ಅಕ್ಟೋಬರ್ 31, 2008

ಲಲಿತಮ್ಮನ ಉಪ್ಪಿನಕಾಯಿ ಮತ್ತು ಬ್ರಾಂಡ್ ಮ್ಯಾನೆಜ್ಮೆಂಟ್

ರಂಗಪ್ಪಂದು ಗೂಡಂಗಡಿ. ಮಿಟಾಯಿ, ಕಡಲೇಕಾಯಿ, ನಶ್ಯ ಇತ್ಯಾದಿಗಳನ್ನೂ ಮಾರಿ ಉಳಿಯುವ ಕೊಂಚ ಲಾಭದಲ್ಲಿ ಖರ್ಚು ತೂಗಿಸಿಕೊಂಡು ನಾಜೂಕಾಗಿ ಬದುಕು ಸಾಗಿಸುವ ಸಜ್ಜನ. ಪುಟ್ಟದೊಂದು ಮನೆ, ಮಡದಿ ಇಷ್ಟೇ ಅವನ ಸಂಸಾರ.

ಹೀಗೆ ಬದುಕು ಸಾಗುತ್ತಿರುವಾಗ ಒಂದು ಸಂಜೆ ರಂಗಪ್ಪ ಮನೆಗೆ ಮರಳುತ್ತಿರಬೇಕಾದರೆ ದಾರಿಯಲ್ಲಿ ಒಬ್ಬಳು ಮುದುಕಿ ಎಚ್ಚರ ತಪ್ಪಿ ಬಿದ್ದಿರುವುದನ್ನು ನೋಡಿ, ಬಳಿ ಹೋಗಿ ಆರೈಕೆ ಮಾಡುತ್ತಾನೆ. ಅವಳು ಒಬ್ಬಳು ಮಕ್ಕಳಿಲ್ಲದ ವಿಧವೆ ಅಂತ ತಿಳಿದು ಬರುತ್ತದೆ. ಹಾಗೆ ದಾರಿಯಲ್ಲಿ ಬಿಟ್ಟು ಹೋಗಲು ಮನಸ್ಸು ಬಾರದೆ ಮನೆಗೆ ಕರಕೊಂಡು ಬಂದು ಊಟ ನೀಡುತ್ತಾನೆ. ಅವನ ಹೆಂಡತಿಗೂ ಮುದುಕಿ ಬಗ್ಗೆ ಕನಿಕರ ಮೂಡುತ್ತದೆ. ಹಾಗೆ ಗಂಡ ಹೆಂಡತಿ ಇಬ್ಬರೂ ಮುದುಕಿಯನ್ನು ಮನೆಯಲ್ಲೇ ಉಳಿಸಿಕೊಳ್ಳಲು ನಿರ್ಧರಿಸುತ್ತಾರೆ.
ಮುದುಕಿ ಲಲಿತಮ್ಮ ಅಚ್ಚುಕಟ್ಟಿನ ಹೆಂಗಸು. ಸುಮ್ಮನೆ ಕುಳಿತುಕೊಳ್ಳದೆ ಅದು ಇದು ಮನೆಕೆಲಸದಲ್ಲಿ ರಂಗಪ್ಪನ ಹೆಂಡತಿಗೆ ಸಹಾಯ ಮಾಡುತ್ತಾ, ಹೊಸ ಅಡುಗೆ ಕಲಿಸುತ್ತಾ ಅವರ ಮನ ಗೆಲ್ಲುತ್ತಾಳೆ.

ಒಂದು ದಿನ ರಂಗಪ್ಪನ ಪುಟ್ಟ ಆದಾಯಕ್ಕೆ ಕತ್ತರಿ ಬೀಳುತ್ತದೆ. ಅವನ ಗೂಡಂಗಡಿ ಮುನಿಸಿಪಾಲಿಟಿಯ ಕಾನೂನಿನಿಂದ ಎತ್ತಂಗಡಿಯಾಗಿ ರಂಗಪ್ಪ ಬೇಸರದಿಂದ ಮನೆಗೆ ಬರುತ್ತಾನೆ.
ಲಲಿತಮ್ಮನಿಗೂ ಇದನ್ನು ಕೇಳಿ ಬೇಸರವಾಗುತ್ತದೆ. ಆದರೂ ಅವಳು ರಂಗಪ್ಪನನ್ನು ಸಂತೈಸಿ "ತನಗೆ ಹಲವು ತರದ ಉಪ್ಪಿನಕಾಯಿ ಮಾಡಲು ತಿಳಿಯುತ್ತದೆ. ಸಾಮಾನು ತಂದರೆ ತಾನು ಉಪ್ಪಿನಕಾಯಿ ಮಾಡಿ ಕೊಡುತ್ತೇನೆ. ಅದನ್ನು ಮನೆಗಳಿಗೆ, ಆಫಿಸುಗಳಿಗೆ ಕೊಂಡು ಹೋದರೆ ಗಿರಾಕಿ ಸಿಗಬಹುದು" ಎಂದು ಉಪಾಯ ಹೇಳುತ್ತಾಳೆ.

