ಮೇ 21, 2009

ಕರ್ನಾಟಕದ ನಗರೇಶ್ವರ ದೇವಸ್ಥಾನಗಳು

ದಕ್ಷಿಣ ಭಾರತದ ಮಧ್ಯಯುಗದ ಶಿಲಾಶಾಸನಗಳಲ್ಲಿ ನಕರ, ನಖರ, ನಗರಮ್, ನಖರಮು, ನಕರದವರು, ನಖರರು, ನಗರಟ್ಟರ್, ನಕರಟ್ಟಾರ್ ಎಂಬ ಹೆಸರುಗಳ ಉಲ್ಲೇಖಗಳು ದೊರಕುತ್ತವೆ.

ಸುಮಾರು ಎಂಟನೇ ಶತಮಾನದ ಬಳಿಕ ಸಮಾಜ ವ್ಯವಸ್ಥೆಯಲ್ಲಿ ಉಂಟಾದ ಬೆಳವಣಿಗೆಯಲ್ಲಿ ನಾಡು, ಗ್ರಾಮ, ನಗರ, ಮಹಾನಗರ ಎಂಬ ಶ್ರೇಣಿಕೃತ ಕೇಂದ್ರಗಳು ನಿರ್ಮಾಣವಾಗಿರುವ ಬಗೆಯನ್ನು ಇತಿಹಾಸಕಾರರು ವಿವರಿಸುತ್ತಾರೆ. ಒಂಬತ್ತನೇ ಶತಮಾನಕ್ಕೂ ಮೊದಲಿನ ಕೃಷಿ ಆಧಾರಿತ ಆರ್ಥಿಕತೆ ವ್ಯಾಪಕವಾಗಿ ಬೆಳೆಯುತ್ತಿದ್ದಾಗ ನಾಡುಗಳಲ್ಲಿನ ಉತ್ಪಾದನೆ ಮಿಗತೆಯಾಗಿ ಈ ಮಿಗತೆಯ ವಿತರಣೆಯ ಸಲುವಾಗಿ ನಗರ ಎನ್ನುವ ಪರಿಕಲ್ಪನೆ ಉಂಟಾಯಿತು ಎಂದು ಇತಿಹಾಸಕಾರರು ವಿಶ್ಲೇಷಿಸುತ್ತಾರೆ. ನಗರ ಪರಿಕಲ್ಪನೆ ವ್ಯಾಪಕವಾಗಿ ಹರಡಿಕೊಂಡು ನಗರವೆನ್ನುವುದು ಮಾರುಕಟ್ಟೆ ಕೇಂದ್ರಕ್ಕೆ ಪರ್ಯಾಯ ಪದವಾಗಿ ಬಳಕೆಯಾಗತೊಡಗಿತು.

ನಗರ-ನಕರ-ನಖರ ಎಂಬ ಪದ ವ್ಯುತ್ಪತ್ತಿಯನ್ನು ನಾವು ಊಹಿಸಬಹುದಾದರೂ ಶಾಸನಗಳಲ್ಲಿ ಉಲ್ಲೇಖವಾಗಿರುವ ನಕರ ಅಥವಾ ನಖರ ಇಂಥಾ ನಗರವನ್ನಷ್ಟೆ ಪರಿಭಾವಿಸುತ್ತದೆ ಎಂದು ನಾವು ಅರ್ಥೈಸುವುದೂ ಸಮಂಜಸವಾಗದು.

ಇಂತಹ ಒಂದು ಮಾರುಕಟ್ಟೆ ಕೇಂದ್ರದ ಸ್ಥಳೀಯ ವ್ಯಾಪಾರದ ನಿಯಂತ್ರಣ ಸ್ವಾಭಾವಿಕವಾಗಿ ವ್ಯಾಪಾರಿ ಸಮುದಾಯದ ಬಳಿ ಇದ್ದು ಈ ವ್ಯಾಪಾರಿ ಸಮುದಾಯವನ್ನು ನಗರದವರು, ನಗರಟ್ಟಾರ್(ತಮಿಳು) ಎಂದು ಕರೆಯತೊಡಗಿದರು. ಹೀಗೆ ಒಂದು ನಗರದ ಸ್ಥಳೀಯವ್ಯಾಪಾರವನ್ನು ನಿಯಂತ್ರಿಸುವ ವ್ಯಾಪಾರಿಗಳಿಗೆ ನಗರಟ್ಟಾರ್ (ನಗರ್ತ ಪೇಟೆಯು ನಗರಟ್ಟಾರ್ ಪೇಟೆ ಎನ್ನುವುದರ ಒಂದು ರೂಪ) ಎಂದು ತಮಿಳಿನಲ್ಲೂ, ತೆಲುಗು ಮತ್ತು ಕನ್ನಡದಲ್ಲಿ ನಖರರು, ನಖರದವರು, ನಖರದೊಳಗಾದವರು, ನಖರದಲುಳವರು ಎಂಬ ಬಳಕೆಯಾಯಿತು ಎಂಬುದನ್ನು ನಾವು ಊಹಿಸಬಹುದು.

ಇಂತಹ ನಗರವೆನ್ನುವ ಮಾರುಕಟ್ಟೆ ಕೇಂದ್ರದ ಪ್ರಾರಂಭಿಕ ಪರಿಕಲ್ಪನೆ ಬೆಳೆದು ಆ ಕೇಂದ್ರದ ವ್ಯಾಪಾರಿ ಸಮೂಹವನ್ನು ಸಂಭೋಧಿಸುವ ಪದವಾಗಿ ಬಳಕೆಗೊಂಡು ಬಳಿಕದ ಕಾಲಘಟ್ಟದಲ್ಲಿ ನಗರಮ್/ನಕರ/ನಖರಮು/ನಖರ ಎಂಬ ಸಾಂಸ್ಥಿಕ ಸಂಘಟನೆಯಾಗಿ ಮಾರ್ಪಾಡು ಹೊಂದಿ ಪ್ರವಾಸಿ ರೂಪವನ್ನು ಪಡೆದು ಉಳಿದ ಪ್ರಾಂತ್ಯಗಳಿಗೂ ಹಬ್ಬಿರಬೇಕು.

೧೫ನೇ ಶತಮಾನದ ಭಾಸ್ಕರಾಚಾರ್ಯ ವಿರಚಿತ ವೈಶ್ಯಪುರಾಣವು ನಗರಮ್‌ನ ಸದಸ್ಯರು ವೈಶ್ಯಸಮುದಾಯಕ್ಕೊಳಪಟ್ಟಿದ್ದರು ಎಂದು ಸೂಚಿಸುತ್ತದೆ. ಪೆನುಗೊಂಡೆಯನ್ನು ಮೂಲವಾಗಿಸಿರುವ ೧೦೨ ಗೋತ್ರಗಳ ಆರ್ಯವೈಶ್ಯರೆಂದು ಕರೆಯಲ್ಪಡುವ ಕೋಮಟಿ ಸೆಟ್ಟಿಗಳ ಸಮುದಾಯ. ಸೆಟ್ಟಿ, ಸೆಟ್ಟಿಗಾರ್, ಚೆಟ್ಟಿ, ಚಿಟ್ಟಿ, ಚೆಟ್ಟಿಯಾರ್ ಮುಂತಾಗಿ ಕರೆಯಲ್ಪಡುವ ವ್ಯಾಪಾರವನ್ನೇ ತಮ್ಮ ಮೂಲ ಉದ್ಯೋಗವನ್ನಾಗಿಸಿಕೊಂಡ ಈ ಜಾತಿಯ ಜನರು ಆಂಧ್ರಪ್ರದೇಶ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ವ್ಯಾಪಕವಾಗಿ ನೆಲೆಸಿರುವರು.

ಕೆ. ಸುಂದರಮ್ ಅವರು ನಗರಮ್ ಅಥವಾ ನಕರವು ಕೋಮಟಿ ಸೆಟ್ಟಿಗಳ (ಆರ್ಯವೈಶ್ಯ) ಜಾತಿಗೆ ಸೀಮಿತವಾದ ವ್ಯಾಪಾರಿ ಒಕ್ಕೂಟ ಎಂದು ಊಹಿಸುತ್ತಾರೆ. ಇದಕ್ಕೆ ಪೂರಕವಾಗಿ ನಖರದ ಉಲ್ಲೇಖವಿರುವ ಹೆಚ್ಚಿನ ಶಿಲಾಶಾಸನಗಳಲ್ಲಿ ಕಂಡುಬರುವ ನಖರೇಶ್ವರ ದೇವಸ್ಥಾನಗಳು (ನಗರೇಶ್ವರ ಎನ್ನುವುದು ಇನ್ನೊಂದು ರೂಪ) ಇಂದಿಗೂ ಕನ್ನಿಕಾ ಪರಮೇಶ್ವರಿ, ವಾಸವಾಂಬಾ ಮುಂತಾದ ಹೆಸರಿನಿಂದ ಕರೆಯಲ್ಪಡುತ್ತವೆ. ವಾಸವಿ ಮತ್ತು ಕನ್ನಿಕಾ ಪರಮೇಶ್ವರಿಯು ಆರ್ಯವೈಶ್ಯರ ಕುಲದೇವತೆ ಎನ್ನುವುದನ್ನು ಗಮನಿಸಬೇಕು. ಪೆನುಗೊಂಡೆಯ ಪ್ರಖ್ಯಾತ ನಗರೇಶ್ವರ ದೇವಾಲಯದ ಮತ್ತು ನಗರೇಶ್ವರ ಸ್ವಾಮಿಯ ಉಲ್ಲೇಖವು ಆರ್ಯ ವೈಶ್ಯರ ದೇವತೆಯಾದ ವಾಸವಕನ್ಯೆಯ ಮೇಲೆ ರಚಿತವಾಗಿರುವ ಕನ್ಯಕಾಪುರಾಣದಲ್ಲಿ ದೊರೆಯುತ್ತದೆ.

ಕರ್ನಾಟಕದಲ್ಲಿರುವ ಕೆಲವು ನಖರೇಶ್ವರ/ನಗರೇಶ್ವರ ದೇವಸ್ಥಾನಗಳು
೧. ನಗರೇಶ್ವರ ದೇವಸ್ಥಾನ ಅಥವಾ ಅರವತ್ತು ಕಂಭದ ಗುಡಿ ಬಂಕಾಪುರ್, ಹಾವೇರಿ
೨. ನಗರೇಶ್ವರ ಮತ್ತು ಚೆನ್ನಕೇಶವ ದೇವಸ್ಥಾನ, ಮೊಸಳೆ, ಹಾಸನ.
೩. ನಗರೇಶ್ವರ ದೇವಸ್ಥಾನ ಕಾಂಪ್ಲೆಕ್ಸ್, ಹಳೇಬೀಡು
೪. ನಗರೇಶ್ವರ ದೇವಸ್ಥಾನ, ಹೆಡತಲೆ
೫. ನಗರೇಶ್ವರ ದೇವಸ್ಥಾನ, ಮುಲಗುಂದ
೬. ನಕರೇಶ್ವರ ದೇವಸ್ಥಾನ, ಕುಂಟೋಜಿ, ರೋಣ ತಾಲುಕು, ಧಾರವಾಡ ಜಿಲ್ಲೆ
೭. ನಕರೇಶ್ವರ ದೇವಸ್ಥಾನ-ಅಣ್ಣಿಗೆರೆ, ಗದಗ ತಾಲುಕು, ಧಾರವಾಡ ಜಿಲ್ಲೆ
೮. ನಗರೇಶ್ವರ ದೇವಸ್ಥಾನ, ಹುಬ್ಬಳ್ಳಿ
೯. ನಗರೇಶ್ವರ ದೇವಸ್ಥಾನ / (ನಂದನೇಶ್ವರ)- ಪಡುವ ಪಣಂಬೂರು, ದಕ್ಷಿಣ ಕನ್ನಡ
೧೦. ನಖರೇಶ್ವರ ದೆವಸ್ಥಾನ - ಬಸರೂರು, ಉಡುಪಿ ಜಿಲ್ಲೆ.
೧೧. ನಗರೇಶ್ವರ ದೇವಸ್ಥಾನ - ಬಸವೇಶ್ವರ ನಗರ, ಬೆಂಗಳೂರು

ಉಡುಪಿ ಜಿಲ್ಲೆಯ ಬಸರೂರಿನ ನಖರೇಶ್ವರ ದೇವಸ್ಥಾನದ ದೀಪ ಸ್ಥಂಭದ ಚಿತ್ರಗಳನ್ನು ನಿಮ್ಮ ಮುಂದಿಡಲು ಬಯಸುತ್ತೇನೆ. ಈ ದೇವಸ್ಥಾನವು ಸುಮಾರು ಒಂದು ಸಾವಿರ ವರ್ಷಗಳಷ್ಟು ಹಳೆಯದು. ಈ ಲೋಹಸ್ಥಂಭವು ಒಂದು ವಿಶಾಲವಾದ ಆಮೆಯ ಬೆನ್ನ ಮೇಲೆ ನಿಂತಿದೆ.


ಈ ಸ್ಥಂಭದ ವಿಶೇಷವಿರುವುದು ಇದರ ಬುಡಕ್ಕಿಂತ ಕೊಂಚ ಮೇಲೆ ರಚಿಸಲಾಗಿರುವ ಒಂದು ಕಲಾಕೃತಿಯಲ್ಲಿ. ಸುಮಾರು ಹತ್ತು ಅಡಿಗಳ ಎತ್ತರದಲ್ಲಿ ಈ ಸ್ಥಂಭದಲ್ಲಿ ಆನೆಯ ರಚನೆಯು ಕಾಣಸಿಗುತ್ತದೆ.

ದೇವಸ್ಥಾನದ ಮಹಾದ್ವಾರದಿಂದ ಒಳಹೊಕ್ಕು ನಿಂತರೆ ಮೊದಲಿಗೆ ಧ್ವಜಸ್ಥಂಭವೂ ಬಳಿಕ ಆಮೆಯ ಮೇಲೆ ಸ್ಥಾಪಿಸಲಾಗಿರುವ ಈ ದೀಪಸ್ಥಂಭದ ಮೇಲಿನ ಆನೆಯ ಪೃಷ್ಠಭಾಗವೂ ಅದರ ಮೇಲೆ ಕುಳಿತು ಅಂಕುಶ ಪ್ರಯೋಗ ಮಾಡುತ್ತಿರುವ ಮಾಹುತನೂ ಜೊತೆಗೆ ಕೊಂಚ ಮೇಲ್ಭಾಗದಲ್ಲಿ ನಮಸ್ಕಾರ ಭಂಗಿಯಲ್ಲಿ ನಿಂತಿರುವ ಪೇಟ ಧರಿಸಿರುವ ಮಾನವ ಮೂರ್ತಿಯೂ ಕಂಡುಬರುತ್ತದೆ. (ವೈಶ್ಯ ಲಾಂಛನ).


ಈ ಇಡೀ ಭಾಗವು ವಾಸ್ತು ಪರಿಕಲ್ಪನೆಗೂ ಸಾಮಾನ್ಯ ಸಂವೇದನೆಗೂ ಘಾಸಿಯೊಡ್ಡುವ ತರದಲ್ಲಿ ನಿರ್ಮಾಣವಾಗಿರುವ ನಾಲ್ಕು ಕಂಭಗಳ ಮೇಲೆ ಎತ್ತರಿಸಿ ಕಟ್ಟಲಾಗಿರುವ ಕಾಂಕ್ರೀಟು ಕೋಣೆಯ ಹಿಂಭಾಗವೊಂದರಲ್ಲಿ ಹುದುಗಿದೆ.

ಈ ಕೋಣೆಯಲ್ಲೇನಿದೆ ಎಂದು ನೋಡೋಣ. ಈ ಕೋಣೆಗೆ ಪ್ರವೇಶಿಸಲು ದೇವಸ್ಥಾನದ ಗರ್ಭಗೃಹಕ್ಕೆ ಮುಖವಾಗಿಸಿ ಒಂದು ಏಣಿಯನ್ನಿರಿಸಿದ್ದಾರೆ. ಈ ಏಣಿಯನ್ನೇರಿ ನೋಡಿದರೆ ದೀಪಸ್ಥಂಭದ ನಿರ್ಮಿಸಲಾಗಿರುವ ಆನೆಯ ಮುಂದಿನ ಭಾಗವು ಕಾಣಸಿಗುತ್ತದೆ. ಜೊತೆಗೆ ಅದರ ಮೇಲೆ ವಿರಾಜಮಾನವಾಗಿರುವ ಗಣೇಶ ಮೂರ್ತಿಯೂ ಕಂಡು ಬರುತ್ತದೆ.

ಮೂರ್ತಿ ಕಂಡಲ್ಲೆಲ್ಲಾ ಪೂಜೆಗೆ ತವಕಿಸುವ ನಮ್ಮ ಮಂದಿಯ ಆತುರತೆ ಒಂದು ಐತಿಹಾಸಿಕ ಸ್ಮಾರಕವೆನಿಸುವ ಇಂತಹ ಕಲಾಕೃತಿಯನ್ನು ಕಾಂಕ್ರೀಟು ಬಂಧನಗೊಳಿಸಿದ್ದು ನೋಡಿ ವಿಷಾದವಾಯಿತು.

ಏಪ್ರಿಲ್ 18, 2009

ಒಂದು ಬಕ್ಕಿಂಗ್ಹಂ ಹಾಸಿಗೆ

ತನ್ನ ಭಾರವಾದ ಕೆಂಪು ಕಣ್ಣುಗಳಲ್ಲಿ ಮಡುಗಟ್ಟಿದ ಹಣ್ಣು ಹಣ್ಣು ನಿದ್ರೆ ತೊನೆಯುವುದನ್ನು ತಡೆಯುತ್ತಾ ಅಂಗಡಿಯವನ ಮುಂದೆ ಒಂದು ಹೊಳಪಿನ ಕಾಗದವನ್ನು ಹಿಡಿದು "ಇಂಥ ಹಾಸಿಗೆ ನನಗೆ ಬೇಕು, ಹಣ ಎಷ್ಟಾದರೂ ಚಿಂತಿಲ್ಲ. ಗಡದ್ದಾಗಿ ಒಂದು ನಿದ್ದೆ ಮಾಡಬೇಕು" ಎಂದ ರಾಜನಾಥನನ್ನು ನೋಡಿ ಲಜಪತರಾಯ್ ಮಾರ್ಕೆಟಿನ ಆ ವೈಭವೋಪೇತ ಹಾಸಿಗೆ ಅಂಗಡಿಯವನಿಗೆ ಅಸಹ್ಯವಾಯಿತು.

ನೀಟಾಗಿ ಉಡುಪು ತೊಟ್ಟು ಒಳ್ಳೆ ಪಾಲಿಶ್ ಮಾಡಿದ ಕರಿಬೂಟು ಹಾಕಿಕೊಂಡಿದ್ದರೂ ರಾಜನಾಥನ ಮಾತು, ನಡವಳಿಕೆ ಅವನು ಮಧ್ಯಮವರ್ಗದವನೆಂದು ಸಾರಿ ಹೇಳುತ್ತಿತ್ತು.
ತಾತ್ಸಾರವಾಗಿ "ಆ ಹಾಸಿಗೆ ಎಕ್ಸ್ಪೆನ್ಸಿವ್ ಇದೆ" ಎಂದ ಅಂಗಡಿಯವ. ಅಂಥಾ ಹಾಸಿಗೆ ಹಾಕಿಸಿಕೊಳ್ಳಲು ಮಗನೇ ನಿನ್ನ ಮನೆಗೆ ಯೋಗ್ಯತೆಯಿಲ್ಲ ಎಂದು ಹೇಳುವಂತಿತ್ತು ಅವನ ಧಾಟಿ.
"ಹಣ ಎಷ್ಟಾದರೂ ತೊಂದರೆ ಇಲ್ಲ ಅಂದೆನಲ್ಲ?" ಎಂದ ರಾಜನಾಥ ಅಸಹನೆಯಿಂದ.
ಅಂಗಡಿಯವ ಅಷ್ಟೇ ಅಸಹನೆಯಿಂದ "ಯಾವ ಸೈಜು ಬೇಕು, ಪಾಕೆಟೆಡ್ ಬೇಕೋ, ಪಿಲ್ಲೊಟಾಪ್ ಬೇಕೋ, ಎಷ್ಟು ಇಂಚು ದಪ್ಪ ಬೇಕು?" ಎಂದೆಲ್ಲಾ ಪ್ರಶ್ನೆಗಳನ್ನೊಡ್ಡಿ ಇಂಟರ್ ವ್ಯೂ ಮಾಡತೊಡಗಿದಾಗ ರಾಜನಾಥನಿಗೆ ಕಿರಿಕಿರಿಯಾಯಿತು. ಮತ್ತೊಮ್ಮೆ ಲೀಲಾ ಕೆಂಪೆನ್ಸ್ಕಿ ಹೋಟೆಲಿನ ಜಾಹಿರಾತು ಪ್ರಕಟವಾಗಿದ್ದ ಆ ಮ್ಯಾಗ್ಜೀನಿನ ಪುಟವನ್ನು ಅಂಗಡಿಯವನ ಮುಂದೊಡ್ಡಿ ಅದರೊಳಗಿನ ಬೆಡ್ರೂಂ ಚಿತ್ರದಲ್ಲಿದ್ದ ಪೊಗದಸ್ತಾದ ಹಾಸಿಗೆಯತ್ತ ಬೆರಳು ತೋರಿಸಿದ ರಾಜನಾಥ.
"ಅದೆಲ್ಲ ನನಗೆ ಗೊತ್ತಿಲ್ಲ. ನನಗೆ ಈ ಹಾಸಿಗೆ ಬೇಕು." ಎಂದ.
"ಅದಕ್ಕೆ ನಲ್ವತ್ತು ಸಾವಿರ ರೂಪಾಯಿ" ಎಂದ ಅಂಗಡಿಯವ. ರಾಜನಾಥನಿಗೆ ಜುಪ್ಪೆಂದಿತು. ಆದರೂ ತೋರಿಸಿಕೊಳ್ಳದೇ "ಹೂಂ, ತೋರಿಸಿ" ಅಂದ ರಾಜನಾಥನ ಮಿಡಲ್ ಕ್ಲಾಸ್ ಪಾಪಪ್ರಜ್ಞೆ ಧುತ್ತೆಂದು ಎಚ್ಚರವಾಗಿ ಚಡಪಡಿಸತೊಡಗಿತು.
"ರಾಜೇಶ್ ಇನ್ ಕೋ ಕಿಂಗ್ ಸೈಜ್ ಕಾ ಬಕ್ಕಿಂಗ್ಹಂ ವಾಲಾ ಗದ್ದಾ ದಿಖಾನಾ" ಎಂದು ಕೆಲಸದವನನ್ನು ಕರೆದ ಮಾಲಿಕ.
ರಾಜನಾಥನ ಸುಖನಿದ್ರೆಯ ಹಂಬಲ ಕೆಲಸದವನನ್ನು ಹಿಂಬಾಲಿಸಿದರೆ ಅವನ ಮಿಡಲ್ ಕ್ಲಾಸ್ ಪಾಪಪ್ರಜ್ಞೆ ಕಾಲರ್ ಹಿಡಿದು ಹೊರಗೆಳೆಯುತಿತ್ತು. ಎರಡನ್ನೂ ಕೊಡವಿಕೊಂಡು ನಿದ್ರೆ ಮಿರಿಮಿರಿಗುಟ್ಟುವ ಭಾರವಾದ ಕಣ್ಣುಗಳನ್ನು ಮುಚ್ಚದಂತೆ ತಡೆಯುತ್ತಾ ಕೆಲಸದವನನ್ನು ಹಿಂಬಾಲಿಸಿದ ರಾಜನಾಥ.

