತ್ತೆ ನನ್ನ ಮೂಲಸ್ಥಾನವನ್ನು ಗ್ರಹಿಸಬೇಕಾಯಿತು. ನನಗೆ ಜಪ್ಪಯ್ಯ ಅಂದರೂ ಕಣ್ಣಿಗೆ ಕಾಣದಿದ್ದ ನನ್ನ ರೈನೋ ಆ ಮಹಿಳೆಗೆ ಕಂಡಿತ್ತು. "ಹೋ ನೋಡು ಮರಿ ಬಿನಾಕ ರೈನೋ, ಎಷ್ಟು ಚಂದ" ಎನ್ನುತ್ತಾ ಆ ಮಹಿಳೆ ನನ್ನ ಪ್ರಾಣಪ್ರಿಯ ರೈನೋವನ್ನೆತ್ತಿ ತನ್ನ ಪುಟಾಣಿಯ ಕೈಗಿತ್ತು ಕೃತಾರ್ಥವಾಯಿತು.ಮತ್ತೆ ನನ್ನ ಸಂಕೋಚ ನನ್ನನ್ನು ಕಟ್ಟಿ ಹಾಕಿತ್ತು. ನಾನು ಅಳುತ್ತಾ ಹೊರಗೆ ಓಡಿದೆ. ಬಹುಶ ನಾನು ಅತ್ತದ್ದು ಕೂಡ ಅಲ್ಲಿದ್ದವರ ಗಮನಕ್ಕೆ ಬಂದಿರಲಿಕ್ಕಿಲ್ಲ.
ಇದೆಲ್ಲ ಯೋಚಿಸಿದರೆ ಈಗ ನಗು ಬರುತ್ತದೆ. ಆದರೆ ಆ ಪುಟಾಣಿ ಬೊಂಬೆಗಳನ್ನು ನಾವೆಷ್ಟು ಹಚ್ಚಿಕೊಂಡಿದ್ದೆವು ಎನ್ನುವುದು ನೆನಪಾಗಿ ಪುಳಕವಾಗುತ್ತದೆ.
ಮೆಕ್ ಡೊನಾಲ್ಡ್ ಎಂಬ ಅಮೇರಿಕನ್ ತಿನಿಸುಗಳನ್ನು ಮಾರುವ ವಿಶ್ವ ಜಾಲ ಎಲ್ಲರಿಗೂ ಗೊತ್ತು. ಮೆಕ್ ಡೊನಾಲ್ಡ್ ಅದರ ಹಲವು ಉತ್ಪನ್ನಗಳ ಪಟ್ಟಿಯಲ್ಲಿ "ಹ್ಯಾಪಿ ಮೀಲ್" ಎನ್ನುವ ಒಂದು ಗಂಟು ಕೂಡ ಮಾರುತ್ತದೆ. ಈ ಗಂಟಿನೊಳಗೆ ನಿಮ್ಮ ಆಯ್ಕೆಯ ಬರ್ಗರ್, ನಾಲ್ಕು ಹುರಿದ ಆಲೂ ಬೆರಳುಗಳು, ಒಂದು ಗ್ಲಾಸು ಕೋಲಾ ಮತ್ತು ಒಂದು ಆಟಿಕೆಯನ್ನು ನೀಡುತ್ತದೆ. ಆಟಿಕೆ "ಹ್ಯಾಪಿ ಮೀಲ್" ಜೋತೆಗಷ್ಟೇ ಲಭ್ಯ. ಆದರೆ ಅದು ಉಚಿತವಲ್ಲ. ಅದಕ್ಕೂ ನೀವು ಮೂವತ್ತಾರು ರೂಪಾಯಿ ತೆರಬೇಕು. ಈ ಒಟ್ಟು ಗಂಟಿನ ಬೆಲೆ ನಿಮ್ಮ ಆಯ್ಕೆಗೆ ಹೊಂದಿಕೊಂಡು ೬೫ ರಿಂದ ೧೦೯ ರೂಪಾಯಿವರೆಗೆ ಮೌಲ್ಯ ಹೊಂದಿದೆ.