ಲಲಿತಮ್ಮ ಮಾಡಿಕೊಟ್ಟ ಉಪ್ಪಿನಕಾಯಿ ನಾಲ್ಕು ಕಡೆ ಹೋಗುವುದರಲ್ಲಿ ಮಾರಾಟವಾಗಿ ರಂಗಪ್ಪನಲ್ಲಿ ಹುರುಪು ಮೂಡಿಸುತ್ತದೆ. ಮತ್ತಷ್ಟು ಸಾಮಾನು ಕೊಂಡುಕೊಂಡು ಮನೆಗೆ ಮರಳಿದ ರಂಗಪ್ಪನ ಹುರುಪಿನಿಂದ ಲಲಿತಮ್ಮನಿಗೂ ಖುಷಿಯಾಗುತ್ತದೆ. ತನಗೆ ಹಲವು ಬಗೆಯ ಉಪ್ಪಿನಕಾಯಿ, ಕೂಟು, ತೊಕ್ಕು, ಚಟ್ನಿ ಪುಡಿ ಇತ್ಯಾದಿಗಳು ಕರಗತವಾಗಿದ್ದು ಇದಕ್ಕೆಲ್ಲ ಒಳ್ಳೆಯ ಬೇಡಿಕೆ ಇರಬಹುದು ಎನ್ನುತ್ತಾಳೆ. ಹಾಗೆ ಆಗಲೆಂದು ರಂಗಪ್ಪ ಬೇಕಾದ ಸಾಮಾನುಗಳನ್ನು ತಂದು ಕೊಡುತ್ತಾನೆ. ರಂಗಪ್ಪನ ಹೆಂಡತಿಯೂ ಉತ್ಸಾಹದಿಂದ ಕೆಲಸದಲ್ಲಿ ಪಾಲ್ಗೊಳ್ಳುತ್ತಾಳೆ.

ಹೀಗೆ ಲಲಿತಮ್ಮನ ಉಪ್ಪಿನಕಾಯಿ ಕೆಲದಿನಗಳಲ್ಲೇ ಹೆಸರುವಾಸಿಯಾಗಿ ರಂಗಪ್ಪನ ವ್ಯಾಪಾರ ಬಿರುಸಾಗುತ್ತದೆ. ವಿವಿಧ ತರದ ಉಪ್ಪಿನಕಾಯಿಗಳನ್ನು ಬಾಟಲಿಗಳಲ್ಲಿ ಹಾಕಿ "ಲಲಿತಮ್ಮನ ಉಪ್ಪಿನಕಾಯಿ - ಎಳೆ ಲಿಂಬೆ." "ಲಲಿತಮ್ಮನ ಉಪ್ಪಿನಕಾಯಿ- ಮಾವಿನ ಮಿಡಿ" ಇತ್ಯಾದಿ ಚೀಟಿಗಳನ್ನು ಅಂಟಿಸಿ ಗುರುತಿಸಲು ಸುಲಭವಾಗುವಂತೆ ವಿಂಗಡಿಸಿದ ಉಪ್ಪಿನಕಾಯಿಗಳು ಮನೆಮಾತಾಗುತ್ತವೆ. ಗೂಡಂಗಡಿ ವ್ಯಾಪಾರಕ್ಕಿಂತ ಹೆಚ್ಚು ಹಣ ಹುಟ್ಟಿ ರಂಗಪ್ಪನ ಬದುಕು ಸುಧಾರಿಸುತ್ತದೆ.

ಹೀಗೆ ಸಾಗುತ್ತಿರುವಾಗ ಒಂದು ದಿನ ಲಲಿತಮ್ಮ ಕಾಯಿಲೆ ಬಿದ್ದು ಸತ್ತು ಹೋಗುತ್ತಾಳೆ. ರಂಗಪ್ಪ ಇನ್ನೇನು ಮಾಡಲಿ ಎಂದು ಚಿಂತೆ ಮಾಡುತ್ತಿರುವಾಗ ಹೆಂಡತಿ, ತಾನು ಲಲಿತಮ್ಮನಿಂದ ಎಲ್ಲವನ್ನು ಕಲಿತುಕೊಂಡಿದ್ದೆನೆಂದು ಹೇಳಿ ಸಂತೈಸುತ್ತಾಳೆ. ಹೀಗೆ ಲಲಿತಮ್ಮ ಸತ್ತರೂ ಯಾವುದೇ ಅಡಚಣೆಯಿಲ್ಲದೆ ರಂಗಪ್ಪನ ವ್ಯಾಪಾರ ಸಾಗುತ್ತದೆ. ಲಲಿತಮ್ಮನ ಉಪ್ಪಿನಕಾಯಿ ದಿನದಿನಕ್ಕೆ ಹೆಚ್ಚು ಹೆಚ್ಚು ಹೆಸರುವಾಸಿಯಾಗುತ್ತದೆ.