ಕಳೆದ ಎಂಟು ವರ್ಷಗಳಿಂದ ರಾಜನಾಥ ಒಂದಿನಿತೂ ನಿದ್ರೆಮಾಡಿರಲಿಲ್ಲ. ಕಣ್ಣು ಮುಚ್ಚಿ ಮಲಗಿದರೂ ಅವನ ಪ್ರಜ್ಞೆಯು ಎಚ್ಚರವಾಗಿದ್ದುಕೊಂಡು ನಿದ್ರೆಯೆಂಬ ಕೃಷ್ಣರಂಧ್ರದ ಬಾಗಿಲಿನಲ್ಲಿ ಎಡತಾಕುತ್ತಾ ಬೆಳಗು ಹರಿಸುತಿತ್ತು. ಅಲೋಪತಿ, ಹೋಮಿಯೋ, ಆಯುರ್ವೇದ, ನ್ಯಚುರೋಪತಿ, ರೇಕಿ, ಪ್ರಾಣಿಕ್ಕು, ಕೋಟಕ್ಕಲ್ಲು, ಯುನಾನಿ ಮೊದಲಾಗಿರುವ ಛಪ್ಪನ್ನೈವತ್ತಾರು ದೇಶಗಳ ಮಧು ಮೂಲಿಕೆ ನಾಡಿ ನರಕಗಳನ್ನೂ, ಸಾಧು ಸಂತ ಫಕೀರ ಜಿನ್ನಾತ್ಮರನ್ನೂ, ದೇವ ದೈತ್ಯ ಪಿಶಾಚಿಗಳನ್ನೂ, ನಂಬಿದ್ದರೂ ಅವೆಲ್ಲವೂ ರಾಜನಾಥನಿಗೆ ಐದು ಪೈಸೆಯ ನಿದ್ದೆಯನ್ನೊದಗಿಸಲೂ ವಿಫಲವಾಗಿದ್ದವು.

ಆದರೆ ಈ ಅಖಂಡ ನಿದ್ರಾ ಹೀನತೆಯಿಂದ ರಾಜನಾಥ ಕೊಂಚವೂ ಬಾಧಿತನಾಗಿರಲಿಲ್ಲ. ಬದಲಾಗಿ ಅವನ ಕಾರ್ಯದಕ್ಷತೆ ಹೆಚ್ಚತೊಡಗಿತ್ತು. ಪ್ರತಿದಿನ ಬೆಳಿಗ್ಗೆ ಸ್ವಸ್ಥ ನಿದ್ರೆ ಮಾಡಿದವನಂತೆ ಉಲ್ಲಾಸದಿಂದಲೇ ಇರುತ್ತಿದ್ದ. ಕಣ್ಣುಗಳು ಒಂದಿನಿತೂ ಬಾಡಿಕೊಂಡಿರುತ್ತಿರಲಿಲ್ಲ. ಮೊದಮೊದಲು ಕೆಲವರ ಸಲಹೆಯಂತೆ ಅವನು ನಿದ್ರೆ ಬರುವವರೆಗೆ ತಡಮೆ ದಾಟುವ ಕುರಿಗಳನ್ನು ಎಣಿಸುತ್ತಿದ್ದ. ಆದರೆ ಸಾವಿರಗಟ್ಟಲೆ ಕುರಿಗಳು ತಡಮೆ ದಾಟಿದರೂ ಇವನ ಬಳಿ ನಿದ್ರೆ ಸುಳಿಯುತ್ತಿರಲಿಲ್ಲ. ಆ ಪ್ರಕ್ರಿಯೆಯಿಂದ ಯಾವೊಂದೂ ಲಾಭವಾಗದಿರುವುದರಿಂದ ಅದರಲ್ಲಿ ಆಸಕ್ತಿ ಕಳೆದುಕೊಂಡು ತನ್ನ ಬದುಕಿನ ಬಗ್ಗೆ, ಕೆಲಸಗಳ ಬಗ್ಗೆ, ದಿನಚರಿಯ ಬಗ್ಗೆ, ಅಲೋಚನೆಗಳು ತನ್ನೊಳಗೆ ನಿರ್ಮಾಣಗೊಳ್ಳುವುದನ್ನು ಪ್ರೋತ್ಸಾಹಿಸಿಕೊಂಡ. ಇದರಿಂದ ಅವನ ಆಫೀಸಿನ ಹಲವು ಸಣ್ಣ ಸಣ್ಣ ಸಮಸ್ಯೆಗಳ ಬಗ್ಗೆ ಪರಿಹಾರಗಳು ಅವನ ಈ ನಿದ್ರಾ ವಿಹೀನ ರಾತ್ರಿಗಳಲ್ಲಿ ನಡೆಯುವ ಮಂಥನದಲ್ಲಿ ಉತ್ಪನ್ನವಾಗಲಾರಂಭಿಸಿದವು. ತಾನು ದಿನವೂ ಮಾಡುವ ಹಲವು ಕೆಲಸಗಳನ್ನು ಇನ್ನಷ್ಟು ಕ್ಷಮತೆಯಿಂದ ಮಾಡುವ ದಾರಿಗಳು ಗೋಚರವಾಗಲಾರಂಭಿಸಿದವು. ರಾಜನಾಥನ ಉತ್ತಮಗೊಂಡ ಈ ಕಾರ್ಯದಕ್ಷತೆಯು ಅವನ ಹಿರಿಯಧಿಕಾರಿಗಳ ಗಮನಕ್ಕೆ ಬರದಿರಲಿಲ್ಲ. ಪರಿಣಾಮವಾಗಿ ಟೂರಿಸಂ ಸೆಕ್ರೆಟರಿಯು ಪರ್ಸನಲ್ ಬ್ರಾಂಚ್ ಗೆ ರಾಜನಾಥನ ವರ್ಗವಾಯಿತು. ಆದಾಯವೂ ಹೆಚ್ಚಿತು. ಆದರೆ ಇದೇ ಬಡ್ತಿಯು ಮುಂದೊಂದು ದಿನ ತನ್ನ ನಿದ್ರಾಹೀನತೆಯ ಉತ್ತುಂಗವನ್ನು ಕಾಣಲು ಕಾರಣವಾಗಲಿದೆ ಎಂದು ರಾಜನಾಥನಿಗೆ ತಿಳಿದಿರಲಿಲ್ಲ.

"ಯೇ ದೇಖೋ, ಪಾಕೆಟೆಡ್ ಸ್ಪ್ರಿಂಗ್ ಗದ್ದಾ ಹೈ, ಔರ್ ಯೇ ಪಿಲ್ಲೋಟಾಪ್ ಹೈ" ಎಂದು ಕೆಲಸದವನೂ ಅದೇ ತಾತ್ಸಾರದಿಂದ ಮಾತನಾಡಿದಾಗ ಎಲಾ ಮಗನೇ ಎಂದು ಸೊಂಟದ ಮೇಲೇ ಕೈಯಿಟ್ಟ ರಾಜನಾಥ. ಗೋಡೆಗೆ ಒರಗಿಸಿಡಲಾಗಿದ್ದ ಹತ್ತಿಪ್ಪತ್ತು ಹಾಸಿಗೆಗಳನ್ನು ಇತ್ತ ಕಡೆಗೆ ಒರಗಿಸಿ ಹಿಂಭಾಗದ ಎರಡು ದಪ್ಪಗಿನ ಹಾಸಿಗೆಗಳನ್ನು ತೋರಿಸಿದ ಕೆಲಸದವನು. ರಾಜನಾಥ ಅವೆರಡನ್ನೂ ಹೊರಗೆಳೆಯಿಸಿ ನೆಲದ ಮೇಲೆ ಹಾಸುವಂತೆ ಹೇಳಿದ. ಮುಸುಗುಡುತ್ತಲೇ ಕೆಲಸದವನು ಹಾಗೇ ಮಾಡಿದ.

ಎರಡರಲ್ಲಿ ಹೆಚ್ಚು ದಪ್ಪಗಿದ್ದ ಹಾಸಿಗೆಯನ್ನು ಬಗ್ಗಿ ಒತ್ತಿ ನೋಡಿದ ರಾಜನಾಥ. ಮುದ್ದಾಗಿ ನಾಚುತ್ತಾ ಒಳಗೊಂದಿಕೊಂಡಿತು ಹಾಸಿಗೆ. ಆ ಹಾಸಿಗೆಯ ಸಣ್ಣ ಮಾದರಿ ತುಂಡೊಂದನ್ನು ಇವನತ್ತ ಚಾಚಿ ವಿವರಿಸತೊಡಗಿದ ಕೆಲಸದವ. ಒಳಗೆಲ್ಲ ಒತ್ತಾಗಿ ಜೋಡಿಸಲ್ಪಟ್ಟಿದ್ದ ಲೋಹದ ಸ್ಪ್ರಿಂಗಗಳು ಸಣ್ಣ ಸಣ್ಣ ಚೀಲದೊಳಗೆ ಪಾಕೆಟಿಂಗ್ ಮಾಡಲಾಗಿತ್ತು. ಹತ್ತಿಂಚು ದಪ್ಪದ ಆ ಹಾಸಿಗೆಗೆ ನಾಲ್ಕು ಮೇಲ್ಪದರಗಳಿದ್ದು ಬೇರೆ ಬೇರೆ ದಪ್ಪದ ಫೋಮ್ ಹಾಳೆಗಳು ತೊಡಿಸಲ್ಪಟ್ಟಿದ್ದವು. ಆ ಬಳಿಕ ಒಂದು ವಿಶೇಷ ಪದರವು ಸುಮಾರು ಮೂರಿಂಚಿನಷ್ಟು ದಪ್ಪಗೆ ನುಣುಪಾದ ಬಟ್ಟೆಯೊಳಗೆ ಫೋಮ್ ಹಾಳೆ ಹೊಂದಿಸಿ ಚೌಕುಳಿ ಹೊಲಿಗೆ ಹಾಕಲ್ಪಟ್ಟಿತ್ತು. ಇದು ಹಾಸಿಗೆಗೆ ಹೆಚ್ಚಿನ ಮೃದುತ್ವವನ್ನು ಒದಗಿಸಿತ್ತು.

ಕೆಳಗೆ ಹಾಸಿರುವ ಹಾಸಿಗೆಯ ಮೇಲೊಮ್ಮೆ ಕುಳಿತುಕೊಂಡ ರಾಜನಾಥ. ಹಾಸಿಗೆಗೆ ಸುತ್ತಿರುವ ಪ್ಲಾಸ್ಟಿಕ್ ಹಾಳೆ ಪೂರ್ಣ ಸುಖವನ್ನು ಅನುಭವಿಸಲು ತೊಡಕಾಗಿತ್ತು. ಆದರೂ ತಾನು ಇದುವರೆಗೆ ಮಲಗಿರುವ ಹಾಸಿಗೆಗಳಿಗಿಂತ ನೂರು ಪಟ್ಟು ಮೃದುವಾಗಿತ್ತು ಅದು. ತುಪ್ಪಳದ ನುಣುಪಿನ ಮೋಡದ ರಾಶಿಯಲ್ಲಿ ತಾನು ಹುದುಗಿರುವ ಅನುಭವವಾಯಿತು ರಾಜನಾಥನಿಗೆ. ಹಾಗೇಯೇ ಒರಗಿ ಒಮ್ಮೆ ಕಣ್ಣು ಮುಚ್ಚಿದಾಗ ತಾನು ಸ್ವಸ್ಥ ನಿದ್ರೆಯಲ್ಲಿ ಮೈಮರೆತು ಪವಡಿಸಿರುವ ಕನಸೊಂದು ರಾಜನಾಥನ ಜಾಗೃತ ಪಟಲದಲ್ಲೊಮ್ಮೆ ಮೂಡಿ ಮಿಂಚು ಹೊಡೆಯಿತು.

ಹಾಸಿಗೆಯಲ್ಲೇನಿದೆ. ಸ್ಪಂಜು ಹಾಕಿ ಮಾಡಿರುತ್ತಾರೆ ಒತ್ತಿದರೆ ಒಳಗೆ ಹೊಗುವ ಹಾಗಿರುತ್ತದೆ ಎನ್ನುವ ಅಭಿಪ್ರಾಯ ರಾಜನಾಥನಿಗೂ ಇತ್ತು. ಹೆಚ್ಚೆಂದರೆ ತನ್ನ ಸಾಹೇಬರ ವೈಟಿಂಗ್ ರೂಮಲ್ಲಿ ಹಾಕಲಾಗಿರುವ ಸೋಫಾ ಸೆಟ್ಟಿನಷ್ಟೆ ಮೃದುವಾಗಿರಬಹುದೆಂಬ ಕಲ್ಪನೆಯು ಅವನಲ್ಲಿತ್ತು. ತನ್ನ ಮದುವೆಯಲ್ಲಿ ಉಡುಗೊರೆಯಾಗಿ ಬಂದಿದ್ದ ತೆಂಗಿನ ನಾರಿನಿಂದ ಮಾಡಲ್ಪಟ್ಟ ಹಾಸಿಗೆಯೇ ದೇಹಕ್ಕೂ, ಬೆನ್ನುಮೂಳೆಗೂ ಒಳ್ಳೆಯದು ಎನ್ನುವ ಅಖಂಡ ನಂಬಿಕೆಯು ರಾಜನಾಥನದಾಗಿತ್ತು. ಆದರೊಂದು ಬಾರಿ ಗುಡ್ಗಾಂವದ ಲೀಲಾ ಕೆಂಪೆನ್ಸ್ಕೀ ಪಂಚತಾರಾ ಹೋಟೆಲಿನಲ್ಲಿ ವಿಶ್ವ ಟೂರಿಸಂ ಚರ್ಚಾಗೊಷ್ಟಿಯೊಂದು ನಡೆದಾಗ ಇವನ ಸಾಹೇಬರಿಗೆ ಸಹಾಯಕನಾಗಿ ರಾಜನಾಥ ಹೋಗಿದ್ದರಿಂದ ಅವನ ಬದುಕಿನ ಉದ್ದೇಶವೇ ಪೂರ್ಣ ಬದಲಾಗುವ ಸನ್ನಿವೇಶವೊಂದು ಜರುಗಿತು.

ದೇಶದ ಎಲ್ಲ ರಾಜ್ಯಗಳ ಟೂರಿಸಂ ಸೆಕ್ರೆಟರಿಗಳಿಗೂ ಆಹ್ವಾನವಿದ್ದು ಉಳಕೊಳ್ಳಲು ಅದೇ ಹೋಟೆಲಿನಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಇವನ ಸಾಹೇಬರು ಲೋಲುಪತೆಗೆ ಆಹ್ವಾನಿಸುವ ಯಾವೊಂದು ಅವಕಾಶವನ್ನು ಕಳಕೊಳ್ಳಲು ಇಚ್ಛಿಸದಿರುವುದರಿಂದ ಮನೆಯಿಂದ ಬರೆ ಒಂದು ಗಂಟೆಯ ಪ್ರಯಾಣದಷ್ಟು ದೂರವಿರುವ ಆ ಹೋಟೆಲಿನಲ್ಲಿ ಹಿಂದಿನ ರಾತ್ರಿಯೇ ತಮ್ಮ ವಾಸ್ತವ್ಯ ಹೂಡಿದ್ದರು. ರಾಜನಾಥ ಸಂಬಂಧ ಪಟ್ಟ ದಸ್ತಾವೇಜುಗಳು ಹಾಗೂ ಕಡತಗಳನ್ನು ಹೊಂದಿಸಿಕೊಂಡು ಮರುದಿನ ಬೆಳಿಗ್ಗೆ ಗುಡಗಾಂವ್ ತಲುಪಿದ.

ಗೋಷ್ಟಿ ಆರಂಭವಾಗಲು ಇನ್ನೂ ಸಮಯವಿದ್ದುದರಿಂದ ಲೀಲಾ ಕೆಂಪೆನ್ಸ್ಕೀ ಎಂಬ ಆ ವೈಭವೋಪೇತ ಅರಮನೆಯ ಲಾಂಜ್ ನಲ್ಲಿ ಕುಳಿತು ಯೋಜನದಷ್ಟು ಎತ್ತರಕ್ಕಿರುವ ಅದರ ಚಾವಣಿಯ ಸೊಬಗನ್ನೂ ಒಂದು ತಣ್ಣನೆಯ ಕ್ರೌರ್ಯ ಸೂಸುವ ಅಲ್ಲಿನ ವಾತಾವರಣವನ್ನೂ ಅಸಹ್ಯವಾದ ಮುಜುಗರದಿಂದ ಅನುಭವಿಸುತ್ತಿರುವಾಗ ಮೊಬೈಲು ಗುಣುಗುಟ್ಟಿತು. ಐದನೇ ಮಹಡಿಯ ರೂಂ ನಂಬ್ರ ೫೧೨ ಕ್ಕೆ ಬರಲು ಸಾಹೇಬರ ಆಣತಿಯಾಯಿತು. ರಾಜನಾಥ ಅಳುಕಿನಿಂದಲೇ ಲಿಫ್ಟ್ ಹಿಡಿದು ಐದನೇ ಮಹಡಿಗೆ ತಲುಪಿ ರೂಂ ನಂಬ್ರ ೫೧೨ರ ಕರೆಗುಂಡಿ ಒತ್ತುವಾಗ ಮುಂದಾಗುವ ಘಟನೆಯೊಂದು ತನ್ನ ಬದುಕಿನ ಗತಿಯನ್ನು ಬದಲಿಸಲಿದೆ ಎನ್ನುವ ಅರಿವು ರಾಜನಾಥನಿಗಿರಲಿಲ್ಲ.

ಬಾಗಿಲು ತೆರೆದ ಸಾಹೇಬರು ಸ್ನಾನಕ್ಕೆ ರೆಡಿಯಾಗಿದ್ದರು. ಇವನಿಗೆ ಕುಳಿತುಕೊಂಡಿರು ಎಂದು ಹೇಳಿ ತಾವು ಸ್ನಾನಕ್ಕೆ ತೆರಳಿದರು. ಆ ೫೧೨ನೇ ಕೋಣೆಗೆ ಕಾಲಿಟ್ಟ ರಾಜನಾಥನಿಗೆ ತನ್ನ ಪಾದವು ಅಲ್ಲಿ ಹಾಸಲಾಗಿದ್ದ ನೆಲಹಾಸಿನೊಳಗೆ ಎರಡಿಂಚು ಮುಳುಗಿದಂತಹ ಅನುಭವವಾಯಿತು. ಎರಡು ಭಾಗಗಳ ಆ ವಿಶಾಲವಾದ ಕೋಣೆಯನ್ನು ಒಂದು ಮೋಟುಗೋಡೆಯು ವಿಭಾಗಿಸಿತ್ತು. ಒಂದು ಕಡೆಯಲ್ಲಿ ಸೋಫಾಸೆಟ್ ಮತ್ತು ಗಾಜಿನ ಟೀಪಾಯ್ ಜೊಡಿಸಲಾಗಿದ್ದರೆ ಇನ್ನೊಂದು ಭಾಗದಲ್ಲಿ ಅಗಾಧವಾದ ಮಂಚವು ರಾಜಗಾಂಭೀರ್ಯದಿಂದ ಇಡೀ ಕೋಣೆಗೆ ಶೋಭಾಯಮಾನವಾಗಿ ಕಾಣುತಿತ್ತು. ಯಾವ ಸಿನೆಮಾದಲ್ಲಾಗಲೀ, ನಿಜ ಜೀವನದಲ್ಲಾಗಲೀ ಅಂತಹ ಮಂಚವನ್ನು ರಾಜನಾಥ ನೋಡಿರಲಿಲ್ಲ.

ಆ ಅಗಾಧವಾದ ಮಂಚದಲ್ಲಿ ಬೆಳ್ಳನೆಯ ಗರಿಗರಿಯಾದ ರಜಾಯಿ ರಾಶಿ ಬಿದ್ದಿತ್ತು. ದಪ್ಪಗಿನ ನಾಲ್ಕೈದು ತಲೆದಿಂಬುಗಳು ಅಸ್ತವ್ಯಸ್ತವಾಗಿದ್ದವು. ಹಾಸಿಗೆಯನ್ನು ಬಿಳಿ ಹೊದಿಕೆಯಿಂದ ಅಚ್ಚುಕಟ್ಟಾಗಿ ಟಕ್ ಮಾಡಲಾಗಿತ್ತು. ಆ ಮಜಬೂತಾದ ಹಾಸಿಗೆಯನ್ನು ಅಷ್ಟು ದೂರನಿಂತು ನೋಡಿದಾಗಲೇ ಅದರ ಮೃದುತ್ವವು ಮೈಗೆ ಸೋಕುವ ಅನುಭವವಾಗುತ್ತಿತ್ತು. ತನ್ನ ಎಳವೆಯಲ್ಲಿ ಚಂದಮಾಮಾದ ಕತೆಗಳಲ್ಲಿ ಓದಿದ್ದ ಹಂಸತೂಲಿಕಾತಲ್ಪವೆಂಬ ಕಲ್ಪನೆಯ ನೆನಪಾಯಿತು ರಾಜನಾಥನಿಗೆ. ಅದೆಂದರೆ ಇದೇ ಇರಬೇಕು ಎಂದು ಕೊಂಡ. ಆ ಪೊಗದಸ್ತಾದ ಹಾಸಿಗೆಯನ್ನು ನೋಡ ನೋಡುತ್ತಿದ್ದಂತೆ ರಾಜನಾಥನೊಳಗೊಂದು ಬದಲಾವಣೆಯಾಗತೊಡಗಿತು. ಕಳೆದ ಎಂಟು ವರ್ಷಗಳಿಂದ ನಿದ್ರೆಗೆಟ್ಟ ಅವನ ಕಣ್ಣುಗಳು ಮೊದಲ ಬಾರಿಗೆ ಮಿರಿಗುಟ್ಟಿ ಉರಿಯತೊಡಗಿದವು. ಕಣ್ಣೆವೆಗಳು ಭಾರವಾಗಲಾರಂಭಿಸಿದವು. ಗಲ್ಲಗಳು ಜೋಯಲಾರಂಭಿಸಿದವು. ಗಂಟಲು ಒಣಗಿತು. ನಾಲಗೆಯ ಕೆಳಗೆ ಜೊಲ್ಲು ಸೂಸಲಾರಂಭಿಸಿತು. ತಲೆ ಸಣ್ಣಗೆ ಧಿಮಿಗುಟ್ಟತೊಡಗಿತು. ಒಟ್ಟಿನಲ್ಲಿ ರಾಜನಾಥನ ಎಂಟುವರ್ಷಗಳ ನಿದ್ರೆಯು ಒಮ್ಮೆಲೆ ಕವಿಯಲಾರಂಭಿಸಿತು. ಆ ಮೃದುವಾದ ಹಾಸಿಗೆಯಲ್ಲಿ ಒಮ್ಮೆ, ಒಂದು ಕ್ಷಣಕ್ಕಾದರೂ ಸರಿ ಮೈಚೆಲ್ಲಿ ಗುಟುಕು ನಿದ್ರೆ ಮಾಡಬೇಕೆನ್ನುವ ಅದಮ್ಯ ಕಾಂಕ್ಷೆ ರಾಜನಾಥನಲ್ಲಿ ಉಕ್ಕಲಾರಂಭಿಸಿತು. ಆದರೆ ಅಷ್ಟರಲ್ಲಾಗಲೇ ಸಾಹೇಬರು ಸ್ನಾನ ಮುಗಿಸಿ ಹೊರಬಂದುದರಿಂದ ರಾಜನಾಥನ ಕಾಂಕ್ಷೆ ಈಡೇರದೇ ಅವನ ಸರ್ವಾಂಗದ ಚರ್ಮರೇಶಿಗಳಲ್ಲಿ ಹರಡಿಕೊಂಡು ಒಂದು ಅವ್ಯಕ್ತ ತವಕವನ್ನು ರಾಜನಾಥನಲ್ಲಿ ಹುಟ್ಟುಹಾಕಿತು. ನಿದ್ರೆ ಕ್ಷಣಕ್ಷಣಕ್ಕೂ ಹಣ್ಣಾಗುತ್ತಾ ತೊನೆಯತೊಡಗಿತು.