ಈ "ಹ್ಯಾಪಿ ಮೀಲ್" ಆಟಿಕೆಯದ್ದೆ ಒಂದು ವಿಶೇಷ. ಮಕ್ಕಳ ಸಿನೆಮಾ ನಿರ್ಮಾಪಕರು ತಮ್ಮ ಸಿನೆಮಾದ ಪ್ರಚಾರಕ್ಕಾಗಿ ಈ ಆಟಿಕೆಗಳನ್ನು ಪ್ರಾಯೋಜಿಸುತ್ತಾರೆ. ಆ ಸಿನೆಮಾದ ಪಾತ್ರಗಳನ್ನೇ ಆಟಿಕೆಗಳನ್ನಾಗಿ ಮಾಡಿ "ಹ್ಯಾಪಿ ಮೀಲ್" ಜೊತೆಗೆ ಕಟ್ಟಿ ಬಿಡುತ್ತಾರೆ. ಹೆಚ್ಚಾಗಿ ಚೀನಾದಲ್ಲೇ ನಿರ್ಮಾಣವಾಗುವ ಈ ಆಟಿಕೆಗಳ ಗುಣ ಮತ್ತ ಅತ್ಯುತ್ತಮ. ಫಿನಿಷಿಂಗ್ ಕೂಡ ನಾಜೂಕು.
ಪ್ರತೀ ವಾರವೂ ಬೇರೆ ಬೇರೆ ಆಟಿಕೆಗಳು ಬರುವುದರಿಂದ ವಾರಕ್ಕೊಮ್ಮೆ "ಹ್ಯಾಪಿ ಮೀಲ್" ಕೊಳ್ಳುವ ಹವ್ಯಾಸ ಈಗ ನಗರದಲ್ಲಿ ಬೆಳೆದಿದೆ. ನಾನು ಇರುವುದು ದೆಹಲಿಯಲ್ಲಿ. ಅಲ್ಲಿ ಊರಲ್ಲಿ ನನ್ನಾಕೆಯೊಡನೆ ಬೆಳೆಯುತ್ತಿರುವ ನನ್ನ ಮಗುವಿಗಾಗಿ ನಾನು ಆಗಾಗ "ಹ್ಯಾಪಿ ಮೀಲ್" ಕೊಳ್ಳುತ್ತೇನೆ. ಬರ್ಗರ್ ತಿಂದು ರೂಢಿಯಾಗಿದೆ. ಆದರೆ ಆಟಿಕೆ ಕೈಗೆ ಬಂದಾಗ ಮತ್ತೆ ಬಿನಾಕಾ ಬೊಂಬೆಗಳ ನೆನಪಾಗುತ್ತದೆ. ಮೆಕ್ ಆಟಿಕೆಯ ಪ್ಲಾಸ್ಟಿಕ್ ಕವರು ಬಿಚ್ಚದೆ ಹಾಗೆಯೇ ಇಡುತ್ತೇನೆ. ಮುಂದೊಮ್ಮೆ ಊರಿಗೆ ಹೋದಾಗ ನನ್ನ ಮಗನ ಕೈಗಿಡುತ್ತೇನೆ. ಅವನು ಆ ಹೊಚ್ಚ ಹೊಸ ಆಟಿಕೆಯ ಪ್ಲಾಸ್ಟಿಕ್ ಬಿಚ್ಚುವುದನ್ನು, ಕಣ್ಣರಳಿಸಿ ಆಟಿಕೆಯನ್ನು ಸವರುವುದನ್ನು ನೋಡುತ್ತಾ ಮೈಮರೆಯುತ್ತೇನೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
0 comments:
ಕಾಮೆಂಟ್ ಪೋಸ್ಟ್ ಮಾಡಿ