ಒಂದು ಕೆಟ್ಟ ಗಳಿಗೆಯಲ್ಲಿ ರಂಗಪ್ಪನ ಹೆಂಡತಿಯ ಮನದಲ್ಲಿ ಒಂದು ಯೋಚನೆ ಮೂಡುತ್ತದೆ. ಕೆಲಸ ಮಾಡುವುದು ತಾನು, ಕಷ್ಟ ಪಡುವುದು ತಾನು ತನ್ನ ಗಂಡ, ಹಣ ಹೂಡಿದ್ದು ತಾವು, ಇನ್ನು ಲಲಿತಮ್ಮನೂ ಈಗಿಲ್ಲ ಅಂದ ಮೇಲೆ ಲಲಿತಮ್ಮನ ಹೆಸರೇಕೆ. ಗಂಡನ ಬಳಿಯಲ್ಲೂ ಈ ಯೋಚನೆ ಹಂಚಿಕೊಳ್ಳುತ್ತಾಳೆ. ಅವನಿಗೂ ಅಹುದೆಂದು ತೋರುತ್ತದೆ. ಎಲ್ಲ ಬಾಟಲಿಗಳಿಂದ ಹಳೆ ಚೀಟಿಗಳನ್ನು ಕಿತ್ತು "ರಂಗಪ್ಪನ ಉಪ್ಪಿನಕಾಯಿ" ಎಂಬ ಹೊಸ ಚೀಟಿಗಳನ್ನು ಅಂಟಿಸುತ್ತಾರೆ.

ಆದರೆ ಜನರು ಮತ್ತೆ ಮತ್ತೆ ಲಲಿತಮ್ಮನ ಉಪ್ಪಿನಕಾಯಿಯನ್ನೇ ಕೇಳುತ್ತಾರೆಯೇ ವಿನಃ ರಂಗಪ್ಪನ ಉಪ್ಪಿನಕಾಯಿ ಬಾಟಲುಗಳು ಖರ್ಚಾಗದೆ ಉಳಿದು ಹೋಗುತ್ತದೆ. ಅದೇ ಇದು ಎಂದು ರಂಗಪ್ಪ ಎಷ್ಟು ವಿವರಿಸಿದರೂ ಜನರು ನಂಬುವುದಿಲ್ಲ. ಹಾಗೆ ನಂಬಿ ಖರೀದಿಸಿದವರೂ ಮರುದಿನ ಇದು ಬೇರೇನೆ, ಅದೇ ಬೇಕು ಅಂತಾರೆ.

ಹೀಗೆ ದಿನದಿನಕ್ಕೆ ರಂಗಪ್ಪನ ವ್ಯಾಪಾರ ಸೊರಗುತ್ತದೆ.

ಇದು ನಾನು ಚಿಕ್ಕಂದಿನಲ್ಲಿ ಚಂದಮಾಮದಲ್ಲಿ ಓದಿದ ಕತೆ. ಇದು ಇಂದು "ಬ್ರಾಂಡ್ ಮ್ಯಾನೇಜ್ಮೆಂಟ್" ವಿಷಯವಾಗಿ ಉಲ್ಲೇಖಿಸಬಹುದಾದ ಒಂದು ಪಾಠ.

ಭಾರತದಲ್ಲಿ ಕೆಲ್ವಿನೆಟರ್ ಅಂತ ತಂಪು ಪೆಟ್ಟಿಗೆ ಮಾಡುತ್ತಿದ್ದ ಕಂಪನಿಯನ್ನು ವರ್ಲ್ ಪೂಲ್ ನವರು ಖರೀದಿಸಿದರು. ಆದರೆ ಕೆಲ್ವಿನೆಟರ್ ಬ್ರಾಂಡ್ ಅನ್ನು ನೀವು ಬಳಸುವಂತಿಲ್ಲ ಅಂತ ಕೆಲ್ವಿನೆಟರ್ ಬ್ರಾಂಡಿನ ಒಡೆಯರಾದ ಸ್ವೀಡನ್ನಿನ ಎಲೆಕ್ಟ್ರೋಲಕ್ಸ್ ತಡೆದು, ಭಾರತದ ಇನ್ನೊಂದು ಕಂಪೆನಿಯನ್ನು ಕೊಂಡು, ಕೆಲ್ವಿನೆಟರ್ ಹೆಸರಿನಿಂದಲೇ ತಂಪು ಪೆಟ್ಟಿಗೆ ಮಾರಾಟಕ್ಕೆ ತಂದಿತು.