ಅಂದಿನಿಂದ ರಾಜನಾಥನ ಹಗಲು ರಾತ್ರಿಗಳೆರಡೂ ಅಸಹನೀಯವಾದವು. ಅಂತಹ ತೊನೆಯುವ ಹಣ್ಣುನಿದ್ರೆಯು ಕೂಡ ರಾಜನಾಥನ ಹಿಡಿತಕ್ಕೆ ದೊರಕಲಿಲ್ಲ. ಎದ್ದು ಕೂತಾಗೆಲ್ಲ ಮುಚ್ಚಿಕೊಳ್ಳುವ ಕಣ್ಣೆವೆಗಳು ಮಲಗಿದಾಗ ಅಂಗಾತ ತೆರೆದುಕೊಳ್ಳುತ್ತಿದ್ದವು. ಪ್ರಯತ್ನ ಪೂರ್ವಕವಾಗಿ ಕಣ್ಣುಮುಚ್ಚಿದರೂ ಪ್ರಜ್ಞೆಯು ಎಚ್ಚರವಾಗಿದ್ದು ಆಳಕ್ಕೆ ಸಾಗುವ ದಾರಿಯೇ ತಿಳಿಯದಂತಾಗಿತ್ತು ರಾಜನಾಥನಿಗೆ. ತನ್ನ ಮಂಚದ ಮೇಲಿರುವ ಆ ತೆಂಗಿನ ನಾರಿನ ಹಾಸಿಗೆಯು ಯಾವಕಾರಣಕ್ಕೂ ತನಗೆ ನಿದ್ರೆಯನ್ನೊದಗಿಸಲು ಅಸಮರ್ಥವಾಗಿರುವುದನ್ನು ರಾಜನಾಥ ಕಂಡುಕೊಂಡ. ಅಂದಿನಿಂದ ಲೀಲಾ ಕೆಂಪೆನ್ಸ್ಕೀಯ ೫೧೨ನೇ ಕೋಣೆಯಲ್ಲಿ ತನಗೆ ಅವ್ಯಕ್ತ ಸುಷುಪ್ತಿಯನ್ನು ಒದಗಿಸಿದಂತಹ ಆ ಹಾಸಿಗೆಯಂತಹ ಹಾಸಿಗೆಗಾಗಿ ರಾಜನಾಥನ ಶೋಧ ಆರಂಭವಾಯಿತು.

"ಅರೇ ಉಠೋ! ಗದ್ದಾ ಲೇನೇ ಕೇಲಿಯೇ ಆಯೇವೋ ಯಾ ಸೋನೇ ಕೇಲಿಯೇ?" ಅಂತ ಹಾಸಿಗೆ ಅಂಗಡಿಯ ಕೆಲಸದವನು ಹೀಯಾಳಿಸಿದಾಗ ರಾಜನಾಥ ಇಹಕ್ಕಿಳಿದ.
ಎದ್ದು "ಚಲೋ ಯೆ ಸಹೀ ಹೈ" ಅಂತ ಕೌಂಟರಿಗೆ ಬಂದು, ಪಾವತಿ ಮಾಡುತ್ತಿರುವಾಗ "ಡೆಲಿವರಿ ಎಲ್ಲಿಗೆ" ಎಂದು ಕೇಳಿದ ಅಂಗಡಿಯವನು.
"ಸಾಇಬಾ ಬಾದ್" ಎಂದ ರಾಜನಾಥ. ಜಮ್ನಾ ಪಾರ್ ಗೆ (ಯಮುನೆಯಾಚೆಗೆ) ತಾವು ಉಚಿತ ಡೆಲಿವರಿ ಕೊಡುವುದಿಲ್ಲವೆಂದೂ ಡೆಲಿವರಿ ಚಾರ್ಜು ೧,೨೦೦ ರೂಪಾಯಿ ಹೆಚ್ಚುವರಿ ಕೊಡಬೇಕೆಂದು ಅಂಗಡಿಯವನು ಹೇಳಿದಾಗ ರಾಜನಾಥನಿಗೆ ಸಿಟ್ಟು ಬಂತು. ಜೊತೆಗೆ ಚೌಕಾಸಿಗೇ ಅವಕಾಶವೇ ಇಲ್ಲದಿರುವುದರಿಂದ ಪೂರ್ತಾ ನಾಲ್ವತ್ತು ಸಾವಿರ ಪಾವತಿ ಮಾಡಿ ತನ್ನ ಕಿಸೆಯೂ ಬರಿದಾಗಿದ್ದು ನೆನಪಾಯಿತು. ಮನೆಯಲ್ಲಿ ಅವಳ ಬಳಿ ಹೆಚ್ಚೆಂದರೆ ಮುನ್ನೂರು ನಾನೂರು ಇರಬಹುದೇನೋ ಎಂದು ಕೊಂಡ ರಾಜನಾಥ.
ಚಲೋ ಕೋಯೀ ನಹೀಂ. ನಾನೇ ತೆಗೆದುಕೊಂಡು ಹೋಗುತ್ತೇನೆ. ಎಂದು ಟೆಂಪೋ ಮಾಡಲು ಹೊರಟ ರಾಜನಾಥ. ಚೌಕಾಸಿ ಮಾಡಿ ಟೆಂಪೋ ಬಾಡಿಗೆಯನ್ನು ೭೫೦ರಿಂದ ನಾನೂರಕ್ಕಿಳಿಸಿ ಅಂಗಡಿಯ ಬಳಿ ಕರಕೊಂಡು ಬಂದ. ಕೂಲಿಗಳನ್ನು ಕರಕೊಂಡರೆ ಇನ್ನಷ್ಟು ಖರ್ಚಾಗುವುದರಿಂದ, ಲೋಡಿಂಗ್ ಹೇಗಿದ್ದರೂ ಅಂಗಡಿಯವರಿಂದ ಮಾಡಿಸಿ, ಮನೆಯ ಬಳಿ ಯಾರಾದರೂ ಹುಡುಗರು ಸಿಕ್ಕಿದರೆ ಕರೆಯೋಣ ಎಂದುಕೊಂಡ. ಅದಾಗಲೇ ಹಾಸಿಗೆ ಪ್ಲಾಸ್ಟಿಕ್ ಹಾಳೆ ಸುತ್ತಿ ತಯಾರಿದ್ದುದರಿಂದ ಅಂಗಡಿ ಹುಡುಗರು ಟೆಂಪೋಗೆ ಲೋಡ್ ಮಾಡಿದರು. ಹಾಸಿಗೆಯ ಚೊತೆಗೆ ಒಂದು ಜೊತೆ ತಲೆ ದಿಂಬೂ ಸ್ಕೀಮಿನಲ್ಲಿ ಬರುವಂತದ್ದನ್ನೂ ಕೊಟ್ಟು ಅಂಗಡಿಯವ ಏನೋ ಕೃಪೆ ಮಾಡುತ್ತಿರುವವನಂತೆ ನಗೆಯಾಡಿದ್ದ. ತನ್ನ ಬಾಡಿದ ಮುಖದಲ್ಲಿ ಒಂಚೂರು ನಗೆ ಮೂಡಿಸದೇ ರಾಜನಾಥ ಸೇಡು ತೀರಿಸಿಕೊಂಡ.

ಏಳು ಅಡಿ ಉದ್ದ ಏಳು ಅಡಿ ಅಗಲವಿರುವ ಆ ಕಿಂಗ್ ಸೈಜ್ ಬಕ್ಕಿಂಗ್ಹಂ ಹಾಸಿಗೆ ನಿಜಕ್ಕೂ ಸಣ್ಣ ಟೆಂಪೋದಲ್ಲಿ ಹೊಗುತ್ತಿರಲಿಲ್ಲ. ದೊಡ್ಡ ಟೆಂಪೋ ಮಾಡಿದರೆ ಖರ್ಚು ಹೆಚ್ಚಾಗುವುದೆಂದು ರಿಕ್ಷಾಟೆಂಪೋದಲ್ಲಿಯೇ ಛಾವಣಿಯಲ್ಲಿ ಹೊರಿಸಿ ಭದ್ರವಾಗಿ ಕಟ್ಟಿಸಿದ್ದ ರಾಜನಾಥ. ಚಾಲಕ ಪೃಷ್ಟ ಸರಿಸಿ ಜಾಗ ಮಾಡಿಕೊಟ್ಟ ಅರ್ಧ ಸೀಟಿನಲ್ಲಿ ತನ್ನ ಅರ್ಧ ಪೃಷ್ಟವನ್ನು ಹೊಂದಿಸಿಕೊಂಡು ಕಂಕುಳಲ್ಲಿ ಕೈಚೀಲವನ್ನು ಅವಚಿ ಒಂದು ಕೈಯಿಂದ ಬಾರಿ ಬಾರಿಗೂ ಮೇಲಿದ್ದ ಹಾಸಿಗೆಯನ್ನು ಮುಟ್ಟಿ ಅದು ತನ್ನ ಸ್ಥಾನದಲ್ಲಿ ಭದ್ರವಾಗಿರುವುದನ್ನು ಖಾತ್ರಿಪಡಿಸಿಕೊಳ್ಳುತ್ತಿರುವಾಗ ಟೆಂಪೋ ಮೆಲ್ಲನೆ ದೆಹಲಿಯ ನಿಬಿಡತೆಯಲ್ಲಿ ದಾರಿಮಾಡಿಕೊಂಡು ಸಾಗತೊಡಗಿತು.

ಅನೇಕ ಹಾಸಿಗೆಯಂಗಡಿಗಳಲ್ಲಿ ಹಲವು ತರದ ಹಾಸಿಗೆಗಳನ್ನು ನೋಡಿದರೂ ತನಗೇನು ಬೇಕೆಂದು ಹೇಳಲು ರಾಜನಾಥನಿಗೆ ತಿಳಿದಿರಲಿಲ್ಲ. ಕಡೆಗೊಂದು ದಿನ ತನ್ನ ಸಾಹೇಬರು ಯಾವುದೋ ವಿಮಾನ ಪ್ರಯಾಣದ ಬಳಿಕ ತಂದ ವಿಮಾನದ ಮ್ಯಾಗಜೀನಿನನ್ನು ಸುಮ್ಮನೆ ಪುಟತಿರುವುವಾಗ ಗುಡಗಾಂವದ ಲೀಲಾ ಕೆಂಪೆನ್ಸ್ಕೀ ಪಂಚತಾರಾ ಹೋಟೇಲಿನ ಜಾಹಿರಾತು ರಾಜನಾಥನ ಕಣ್ಣಿಗೆ ಬಿತ್ತು. ಆ ಜಾಹೀರಾತಿನಲ್ಲಿ ಮತ್ತದೇ ರಾಜಗಾಂಭೀರ್ಯದ ಶೋಭಾಯಮಾನ ಬೆಳ್ಳನೆಂಯ ಹಂಸತೂಲಿಕಾತಲ್ಪವು ಪ್ರಕಟವಾಗಿತ್ತು. ಮೆಲ್ಲನೆ ಬ್ಲೇಡು ಜಾರಿಸಿ ಕತ್ತರಿಸಿ ಆ ಪುಟವನ್ನು ಜೇಬಿಗಿಳಿಸಿದ್ದ ರಾಜನಾಥ.

ಯಮುನೆಯನ್ನು ದಾಟಿ ತನ್ನ ಮನೆಯ ಬಳಿ ಬರಲು ಒಂದೂವರೆ ತಾಸು ಹಿಡಿದಿತ್ತು. ಟೆಂಪೋದಿಂದ ಇಳಿದಾಗ ಬೆನ್ನು ವಿಕಾರವಾಗಿ ನೋಯುತ್ತಿತ್ತು. ಯಾರಾದರೂ ಹುಡುಗರು ಕಾಣಿಸುತ್ತಾರೇನೂ ಎಂದು ಸುತ್ತಲೂ ನೋಡಿದ ರಾಜನಾಥ. ದಿನವೂ ಹುಡುಗರು ಕ್ರಿಕೆಟ್ ಆಡುತ್ತಾ ಗುಲ್ಲೆಬ್ಬಿಸುತ್ತಿದ್ದ ಸಾಇಬಾ ಬಾದಿನ ದೌಲತ್ನಗರದ ಗಲೀ ನಂಬ್ರ ೭ ಇಂದು ಖಾಲಿ ಹೊಡೆಯುತ್ತಿತ್ತು. ಮೇಲಾಗಿ ಗಲ್ಲಿಯ ಒಳಗೆ ತನ್ನ ಗಾಡಿ ಹೋಗದು ಎಂದು ಮೊದಲೇ ಟೆಂಪೋ ಡ್ರೈವರ್ ವರಾತ ಹಚ್ಚಿದ್ದ. ಕಟ್ಟಿದ್ದ ಹಗ್ಗಗಳನ್ನು ಬಿಚ್ಚಿ ಹಾಸಿಗೆಯನ್ನು ಇಳಿಸಿ ಟೆಂಪೋದ ಬದಿಗೆ ಒರಗಿಸಿ ನಿಲ್ಲಿಸಿದ್ದ.

ರಾಜನಾಥನ ಬೆನ್ನು ಸೆಟೆದಿತ್ತು, ಕಣ್ಣು ಉರಿಯುತ್ತಿತ್ತು, ತಲೆ ಧಿಮಿಗುಡುತ್ತಿತ್ತು, ಇದೆಲ್ಲ ಒಟ್ಟಾಗಿ ಅಸಹಾಯಕತೆ ಕಾಡುತ್ತಿತ್ತು. ಅಸಹಾಯಕತೆ ಸಿಟ್ಟಾಯಿತು. ಸಿಟ್ಟು ಹಠವಾಗಿ, "ಚಲೋ, ನೀನು ಒಂದು ಕಡೆ ಹಿಡಿ ನಾನು ಒಂದು ಕಡೆ ಹಿಡೀತಿನಿ, ಹೋಗುವ" ಎಂದು ಒಂದು ಕಡೆಯಲ್ಲಿ ಬಗ್ಗೆ ಎತ್ತಲು ಮುಂದಾದ. ಹಲವು ಲೋಹದ ಸ್ಪ್ರಿಂಗಗಳು, ಮರದ ಚೌಕಟ್ಟು ಇತ್ಯಾದಿ ಒಟ್ಟಾಗಿ ಹಾಸಿಗೆ ಅವನೆಣಿಸಿದ್ದಕ್ಕಿಂತ ಭಾರವಿತ್ತು. ಕಂಕುಳಲ್ಲಿ ಅವಚಿಕೊಂಡಿದ್ದ ಚೀಲವೂ ತೊಡಕಾಗಿ ಬಗ್ಗಿದ್ದ ಭಂಗಿಯೂ ವಕ್ರವಾಗಿತ್ತು. ಒಮ್ಮೆಲೆ ಎತ್ತಿದ್ದರಿಂದ ಸೊಂಟ ಕಳಕ್ಕೆಂದು ಹಿಡಿದುಕೊಂಡಿತು. ಒಮ್ಮೆಲೇ ಕೈ ಬಿಟ್ಟು ನಿಂತು ಕೊಂಡ ರಾಜನಾಥ. ಸೊಂಟ ಕಿತ್ತು ಹಾಕಿದಂತೆ ನೋಯುತ್ತಿತ್ತು. ಸಾವರಿಸಿಕೊಂಡು ಕೈಚೀಲವನ್ನು ಟೆಂಪೋದೊಳಗಿಟ್ಟು ಹಾಸಿಗೆಯನ್ನು ಒಂದು ಬದಿಯಲ್ಲಿ ಹಿಡಿದು ಎತ್ತಿ ಹಿಡಿದುಕೊಂಡ. ಇಬ್ಬರೂ ಆ ಬಕ್ಕಿಂಗ್ಹಂ ಕಿಂಗ್ ಸೈಜ್ ಹಾಸಿಗೆಯನ್ನು ದೌಲತ್ ನಗರದ ಗಲೀ ನಂಬ್ರ ಏಳರೊಳಕ್ಕೆ ಸಾಗಿಸಲಾರಂಭಿಸಿದರು. ರಾಜನಾಥನಿಗೆ ಹೆಜ್ಜೆ ಹೆಜ್ಜೆಗೂ ಸೊಂಟವೂ ಬೆನ್ನೂ ನೋವಿನಿಂದ ಜುಮ್ಮೆನ್ನುತ್ತಿತ್ತು. ಅಂತೂ ಇಂತೂ ಅವನ ಮನೆಯಿರುವ ಕಟ್ಟಡದ ಕೆಳಗೆ ಬಂದು ನಿಂತಾಗ ಎರಡನೇ ಮಹಡಿಗೆ ಒಯ್ಯುವುದು ತನ್ನಿಂದ ಸಾಧ್ಯವಾದೀತೇ ಎನ್ನುವ ಅಳುಕು ಕಾಡಲಾರಂಭಿಸಿತು ರಾಜನಾಥನಿಗೆ.

ಕೆಳಗಿರಿಸಿದರೆ ಮತ್ತೆ ಮೇಲಕ್ಕೆತ್ತಲೂ ಕಷ್ಟವಾದೀತು ಎಂದೆಣಿಸಿ ಹಲ್ಲುಮುಡಿ ಕಚ್ಚಿ ಸೀದಾ ಒಳಗೆ ಸಾಗಿಸಿದ. ಚಾಲಕನೂ ಹಿಂಬಾಲಿಸಿದ. ಕಟ್ಟುಮಸ್ತಾಗಿದ್ದ ಅವನು ಸಲೀಸಾಗಿ ಹೊತ್ತು ಬರುತ್ತಿದ್ದುದರಿಂದ ಅಲ್ಲಿಯೂ ಕೊಂಚ ಒತ್ತಡ ಉಂಟಾಗಿ ರಾಜನಾಥನನ್ನು ಮುಂದಕ್ಕೆ ದೂಡಿದಂತಾಗುತ್ತಿತ್ತು. ಮೆಟ್ಟಲ ಸಾಲುಗಳನ್ನು ಸಾವರಿಸಿಕೊಂಡು ಸಾಗಿಸಿದ ರಾಜನಾಥನಿಗೆ ಒಂದೊಂದು ಮೆಟ್ಟಲನ್ನೇರುವಾಗ ಸೊಂಟದಲ್ಲೊಂದು ಸಿಡಿಲು ಬಡಿದು ಕಣ್ಣುಕತ್ತಲೆಗೂಡುತ್ತಿತ್ತು. ಅಂತೂ ಇಂತೂ ಮನೆ ತಲುಪಿ ಹಾಸಿಗೆಯನ್ನು ಗೋಡೆಗೊರಗಿಸಿ ಅಲ್ಲೇ ಕುಕ್ಕರಿಸಿದ ರಾಜನಾಥ. ಸೊಂಟ ಬಲವಿಲ್ಲದಂತಾಗಿ ಕುಸಿದು ನೆಲದ ಮೇಲೇ ಅಂಗಾತ ಮಲಗಿದ. ಹೆಂಡತಿ ಆತಂಕದಿಂದ ಇವನತ್ತ ಧಾವಿಸಿ ಬರಲು, ಚಾಲಕನಿಗೆ ಬಾಡಿಗೆ ಪಾವತಿಸುವಂತೇ ಅವಳಿಗೆ ಹೇಳಿ, ಚಾಲಕನಿಗೆ ಟೆಂಪೋದೊಳಗೆ ತಾನು ಚೀಲವಿರಿಸಿದ್ದನ್ನು ಅದೇ ಕಣ್ಣುಕತ್ತಲೆಯ ಅರೆಪ್ರಜ್ಞೆಯಲ್ಲಿ ಗೊಣಗಿದ.

ಕಣ್ಣು ಮತ್ತೆ ಬೆಳಕುಗೂಡುವಾಗ ಹೆಂಡತಿ ತಣ್ಣನೆಯ ನೀರನ್ನು ತನ್ನ ಮುಖಕ್ಕೆ ಸವರುತ್ತಿದ್ದಳು. ಸೊಂಟ ಒಂದಂಗುಲ ಅಲುಗಾಡಿಸಲು ಯತ್ನಿಸಿದರೆ ಅಸಾಧ್ಯ ನೋವು ಸಿಡಿಯುತ್ತಿತ್ತು. ಚಾಲಕ ಕೈಚೀಲವನ್ನೂ, ದಿಂಬುಗಳನ್ನೂ ತಂದಿಟ್ಟು ಹೋಗಿದ್ದ. ಅಲ್ಲಿಂದೆದ್ದು ಒಳಕೋಣೆಗೆ ಹೋಗಿ ಮಲಗಿಕೊಳ್ಳುವ ತನ್ನ ಸಲಹೆಗೆ ಗಂಡ ನೋವಿನಿಂದ ನರಳುತ್ತಾ ಅಲುಗಲೂ ಹಿಂಜರಿದಾಗ ಹೆಂಡತಿ ಡಾಕ್ಟರಿಗೆ ಫೋನಾಯಿಸಿದಳು. ಆಸ್ಪತ್ರೆಗೆ ಕರೆದುಕೊಂಡು ಬರಲು ಆಣತಿಯಾಯಿತು. ಅಕ್ಕಪಕ್ಕದ ಹುಡುಗರಿಗೆ ಫೋನಾಯಿಸಿ ಕರೆಸಿಕೊಂಡು ನೋವಿನಿಂದ ನರಳುತ್ತಿರುವ ರಾಜನಾಥನನ್ನು ಹುಡುಗರು ಅವರದೇ ಅಜಾಗರೂಕತೆಯಿಂದ ಪೀಡಿಸುತ್ತಾ ಟ್ಯಾಕ್ಸಿ ಮಾಡಿ ಆಸ್ಪತ್ರೆಗೆ ಸಾಗಿಸಿದರು.

ಹತ್ತು ಹಲವು ಪರೀಕ್ಷೆಗಳು, ಎಕ್ಸರೇ ಇನ್ನಿತ್ಯಾದಿ ಕ್ರಿಯಾಕರ್ಮಗಳ ಬಳಿಕ ಫಲಿತಾಂಶ ಹಿಡಿದು ವೈದ್ಯರು ರಾಜನಾಥನ ಬಳಿ ಬಂದರು. "ಪ್ರೊಲ್ಯಾಪ್ಸಡ್ ಲುಂಬರ್ ಇಂಟರ್ವರ್ಟೆಬ್ರಲ್ ಡಿಸ್ಕ್" ಆಗಿದೆ, ಬೆನ್ನು ಮೂಳೆಯ ಮೇಲೇ ಅತೀವ ಒತ್ತಡ ಬಿದ್ದುದರಿಂದ ಅಲ್ಲಿನ ಡಿಸ್ಕ್ ಹೊರಬಂದು ಮೆದುಳುಬಳ್ಳಿಯನ್ನು ಕುಟ್ಟುತ್ತಿದೆ. ಎಂದೇನೋ ಹೇಳಿದ್ದು ರಾಜನಾಥನಿಗೆ ಸರಿಯಾಗಿ ಅರ್ಥವಾಗಲಿಲ್ಲ. "ಕಾಲುಗಳಿಗೆ ಮರಳು ಚೀಲ ಕಟ್ಟಿ ತೂಗಾಡಿಸಿದರೆ ಕೊಂಚ ವಾಸಿಯಾಗಬಹುದು. ಇಲ್ಲವೇ ಆಪರೇಶನ್ ಮಾಡಬೇಕು. ಆದರೆ ಎರಡರಲ್ಲೂ ಈ ಸಮಸ್ಯೆಗೆ ಸಂಪೂರ್ಣ ಪರಿಹಾರ ದೊರಕುವುದಿಲ್ಲ. ನೋವು ಒಮ್ಮೆ ವಾಸಿಯಾದಂತೆ ಕಂಡರೂ ಮತ್ತೆ ಮತ್ತೆ ಮರಳಿ ಜೀವಮಾನವಿಡೀ ತೊಂದರೆ ಕೊಡಬಹುದು." ಎಂದರು ಡಾಕ್ಟರು.