ದೇಶದಾದ್ಯಂತ ತಂಪು ಪೆಟ್ಟಿಗೆ ಮಾರಾಟದನ್ಗಡಿಗಲ್ಲಿ ಹೀಗೊಂದು ದ್ರಶ್ಯ ನಿರ್ಮಾಣವಾಯಿತು.

ಗ್ರಾಹಕಿ: " ಕೆಲ್ವಿನೆಟರ್ ಫ್ರಿಜ್ ತೋರಿಸಿ"
ವರ್ತಕ: "ನೋಡಿ ಇದು ಕೆಲ್ವಿನೆಟರ್ ಆದರೆ ಇದರ ಹೆಸರು ಈಗ ಬದಲಾಗಿ ವರ್ಲ್ ಪೂಲ್ ಆಗಿದೆ"
ಗ್ರಾಹಕಿ: "ಆದರೆ ಅಲ್ಲಿ ಕೆಲ್ವಿನೆಟರ್ ಇದೆಯಲ್ಲ"
ವರ್ತಕ: "ಮೇಡಂ ಅದು ಕೆಲ್ವಿನೆಟರ್ ಬ್ರಾಂಡ್ ಮಾತ್ರ, ಅಸಲಿ ಕೆಲ್ವಿನೆಟರ್ ಇದು"
ಗ್ರಾಹಕಿ: "ಅಂದರೆ ಅದು ನಕಲಿಯೇ?"
ವರ್ತಕ: "ಅಲ್ಲಲ್ಲ ನಕಲಿಯಲ್ಲ ಅದೂ ಅಸಲಿಯೇ. ಆದರೆ ಅದು ಬೇರೆ, ಹೆಸರು ಮಾತ್ರ ಕೆಲ್ವಿನೆಟರ್"
ಗ್ರಾಹಕಿ: "ನಾನೂ ಕೆಲ್ವಿನೆಟರ್ ನ್ನೇ ಕೇಳಿದ್ದು ನೀವು ಯಾವುದೊ ಬೇರೆ ತೋರಿಸ್ತಾ ಇದ್ದೀರಿ"
ವರ್ತಕ: "ಸರಿಯಮ್ಮ ನಿಮಗೇನು ಬೇಕೋ ಅದನ್ನು ತೆಕ್ಕೊಳ್ಳಿ."

ಚಂದಮಾಮ ಕತೆಗಳು ಹಲವು ಪೀಳಿಗೆಗಳ ಬೆಳವಣಿಗೆಯಲ್ಲಿ ಪೂರಕವಾಗಿವೆ. ಲಲಿತಮ್ಮನ ಉಪ್ಪಿನಕಾಯಿ ಕತೆಯಂತೆ ಇನ್ನೂ ಹಲವಾರು ಕತೆಗಳು ನಮ್ಮ ಮ್ಯಾನೇಜ್ಮೆಂಟ್ ಕಮ್ಮಟಗಳಲ್ಲಿ ಬಳಸಬಹುದಾದ ಸರಳ ಸೂತ್ರಗಳನ್ನು ಹೊಂದಿವೆ.

1 comments:

ರೇಣುಕಾ ನಿಡಗುಂದಿ ಹೇಳಿದರು...

ಗುರು ಬಾಳಿಗ ಅವರೇ, ಲಲಿತಮ್ಮನ ಉಪ್ಪಿನಕಾಯಿಯಂಥ ಸ್ವಾರಸ್ಯಕರವಾದ ಕಥೆಯೊಂದಿಗೆ ಬ್ರಾಂಡ್ ಮ್ಯಾನೆಜ್ಮೆಂಟನ್ನು ಪರಿಣಾಮಕಾರಿಯಾಗಿ ಚಿತ್ರಿಸಿದ್ದೀರಿ. ತುಂಬಾ ಚೆಂದವಾದ, ಸರಳವಾಗಿ ಓದಿಸಿಕೊಂಡು ಹೋಗುವ ಬರೆಹ.
ಹೀಗೇ ಬರೆಯುತ್ತೀರಿ.
ಪ್ರೀತಿಯಿಂದ,
ರೇಣುಕಾ ನಿಡಗುಂದಿ

ಕಾಮೆಂಟ್‌‌ ಪೋಸ್ಟ್‌ ಮಾಡಿ