"ಇನ್ನು ನೀವು ಸ್ವಲ್ಪ ಜಾಗ್ರತೆ ವಹಿಸಬೇಕು, ಭಾರ ಎತ್ತಲು ಹೋಗಬೇಡಿ. ಇನ್ನು ಮುಂದೆ ಹಾಸಿಗೆಯ ಮೇಲೆ ಮಲಗಲೇಬೇಡಿ, ನೆಲದ ಮೇಲೆ ಜಮಖಾನೆ ಹಾಸಿ ಮಲಗಿದರೆ ನೋವು ಪುನಹ ಬರದಂತೆ ನಿಯಂತ್ರಿಸಬಹುದು......" ಎಂದೆಲ್ಲಾ ಡಾಕ್ಟರು ಪರಿಹಾರಗಳನ್ನು ಸೂಚಿಸುತ್ತಿದ್ದಾಗ ಸಫ್ದರ್ ಜಂಗ್ ಆಸ್ಪತ್ರೆಯ ರೂಂ ನಂಬ್ರ ೩೨೧ರ ಕಬ್ಬಿಣದ ಮಂಚಕ್ಕೆ ಅಳವಡಿಸಲಾಗಿದ್ದ ಆರ್ಥೋ ಪ್ಲಾಂಕ್ ಎಂಬ ಮರದ ಹಲಗೆಯ ಮೇಲೆ ಪವಡಿಸಿದ್ದ ರಾಜನಾಥನಿಗೆ, ಕಳೆದ ಎಂಟುವರ್ಷಗಳಿಂದ ನಿದ್ರಾಹೀನತೆಗೆ ಕಾರಣವಾಗಿದ್ದ ಪ್ರಜ್ಞೆಯು ಅನಾಥವಾದಂತೆ ಭವಿಸಿ ನಿದ್ರೆಯೆಂಬ ಕೃಷ್ಣರಂಧ್ರದೊಳಕ್ಕೆ ಆಯ ತಪ್ಪಿ ಬಿದ್ದು ಆಳಕ್ಕೆ ಜಾರಲಾರಂಭಿಸಿತು.

ಮಾರ್ಚ್ 27, 2009

(ಧರ್ಮ) ವಿರೋಧಿಯ ಶುಭಾಶಯಗಳು

ಸಾವಿರಾರು ಕನ್ನಡ ಶಿಲಾ ಶಾಸನಗಳನ್ನು ನೆಟ್ಟ ಮಧ್ಯಯುಗದ ಧರ್ಮಭೀರು ಕನ್ನಡಿಗರು ಸದರಿ ಶಾಸನಗಳಲ್ಲಿ ಉಲ್ಲೇಖಿಸಲಾದ ದಾನ, ದತ್ತಿ, ನಂದಾದೀಪ ಸೇವೆ, ಮೊಸರೋಗರ, ನಿತ್ಯಪಡಿ, ಬ್ರಾಹ್ಮಣ ಸಂತರ್ಪಣೆ, ಕಾಲ ಕಾಲಕ್ಕೆ ಆಚಂದ್ರಾರ್ಕ ಸ್ಥಾಯಿಯಾಗಿ ನಡೆಸಿಕೊಂಡು ಹೋಗುವ ಕಾರ್ಯಗಳನ್ನು ತಮ್ಮ ಮುಂದಿನ ಪೀಳಿಗೆಗಳು ತಪ್ಪದೆ ನಡೆಸಿಕೊಂಡು ಹೋಗುವ ಸಲುವಾಗಿ ಪ್ರತೀ ಶಾಸನಗಳಲ್ಲೂ ಇದಕ್ಕೆ ತಪ್ಪಿದರೆ ಏನಾಗುತ್ತದೆ ಎಂಬ ವಾಕ್ಯಗಳನ್ನು ಹಲವು ರೀತಿಯಲ್ಲಿ ಬರೆದು ತಮ್ಮ ಕ್ರಿಯಾ ಶೀಲತೆಯನ್ನು ಮೆರೆದಿದ್ದಾರೆ.

ಇವುಗಳಲ್ಲಿ ಅನೇಕ ಶಾಸನಗಳು ವಾರಣಾಸಿಯಲ್ಲಿ ಗಂಗೆಯ ತಡಿಯಲ್ಲಿ ಗೋ, ಸ್ತ್ರೀ, ತಾಯಿ, ಮತ್ತು ಬ್ರಾಹ್ಮಣರ ಹತ್ಯೆ ಮಾಡಿದ ಪಾಪದ ಬಗ್ಗೆ ಎಚ್ಚರಿಸುತ್ತವೆ. ಹಲವು ಶಾಸನಗಳು ಸಮಾಜದಲ್ಲಿ ಸಲ್ಲದು ಎನಿಸುವಂತಹ ಕಾರ್ಯಗಳನ್ನು ಮಾಡಿದ ಪಾಪದ ಬಗ್ಗೆ ಎಚ್ಚರಿಸುವವು.

ಭಾರತೀಯ ಪುರಾತತ್ವ ಇಲಾಖೆ ಪ್ರಕಟಿಸಿರುವ ಸೌತ್ ಇಂಡಿಯನ್ ಇನ್ಸ್ಕ್ರಿಪ್ಶನ್ಸ್ ಸಂಪುಟ ೯ ಭಾಗ ೨ರಲ್ಲಿ ಕೊಡಲಾದ ಶಾಸನಗಳ ಪೂರ್ಣ ಪಾಠಗಳಲ್ಲಿ ಉಲ್ಲೇಖವಾಗಿರುವ ಅಂತಹ ಕೆಲವು ವಾಕ್ಯಗಳು ಇಲ್ಲಿವೆ.

೧. ಶ್ರೀಗಂಗೆಯಲು ಗೋವಧೆ ಬ್ರಾಹ್ಮಣವಧೆ ಮಾಡಿದ ಪಾಪಕೆ ಹೊಹರು.
೨. ವಾರನಾಸಿಯಲೂ ಸಾವಿರ ಬ್ರಾಹ್ಮರುನೂ ಸಾವಿರ ಕಪಿಲೆಯನೂ ಕೊಂದ ದೋಷ
೩. ತಂನ ಬಸುರಲಿ ಬಂದ ಮಗಳನೂ ತಾನೇ ಮದುವಳಿಗೆಯಾಗಿ ಮಾಡಿಕೊಂಡ ಪಾಪ
೪. ಗಂಗೆಯ ತಡಿಯಲು ತಂಮ ತಂದೆ ತಾಯಿಯರ ಕೊಂದ ಪಾಪ
೫. ವಾರಣಾಸೀಲಿ ಪಂಚ ಮಹಾಪಾತಕಗಳನ್ನು ಮಾಡಿದ ಪಾಪ
೬. ಗಂಗೆಯ ತಡಿಯಲು ಮಧ್ಯನದಲು ಕೊಂದ ಪಾಪ
೭. ಅರಮನೆಗೆ ಗುರುಮನೆಗೆ ಅಪರಾಧ ಕೊಡಬೇಕು.
೮. ಸ್ವಾನ ಮಾಂಸ ತಿಂದವರೂ
೯. ಏಳು ಘಟ್ಟಗಳಿನ್ದಿಳಿದ ಕಪಿಲೆಯರ ಕೊಂದ ದೋಷ

ಈ ಕೆಳಗಿನ ವಾಕ್ಯಗಳನ್ನು ಸ್ವಯಮ್ ಸೆನ್ಸಾರ್ ಮಾಡಿದ್ದೇನೆ:ಮೆಲುಮನಸಿನವರು ಓದದಿರುವುದು ಉಚಿತ

೧೦. ಸ್ವಮಾತ್ರು ಗುರುಪತ್ನಿ ಗಮನವನ್ನು ಮಾಡಿದ ಪಾಪ
೧೧. ಅವನ ಹೆಂಡತಿಯನು ೧೮ ಜಾತಿಗಳು ಸುಂ* ಅವನ ಬಾಯಿಗೆ ಕತೆ ತು* ಸುರಾಪಾನ ಕಲ್ಲುಪ್ಪು
೧೨. ತಂಮ ಹಿರಿಮಗನ ತಲೆಬುರುಡೆಯಲಿ ಮಧ್ಯಪಾನವ ಹೊಯ್ಕೊಂಡು ಅನುಭವಿಸಿದವರು ಕಾಶೀ ಕ್ಷೇತ್ರದಲಿ...
೧೩. ಯೀ ಧರ್ಮಕೆ ತಪ್ಪಿದವರು ಹೇಲೊಳಗಣ ಹುಳುವಾಗಿ ಯಿರಲುಳವರು
೧೪. ಚಾಂಡಾಲರ ಬಸುರು ಬಂದವರು
೧೫. ತಂಮ ಅಭಿಮಾನವ ತಂಮ ಸತಿಯ ಹಿಡಿದವಗೆ ಕೊಟವರು
೧೬. ಹಂದಿ ಭಕ್ಷಿಸಿದವರು, ಗೋಮಾಂಸ ಸ್ವಾನ ಮಾಂಸ ತಿಂದವರು
೧೭. ಕತೆಯ ತು* ತಿಂದವರು ವಾರಣಾಸಿಲಿ ಬ್ರಾಹ್ಮಣನ ಕೊಂದ ಪಾಪ

ಹೆಚ್ಚಿನ ಶಾಸನಗಳು ಕೊನೆಯಾಗುವ ಶ್ಲೋಕ:
ಸ್ವದತ್ತಂ ಪರದತ್ತಾಂ ವಾ ಯೋ ಹರೆತಿ ವಸುಂಧರಾಂ
ಷಷ್ಠಿ ವರ್ಷ ಸಹಸ್ರಾಣಿ ವಿಷ್ಟಾಯಾಂ ಜಾಯತೆ ಕ್ರಿಮಿ
(ಈ ಶ್ಲೋಕವನ್ನು ಶಾಸನಗಳಲ್ಲಿ ಪ್ರಕಟವಾಗಿರುವ ರೀತಿಯಲ್ಲೇ ಉಲ್ಲೇಖಿಸಿದ್ದೇನೆ. ಇದರ ಸರಿಯಾದ ಪಾಠವನ್ನು ಶಾಸ್ತ್ರಗಳಲ್ಲಿ ಹುಡುಕಲು ಹೋಗಿಲ್ಲ)

ಶಾಸನಗಳಲ್ಲಿ ಉಲ್ಲೇಖಿಸಿರುವ ಸೇವಾ ಕಾರ್ಯಗಳನ್ನು ಮಾಡಲು ಭೂಮಿ ಕಾಣಿ ಒದಗಿಸಿ ಅವನ್ನು ಹಸ್ತಾಂತರಿಸುವ ಬಗೆ ಹೀಗಿದೆ.
"ಯಿಂತೀ ಚತುಸ್ಸೀಮೆಯಿಂದೋಳಗುಳ್ಳ ಮನೆ ಬಾವಿ ಗದ್ದೆ ಹಕ್ಕಲು ಹಡು ಬೆಟ್ಟು ತಿಪ್ಪೆ ಮಕ್ಕಿ ಮೆಕ್ಕೆ ಬಯಲು ಕಳೆ ಕೆರೆ ಮರ ನೆಕ್ಕಿ ನಿಡಿಲು ನಿಧಿ ನಿಕ್ಷೇಪ ಜಲ ಪಾಷಾಣ ಆಕ್ಶಿಣೀ ಆಗಾಮಿ ಸಿದ್ಧ ಸಾಧ್ಯ ಯಿಂತೀ ಅಷ್ಟಭೋಗ ತೇಜಸ್ಸಾಂಮ್ಯ ಸಹಿತವಾಗಿ ಸಹಿರಣ್ಯೋದಕದಾನ ಧಾರಾಪೂರ್ವಕವಾಗಿ ಆಚಂದ್ರಾರ್ಕಸ್ಥಾಯೀ ಆಗಿ ಭೋಗಿಸುವರೆಂದು..."
ಹೀಗೆ ದಾನವಾಗಿ ಬಂದ ಭೂಮಿಯಿಂದ ಫಲವನ್ನು ಅನುಭವಿಸಿಕೊಂಡು ಬರುವಂತವರು ಶಾಸನಗಳಲ್ಲಿ ಹೇಳಲಾದಂತಹ ಸೇವಾಕಾರ್ಯಗಳನ್ನು ಕೈಗೊಳ್ಳಬೇಕಾದ ಕೆಲವು ದೇವಾಲಯಗಳೇ ಈಗ ಇಲ್ಲ. ಇರುವ ಹಲವಾರು ದೇವಾಲಯಗಳಲ್ಲಿ ಪೂಜೆ ಪುನಸ್ಕಾರಗಳೇ ನಡೆಯುತ್ತಿಲ್ಲ. ಪುರಾತತ್ವ ಇಲಾಖೆ ವಶ ಪಡಿಸಿಕೊಂಡ ಶಾಸನಗಳೇ ಸಾವಿರಾರು, ಇನ್ನೂ ಸಾವಿರಾರು ಶಾಸನಗಳು ಬಟ್ಟೆ ಒಗೆಯುವ ಕಲ್ಲುಗಳು ಮತ್ತು ಚರಂಡಿ ಪಾಜೆಗಳಾಗಿವೆ. ದಾನವಾಗಿ ಬಂದ ಭೂಮಿಗಳ ಈಗಿನ ಒಡೆಯರಿಗೆ ತಂಮ ಬಚ್ಚಲ ನೀರು ಹರಿವ ಶಾಸನದ ಕಲ್ಲು ಎಂತಹ ಸಂದೇಶವನ್ನು ಕೊಡುತ್ತಿದೆ ಎಂಬ ಅರಿವಿಲ್ಲ. ಹಲವಾರು ಧರ್ಮ ಭೀರುಗಳು ಇಂಥ ಶಾಸನದ ಪ್ರಶಸ್ತ ಕಲ್ಲಿನ ಪಾಜೆಗಳನ್ನು ಕಕ್ಕಸು ಗುಂಡಿ ಮುಚ್ಚಲು ಬಳಸಿ ಸಂಸ್ಕೃತಿ ಉಳಿಸುವ ಧರ್ಮ ಕಾರ್ಯದಲ್ಲಿ ತೊಡಗಿದ್ದಾರೆ.

ಆಚಂದ್ರಾರ್ಕ ಸ್ಥಾಯಿ ಪಾಲಿಸಿಕೊಂಡು ಬರಬೇಕಾದ ಕಾರ್ಯವನ್ನು ಮಾಡದೆ ಮೇಲಿನ ಪಾಪಗಳಿಗೆ ಗುರಿಯಾಗುತ್ತಿರುವ ಅಸಂಖ್ಯ ಕನ್ನಡಿಗರಿಗೆ (ಧರ್ಮ)"ವಿರೋಧಿ"ಯ ಶುಭಾಶಯಗಳು.

ದಾನಾತ್ಸ್ವರ್ಗಮವಾಪ್ನೋತಿ ಪಾಲನಾದಚ್ಯುತಪದಂ

ಮಾರ್ಚ್ 24, 2009

ಅವನ ಇಳಿಗಾಲ ಹೊರೆಯಾಗದಿರಲಿ


ರಂಜಿಶ್ ಹೀ ಸಹೀ
ದಿಲ್ ಹೀ ದುಖಾನೆ ಕೆ ಲಿಯೇ ಆ
ಆ ಫಿರ್ ಸೆ ಮುಝೆ ಛೋಡ ಕೆ ಜಾನೇ ಕೆ
ಲಿಯೇ ಆ

ದ್ವೇಷಿಸಿದರೂ ಸರಿಯೇ
ನನ್ನ ಮನ ನೋಯಿಸಲಾದರೂ ಬಾ
ಬಾ ಮತ್ತೊಮ್ಮೆ ನನ್ನ ತೊರೆದು ಹೋಗಲಾದರೂ ಬಾ.

ಅಹಮದ್ ಫರಾಜ್ ಎಂಬ ಉರ್ದು ಕವಿ ಬರೆದ ಮೇಲಿನ ಕವನ ಬಹಳ ಮಂದಿ ಸುಮಧುರ ಕಂಠದವರು ಹಾಡಿದ್ದಾರೆ. ಆದರೆ ಈ ಹಾಡು ಮೆಹದಿ ಹಸನ್ ಎಂಬ ಗಝಲ್ ಗಾಯಕನ ಹಾಡೆಂದೇ ಪ್ರಖ್ಯಾತ. ಅಷ್ಟು ಮೋಡಿಯ ಕಂಠ ಅವನದು. ಲತಾ ಮಂಗೇಶ್ಕರ್ ಅವನ ಹಾಡುಗಳನ್ನು "ಭಗವಾನ್ ಕಾ ಸುರ್" ಅಂತಲೇ ಕರೆದಿದ್ದಾಳೆ.

ಮೆಹದಿ ಹಸನ್ ಅವನ ಮೋಡಿಯ ಕಂಠದಿಂದ, ಅವನ ಹಾಡುಗಳ ಆಯ್ಕೆಯಿಂದ ನಮ್ಮಲ್ಲಿ ಯೌವನದ ಪುಳಕವನ್ನು ನಿರಂತರಗೊಳಿಸಿದ್ದಾನೆ. ಅವನ ಅನೇಕ ಹಾಡುಗಳು ಅವನ ಸ್ವರದಲ್ಲಿಯೆ ನನ್ನ ಒಳಗೆ ರಿನ್ಗಣಿಸುತ್ತಲೇ ಇರುತ್ತವೆ. ಅಷ್ಟೊಂದು ಮಾಂತ್ರಿಕತೆ ಅವನ ಸ್ವರದಲ್ಲಿ. ರಾಗಗಳ ಧ್ಯಾನ ಮತ್ತು ಗಝಲ್ ನ ಲಾಲಿತ್ಯ ಎರಡರ ಉತ್ತುಂಗವನ್ನು ವೇದಿಕೆಗೆ ತಂದ ಅಪೂರ್ವ ಗಾಯಕ ಮೆಹದಿ ಹಸನ್.

ಮೆಹದಿ ಹಸನ್ ಹುಟ್ಟಿದ್ದು ರಾಜಸ್ಥಾನದ ಲೂನ ಎಂಬಲ್ಲಿ ಹಲವಾರು ಪೀಳಿಗೆಗಳಿಂದ "ಧ್ರುಪದ" ಶೈಲಿಯ ಹಾಡುಗಾರಿಕೆಯನ್ನು ಬೆಳೆಸಿಕೊಂಡು ಬಂದಂತಹ "ಕಲಾವಂತ" ಸಮುದಾಯದಲ್ಲಿ. ಧ್ರುಪದ್ ಬಗ್ಗೆ ಇನ್ನೊಮ್ಮೆ ಬರೆಯಬೇಕು. ಧ್ರುಪದ್ ಹಾಡುವುದನ್ನು ಕೇಳುವಾಗ, ಅದರ ಮಂತ್ರದಂತಹ ಆಲಾಪ ಸುತ್ತಲೂ ಟ್ರಾನ್ಸ್ ಹರಡುವಾಗ ಮೈಮರೆಯುವುದೇ ಒಂದು ಅನುಭೂತಿ. ಇರಲಿ.

ವಿಭಜನೆಯ ನೋವಿನ ದಿನಗಳಲ್ಲಿ ಧರ್ಮದ ಆಧಾರದ ಮೇಲೆ ದೇಶ ವಿಭಜನೆಗೊಳ್ಳುವಾಗ ವೈಯಕ್ತಿಕ ಆಯ್ಕೆಗೆ ಬೆಲೆಯಿರದ ಗಡಿ ಪ್ರದೇಶದಲ್ಲಿ ವಾಸಿಸುತ್ತಿದ್ದ ಮೆಹದಿ ಹಸನ್ ಕುಟುಂಬ ಪಾಕಿಸ್ತಾನಕ್ಕೆ ವಲಸೆ ಹೋಗಬೇಕಾಗಿ ಬಂತು. ಹೊಟ್ಟೆ ಪಾಡಿಗಾಗಿ ಸೈಕಲ್ ರಿಪೇರಿ, ಮೋಟಾರ್ ರಿಪೇರಿ ಮಾಡಿ ಹಲವು ದಿನ ದೂಡಿದರೂ ಮೆಹದಿ ಹಸನ್ ನೊಳಗೆ ಸಂಗೀತದ ತುಡಿತ ಜೀವಂತವಾಗಿತ್ತು. ಕೊನೆಗೊಮ್ಮೆ ರೇಡಿಯೋ ಪಾಕಿಸ್ತಾನ್ ನಲ್ಲಿ ತುಮರಿ ಗಾಯಕನಾಗಿ ಕೆಲಸ ದೊರಕಿದಾಗ ಅವನ ಬದುಕಿನ ಹೋರಾಟ ಕೊನೆಗೊಂಡಿತು. ಮತ್ತೆ ನಡೆದದ್ದು ಒಂದು ಇತಿಹಾಸ. ಅವನ ಅನಭಿಷಿಕ್ತ ಗಝಲ್ ಸಾಮ್ರಾಟ್ ಎನ್ನುವ ಪದಕ್ಕೆ ಸಮನಾದವರು ತಾವಲ್ಲ ಎನ್ನುವುದನ್ನು ಎಲ್ಲ ಗಾಯಕರೂ ಒಪ್ಪಿಕೊಳ್ಳುತ್ತಾರೆ.

ಇಂದು ದೆಹಲಿಯ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಸುದ್ದಿಯೊಂದು ನನ್ನನ್ನು ಕಾಡುತ್ತಿದೆ. ಮೆಹದಿ ಹಸನ್ ವೈದ್ಯಕೀಯ ಖರ್ಚುಗಳನ್ನು ಭರಿಸಲು ಅವನ ಕುಟುಂಬಕ್ಕೆ ಕಷ್ಟವಾಗುತ್ತಿದೆ. ಶ್ವಾಸಕೋಶದ ಸೋಂಕಿನಿಂದ ನರಳುತ್ತಿರುವ ಮೆಹದಿ ಹಸನ್ ಆಸ್ಪತ್ರೆಯಿಂದ ಮನೆಗೆ ಮರಳಿದರೂ ಅವನ ಇಳಿಗಾಲದಲ್ಲಿ ವೈದ್ಯಕೀಯ ಖರ್ಚೇ ಹೊರೆಯಾಗುತ್ತಿದೆ. ನಿಜಕ್ಕೂ ಅದು ದೊಡ್ಡ ವಿಷಯವಲ್ಲ. ವಿಶ್ವದಲ್ಲೆಲ್ಲ ಹರಡಿರುವ ಅವನ ಅಭಿಮಾನಿಗಳು ಹಣ ಕಳುಹಿಸಲು ಹಿಂದೆ ಮುಂದೆ ನೋಡಲಾರರು. ಎಲ್ಲಿ, ಹೇಗೆ ಎನ್ನವುದೇ ಸಮಸ್ಯೆ.

ನಮ್ಮ ಹರೆಯವನ್ನು ನಿರಂತರವಾಗಿಸಿದ ಮೆಹದಿ ಹಸನ್ ಗೆ ಇಳಿಗಾಲ ಹೊರೆಯಾಗದಿರಲಿ ಎನ್ನುವುದಷ್ಟೇ ನನ್ನ ಆಶಯ.


ಮಾರ್ಚ್ 13, 2009

ಹಾಡು ಕಟ್ಟಿದ ಬಗೆ

ಹಳೆಯದೊಂದು ನೆನಪು.

ಅದಾಗ ಕನ್ನಡ ಪತ್ರಿಕೋದ್ಯಮದಲ್ಲಿ ಕ್ರಾಂತಿ ಮಾಡಿದ್ದ "ವಿಜಯ ಕರ್ನಾಟಕ" ದ ಪ್ರಚಾರದ ಬಗ್ಗೆ ಯೋಚಿಸಲು ನಮಗೆ (ಮ್ಯಾಗ್ನಂ ಜಾಹಿರಾತು ಸಂಸ್ಥೆ) ಸಿಕ್ಕ ಆಣತಿಯ ಪ್ರಕಾರ ನಾನು ಆ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದೆ.

ಆಗ ಮಂಗಳೂರಿನಲ್ಲಿ ಮಲೇರಿಯ ಹಾವಳಿ. ಈಗಲೂ ಇದೆ ಬಿಡಿ. ನಾನು, ಗೆಳೆಯ ಜಾದೂಗಾರ "ಕುದ್ರೋಳಿ ಗಣೇಶ್" ಜತೆ ಕುಳಿತು ವಿಜಯ ಕರ್ನಾಟಕದ ಪ್ರಾಯೋಜಕತ್ವದಲ್ಲಿ "ಮಲೇರಿಯ ಹುಷಾರ್" ಅಭಿಯಾನ ರೂಪಿಸಿದ್ದೆ. ಜಾದೂ, ರಂಗ ಕಲ್ಪನೆ, ಬೀದಿ ನಾಟಕದ ಒಟ್ಟು ಅಂಶಗಳನ್ನು ಒಳಗೊಂಡ ಈ ಅಭಿಯಾನದ ಜೊತೆ ಜೊತೆ ವಿಜಯ ಕರ್ನಾಟಕದ ಪ್ರಾಯೋಜಕತ್ವಕ್ಕೂ ಕೊಂಚ ಪ್ರಚಾರ ಲಾಭ ಒದಗಿಸುವ ಬಗ್ಗೆ ನಮ್ಮ ಚರ್ಚೆ ಸಾಗಿತ್ತು.

ಜಾನಪದ, ಜಾದೂ ಮತ್ತು ಸಂಗೀತದ ಸಂಯೋಜನೆಯಲ್ಲಿ ವಿಸ್ಮಯ ಎಂಬ ತಂಡ ಕಟ್ಟಿ ಕರ್ನಾಟಕದಾದ್ಯಂತ ಹಲವು ತಿರುಗಾಟ ನಡೆಸಿದ್ದ ಕುದ್ರೋಳಿ ಗಣೇಶ್ ಒಬ್ಬ ಬಹುಮುಖ ಪ್ರತಿಭಾವಂತ.

"ಗುರು, ವಿಜಯ ಕರ್ನಾಟಕಕ್ಕೆ ಒಂದು ಹಾಡು ಕಟ್ಟಬೇಕು. ಅದು ಹೆಂಗಿರಬೇಕು ಗೊತ್ತಾ.. ಒಂದು ಆಂಥೆಮ್ ತರ ಇರಬೇಕು." ಅಂತ ಗಣೇಶ್ ಕಿಡಿ ಹಚ್ಚಿದಾಗ ನನಗೂ ಅದು ಹೌದೆನ್ನಿಸಿತು. ವಿಜಯ ಕರ್ನಾಟಕ ಪ್ರಸಾರ ಸಂಖ್ಯೆ ಎಲ್ಲರನ್ನು ಮೀರಿತ್ತು. ಅದಕ್ಕಾಗ ಬೇಕಿರುವುದು ಒಂದು "ಕಲ್ಟ್ ಇಮೇಜ್ " ಎಂದು ನನ್ನ ಪ್ರತಿಪಾದನೆ. ಜನ ಹಲವು ವರ್ಷಗಳಿಂದ ಓದಿಕೊಂಡು ಬಂದಿದ್ದ ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಉದಯವಾಣಿಗೆ ಇದ್ದ ಭಕ್ತರೆನ್ನಬಹುದಾದ ಲಾಯಲ್ ಓದುಗರ ಕೊರತೆ ವಿಜಯ ಕರ್ನಾಟಕಕ್ಕೆ ಇದೆ ಎನ್ನುವುದು ನನ್ನ ಆಗಿನ ವೈಯಕ್ತಿಕ ಅಭಿಪ್ರಾಯ. ವಿಜಯ ಕರ್ನಾಟಕ ತನ್ನ ಕಂಟೆಂಟ್ ಮೂಲಕ ಈ ದಿಸೆಯಲ್ಲಿ ಸಾಗುತಿತ್ತೋ ಇಲ್ಲವೊ ಎಂಬುದನ್ನು ನಾನು ಇಲ್ಲಿ ಚರ್ಚಿಸಬಯಸುವುದಿಲ್ಲ. ಆದರೆ ಪ್ರಚಾರ ಕಾರ್ಯದ ದೃಷ್ಟಿಯಿಂದ ಇಂಥ ಒಂದು ಆಂಥೆಮ್ ಅಗತ್ಯ ಇದೆ ಎಂಬುದು ನನ್ನ ಅಭಿಮತವಾಗಿತ್ತು.

ಹಲವು ದಿನಗಳ ಬಳಿಕ ನನ್ನ ಮತ್ತೊಬ್ಬ ಗೆಳೆಯ ನಾಗೇಶ್ (ಇವರೀಗ ಕನ್ನಡ ಸಿನೆಮಾ ರಂಗದಲ್ಲಿ ಕ್ಯಾಮೆರಾ ತಂತ್ರಜ್ಞರಾಗಿ ಕೆಲಸ ಮಾಡುತ್ತಿದ್ದಾರೆ.) ಜೊತೆಯಲ್ಲಿ ಬೇರೊಬ್ಬ ಕ್ಲಯಂಟ್ ಗೋಸ್ಕರ ಒಂದು ಜಿಂಗಲ್ ರೂಪಿಸಲು ಬೆಂಗಳೂರಿಗೆ ಬಂದಿದ್ದೆ. ಬೆಂಗಳೂರಿನಲ್ಲಾಗ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಮಂಗಳೂರಿನವರೇ ಆದ ಆಲ್ವಿನ್ ನಮಗೆ ಸುಮಧುರ ಟ್ಯೂನುಗಳನ್ನು ರೂಪಿಸಿ ಕೊಟ್ಟಿದ್ದರು. ಅವರೊಂದಿಗೆ ಮಾತನಾಡುವಾಗ ವಿಜಯ ಕರ್ನಾಟಕದ ಆಂಥೆಮ್ ಬಗ್ಗೆ ಮಾತು ಬಂತು.

ಅಲ್ವಿನ್ ಕೆಲಸ ಮಾಡುವುದೇ ಹಾಗೆ, ಯಾವತ್ತೂ ದುಡ್ಡಿನ ಬಗ್ಗೆ ಯೋಚಿಸಿದವರಲ್ಲ. ವಿಚಾರ ಮೂಡುವುದರೊಳಗೆ ಯೋಚನೆ ಶುರು. ಒಂದು ಸುಂದರ ಚೌಕಟ್ಟು ರೂಪಿಸಿ ಬಾಯಿ ಮಾತಿನಲ್ಲೇ ಅವರು ವಿವರಿಸಿದಾಗ ನನಗೆ ಸ್ಥೂಲ ಕಲ್ಪನೆ ದೊರಕಿತು. ಸಂಸ್ಥೆಯಲ್ಲಿ ಒಪ್ಪಿಗೆ ದೊರಕಿಸಿಕೊಂಡು ನಾವು ಕೆಲಸಕ್ಕೆ ತೊಡಗಿದೆವು.

ಸರಿ ಹಾಡು ಬರೆಯುವುದು ಯಾರು. ಚಿತ್ರರಂಗದ ಒಂದೆರಡು ಕವಿಗಳು ಬರೆದು ಕೊಟ್ಟ ಹಾಡುಗಳ ಸಾಹಿತ್ಯ ನನಗೆ ಇಷ್ಟವಾಗಲಿಲ್ಲ. ಮೇಲಾಗಿ ಆಲ್ವಿನ್ ಕೊಟ್ಟ ಮೀಟರ್ ಗೂ ಅದು ಹೊಂದುತ್ತಿರಲಿಲ್ಲ. ರೆಕಾರ್ಡಿಂಗ್ ದಿನ ನಿರ್ಧಾರವಾಗಿದೆ. ಸ್ಟೂಡಿಯೋ ನಿಗದಿಯಾಗಿದೆ. ಕೊನೆಗೆ ನಾನೇ ಹಾಡು ಬರೆಯಲು ಕುಳಿತೆ. ಹೊಟ್ಟೆ ಪಾಡಿನ ನಡುವೆ ಕವನ ಕಟ್ಟುವುದು ಮರೆತೇ ಹೋಗಿತ್ತು. ತಿಣುಕಿ ತಿಣುಕಿ ಕೊನೆಗೊಮ್ಮೆ ಪದ್ಯ ಸಿದ್ಧವಾಯಿತು. ಫೋನಿನಲ್ಲೇ ಆಲ್ವಿನ್ಗೂ ಕೇಳಿಸಿದೆ. ಅವರಿಗೂ ಮೀಟರ್ ಹೊಂದಿತು. ಒಂದು ಹೋಟೆಲ್ ರೂಮಲ್ಲಿ ಕೀ ಬೋರ್ಡ್ ಮತ್ತು ಕಂಪ್ಯೂಟರ್ ಸಜ್ಜುಗೊಳಿಸಿ ಜಿಂಗಲ್ ಚೌಕಟ್ಟಿನ ವಾದ್ಯ ವೃಂದ ಧ್ವನಿಗಳನ್ನು ಕಂಪೋಸಿಂಗ್ ಮಾಡಲಾಯಿತು.

ಮರುದಿನ ಬೆಂಗಳೂರಿನ ಸ್ಟೂಡಿಯೋ ಒಂದರಲ್ಲಿ ಹಾಡಿನ ರೆಕಾರ್ಡಿಂಗ್.

ಈ ಜಿಂಗಲ್ ನ ರಚನೆಯಲ್ಲಿ ಕೋರಸ್ ಅಂಗ ಪ್ರಧಾನವಾಗಿದೆ. ಇಡೀ ಹಾಡು ನಾಲ್ಕೈದು ಜನ ಒಟ್ಟಿಗೆ ಹಾಡುವಂತಹ ಪರಿಕಲ್ಪನೆ ಆಲ್ವಿನ್ ಇಟ್ಟುಕೊಂಡಿದ್ದರು. ಅದ್ಯಾಕೋ ಏನೋ ಬಂದ ಕೋರಸ್ ಕಲಾವಿದರೆಲ್ಲ ತಮಿಳರು. ಏನು ಮಾಡಿದರೂ ನನ್ನ ಕನ್ನಡ ಹಾಡು ಅವರ ಬಾಯಿಯಲ್ಲಿ ಹೊರಳಲೇ ಇಲ್ಲ. ಜೊತೆಗೆ ಹಲವು "ಡ" ಕಾರ ಗಳನ್ನೂ ಹೊಂದಿ ಅದು ನಿಜಕ್ಕೂ ಟಂಗ್ ತ್ವಿಸ್ತರ್ ಆಗಿತ್ತು. ನನ್ನ ಹಾಡಿನ ಶಬ್ದಗಳ ಬಗ್ಗೆಯೇ ಅವರು ನಯವಾಗಿ ಆಕ್ಷೇಪ ಎತ್ತಿದಾಗ ನಾನೂ ನಯವಾಗಿ ಅವರನ್ನು ಬೀಳ್ಕೊಟ್ಟೆ. ಮತ್ತೆ ಲಗುಬಗೆಯಿಂದ ನಾಲ್ಕೈದು ಕನ್ನಡ ಗಾಯಕರನ್ನು ಹೊಂದಿಸಲಾಯಿತು.

ಈ ಜಿಂಗಲ್ ರಚನೆಯಲ್ಲಿ ಇನ್ನೆರಡು ಮುಖ್ಯ ಅಂಗಗಳಿವೆ. ಒಂದು, ಹಾಡಿನ ಮೊದಲು ಮತ್ತು ಒಳಗೆ ಹೆಣೆದುಕೊಂಡಿರುವ ಆಲಾಪ. ಇನ್ನೊಂದು ತೀವ್ರ ಸ್ತರದಲ್ಲಿ ಹಾಡಬೇಕಾದ ಕ್ಲೈಮ್ಯಾಕ್ಸ್. ಆಲಾಪಕ್ಕೆ ಎಂ. ಡಿ. ಪಲ್ಲವಿ ಜೊತೆಗೆ ಕೆಲಸ ಮಾಡುವ ಅವಕಾಶ ನನ್ನದಾಯಿತು. ಬಂದ ಅರ್ಧ ಗಂಟೆಯೊಳಗೆ ನಮಗೆ ಬೇಕಾದಂತೆ ಹಲವು ಆಲಾಪಗಳನ್ನು ಕೊಟ್ಟು ಎಂ.ಡಿ. ಪಲ್ಲವಿ ತೆರಳಿದರು.

ಇನ್ನುಳಿದದ್ದು ಕ್ಲೈಮ್ಯಾಕ್ಸ್. ಇದು ಜಿಂಗಲ್ ನ ಹಿಮ್ಮೇಳದಲ್ಲಿ ಕೆಳಿದನ್ತೆನಿಸಿದರೂ ಒಟ್ಟು ಹಾಡಿಗೆ ವೀರ ರಸವನ್ನು ಕೊಡುವ ಅಂಗ ಇದು. ಆಲ್ವಿನ್ ಹೇಳುವ ಪ್ರಕಾರ ಆ ಸ್ತರದಲ್ಲಿ ಹಾಡುವ ಸಾಮರ್ಥ್ಯ ಇರುವುದು ರಘುಪತಿ ದೀಕ್ಷಿತ್ ಗೆ ಮಾತ್ರ. ರಘು ದೀಕ್ಷಿತ್ ಬ್ಯಾಂಡಿನಲ್ಲಿ ಲೀಡ್ ಗಿಟಾರಿಸ್ಟ್ ಆಗಿದ್ದ ಆಲ್ವಿನ್ಗೂ ರಘು ಅವರಿಗೂ ಸ್ನೇಹ ಚೆನ್ನಾಗಿಯೇ ಇದ್ದರೂ ಅದ್ಯಾಕೋ ಒಂದು ಪುಟಗೋಸಿ ಕೋರಸ್ ಹಾಡುವಂತೆ ಕರೆಯಲು ಆಲ್ವಿನ್ಗೆ ಅಳುಕು. ಆದರೂ ಆಲ್ವಿನ್ ಕರೆದೊಡನೆ ಬಂದು ನಮಗೆ ಬೇಕಾದ್ದನ್ನು ಕೊಟ್ಟು ತಮ್ಮ ಸ್ನೇಹ ಮೆರೆದರು ರಘು ದೀಕ್ಷಿತ್.

ಎಲ್ಲ ಮುಗಿದು ನನ್ನ ಲ್ಯಾಪ್ ಟಾಪ್ ನಲ್ಲಿಟ್ಟು ಹುಬ್ಬಳ್ಳಿಗೆ ಹೋದೆ. ಆನಂದ ಸಂಕೇಶ್ವರರಿಗೆ ಕೇಳಿಸಿದಾಗ ಅವರ ಯೋಚನೆ ಇನ್ನೂ ಎತ್ತರಕ್ಕೆ ಹರಿಯಲಾರಂಭಿಸಿತು. "ಇದಕ್ಕೊಂದು ಫಿಲಂ ಮಾಡಿದ್ರೆ ಚಲೋ ಇರ್ತದ್ರೀ" ಅಂದ್ರು. ಅದಾಗಿ ಕೆಲವೇ ಸಮಯದಲ್ಲಿ ವಿಜಯ ಕರ್ನಾಟಕ ಟೈಮ್ಸ್ ಮಡಿಲಲ್ಲಿತ್ತು. ಹಾಗಾಗಿ ಆ ಯೋಜನೆ ಕೈಗೂಡಲಿಲ್ಲ.

ಈ ಜಿಂಗಲ್ ಗೆ ಮಿಶ್ರ ಪ್ರತಿಕ್ರಿಯೆ ನನಗೆ ದೊರಕಿದೆ. ಒಟ್ಟಿನಲ್ಲಿ ನನ್ನ ಎಲ್ಲ ವೃತ್ತಿಪರ ಕೆಲಸಗಳ ನಡುವೆ ವಿಶೇಷ ಸಾಂತ್ವನ ನೀಡಿದ ಕೆಲಸವಿದು.



VK Jingle | Upload Music

ಮಾರ್ಚ್ 11, 2009

ರಂಗು ಚೆಲ್ಲುವ ಹೋರೀ


ಇಂದು ಹೋಳಿ.

ಇಲ್ಲಿ ದೆಹಲಿಯಲ್ಲಿ ಕುಳಿತು ನಾನು ಈ ಬ್ಲಾಗನ್ನು ಬರೆಯುತ್ತಿರುವಾಗ ಹೊರಗೆ ಹೋಳಿಯ ಸಡಗರ ಮುಗಿಲು ಮುಟ್ಟಿದೆ. ಕೃಷ್ಣಾ ನಗರದ ಗಲೀ ನಂಬರ ೭ ರ ನೆಲ ಕೆಂಪಾಗಿದೆ. ಡೋಲು, ಕೇಕೆ, ನೀರು ಚೆಲ್ಲುವ ಸದ್ದು, ಬಣ್ಣದ ಹುಡಿಯ ಧೂಲಿ ಜೊತೆಗೆ ಕೈಲಾಶ್ ಖೇರ್ ನ ದೊರಗು ಕಂಠದ "ಚಕ್ಕದೆ ಪಟ್ಟೆ" ಹಾಡು ನನ್ನನ್ನು ಮತ್ತೆ ಹೊರಗೆ ಓಡಿ ಬಣ್ಣಗೆಲ್ಲಲ್ಲು ಒತ್ತಾಯಿಸುತ್ತಿದೆ.

ಮೊನ್ನೆ ಮೊನ್ನೆ ಬಂಟ್ವಾಳ ತೇರಿನ ಓಕುಳಿಯ ರಂಗು ಇನ್ನೂ ಬಿಟ್ಟಿಲ್ಲ. ಮೇಲಾಗಿ ಪುಟಾಣಿ ಅನಿರುದ್ಧನ ಆಸ್ತೆಯೂ ಇಂದು ಇಲ್ಲ. ಅವನ ಒತ್ತಾಯದಿಂದಲೇ ಅಲ್ಲವೇ ಹೊರ ಹೋಗಿ ಕೆಂಪಾಗಿದ್ದು. ನೇತ್ರಾವತಿ ನೀರಿಡಿ ಕೆಂಪಾದರೂ ನಮ್ಮ ಓಕುಳಿ ಮುಗಿದಿರಲಿಲ್ಲ. ಶಾಲೆಗೆ ಯಾಕೆ ಬರಲಿಲ್ಲ ಎಂದು ಟೀಚರ್ ಕೇಳಿದ್ದಕ್ಕೆ ಮೊನ್ನೆ ತೇರು ನಿನ್ನೆ ಓಕುಳಿ ಎಂದನಂತೆ. ಸೀಮಾ ಫೋನಿನಲ್ಲಿ ನಗುತ್ತಿದ್ದಾಳೆ.

ಗಿರಿಜಾ ದೇವಿ ಹೋರೀ ಹಾಡುತ್ತಿದ್ದಾಳೆ.
"ರಂಗ ಡಾಲೂಂಗಿ ರೇ ಮೈ
ನಂದಕೆ ಲಾಲನ ಪರ
ಹಾಂ ರಂಗ ಡಾಲೂಂಗಿ"

ಹೋರಿ ಎನ್ನುವುದು ಹಿಂದೂಸ್ತಾನಿ ಸಂಗೀತದ ಒಂದು ಲಘು ಪ್ರಕಾರ. ಗಿರಿಜಾ ದೇವಿ ಹೋರಿ ಹಾಡಿದರೆ ಬಿರ್ಜು ಮಹಾರಾಜ್ ಅಥವಾ ಯಾವುದೇ ನರ್ತಕ ಸುಮ್ಮನೆ ಕುಳಿತಿರಲು ಸಾಧ್ಯವೇ ಇಲ್ಲ. ಕೈ ಕಟ್ಟಿ ಹಾಕಿದರೂ ಹುಬ್ಬು ಕುಣಿಸಿ, ಕಣ್ಣು ಹಿಗ್ಗಿಸಿ, ಗಲ್ಲ ನಡುಗಿಸಿ, ತುಟಿ ಬಗ್ಗಿಸಿ, ಕತ್ತು ಕೊಂಕಿಸಿ ಭಾವ ಚೆಲ್ಲಿಯಾನು. ಅಷ್ಟು ಅನಾಯಾಸ ಅವಳ ಹಾಡುವ ಶೈಲಿ.

ಕಜರೀ, ಚೈತೀ, ಸಾವ್ನೀ, ಝೂಲಾ ಮೊದಲಾದ ಜನಪದ ಶೈಲಿಯ ಲಘು ಸಂಗೀತಕ್ಕೆ ಸಲ್ಲುವ "ಹೋರೀ" ಹೊಲಿಯಾಟದ ರಂಗು ಚೆಲ್ಲುತ್ತದೆ. ಅಲ್ಲಿನ ಒದ್ದೆಯಾಗುವ ಸಂಭ್ರಮ, ಬಣ್ಣ ಗೆದ್ದ ಬಳಿಕ ಕಳಚಿಕೊಳ್ಳುವ ತರಳೆಯರ ಸಂಕೋಚ, ಹಾಗೆ ಸಂಕೋಚ ಕಳಚಿದ ಮೇಲೆ ವಿಜ್ರಂಭಿಸುವ ಆ ನಿರ್ಭಿಡ ಹೆಣ್ಣುತನದ ಶೃಂಗಾರ ಎಲ್ಲವೂ ನವಿರಾಗಿ ತುಂಟ ಪದ ಚಾತುರ್ಯಗಳಲ್ಲಿ ಬಯಲಾಗುತ್ತವೆ.

ಇಲ್ಲಿ ನನಗೆ ಮತ್ತೊಬ್ಬ ಗಾಯಕಿ ನೆನಪಾಗುತ್ತಾಳೆ. ಅವಳ ಹೆಸರು ಬೇಗಂ ಅಖ್ತರ್. ಠುಮ್ರಿ ಸಾಮ್ರಾಜ್ಞಿ ಎಂದೇ ಹೆಸರಾಗಿರುವ ಬೇಗಂ ಅಖ್ತರ್ ಎಂಬ ಐತಿಹ್ಯ ಹಾಡಿರುವ ಒಂದು ಹೋರಿ ಇಲ್ಲಿದೆ.

"ಕೌನ್ ತರಾಹ ಸೆ ತುಮ ಖೇಲತ ಹೋಲೀ ರೆ"
"ಎಂತಹ ಹೋಳಿಯಾಟ ಮಾರಾಯಾ ನಿನ್ನದು" ಆರೋಪಿಸುವ ಗೋಪಿಕೆಯ ಹಾಡು ಇದು.

"ಗಾಲೀ ಮೈ ದೂಂಗಿ, ತೋಸೆ ನಾ ಢರೂಂಗಿ
ದೇಖೋ ಲಲ್ಲಾ ಮೋರೀ..."
ಎಂದು ಎಚ್ಚರಿಸುತ್ತ ಹೋಲಿಯಾಡುವ ಗೋಪಿಕೆಯ ಆಗ್ರಹವನ್ನು ಬೇಗಂ ಅಖ್ತರ್ ಇಲ್ಲಿ ಅಮರಗೊಳಿಸುತ್ತಾಳೆ.
ವಾಹ್!

ಹೋಲೀ ಹೈ!
ಹೋಲೀ ನಿಮ್ಮೆಲ್ಲರ ಬದುಕಿನಲ್ಲೂ ಬಣ್ಣ ಚೆಲ್ಲಲಿ.

ಫೆಬ್ರವರಿ 27, 2009

ಬಿನಾಕಾ ಬೊಂಬೆಗಳ ಮಧುರ ನೆನಪು


ಒಂದಾನೊಂದು ಕಾಲದಲ್ಲಿ ಬಿನಾಕಾ ಎಂಬ ಹಲ್ಲುಜ್ಜುವ ಪೇಸ್ಟು ಜನಪ್ರಿಯವಾಗಿದ್ದಾಗ ಪ್ರತೀ ಟ್ಯೂಬಿನ ಜೊತೆಗೊಂದು ಅವರೆಕಾಳಿಗಿಂತ ಕೊಂಚ ದೊಡ್ಡ ಗಾತ್ರದ ಗಟ್ಟಿ ಪ್ಲಾಸ್ಟಿಕ್ಕಿನ ಬೊಂಬೆಗಳನ್ನು ಉಚಿತವಾಗಿ ಕೊಡುತ್ತಿದ್ದರು. ಈ ಪುಟಾಣಿ ಬೊಂಬೆಗಳನ್ನು ಪಡೆಯಲು ನಾನೆಷ್ಟು ಉತ್ಸುಕನಾಗಿರುತ್ತಿದ್ದೆ ಎನ್ನುವುದನ್ನು ಯೋಚಿಸಿದಾಗ ಇಂದಿಗೂ ರೋಮಾಂಚನವಾಗುತ್ತದೆ. ಬಹುತೇಕ ಈ ಬೊಂಬೆಗಳು ಪ್ರಾಣಿಗಳ ರೂಪದಲ್ಲೇ ಇರುತ್ತಿದ್ದುದು ನೆನಪು. ಆ ಬೊಂಬೆಯನ್ನು ನನ್ನ ಕಿಸೆಯಲ್ಲೇ ಇಟ್ಟು, ಆಗಾಗ್ಗೆ ಹೊರತೆಗೆದು ಮುಟ್ಟಿ ನೋಡಿ ಪುಳಕಿತನಾಗುವುದು ನನ್ನ ಮೆಚ್ಚಿನ ಅಭ್ಯಾಸಗಳಲ್ಲೊಂದಾಗಿತ್ತು.

ನಾನು ಚಿಕ್ಕಂದಿನಲ್ಲಿ ಕೊಂಚ ಸಂಕೋಚದವನಾಗಿದ್ದೆ. ಒಂದು ಬಾರಿ ನಾವೆಲ್ಲ ಮನೆ ಮಂದಿ, ಸಂಬಂಧಿಯೊಬ್ಬರ ಮನೆಗೆ ಹೋಗಿದ್ದೆವು. ಅಲ್ಲೇನೋ ವಿಶೇಷವಿದ್ದಿರಬಹುದು, ಮನೆ ತುಂಬಾ ಜನವೋ ಜನ. ನಮ್ಮ ತಾಯಿ ಅದಾಗಲೇ ನಮ್ಮನ್ನು ಹೊರಗೆ ಆಡಲು ಬಿಟ್ಟು ಒಳ ಮನೆ ಸೇರಿ ಆಗಿತ್ತು. ನಾನು ಅಲ್ಲೇ ವೆರಾಂದಾದಲ್ಲಿ ಸುಮ್ಮನೆ ಕುಳಿತುಕೊಂಡಿದ್ದೆ. ಹಿರಿಯರೆಲ್ಲ ಆಸೀನರಾಗಿ ಮಾತುಕತೆಯಲ್ಲಿ ತೊಡಗಿದ್ದರು. ಒಬ್ಬ ಹಿರಿಯರು ಕುಳಿತುಕೊಂಡಿದ್ದ ದೊಡ್ಡ ಆರಾಮ ಖುರ್ಚಿ ನನ್ನ ಮನ ಸೆಳೆದಿತ್ತು. ಅದರಲ್ಲೊಮ್ಮೆ ಕುಳಿತುಕೊಳ್ಳಬೇಕೆಂಬ ಹಂಬಲ ಕಾಡತೊಡಗಿತ್ತು.

ಬಹುಶ ಆರತಿ ಸಮಯವಿದ್ದಿರಬಹುದು ಒಮ್ಮೆಲೇ ಹಿರಿಯರೆಲ್ಲ ಎದ್ದು ಒಳಹೋದರು. ಅಲ್ಲಿಯವರೆಗೆ ಗಿಜಿಗುಡುತ್ತಿದ್ದ ವೆರಾಂಡ ಒಮ್ಮೆಲೇ ಖಾಲಿಯಾಯಿತು. ಅಂತೆಯೇ ಆ ಆರಾಮ ಖುರ್ಚಿಯೂ ಕೂಡ. ನಾನು ಚಕ್ಕನೆದ್ದು ಲಗುಬಗೆಯಿಂದ ಧಾವಿಸಿ ಆ ಆರಾಮ ಕುರ್ಚಿಯನ್ನೇರಿ ಕುಳಿತುಕೊಂಡೆ. ಅಹೋ ಎಂತಹ ವಿಶಾಲ ಕುರ್ಚಿಯದು. ಎಷ್ಟು ಹಿಂದೆ ಜಾರಿದರೂ ಬೆನ್ನು ಒರಗಣೆಗೆ ನಿಲುಕದು. ಈಜು ಫಲಕದಂತೆ ಮುಂದಕ್ಕೆ ಚಾಚಿಕೊಂಡ ಆ ಎರಡು ಬಾಹುಗಳೋ ಅದರ ರನ್ ವೇ ಯಂತಹ ನುಣುಪು ಮೈಯಿಂದ ಕಂಗೊಳಿಸುತ್ತಿದ್ದವು. ಈ ಸುಖದ ಸನ್ನಿವೇಶದಲ್ಲಿ ನನ್ನ ಜೇಬಿನೋಳಗಿದ್ದ ಆ ಪುಟಾಣಿ ಬಿನಾಕಾ "ಖಡ್ಗಮೃಗ" ಹೊರಬಂದು ಈ ನುಣುಪಾದ ರನ್ ವೇ ಮೇಲೆ ಜಾರತೊಡಗಿತು. ತನ್ನ ಗಡಸು ಖುರಗಳಿಂದ ಕಾಲು ಕೆದರಿ, ಮೂತಿ ಕೆಳಗೊಡ್ಡಿ ಖಡ್ಗವನ್ನು ಮುಂದಕ್ಕೊತ್ತಿ ವೇಗವಾಗಿ ಆ ವಿಶಾಲ ಆರಾಮ ಖುರ್ಚಿಯ ಯೋಜನ ಬಾಹುಗಳ ಮೇಲೆ ಓಡಾಡತೊಡಗಿತು.

"ಏಳು ಮರಿ ಅಜ್ಜನಿಗೆ ಕುಳಿತುಕೊಳ್ಳಲು ಬಿಡು" ಎಂದಾಗ ನಾನು ಇಹಕ್ಕವತರಿಸಿದೆ. ಆ ಇಳಿಯುವ ಗಡಿಬಿಡಿಯಲ್ಲಿ ನನ್ನ ರೈನೋ ಪುತುಕ್ಕನೆ ಜಾರಿ ಆ ವಿಶಾಲವಾದ ಖುರ್ಚಿಯಲ್ಲೇಲ್ಲೋ ಬಿದ್ದು ಅಂತರ್ಧಾನವಾಯಿತು. ನಾನು ಅಜ್ಜನಿಗೆ ಜಾಗ ಬಿಟ್ಟು ಅಲ್ಲೇ ಅನತಿ ದೂರದಲ್ಲಿದ್ದು ಖುರ್ಚಿಯ ಮೇಲೆ ಕಣ್ಣಿಟ್ಟೆ ಕಾಯತೊಡಗಿದೆ. ಇವರೆಲ್ಲ ಇನ್ನೊಂದು ಬಾರಿ ಎದ್ದು ಹೋದಾಗ ರೈನೋವನ್ನು ಎತ್ತಿಕೊಳ್ಳುವುದು ನನ್ನ ಹವಣಿಕೆಯಾಗಿತ್ತು.

ಸ್ವಲ್ಪ ಹೊತ್ತಿನ ಬಳಿಕ "ಹೋ ಇದಾರದು ರೈನೋ, ಬಿನಾಕ ರೈನೋ" ಎಂದು ಉದ್ಗರಿಸಿದರು ಆ ಅಜ್ಜ. ನನಗೆ ಅದು ನನ್ನದು ಎನ್ನಲು ಸಂಕೋಚ. ಸುಮ್ಮನಿದ್ದೆ. ಅಜ್ಜ ಮತ್ತೆ ಅದನ್ನು ಖುರ್ಚಿಯೊಳಗೆ ಇಟ್ಟರು. ಬಹುಶ ಆ ಬಾಹುಗಳ ಕೆಳಗಿನ ಚೌಕಟ್ಟಿನೊಳಗೆ ಆಯಕಟ್ಟಿನ ಜಾಗದಲ್ಲಿ ಅದು ನುಸುಳಿರಬೇಕು. ಇರಲಿ ಆಮೇಲೆ ತೆಗೆದುಕೊಂಡರಾಯಿತು ಎಂದು ಸುಮ್ಮನಾದೆ. ಕೊಂಚ ಸಮಯದ ಬಳಿಕ ಅಜ್ಜ ಖುರ್ಚಿ ಬಿಟ್ಟೆದ್ದಾಗ ಮತ್ತೆ ಖುರ್ಚಿಯನ್ನೇರಿ ನನ್ನ ರೈನೋವನ್ನು ಹುಡುಕತೊಡಗಿದೆ. ಅಜ್ಜನ ಕಣ್ಣಿಗೆ ಸಲೀಸಾಗಿ ಬಿದ್ದ ರೈನೋ ನನ್ನೊಡನೆ ಯಾಕೋ ಕಣ್ಣು ಮುಚ್ಚಾಲೆಯಾಡುತ್ತಿತ್ತು. ಬಹುಶ ಅದು ಯಾವುದೋ ಒಂದು ಕೋನದಿಂದ ಮಾತ್ರ ಗೋಚರವಾಗುತ್ತಿದ್ದಿರಬೇಕು. ಎಷ್ಟು ಹುಡುಕಿದರೂ ನನ್ನ ಕಣ್ಣಿಗೆ ಬೀಳಲಿಲ್ಲ.

"ಏಳು ಮರಿ ಆಂಟಿಗೆ ಜಾಗ ಬಿಡು" ಅಷ್ಟರಲ್ಲಾಗಲೇ ಧಡೂತಿ ಮಹಿಳೆಯೊಬ್ಬರು ಆ ಖುರ್ಚಿಗೆಂದೆ ಹೇಳಿದಂತಿದ್ದ ವಿಶಾಲ ಕಾಯವನ್ನು ಹೊತ್ತು ಬಂದಾಗ ನಾನು ಮತ್ತೆ ಜಾಗ ಬಿಡಬೇಕಾಯಿತು. ಆ ಮಹಿಳೆಯ ಜೊತೆಗೊಂದು ಪುಟಾಣಿ ಹುಡುಗಿಯೂ ಇತ್ತು. ನಾನು ಮತ್ತೆ ನನ್ನ ಮೂಲಸ್ಥಾನವನ್ನು ಗ್ರಹಿಸಬೇಕಾಯಿತು. ನನಗೆ ಜಪ್ಪಯ್ಯ ಅಂದರೂ ಕಣ್ಣಿಗೆ ಕಾಣದಿದ್ದ ನನ್ನ ರೈನೋ ಆ ಮಹಿಳೆಗೆ ಕಂಡಿತ್ತು. "ಹೋ ನೋಡು ಮರಿ ಬಿನಾಕ ರೈನೋ, ಎಷ್ಟು ಚಂದ" ಎನ್ನುತ್ತಾ ಆ ಮಹಿಳೆ ನನ್ನ ಪ್ರಾಣಪ್ರಿಯ ರೈನೋವನ್ನೆತ್ತಿ ತನ್ನ ಪುಟಾಣಿಯ ಕೈಗಿತ್ತು ಕೃತಾರ್ಥವಾಯಿತು.ಮತ್ತೆ ನನ್ನ ಸಂಕೋಚ ನನ್ನನ್ನು ಕಟ್ಟಿ ಹಾಕಿತ್ತು. ನಾನು ಅಳುತ್ತಾ ಹೊರಗೆ ಓಡಿದೆ. ಬಹುಶ ನಾನು ಅತ್ತದ್ದು ಕೂಡ ಅಲ್ಲಿದ್ದವರ ಗಮನಕ್ಕೆ ಬಂದಿರಲಿಕ್ಕಿಲ್ಲ.

ಇದೆಲ್ಲ ಯೋಚಿಸಿದರೆ ಈಗ ನಗು ಬರುತ್ತದೆ. ಆದರೆ ಆ ಪುಟಾಣಿ ಬೊಂಬೆಗಳನ್ನು ನಾವೆಷ್ಟು ಹಚ್ಚಿಕೊಂಡಿದ್ದೆವು ಎನ್ನುವುದು ನೆನಪಾಗಿ ಪುಳಕವಾಗುತ್ತದೆ.

ಮೆಕ್ ಡೊನಾಲ್ಡ್ ಎಂಬ ಅಮೇರಿಕನ್ ತಿನಿಸುಗಳನ್ನು ಮಾರುವ ವಿಶ್ವ ಜಾಲ ಎಲ್ಲರಿಗೂ ಗೊತ್ತು. ಮೆಕ್ ಡೊನಾಲ್ಡ್ ಅದರ ಹಲವು ಉತ್ಪನ್ನಗಳ ಪಟ್ಟಿಯಲ್ಲಿ "ಹ್ಯಾಪಿ ಮೀಲ್" ಎನ್ನುವ ಒಂದು ಗಂಟು ಕೂಡ ಮಾರುತ್ತದೆ. ಈ ಗಂಟಿನೊಳಗೆ ನಿಮ್ಮ ಆಯ್ಕೆಯ ಬರ್ಗರ್, ನಾಲ್ಕು ಹುರಿದ ಆಲೂ ಬೆರಳುಗಳು, ಒಂದು ಗ್ಲಾಸು ಕೋಲಾ ಮತ್ತು ಒಂದು ಆಟಿಕೆಯನ್ನು ನೀಡುತ್ತದೆ. ಆಟಿಕೆ "ಹ್ಯಾಪಿ ಮೀಲ್" ಜೋತೆಗಷ್ಟೇ ಲಭ್ಯ. ಆದರೆ ಅದು ಉಚಿತವಲ್ಲ. ಅದಕ್ಕೂ ನೀವು ಮೂವತ್ತಾರು ರೂಪಾಯಿ ತೆರಬೇಕು. ಈ ಒಟ್ಟು ಗಂಟಿನ ಬೆಲೆ ನಿಮ್ಮ ಆಯ್ಕೆಗೆ ಹೊಂದಿಕೊಂಡು ೬೫ ರಿಂದ ೧೦೯ ರೂಪಾಯಿವರೆಗೆ ಮೌಲ್ಯ ಹೊಂದಿದೆ.

ಈ "ಹ್ಯಾಪಿ ಮೀಲ್" ಆಟಿಕೆಯದ್ದೆ ಒಂದು ವಿಶೇಷ. ಮಕ್ಕಳ ಸಿನೆಮಾ ನಿರ್ಮಾಪಕರು ತಮ್ಮ ಸಿನೆಮಾದ ಪ್ರಚಾರಕ್ಕಾಗಿ ಈ ಆಟಿಕೆಗಳನ್ನು ಪ್ರಾಯೋಜಿಸುತ್ತಾರೆ. ಆ ಸಿನೆಮಾದ ಪಾತ್ರಗಳನ್ನೇ ಆಟಿಕೆಗಳನ್ನಾಗಿ ಮಾಡಿ "ಹ್ಯಾಪಿ ಮೀಲ್" ಜೊತೆಗೆ ಕಟ್ಟಿ ಬಿಡುತ್ತಾರೆ. ಹೆಚ್ಚಾಗಿ ಚೀನಾದಲ್ಲೇ ನಿರ್ಮಾಣವಾಗುವ ಈ ಆಟಿಕೆಗಳ ಗುಣ ಮತ್ತ ಅತ್ಯುತ್ತಮ. ಫಿನಿಷಿಂಗ್ ಕೂಡ ನಾಜೂಕು.

ಪ್ರತೀ ವಾರವೂ ಬೇರೆ ಬೇರೆ ಆಟಿಕೆಗಳು ಬರುವುದರಿಂದ ವಾರಕ್ಕೊಮ್ಮೆ "ಹ್ಯಾಪಿ ಮೀಲ್" ಕೊಳ್ಳುವ ಹವ್ಯಾಸ ಈಗ ನಗರದಲ್ಲಿ ಬೆಳೆದಿದೆ. ನಾನು ಇರುವುದು ದೆಹಲಿಯಲ್ಲಿ. ಅಲ್ಲಿ ಊರಲ್ಲಿ ನನ್ನಾಕೆಯೊಡನೆ ಬೆಳೆಯುತ್ತಿರುವ ನನ್ನ ಮಗುವಿಗಾಗಿ ನಾನು ಆಗಾಗ "ಹ್ಯಾಪಿ ಮೀಲ್" ಕೊಳ್ಳುತ್ತೇನೆ. ಬರ್ಗರ್ ತಿಂದು ರೂಢಿಯಾಗಿದೆ. ಆದರೆ ಆಟಿಕೆ ಕೈಗೆ ಬಂದಾಗ ಮತ್ತೆ ಬಿನಾಕಾ ಬೊಂಬೆಗಳ ನೆನಪಾಗುತ್ತದೆ. ಮೆಕ್ ಆಟಿಕೆಯ ಪ್ಲಾಸ್ಟಿಕ್ ಕವರು ಬಿಚ್ಚದೆ ಹಾಗೆಯೇ ಇಡುತ್ತೇನೆ. ಮುಂದೊಮ್ಮೆ ಊರಿಗೆ ಹೋದಾಗ ನನ್ನ ಮಗನ ಕೈಗಿಡುತ್ತೇನೆ. ಅವನು ಆ ಹೊಚ್ಚ ಹೊಸ ಆಟಿಕೆಯ ಪ್ಲಾಸ್ಟಿಕ್ ಬಿಚ್ಚುವುದನ್ನು, ಕಣ್ಣರಳಿಸಿ ಆಟಿಕೆಯನ್ನು ಸವರುವುದನ್ನು ನೋಡುತ್ತಾ ಮೈಮರೆಯುತ್ತೇನೆ.

ಫೆಬ್ರವರಿ 26, 2009

ರೆಹಮಾನ ಎಂಬ ಕೌತುಕ


ಕಣಿವೆಯಾಳದಲ್ಲಿ ನದಿಯ ಸೆರಗಿನಲ್ಲಿ ಹರಿಗೋಲು ಮೀಟುವ ನಾವಿಗ

ಯೇಲೇಲೋ.. ಯೇಲೇ... ಯೇಲೇಲೋ
ಯೇಲೇ ಲೇ ಲೇಲೇ ಯೇಲೇ ಯೇಲೇ ಯೇಲೇಲೋ

ಎಂದು ನಾನು ಬರೆದಷ್ಟರಲ್ಲೇ ಅದು ನಿಮ್ಮೊಳಗೆ ಹಾಡಾಗುವುದಿಲ್ಲ. ರೆಹಮಾನ ಎಂಬ ಕೌತುಕ "ಚಿನ್ನ ಚಿನ್ನ ಆಸೈ" ಎನ್ನುವ ಹಾಡಿನೊಳಗೆ ಅದನ್ನು ನವಿರಾಗಿ ಎಳೆತಂದಾಗ... ಎಂದು ಹೇಳ ತೊಡಗುವಷ್ಟರಲ್ಲಾಗಲೇ ಅದು ನಿಮ್ಮೊಳಗೆ ಅನುರಣಿಸತೊಡಗುತ್ತದೆ.

ನಾನೇನು ಮಾಡಬಹುದು. ರೆಹಮಾನನಿಗೊಂದು ಅಭಿನಂದನೆ ಹೇಳಬೇಕು. ನನಗೆ ಮೆಚ್ಚುಗೆಯಾಗುವ ಹಾಡನ್ನು ಕನ್ನಡಕ್ಕೆ ಭಾಷಾಂತರ ಮಾಡೋಣ ಎಂದರೆ, ಅವನ ಸಂಗೀತದಲ್ಲಿ ನನಗೆ ಇದುವರೆಗೆ ತುಂಬಾ ಇಷ್ಟವಾದ ಭಾಗಗಳಲ್ಲಿ ಸಾಹಿತ್ಯವೇ ಇಲ್ಲ.

ಗಾರ್ಡನ್ ವರೇಲಿ ಎಂಬ ಸೀರೆಯ ಜಾಹಿರಾತು ನೆನಪಿದೆ. ದೋಣಿಯಲ್ಲಿ ಕುಳಿತು ಸಾಗುವ ನೀರೆಯೋಬ್ಬಳು ತನ್ನ ನುಣುಪಾದ ತೋಳನ್ನು ಚಾಚಿ ನವಿರುಬೆರಳುಗಳನ್ನು ನೀರಲ್ಲಾಡಿಸುವ ದೃಶ್ಯಕ್ಕೆ ಇದ್ದ ಸಂಗೀತಕ್ಕೆ ಏನು ಸಾಹಿತ್ಯವಿತ್ತು? "ಕಾದಲ್ ರೋಜಾವೆ" ಹಾಡಿನ ಮುನ್ನುಡಿಯಂತಹ ಟ್ಯೂನಿಗೆ ಪದ ಕುಸುರಿ ಮಾಡಿ ಗೆಲ್ಲಲು ಸಾಧ್ಯವೇ.? ಟೈಟನ್ ಗಡಿಯಾರ ಕ್ಕಿಂತ ಅದರ ಜಾಹಿರಾತಿನ ಟ್ಯೂನೇ ಹೆಚ್ಚು ಪ್ರಸಿದ್ಧವೇನೋ ಎಂದನಿಸುತ್ತದೆ. ಏರ್ಟೆಲ್ ಎಕ್ಸ್ಪ್ರೆಸ್ ಯುವರ್ಸೆಲ್ಫ್ ಎನ್ನುವ ಜಾಹಿರಾತಿನ ಸಂಗೀತ ಪ್ರತಿಬಾರಿಯೂ ನನ್ನ ಕಣ್ಣಾಲಿಗಳನ್ನು ಮಡುಗಟ್ಟಿಸಿದ್ದು ಮರೆಯಲು ಸಾಧ್ಯವೇ?. ಸಾಗರದಲೆಗಳಿಗೆ ಸಂಗೀತ ಕಟ್ಟಿದ "ಉಯಿರೆ" ಹಾಡಿನ ಧ್ವನಿಯಿಂದ ಆ ಹಾಡಿನ ಪದಗಳು ಧನ್ಯವಾದವು.

ಹಲವು ದಿಗ್ಗಜರು ರೆಹಮಾನನ ಸಂಗೀತಕ್ಕೆ ಪದ್ಯ ಕಟ್ಟಿರಬಹುದು, ಹಲವು ದಿಗ್ಗಜರ ಪದ್ಯಕ್ಕೆ ರೆಹಮಾನ ಸಂಗೀತ ಕಟ್ಟಿರಬಹುದು ಆದರೆ ಎರಡೂ ಕಡೆಯಲ್ಲೂ ಗೆದ್ದದ್ದು ರೆಹಮಾನನ ಸಂಗೀತವೇ. ಇನ್ನು... ರೆಹಮಾನನ ಧ್ವನಿಗಳಿಗೆ ಪದಕೂಡಿಸುವುದು ಎಷ್ಟು ವ್ಯರ್ಥವೋ ಅವನ ಸಂಗೀತ ಆಲಿಸುವ ಅನುಭವವನ್ನು ಪದಗಳಲ್ಲಿ ಹಿಡಿದಿಡುವುದೂ ಅಷ್ಟೇ ವ್ಯರ್ಥ.

ಇಗೋ ಇದು ರೆಹಮಾನನ ಅತ್ಯುತ್ತಮ ಸಂಗೀತ ಎಂದು ಹೇಳುವಷ್ಟರಲ್ಲೇ ಅದಕ್ಕೂ ಮಿಗಿಲೆನ್ನಿಸುವ ಮತ್ತೊಂದನ್ನು ಉಣಿಸುತ್ತಾ ನನ್ನ ಬದುಕಿನ ಅಸಂಖ್ಯ ಕ್ಷಣಗಳನ್ನು ಧನ್ಯವಾಗಿಸಿದ ರೆಹಮಾನನಿಗೆ ಅಭಿನಂದನೆಗಳು. ಆಸ್ಕರ್ ಪ್ರಶಸ್ತಿ ಒಂದು ನೆವ ಅಷ್ಟೇ. ರೆಹಮಾನನೇ ಒಂದು ಪ್ರಶಸ್ತಿ ಆಗುವ ದಿನಗಳು ದೂರವಿಲ್ಲ.

ಫೆಬ್ರವರಿ 16, 2009

ಇಷ್ಟಾರ್, ಎಲ್ಲಮ್ಮ ಮತ್ತು ರೇಣುಕಾ ಚೌಧುರಿ

ಮೊನ್ನೆ ತಾನೆ ಸಂಪದದಲ್ಲಿ ಅನಿವಾಸಿ ಜೊತೆಗೆ ಚರ್ಚೆ ಮಾಡಿದ್ದಿನ್ನೂ ಹಸಿಯಾಗಿದೆ.

ಕೆಂಡಸಂಪಿಗೆಯಲ್ಲಿ ಅನಂತಮೂರ್ತಿ ಅನುವಾದಿಸಿದ "ಡೆನಿಸ್ ಲೆವೆರೆತಾವ್" ಳ ಕವನ "The Song of Ishtar" ಪ್ರಕಟವಾಗಿತ್ತು. ಅದನ್ನು ಉಲ್ಲೇಖಿಸಿ "ಅನಿವಾಸಿ" ಸಂಪದದಲ್ಲಿ ಸಣ್ಣಗೆ ವಿಮರ್ಶೆ ಮಾಡಿ ಅವರದೇ ಅನುವಾದವೊಂದನ್ನು ಪ್ರಕಟಿಸಿದರು.

ನನಗೂ ಹುರುಪೂ ಮೂಡಿ ನನ್ನದೂ ಒಂದು ಅನುವಾದ ಅಲ್ಲೇ ಪ್ರತಿಕ್ರಿಯೆಯಲ್ಲಿ ಪ್ರಕಟಿಸಿದೆ. ಅದರ ಮುಂದೊಂದು ಚರ್ಚೆ ಹುಟ್ಟಿ ನನ್ನ ಅನುವಾದವನ್ನು ವಿವರಿಸಬೇಕಾಯಿತು. ನನ್ನ ಅನುವಾದ, ಮೂಲ ಮತ್ತು ವಿವರಣೆ ಇಲ್ಲಿ ಕೊಟ್ಟಿದ್ದೇನೆ.

Song for Ishtar
by Denise Levertov

The moon is a sow
and grunts in my throat
Her great shining shines through me
so the mud of my hollow gleams
and breaks in silver bubbles

She is a sow
and I a pig and a poet

When she opens her white
lips to devour me I bite back
and laughter rocks the moon

In the black of desire
we rock and grunt, grunt and
shine

ಅನಿವಾಸಿ, ಅನಿಲ ಜೋಷಿ, ಅನಂತ ಮೂರ್ತಿಯವರನ್ನು ನೆನಪಿಸಿ.

ನಿಮ್ಮ ಕವನಗಳೆಲ್ಲ ಚೆನ್ನಾಗಿವೆ.
ನಾನು ಬರೆದದ್ದು ಎಲ್ಲಮ್ಮನಿಗೆಂದು. ಎಲ್ಲಮ್ಮ ನಮ್ಮ ನಾಡಿನ ಇಷ್ಟಾರ್ ಅಲ್ಲವೇ? ನನ್ನದು ಭಾವವೂ ಬೇರೆ ಶಬ್ದ ಶಿಲ್ಪವೂ ಬೇರೆ. ಮೂಲ ಕವನಕ್ಕೂ ನನ್ನ ಕವನಕ್ಕೂ ಯಾವುದೇ ಸಂಬಂಧವಿದ್ದರೆ ಅದು ಎಲ್ಲಮ್ಮಳನ್ನೂ ಇಷ್ಟಾರ್ ಳನ್ನೂ ಸೇವಿಸುವ ಜೋಗತಿಯರ ಸಾಮಾಜಿಕ ಜೀತ ಅಷ್ಟೆ. (ಡೆನಿಸ್ ಬರೆದ ಶಬ್ದಗಳಲ್ಲಿ ನಾನು ಹೆಕ್ಕಿದ್ದು ಇದು)

ಎಲ್ಲಮ್ಮನಿಗೊಂದು ಹಾಡು

ನಿನ್ನ ಸವತಿ ಚಂದ್ರಿ
ಹೆಣ್ಣು ಹಂದಿ
ನನ್ನೊಳಗೆ ಇಳಿದು ಕೆಸರಾಡಿ
ರಾಡಿ ಎಬ್ಬಿಸುವಾಗ
ನನ್ನ ಹುಸಿ ಪೌರುಷದ
ಸ್ಖಲನ ತಡೆಯಲಾರದೆ
ಒದರುತ್ತೇನೆ

ಚಂದ್ರಿ ಹಂದಿ
ನನ್ನನ್ನೂ ಹಂದಿಯಾಗಿಸಿ
ಕವಿತೆ ಸ್ಫುರಿಸುತ್ತಾಳೆ

ಅವಳು ಆವರಿಸುವಾಗ
ನಾನು ಅಪ್ಪುತ್ತೇನೆ
ಚೆಲ್ಲು ನಗು ಬ್ರಹ್ಮಾಂಡವೆಲ್ಲ
ಅನುರಣಿಸುತ್ತದೆ

ಪೋಲಿ ಹುರುಪಿನುಯ್ಯಾಲೆಯಲ್ಲಿ
ಸ್ಖಲಿಸುತ್ತಾ, ಓಲಾಡುತ್ತಾ
ಅರಚುತ್ತೇವೆ..
ಎಲ್ಲಮ್ಮಾ ಉಧೋ ಉಧೋ

ಅನಿವಾಸಿ ಅವರ ಪ್ರತಿಕ್ರಿಯೆ:

ಗುರುಬಾಳಿಗರೆ, ನಿಮ್ಮ ಅನುವಾದಕ್ಕೆ ಥ್ಯಾಂಕ್ಸ್.
ಹೌದು ನಿಮ್ಮ ಪದ್ಯದ ಭಾವ ಮತ್ತು ಅದು ಮೂಡಿರುವ ರೀತಿ ತುಂಬಾ ಬೇರೆಯೇ. ನನಗೆ ಕುತೂಹಲ ಮೂಡಿದ್ದು ಮೂಲದ ಪ್ಯಾರಾಗಳನ್ನು ನೀವು ಉಳಿಸಿಕೊಂಡಿದ್ದು. ಯಾಕೆ ಹಾಗೆ ಮಾಡಿದಿರಿ ಎಂಬುದು.
"ಕೆಸರಾಡಿ/ರಾಡಿಯೆಬ್ಬಿಸಿ" ಇಷ್ಟವಾಯಿತು.
"ಹುಸಿ ಪೌರುಷ" ತುಸು ಕ್ಲೀಷೆಯಾಗಿ ನಮ್ಮನ್ನಲ್ಲಿ ನಿಲ್ಲಿಸುವುದಿಲ್ಲ... [mud of my hallowದ ಹಾಗೆ! ]
"ನನ್ನನ್ನೂ ಹಂದಿಯಾಗಿಸಿ" ... passive ಅನಿಸಿತು. "ನಾನೂ ಹಂದಿ" ಹೆಚ್ಚು ಪರಿಣಾಮ ಬೀರುತ್ತಿತ್ತೇನೋ!
ಪೋಲಿ ಮತ್ತು ಸ್ಖಲನವೂ ಹೆಚ್ಚು ಕೆಲಸ ಮಾಡುವುದಿಲ್ಲ ಅನಿಸಿತು. ಮೂಲ ಪದ್ಯದ ಚಂದದಲ್ಲಿ ಅಂತಹದು ಇಲ್ಲವೇ ಇಲ್ಲವೆನ್ನುವ ಹಾಗಿದೆ.
ಎಲ್ಲಮ್ಮನ ಬಗ್ಗೆಯಾದ್ದರಿಂದ, ಹಂದಿ ಚಂದ್ರನ ಪ್ರತಿಮೆಯನ್ನೂ ಬಿಡಬಹುದಿತ್ತ? ಬೇರೇನು ಬರಬಹುದಿತ್ತು? ಮರಳು, ನೀರು? ಗೊತ್ತಿಲ್ಲ
ನನಗೆ ಅನುವಾದಿಸುವಾಗ ಸಾಂಸ್ಕೃತಿಕ ದೂರವನ್ನು ಉಳಿಸಿಕೊಳ್ಳಬೇಕು ಅನಿಸುತ್ತದೆ. ನಿಮಗೆ ಇದನ್ನು ಎಲ್ಲಮ್ಮನಿಗೆ ತರುವುದು ಯಾಕೆ ಮುಖ್ಯವೆನಿಸಿತು?

ನನ್ನ ವಿವರಣೆ:
>>>>
ಎಲ್ಲಮ್ಮ ಇಸ್ಟಾರ್ ನಂತೆ ಜೋಗತಿಯರ ದೇವತೆ ಆಗಿರುವುದು ಎಲ್ಲಮ್ಮನನ್ನು ಆರೋಪಿಸಲು ಕಾರಣ. ಹಂದಿಗಳ ಪ್ರತಿಮೆ ಎಲ್ಲಮ್ಮನಿಗೆ "ಎಮ್ಮೆ - ಕೋಣ"ವಾಗಿ ಬದಲಾಗಿದ್ದಿದ್ದರೆ ಹೆಚ್ಚು ಸಲ್ಲುತ್ತಿತ್ತೇನೋ.

ಇದೊಂದು ಪ್ರಯೋಗ ಮಾತ್ರ. ಪೂರ್ಣ ಕಾವ್ಯ ಕ್ರಿಯೆ ಅಲ್ಲ. ಚರಣಗಳು ಪ್ರಚೋದನೆಗೆ ಮೂಲವಾಗಿರುವುದರಿಂದ ಅದನ್ನು ಉಳಿಸಿಕೊಂಡೆ.

ಮೊದಲ ಪಾರಾದಲ್ಲಿ ನೀವುಗಳು ಬರೆದದ್ದಕ್ಕಿಂತ ಹೆಚ್ಚ್ಚಿನದೇನೋ ಧ್ವನಿಸುತ್ತಿರುವಂತೆ ನನಗನಿಸಿತು. ಒಟ್ಟು ಶಬ್ದಗಳನ್ನು ಒಡೆದು ಮತ್ತೆ ಕಟ್ಟಿ ಹೊಂದಿಸಿ ಬರೆದಾಗ ನನ್ನಲ್ಲಿ ಮೂಡಿದ ಭಾವ ತೀವ್ರವಾಗಿತ್ತು.

ಸೌ ಎನ್ನುವುದಕ್ಕೆ ಸಂವಾದಿ ಶಬ್ದ ನಮ್ಮಲ್ಲಿಲ್ಲ. "ಚೆನ್ನಾಗಿ ಸೊಕ್ಕಿದ ಹೆಣ್ಣು ಹಂದಿ" ಎನ್ನುವುದು ಬಹಳ ಹಿಂದೆ ಓದಿದ ನೆನಪು (ಇದು ನೆನಪಿರಲು ಕಾರಣ ಮದುಮಗಳಿಗೆ ಚಿ. ಸೌ. ಅಂತ ಬರೀತಾರಲ್ಲ ) . ಇದನ್ನು ಒರೆ ಹಚ್ಚಲು ನಾನು ಹೋಗಿಲ್ಲ.

and grunts in my throat
Her great shining shines through me
so the mud of my hollow gleams
and breaks in silver bubbles

ಇಲ್ಲಿ ಕ್ರಿಯೆ-ಪ್ರತಿಕ್ರಿಯೆ ನಡೆಯುತ್ತದೆ ಅಂತ ಕಂಡಿತು. ಹಂದಿ ಕ್ರಿಯೆ - ನನ್ನದು ಪ್ರತಿಕ್ರಿಯೆ. ಅವಳದು great shining ಆದರೆ ನನ್ನದು hollow gleams. ನನ್ನೊಳಗೆ ಅವಳ ಗ್ರೇಟ್ ಶೈನಿಂಗ್ shines through ಆಗುವಾಗ ನನ್ನ ಕೆಸರು ಒಡೆದು ಬೆಳ್ಳಿ ಗುಳ್ಳೆಗಳು ಏಳುತ್ತವೆ. ಇದರ ಭಾವವನ್ನಷ್ಟೇ ಗ್ರಹಿಸಿ ಮತ್ತೆ ಕವನ ಕಟ್ಟಿದರೆ... ಅವಳು,

ನನ್ನೊಳಗೆ ಇಳಿದು ಕೆಸರಾಡಿ
ರಾಡಿ ಎಬ್ಬಿಸುವಾಗ
ನನ್ನ ಹುಸಿ ಪೌರುಷದ
ಸ್ಖಲನ ತಡೆಯಲಾರದೆ
ಒದರುತ್ತೇನೆ

ಒಡೆಯುವುದು ಕೆಸರಲ್ಲ ನನ್ನ ಅಹಂಕಾರ. ಗಂಡು ದಯನೀಯವಾಗಿ ಸೋಲುವುದು ವಿಜ್ರಂಭಿಸುವ ಹೆಣ್ಣಿನೆದುರು. ಇದು ಹಾಸಿಗೆಗೆ ಸೀಮಿತವಲ್ಲ. ಆ ಸ್ಖಲನ, ಸೋಲು ತ್ವರಿತವೆ ಆಗಿರುತ್ತದೆ. ಅದನ್ನು ತಡೆಯುವುದು ಕಷ್ಟವೇ. ಅದಕ್ಕಾಗಿ ಒದರು, ಅರಚು, ಗುಟುರು ಎಲ್ಲವೂ.

ಇಲ್ಲಿ ಬಹಳ ತರ್ಕ ನಡೆಯಲಿಲ್ಲ. ಒಟ್ಟು ಭಾವ ಸ್ಫುರಣವಾಗಿ ಕೂಡಲೇ ಹೊರಹೊಮ್ಮಿದ ಕವನ.

ಇನ್ನು "ಪೋಲಿ" ಎನ್ನುವುದು ಬ್ಲಾಕ್ ಗೆ ಸಂವಾದಿಯಾಗಿ ನಾನು ಬಳಸಿದ್ದು. ಬ್ಲಾಕ್ ಆಫ್ ಡಿಸಾಯರ್, ಬ್ಲಾಕ್ ಮ್ಯಾಜಿಕ್ ನ ಬ್ಲಾಕ್ ಗಿಂತ ಹೆಚ್ಚು ಸೆನ್ಸುಅಸ್. ಅದು ಕಪ್ಪಲ್ಲ, ಕೆಟ್ಟದ್ದಲ್ಲ, ಎವಿಲ್ ಅಲ್ಲ, ಸಾಮಾಜಿಕವಾಗಿ ಟ್ಯಾಬೂ ಆಗಿದ್ದುಕೊಂಡು ಗುಟ್ಟಾಗಿ ಖುಷಿ ಕೊಡುವ ವಿಚಾರ. "ಛೀ ಪೋಲಿ" ಎಂದರೆ ಬೈಗುಳಲ್ಲ ಮೆಚ್ಚುಗೆ. ಕಾಳ, ಕತ್ತಲ ಎಲ್ಲ ಬರೆದಾಗ ಹೆಚ್ಚು ಕರಾಳ ಭಾವ ನೀಡುತ್ತದೆ.
ಕೊಲೆಗಡುಕನ ಡಿಸಾಯರ್ ಗೆ ಕಾಳ ಇಲ್ಲವೇ ಕರಾಳ ಬರೆದರೆ ಸಲ್ಲುತ್ತದೇನೋ. ಹೆಣ್ಣು ಕಾಳಿಯಾದಾಗ ಅವಳಲ್ಲಿ ಮಾಧುರ್ಯವಿಲ್ಲ. ಆ ಸಂಯೋಗದ ಉತ್ಕಟತೆ ಸಾಧ್ಯವಿಲ್ಲ.

ಆದಾಗ್ಯೂ...
ಡೆನಿಸ್ ಬರೆದ ಕವನ ನಮ್ಮೆಲ್ಲರ ಅನುವಾದಕ್ಕಿಂತ ಮೀರಿದ್ದನ್ನು ಹೇಳಲು ಹೊರಟಿದೆ ಎನ್ನುವುದು ದಟ್ಟವಾಗಿ ಕಾಡುತ್ತದೆ.

ನನಗೆ ಸಾಂಸ್ಕೃತಿಕವಾಗಿ ಮಿಳಿತಗೊನ್ಡರಷ್ಟೆ ಒಂದು ಅನುವಾದ ಸ್ಥಳೀಯವಾಗಿ ಸಲ್ಲಲು ಸಾಧ್ಯ ಎಂದು ಅನಿಸುತ್ತದೆ.>>>

ಇದು ಬರೆದು ಕೆಲವು ದಿನಗಳಾದವು. ನಿನ್ನೆ ಮೊನ್ನೆ ದೆಹಲಿಯಲ್ಲಿ ನಡೆದ ಕನ್ನಡ ಉತ್ಸವದಲ್ಲಿ ಒಂದು ಹಿಜಡಾಗಳ ಒಂದು ತಂಡ "ಹುಟ್ಟಿ ಬಂದೆ ಎಲ್ಲಮ್ಮನಾಗಿ, ನಿನ್ನ ಮದುವೆಯ ಮಾಡಿ ಕೊಟ್ಟಾರವ್ವ ಜಮದಗ್ನಿಗೆ" ಎಂದು ಕಿಚ್ಚ ನಗೆ ಅರಳಿಸಿ ಕುಣಿಯುವಾಗ ಒಂದು ಹಂತದಲ್ಲಿ ಯಾಕೋ ವಿಷಾದ ಮೂಡಿ ಕಣ್ಣು ತುಂಬಿತು.

ಇಂದು ಮೌನ ಕಣಿವೆ ಬ್ಲಾಗ್ ಓದಿದೆ ರೇಣುಕಾ ಚೌಧುರಿ ಎಂಬ ಅಗ್ನಿಪುತ್ರಿಯ ಬಗ್ಗೆ ಸುರಗಿ ಬರೆದಿದ್ದಾರೆ. ರೇಣುಕಾ ಎಂದರೆ ಎಲ್ಲಮ್ಮನ ಇನ್ನೊಂದು ಹೆಸರು ಎಂದು ನೆನಪಾಯಿತು.

ಇದನ್ನೆಲ್ಲಾ ಒಟ್ಟು ಮಾಡಿ ಬ್ಲಾಗ್ನಲ್ಲಿ ಹಾಕಲು ಪ್ರಚೋದಿಸಿದ ಮಾಯ್ಸರಿಗೂ ಥ್ಯಾಂಕ್ಸ್.

ಇಷ್ಟಾರ್ ಬಗ್ಗೆ ಒಂದಿಷ್ಟು.  

ಫೆಬ್ರವರಿ 11, 2009

ಮೀಸೆ ಹೊತ್ತ ಮುಖಗಳು

ಫ್ರೆಂಚ್ ಕತೆಗಾರ "ಗಿದ್ ಮೊಪಾಸ್ಸೊಂ" (ಕನ್ನಡಕ್ಕೆ "ಮೊಪಾಸ" ಎಂದು ಪ್ರಸಿದ್ಧ) ಬರೆದ ಕತೆ "ದಿ ಮುಸ್ಟಾಶ್"ನ ಅನುವಾದ.

ಸಾಲ್ಲೆಸ್ ಬಂಗಲೆ
ಜುಲೈ ೩೦, ೧೮೮೩

ಪ್ರೀತಿಯ ಲೂಸಿ,

ವಿಶೇಷ ಸುದ್ದಿಯೇನೂ ಇಲ್ಲ. ಹೊರಗೆ ಸುರಿಯುತ್ತಿರುವ ಮಳೆಯನ್ನು ನೋಡುತ್ತಾ ನಾವು ಡ್ರಾಯಿಂಗ್ ರೂಮ್ ನಲ್ಲೇ ಕಾಲ ಕಳೆಯುತ್ತಿದ್ದೇವೆ. ಈ ಚಿರಿಚಿರಿ ಮಳೆಯಲ್ಲಿ ಹೊರಗೆ ಹೋಗುವುದು ಸಾಧ್ಯವಿಲ್ಲ, ಹಾಗಾಗಿ ಇಲ್ಲೇ ಈ ನಾಟಕದ ಪ್ರಾಕ್ಟೀಸು ಶುರು ಹಚ್ಚಿದ್ದೇವೆ. ಎಂಥ ತಲೆಹರಟೆ ಮಾರಾಯ್ತಿ, ಜೀವನವೇ ಬಯಲಾಟ ಆಗಿರುವಾಗ ಈ ಜಗಲಿ ನಾಟಕ ಬೇರೆ ಕೇಡು. ಎಲ್ಲ ಬಲವಂತದ ಮಾಘಸ್ನಾನ. ಆ ಜೋಕುಗಳೋ, ಒಂದಕ್ಕೂ ನಗು ಬರುವುದಿಲ್ಲ. ಎಲ್ಲ ಕೃತಕ, ಖುಷಿ ಕೊಡದ, ಕಾಡು ಹರಟೆಗಳು. ನಿಜಕ್ಕೂ ಹೇಳಬೇಕೆಂದರೆ ಈ ಸಾಹಿತಿಗಳಿಗೆ ಸಮಾಜದ ಬಗ್ಗೆ ಎಂತದೂ ಗೊತ್ತಿಲ್ಲ. ನಮ್ಮ ನಾಟಕಕ್ಕೆ ಬೇಕಾದ ಪಾತ್ರಗಳು ಹೇಗೆ ಯೋಚಿಸಬೇಕು ಮತ್ತು ಮಾತನಾಡಬೇಕು ಅನ್ನೋ ವಿಷಯಾನೇ ಇವರಿಗೆ ಗೊತ್ತಿಲ್ಲ. ಇವರಿಗೆ ನಮ್ಮ ರೀತಿ ರಿವಾಜುಗಳ ಮೇಲೆ ಗೌರವ ಇರಬೇಕಂತಿಲ್ಲ, ಅವು ಏನು ಅಂತಲೇ ತಿಳಿದಿಲ್ಲ ಅಂದ್ರೆ ನನಗೆ ಸಹಿಸಲು ಸಾಧ್ಯ ಇಲ್ಲ. ತಮಾಷೆ ಮಾಡಬೇಕು ಅಂತ ಅನಿಸಿದರೆ ಒರಟು ಸಿಪಾಯಿಗಳು ಮಾಡ್ತಾರಲ್ಲ ಆ ತರ, ಇನ್ನು ಅವರುಗಳು ಹೇಳೋ ಜೋಕುಗಳು ಕೂಡ ೫೦ ವರ್ಷ ಹಳೆಯವು.

ಇರಲಿ, ನಾವು ನಾಟಕ ಪ್ರಾಕ್ಟೀಸ್ ಮಾಡ್ತಿದ್ದೇವೆ. ನಮ್ಮಲ್ಲಿ ನಾವು ಇಬ್ಬರೇ ಹೆಂಗಸರು ಇರುವುದರಿಂದ ನನ್ನ ಗಂಡನಿಗೆ ಕೂಡ ಒಂದು ಹೆಣ್ಣು ಪಾತ್ರ. ಹಾಗಾಗಿ ಮೀಸೆ ಬೋಳಿಸಿಕೊಂಡಿದ್ದಾರೆ. ಹೇಗೆ ಕಾಣ್ತಾರೆ ಅಂತ ನಿನಗೆ ಯೋಚಿಸ್ಲಿಕ್ಕೆ ಸಾಧ್ಯ ಇಲ್ಲ ಲೂಸೀ... ಮಾರಾಯ್ತಿ... ನನಗೇ ಗುರ್ತ ಸಿಗ್ತಾ ಇಲ್ಲ ಅಂತೀನಿ. ಅವರು ಮತ್ತೆ ಮೀಸೆ ಬೆಳೆಸದಿದ್ದರೆ ನನಗೆ ಅವರ ಮೇಲೆ ಪ್ರೀತಿ ಕೂಡ ಹೊರಟು ಹೋಗಬಹುದು. ಅಷ್ಟು ಅಸಹ್ಯ ಕಾಣ್ತಾರೆ.

ಇನ್ ಫ್ಯಾಕ್ಟ್, ಮೀಸೆ ಇಲ್ಲದ ಗಂಡಸು ಗಂಡಸೇ ಅಲ್ಲ. ಗಡ್ಡ ಬಿಡುವ ವಿಷಯದಲ್ಲಿ ನನಗೆ ಅಷ್ಟೊಂದು ಒಪ್ಪಿಗೆ ಇಲ್ಲ, ಅದೊಂಥರಾ ಅಶಿಸ್ತು. ಆದರೆ ಮೀಸೆ... ಛೆ... ಗಂಡು ಕಳೆಯ ಮುಖಕ್ಕೊಂದು ಮೀಸೆ ಬೇಕೆ ಬೇಕು. ಗಂಡಸರ ಮೇಲ್ದುಟಿಯ ಮೇಲೆ ಒಂದು ಸಾಲು ಕುಚ್ಚು ಕೂದಲುಗಳು ಅದೆಷ್ಟು ಚಂದ, ಬಹಳ ಉಪಕಾರಿ ಕೂಡ. ಇದರ ಬಗ್ಗೆ ನಾನು ಬಹಳ ಚಿಂತನೆ ಮಾಡಿದ್ದೇನೆ ಆದರೆ ಬರೆಯುವ ಧೈರ್ಯ ಮಾಡಿರಲಿಲ್ಲ. ಕಾಗದದ ಮೇಲೆ ಶಬ್ದಗಳು ಒಂಥರಾ ಬೇರೆಯೇ ಅರ್ಥ ಮೂಡಿಸುತ್ತವೆ. ಈ ವಿಷಯವನ್ನು ಬರೆಯುವುದು ಅಷ್ಟು ಸುಲಭವಲ್ಲ, ಬಹಳ ಜಾಗ್ರತೆಯಿಂದ, ನಾಜೂಕಾಗಿ ಬರೆಯುವ ಕಲೆ ತಿಳಿದಿರಬೇಕು.

ಹೀಗೆ ನನ್ನ ಗಂಡ ಸ್ಟೇಜಿಗೆ ಬಂದಾಗ, ಒಂದೇ ಸಲಕ್ಕೆ ನನಗೆ ಅರಿವಾಯಿತು. ಅವನು ಬೇಕಾದರೆ ನಟ ಆಗಿರಲಿ, ಇಲ್ಲವೇ ಫಾದರ್ ಡಿಲ್ದಾನ್ ನಂತಹ ಎಲ್ಲರಿಗಿಂತ ಚಾರ್ಮಿಂಗ್ ಆದ ಪಾದರಿಯೇ ಆಗಿರಲಿ, ನನಗೆ ಅವನ ಮೇಲೆ ಪ್ರೀತಿ ಉಕ್ಕಲು ಸಾಧ್ಯವೇ ಇಲ್ಲ. ಬಳಿಕ ನಾವಿಬ್ಬರೇ (ನಾನು ಮತ್ತು ನನ್ನ ಗಂಡ) ಇರುವಾಗಲಂತೂ... ಅದಕ್ಕಿಂತ ಕಡೆ. ಲೂಸೀ.. ಮಾರಾಯ್ತೀ.. ಮೀಸೆ ಇಲ್ಲದ ಗಂಡಸರು ನಿನಗೆ ಮುತ್ತು ಕೊಡಲು ಬಂದರೆ ಬಿಡಬೇಡ.. ಆಯ್ತಾ?. ಅವರ ಮುತ್ತುಗಳಿಗೆ ಸ್ವಾದವೂ ಇಲ್ಲ ಮಣ್ಣೂ ಇಲ್ಲ. ಅವುಗಳಿಗೆ ಒಂದು ಮಜಾನೂ ಇಲ್ಲ, ಸವಿಯೂ ಇಲ್ಲ. ಒಂದು ನಿಜವಾದ ಮುತ್ತಿನ ಬಿಗಿಯೂ ಅದಕ್ಕಿಲ್ಲ. ಮುತ್ತಿನ ರುಚಿ ಇರುವುದು ಮೀಸೆಯಲ್ಲೇ.

ಒಂದು ಒಣಕಲು ಅಥವಾ ಒದ್ದೆ ರಟ್ಟಿನ ತುಂಡನ್ನು ನಿನ್ನ ತುಟಿಗಳಿಗೆ ಸವರಿದ ಹಾಗೆ ಕಲ್ಪಿಸಿಕೋ. ಮೀಸೆ ಇಲ್ಲದ ಗಂಡಿನ ಮುತ್ತು ಹಾಗೇ ಇರುತ್ತೆ. ಅದರಿಂದ ಯಾವ ಪ್ರಯೋಜನವೂ ಇಲ್ಲ.

ಈ ಮೀಸೆಯ ಮಜಾ ಸಿಗುವುದು ಯಾವಾಗ ಗೊತ್ತ? ನಾನೇ ಹೇಳ್ತೇನೆ ಕೇಳು. ಅದು ನಿನ್ನ ಮುಖಕ್ಕೆ ಕಚಗುಳಿ ಇಡುತ್ತಾ ನಿನ್ನ ತುಟಿಗಳತ್ತ ಸರಿಯುತ್ತಿರುವುದು ನಿನಗೆ ಅರಿವಾದಾಗ ನಿನ್ನ ಮೈಯೆಲ್ಲಾ ಒಂಥರಾ ಸಣ್ಣಗೆ ನಡುಕ ಹುಟ್ಟುತ್ತೆ.

ಆಮೇಲೆ ನಿನ್ನ ಕೊರಳಿನ ಮೇಲೆ.... ನಿನ್ನ ಕೊರಳಿನ ಮೇಲೆ ಮೀಸೆ ಹರಿದಾಡಿ ಅನುಭವ ಇದೆಯಾ ನಿನಗೆ ?. ಒಂಥರಾ ನಶೆ ಹುಟ್ಟಿಸುತ್ತೆ. ಒಮ್ಮೆಲೇ ಪುಳಕ ಹುಟ್ಟಿ ಕಾಲ್ಬೆರಳ ತುದಿವರೆಗೆ ಹಬ್ಬುತ್ತೆ. ಆವಾಗ ನೀನು ಕೊಸರಾಡುತ್ತಿ, ಮೈಯೆಲ್ಲಾ ಅದುರಿಸಿ, ತಲೆಯನ್ನು ಹಿಂದಕ್ಕೆ ಚೆಲ್ಲಿ, ತಪ್ಪಿಸಿಕೊಂಡು ಓಡಿ ಬಿಡೋಣ ಅಂತಾನೂ ಜೊತೆ ಜೊತೆಗೆ ಅಲ್ಲೇ ಇರೋಣಾ ಅಂತಾನೂ ಅನ್ನಿಸುತ್ತೆ. ಅಷ್ಟು ಖುಷಿಯಾಗುತ್ತೆ, ಕಿರಿಕಿರಿನೂ ಆಗುತ್ತೆ. ಅಬ್ಬಾ! ಎಂಥ ಅನುಭವ ಅದು.

ಮೀಸೆ ಇಲ್ಲದ ತುಟಿ ಅಂದರೆ ಉಡುಪು ತೊಡದ ದೇಹದಂತೆ. ಬಟ್ಟೆ ತೊಡಲೇಬೇಕು, ಚೂರು ಪಾರು ಆದರೂ ಸರಿ, ಉಡುಪು ತೊಡದಿದ್ದರೆ ಮರ್ಯಾದೆ ಇಲ್ಲ.

ನಂಗೊಂದು ವಾಕ್ಯ (ಒಬ್ಬ ರಾಜಕಾರಣಿಯ ಹೇಳಿಕೆ ಅದು) ನೆನಪಾಗುತ್ತಿದೆ. ನನ್ನ ತಲೆಯೊಳಗೆ ಅದು ಸುಮಾರು ಮೂರು ತಿಂಗಳುಗಳಿಂದ ಸುತ್ತುತ್ತಿದೆ. ನನ್ನ ಗಂಡ, ಪೇಪರ್ ಓದ್ತಾರಲ್ಲ, ಮೊನ್ನೆ ಒಂದು ಸಲ, ನಮ್ಮ ಕೃಷಿ ಮಂತ್ರಿ ಮಿಸ್ಟರ್ ಮೇಲಿನ್ ಅಂತ, ಈಗ ಅವರೇ ಇದ್ದಾರೋ ಬದಲಾಗಿದ್ದಾರೋ ಗೊತ್ತಿಲ್ಲ, ಇರಲಿ, ಅವರ ಭಾಷಣ ಒಂದನ್ನು ಹಾಗೇ ಓದಿ ಹೇಳ್ತಾ ಇದ್ರು.

ನಾನು ಆ ಕಡೆ ಕಿವಿ ಕೊಡ್ತಾ ಇರಲಿಲ್ಲ. ಆದರೆ ಆ ಮೇಲಿನ್ ಅಂತ ಹೆಸರು ನನಗೆ ಕುತೂಹಲ ಮೂಡಿಸಿತು. ಅದು ಯಾರೋ ಕೃಷಿ ಕಾರ್ಮಿಕರ ಬಗ್ಗೆಯೋ ಅಥವಾ ಇನ್ನೆಂತದೋ.. ನೋಡು ನನಗೆ ಅದರಲ್ಲಿ ತಲೆಗೆ ಹೊಕ್ಕಿದ್ದೆಷ್ಟು ಅಂತ ನಿನಗೀಗ ಅರ್ಥ ಆಗಿರಬಹುದು. ಈ ಮಿಸ್ಟರ್ ಮೇಲಿನ್ ಆ ಅಮೆನ್ಸಿನ ಜನರನ್ನು ಉದ್ದೇಶಿಸಿಯೋ ಅಥಾವ ಬೇರೆ ಯಾರನ್ನೋ...., "ಕೃಷಿಯ ವಿನಾ ದೇಶಭಕ್ತಿಯಿಲ್ಲ" ಅಂತ ಅಂದರಪ್ಪ. ನಾನು ಆವತ್ತಿನಿಂದ ಹಾಗೆಂದರೇನು ಅಂತ ಯೋಚನೆ ಮಾಡುತ್ತಿದ್ದೆ. ನೋಡು, ನಂಗೆ ಅದು ಈಗ ಅರ್ಥ ಆಯ್ತು ನೋಡು. ಹಾಗಾಗಿ ನಾನು ಹೇಳುವುದೇನೆಂದರೆ "ಮೀಸೆಯ ವಿನಾ ಪ್ರೇಮವಿಲ್ಲ" ಹಾಗೇ ಹೇಳುವಾಗ ಒಂಥರಾ ತಮಾಷೆಯಾಗಿದೆ ಅಲ್ವ?

"ಮೀಸೆಯ ವಿನಾ ಪ್ರೇಮವಿಲ್ಲ."

"ಕೃಷಿಯ ವಿನಾ ದೇಶಭಕ್ತಿಯಿಲ್ಲ" ಅಂತ ಹೇಳಿದರು ಆ ಮೇಲಿನ್. ಆ ಮಂತ್ರಿ ಹೇಳಿದ್ದು ಸರಿ. ನಂಗೆ ಈಗ ತಿಳಿತಾ ಇದೆ.

ಇನ್ನೊಂದು ದೃಷ್ಟಿಯಿಂದ ಮೀಸೆ ಅತ್ಯಗತ್ಯ. ಅದು ಮುಖಕ್ಕೊಂದು ವ್ಯಕ್ತಿತ್ವವನ್ನು ಕಲ್ಪಿಸುತ್ತದೆ. ಒಬ್ಬ ಗಂಡಸು ಸ್ವಾಭಿಮಾನಿ, ಮೃದು ಹೃದಯಿ, ದಯಾಮಯ, ಉಗ್ರ, ರಾಕ್ಷಸ ಅಥವಾ ಕ್ರಿಯಾಶೀಲ ಅಂತ ಕಾಣುವ ಹಾಗೇ ಅದು ಮಾಡುತ್ತೆ. ಒಬ್ಬ ತುಂಬು ಗಡ್ಡದ ಗಂಡಸು ಸುಸಂಸ್ಕೃತನ ಹಾಗೇ ಕಾಣಲು ಸಾಧ್ಯವೇ ಇಲ್ಲ, ಯಾಕೆಂದರೆ ಅವನ ಚಹರೆಯನ್ನೆಲ್ಲ ಆ ಕೂದಲು ಅಡಗಿಸಿಬಿಡುತ್ತೆ. ಅವನ ದವಡೆ ಮತ್ತು ಗಲ್ಲ ಅಡಗಿಕೊಂಡು, ಮುಖಭಾವವನ್ನು ಓದಬಲ್ಲವರಿಂದ ಬಹಳಷ್ಟು ಸುಳುಹುಗಳನ್ನು ಮರೆ ಮಾಚುತ್ತೆ.

ಆದರೆ ಮೀಸೆ ಮಾತ್ರ ಇರುವ ಗಂಡಸು ತನ್ನ ಮುಖ ಭಾವಗಳನ್ನೂ, ಸಭ್ಯತನವನ್ನೂ ಸ್ಪಷ್ಟವಾಗಿ ತೋರ್ಪಡಿಸಲು ಸಾಧ್ಯ.

ಇನ್ನು ಅದೆಷ್ಟು ಬಗೆಯ ಮೀಸೆಗಳು. ತುಂಟ ಮೀಸೆ, ತಿರುಚು ಮೀಸೆ, ಗುಂಗುರು ಮೀಸೆ ಮುಂತಾದ ಹೆಂಗಳೆಯರು ಇಷ್ಟ ಪಡುವ ಮೀಸೆಗಳು.

ಮತ್ತೆ ಕೆಲವು ನೇರ ಸೂಜಿ ಮೊನೆಯಂತೆ ಚೂಪಾದ, ಭಯ ಹುಟ್ಟಿಸುವ ಮೀಸೆಗಳು. ಅವು ಮದಿರೆ, ಯುಧ್ಧ ಮತ್ತು ಕುದುರೆಗಳನ್ನು ಇಷ್ಟಪಡುವವರಿಗೆ ಹೆಚ್ಚು ಸಲ್ಲುತ್ತವೆ.

ಇನ್ನು ಕೆಲವೊಮ್ಮೆ, ಅಗಾಧ, ಜೋತುಬಿದ್ದ, ಭಯಾನಕ ಮೀಸೆಗಳು... ಅವನ್ನು ಹೊತ್ತವರ ನಿಜ ಭಾವನೆಗಳನ್ನು ಅಡಗಿಸಿಡುತ್ತ, ಕೈಲಾಗತನವನ್ನು ಕರುಣೆ ಎಂಬಂತೆ, ಅಳುಕನ್ನು ಸೌಜನ್ಯ ಎಂಬಂತೆ ತೋರಿಸುತ್ತವೆ.

ಎಲ್ಲಕ್ಕಿಂತ ಹೆಚ್ಚು ನನಗೆ ಮೀಸೆ ಇಷ್ಟ ಆಗುವುದು ಅದು ಫ್ರೆಂಚ್ ಎಂಬ ಕಾರಣಕ್ಕೆ. ಅಪ್ಪಟ ಫ್ರೆಂಚ್. ನಮ್ಮ ಪೂರ್ವಜರಾದ ಗೌಲ್ ಗಳಿಂದ ಹಿಡಿದು ಇಂದಿನವರೆಗೆ ಮೀಸೆ ನಮ್ಮ ರಾಷ್ಟ್ರೀಯ ವ್ಯಕಿತ್ವದ ಲಾಂಛನದಂತೆ ಉಳಿದು ಬಂದಿದೆ.

ಅದು ನಮ್ಮ ಹೆಮ್ಮೆಯ, ಧೀರತೆಯ, ಶೌರ್ಯದ ಪ್ರತೀಕ. ಅದು ಎಷ್ಟು ಚೆನ್ನಾಗಿ ಮದ್ಯ ಹೀರುತ್ತೆ ಮತ್ತು ನಗುವಾಗ ಕೂಡ ಬಹಳ ಸೊಗಸಾಗಿ ಕಾಣುತ್ತೆ. ಆ ಗಡ್ಡದ ಗಲ್ಲಗಳೆಲ್ಲ ಏನು ಮಾಡಿದರೂ ಅಸಹ್ಯವೇ.

ಇದೆಲ್ಲ ಹೇಳುತ್ತಿದ್ದಂತೆ ನನಗೊಂದು ಘಟನೆ ನೆನಪಾಗುತ್ತಿದೆ. ಆ ಘಟನೆಯಿಂದಾಗಿ ತುಂಬ ಅತ್ತಿದ್ದೆ ನಾನು. ಅದಲ್ಲದೆ -ನೋಡು ನನಗೆ ಈಗ ಹೊಳೆಯಿತು- ಆ ಘಟನೆಯ ಬಳಿಕವೆ ಮೀಸೆ ಇರುವ ಗಂಡಸಿನ ಮುಖವನ್ನು ನಾನು ಬಹಳ ಇಷ್ಟ ಪಡಲು ತೊಡಗಿದ್ದು

ಆಗ ಯುದ್ಧದ ಕಾಲ. ನಾನು ಇನ್ನೂ ಸಣ್ಣ ಹುಡುಗಿ. ತಂದೆಯ ಕೋಟೆಯಂತ ಬಂಗಲೆಯಲ್ಲಿದ್ದೆ. ನಮ್ಮ ಬಂಗಲೆಯ ಬಳಿ ಗಲಾಟೆ ಶುರು ಆಗಿತ್ತು. ಬೆಳಗಿನಿಂದ ಒಂದೇ ಸಮನೆ ತೋಪು ಸಿಡಿದ ಸದ್ದು ಮತ್ತು ಹಲವು ಸುತ್ತು ತುಪಾಕಿ ಸಿಡಿದ ಸದ್ದು. ಆ ಸಂಜೆ ನಮ್ಮ ಮನೆಗೆ ಒಬ್ಬ ಜರ್ಮನ್ ಕರ್ನಲ್ ಉಳಕೊಳ್ಳಲು ಬಂದ. ರಾತ್ರಿ ಇದ್ದು ಮರುದಿನ ಬೆಳಿಗ್ಗೆ ಹೊರಟು ಹೋದ.

ಅಲ್ಲೆಲ್ಲಾ ಹಲವಾರು ಹೆಣಗಳು ಹರಡಿ ಬಿದ್ದಿದ್ದಾವೆ ಅಂತ ತಂದೆಯವರಿಗೆ ಸುದ್ದಿ ಬಂತು. ತಂದೆ ಕೂಡಲೇ ಆ ಹೆಣಗಳನ್ನು ಒಟ್ಟಿಗೆ ಹುಗಿಯುವ ಏರ್ಪಾಡು ಮಾಡಲು ನಮ್ಮಲ್ಲಿಗೆ ತರಿಸಿದರು. ನಮ್ಮ ಆ ಕೋಟೆಯಂತ ಬಂಗಲೆಗೆ ಬರಲು ಇಕ್ಕೆಲಗಳಲ್ಲಿಯೂ ಸಾಲು ಮರಗಳಿರುವ ನೇರವಾದ ರಸ್ತೆಯಿದೆ. ಈ ರಸ್ತೆಯ ಇಕ್ಕೆಲಗಳಲ್ಲಿ ಆ ಹೆಣಗಳನ್ನು ತಂದು ಸಾಲಾಗಿ ಮಲಗಿಸಲಾಯಿತು. ಅವುಗಳನ್ನು ಹುಗಿಯಲು ದೊಡ್ಡದೊಂದು ಹೊಂಡ ತೊಡುವ ಕೆಲಸ ಇನ್ನೊಂದು ಕಡೆ ನಡೆಯುತ್ತಿತ್ತು. ಆ ಕೆಲಸ ಇನ್ನೂ ಮುಗಿದಿರಲಿಲ್ಲ. ಅಷ್ಟರಲ್ಲಿ ಈ ಹೆಣಗಳೆಲ್ಲ ವಾಸನೆ ಬೀರಲು ತೊಡಗಿದ್ದರಿಂದ ಅವುಗಳನ್ನು ತಲೆ ಮಾತ್ರ ಹೊರಗೆ ಕಾಣುವಂತೆ ಬಿಟ್ಟು ಮಲಗಿಸಿದ್ದಲ್ಲೇ ಮಣ್ಣು ಮುಚ್ಚಿದ್ದರು.

ಆ ಆವೆ ಮಣ್ಣು ಮುಚ್ಚಿದ ದೇಹಗಳಿಂದ ತಲೆಗಳಷ್ಟೇ ಹೊರಗೆ ಬಂದು ಕಣ್ಣು ಮುಚ್ಚಿರುವ ಆ ಮುಖಗಳೆಲ್ಲ ಮಣ್ಣಿನ ಬಣ್ಣಕ್ಕೆ ತಿರುಗಿದ್ದವು.

ನನಗೆ ಅವನ್ನು ನೋಡಬೇಕೆಂದು ಅನಿಸಿ ಅಲ್ಲಿಗೆ ಹೋಗಿದ್ದೆ. ಆ ಎರಡು ಸಾಲು ಭಯಾನಕ ಮುಖಗಳನ್ನು ನೋಡಿ ನಾನು ಬವಳಿ ಬೀಳುವುದೊಂದೇ ಬಾಕಿ. ಆದರೂ ಒಂದೊಂದಾಗಿ ಆ ಮುಖಗಳನ್ನು ಗಮನಿಸುತ್ತಾ ಅವರು ಯಾವ ತರದ ವ್ಯಕ್ತಿಗಳಾಗಿರಬಹುದು ಎಂದು ಊಹಿಸಲು ಯತ್ನಿಸುತ್ತಿದ್ದೆ.

ಅವರ ಸಮವಸ್ತ್ರಗಳು ಮಣ್ಣಿನಡಿಯಲ್ಲಿ ಮುಚ್ಚಿ ಹೋಗಿದ್ದವು. ಆದರೂ ಕೂಡಲೇ .. ಆ ಕೂಡಲೇ.. ನಾನು ಫ್ರೆಂಚ್ ಮುಖಗಳನ್ನು ಗುರುತಿಸಿದ್ದು ಅವರ ಮೀಸೆಯಿಂದಲೇ.

ಕೆಲವರೆಲ್ಲ ಯುದ್ಧದ ದಿನವಷ್ಟೇ ಶೇವ್ ಮಾಡಿರಬೇಕು, ಕೊನೆಯವರೆಗೂ ಶಿಸ್ತಾಗಿರೋಣ ಎನ್ನುವಂತೆ. ಇನ್ನು ಕೆಲವು ಮುಖಗಳ ಮೇಲೆ ಒಂದು ವಾರದ ಕುರುಚಲು ಗಡ್ಡ. ಆದರೆ ಅವರೆಲ್ಲರಿಗೂ ನೀಟಾದ ಫ್ರೆಂಚ್ ಮೀಸೆ ಇತ್ತು. ಆ ಮೀಸೆ ನನಗೆ ಹೀಗೆ ಹೇಳುತ್ತಿರುವಂತೆ ಭಾಸವಾಯಿತು "ನನ್ನನ್ನು ಈ ಗಡ್ದಗಳ ಜೊತೆ ಹೋಲಿಸಬೇಡ ಮರಿ, ನಾನು ಫ್ರಾನ್ಸ್ ತಾಯಿಯ ಮಗ "

ಅಷ್ಟೇ! ನಾನು ಅತ್ತೇ ಬಿಟ್ಟೆ. ಆ ಬಡಪಾಯಿ ಸತ್ತ ಗಂಡಸರನ್ನು ನಾನು ಗುರುತಿಸದೆ ಇರುತ್ತಿದ್ದಲ್ಲಿ ಅಷ್ಟು ಅಳುತ್ತಿರಲಿಲ್ಲವೇನೋ.

ಛೆ ನಾನು ಇದನ್ನೆಲ್ಲಾ ನಿನಗೆ ಹೇಳಬಾರದಿತ್ತು. ಇನ್ನು ಬರೆಯುವ ಮೂಡೇ ಹೊರಟು ಹೋಯಿತು.

ಸರಿ. ಗುಡ್ ಬೈ, ಪ್ರಿಯ ಲೂಸಿ, ನಿನಗೊಂದು ಪ್ರೀತಿಯ ಕಿಸ್ ಕಳುಹಿಸುತ್ತಿದ್ದೇನೆ.
ಮೀಸೆ ಚಿರಾಯುವಾಗಲಿ.

ಜೀನ್.